ಸಂಸದೆ ಮಹುಆ ಮೊಯಿತ್ರಾ ವಜಾಕ್ಕೆ ಸಂಸತ್ ನೈತಿಕ ಸಮಿತಿ ಶಿಫಾರಸು
► ಅದಾನಿ ಬಗ್ಗೆ ಸಂಸತ್ತಲ್ಲಿ ಪ್ರಶ್ನಿಸಿದ ಮಹುಆ ವಿರುದ್ಧ ಸಿಬಿಐ ತನಿಖೆ ? ► ರಾಹುಲ್ ಗಾಂಧಿ ಬೆನ್ನಿಗೇ ಇನ್ನೊಬ್ಬ ಸಂಸದರ ವಿರುದ್ಧ ಕ್ರಮ

ಮಹುಆ ಮೊಯಿತ್ರಾ
ಅದಾನಿ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ ಬೆನ್ನಿಗೇ ರಾಹುಲ್ ಗಾಂಧಿ ಲೋಕಸಭೆಯಿಂದ ಹೊರಬಿದ್ದರು. ಅವರ ಅಧಿಕೃತ ಮನೆಯಿಂದಲೂ ಹೊರಬಿದ್ದರು. ಈಗ ಅದಾನಿ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದ, ಈಗಲೂ ಕೇಳುತ್ತಲೇ ಇರುವ ಟಿಎಂಸಿ ಸಂಸದೆ ಮಹುಆ ಮೊಯಿತ್ರಾ ಅವರ ಸರದಿ. ಮಹುಆ ಮೊಯಿತ್ರಾರನ್ನು ಲೋಕಸಭೆಯಿಂದ ಹೊರಗಟ್ಟಲು ವೇದಿಕೆ ಸಿದ್ಧವಾಗಿದೆ.
ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಹಣ ಹಾಗು ಉಡುಗೊರೆ ಪಡೆದಿದ್ದಾರೆ ಎಂಬ ಬಿಜೆಪಿ ಸಂಸದರೊಬ್ಬರ ದೂರಿನ ವಿಚಾರಣೆ ನಡೆಸಿದ ಲೋಕಸಭೆಯ ನೈತಿಕ ಸಮಿತಿ ಈಗ ಮಹುಆ ಅವರನ್ನು ಲೋಕಸಭೆಯಿಂದ ವಜಾ ಮಾಡಲು ಶಿಫಾರಸು ಮಾಡಿ ವರದಿ ನೀಡಲಿದೆ ಎಂದು ವರದಿಗಳಿವೆ. ಇವತ್ತು ಸಮಿತಿಯ ಸಭೆ ನಡೆಯಲಿದ್ದು, ಅಲ್ಲಿ ಅದರ ಶಿಫಾರಸು ಅಂಗೀಕೃತವಾಗಿ ಅದನ್ನು ಲೋಕಸಭಾ ಸ್ಪೀಕರ್ ಗೆ ಕಲಿಸಲಾಗುವುದು ಎಂಬ ಮಾಹಿತಿಯಿದೆ.
ಅಷ್ಟೇ ಅಲ್ಲ. ಮಹುಆ ವಿರುದ್ಧ ದೂರು ನೀಡಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರೇ ಮಾಹಿತಿ ನೀಡಿರುವಂತೆ ಮಹುಆ ವಿರುದ್ಧ ಸಿಬಿಐ ತನಿಖೆ ನಡೆಸಲು ಲೋಕಪಾಲ ಸೂಚಿಸಿದೆ. ಅಂದ್ರೆ ಮಹುಆ ಲೋಕಸಭಾ ಸದಸ್ಯತ್ವ ಕಳಕೊಳ್ಳುವ ಜೊತೆ ಜೈಲಿಗೆ ಹೋಗುವ ಸಾಧ್ಯತೆಯೂ ಇದೆ. ಮಹುಆ ಅವರ ಮಾಜಿ ಸಂಗಾತಿ ಜೈ ಅನಂತ್ ದೇಹದ್ರಾಯ್ ಜೊತೆ ಅವರ ಸಾಕು ನಾಯಿಯ ವಿಚಾರದಲ್ಲಿ ಸಾಕಷ್ಟು ಜಗಳ ನಡೆದಿತ್ತು. ಪೊಲೀಸ್ ದೂರುಗಳೂ ದಾಖಲಾಗಿದ್ದವು.
