ICC ಬಂಧನ ವಾರೆಂಟ್ ಇದ್ದರೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಂಧನಕ್ಕೊಳಗಾಗದೆ ಪ್ರಯಾಣಿಸಿದ್ದು ಹೇಗೆ?

ಬೆಂಜಮಿನ್ ನೆತನ್ಯಾಹು | Photo Credit : AP , PTI
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ನ್ಯೂಯಾರ್ಕ್ ನಲ್ಲಿ ಎಂಟು ಗಂಟೆಗಳಿಗಿಂತ ಕಡಿಮೆ ಸಮಯ ಕಳೆದರು. ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದ (ICC) ಬಂಧನದ ಭೀತಿಯ ನಡುವೆಯೂ ಅವರು, ತಮ್ಮನ್ನು ಬಂಧಿಸಲು ಒಪ್ಪಂದದ ಮೂಲಕ ಬದ್ಧವಾಗಿದ್ದ ಮೂರು ದೇಶಗಳ ವಾಯುಪ್ರದೇಶವನ್ನು ದಾಟಿ ವಿಮಾನದಲ್ಲಿ ಅಲ್ಲಿಗೆ ತೆರಳಿದರು. ವಿಶ್ವಸಂಸ್ಥೆಯ ಮಹಾಅಧಿವೇಶನದಲ್ಲಿ (UNGA) ಭಾಷಣ ಮಾಡಿದ ಅವರು, ಅದೇ ದಿನ ವಾಪಸ್ ಇಸ್ರೇಲ್ ಗೆ ಮರಳಬೇಕಿತ್ತು.
ನೆತನ್ಯಾಹು ಅವರ ವಿಮಾನವು ಗ್ರೀಸ್, ಇಟಲಿ ಮತ್ತು ಫ್ರಾನ್ಸ್ ದೇಶಗಳ ವಾಯುಪ್ರದೇಶವನ್ನು ದಾಟಿರುವುದಾಗಿ ಫ್ಲೈಟ್ ಟ್ರ್ಯಾಕಿಂಗ್ ಆ್ಯಪ್ 'ಫ್ಲೈಟ್ರಾಡಾರ್24' ತೋರಿಸಿದೆ. ಈ ಮೂರೂ ದೇಶಗಳು 'ರೋಮ್ ಶಾಸನ ಒಪ್ಪಂದ'ದ ಸದಸ್ಯರಾಗಿವೆ. ಇದು ನೆದರ್ಲ್ಯಾಂಡ್ಸ್ ನ ಹೇಗ್ ನಲ್ಲಿರುವ ICC ಸಂಸ್ಥೆಯನ್ನು ಸ್ಥಾಪಿಸಿದ ಒಪ್ಪಂದವಾಗಿದ್ದು, ಇದರ ಸದಸ್ಯ ರಾಷ್ಟ್ರಗಳು ತಮ್ಮ ಭೂಪ್ರದೇಶಕ್ಕೆ ಬರುವ ಶಂಕಿತರನ್ನು ಬಂಧಿಸುವುದನ್ನು ಕಡ್ಡಾಯಗೊಳಿಸುತ್ತದೆ.
ತಮ್ಮ ವಾಯುಪ್ರದೇಶದ ಮೂಲಕ ವಿಮಾನ ಹಾರಲು ಅವಕಾಶ ನೀಡಿದ್ದು ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ಫ್ರಾನ್ಸ್ ಗುರುವಾರ ಸ್ಪಷ್ಟಪಡಿಸಿದೆ. ಮತ್ತೊಂದೆಡೆ, ನ್ಯೂಯಾರ್ಕ್ ನಲ್ಲಿ, ಅಮೆರಿಕದ ಈ ನಗರಕ್ಕೆ ಬಂದರೆ ನೆತನ್ಯಾಹು ಅವರನ್ನು ಬಂಧಿಸುವುದಾಗಿ ಹಿಂದೆ ಚುನಾವಣಾ ಪ್ರಚಾರದಲ್ಲಿ ಭರವಸೆ ನೀಡಿದ್ದ ಮೇಯರ್ ಝೊಹ್ರಾನ್ ಮಮ್ದಾನಿ, ತನಗೆ ಆ ರೀತಿ ಬಂಧಿಸುವ ಯಾವುದೇ ಅಧಿಕಾರವಿಲ್ಲ ಎಂದು ಈಗಾಗಲೇ ಒಪ್ಪಿಕೊಂಡಿದ್ದರು.
