ಬೆಂಗಳೂರು GPOದಲ್ಲಿ ಒಂದೇ ದಿನದಲ್ಲಿ 1,000 ‘ಫಿಲಾಟೆಲಿ ಪಾಸ್ಪೋರ್ಟ್’ ಮಾರಾಟ: ಏನಿದು ಹೊಸ ಕ್ರೇಜ್?

Photo Credit : X
ತಕ್ಷಣದ ಸಂದೇಶಗಳು ಮತ್ತು ಸೆಲ್ಫಿಗಳ ಈ ಕಾಲದಲ್ಲೂ, ಬೆಂಗಳೂರಿನ ಜಿಪಿಒ (ಪ್ರಧಾನ ಅಂಚೆ ಕಚೇರಿ) ಆವರಣದಲ್ಲಿ ನಿನ್ನೆ (ಶುಕ್ರವಾರ) ಸಿಕ್ಕಾಪಟ್ಟೆ ಜನ ಸೇರಿದ್ದರು. ಕರ್ನಾಟಕವನ್ನು ಸುತ್ತಿ ತಮ್ಮ ಪ್ರವಾಸದ ನೆನಪನ್ನು ಅಚ್ಚೊತ್ತಿ ಶಾಶ್ವತವಾಗಿ ಉಳಿಸಿಕೊಳ್ಳಲು ಬಯಸುವ ಪ್ರವಾಸಿಗರನ್ನು ಸೆಳೆಯುವಂತಹ ವಿಶಿಷ್ಟ ಪುಸ್ತಕವೊಂದು ಅಲ್ಲಿ ಮಾರಾಟಕ್ಕಿರುವುದೇ ಇದಕ್ಕೆ ಕಾರಣ.
ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಇರುವ ಬೆಂಗಳೂರು ಜಿಪಿಒನಿಂದ ‘ಕರ್ನಾಟಕ ಫಿಲಾಟೆಲಿ ಪಾಸ್ಪೋರ್ಟ್’ ಖರೀದಿಸಲು ನೂರಾರು ಜನರು ಜಮಾಯಿಸಿದ್ದರು. ಕೆಲವರು ಮುಂಜಾನೆಯೇ ಸ್ಥಳಕ್ಕೆ ತಲುಪಿದ್ದರೆ, ಇನ್ನು ಕೆಲವರು ನಂತರ ಬಂದ ಉದ್ದನೆಯ ಸರತಿ ಸಾಲನ್ನು ಸೇರಿಕೊಂಡರು. ಪ್ರವಾಸಿಗರು ಮತ್ತು ಅಂಚೆಚೀಟಿ ಸಂಗ್ರಹಕಾರರ ಈ ಸಾಲು ಅಂಚೆ ಕಚೇರಿಯ ಮೆಟ್ರೋ ಕಡೆಯ ಪ್ರವೇಶ ದ್ವಾರದವರೆಗೂ ವಿಸ್ತರಿಸಿತ್ತು.
ಜನಸಂದಣಿಯನ್ನು ನಿಯಂತ್ರಿಸಲು ಅಧಿಕಾರಿಗಳು ಟೋಕನ್ಗಳನ್ನು ವಿತರಿಸಿದರು. ಒಬ್ಬರಿಗೆ ಒಂದೇ ಫಿಲಾಟೆಲಿ ಪಾಸ್ಪೋರ್ಟ್ ನೀಡಲಾಗುವುದು ಎಂದು ಪ್ರಕಟಿಸಿ ಸಾರ್ವಜನಿಕರ ಸಹಕಾರ ಕೋರಿದರು. ಅಂಚೆ ಕಚೇರಿ ಆರಂಭವಾದ ಕೇವಲ 15 ನಿಮಿಷಗಳಲ್ಲಿ ಸುಮಾರು 500 ಟೋಕನ್ಗಳನ್ನು ಹಂಚಲಾಗಿತ್ತು.
ಮೊದಲ ದಿನವೇ ಖಾಲಿಯಾದ ಬುಕ್ಲೆಟ್ಗಳು
ಡೆಪ್ಯುಟಿ ಚೀಫ್ ಪೋಸ್ಟ್ಮಾಸ್ಟರ್ ದೊಡ್ಡಪ್ಪ ಇಟಗಿ ಅವರು ಮಾತನಾಡಿ, "ಈ ಫಿಲಾಟೆಲಿ ಪಾಸ್ಪೋರ್ಟ್ಗೆ ಬೆಂಗಳೂರಿನಲ್ಲಿ ಮಾತ್ರವಲ್ಲದೆ, ಇದು ವಿತರಣೆಯಾಗುತ್ತಿರುವ ಕರ್ನಾಟಕದ ಇನ್ನುಳಿದ ಅಂಚೆ ಕಚೇರಿಗಳಲ್ಲೂ (ಮೈಸೂರು, ಮಂಗಳೂರು ಮತ್ತು ಬೆಳಗಾವಿ) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ" ಎಂದರು.
