‘ನಾನು ಭಾರತೀಯನೆಂಬುದನ್ನು ಇನ್ನೆಷ್ಟು ಬಾರಿ ಸಾಬೀತುಪಡಿಸಬೇಕು?’: ಪಾಸ್ಪೋರ್ಟ್ ವಶಕ್ಕೆ ಪಡೆದ ಬಳಿಕ ಪತ್ರಕರ್ತ ಸಾಮ್ರಾಟ್ ಚೌಧುರಿ ಪ್ರಶ್ನೆ

ಹೊಸದಿಲ್ಲಿ, ಜು. 3: ಈಶಾನ್ಯ ಭಾರತದ ರಾಜಕೀಯ, ಸಾಮಾಜಿಕ ಇತಿಹಾಸ ಮತ್ತು ಗುರುತಿನ ಪ್ರಶ್ನೆಗಳ ಕುರಿತು ವ್ಯಾಪಕವಾಗಿ ಬರೆದಿರುವ ಲೇಖಕ, ಪತ್ರಕರ್ತ ಹಾಗೂ ಸಂಪಾದಕ ಸಾಮ್ರಾಟ್ ಚೌಧುರಿ ಅವರು, ತಮ್ಮ ಭಾರತೀಯ ಪೌರತ್ವವನ್ನು ಸಾಬೀತುಪಡಿಸುವಂತೆ ಅಧಿಕಾರಿಗಳು ಕೇಳಿರುವುದಾಗಿ, The Probe ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
1993ರಿಂದ ಭಾರತೀಯ ಪಾಸ್ಪೋರ್ಟ್ ಹೊಂದಿರುವ ಸಾಮ್ರಾಟ್ ಚೌಧುರಿ ಅವರಿಗೆ, ‘ಭಾರತೀಯ ಪೌರತ್ವವನ್ನು ದೃಢೀಕರಿಸಲು ಸಾಧ್ಯವಾಗಿಲ್ಲ’ ಎಂದು ಉಲ್ಲೇಖಿಸಿ ಕೋಲ್ಕತ್ತಾದ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ನೋಟಿಸ್ ನೀಡಿದ್ದು, ಬಳಿಕ ಅವರ ಪಾಸ್ಪೋರ್ಟ್ ಅನ್ನು ವಶಪಡಿಸಿಕೊಂಡಿದೆ ಎಂದು ಬಹಿರಂಗಪಡಿಸಿದ್ದಾರೆ.
ಶಿಲ್ಲಾಂಗ್ನಲ್ಲಿ ಜನಿಸಿದ ಸಾಮ್ರಾಟ್ ಚೌಧುರಿ ಅವರು ಪತ್ರಕರ್ತರಾಗಿ, ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ದಿಲ್ಲಿ, ಮುಂಬೈ ಮತ್ತು ಬೆಂಗಳೂರಿನ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು, ಈಶಾನ್ಯ ಭಾರತದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸದ ಕುರಿತು ಹಲವು ಕೃತಿಗಳನ್ನು ರಚಿಸಿದ್ದು, Insiders and Outsiders: Belonging and Unbelonging in North-East India ಹಾಗೂ But I Do Belong: Fighting Exclusion in North-East India ಕೃತಿಗಳ ಸಹ-ಸಂಪಾದಕರಾಗಿದ್ದಾರೆ.
2022ರಲ್ಲಿ ತತ್ಕಾಲ್ ಯೋಜನೆಯಡಿ ಪಡೆದಿದ್ದ ಪಾಸ್ಪೋರ್ಟ್ಗೆ ಸಂಬಂಧಿಸಿ ‘ಪ್ರತಿಕೂಲ ಪೊಲೀಸ್ ವರದಿ’ ಬಂದಿರುವುದಾಗಿ ಸಾಮ್ರಾಟ್ ಚೌಧುರಿ ಅವರಿಗೆ ಕೋಲ್ಕತ್ತಾದ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ನೋಟಿಸ್ ನೀಡಿತ್ತು. ವರದಿಯಲ್ಲಿ ಅವರ ಪೌರತ್ವಕ್ಕೆ ಸಂಬಂಧಿಸಿದ ಆಕ್ಷೇಪವನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, 21 ದಿನಗಳೊಳಗೆ ಪಾಸ್ಪೋರ್ಟ್ ಕಚೇರಿಗೆ ಹಾಜರಾಗಿ ವಿವರಣೆ ನೀಡುವಂತೆ ಸಾಮ್ರಾಟ್ ಚೌಧುರಿ ಅವರಿಗೆ ಸೂಚಿಸಲಾಗಿತ್ತು. ಅವರು ಪಾಸ್ಪೋರ್ಟ್ ಕಚೇರಿಗೆ ಹಾಜರಾದಾಗ, ಅಧಿಕಾರಿಗಳು ಅವರ ಪಾಸ್ಪೋರ್ಟ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಾಮ್ರಾಟ್ ಚೌಧುರಿ, ‘ನನ್ನ ಪೌರತ್ವವನ್ನು ಯಾವ ಕಾರಣಕ್ಕೆ ಪ್ರಶ್ನಿಸಲಾಗಿದೆ ಎಂಬುದನ್ನು ಅಧಿಕಾರಿಗಳು ತಿಳಿಸಲಿಲ್ಲ. ನನ್ನ ದಾಖಲೆಗಳಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರೂ, ಪ್ರಕರಣವನ್ನು ಮರುಪರಿಶೀಲನೆಗಾಗಿ ಮತ್ತೆ ಪೊಲೀಸರಿಗೆ ಕಳುಹಿಸಲಾಗಿದೆ’ ಎಂದು ಹೇಳಿದ್ದಾರೆ.