►ನ್ಯೂಯಾರ್ಕ್ ನಲ್ಲಿ
ಸ್ಥಳೀಯ ಸಮಯದ ಪ್ರಕಾರ ನೆತನ್ಯಾಹು ಬೆಳಿಗ್ಗೆ 9 ಗಂಟೆ ಸುಮಾರಿಗೆ ನ್ಯೂಯಾರ್ಕ್ ತಲುಪಿದರು ಮತ್ತು ಭಾಷಣದ ನಂತರ ಅದೇ ದಿನ ವಾಪಸ್ ವಿಮಾನ ಹತ್ತುವವರಿದ್ದರು. ತಾವು ನಗರದಲ್ಲಿ ಎಂಟು ಗಂಟೆಗಳಿಗಿಂತ ಕಡಿಮೆ ಸಮಯವಿರಲಿದ್ದು, ಅದರಲ್ಲಿ ವಿಶ್ವಸಂಸ್ಥೆಯ ಮಹಾಅಧಿವೇಶನದ ಭಾಷಣಕ್ಕೆ 40 ನಿಮಿಷಗಳು ಬೇಕಾಗಲಿವೆ ಎಂದು ಇಬ್ಬರು ಇಸ್ರೇಲ್ ಅಧಿಕಾರಿಗಳು 'ರಾಯಿಟರ್ಸ್' ಸುದ್ದಿಸಂಸ್ಥೆಗೆ ತಿಳಿಸಿದ್ದರು.
ಭಾಷಣದ ಸಂದರ್ಭದಲ್ಲಿ ಹತ್ತಾರು ಪ್ರತಿನಿಧಿಗಳು ಸಭಾತ್ಯಾಗ ಮಾಡಿದರು. ಈ ವೇಳೆ ನೆತನ್ಯಾಹು ಅವರನ್ನು “ನೈತಿಕ ಹೇಡಿಗಳು” ಎಂದು ಕರೆದ ಅವರು, ಗಾಝಾದಲ್ಲಿ ನರಮೇಧ ನಡೆದಿದೆ ಎಂಬ ಆರೋಪವನ್ನು “ಶತಮಾನದ ಅತ್ಯುತ್ತಮ ಸುಳ್ಳು” ಎಂದಿದ್ದಾರೆ.
►ICC ವಾರೆಂಟ್ ಹಿನ್ನೆಲೆ
2023ರ ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿ ಸುಮಾರು 1,200 ಜನರನ್ನು ಕೊಂದು, 251 ಜನರನ್ನು ಒತ್ತೆಯಾಳಾಗಿರಿಸಿಕೊಂಡ ನಂತರ ಇಸ್ರೇಲ್ ಗಾಝಾ ಮೇಲೆ ಯುದ್ಧ ಆರಂಭಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಗಾಝಾವನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಿತು, ಇದರಿಂದ ಸಾವಿರಾರು ಜನರು ಸಾವನ್ನಪ್ಪಿದರು.
‘ಫೆಲೆಸ್ತೀನ್ ರಾಷ್ಟ್ರದ ಪರಿಸ್ಥಿತಿ’ ಕುರಿತು 2021ರ ಮಾರ್ಚ್ ನಲ್ಲಿ ICC ಪ್ರಾಸಿಕ್ಯೂಟರ್ ತನಿಖೆಯನ್ನು ಆರಂಭಿಸಿದ್ದರು. ಹಮಾಸ್ ದಾಳಿಯ ನಂತರ ಹೆಚ್ಚಿದ ಸಂಘರ್ಷಗಳೂ ಈ ತನಿಖೆಯ ವ್ಯಾಪ್ತಿಗೆ ಬರುತ್ತವೆ ಎಂದು ಅವರು ತಿಳಿಸಿದ್ದರು. 2024ರ ಮೇ 20ರಂದು ಪ್ರಾಸಿಕ್ಯೂಟರ್ ಪೂರ್ವಭಾವಿ ವಿಚಾರಣಾ ಮಂಡಳಿ-Iಗೆ ಬಂಧನ ವಾರೆಂಟ್ ಗಳಿಗಾಗಿ ಅರ್ಜಿ ಸಲ್ಲಿಸಿದ್ದರು.
ಇಸ್ರೇಲ್ ಸಲ್ಲಿಸಿದ್ದ ಎರಡು ವಿರೋಧಗಳನ್ನು ತಳ್ಳಿಹಾಕಿದ ICCಯ ಪೂರ್ವಭಾವಿ ವಿಚಾರಣಾ ಮಂಡಳಿ-I, 2024ರ ನವೆಂಬರ್ 21ರಂದು ಸರ್ವಾನುಮತದ ತೀರ್ಪಿನ ಮೂಲಕ ನೆತನ್ಯಾಹು ಹಾಗೂ ಅಂದಿನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ವಿರುದ್ಧ ವಾರೆಂಟ್ ಹೊರಡಿಸಿತು. 2023ರ ಅಕ್ಟೋಬರ್ 8ರಿಂದ ಕನಿಷ್ಠ 2024ರ ಮೇ 20ರವರೆಗಿನ ಅವಧಿಯಲ್ಲಿ ಹಸಿವನ್ನೇ ಯುದ್ಧದ ಅಸ್ತ್ರವನ್ನಾಗಿ ಬಳಸುವುದು, ನಾಗರಿಕರ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸುವುದು ಮುಂತಾದ ಯುದ್ಧ ಅಪರಾಧಗಳು ಹಾಗೂ ಕೊಲೆ, ಕಿರುಕುಳ ಮತ್ತು ಇತರ ಅಮಾನವೀಯ ಕೃತ್ಯಗಳಂತಹ ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ನ್ಯಾಯಾಲಯವು ತನ್ನ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ನ್ಯಾಯಾಲಯವು ಹಮಾಸ್ ನ ಅಂದಿನ ಮಿಲಿಟರಿ ಕಮಾಂಡರ್ ಮೊಹಮ್ಮದ್ ದೀಫ್ ವಿರುದ್ಧವೂ ವಾರೆಂಟ್ ಹೊರಡಿಸಿತ್ತು. ಆದರೆ ದೀಫ್ ಸಾವನ್ನಪ್ಪಿದ್ದಾರೆ ಎಂದು ಪ್ರಾಸಿಕ್ಯೂಟರ್ಗಳು ನ್ಯಾಯಾಲಯಕ್ಕೆ ತಿಳಿಸಿದ ನಂತರ, ನ್ಯಾಯಾಧೀಶರು 2025ರ ಫೆಬ್ರವರಿಯಲ್ಲಿ ಅವರ ವಿರುದ್ಧದ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿದರು.