ಅದೇ ದೇಹದ್ರಾಯ್, ಮಹುಆ ವಿರುದ್ಧ ನೀಡಿದ ದೂರಿನಲ್ಲಿದ್ದ ಮಾಹಿತಿಯನ್ನೇ ಉಲ್ಲೇಖಿಸಿ ಮಹುಆ ಸದನದಲ್ಲಿ ಪ್ರಶ್ನೆ ಕೇಳಲು ಹಣ ಪಡೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸ್ಪೀಕರ್ಗೆ ದೂರು ನೀಡಿದ್ದರು. ಮಹುವಾ ಮೊಯಿತ್ರಾ ಅವರು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಹಣ ಮತ್ತು ಉಡುಗೊರೆಗಳನ್ನು ಪಡೆದಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಮತ್ತು ತಕ್ಷಣದಿಂದಲೇ ಅವರನ್ನು ಅಮಾನತಿನಲ್ಲಿಡಬೇಕು ಎಂದು ಅಗ್ರಹಿಸಿದ್ದರು.
ಟಿಎಂಸಿ ಸಂಸದೆ ಮೊಯಿತ್ರಾ ಅವರು ಸದನದಲ್ಲಿ 61 ಪ್ರಶ್ನೆಗಳ ಪೈಕಿ 50 ಪ್ರಶ್ನೆಗಳನ್ನು ಉದ್ಯಮಿಯೊಬ್ಬರ ಕಂಪನಿಯ ವಿಚಾರವಾಗಿಯೇ ಕೇಳಿದ್ದು, ಇದಕ್ಕಾಗಿ ಅವರು ಲಂಚದ ರೂಪದಲ್ಲಿ ಹಣ ಮತ್ತು ಉಡುಗೊರೆಗಳನ್ನು ಪಡೆದುಕೊಂಡಿದ್ದಾರೆ ಎಂದು ದುಬೆ ಆರೋಪಿಸಿದ್ದರು. ಮೊಯಿತ್ರಾ ಅವರು ಉದ್ಯಮಿ ಹಿರಾನಂದಾನಿಗೆ ಲೋಕಸಭೆ ವೆಬ್ಸೈಟ್ನ ತಮ್ಮ ಲಾಗಿನ್ ವಿವರಗಳನ್ನೂ ನೀಡಿದ್ದರು ಎಂಬ ಆರೋಪವನ್ನೂ ದುಬೆ ಮಾಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಗುರಿಯಾಗಿಸಿಕೊಂಡು ಸರ್ಕಾರವನ್ನು ಟೀಕಿಸಲೆಂದೇ ಮಹುಆ ಅವರು ಸದನದಲ್ಲಿ ಪ್ರಶ್ನೆ ಕೇಳಿದ್ದಾರೆ ಎಂದೂ ದುಬೆ ಆರೋಪ ಮಾಡಿದ್ದರು. ಇದೊಂದು ಕ್ರಿಮಿನಲ್ ಪಿತೂರಿಯಾಗಿದ್ದು, ಸಂವಿಧಾನ ನೀಡಿದ ಸವಲತ್ತು ಮತ್ತು ಹಕ್ಕನ್ನು ಅವರು ಉಲ್ಲಂಘಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 120A ಪ್ರಕಾರ ಇದು ಕ್ರಿಮಿನಲ್ ಅಪರಾಧ ಎಂದು ದುಬೆ ಹೇಳಿದ್ದರು.
ತನಗೆ ಮಹುಆ ಲಾಗಿನ್ ವಿವರ ಕೊಟ್ಟಿದ್ದಾರೆ ಎಂದು ಹಿರಾನಂದಾನಿ ಸಂಸತ್ತಿನ ಸಮಿತಿಗೆ ಲಿಖಿತ ರೂಪದಲ್ಲಿ ತಿಳಿಸಿದ್ದಾರೆ. ಮಹುಆ ಕೂಡ ನಾನು ಕೊಟ್ಟಿದ್ದೇನೆ ಆದರೆ ಅದಕ್ಕಾಗಿ ಯಾವುದೇ ಲಂಚ ಪಡೆದಿಲ್ಲ ಎಂದು ಹೇಳಿದ್ದಾರೆ. ದುಬೆ ದೂರಿನ ಬಗ್ಗೆ ವಿಚಾರಣೆಯನ್ನು ಸ್ಪೀಕರ್ ಅವರು ವಿನೋದ್ ಕುಮಾರ್ ಸೋಂಕರ್ ನೇತೃತ್ವದ ಸಂಸತ್ತಿನ ನೈತಿಕ ಸಮಿತಿಗೆ ವಹಿಸಿದ್ದರು.
