ಪಾಸ್ಪೋರ್ಟ್ ಪೌರತ್ವದ ಪುರಾವೆಯಲ್ಲ: ಕೇಂದ್ರ ಸರಕಾರ ; ಪೌರತ್ವ ಸಾಬೀತಿಗೆ ಯಾವ ದಾಖಲೆ?

ಸಾಂದರ್ಭಿಕ ಚಿತ್ರ | Photo Credit : magnific.com
ಹೊಸದಿಲ್ಲಿ: ಭಾರತೀಯ ಪಾಸ್ಪೋರ್ಟ್ ಪೌರತ್ವದ ನಿರ್ಣಾಯಕ ಪುರಾವೆಯಲ್ಲ ಎಂದು ಕೇಂದ್ರ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಈ ಹೇಳಿಕೆ ಹೊಸದೇನಲ್ಲ; ಹಲವು ದಶಕಗಳಿಂದಲೂ ಸರ್ಕಾರ ಹಾಗೂ ನ್ಯಾಯಾಲಯಗಳು ಇದೇ ಕಾನೂನು ನಿಲುವನ್ನು ಅನುಸರಿಸುತ್ತಿದ್ದು, ಪೌರತ್ವವನ್ನು ಸಾಬೀತುಪಡಿಸಲು ಯಾವ ದಾಖಲೆಗಳು ಮಾನ್ಯ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಕಳೆದ ಕೆಲವು ತಿಂಗಳುಗಳಿಂದ ಭಾರತೀಯ ಪೌರತ್ವದ ಪ್ರಶ್ನೆ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಪಾಸ್ಪೋರ್ಟ್ ಕುರಿತು ಕೇಂದ್ರ ಸರ್ಕಾರ ತನ್ನ ಹಳೆಯ ನಿಲುವನ್ನೇ ಪುನರುಚ್ಚರಿಸಿದೆ. ಅತ್ಯಂತ ಕಟ್ಟುನಿಟ್ಟಿನ ಪರಿಶೀಲನೆಯ ಬಳಿಕ ನೀಡಲಾಗುವ ದಾಖಲೆಗಳಲ್ಲಿ ಪಾಸ್ಪೋರ್ಟ್ ಒಂದಾಗಿದ್ದರೂ, ಅದು ಪೌರತ್ವದ ಅಂತಿಮ ಪುರಾವೆಯಲ್ಲ ಎಂದು ಸರ್ಕಾರ ಹೇಳಿದೆ. ಕಾನೂನು ದೃಷ್ಟಿಯಿಂದ ಇದು ಹೊಸ ಬೆಳವಣಿಗೆಯಲ್ಲದಿದ್ದರೂ, ಸಾಮಾನ್ಯ ಜನರಲ್ಲಿ ಗೊಂದಲ ಮೂಡಿಸಿದೆ.
ವರ್ಷಗಳಿಂದಲೂ ನ್ಯಾಯಾಲಯಗಳು ಮತ್ತು ಸರ್ಕಾರ, ಪಾಸ್ಪೋರ್ಟ್ ಕೇವಲ ಪ್ರಯಾಣದ ದಾಖಲೆಯಾಗಿದ್ದು, ವಿದೇಶದಲ್ಲಿ ವ್ಯಕ್ತಿಯ ರಾಷ್ಟ್ರೀಯತೆಯನ್ನು ಗುರುತಿಸಲು ಬಳಸುವ ದಾಖಲೆ ಮಾತ್ರ ಎಂದು ಸ್ಪಷ್ಟಪಡಿಸಿವೆ. ವಿದೇಶಾಂಗ ಸಚಿವಾಲಯದ ಪಾಸ್ಪೋರ್ಟ್ ಕೈಪಿಡಿಯಲ್ಲೂ, "ಪಾಸ್ಪೋರ್ಟ್ ಎನ್ನುವುದು ಮುಖ್ಯವಾಗಿ ಸರ್ಕಾರ ತನ್ನ ಪ್ರಜೆಗಳಿಗೆ ನೀಡುವ ಗುರುತು ಮತ್ತು ಪ್ರಯಾಣದ ದಾಖಲೆ" ಎಂದು ಉಲ್ಲೇಖಿಸಲಾಗಿದೆ.
ಪಾಸ್ಪೋರ್ಟ್ ಪೌರತ್ವದ ಪುರಾವೆಯಲ್ಲ ಏಕೆ?