ICC ಆರೋಪಗಳನ್ನು ನೆತನ್ಯಾಹು ನಿರಾಕರಿಸಿದ್ದಾರೆ. ICCಯ ಅಧಿಕಾರ ವ್ಯಾಪ್ತಿಯನ್ನು ಇಸ್ರೇಲ್ ತಿರಸ್ಕರಿಸಿದೆ. ಗಾಝಾದಲ್ಲಿ ಯಾವುದೇ ಯುದ್ಧ ಅಪರಾಧಗಳನ್ನು ಮಾಡಿಲ್ಲ ಎಂದು ಹೇಳಿಕೊಂಡಿದ್ದು, ವಾರೆಂಟ್ ಗಳನ್ನು ಪ್ರಶ್ನಿಸುತ್ತಿದೆ.
►ತನ್ನ ಸದಸ್ಯ ದೇಶವಲ್ಲದ ರಾಷ್ಟ್ರದ ನಾಯಕನ ವಿರುದ್ಧ ICC ಹೇಗೆ ಕ್ರಮ ಕೈಗೊಳ್ಳಬಹುದು?
ಇಸ್ರೇಲ್ ದೇಶವು ಎಂದಿಗೂ 'ರೋಮ್ ಶಾಸನ'ಕ್ಕೆ ಅನುಮೋದನೆ ನೀಡಿಲ್ಲ.
ಆದರೆ, 2024ರ ನವೆಂಬರ್ ನಲ್ಲಿ ನೀಡಿದ ತೀರ್ಪಿನಲ್ಲಿ, ಫೆಲೆಸ್ತೀನಿನ ಭೂಪ್ರದೇಶದ ಅಧಿಕಾರ ವ್ಯಾಪ್ತಿಯ ಆಧಾರದ ಮೇಲೆ ನ್ಯಾಯಾಲಯವು ತನ್ನ ಅಧಿಕಾರವನ್ನು ಚಲಾಯಿಸಬಹುದಾಗಿರುವುದರಿಂದ ಇಸ್ರೇಲ್ ನ ಒಪ್ಪಿಗೆಯ ಅಗತ್ಯವಿಲ್ಲ ಎಂದು ಪೂರ್ವಭಾವಿ ವಿಚಾರಣಾ ಮಂಡಳಿ-I ತಿಳಿಸಿತ್ತು.
ಫೆಲೆಸ್ತೀನ್ ದೇಶವು 2015ರ ಜನವರಿ 1ರಂದು ಸಲ್ಲಿಸಿದ ಘೋಷಣೆಯ ಮೂಲಕ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ಒಪ್ಪಿಕೊಂಡಿತು ಮತ್ತು ಮರುದಿನವೇ ಈ ಶಾಸನಕ್ಕೆ ಸೇರಿಕೊಂಡಿತು. 2021ರ ಫೆಬ್ರವರಿಯಲ್ಲಿ, ಅದೇ ಮಂಡಳಿಯ ಬಹುಪಾಲು ಸದಸ್ಯರು, ಈ ಅಧಿಕಾರ ವ್ಯಾಪ್ತಿಯು ಗಾಝಾ ಮತ್ತು ವೆಸ್ಟ್ ಬ್ಯಾಂಕ್ ಹಾಗೂ ಪೂರ್ವ ಜೆರುಸಲೇಮ್ ಅನ್ನು ಒಳಗೊಂಡಿದೆ ಎಂದು ತೀರ್ಪು ನೀಡಿದ್ದರು.
ಇದನ್ನು ಪ್ರಶ್ನಿಸಿ ಇಸ್ರೇಲ್ ಮೇಲ್ಮನವಿ ಸಲ್ಲಿಸಿತು. ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಲು ತನಗೆ ಹಕ್ಕಿದೆ ಎಂಬ ಇಸ್ರೇಲ್ ನ ವಾದವನ್ನು ಕೆಳಹಂತದ ಮಂಡಳಿಯು ಸರಿಯಾಗಿ ಪರಿಗಣಿಸಿಲ್ಲ ಎಂದು 2025ರ ಎಪ್ರಿಲ್ ನಲ್ಲಿ ಮೇಲ್ಮನವಿ ಮಂಡಳಿಯು ಅಭಿಪ್ರಾಯಪಟ್ಟು, ಆ ಪ್ರಶ್ನೆಯನ್ನು ಮರುಪರಿಶೀಲನೆಗಾಗಿ ವಾಪಸ್ ಕಳುಹಿಸಿತು. ಆದರೆ, ಎರಡು ವಾರೆಂಟ್ ಗಳ ಜಾರಿಯನ್ನು ತಡೆಹಿಡಿಯುವಂತೆ ಕೋರಿ ಇಸ್ರೇಲ್ ಸಲ್ಲಿಸಿದ್ದ ಮನವಿಯನ್ನು ಮೇಲ್ಮನವಿ ನ್ಯಾಯಾಧೀಶರು ವಜಾಗೊಳಿಸಿದರು.
►ನೆತನ್ಯಾಹು ಅವರನ್ನು ಯಾರು ಬಂಧಿಸಬೇಕು?
ಸದಸ್ಯ ದೇಶಗಳು ಬಂಧಿಸಬೇಕು. ICCಗೆ ಸ್ವಂತ ಪೊಲೀಸ್ ಪಡೆ ಅಥವಾ ಕಾನೂನು ಜಾರಿಗೊಳಿಸುವ ಯಾವುದೇ ಪ್ರತ್ಯೇಕ ವಿಭಾಗವಿಲ್ಲ. ಆರೋಪಿಗಳನ್ನು ಬಂಧಿಸಿ, ನೆದರ್ಲ್ಯಾಂಡ್ಸ್ನ ಹೇಗ್ ನಲ್ಲಿರುವ ತನ್ನ ಬಂಧನ ಕೇಂದ್ರಕ್ಕೆ ಕರೆತರಲು ಅದು ಸರ್ಕಾರಗಳನ್ನೇ ಅವಲಂಬಿಸಿದೆ.
ಈ ಶಾಸನದ ಪ್ರಕಾರ, ಸದಸ್ಯ ರಾಷ್ಟ್ರಗಳು ನ್ಯಾಯಾಲಯದೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು. ಅಲ್ಲದೆ, “ಯಾವ ವ್ಯಕ್ತಿಯು ಯಾವ ದೇಶದ ಭೂಪ್ರದೇಶದಲ್ಲಿ ಸಿಗುತ್ತಾರೋ” ಆ ದೇಶಕ್ಕೆ ನ್ಯಾಯಾಲಯವು ಬಂಧನದ ಕೋರಿಕೆಯನ್ನು ಕಳುಹಿಸಬಹುದು.
ಈ ಶಾಸನಕ್ಕೆ ಒಪ್ಪಿಗೆ ನೀಡಿರುವ ಒಟ್ಟು 125 ದೇಶಗಳಿವೆ. ಆದರೆ ಅಮೆರಿಕ ಮತ್ತು ಇಸ್ರೇಲ್ ಈ ಪಟ್ಟಿಯಲ್ಲಿಲ್ಲ (ಭಾರತ ಕೂಡ ಇದರ ಸದಸ್ಯರಲ್ಲ).
ಈ ವಾರೆಂಟ್ ನಿಂದಾಗಿ ನೆತನ್ಯಾಹು ಅವರಿಗೆ ಅನೇಕ ದೇಶಗಳಿಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ ಎಂದು 'ರಾಯಿಟರ್ಸ್' ವರದಿ ಮಾಡಿದೆ.
ಅಲ್ಲದೆ, ಈ ಒಪ್ಪಂದದ ಪ್ರಕಾರ ಅಧಿಕಾರದಲ್ಲಿರುವುದು ಯಾವುದೇ ರಕ್ಷಣೆ ನೀಡುವುದಿಲ್ಲ. ರಾಷ್ಟ್ರ ಅಥವಾ ಸರ್ಕಾರದ ಮುಖ್ಯಸ್ಥರ ಅಧಿಕೃತ ಸ್ಥಾನಮಾನವು ಯಾರನ್ನೂ ಅಪರಾಧ ಹೊಣೆಗಾರಿಕೆಯಿಂದ ವಿನಾಯಿತಿ ನೀಡುವುದಿಲ್ಲ ಮತ್ತು ಆ ಹುದ್ದೆಗೆ ಇರುವ ವಿನಾಯಿತಿಗಳು ನ್ಯಾಯಾಲಯವು ತನ್ನ ಅಧಿಕಾರವನ್ನು ಚಲಾಯಿಸುವುದನ್ನು ತಡೆಯುವುದಿಲ್ಲ ಎಂದು ವಿಧಿ 27 ಸ್ಪಷ್ಟಪಡಿಸುತ್ತದೆ.
