ಕೆಲವು ರಾಜ್ಯಗಳಲ್ಲಿ ಮರಣದೂತ ಕಳೆನಾಶಕ ಪ್ಯಾರಾಕ್ವಾಟ್ ನಿಷೇಧ; ಕಣ್ಣೀರಿನ ಕತೆಗಳಿಗೆ ಸಿಕ್ಕೀತೇ ಮುಕ್ತಿ?

ಸಾಂದರ್ಭಿಕ ಚಿತ್ರ|Photo Credit : PTI
ನಿಮ್ಮ ಊಟದ ತಟ್ಟೆಯಲ್ಲಿ ಕ್ಯಾನ್ಸರ್ ವಿಷ! ಯುರೋಪ್ ನಲ್ಲಿ ನಿಷೇಧಕ್ಕೊಳಗಾದ ರಾಸಾಯನಿಕಗಳು ಭಾರತೀಯ ಜಮೀನುಗಳ ಜೀವ ಹಿಂಡುತ್ತಿವೆ
ಗ್ರಾಮೀಣ ಪ್ರದೇಶದ ನಿವಾಸಿ 36 ವರ್ಷದ ಮೀನಮ್ಮ ಇತ್ತೀಚೆಗೆ ತನ್ನ ಗಂಡನೊಂದಿಗೆ ಜಗಳದ ನಂತರ ಸ್ವಲ್ಪ ಪ್ರಮಾಣದ ಕಳೆನಾಶಕ ನುಂಗಿದಾಗ ಸಾಯುವ ಉದ್ದೇಶವಿರಲಿಲ್ಲ. ಬದಲಾಗಿ, ಗಂಡನಿಂದ ನೋವಾಗಿದೆ ಎಂದು ತೋರಿಸುವ ಉದ್ದೇಶವಷ್ಟೇ ಇತ್ತು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ ಕುಟುಂಬಕ್ಕೆ ಆಕೆ ಬದುಕುವ ಬಗ್ಗೆ ಭರವಸೆ ಇತ್ತು. ಆದರೆ ಮೀನಮ್ಮಳ ಕುಟುಂಬಕ್ಕೆ ಅರಿವಿಲ್ಲದ ಸಂಗತಿಯೆಂದರೆ, ಆಕೆ ಸೇವಿಸಿದ್ದದ್ದು ವಿಶ್ವದ ಅತ್ಯಂತ ವಿಷಕಾರಿ ಕಳೆನಾಶಕಗಳಲ್ಲಿ ಒಂದಾದ ಪ್ಯಾರಾಕ್ವಾಟ್ ಡೈಕ್ಲೋರೈಡ್. ಇದಕ್ಕೆ ಪ್ರತಿವಿಷವಿಲ್ಲ. ಹೀಗಾಗಿ ಕುಟುಂಬದ ಭರವಸೆ ಹುಸಿಯಾಯಿತು. ಆಕೆಯ ಮೂತ್ರಪಿಂಡಗಳು ವಿಫಲವಾದವು. ಉಸಿರಾಟದ ತೊಂದರೆ ಬಂತು ಮತ್ತು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ಸ್ವಲ್ಪ ಸಮಯದ ನಂತರ ಆಕೆ ನಿಧನರಾದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಪ್ಯಾರಾಕ್ವಾಟ್ ಅನ್ನು 70ಕ್ಕೂ ಹೆಚ್ಚು ದೇಶಗಳಲ್ಲಿ ನಿಷೇಧಿಸಲಾಗಿದೆ ಮತ್ತು ಈಗ ಭಾರತದಲ್ಲಿ ಬೆಳೆಯುತ್ತಿರುವ ಚರ್ಚೆಯ ಕೇಂದ್ರವಾಗಿದೆ. ವೈದ್ಯರಿಗೆ ಮೀನಮ್ಮಳ ಉದಾಹರಣೆಯಿಂದ ಈ ದುರಂತದ ಪರಿಚಯವಾಗಿದೆ. ಲಕ್ಷಣಗಳು ಪ್ರಗತಿ ಹೊಂದಿದ ನಂತರ ಬದುಕುಳಿಯುವುದು ಅಸಾಧ್ಯ.