ಪಾಸ್ಪೋರ್ಟ್ ಅನ್ನು ಭಾರತೀಯ ನಾಗರಿಕರಿಗೆ ಮಾತ್ರ ನೀಡಲಾಗುತ್ತದೆ ಎಂಬ ಕಾರಣಕ್ಕೆ ಅದು ಪೌರತ್ವದ ನಿರ್ಣಾಯಕ ಪುರಾವೆಯಾಗಬೇಕು ಎಂಬ ಅಭಿಪ್ರಾಯ ಅನೇಕರಲ್ಲಿದೆ. ಆದರೆ ಪಾಸ್ಪೋರ್ಟ್ ಕಾಯ್ದೆಯಲ್ಲಿನ ಕೆಲವು ವಿಧಿಗಳು ಈ ವಿಚಾರವನ್ನು ವಿಭಿನ್ನವಾಗಿ ವಿವರಿಸುತ್ತವೆ.
ಪಾಸ್ಪೋರ್ಟ್ ಕಾಯ್ದೆ, 1967ರ ಸೆಕ್ಷನ್ 6(2)(ಎ) ಪ್ರಕಾರ, ಅರ್ಜಿದಾರರು ಭಾರತದ ನಾಗರಿಕರಲ್ಲದಿದ್ದರೆ ಅವರಿಗೆ ಪಾಸ್ಪೋರ್ಟ್ ನೀಡುವುದನ್ನು ನಿರಾಕರಿಸಬೇಕು.
ಆದರೆ ಅದೇ ಕಾಯ್ದೆಯ ಸೆಕ್ಷನ್ 20ರ ಅಡಿಯಲ್ಲಿ, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಸರ್ಕಾರವು ನಾಗರಿಕರಲ್ಲದವರಿಗೂ ಪಾಸ್ಪೋರ್ಟ್ ನೀಡುವ ಅಧಿಕಾರ ಹೊಂದಿದೆ.
ಇದಲ್ಲದೆ, ಪಾಸ್ಪೋರ್ಟ್ ವ್ಯಕ್ತಿಯ ಖಾಸಗಿ ಆಸ್ತಿಯಲ್ಲ. ಪಾಸ್ಪೋರ್ಟ್ನ ಹಿಂಭಾಗದಲ್ಲಿರುವ ಸೂಚನೆಯ ಪ್ರಕಾರ, ಅದು ಭಾರತ ಸರ್ಕಾರದ ಆಸ್ತಿಯಾಗಿದ್ದು, ಸರ್ಕಾರ ಸೂಚಿಸಿದಾಗ ಅದನ್ನು ಹಿಂದಿರುಗಿಸಬೇಕು.
ಹೀಗಾಗಿ, ಪಾಸ್ಪೋರ್ಟ್ ಹೊಂದಿರುವುದರಿಂದ ಮಾತ್ರ ವ್ಯಕ್ತಿಯ ಪೌರತ್ವ ಕಾನೂನುಬದ್ಧವಾಗಿ ಸಾಬೀತಾಗುವುದಿಲ್ಲ ಎಂಬುದು ಹಲವು ವರ್ಷಗಳಿಂದಲೂ ಜಾರಿಯಲ್ಲಿರುವ ಕಾನೂನು ನಿಲುವಾಗಿದೆ. ನ್ಯಾಯಾಲಯಗಳೂ ಇದನ್ನು ಪುನರುಚ್ಚರಿಸಿವೆ. ಆದರೆ ಪೌರತ್ವವನ್ನು ಅಂತಿಮವಾಗಿ ಯಾವ ದಾಖಲೆ ಸಾಬೀತುಪಡಿಸುತ್ತದೆ ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಲಭ್ಯವಾಗಿಲ್ಲ.
ನ್ಯಾಯಾಲಯಗಳ ಅಭಿಪ್ರಾಯವೇನು?
2013ರಲ್ಲಿ ಬಾಂಬೆ ಹೈಕೋರ್ಟ್, ಜುಲೈ 1, 1987ರ ನಂತರ ಜನಿಸಿದ ವ್ಯಕ್ತಿಗೆ ಜನನ ಪ್ರಮಾಣಪತ್ರ, ಪಾಸ್ಪೋರ್ಟ್ ಅಥವಾ ಆಧಾರ್ ಕಾರ್ಡ್ ಮಾತ್ರದಿಂದ ಭಾರತೀಯ ಪೌರತ್ವ ಸಾಬೀತಾಗುವುದಿಲ್ಲ ಎಂದು ಹೇಳಿತ್ತು.
ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತ ಪ್ರವೇಶಿಸಿದರೆಂಬ ಆರೋಪ ಎದುರಿಸುತ್ತಿದ್ದ ನಾಲ್ವರು ಆರೋಪಿಗಳು ತಮ್ಮ ಪಾಸ್ಪೋರ್ಟ್, ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣಪತ್ರಗಳನ್ನು ಸಲ್ಲಿಸಿ ತಾವು ಭಾರತೀಯ ಪ್ರಜೆಗಳು ಎಂದು ವಾದಿಸಿದ್ದರು. ಆದರೆ ನ್ಯಾಯಾಲಯ ಆ ದಾಖಲೆಗಳನ್ನು ಪೌರತ್ವದ ಅಂತಿಮ ಪುರಾವೆಯಾಗಿ ಪರಿಗಣಿಸಲಿಲ್ಲ.
ಈ ವೇಳೆ ಹೆಚ್ಚುವರಿ ಸಾರ್ವಜನಿಕ ಅಭಿಯೋಜಕರು, "ಜನನ ಪ್ರಮಾಣಪತ್ರವು ವ್ಯಕ್ತಿ ಭಾರತದಲ್ಲಿ ಜನಿಸಿದ್ದಾನೆ ಎಂಬುದನ್ನು ತೋರಿಸಬಹುದು. ಇತರ ದಾಖಲೆಗಳು ಆತ ಭಾರತದಲ್ಲಿ ವಾಸಿಸುತ್ತಿದ್ದಾನೆ ಎಂಬುದನ್ನು ಸೂಚಿಸಬಹುದು. ಆದರೆ ಇವುಗಳನ್ನು ಕಾನೂನು ಪೌರತ್ವದ ಪುರಾವೆಯಾಗಿ ಗುರುತಿಸುವುದಿಲ್ಲ" ಎಂದು ವಾದಿಸಿದ್ದರು.
ಇತ್ತೀಚೆಗೆ ಬಾಬು ಅಬ್ದುಲ್ ಸರ್ದಾರ್ Vs ಮಹಾರಾಷ್ಟ್ರ ರಾಜ್ಯ ಪ್ರಕರಣದಲ್ಲಿಯೂ ಬಾಂಬೆ ಹೈಕೋರ್ಟ್, ಪೌರತ್ವ ಕುರಿತ ಪ್ರಶ್ನೆಗಳನ್ನು 1955ರ ಪೌರತ್ವ ಕಾಯ್ದೆಯ ಅಡಿಯಲ್ಲಿ ಪರಿಶೀಲಿಸಬೇಕು ಎಂದು ಹೇಳಿದೆ. ಆಧಾರ್, ಪ್ಯಾನ್, ಮತದಾರರ ಗುರುತಿನ ಚೀಟಿ ಸೇರಿದಂತೆ ಗುರುತಿನ ದಾಖಲೆಗಳನ್ನು ಮಾತ್ರ ಆಧರಿಸಿ ಪೌರತ್ವ ನಿರ್ಧರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
"ಭಾರತದಲ್ಲಿ ರಾಷ್ಟ್ರೀಯತೆ ಮತ್ತು ಪೌರತ್ವಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ನಿರ್ಧರಿಸುವ ಪ್ರಮುಖ ಹಾಗೂ ನಿಯಂತ್ರಣ ಕಾನೂನು 1955ರ ಪೌರತ್ವ ಕಾಯ್ದೆಯಾಗಿದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಜೂನ್ 25ರಂದು ನಡೆದ ಪಾಸ್ಪೋರ್ಟ್ ಸೇವಾ ದಿವಸ್ ಕಾರ್ಯಕ್ರಮದಲ್ಲೂ ಕೇಂದ್ರ ಸರ್ಕಾರ ಇದೇ ಕಾನೂನು ನಿಲುವನ್ನು ಪುನರುಚ್ಚರಿಸಿದೆ. ಆದರೆ ಈ ಹೇಳಿಕೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆ ಆರಂಭವಾಗಿದೆ.
ಪೌರತ್ವದ ಪುರಾವೆ ಯಾವುದು?
ಪಾಸ್ಪೋರ್ಟ್ ಕೂಡ ಪೌರತ್ವದ ನಿರ್ಣಾಯಕ ಪುರಾವೆಯಲ್ಲದಿದ್ದರೆ, ಯಾವ ದಾಖಲೆ ಪೌರತ್ವವನ್ನು ಸಾಬೀತುಪಡಿಸುತ್ತದೆ ಎಂಬ ಪ್ರಶ್ನೆ ಎದುರಾಗುತ್ತದೆ.
