‘‘ನಮ್ಮ ಹಾಡೇ ಬೇರೆ’’
ಬೌದ್ಧ ಭಿಕ್ಕುಣಿಯರ ಗೀತೆಗಳು

ಥೇರೀಗಾಥಾ ಅಪರೂಪದ ಸಾಂಸ್ಕೃತಿಕ, ಐತಿಹಾಸಿಕ ದಾಖಲೆ. ಮುಖ್ಯವಾಹಿನಿಯ ಇತಿಹಾಸದಲ್ಲಿ ಸಾಮಾನ್ಯವಾಗಿ ಹೆಣ್ಣಿನ ಅಸ್ತಿತ್ವವೇ ದಾಖಲಾಗಿಲ್ಲ. ಹಾಗಾಗಿ ಅವರ ಬದುಕು, ನೋವು ನಲಿವು, ಚಿಂತನೆ, ವಿಚಾರ, ಕಲ್ಪನೆಗಳು ಹೆಣ್ಣುದನಿಯಲ್ಲೇ ದಾಖಲಾಗುವುದಂತೂ ಕನಸೇ ಸರಿ ಮತ್ತು ದಾಖಲಾಗಿರುವ ಒಂದಿಷ್ಟು ಕೂಡ ಪುರುಷರ ದೃಷ್ಟಿ ಮತ್ತು ನುಡಿಗಟ್ಟುಗಳಲ್ಲಿ. ಆದರೆ ಥೇರೀಗಾಥಾ ಒಂದು ಅನನ್ಯ ಸಂಕಲನ. ಅದರಲ್ಲಿ ಮಹಿಳೆಯರು ತಮ್ಮ ಅನುಭವಗಳನ್ನು ತಮ್ಮದೇ ಮಾತುಗಳಲ್ಲಿ, ನುಡಿಗಟ್ಟುಗಳಲ್ಲಿ ಹೇಳಿಕೊಂಡಿದ್ದಾರೆ.
ಸೋನಾ, ಶ್ರಾವಸ್ತಿ ನಗರದಲ್ಲಿನ ಗೌರವಾನ್ವಿತ ಕುಟುಂಬದ ಗೃಹಿಣಿ. ಅವಳನ್ನು ‘ಹಲವು ಮಕ್ಕಳ ತಾಯಿ’ ಎಂದೇ ಕರೆಯುತ್ತಿದ್ದರು. ಗಂಡ ಕುಟುಂಬ ತೊರೆದು ಬೌದ್ಧ ಭಿಕ್ಕುವಾದ ನಂತರ ಮಕ್ಕಳಿಗೆ ನೆಲೆ ಕಲ್ಪಿಸುವುದರಲ್ಲೇ ಅವಳ ಬದುಕು ಕಳೆದು ಹೋಗುತ್ತದೆ. ಮಕ್ಕಳೇ ಅವಳ ಬದುಕಿನ ಸರ್ವಸ್ವವಾಗಿದ್ದರು. ತನ್ನ ಆಸ್ತಿಯೆಲ್ಲವನ್ನೂ ಅವರಿಗೆ ಹಂಚಿ, ಮುಪ್ಪಿನ ಕಾಲದಲ್ಲಿ ತನಗವರು ಆಧಾರವೆಂದು ಭಾವಿಸುತ್ತಾಳೆ. ಆದರೆ ಅನತಿ ಕಾಲದಲ್ಲೇ ಈ ಮುದುಕಿ ಅವರೆಲ್ಲರಿಗೂ ಹೊರೆಯೆನಿಸಿದಳು. ತಾವು ಅನುಭವಿಸುತ್ತಿದ್ದ ಶ್ರೀಮಂತಿಕೆಯಲ್ಲವೂ ಅವಳದೇ ಎನ್ನುವುದು ಅವರಿಗೆ ಮರೆತೇ ಹೋಗಿತ್ತು. ಮಕ್ಕಳ ತಿರಸ್ಕಾರ ಅವಳ ಮನಸ್ಸನ್ನು ಕಹಿಯಾಗಿಸಿತು.