ವೈದ್ಯರು ಮತ್ತು ಕೃಷಿ ವಿಜ್ಞಾನಿಗಳ ಸಮಿತಿಯು ಈ ಕಳೆನಾಶಕವನ್ನು ಮಾರಕ ವಿಷ, ಮೂತ್ರಪಿಂಡ ವೈಫಲ್ಯ, ಶ್ವಾಸಕೋಶದ ಫೈಬ್ರೋಸಿಸ್ ಮತ್ತು ಪಾರ್ಕಿನ್ಸನ್ ಕಾಯಿಲೆಗೆ ಸಂಪರ್ಕಿಸುವ ಪುರಾವೆಗಳನ್ನು ಪರಿಶೀಲಿಸಿದ ನಂತರ ರಾಷ್ಟ್ರವ್ಯಾಪಿ ನಿಷೇಧಕ್ಕೆ ಶಿಫಾರಸು ಮಾಡಿದೆ. ಆದರೆ ಕ್ರಾಪ್ಲೈಫ್ ಇಂಡಿಯಾ ಸೇರಿದಂತೆ ಕೈಗಾರಿಕಾ ಸಮೂಹಗಳು, ನಿಷೇಧದಿಂದ ಭಾರತದಲ್ಲಿ ಕೃಷಿ ವೆಚ್ಚ ಏರಬಹುದು ಮತ್ತು ಕಳೆ ನಿರ್ವಹಣೆಗೆ ಅಡ್ಡಿಯಾಗಬಹುದು ಎಂದು ವಾದಿಸುತ್ತಿವೆ. ನಿಷೇಧದ ಬದಲಿಗೆ ಕಠಿಣ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಅವು ಪ್ರತಿಪಾದಿಸುತ್ತಿವೆ.
ನಿಷೇಧಕ್ಕೆ ಒಳಗಾಗುತ್ತಿರುವ ಪ್ಯಾರಾಕ್ವಾಟ್
ವರದಿಗಳ ಪ್ರಕಾರ, ರಾಜಸ್ಥಾನದ ಕಿಸಾನ್ ಮಹಾಪಂಚಾಯತ್ ಸೇರಿದಂತೆ ರೈತ ಸಮೂಹಗಳು ಪ್ಯಾರಾಕ್ವಾಟ್ ಮೇಲೆ ಕಠಿಣ ನಿರ್ಬಂಧಗಳನ್ನು ಒತ್ತಾಯಿಸಿವೆ. ಕೇರಳದಂತಹ ರಾಜ್ಯಗಳಲ್ಲಿ ಈ ಕಳೆನಾಶಕದ ಮಾರಾಟಕ್ಕೆ ಮಿತಿ ಹೇರಲಾಗಿದೆ. ಒಡಿಶಾದಲ್ಲಿ 2023ರಲ್ಲಿ ಪ್ಯಾರಾಕ್ವಾಟ್ಗೆ ನಿಷೇಧ ಹೇರಲಾಯಿತು. 2026ರ ಮಾರ್ಚ್ 31ರಂದು ತೆಲಂಗಾಣ ಸರ್ಕಾರ ಜನರ, ವಿಶೇಷವಾಗಿ ರೈತರ ಸುರಕ್ಷತೆ ಮತ್ತು ಆರೋಗ್ಯವನ್ನು ರಕ್ಷಿಸಲು ಪ್ಯಾರಾಕ್ವಾಟ್ ಮಾರಾಟ, ವಿತರಣೆ, ಉತ್ಪಾದನೆ ಮತ್ತು ಬಳಕೆಯನ್ನು ನಿಷೇಧಿಸಿತು. ಕೇರಳ ಮತ್ತು ಒಡಿಶಾ ನಂತರ ಹೀಗೆ ಮಾಡಿದ ಮೂರನೇ ರಾಜ್ಯವಾಯಿತು. ಸ್ವಯಂಹಾನಿಗಾಗಿ ಹೆಚ್ಚಾಗಿ ಬಳಸಲಾಗುವ ಈ ಕಳೆನಾಶಕವನ್ನು ನಿಷೇಧಿಸುವಂತೆ ವೈದ್ಯರು, ಚಿಕಿತ್ಸಕರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ತೀವ್ರವಾಗಿ ಒತ್ತಾಯಿಸಿದ್ದರು. ಅವರ ನಿರಂತರ ಒತ್ತಡದ ಬಳಿಕ ನಿಷೇಧದ ಸರ್ಕಾರಿ ಆದೇಶ ಹೊರಬಂದಿತು. ನೆರೆಯ ಆಂಧ್ರಪ್ರದೇಶವೂ ಮೇ ತಿಂಗಳಲ್ಲಿ ನಿಷೇಧದ ಆದೇಶ ಹೊರಡಿಸಿದೆ.