"ವಿಶೇಷವಾಗಿ ಯುವ ಪೀಳಿಗೆಯಲ್ಲಿ ಫಿಲಾಟೆಲಿ ಪಾಸ್ಪೋರ್ಟ್ ಬಗ್ಗೆ ಭಾರೀ ಆಸಕ್ತಿ ಕಂಡುಬರುತ್ತಿದೆ. ನಾವು ಆರಂಭದಲ್ಲಿ ಇದನ್ನು ಎರಡು ದಿನಗಳ ಕಾಲ (10 ಮತ್ತು 11 ಜುಲೈ) ಮಾರಾಟ ಮಾಡಲು ಯೋಜಿಸಿದ್ದೆವು. ಆದರೆ ಎಲ್ಲಾ 1,000 ಪುಸ್ತಕಗಳೂ ಮೊದಲ ದಿನವೇ ಮಾರಾಟವಾಗಿವೆ. ಇದು ಇದರ ಮೇಲಿನ ಕ್ರೇಜ್ ಅನ್ನು ತೋರಿಸುತ್ತದೆ" ಎಂದು ಅವರು ಹೇಳಿದರು.
ಈ ಹಂತಕ್ಕೆ ನಿಗದಿಪಡಿಸಲಾಗಿದ್ದ ಎಲ್ಲಾ ಪುಸ್ತಕಗಳು ಖಾಲಿಯಾಗಿವೆ. ಶನಿವಾರ (ಜುಲೈ 11) ಬೆಂಗಳೂರು ಜಿಪಿಒದಲ್ಲಿ ಫಿಲಾಟೆಲಿ ಪಾಸ್ಪೋರ್ಟ್ ಮಾರಾಟ ಇರುವುದಿಲ್ಲ ಎಂದು ಇಟಗಿ ಸ್ಪಷ್ಟಪಡಿಸಿದರು. ಅಂಚೆ ಕಚೇರಿಗೆ ಭೇಟಿ ನೀಡುವವರು ಅಲ್ಲಿನ ಸ್ಮರಣಾರ್ಥ ಅಂಚೆಚೀಟಿಗಳನ್ನು ಎಂದಿನಂತೆ ಸಂಗ್ರಹಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖರೀದಿಸಿದವರ ಸಂತಸ
ಪಾಸ್ಪೋರ್ಟ್ ಪಡೆದವರು ಸಂತೋಷದಿಂದ ಹೊರನಡೆದರು. ಅನೇಕರು ತಮ್ಮ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಆವರಣದಲ್ಲಿ ಸೆಲ್ಫಿಗಳನ್ನು ತೆಗೆದುಕೊಂಡರು.
"ಈ ನೀಲಿ ಪುಸ್ತಕವನ್ನು ಕೈಯಲ್ಲಿ ಹಿಡಿದಿರುವ ಅನುಭವವೇ ಅದ್ಭುತವಾಗಿದೆ. ನಾನು ನನ್ನ ಬೈಕ್ನಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡುವಾಗ ನೆನಪುಗಳನ್ನು ದಾಖಲಿಸಿಕೊಳ್ಳಲು ಇದೊಂದು ವಿಶಿಷ್ಟ ಪಾಸ್ಪೋರ್ಟ್" ಎಂದು ಬೈಕರ್ ಗಣೇಶ್ ಡೆಕ್ಕನ್ ಹೆರಾಲ್ಡ್ ಜತೆ ಸಂತಸ ಹಂಚಿಕೊಂಡರು.