ಅಮೆರಿಕದಲ್ಲಿ ಪಾಸ್ಪೋರ್ಟ್ ಪೌರತ್ವದ ನಿರ್ಣಾಯಕ ದಾಖಲೆ. ಅದು ಜನನ ಪ್ರಮಾಣಪತ್ರದಷ್ಟೇ ಮಾನ್ಯತೆಯನ್ನು ಹೊಂದಿದೆ. ಆದರೆ ಭಾರತದಲ್ಲಿ ಅಂತಹ ಸಾರ್ವತ್ರಿಕ ರಾಷ್ಟ್ರೀಯ ಪೌರತ್ವ ಗುರುತಿನ ಚೀಟಿ ವ್ಯವಸ್ಥೆ ಇಲ್ಲ.
ಮತದಾರರ ಗುರುತಿನ ಚೀಟಿ ವ್ಯಕ್ತಿಯು ಮತದಾರನಾಗಿ ನೋಂದಾಯಿಸಿಕೊಂಡಿದ್ದಾನೆ ಎಂಬುದನ್ನು ಮಾತ್ರ ಸೂಚಿಸುತ್ತದೆ. ಪ್ಯಾನ್ ಕಾರ್ಡ್ ತೆರಿಗೆ ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆ. ಪಡಿತರ ಚೀಟಿ ಕಲ್ಯಾಣ ಯೋಜನೆಗಳ ಫಲಾನುಭವಿಯಾಗಿರುವುದನ್ನು ತೋರಿಸುತ್ತದೆ. ಇವುಗಳಲ್ಲಿ ಯಾವುದೂ ಸ್ವತಂತ್ರವಾಗಿ ಪೌರತ್ವದ ಅಂತಿಮ ಪುರಾವೆಯಾಗುವುದಿಲ್ಲ.
ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದ ವಿಚಾರಣೆಯ ವೇಳೆ ಭಾರತೀಯ ಚುನಾವಣಾ ಆಯೋಗ, ಆಧಾರ್ ಕೇವಲ ವ್ಯಕ್ತಿಯ ಗುರುತನ್ನು ದೃಢೀಕರಿಸುತ್ತದೆ; ಪೌರತ್ವವನ್ನು ಅಲ್ಲ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು. ಭಾರತೀಯ ನಾಗರಿಕರಲ್ಲದ ನಿವಾಸಿಗಳಿಗೂ ಆಧಾರ್ ನೀಡಬಹುದು ಎಂದು ಆಯೋಗ ವಾದಿಸಿತ್ತು. ಸುಪ್ರೀಂ ಕೋರ್ಟ್ ಈ ವಾದವನ್ನು ಒಪ್ಪಿಕೊಂಡು, SIR ಪ್ರಕ್ರಿಯೆಯಲ್ಲಿ ಆಧಾರ್ ಅನ್ನು ಗುರುತಿನ ದಾಖಲೆಯಾಗಿ ಮಾತ್ರ ಪರಿಗಣಿಸಲು ಅವಕಾಶ ನೀಡಿತು.
ಕಳೆದ ವರ್ಷ ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಸಚಿವಾಲಯವೂ, ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಬಳಸಬಹುದಾದ ನಿರ್ದಿಷ್ಟ ದಾಖಲೆಗಳ ಪಟ್ಟಿಯನ್ನು ನೀಡಲಿಲ್ಲ. ಪೌರತ್ವಕ್ಕೆ ಸಂಬಂಧಿಸಿದ ವಿಷಯಗಳನ್ನು 1955ರ ಪೌರತ್ವ ಕಾಯ್ದೆಯೇ ನಿಯಂತ್ರಿಸುತ್ತದೆ ಎಂದು ತಿಳಿಸಿತು.
2020ರಲ್ಲಿಯೂ ಆಧಾರ್, ಪಾಸ್ಪೋರ್ಟ್, ಮತದಾರರ ಗುರುತಿನ ಚೀಟಿ ಅಥವಾ ಜನನ ಪ್ರಮಾಣಪತ್ರವನ್ನು ಪೌರತ್ವದ ಮಾನ್ಯ ದಾಖಲೆಗಳೆಂದು ಪರಿಗಣಿಸಬಹುದೇ ಎಂಬ ಪ್ರಶ್ನೆಗೆ ಸರ್ಕಾರ ಸ್ಪಷ್ಟ ಉತ್ತರ ನೀಡಿರಲಿಲ್ಲ.
ಪೌರತ್ವ ಕಾಯ್ದೆ ಏನು ಹೇಳುತ್ತದೆ?