ಸುಲಭ ಲಭ್ಯತೆಯ ಅಪಾಯ
ಭಾರತದಲ್ಲಿ ಪ್ಯಾರಾಕ್ವಾಟ್ ಅನ್ನು ಫ್ಲಿಪ್ಕಾರ್ಟ್ ಮತ್ತು Amazonನಲ್ಲೂ ಖರೀದಿಸಬಹುದಾಗಿದೆ. ನಿಷೇಧದ ನಂತರ ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಆನ್ಲೈನ್ ಮಾರಾಟಕ್ಕೆ ಇದು ಲಭ್ಯವಿರುವುದಿಲ್ಲ. ಆದರೆ ಪ್ಯಾರಾಕ್ವಾಟ್ ದುರಂತಕ್ಕೆ ಮುಖ್ಯ ಕಾರಣ ಅದರ ಸುಲಭ ಲಭ್ಯತೆ. ಲೀಟರ್ಗೆ 280 ರೂ.ನಷ್ಟು ಕಡಿಮೆ ಬೆಲೆಗೆ ಇದು ಲಭ್ಯವಿದೆ. ಭಾರತದಲ್ಲಿ ಪ್ಯಾರಾಕ್ವಾಟ್ ಆಮದು 2019-20ರಲ್ಲಿ 8,598 ಟನ್ಗಳಷ್ಟಿದ್ದರೆ, 2022-23ರ ವೇಳೆಗೆ 20,786 ಟನ್ಗಳಿಗೆ ಏರಿಕೆಯಾಗಿದೆ ಎಂದು 2025ರಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆ ಸಂಖ್ಯೆ 2542ಕ್ಕೆ ನೀಡಿದ ಉತ್ತರದಲ್ಲಿ ತಿಳಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಜೂನ್ 13ರಂದು ‘ದಿ ಹಿಂದೂ’ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಹೈದರಾಬಾದ್ನ ಗಾಂಧಿ ಆಸ್ಪತ್ರೆಯ ಶವಾಗಾರದಲ್ಲಿ ಪ್ಯಾರಾಕ್ವಾಟ್ ವಿಷದಿಂದಾದ ಸಾವುಗಳು ಸಾಮಾನ್ಯವಾಗಿದ್ದವು. ಡಾ. ಆತ್ಮುದಿ ವಿವೇಕ್ ಸಾಯಿ ರಾಮ್ ಅವರ ಡಾಕ್ಟರ್ ಆಫ್ ಮೆಡಿಸಿನ್ ಪ್ರಬಂಧ ಅಧ್ಯಯನದಲ್ಲಿ ಈ ವಿವರ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಗಳನ್ನು ಆಧರಿಸಿದ ಅಧ್ಯಯನದ ಪ್ರಕಾರ, ಗಾಂಧಿ ಆಸ್ಪತ್ರೆಯಲ್ಲಿ 2024 ಮತ್ತು 2025ರ ನಡುವೆ ಪ್ಯಾರಾಕ್ವಾಟ್ ವಿಷ ಸೇವನೆಯಿಂದ 217 ಸಾವಿನ ಪ್ರಕರಣಗಳು ದಾಖಲಾಗಿವೆ. ಇವರಲ್ಲಿ ಶೇ 54ರಷ್ಟು ಮಂದಿ ರೈತರು ಮತ್ತು ಶೇ 16ರಷ್ಟು ಮಂದಿ ವಿದ್ಯಾರ್ಥಿಗಳು. ಅಧ್ಯಯನ ನಡೆಸಲಾದ ಒಟ್ಟು 100 ಪ್ರಕರಣಗಳಲ್ಲಿ ಶೇ 94ರಷ್ಟು ಆತ್ಮಹತ್ಯೆ ಮತ್ತು ಶೇ 5ರಷ್ಟು ಆಕಸ್ಮಿಕ ಸಾವುಗಳಾಗಿದ್ದವು.