►ನೆತನ್ಯಾಹು ಫ್ರಾನ್ಸ್ ವಾಯುಪ್ರದೇಶದಲ್ಲಿ ವಿಮಾನದಲ್ಲಿ ಪ್ರಯಾಣಿಸಿದ್ದು ಹೇಗೆ?
ಈ ಶಾಸನಕ್ಕೆ ಒಪ್ಪಿಗೆ ನೀಡಿರುವ ಫ್ರಾನ್ಸ್ ದೇಶವು, ಇಸ್ರೇಲ್ ನಾಯಕನ ವಿಮಾನವು ತನ್ನ ವಾಯುಪ್ರದೇಶದಲ್ಲಿ ಹಾರಲು ಅನುಮತಿ ನೀಡಿದ್ದ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಈ ಅನುಮತಿಯು “ಅಂತರರಾಷ್ಟ್ರೀಯ ಕಾನೂನಿಗೆ ಸಂಪೂರ್ಣವಾಗಿ ಅನುಗುಣವಾಗಿದೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಪಾಸ್ಕಲ್ ಕಾನ್ಫಾವ್ರೆಕ್ಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಬಂಧನ ವಾರೆಂಟ್ ಎದುರಿಸುತ್ತಿರುವ ಪ್ರಯಾಣಿಕರನ್ನು ಹೊತ್ತೊಯ್ಯುವ ಸರ್ಕಾರದ ಅಧಿಕೃತ ವಿಮಾನವು ತನ್ನ ಭೂಪ್ರದೇಶದ ಮೇಲಿಂದ ಹಾರುವುದರ ಬಗ್ಗೆ ರೋಮ್ ಶಾಸನವು ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ” ಎಂದು ಕಾನ್ಫಾವ್ರೆಕ್ಸ್ ಹೇಳಿದ್ದಾರೆ.
ರಾಯಿಟರ್ಸ್ ವರದಿಯ ಪ್ರಕಾರ, ಇಟಲಿಯ ವಾಯುಪ್ರದೇಶದ ಮೇಲೆ ಹಾರಲು ಇಸ್ರೇಲ್ ಅನುಮತಿ ಕೋರಿತ್ತೇ ಎಂಬ ಬಗ್ಗೆ ಇಟಲಿ ವಿದೇಶಾಂಗ ಸಚಿವಾಲಯದ ವಕ್ತಾರರಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಕಳೆದ ವರ್ಷ, ನೆತನ್ಯಾಹು ಅವರು ಫ್ರಾನ್ಸ್ ಸೇರಿದಂತೆ ಹಲವು ಯುರೋಪಿಯನ್ ದೇಶಗಳನ್ನು ಸುತ್ತಿಕೊಂಡು ನ್ಯೂಯಾರ್ಕ್ಗೆ ದೀರ್ಘವಾದ ಪರ್ಯಾಯ ಮಾರ್ಗದಲ್ಲಿ ತೆರಳಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಯಾರಾದರೂ ವ್ಯಕ್ತಿಯು ದೇಶದ ಭೂಪ್ರದೇಶದಲ್ಲಿ ಸಿಕ್ಕಾಗ ಬಂಧಿಸಬೇಕು ಎಂಬ ನಿಯಮದ ಸುತ್ತಲೇ ಈ ಶಾಸನದ ಬಂಧನ ಕರ್ತವ್ಯವು ರೂಪುಗೊಂಡಿದೆ. ಬಂಧನ ಮತ್ತು ಹಸ್ತಾಂತರದ ಬಗ್ಗೆ ವಿವರಿಸುವ ಶಾಸನದ 9ನೇ ಭಾಗವು, 'ಭೂಪ್ರದೇಶ' ಎಂದರೇನು ಎಂಬುದನ್ನು ವ್ಯಾಖ್ಯಾನಿಸುವುದಿಲ್ಲ ಅಥವಾ ಮೇಲೆ ಹಾರುವ ವಿಮಾನವು ಈ ನಿಯಮದಡಿಗೆ ಬರುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸುವುದಿಲ್ಲ. ಆ ಭಾಗದಲ್ಲಿರುವ ಪದಗಳ ಬಳಕೆಯ ನಿಯಮವು ಕೇವಲ ಹಸ್ತಾಂತರ ಮತ್ತು ಒಪ್ಪಿಸುವ ಪ್ರಕ್ರಿಯೆಯನ್ನು ಮಾತ್ರ ವಿವರಿಸುತ್ತದೆ.