ಆಗ ಸೋನಾ ಶಾಂತವಾಗಿ ಕುಳಿತು, ತನ್ನ ನೋವಿನ ಮೂಲ ಹುಡುಕಿದಳು. ತನ್ನದು ಶುದ್ಧವಾದ, ಸ್ವಾರ್ಥರಹಿತ ತಾಯಿ ಮಮತೆಯಲ್ಲ, ಬದಲಾಗಿ ತನ್ನದು ನಿರೀಕ್ಷೆಗಳಿಂದ ಕೂಡಿದ ಸ್ವಾರ್ಥಭರಿತ ಸ್ವಾನುರಾಗ ಮತ್ತು ಮಕ್ಕಳು ಮುಪ್ಪಿನಲ್ಲಿ ತನಗೆ ಆಸರೆಯಾಗುತ್ತಾರೆಂಬ ಸ್ವಾರ್ಥವೂ ಲಾಲನೆಯ ಹಿಂದಿತ್ತು ಎನ್ನುವುದು ಅವಳಿಗೆ ಅರಿವಾಗುತ್ತದೆ. ಮುಪ್ಪಿನಲ್ಲಿ ತನ್ನನ್ನು ಕಾಡಬಹುದಾದ ಗಾಬರಿ ಮತ್ತು ಒಂಟಿನತಕ್ಕೆ ಮಕ್ಕಳನ್ನು ಒಂದು ಹೂಡಿಕೆ ಮತ್ತು ವಿಮೆ ಎಂದು ಭಾವಿಸಿದ್ದು ಅವಳನ್ನು ಚುಚ್ಚುತ್ತದೆ. ಹೀಗೆ ತನ್ನನ್ನೇ ಪರೀಕ್ಷೆಗೆ ಒಡ್ಡಿಕೊಂಡ ಅವಳಿಗೆ ‘‘ಹೆಂಗಸರು ತಮ್ಮ ಮಕ್ಕಳನ್ನು ಸಂಪೂರ್ಣವಾಗಿ ನೆಚ್ಚಿಕೊಳ್ಳುತ್ತಾರೆ, ಆದರೆ ಒಬ್ಬ ಭಿಕ್ಕು ಕೇವಲ ಸದ್ಗುಣವನ್ನು ಮಾತ್ರ ನೆಚ್ಚಿಕೊಳ್ಳುತ್ತಾನೆ’’ ಎಂಬ ಬುದ್ಧನ ಬೋಧನೆ ನೆನಪಾಗುತ್ತದೆ.
ಹೀಗೆ ತನ್ನನ್ನು ತಾನು ಪರೀಕ್ಷೆಗೆ ಒಡ್ಡಿಕೊಂಡ ಸೋನಾ ನಮ್ಮ ಸಮಕಾಲೀನಳಲ್ಲ. 2,300 ವರ್ಷಗಳ ಹಿಂದಿನ ಬುದ್ಧನ ಕಾಲದ ಹೆಣ್ಣು. ಇಂತಹ ವಿಭಿನ್ನ ಹೆಣ್ಣುದನಿಗಳ ಚಿಂತನೆ, ಭಾವನೆ ಹಾಗೂ ಕಲ್ಪನೆಗಳ ಸಂಕಲನವೇ ಬೌದ್ಧ ಗ್ರಂಥ ಥೇರೀಗಾಥಾ. ಅದೊಂದು ಹಾಡುಗಳ ಸಂಕಲನ. ಥೇರೀ ಎಂದರೆ ಹಿರಿಯ ಭಿಕ್ಕುಣಿ ಎಂದರ್ಥ. ಥೇರೀಗಾಥಾ ಎನ್ನುವುದು ಥೇರಾವಾದ ಬೌದ್ಧ ಶಾಖೆಯ ಪಾಲಿಸೂತ್ರಗಳಲ್ಲಿ ಈ ಭಾಗವನ್ನು ಖುದ್ದ ನಿಕಾಯ ಎನ್ನುತ್ತಾರೆ. ಥೇರೀಗಾಥಾದಲ್ಲಿ 73 ಪದ್ಯಗಳಿವೆ. ಮೂಲತಃ ಭಾರತದ ವಿಭಿನ್ನ ದೇಶೀಯ ಭಾಷೆಗಳಲ್ಲಿ ಇದ್ದ ಅದು ಸುಮಾರು ಕ್ರಿ. ಪೂ. 80ರಲ್ಲಿ ಲಿಖಿತ ರೂಪಕ್ಕೆ ಬಂದಿತೆನ್ನುತ್ತಾರೆ.