ಆ ಸಮಿತಿ ನಿಯಮಗಳನ್ನು ಪಾಲಿಸುತ್ತಿಲ್ಲ, ಪಕ್ಷಪಾತ ಮಾಡುತ್ತಿದೆ ಎಂದು ಮಹುಆ ಹಾಗು ನೈತಿಕ ಸಮಿತಿಯ ಸದಸ್ಯರೂ ಆಗಿರುವ ಬಿಎಸ್ಪಿ ಸಂಸದ ದಾನಿಶ್ ಅಲಿ ಆರೋಪಿಸಿದ್ದರು. ಮಹುಆ ಅವರ ವಿಚಾರಣೆ ವೇಳೆ ಅಸಭ್ಯ ಪ್ರಶ್ನೆಗಳನ್ನು ಕೇಳಲಾಗಿದೆ ಎಂಬ ಆರೋಪವೂ ಬಂದಿತ್ತು. ಮಹುಆ ಸಭೆಯಿಂದ ಅರ್ಧದಲ್ಲೇ ಎದ್ದು ಹೋಗಿದ್ದರು.
ಈಗ ಮಹುಆ ಅವರನ್ನು ಲೋಕಸಭೆಯಿಂದಲೇ ವಜಾ ಮಾಡುವ ಶಿಫಾರಸು ಆಗುತ್ತಿದೆ. ಜೊತೆಗೆ ಅವರು ಕಾನೂನು ಕ್ರಮ ಎದುರಿಸುವ ಸನ್ನಿವೇಶವೂ ಸೃಷ್ಟಿಯಾಗುತ್ತಿದೆ. ತನ್ನ ವಿರುದ್ಧ ಸಿಬಿಐ ತನಿಖೆ ನಡೆಯಲಿದೆ ಎಂಬ ವರದಿಗೆ ಮಹುಆ ನೀಡಿರುವ ಪ್ರತಿಕ್ರಿಯೆ : ಸಿಬಿಐ ಮೊದಲು ಅದಾನಿಯ 13,000 ಸಾವಿರ ಕೋಟಿ ಕಲ್ಲಿದ್ದಲು ಹಗರಣದ ಎಫ್ ಐ ಆರ್ ದಾಖಲಿಸಬೇಕು.
ಭಾರತದ ಗೃಹ ಸಚಿವಾಲಯದ ಅನುಮತಿ ಪಡೆದು ಸಂಶಯಾಸ್ಪದ ಚೀನೀ ಹಾಗು ಯುಎಇ ಪ್ರಜೆಗಳಿರುವ ಕಂಪೆನಿ ಹೇಗೆ ಭಾರತದ ಬಂದರು ಹಾಗು ವಿಮಾನ ನಿಲ್ದಾಣಗಳನ್ನು ಖರೀದಿಸಿ ಭಾರತದ ಆಂತರಿಕ ಸುರಕ್ಷತೆಗೆ ಧಕ್ಕೆಯಾಗುತ್ತಿದೆ ಎಂಬ ಆರೋಪದ ತನಿಖೆ ನಡೆಯಬೇಕು. ಇವೆರಡೂ ತನಿಖೆ ಮಾಡಿದ ಬಳಿಕ ಸಿಬಿಐ ನನ್ನ ತನಿಖೆ ಮಾಡಬಹುದು ಎಂದಿದ್ದಾರೆ ಮಹುಆ.