ಮೀನಾಕ್ಷಿ ಮತ್ತು ದೇವಿ ಮಾತನಾಡಿ, "ನಮ್ಮಿಬ್ಬರಿಗೂ ಪ್ರವಾಸ ಮಾಡುವುದೆಂದರೆ ತುಂಬಾ ಇಷ್ಟ. ನಮ್ಮ ಪ್ರಯಾಣದ ವಿವರಗಳನ್ನು ದಾಖಲಿಸಲು ನಾವು ಟ್ರಾವೆಲ್ ಡೈರಿಗಳನ್ನು ಇಟ್ಟುಕೊಳ್ಳುತ್ತೇವೆ. ಈಗ ಸೆಲ್ಫಿಗಳು ಸಾಮಾನ್ಯವಾಗಿರುವುದರಿಂದ, ನಾವು ಭೇಟಿ ನೀಡುವ ಪ್ರತಿಯೊಂದು ಸ್ಥಳದ ಸ್ಟಾಂಪ್ಗಳನ್ನು ಸಂಗ್ರಹಿಸುವುದು ಪ್ರವಾಸದ ಅನುಭವವನ್ನು ಮತ್ತಷ್ಟು ರೋಮಾಂಚನಕಾರಿ ಮತ್ತು ವಿಶೇಷವಾಗಿಸುತ್ತದೆ" ಎಂದರು.
ಬೆಂಗಳೂರು ಮಿರರ್ ಪತ್ರಿಕೆಯ ವರದಿಯ ಪ್ರಕಾರ, ಪ್ರವಾಸಿಯೊಬ್ಬರು ಮಾತನಾಡಿ, "ನನ್ನ ಟೋಕನ್ ಸಂಖ್ಯೆ 300ಕ್ಕಿಂತ ಹೆಚ್ಚಿತ್ತು. ನಾನು ಬಹಳ ಸಮಯ ಕಾಯಬೇಕಾಯಿತು. ಆದರೆ ಆ ಕಾಯುವಿಕೆಗೆ ತಕ್ಕ ಪ್ರತಿಫಲ ಸಿಕ್ಕಿದೆ. ನಾನು ದೀರ್ಘಕಾಲದಿಂದ ಬಯಸಿದ್ದ ಕರ್ನಾಟಕ ಫಿಲಾಟೆಲಿ ಪಾಸ್ಪೋರ್ಟ್ ಕೊನೆಗೂ ನನ್ನ ಕೈಗೆ ಸೇರಿದೆ. ನನ್ನ ಪ್ರವಾಸದ ತಾಣಗಳ ಮುದ್ರೆಗಳನ್ನು ಇದರಲ್ಲಿ ಸಂಗ್ರಹಿಸುವುದು ಅದನ್ನು ಮತ್ತಷ್ಟು ವಿಶೇಷವಾಗಿಸುತ್ತದೆ" ಎಂದು ಖುಷಿ ಹಂಚಿಕೊಂಡಿದ್ದಾರೆ.
ಮೈಸೂರಿನ ನಿವಾಸಿ ಧನುಷ್ ಚಿಂತಾಮಣಿ ಮಾತನಾಡಿ, "ನಾನು ಹೊಸ ಜಾಗಗಳಿಗೆ ಹೆಚ್ಚು ಪ್ರವಾಸ ಮಾಡುವುದರಿಂದ, ಈ ಪುಸ್ತಕ ನನ್ನ ಪ್ರಯಾಣದ ಸವಿನೆನಪಾಗಿ ಉಳಿಯುತ್ತದೆ. ನಾವು ಎಷ್ಟು ಪ್ರಯಾಣ ಮಾಡಿದ್ದೇವೆ ಎಂದು ಮುಂದಿನ ಪೀಳಿಗೆಗೆ ತೋರಿಸಿ ಹೇಳಲು ಇದು ಸಹಕಾರಿಯಾಗಿದೆ" ಎಂದರು.
ಸಾರ್ವಜನಿಕರ ನಿರಾಶೆ ಮತ್ತು ಆಕ್ರೋಶ
ಹಲವಾರು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಕಾಯ್ದರೂ ತಮಗೆ ಪಾಸ್ಪೋರ್ಟ್ ಸಿಗಲಿಲ್ಲ ಎಂದು ಅನೇಕರು ಬೇಸರ ವ್ಯಕ್ತಪಡಿಸಿದರು.