ಥೇರೀಗಾಥಾ ಅಪರೂಪದ ಸಾಂಸ್ಕೃತಿಕ, ಐತಿಹಾಸಿಕ ದಾಖಲೆ. ಮುಖ್ಯವಾಹಿನಿಯ ಇತಿಹಾಸದಲ್ಲಿ ಸಾಮಾನ್ಯವಾಗಿ ಹೆಣ್ಣಿನ ಅಸ್ತಿತ್ವವೇ ದಾಖಲಾಗಿಲ್ಲ. ಹಾಗಾಗಿ ಅವರ ಬದುಕು, ನೋವು ನಲಿವು, ಚಿಂತನೆ, ವಿಚಾರ, ಕಲ್ಪನೆಗಳು ಹೆಣ್ಣುದನಿಯಲ್ಲೇ ದಾಖಲಾಗುವುದಂತೂ ಕನಸೇ ಸರಿ ಮತ್ತು ದಾಖಲಾಗಿರುವ ಒಂದಿಷ್ಟು ಕೂಡ ಪುರುಷರ ದೃಷ್ಟಿ ಮತ್ತು ನುಡಿಗಟ್ಟುಗಳಲ್ಲಿ. ಆದರೆ ಥೇರೀಗಾಥಾ ಒಂದು ಅನನ್ಯ ಸಂಕಲನ. ಅದರಲ್ಲಿ ಮಹಿಳೆಯರು ತಮ್ಮ ಅನುಭವಗಳನ್ನು ತಮ್ಮದೇ ಮಾತುಗಳಲ್ಲಿ, ನುಡಿಗಟ್ಟುಗಳಲ್ಲಿ ಹೇಳಿಕೊಂಡಿದ್ದಾರೆ.
ಎರಡು ಸಾವಿರ ವರ್ಷಗಳಿಗೂ ಹಿಂದೆ, ಮಹಿಳೆಗೆ ಸಾಮಾಜಿಕವಾಗಿ, ರಾಜಕೀಯವಾಗಿ, ಆಧ್ಯಾತ್ಮಿಕವಾಗಿ ಒಂದು ದನಿಯೇ ಇರಲಿಲ್ಲ. ಅವಳಿಗೆ ಮುಕ್ತಿಸಾಧನೆ ಸಾಧ್ಯವೇ ಇಲ್ಲ ಎಂದು ನಂಬಿದ್ದ ಕಾಲವದು. ಈ ಕಾಲಘಟ್ಟದಲ್ಲಿ ಆಧ್ಯಾತ್ಮಿಕ ಸ್ವಾತಂತ್ರ್ಯ ಸಾಧಿಸಲು ಮಹಿಳೆಯರು ನಡೆಸಿದ ಹೋರಾಟ; ಅವರ ಬದುಕಿನ ಬವಣೆಗಳು; ಆಧ್ಯಾತ್ಮಿಕ ಸಾಧನೆಗೆ ಅವರು ತುಳಿದ ಭಿನ್ನ ಹಾದಿ, ಮುಕ್ತಿಯನ್ನು ಅವರು ಗ್ರಹಿಸಿಕೊಂಡ ರೀತಿ, ಎದುರಾದ ಸಾಮಾಜಿಕ ಕಟ್ಟುಪಾಡುಗಳು, ಮಹಿಳೆಯರು ತಮ್ಮ ಮೇಲೆ ತಾವೇ ಹೇರಿಕೊಂಡಿದ್ದ ಹೊಣೆಗಾರಿಕೆಗಳು, ಕರ್ತವ್ಯಗಳು, ಭಾವನೆಗಳು; ಅವರ ಮಾನಸಿಕ ಸಂಘರ್ಷ, ಇವೆಲ್ಲವೂ ಮಹಿಳೆಯರ ದನಿಯಲ್ಲೇ ಇರುವ ಅಪರೂಪದ ಸಂಗ್ರಹವಿದು.