ಮಹುಆ ವಿರುದ್ಧ ಲಂಚ ಸ್ವೀಕರಿಸಿದ ದೂರು ನೀಡಿರುವ ನಿಶಿಕಾಂತ್ ದುಬೆ ಈಗ ಲೋಕಸಭೆಯಲ್ಲಿ ವಿಪಕ್ಷಗಳ ವಿರುದ್ಧ ಆಕ್ರಮಣಕಾರಿ ಶೈಲಿಯಲ್ಲಿ ಆರೋಪ ಮಾಡುವ ಬಿಜೆಪಿಯ ಪ್ರಮುಖ ಸಂಸದರಾಗಿ ಗುರುತಿಸಲ್ಪಟ್ಟಿದ್ದಾರೆ. ಬಿಎಸ್ಪಿ ಸಂಸದ ದಾನಿಶ್ ಅಲಿ ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿಧುರಿ ಸಂಸತ್ತಿನಲ್ಲೇ ಅವಹೇಳನಕಾರಿ ಪದಗಳನ್ನು ಬಳಸಿದಾಗ ಈ ನಿಶಿಕಾಂತ್ ದುಬೆ, ಅವಹೇಳನಕ್ಕೆ ಒಳಗಾದ ದಾನಿಶ್ ಅಲಿ ವಿರುದ್ಧವೇ ಸ್ಪೀಕರ್ ಗೆ ದೂರು ಸಲ್ಲಿಸಿದ್ದರು. ದಾನಿಶ್ ಅಲಿ ಅವರೇ ರಮೇಶ್ ಬಿಧುರಿ ಅವರು ಹಾಗೆ ಮಾತಾಡುವಂತೆ ಪ್ರಚೋದನೆ ನೀಡಿದ್ದರು ಎಂದು ಆರೋಪ ಮಾಡಿದ್ದರು.
ಮಹಿಳಾ ಮೀಸಲಾತಿ ಮಸೂದೆ ಕುರಿತ ಚರ್ಚೆಯನ್ನು ಬಿಜೆಪಿ ಪರವಾಗಿ ಶುರು ಮಾಡಿದ್ದೇ ಈ ನಿಶಿಕಾಂತ್ ದುಬೆ. ಪ್ರಧಾನಿ ಮೋದಿ ಹಾಗು ಗೃಹ ಸಚಿವ ಅಮಿತ್ ಶಾ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಿಶಿಕಾಂತ್ ದುಬೆ ಅದಾನಿ ಸಮೂಹಕ್ಕೂ ಅತ್ಯಂತ ಆಪ್ತರು ಎನ್ನುತ್ತಾರೆ ಪತ್ರಕರ್ತ ಅಭಿಸಾರ ಶರ್ಮ. ಅದಾನಿಗೆ ಏನೇ ಸಮಸ್ಯೆ ಎದುರಾದರೂ ತಕ್ಷಣ ರಕ್ಷಣೆಗೆ ನಿಶಿಕಾಂತ್ ಮುಂದಾಗುತ್ತಾರೆ ಎಂದು ಹೇಳಿದ್ದಾರೆ ಅಭಿಸಾರ್ ಶರ್ಮ.
ಇಂತಹ ಪ್ರಭಾವೀ ಸಂಸದ ನಿಶಿಕಾಂತ್ ದುಬೆಯ ಶೈಕ್ಷಣಿಕ ಅರ್ಹತೆ ಬಗ್ಗೆ ಪ್ರಶ್ನೆ ಎತ್ತಿದ್ದರು ಮಹುಆ. ಅದಾನಿ ವಿರುದ್ಧ ಮಹುಆ ನಿರಂತರ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಾರೆ.
ಅದರ ಬೆನ್ನಿಗೇ ಮಹುಆ ವಿರುದ್ಧ ನಿಶಿಕಾಂತ್ ಲಂಚದ ಆರೋಪ ಹೊರಿಸಿ ದೂರು ನೀಡಿದ್ದಾರೆ. ಅದಾನಿ ವಿರುದ್ಧ ಕೇಳಿ ಬಂದಿರುವ ಅಸಂಖ್ಯ ಗಂಭೀರ ಆರೋಪಗಳ ಹೊರತಾಗಿಯೂ ಈವರೆಗೆ ಈ ಡಿ ಯಾಗಲಿ, ಐ ಟಿ ಯಾಗಲಿ ಅವರ ಮನೆಗೆ ಹೋಗಿಲ್ಲ. ಸಿ ಬಿ ಐ ಅವರನ್ನು ಕರೆದಿಲ್ಲ. ಅವರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ.