ಬಂಧನ ಮತ್ತು ಹಸ್ತಾಂತರ ಕುರಿತ ಅಧ್ಯಾಯದಲ್ಲಿ ವಾಯುಪ್ರದೇಶದ ಬಗ್ಗೆ ಇರುವ ಒಂದೇ ಒಂದು ನಿಯಮವೆಂದರೆ, ಈಗಾಗಲೇ ವಶದಲ್ಲಿದ್ದು ನ್ಯಾಯಾಲಯಕ್ಕೆ ಕರೆದೊಯ್ಯಲ್ಪಡುವ ಶಂಕಿತ ವ್ಯಕ್ತಿಗೆ ಸಂಬಂಧಿಸಿದ್ದು. ವಿಮಾನವು ಎಲ್ಲೂ ಲ್ಯಾಂಡಿಂಗ್ ಆಗುವುದಿಲ್ಲ ಎಂದಾದರೆ ಯಾವುದೇ ಸಾರಿಗೆ ಅನುಮತಿಯ ಅಗತ್ಯವಿಲ್ಲ ಎಂದು ಅದು ಹೇಳುತ್ತದೆ. ಒಂದು ವೇಳೆ ವಿಮಾನವು ಅನಿವಾರ್ಯವಾಗಿ ಎಲ್ಲಾದರೂ ಇಳಿದರೆ, ಸಂಬಂಧಪಟ್ಟ ದೇಶವು ನ್ಯಾಯಾಲಯದಿಂದ ಸಾರಿಗೆ ಅನುಮತಿಯನ್ನು ಕೋರಬಹುದು ಮತ್ತು ಅನುಮತಿ ಸಿಗುವವರೆಗೆ 90 ಗಂಟೆಗಳ ಕಾಲ ಖೈದಿಯನ್ನು ತಡೆಹಿಡಿಯಬಹುದು.
ಸದಸ್ಯ ರಾಷ್ಟ್ರದ ಮೇಲಿಂದ ವಾರೆಂಟ್ ಎದುರಿಸುತ್ತಿರುವ ವ್ಯಕ್ತಿಯು ಮುಕ್ತವಾಗಿ ವಿಮಾನದಲ್ಲಿ ಹಾರಿಹೋಗುವುದರ ಬಗ್ಗೆ ಒಪ್ಪಂದದಲ್ಲಿ ಯಾವುದೇ ಸ್ಪಷ್ಟ ನಿಯಮವಿಲ್ಲದಿರುವ ಲೋಪದ ಮೇಲೆಯೇ ಫ್ರಾನ್ಸ್ ದೇಶದ ನಿಲುವು ಆಧಾರಿತವಾಗಿದೆ.
►ವಿಶ್ವಸಂಸ್ಥೆಯಲ್ಲಿ ನೆತನ್ಯಾಹು ಅವರನ್ನು ಏಕೆ ಬಂಧಿಸಲು ಸಾಧ್ಯವಾಗಲಿಲ್ಲ?
ಅಮೆರಿಕ ದೇಶವು ICCಗೆ ಯಾವುದೇ ರೀತಿಯಲ್ಲಿ ಬದ್ಧವಾಗಿಲ್ಲ. ಈ ಶಾಸನದ ಪ್ರಕಾರ, ವಿಶೇಷ ಒಪ್ಪಂದದ ಮೂಲಕ ಅಥವಾ ಆ ದೇಶದೊಂದಿಗೆ ಮಾಡಿಕೊಂಡ ಒಪ್ಪಂದದ ಮೂಲಕ ಮಾತ್ರ ಸದಸ್ಯರಲ್ಲದ ರಾಷ್ಟ್ರಗಳ ಸಹಾಯವನ್ನು ನ್ಯಾಯಾಲಯವು ಕೋರಬಹುದು. ICC ಮತ್ತು ವಿಶ್ವಸಂಸ್ಥೆ ನಡುವೆ ಸಹಕಾರ ಒಪ್ಪಂದವಿದ್ದರೂ, ICC ಎಂಬುದು ವಿಶ್ವಸಂಸ್ಥೆಯ ಅಂಗಸಂಸ್ಥೆಯಲ್ಲ.
ಅಲ್ಲದೆ, ಡೊನಾಲ್ಡ್ ಟ್ರಂಪ್ ಆಡಳಿತವು ICC ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಟ್ರಂಪ್ ನೇತೃತ್ವದ ಅಮೆರಿಕವು ICC ಸಿಬ್ಬಂದಿಯ ಮೇಲೆ ಆರ್ಥಿಕ ನಿರ್ಬಂಧಗಳು ಮತ್ತು ವೀಸಾ ನಿಷೇಧಗಳನ್ನು ವಿಧಿಸಿದೆ. ICC ವಿರುದ್ಧದ ಈ ಅಭಿಯಾನವು ನೆತನ್ಯಾಹು ಅವರನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಟ್ರಂಪ್ ಬಹಿರಂಗವಾಗಿ ಹೇಳಿದ್ದಾರೆ.
►ಸದಸ್ಯ ದೇಶಗಳು ಬಂಧಿಸದಿದ್ದರೆ ಏನಾಗುತ್ತದೆ?