ನಾವು ಈಗಲೂ ಕಲ್ಪಿಸಿಕೊಳ್ಳಲು ಸಾಧ್ಯವಾಗದಿರುವುದನ್ನು ಥೇರೀಗಾಥಾದ ಭಿಕ್ಕುಣಿಯರು ದಾಖಲಿಸುತ್ತಾರೆ. ಅಲ್ಲಿನ ಪದ್ಯಗಳು ಸುಮಾರು ಬುದ್ಧನ ಕಾಲದಿಂದ ಆರಂಭವಾಗಿ ಕ್ರಿಪೂ 3ನೇ ಶತಮಾನದ ತನಕ ರಚಿತವಾದವು. ಬುದ್ಧನ ಕಾಲದಲ್ಲಿ ಮಹಿಳೆಯರು ಎದುರಿಸುತ್ತಿದ್ದ ಸಮಸ್ಯೆಗಳು ಹಾಗೂ ಅನುಭವಿಸುತ್ತಿದ್ದ ಅಗಾಧ ಯಾತನೆ ಥೇರೀಗಾಥಾದಲ್ಲಿದೆ. ನಮ್ಮ ಕಲ್ಪನೆಗೂ ಮೀರಿದ ಹೇಯವಾದ, ಘೋರ ಕಥನಗಳಿವೆ. ಅವುಗಳಲ್ಲೆಲ್ಲಾ ಅತ್ಯಂತ ಘೋರವಾದುದು ಉಪ್ಪಲವಣ್ಣಾಳ ಹಾಡು. ತಾಯಿ ಮತ್ತು ಮಗಳು ಒಬ್ಬನೇ ಗಂಡನನ್ನು ಹೊಂದಿರುವ ಘೋರವಾದ ಘಟನೆ ಅದು. ಅಂತಹ ಹೇಯವಾದ, ಅಸಹ್ಯ ಹುಟ್ಟಿಸುವ ಕಾಮದ ಬದುಕು ಉಪ್ಪಲವಣ್ಣಾಳಲ್ಲಿ ಕಾಮದ ಬಗ್ಗೆಯೇ ವಾಕರಿಕೆ ಹುಟ್ಟಿಸಿ ಅವಳನ್ನು ಬೌದ್ಧತತ್ವದೆಡೆಗೆ ತಳ್ಳುತ್ತದೆ. ಸವತಿಯರ ಜೊತೆ ಗಂಡನೊಡನೆ ಬಾಳುವುದು, ಹೆರಿಗೆಯಲ್ಲಿ ತಾಯಿ ತೀರಿಹೋಗುವುದು, ಗಂಡು ಕೂಸು ಹೆರದಿರುವ ಹೆಣ್ಣ್ಣಿನ ಬವಣೆ ಇವುಗಳನ್ನು ಕಿಸಾ ಗೋತಮಿ ಮನಮುಟ್ಟುವಂತೆ ಹೇಳುತ್ತಾಳೆ. ಸ್ವತಃ ಕಿಸಾಗೋತಮಿಯನ್ನು ಮನೆಯಲ್ಲಿ ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿರುತ್ತಾರೆ. ಅವಳಿಗೊಂದು ಗಂಡುಮಗು ಹುಟ್ಟಿದ ನಂತರ ಅವಳ ಪರಿಸ್ಥಿತಿ ಸ್ವಲ್ಪ ವಾಸಿಯಾಗಿರುತ್ತದೆ. ಆದರೆ ಆ ಮಗು ತೀರಿಹೋದಾಗ, ತನ್ನ ಮುಂದಿನ ಬದುಕಿನ ಬವಣೆಯನ್ನು ನೆನೆಸಿಕೊಂಡು ಹುಚ್ಚಿಯಂತಾಗಿ, ಮಗುವಿನ ಹೆಣ ಹೊತ್ತು ಬೀದಿ ಬೀದಿ ಅಲೆಯುತ್ತಾಳೆ.