1955ರ ಪೌರತ್ವ ಕಾಯ್ದೆಯ ಪ್ರಕಾರ, 1950ರ ಜನವರಿ 26ರಿಂದ 1987ರ ಜುಲೈ 1ರೊಳಗೆ ಭಾರತದಲ್ಲಿ ಜನಿಸಿದವರು ಹುಟ್ಟಿನಿಂದಲೇ ಭಾರತೀಯ ನಾಗರಿಕರಾಗುತ್ತಾರೆ.
1987ರ ಜುಲೈ 1ರ ನಂತರ ಜನಿಸಿದವರಲ್ಲಿ, ಪೋಷಕರಲ್ಲಿ ಒಬ್ಬರು ಭಾರತೀಯ ನಾಗರಿಕರಾಗಿದ್ದರೆ ಅವರು ಪೌರತ್ವ ಪಡೆಯುತ್ತಾರೆ.
2004ರ ಡಿಸೆಂಬರ್ 3 ಅಥವಾ ಅದರ ನಂತರ ಜನಿಸಿದವರಲ್ಲಿ, ಇಬ್ಬರೂ ಪೋಷಕರು ಭಾರತೀಯ ನಾಗರಿಕರಾಗಿರಬೇಕು ಅಥವಾ ಒಬ್ಬರು ಭಾರತೀಯ ನಾಗರಿಕರಾಗಿದ್ದು, ಮತ್ತೊಬ್ಬರು ಜನನದ ಸಮಯದಲ್ಲಿ ಅಕ್ರಮ ವಲಸಿಗರಾಗಿರಬಾರದು. ಆಗ ಮಾತ್ರ ಹುಟ್ಟಿನಿಂದಲೇ ಪೌರತ್ವ ಲಭಿಸುತ್ತದೆ.
ಆದರೆ ಈ ಕಾಯ್ದೆಯಲ್ಲಿಯೂ ಪೌರತ್ವವನ್ನು ಸಾಬೀತುಪಡಿಸುವ ಒಂದೇ ಒಂದು ನಿರ್ದಿಷ್ಟ ದಾಖಲೆಯನ್ನು ಸೂಚಿಸಲಾಗಿಲ್ಲ.
ಪರಿಹಾರ ಏನು?
ಇಲ್ಲಿಯವರೆಗೆ ನ್ಯಾಯಾಲಯಗಳು ಒಂದೇ ದಾಖಲೆಯನ್ನು ಆಧಾರವಾಗಿಸದೆ, ಜನನ ಪ್ರಮಾಣಪತ್ರ, ಪಾಸ್ಪೋರ್ಟ್, ನೋಂದಣಿ ಅಥವಾ ನೈಸರ್ಗಿಕೀಕರಣದ ಮೂಲಕ ನೀಡಲಾದ ಪೌರತ್ವ ಪ್ರಮಾಣಪತ್ರ, ಪೋಷಕರ ದಾಖಲೆಗಳು, 10ನೇ ತರಗತಿಯ ಅಂಕಪಟ್ಟಿ ಸೇರಿದಂತೆ ವಂಶಾವಳಿ ಮತ್ತು ನಿವಾಸವನ್ನು ದೃಢೀಕರಿಸುವ ವಿವಿಧ ದಾಖಲೆಗಳ ಸಮಗ್ರ ಪರಿಶೀಲನೆಯ ಮೂಲಕ ಪೌರತ್ವವನ್ನು ನಿರ್ಧರಿಸಿವೆ.
ಹೀಗಾಗಿ, ವಿದೇಶಾಂಗ ಸಚಿವಾಲಯವು ಪುನರುಚ್ಚರಿಸಿರುವ ವಿಷಯ ಹೊಸದೇನಲ್ಲ. ಭಾರತದಲ್ಲಿ ಎಲ್ಲ ನಾಗರಿಕರಿಗೂ ಅನ್ವಯಿಸುವ ಏಕೈಕ ಹಾಗೂ ನಿರ್ಣಾಯಕ ಪೌರತ್ವ ದಾಖಲೆ ಇನ್ನೂ ಅಸ್ತಿತ್ವದಲ್ಲಿಲ್ಲ. ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವಿವಾದದ ವೇಳೆ ಈ ಕೊರತೆ ಮತ್ತೊಮ್ಮೆ ಬೆಳಕಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಇದಕ್ಕೆ ಸ್ಪಷ್ಟ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ.
ಸೌಜನ್ಯ: Indiatoday.in