ಸಾಫ್ಟ್ವೇರ್ ಉದ್ಯೋಗಿ ಮತ್ತು ಪ್ರವಾಸಿ ಸ್ವಾಮಿನಾಥನ್ ನಟರಾಜನ್ ಅವರು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿ, "ಇಂದು ಬೆಂಗಳೂರು ಜಿಪಿಒದಲ್ಲಿ ಅಂಚೆಚೀಟಿ ಸಂಗ್ರಹಕಾರರು ಮತ್ತು ಸಾರ್ವಜನಿಕರನ್ನು ನಡೆಸಿಕೊಂಡ ರೀತಿ ತೀವ್ರ ನಿರಾಶೆ ಉಂಟುಮಾಡಿದೆ. ಕೇವಲ 600 ಪುಸ್ತಕಗಳು ಮಾತ್ರ ಲಭ್ಯವಿವೆ ಎಂಬ ಮಾಹಿತಿ ಇತ್ತು. ಆದರೆ ಸಾರ್ವಜನಿಕರು 1,000 ಪ್ರತಿಗಳು ಸಿಗಲಿವೆ ಎಂದು ಭಾವಿಸಿದ್ದರು. ಹೀಗಿದ್ದರೂ, ಸ್ಪಷ್ಟ ಮಾಹಿತಿ ನೀಡದೆ 600ಕ್ಕೂ ಹೆಚ್ಚು ಜನರನ್ನು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಲು ಬಿಡಲಾಯಿತು. ಮುಂಜಾನೆ 9 ಗಂಟೆಯ ಹೊತ್ತಿಗಾಗಲೇ ಜನಸಂದಣಿ 600ರ ಗಡಿ ದಾಟಿತ್ತು. ದಾಸ್ತಾನು ಖಾಲಿಯಾಗಿದೆ ಎಂಬ ವಿಷಯವನ್ನು ಕಾಯುತ್ತಿದ್ದ ಜನರಿಗೆ ಸಿಬ್ಬಂದಿ ತಿಳಿಸಲಿಲ್ಲ. ಬದಲಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಜನಸ್ತೋಮವನ್ನು ತೋರಿಸಿಕೊಳ್ಳಲು ಸಿಬ್ಬಂದಿ ವಿಡಿಯೊ ದಾಖಲಿಸಿಕೊಳ್ಳುತ್ತಿದ್ದರು" ಎಂದಿದ್ದಾರೆ.
ಮತ್ತೊಂದೆಡೆ, ಮೈಸೂರಿನ ನಿವಾಸಿಯೊಬ್ಬರು ವಿಡಿಯೊ ಪೋಸ್ಟ್ ಮಾಡಿ, ತಾವೂ ಬೆಳಿಗ್ಗೆ 10 ಗಂಟೆಗೆ ತಲುಪಿದ್ದು, ಸಾಲಿನಲ್ಲಿ 120ನೇ ಸ್ಥಾನದಲ್ಲಿದ್ದರೂ ಪಾಸ್ಪೋರ್ಟ್ ಸಿಗಲಿಲ್ಲ ಎಂದು ದೂರಿದ್ದಾರೆ. ಮೈಸೂರಿನಲ್ಲಿ 200ಕ್ಕೂ ಹೆಚ್ಚು ಪ್ರತಿಗಳನ್ನು ವಿತರಿಸುವ ನಿರೀಕ್ಷೆಯಿತ್ತು ಎಂದು ಅವರು ಹೇಳಿದ್ದಾರೆ.
ಏನಿದು ಫಿಲಾಟೆಲಿ ಪಾಸ್ಪೋರ್ಟ್?
2024ರ ನವೆಂಬರ್ನಿಂದ ಕರ್ನಾಟಕ ಪೋಸ್ಟಲ್ ಸರ್ಕಲ್ (KPC) ಜಾರಿಗೆ ತಂದಿರುವ ಈ ಫಿಲಾಟೆಲಿ ಪಾಸ್ಪೋರ್ಟ್ ಪಾಕೆಟ್ ಸೈಜ್ ಪುಸ್ತಕವಾಗಿದೆ. ಜನವರಿ 25ರಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಅಂಗವಾಗಿ ಬಿಡುಗಡೆಯಾಗಿರುವ ಈ ಪುಸ್ತಕವು ಇಂಗ್ಲಿಷ್, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ.