ಈ ಭಿಕ್ಕುಣಿಯರ ಪದ್ಯಗಳು ತಮ್ಮ ಸತ್ಯಸಂಧತೆಯಿಂದಾಗಿ ನಮ್ಮ ಮನಸ್ಸನ್ನು ನೇರವಾಗಿ ತಟ್ಟುತ್ತವೆ. ಬದುಕಿನ ನೋವು, ಏಳುಬೀಳುಗಳಿಂದ ಪಕ್ವವಾಗಿ, ಸ್ವಾನುಭವದ ಬಲದಿಂದ ಮಾನವೀಯವಾಗಿರುವ ಆ ಹೆಣ್ಣು ಮನಸ್ಸುಗಳು ಯಾವ ಸಂಕೋಚ, ಮುಚ್ಚುಮರೆ ಮತ್ತು ಕಪಟವಿಲ್ಲದೆ ತಮ್ಮ ಭಾವನೆ, ಅನುಭವಗಳನ್ನು ದಾಖಲಿಸಿವೆ. ಗಂಡಸರು ರೂಪಿಸಿರುವ ಮೌಲ್ಯಗಳ ಚೌಕಟ್ಟಿನಲ್ಲಿ ಒದ್ದಾಡುತ್ತಿರುವ ಹೆಂಗಸರು ಕ್ರಮೇಣ ಅದರಿಂದ ಹೊರಬಂದು ಅವೆಲ್ಲವೂ ಅರ್ಥಹೀನ ಎಂದು ಅರಿಯುವುದು ಸೊಗಸಾಗಿ ಚಿತ್ರಿತವಾಗಿದೆ. ದೈಹಿಕ ಸೌಂದರ್ಯ, ಮೈಮಾಟ, ಬೆಲೆಬಾಳುವ ಒಡವೆಗಳನ್ನು ತೊಡುವುದು, ಅತ್ಯಂತ ಸೊಗಸಾದ ಬಟ್ಟೆಗಳನ್ನು ತೊಟ್ಟು ಸುಗಂಧ ಪೂಸಿಕೊಂಡು ಅಲಂಕೃತರಾಗುವುದು ಮುಂತಾದವುಗಳೇ ತಮ್ಮ ಅಸ್ಮಿತೆ ಎಂಬ ನಂಬಿಕೆಯನ್ನು ಈ ಹೆಂಗಸರು ಕಳಚಿಕೊಳ್ಳುತ್ತಾರೆ. ತಮ್ಮ ದೇಹಗಳು ಸುಖ ನೀಡುವ ಆಕರಗಳು ಎನ್ನುವುದನ್ನು ತಿರಸ್ಕರಿಸುವ ಮೂಲಕ ತಮ್ಮನ್ನು ಸರಕನ್ನಾಗಿಸುತ್ತಿರುವ ಸಮಾಜದ ನಿಲುವನ್ನು ತಿರಸ್ಕರಿಸುತ್ತಾರೆ. ಶುಭಾ ಎಂಬ ಸುಂದರ ಯುವತಿ ಬುದ್ಧನನ್ನು ಕಾಣಲು ಹೋಗುತ್ತಿದ್ದಾಗ ಲಂಪಟನೊಬ್ಬ ಅವಳನ್ನು ಬರಸೆಳೆದು, ಅವಳ ಸೌಂದರ್ಯವನ್ನು ವರ್ಣಿಸಿ, ತಿಳಿಗೊಳದಲ್ಲಿರುವ ನೀಲನೈದಿಲೆಯಂತಹ ಅವಳ ಕಣ್ಣುಗಳು ತನಗೆ ತುಂಬಾ ಇಷ್ಟವಾಯಿತೆಂದು ಹೇಳಿದಾಗ. ಶುಭಾ ಯಾವ ಹಿಂಜರಿಕೆಯೂ ಇಲ್ಲದೆ ತನ್ನ ಎರಡೂ ಕಣ್ಣುಗಳನ್ನು ಕಿತ್ತು ಅವನಿಗೆ ನೀಡಿ, ದಂಗುಬಡಿಸುತ್ತಾಳೆ. ಹೀಗೆ ಅಕ್ಕಮಹಾದೇವಿ, ಮುಂತಾದ ಮಹಿಳಾ ಪ್ರತಿರೋಧದ ಪರಂಪರೆಗೆ ನಾಂದಿ ಹಾಡಿದ ಹಲವು ಬೌದ್ಧ ಭಿಕ್ಕುಣಿಯರಿದ್ದರು. ಸಮಾಜ ಹೆಣ್ಣಿಗೆ ಆರೋಪಿಸಿರುವ ಕರ್ತವ್ಯಗಳಿಂದ ಬೇಸತ್ತು ರೋಸಿಹೋಗಿರುವ ಹಲವು ಭಿಕ್ಕುಣಿ ಯರು ಮುಕ್ತಿಯ ಮೊದಲ ಹಂತವಾಗಿ ಹೇವರಿಕೆ ಹುಟ್ಟಿಸುವ ಒರಳುಕಲ್ಲು, ಕುಟ್ಟಾಣ, ಅಡುಗೆಮನೆ, ಸದಾ ಟೀಕಿಸುವ ವಕ್ರಗಂಡ ಮತ್ತು ದೈನಂದಿನ ಬದುಕಿನ ಏಕತಾನತೆಯಿಂದ ಬಿಡುಗಡೆ ಪಡೆದುದರ ಬಗ್ಗೆ ಬರೆದುಕೊಳ್ಳುತ್ತಾರೆ.
ಭಿಕ್ಕುಗಳಿಗೆ ನಿರ್ವಾಣವೆನ್ನುವುದು ಒಂದು ಅಮೂರ್ತವಾದ ಕಲ್ಪನೆ. ಆದರೆ ಭಿಕ್ಕುಣಿಯರಿಗೆ ನಿರ್ವಾಣ ತಮ್ಮ ಅನುಭವದ ಭಾಗವಾಗಿಯೇ ಮೂಡುತ್ತದೆ. ನಿರ್ವಾಣದ ಪ್ರಾಪ್ತಿಗಾಗಿ ಅವರು ಎದುರಿಸುವ ಸವಾಲುಗಳು ಹಲವಾರು. ನಿರ್ವಾಣದ ಹುಡುಕಾಟದಲ್ಲಿ ಪ್ರಮುಖವಾಗಿ ಬೇಕಾಗುವ ಸಹನೆ, ಸಹಿಷ್ಣುತೆ, ದೃಢನಿರ್ಧಾರ ಹಾಗೂ ಪ್ರಾಮಾಣಿಕತೆ ಇವೆಲ್ಲವೂ ಅವರಿಗೆ ತಮ್ಮ ದಿನದ ಬದುಕಿನಲ್ಲಿ ಅನುಭವಿಸುವ ದುರಂತ, ಹಿಂಸೆ, ಅಸಾಧಾರಣವಾದ ನೋವು, ಹುಚ್ಚುತನ ಮತ್ತು ಹುಡುಕಾಟದ ಹಂಬಲದಿಂದ ದೊರಕುತ್ತವೆ. ಜ್ಞಾನೋದಯದ ನಂತರವೂ ಭಿಕ್ಕುಣಿಯರು ಇಹದ ವಾಸ್ತವಗಳನ್ನು ತಳ್ಳಿ ಹಾಕುವುದಿಲ್ಲ. ತಮ್ಮೊಳಗಿನ ಸಂಘರ್ಷಗಳನ್ನು ಮುಚ್ಚಿಡುವುದಿಲ್ಲ. ಬದಲಾಗಿ ಹೆಚ್ಚು ಗಟ್ಟಿಯಾಗಿ ನಿಂತು, ತಮ್ಮ ಜೀವನಾನುಭವವನ್ನು, ತಾವು ಎದುರಿಸಿದ ಸವಾಲುಗಳನ್ನು ಮತ್ತು ತಾವು ಅವುಗಳನ್ನು ಎದುರಿಸಿದ ರೀತಿಯನ್ನು ಕುರಿತು ಮಾತನಾಡುತ್ತಾರೆ. ಹಲವರು ಭಿಕ್ಕುಣಿಯರಾದ ನಂತರವೂ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ಅದೆಷ್ಟು