ಸಾಮ್ರಾಟ್ ಚೌಧುರಿ ಅವರು 1993ರಿಂದ ಭಾರತೀಯ ಪಾಸ್ಪೋರ್ಟ್ ಹೊಂದಿದ್ದಾರೆ. ಈ ಅವಧಿಯಲ್ಲಿ ಶಿಲ್ಲಾಂಗ್, ದಿಲ್ಲಿ ಮತ್ತು ಬೆಂಗಳೂರಿನಲ್ಲಿ ಹಲವು ಬಾರಿ ಪಾಸ್ಪೋರ್ಟ್ ನವೀಕರಣ ಮತ್ತು ಪೊಲೀಸ್ ಪರಿಶೀಲನೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ಆದರೆ ಈ ಬಾರಿ ತಮ್ಮ ದಾಖಲೆಗಳ ಜೊತೆಗೆ ತಂದೆ-ತಾಯಿಯ ಪಾಸ್ಪೋರ್ಟ್ ಪ್ರತಿಗಳು, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ವಿದ್ಯುತ್ ಬಿಲ್ ಹಾಗೂ 10ನೇ ತರಗತಿ ಪ್ರಮಾಣಪತ್ರ ಸೇರಿದಂತೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವಂತೆ ಕೇಳಲಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತದ ಪೌರತ್ವ ಕಾನೂನಿನ ಪ್ರಕಾರ, 1987ಕ್ಕೂ ಮೊದಲು ಭಾರತದಲ್ಲಿ ಜನಿಸಿದವರು ಹುಟ್ಟಿನಿಂದಲೇ ಭಾರತೀಯ ನಾಗರಿಕರಾಗುತ್ತಾರೆ. ತಾವು 1987ಕ್ಕೂ ಮೊದಲು ಭಾರತದಲ್ಲಿ ಜನಿಸಿರುವುದರಿಂದ, ಹೆಚ್ಚುವರಿ ಪೌರತ್ವ ದಾಖಲೆಗಳನ್ನು ಕೇಳುವ ಅಗತ್ಯವಿಲ್ಲ. ಆದರೂ, ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ ಎಂದು ಸಾಮ್ರಾಟ್ ಚೌಧುರಿ ಉಲ್ಲೇಖಿಸಿದ್ದಾರೆ.
ತಮ್ಮ ವಿರುದ್ಧ ಉದ್ದೇಶಪೂರ್ವಕ ಕ್ರಮ ಕೈಗೊಳ್ಳಲಾಗಿದೆ ಎಂದು ತಾವು ನಂಬುವುದಿಲ್ಲ ಎಂದಿರುವ ಅವರು, ಇದು ಅಧಿಕಾರಶಾಹಿ ವ್ಯವಸ್ಥೆಯ ಸಮಸ್ಯೆಯಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮಂತೆಯೇ ಅನೇಕರು ದಾಖಲೆ ಪರಿಶೀಲನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಗಮನಿಸಿರುವುದಾಗಿ ಅವರು ಹೇಳಿದ್ದಾರೆ.
ತಾವು ಹಿಂದೂ ಬಂಗಾಳಿ ಸಮುದಾಯಕ್ಕೆ ಸೇರಿದವರಾಗಿದ್ದು, ಪ್ರಸ್ತುತ ಪಶ್ಚಿಮ ಬಂಗಾಳದಲ್ಲೇ ವಾಸಿಸುತ್ತಿದ್ದರೂ ತಮ್ಮ ಪೌರತ್ವವನ್ನು ಪ್ರಶ್ನಿಸಿರುವುದು ಅಚ್ಚರಿಯ ಸಂಗತಿ ಎಂದು ಸಾಮ್ರಾಟ್ ಚೌಧುರಿ ಹೇಳಿದ್ದಾರೆ. ‘ಒಬ್ಬ ಬಂಗಾಳಿ ವ್ಯಕ್ತಿ ಪಶ್ಚಿಮ ಬಂಗಾಳದಲ್ಲಿಯೂ ಸೇರದವನು ಎಂದಾದರೆ, ನಾನು ಎಲ್ಲಿಗೆ ಹೋಗಬೇಕು?’ ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
ಈ ಬೆಳವಣಿಗೆಗೆ ತಾವು ಬರೆದ ಲೇಖನಗಳು ಅಥವಾ ವ್ಯಕ್ತಪಡಿಸಿದ ಅಭಿಪ್ರಾಯಗಳು ಕಾರಣವಾಗಿರಬಹುದೇ ಎಂಬ ಪ್ರಶ್ನೆಯೂ ತಮ್ಮ ಮನಸ್ಸಿನಲ್ಲಿ ಮೂಡಿತ್ತು ಎಂದು ಸಾಮ್ರಾಟ್ ತಿಳಿಸಿದ್ದಾರೆ. ಆದರೆ, ಯಾವುದೇ ನಾಗರಿಕನ ಅಭಿಪ್ರಾಯ ಅಥವಾ ಬರಹವು ಅವರ ಪೌರತ್ವವನ್ನು ಪ್ರಶ್ನಿಸಲು ಆಧಾರವಾಗಬಾರದು ಎಂದು ಅವರು ಹೇಳಿದ್ದಾರೆ.