ಇದರಲ್ಲಿ ಪ್ರತಿ ಪ್ರವಾಸಿ ತಾಣದ ಬಗ್ಗೆ ಸಂಕ್ಷಿಪ್ತ ಮಾಹಿತಿ ಇರುತ್ತದೆ. ಇದರ ಎದುರಿನ ಪುಟದಲ್ಲಿ ಆ ಜಾಗಕ್ಕೆ ಸಂಬಂಧಿಸಿದ ಅಂಚೆಚೀಟಿಯನ್ನು ಅಂಟಿಸಿ, ಅಲ್ಲಿನ ವಿಶೇಷ ಸೀಲ್ ಹಾಕಿಸಿಕೊಳ್ಳಬಹುದು. ಈ ಪಾಸ್ಪೋರ್ಟ್ನ ಎಡಭಾಗದ ಪುಟಗಳಲ್ಲಿ ಆಯಾ ಐತಿಹಾಸಿಕ ತಾಣ ಅಥವಾ ಘಟನೆಯ ಬಗ್ಗೆ ಸಂಕ್ಷಿಪ್ತ ವಿವರಣೆ ಇರುತ್ತದೆ. ಅಲ್ಲಿಗೆ ಸಂಬಂಧಿಸಿದ ವಿಶೇಷ ಮುದ್ರೆಯನ್ನೂ ಮುಂಚಿತವಾಗಿಯೇ ಅಚ್ಚು ಮಾಡಲಾಗಿದೆ.
ಇದರ ಹಿನ್ನೆಲೆ ಮತ್ತು ಇತಿಹಾಸ
ಕರ್ನಾಟಕ ಪೋಸ್ಟಲ್ ಸರ್ಕಲ್ ಅಕ್ಟೋಬರ್ 2025ರವರೆಗೆ ಒಟ್ಟು 100 ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಶನ್ಸ್ (PPCs) ಬಿಡುಗಡೆ ಮಾಡಿದೆ. ರಾಜ್ಯದ ಮೊದಲ ಇಂತಹ ಮುದ್ರೆಯನ್ನು 1987ರ ಸೆಪ್ಟೆಂಬರ್ 29ರಂದು ಬಾದಾಮಿಯಲ್ಲಿ ಬಿಡುಗಡೆ ಮಾಡಲಾಗಿತ್ತು.
ಈ ಮುದ್ರೆಯು ರಾಜ್ಯದ ಪ್ರಮುಖ ಪ್ರವಾಸಿ ತಾಣ, ವ್ಯಕ್ತಿ ಅಥವಾ ಐತಿಹಾಸಿಕ ಘಟನೆಯ ಚಿತ್ರವನ್ನು ಒಳಗೊಂಡಿರುವ ವಿಶಿಷ್ಟ ಅಂಚೆ ಮುದ್ರೆಯಾಗಿದೆ. ಈ ಪುಸ್ತಕದಲ್ಲಿ ಬೆಂಗಳೂರಿನ ಪ್ರಮುಖ ತಾಣಗಳಾದ ವಿಧಾನಸೌಧ, ಕರ್ನಾಟಕ ಹೈಕೋರ್ಟ್, ರಾಜಾಜಿನಗರ ಫೌಂಡೇಶನ್ ಪಿಲ್ಲರ್ ಮತ್ತು ಬನ್ನೇರುಘಟ್ಟ ಮುಂತಾದ ಸ್ಥಳಗಳನ್ನು ಸೇರಿಸಲಾಗಿದೆ.
ಬೆಲೆ ಎಷ್ಟು?
ಬೆಲೆ: ಪ್ರತಿಯೊಂದು ಫಿಲಾಟೆಲಿ ಪಾಸ್ಪೋರ್ಟ್ನ ಬೆಲೆ 600 ರೂ. ಇದನ್ನು ಯುಪಿಐ (UPI) ಅಥವಾ ನಗದು ಪಾವತಿಯ ಮೂಲಕ ಖರೀದಿಸಬಹುದು.
ಎಲ್ಲಿ ಸಿಗುತ್ತದೆ? ಫಿಲಾಟೆಲಿ ಪಾಸ್ಪೋರ್ಟ್ ಅನ್ನು ಬೆಂಗಳೂರು (ಜಿಪಿಒ), ಮೈಸೂರು, ಮಂಗಳೂರು ಮತ್ತು ಬೆಳಗಾವಿಯ ಫಿಲಾಟೆಲಿಕ್ ಬ್ಯೂರೋಗಳಿಂದ ಖರೀದಿಸಬಹುದು. ಇದನ್ನು ಖರೀದಿಸುವವರಲ್ಲಿ ಶೇಕಡಾ 90ರಷ್ಟು ಜನರು ಕಂಟೆಂಟ್ ಕ್ರಿಯೇಟರ್ಗಳು, ಪ್ರವಾಸಿಗರು ಮತ್ತು ಬೈಕರ್ಗಳಂತಹ ಯುವ ಪೀಳಿಗೆಯವರಾಗಿದ್ದಾರೆ.