ಹೆಣಗಾಡಬೇಕಾಯಿತು ಎನ್ನುವುದನ್ನು ಹೇಳಿಕೊಳ್ಳುತ್ತಾರೆ. ಉತ್ತಮಾ, ನಂದುತ್ತರಾ ಮುಂತಾದ ಭಿಕ್ಕುಣಿಯರು ದೀಕ್ಷೆಯ ನಂತರವೂ ತಮ್ಮ ಕಾಮದ ಹಂಬಲವನ್ನು ಕಳೆದುಕೊಳ್ಳಲಾರದೆ, ಸುಂದರವಾದ ವಸ್ತುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳಬೇಕೆಂಬ ಹಂಬಲದಿಂದ ಹೊರಬರಲಾರದೆ ಹಲವು ವರ್ಷಗಳು ಒದ್ದಾಡಿದ್ದನ್ನು, ನಿಯಂತ್ರಣ ಸಾಧ್ಯವಾಗದೆ ಮನಸ್ಸು ಸೋತು ಹೋಗಿದ್ದನ್ನು ನಿರ್ಭಿಡೆಯಿಂದ ಹೇಳಿಕೊಳ್ಳುತ್ತಾರೆ. ಅವರಿಗೆ ತಮ್ಮ ಒದ್ದಾಟ ಹೇಳಿಕೊಳ್ಳುವುದು ಅವಮಾನವೆನ್ನಿಸಿರಲಿಲ್ಲ. ಅದನ್ನು ಮುಕ್ತವಾಗಿ ಹೇಳಿಕೊಳ್ಳುವ ಪ್ರಕ್ರಿಯೆಯ ಮೂಲಕವೂ ಅದನ್ನು ಮೀರಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದರು. ಅವರ ಈ ಸತ್ಯಸಂಧತೆ ಇಂದಿನ ವಿದ್ಯಮಾನಗಳ ಜೊತೆ ಹೋಲಿಸಿದರೆ ಅಚ್ಚರಿ ಹುಟ್ಟಿಸುತ್ತದೆ.
ಥೇರೀಗಾಥಾ ಒಂದು ಲಿಂಗನಿರ್ದಿಷ್ಟ ನೆಲೆಯಿಂದಲೇ ಪ್ರಾರಂಭವಾಗುತ್ತದೆ ಆದರೆ ಮುಂದೆ ಸಾಗಿದಂತೆ ಆ ಗಡಿರೇಖೆಗಳನ್ನು ಒಡೆದು, ಮಾನವನ ಸ್ವಭಾವದಲ್ಲೇ ಇರುವ ಆಸೆಗಳು ಮತ್ತು ಸಾಧನೆಯ ಹಾದಿಯಲ್ಲಿ ಎದುರಾಗುವ ಎಡರು ತೊಡರುಗಳನ್ನು ದಾಖಲಿಸುತ್ತವೆ. ಬಗೆಬಗೆಯಾದ ಮಾನವ ಸಹಜ ಆಸೆಗಳು, ಏಕಾಗ್ರತೆಯ ಸಮಸ್ಯೆ ಭಿಕ್ಕುಗಳಂತೆ ಭಿಕ್ಕುಣಿಯರನ್ನೂ ಕಾಡುತ್ತಿದ್ದವು.
ಮಾನವಸಹಜ ಬಿಡುಗಡೆಯ ಸಂತಸವನ್ನು ಸಂಭ್ರಮಿಸುವ ಥೇರೀಗಾಥಾ ವಿಮೋಚನೆಯ ಹಂಬಲದಲ್ಲಿ ತೊಳಲಾಡುತ್ತಿರುವ ಪ್ರತೀ ಹೆಣ್ಣ್ಣಿನಲ್ಲಿಯೂ ಬೆಳಕಿನ ನಿರೀಕ್ಷೆಯನ್ನು ಹುಟ್ಟಿಹಾಕುತ್ತದೆ.