ಚುನಾವಣೆಗಳಲ್ಲಿ ಮತ ಚಲಾಯಿಸುವ ನಾಗರಿಕರ ಪೌರತ್ವವನ್ನೇ ನಂತರ ಪ್ರಶ್ನಿಸುವ ಪರಿಸ್ಥಿತಿ ನಿರ್ಮಾಣವಾದರೆ, ಚುನಾವಣಾ ಪ್ರಕ್ರಿಯೆಯ ಉದ್ದೇಶವೇನು ಎಂಬ ಪ್ರಶ್ನೆಯನ್ನು ಸಾಮ್ರಾಟ್ ಚೌಧುರಿ ಎತ್ತಿದ್ದಾರೆ. ಪಾಸ್ಪೋರ್ಟ್ ಕಚೇರಿಗಳಲ್ಲಿನ ವಾತಾವರಣವು ಗೊಂದಲ ಮತ್ತು ಆತಂಕದಿಂದ ಕೂಡಿದೆ. ಅಲ್ಲಿ ಹಲವರು ಭಾವನಾತ್ಮಕವಾಗಿ ಕುಗ್ಗಿರುವುದನ್ನು ಗಮನಿಸಿರುವುದಾಗಿ ಹೇಳಿದ ಅವರು, ನಾಗರಿಕರಿಗೆ ಹೆಚ್ಚು ಗೌರವಯುತ ಮತ್ತು ಸ್ನೇಹಪರ ಸೇವಾ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅಸ್ಸಾಂನಲ್ಲಿ ನಡೆದ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಪ್ರಕ್ರಿಯೆಯನ್ನು ಉಲ್ಲೇಖಿಸಿದ ಸಾಮ್ರಾಟ್ ಚೌಧುರಿ, ದಾಖಲೆ ಆಧಾರಿತ ಪೌರತ್ವ ಪರಿಶೀಲನಾ ಪ್ರಕ್ರಿಯೆಗಳು ಅನಿಶ್ಚಿತತೆ ಮತ್ತು ಆತಂಕವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಲವು ವರ್ಷಗಳ ಪರಿಶೀಲನೆಯ ನಂತರವೂ ಅಸ್ಸಾಂನಲ್ಲಿ ಲಕ್ಷಾಂತರ ಜನರು NRC ಪಟ್ಟಿಯಿಂದ ಹೊರಗುಳಿದಿರುವುದನ್ನು ಅವರು ಉಲ್ಲೇಖಿಸಿದ್ದಾರೆ.
ಸಂವಿಧಾನ ಮತ್ತು ಕಾನೂನುಗಳ ಪ್ರಕಾರ ಭಾರತೀಯರು ಹುಟ್ಟಿನಿಂದಲೇ ನಾಗರಿಕರಾಗಿದ್ದರೂ, ಯಾವುದೇ ಸ್ಪಷ್ಟ ಕಾರಣವಿಲ್ಲದೆ ಪೌರತ್ವವನ್ನು ಪ್ರಶ್ನಿಸಿ ಅದರ ಪುರಾವೆಯ ಹೊಣೆಯನ್ನು ನಾಗರಿಕರ ಮೇಲೆಯೇ ಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಪಾಸ್ಪೋರ್ಟ್ ಮರಳಿ ಸಿಗುವ ವಿಶ್ವಾಸ ವ್ಯಕ್ತಪಡಿಸಿರುವ ಸಾಮ್ರಾಟ್, ಈ ಪ್ರಶ್ನೆ ತಮ್ಮೊಬ್ಬರದ್ದಲ್ಲ, ತಮ್ಮಂತಹ ಲಕ್ಷಾಂತರ ಸಾಮಾನ್ಯ ನಾಗರಿಕರ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ. ದೇಶದ ನಾಗರಿಕರು ತಾವು ಇಲ್ಲಿಗೆ ಸೇರಿದವರು ಎಂಬುದನ್ನು ಇನ್ನೆಷ್ಟು ಬಾರಿ ಸಾಬೀತುಪಡಿಸಬೇಕಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.