ನ್ಯಾಯಾಲಯವು ಅಂತಹ ದೇಶಗಳ ಹೆಸರುಗಳನ್ನು ಬಹಿರಂಗಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಮಾಡಬಹುದು, ಇದರ ಹೊರತಾಗಿ ಅದಕ್ಕೆ ಬೇರೆ ಯಾವುದೇ ಅಧಿಕಾರವಿಲ್ಲ. ವಿಧಿ 87(7)ರ ಪ್ರಕಾರ, ಸದಸ್ಯ ರಾಷ್ಟ್ರವೊಂದು ಸಹಕರಿಸಲು ವಿಫಲವಾಗಿ ICCಯ ಕೆಲಸಕ್ಕೆ ಅಡ್ಡಿಪಡಿಸಿದರೆ, ನ್ಯಾಯಾಧೀಶರು ಆ ಕುರಿತು ತೀರ್ಮಾನ ಕೈಗೊಂಡು, ಸದಸ್ಯ ಸರ್ಕಾರಗಳ ಒಕ್ಕೂಟವಾದ ಅಸೆಂಬ್ಲಿ ಆಫ್ ಸ್ಟೇಟ್ಸ್ ಪಾರ್ಟೀಸ್ ಗೆ ವಿಷಯವನ್ನು ಶಿಫಾರಸು ಮಾಡಬಹುದು.
ಸುಡಾನ್ ನ ಅಂದಿನ ಅಧ್ಯಕ್ಷ ಒಮರ್ ಅಲ್-ಬಶೀರ್ ಪ್ರಕರಣ ಸೇರಿದಂತೆ ಈ ಹಿಂದೆಯೂ ನ್ಯಾಯಾಧೀಶರು ಇಂತಹ ತೀರ್ಪುಗಳನ್ನು ನೀಡಿದ್ದಾರೆ. ಬೇಕಾಗಿರುವ ನಾಯಕರಿಗೆ ಆತಿಥ್ಯ ನೀಡಿದ ದೇಶಗಳಿಗೆ ಸಂಬಂಧಿಸಿದ ಇತ್ತೀಚಿನ ಎರಡು ಪ್ರಮುಖ ನಿದರ್ಶನಗಳು ಇಲ್ಲಿವೆ:
ಮಂಗೋಲಿಯಾ ಮತ್ತು ಪುಟಿನ್: 2024ರ ಅಕ್ಟೋಬರ್ ನಲ್ಲಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ದೇಶಕ್ಕೆ ಭೇಟಿ ನೀಡಿದಾಗ ಅವರನ್ನು ಬಂಧಿಸದೆ ಕರ್ತವ್ಯಲೋಪ ಎಸಗಿದೆ ಎಂದು ಪೂರ್ವಭಾವಿ ವಿಚಾರಣಾ ಮಂಡಳಿಯು ಮಂಗೋಲಿಯಾ ವಿರುದ್ಧ ತೀರ್ಪು ನೀಡಿತ್ತು. ಅಲ್ಲದೆ, ರಾಷ್ಟ್ರಾಧ್ಯಕ್ಷರ ವಿನಾಯಿತಿಯು “ICC ಮುಂದೆ ಅಮಾನ್ಯವಾಗಿದೆ ಮತ್ತು ಯಾವುದೇ ವಿನಾಯಿತಿಯ ಅಗತ್ಯವಿಲ್ಲ” ಎಂದು ಪುನರುಚ್ಚರಿಸಿತ್ತು.
ಹಂಗೇರಿ ಮತ್ತು ನೆತನ್ಯಾಹು: ಹಂಗೇರಿಯೂ ಸಹ ಇದೇ ರೀತಿಯ ವಾದವನ್ನು ಮುಂದಿಟ್ಟಿತ್ತು. ಇಸ್ರೇಲ್ ಈ ಒಪ್ಪಂದದ ಸದಸ್ಯರಲ್ಲದಿರುವುದರಿಂದ ಮತ್ತು ನೆತನ್ಯಾಹು ಅವರ ವಿನಾಯಿತಿಯನ್ನು ಹಿಂಪಡೆಯದ ಕಾರಣ ಅವರು ರಾಜ್ಯ ವಿನಾಯಿತಿಯಿಂದ ರಕ್ಷಿಸಲ್ಪಟ್ಟಿದ್ದಾರೆ ಎಂದು ಅದು ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ 2025ರ ಜುಲೈ 24ರಂದು ನೀಡಿದ ತೀರ್ಪಿನಲ್ಲಿ, 2025ರ ಏಪ್ರಿಲ್ 3ರಿಂದ 6ರವರೆಗೆ ನೆತನ್ಯಾಹು ಹಂಗೇರಿಯಲ್ಲಿ ಇದ್ದಾಗ ಅವರನ್ನು ಬಂಧಿಸದ ಮೂಲಕ ಆ ದೇಶವು ತನ್ನ ಜವಾಬ್ದಾರಿಯನ್ನು ಉಲ್ಲಂಘಿಸಿದೆ ಎಂದು ಪೂರ್ವಭಾವಿ ವಿಚಾರಣಾ ಮಂಡಳಿ-I ತೀರ್ಪು ನೀಡಿತ್ತು ಮತ್ತು ವಿಷಯವನ್ನು ಅಸೆಂಬ್ಲಿ ಆಫ್ ಸ್ಟೇಟ್ಸ್ ಪಾರ್ಟೀಸ್ ಗೆ ಶಿಫಾರಸು ಮಾಡಿತ್ತು.