ಭಾರತದ ಜಮೀನು ಪ್ರವೇಶಿಸುತ್ತಿರುವ ವಿಷ!
ಇಂಡಿಯಾ ಟುಡೆ ಪ್ರಕಟಿಸಿರುವ ವಿವರಗಳ ಪ್ರಕಾರ, ವಿಯೆಟ್ನಾಂ ಯುದ್ಧದ ಸಮಯದಲ್ಲಿ ಅಮೆರಿಕನ್ ವಿಮಾನಗಳು ಕಾಡುಗಳು ಮತ್ತು ಕೃಷಿಭೂಮಿಗಳ ಮೇಲೆ ಲಕ್ಷಾಂತರ ಲೀಟರ್ಗಳಷ್ಟು ಏಜೆಂಟ್ ಆರೆಂಜ್ ಅನ್ನು ಸಿಂಪಡಿಸಿದ್ದವು. ದಟ್ಟ ಕಾಡುಗಳನ್ನು ನಾಶಪಡಿಸಿ, ಕಮ್ಯುನಿಸ್ಟ್ ಹೋರಾಟಗಾರರಿಗೆ ಆಹಾರ ಒದಗಿಸುತ್ತಿದ್ದ ಬೆಳೆಗಳನ್ನು ಹಾಳುಮಾಡುವುದು ಅದರ ಉದ್ದೇಶವಾಗಿತ್ತು. ಈಗ ಅರ್ಧ ಶತಮಾನದ ನಂತರ, ಏಜೆಂಟ್ ಆರೆಂಜ್ನ ಪ್ರಮುಖ ಪದಾರ್ಥಗಳಲ್ಲಿ ಒಂದಾದ 2,4-ಡಿ ಕಳೆನಾಶಕವನ್ನು ಇನ್ನೂ ಭಾರತೀಯ ಜಮೀನುಗಳಲ್ಲಿ ಬಳಸಲಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ ಇದನ್ನು ‘ಬಹುಶಃ ಕ್ಯಾನ್ಸರ್ ಜನಕ’ ಎಂದು ಕರೆದಿದೆ. 2,4-ಡಿ ಜೊತೆಗೆ ಬಳಸಲಾಗುವ ಪ್ಯಾರಾಕ್ವಾಟ್ ಅನ್ನು 70ಕ್ಕೂ ಹೆಚ್ಚು ದೇಶಗಳಲ್ಲಿ ನಿಷೇಧಿಸಲಾಗಿದ್ದರೂ ಭಾರತೀಯ ಹೊಲಗಳಲ್ಲಿ ಬಳಸಲಾಗುತ್ತಿದೆ. ಅದರ ಜೊತೆಗೆ ಬಳಸಲಾಗುತ್ತಿರುವ ಮತ್ತೊಂದು ಕಳೆನಾಶಕ ಗ್ಲೈಫೋಸೇಟ್. ಇದನ್ನು ‘ಸಂಭವನೀಯ ಕ್ಯಾನ್ಸರ್ ಜನಕ’ ಎಂದು ವರ್ಗೀಕರಿಸಲಾಗಿದೆ. ಡಿಎನ್ಎ ಹಾನಿಯ ಆತಂಕದಿಂದ 31 ದೇಶಗಳು ನಿಷೇಧಿಸಿರುವ ಡೈಮಿಥೋಯೇಟ್ ಅನ್ನೂ ಭಾರತದಲ್ಲಿ ಮಾರಲಾಗುತ್ತಿದೆ. ಆಸೆಫೇಟ್ ಎಂಬ ಕೀಟನಾಶಕವು ಜೇನುನೊಣಗಳ ಸಂಖ್ಯೆಯ ಕುಸಿತದ ಬಗ್ಗೆ ವ್ಯಕ್ತವಾಗಿರುವ ಕಳವಳಗಳಿಗೆ ಸಂಬಂಧಿಸಿದೆ.