ಆದರೆ ಅದಾನಿಯನ್ನು ಪ್ರಶ್ನಿಸಿದ, ಅಕ್ರಮಗಳ ಆರೋಪಗಳ ಬಗ್ಗೆ ತನಿಖೆ ನಡೆಯಲಿ ಎಂದು ಹೇಳಿದ್ದ ಮಹುಆ ವಿರುದ್ಧ ಸಿಬಿಐ ತನಿಖೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಮಹುಆ ಅವರನ್ನು ರಾಜಕೀಯವಾಗಿ ಮುಗಿಸಲು ನಡೆಯುತ್ತಿರುವ ಪ್ರಯತ್ನ ಹೊಸತೇನಲ್ಲ. ಮಹುಆ ವಿರುದ್ಧ ಜನಾಭಿಪ್ರಾಯ ರೂಪಿಸಲು ಬೇರೆ ಬೇರೆ ರೀತಿಯಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಲೇ ಇವೆ.
ಸೋಷಿಯಲ್ ಮೀಡಿಯಾದಲ್ಲಿ ಶಶಿ ತರೂರ್ ಅವರೊಂದಿಗೆ ಮಹುವಾ ರೆಸ್ಟೋರೆಂಟ್ನಲ್ಲಿರುವ, ಅಲ್ಲಿ ಅವರು ಸಿಗರೇಟ್ ಸೇದುತ್ತಿರುವಂತೆ ಮದ್ಯಪಾನ ಮಾಡುತ್ತಿರುವಂತೆ ಇರುವ ಚಿತ್ರಗಳನ್ನು ಹರಿಬಿಡಲಾಗಿದೆ. ಮಹುಆ ಪಾಶ್ಚಾತ್ಯ ಸಂಸ್ಕೃತಿಯವರು, ಅವರು ದೇಶದ ಸಂಸ್ಕೃತಿಯನ್ನು ಗೌರವಿಸುವುದಿಲ್ಲ ಎಂದೆಲ್ಲಾ ಹಣೆಪಟ್ಟಿ ಹಚ್ಚಲು ಪ್ರಯತ್ನಿಸಲಾಗುತ್ತಿದೆ.
ಆದರೆ ಇದೆಲ್ಲದಕ್ಕೂ ಉತ್ತರಿಸಿರುವ ಮಹುಆ , ಸ್ನೇಹಿತರ ಜೊತೆ ತಮಾಷೆಗೆ ಸಿಗರೇಟ್ ಹಿಡಿದಿರುವುದಾಗಿಯೂ, ಮದ್ಯ ಸೇವಿಸುವುದಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಅವರು ಸಿಗರೇಟು ಸೇದಿದ್ದರೂ, ಮದ್ಯ ಸೇವಿಸಿದ್ದರೂ ಅದು ದೇಶದ ಕಾನೂನಿನ ಪ್ರಕಾರ ಅಪರಾಧ ಏನಲ್ಲ. ನನ್ನ ಚಿತ್ರವನ್ನು ಮಾತ್ರ ಕ್ರಾಪ್ ಮಾಡಿ ಬಿಜೆಪಿ ಹರಡಿದೆ. ಉಳಿದವರ ಚಿತ್ರಗಳನ್ನು ಬಿಜೆಪಿ ಹಂಚಿಕೊಂಡಿಲ್ಲ. ಬಂಗಾಲಿ ಮಹಿಳೆಯರು ಬದುಕನ್ನು ಆನಂದಿಸುತ್ತಾರೆ, ಸುಳ್ಳುಗಳನ್ನಲ್ಲ ಎಂದು ಮಹುಆ ಹೇಳಿದ್ದರು. ಅಂತೂ ಸದ್ಯಕ್ಕೆ ಮಹುವಾ ಬಿಜೆಪಿಯ ಆರೋಪಗಳಿಗೆ ತುತ್ತಾಗಿದ್ದಾರೆ, ಒಂದು ದೊಡ್ಡ ಹೋರಾಟವೇ ಅವರೆದುರು ಇದೆ. ಕೇಳಲೇಬೇಕಾದ ಪ್ರಶ್ನೆ ಕೇಳುವ, ಹೇಳಲೇಬೇಕಾದ ಸತ್ಯ ಹೇಳುವ ಈ ದಿಟ್ಟೆ ಸಂಸದೆ ಈಗ ಈ ಸವಾಲನ್ನು ಗೆದ್ದು ಬರಬೇಕಿದೆ.