ಆ ಭೇಟಿಯ ಸಂದರ್ಭದಲ್ಲೇ ತಾವು ನ್ಯಾಯಾಲಯದಿಂದ ಹೊರಹೋಗುವುದಾಗಿ ಹಂಗೇರಿ ಘೋಷಿಸಿತ್ತು. ಆದರೆ ಬಳಿಕ ತನ್ನ ನಿರ್ಧಾರವನ್ನು ಬದಲಾಯಿಸಿತು. ಹೊರಹೋಗುವ ತನ್ನ ನಿರ್ಧಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಾಪಸ್ ಪಡೆದ ಹಂಗೇರಿ, 2026ರ ಮೇ 29ರಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ಅಧಿಕೃತವಾಗಿ ತಿಳಿಸಿತು.
►ICC ಮೇಲಿನ ದಾಳಿ
ಮಂಗಳವಾರ ವಿಶ್ವಸಂಸ್ಥೆಯ ಮಹಾಅಧಿವೇಶನದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನ್ಯಾಯಾಲಯವನ್ನು “ದುಷ್ಟ” ಹಾಗೂ “ಅರಾಜಕ ಸಂಸ್ಥೆ” ಎಂದು ಬಣ್ಣಿಸುವುದರ ಜತೆಗೆ, ಅದರಿಂದ ಹೊರಬರುವಂತೆ ಎಲ್ಲ ರಾಷ್ಟ್ರಗಳಿಗೆ ಕರೆ ನೀಡಿದರು. ಜುಲೈ ತಿಂಗಳಲ್ಲಿ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು, ICCಯನ್ನು “ಅಗತ್ಯವಿದ್ದರೆ ಕೆಡವಿಹಾಕುವ” ಅಭಿಯಾನವನ್ನು ಆರಂಭಿಸಿದ್ದರು.
ರಾಯಿಟರ್ಸ್ ವರದಿಯ ಪ್ರಕಾರ, ಈ ವಾರ ಪೆಸಿಫಿಕ್ ದ್ವೀಪ ರಾಷ್ಟ್ರವಾದ ನೌರು ಮಾತ್ರ ತಾನು ಹೊರಹೋಗುವುದಾಗಿ ಘೋಷಿಸಿದೆ. ರೂಬಿಯೊ ಅವರ ಹೇಳಿಕೆಯ ನಂತರ ವೆನೆಜುವೆಲಾ ಮತ್ತು ಚಾಡ್ ಕೂಡ ಸಂಸ್ಥೆಯಿಂದ ಹೊರಹೋಗುವ ತಮ್ಮ ಯೋಜನೆಯನ್ನು ಪ್ರಕಟಿಸಿದ್ದವು.
ಬುರ್ಕಿನಾ ಫಾಸೊ, ಮಾಲಿ ಮತ್ತು ನೈಜರ್ ದೇಶಗಳು ಕಳೆದ ವರ್ಷವೇ ತಾವು ಹೊರಹೋಗುವುದಾಗಿ ಘೋಷಿಸಿದ್ದು, ಈಗ ಅಧಿಕೃತ ನೋಟಿಸ್ ನೀಡಿವೆ.
ಸದಸ್ಯರಾಗಿದ್ದ ಅವಧಿಯಲ್ಲಿ ಹುಟ್ಟಿಕೊಂಡ ಜವಾಬ್ದಾರಿಗಳಿಂದ ಹೊರಹೋಗುವುದರಿಂದ ಯಾವುದೇ ದೇಶವು ಮುಕ್ತವಾಗಲು ಸಾಧ್ಯವಿಲ್ಲ ಎಂದು 'ಅಸೆಂಬ್ಲಿ ಆಫ್ ಸ್ಟೇಟ್ಸ್ ಪಾರ್ಟೀಸ್' ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಮತ್ತೊಂದೆಡೆ, ಯುರೋಪಿಯನ್ ಸರ್ಕಾರಗಳು ನ್ಯಾಯಾಲಯದ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿವೆ. ICCಯನ್ನು ರಕ್ಷಿಸಲು ತಮ್ಮ ಬಳಿ “ವಿವಿಧ ಅಸ್ತ್ರಗಳಿವೆ” ಎಂದು ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥೆ ಕಜಾ ಕಲ್ಲಾಸ್ ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ನ್ಯಾಯಾಲಯವು “ದಾಳಿಯೆದುರಿಸುತ್ತಿದೆ” ಎಂದು ನೆದರ್ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟೆನ್ ಅಸೆಂಬ್ಲಿಗೆ ತಿಳಿಸಿದ್ದಾರೆ.
ಸೌಜನ್ಯ: hindustantimes.com