ಯುರೋಪ್ ಮತ್ತು ಅಮೆರಿಕದಲ್ಲಿ ಅಭಿವೃದ್ಧಿಪಡಿಸಲಾದ ಈ ರೀತಿಯ ರಾಸಾಯನಿಕಗಳನ್ನು ಭಾರತೀಯ ಜಮೀನುಗಳಲ್ಲಿ ಬಳಸಲಾಗುತ್ತಿದೆ. ಅವು ಕೃಷಿಭೂಮಿಗೆ ಮಾತ್ರ ಸೀಮಿತವಾಗುವುದಿಲ್ಲ. ಆಹಾರದ ಮೂಲಕ ಈ ರಾಸಾಯನಿಕಗಳು ನಮ್ಮ ತಟ್ಟೆ ಮತ್ತು ದೇಹವನ್ನು ಪ್ರವೇಶಿಸುತ್ತವೆ. ಇವುಗಳನ್ನು ಏಕೆ ಅನುಮತಿಸಲಾಗುತ್ತಿದೆ ಎಂಬುದು ಸಂಸದರು ಮತ್ತು ಸರ್ಕಾರಗಳಿಗೆ ಅಹಿತಕರ ಪ್ರಶ್ನೆಯಾಗಿದೆ.
ನಿಷೇಧ ಇಂದಿನ ತುರ್ತು ಏಕೆ?
ಯುರೋಪಿಯನ್ ಆಯೋಗ ಮತ್ತು ಯುರೋಪಿಯನ್ ಆಹಾರ ಸುರಕ್ಷತಾ ಪ್ರಾಧಿಕಾರದ ದತ್ತಾಂಶ ವಿಶ್ಲೇಷಣೆಯ ಪ್ರಕಾರ, ಮೇ 2024 ಮತ್ತು ಮೇ 2026ರ ನಡುವೆ ಯುರೋಪ್ನ 27 ಸದಸ್ಯ ರಾಷ್ಟ್ರಗಳು ಕೀಟನಾಶಕಗಳು ಮತ್ತು ಭಾರ ಲೋಹಗಳ ಅಂಶಗಳ ಕಾರಣದಿಂದ 365 ಭಾರತೀಯ ಉತ್ಪನ್ನಗಳನ್ನು ತಿರಸ್ಕರಿಸಿವೆ. ಈ ಮಾಹಿತಿಯು ಜೂನ್ 6ರಂದು ಪ್ರಕಟವಾದ ಡೆಕ್ಕನ್ ಹೆರಾಲ್ಡ್ ವರದಿಯಲ್ಲಿ ಉಲ್ಲೇಖಗೊಂಡಿದೆ. ಇದಾದ ಬಳಿಕ ಈ ಪ್ರಶ್ನೆ ಮತ್ತಷ್ಟು ತುರ್ತು ಸ್ವರೂಪ ಪಡೆದುಕೊಂಡಿದೆ.
ರಫ್ತು ನಿರಾಕರಣೆ ಎದುರಿಸುತ್ತಿರುವ ಭಾರತೀಯ ಕೃಷಿ ಉತ್ಪನ್ನಗಳನ್ನು ಲಕ್ಷಾಂತರ ಭಾರತೀಯರು ಸೇವಿಸುವ ಆಹಾರದ ಸುರಕ್ಷತೆಯ ದೃಷ್ಟಿಯಿಂದಲೂ ಪರಿಶೀಲಿಸಬೇಕಾಗಿದೆ. ಭಾರತದಲ್ಲಿ 2022ರಲ್ಲಿ ಅಂದಾಜು 14.6 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿವೆ. 2025ರ ವೇಳೆಗೆ ಈ ಸಂಖ್ಯೆ 15.7 ಲಕ್ಷಕ್ಕೆ ತಲುಪಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕ್ಯಾನ್ಸರ್ಗೆ ಹಲವು ಕಾರಣಗಳಿದ್ದರೂ, ಸಂಭವನೀಯ ಕ್ಯಾನ್ಸರ್ಕಾರಕ ಎಂದು ವರ್ಗೀಕರಿಸಲಾದ ವಸ್ತುಗಳಿಗೆ ಒಡ್ಡಿಕೊಳ್ಳುವುದನ್ನು ತಡೆಯುವುದು ಮುಖ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.






