ಪವಾರ್ ಕುಟುಂಬದ ಸ್ವಾರ್ಥ ರಾಜಕೀಯಕ್ಕೆ ಬಲಿಪಶುಗಳಾಗುವವರು ಯಾರು?

ಶರದ್ ಪವಾರ್ ಮತ್ತು ಅಜಿತ್ ಪವಾರ್ ಮಹಾರಾಷ್ಟ್ರ ರಾಜಕೀಯದಲ್ಲಿ ಒಬ್ಬರು ಜಾತ್ಯತೀತ, ಪ್ರಜಾಪ್ರಭುತ್ವ ಸಂರಕ್ಷಕನಂತೆ, ಇನ್ನೊಬ್ಬರು ಅಧಿಕಾರದಲ್ಲಿರುವವರಾಗಿ ಲಾಭ ಮಾಡಿಕೊಳ್ಳುತ್ತಿದ್ದಾರೆ.
ಅವರು ಬೇರೆ ಬೇರೆ ವೇಷದಲ್ಲಿದ್ದಾರೆ ಅಷ್ಟೆ. ಆದರೆ, ಅವರು ಬೇರೆಬೇರೆಯಲ್ಲ. ಅವರ ಗುರಿ ರಾಜ್ಯದ ಅಭಿವೃದ್ಧಿಯಲ್ಲ ಅಥವಾ ಸಿದ್ಧಾಂತಕ್ಕೆ ಬದ್ಧವಾಗಿರುವುದೂ ಅಲ್ಲ. ಬದಲಾಗಿ, ಬಾರಾಮತಿ ಪವರ್ ಸೆಂಟರ್ ಅನ್ನು ಸಂರಕ್ಷಿಸುವುದು. ಪವಾರ್‌ದ್ವಯರು ಅಧಿಕಾರದಲ್ಲಿ ಇರುವವರೆಗೆ ಅವರ ಕುಟುಂಬ ಗೆಲ್ಲುತ್ತದೆ.
ಮಹಾರಾಷ್ಟ್ರ ರಾಜಕೀಯದಲ್ಲಿ ಪವಾರ್ ಕುಟುಂಬದ ಆಟ ಅಸಾಧಾರಣ ವಾಗಿದೆ. ಮತದಾರರಿಗಾಗಲಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗಾಗಲಿ ಅಥವಾ ರಾಜಕೀಯ ವಿಶ್ಲೇಷಕರಿಗಾಗಲೀ ಸತ್ಯ ಯಾವುದು, ನಾಟಕ ಯಾವುದು ಎಂದು ಅರ್ಥವಾಗದಂತಾಗಿದೆ.
ಪುಣೆ ಮತ್ತು ಪಿಂಪ್ರಿ-ಚಿಂಚ್‌ವಾಡ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶರದ್ ಪವಾರ್ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ ಬಣಗಳು ಬಿಜೆಪಿ ವಿರುದ್ಧ ಮೈತ್ರಿ ಮಾಡಿಕೊಂಡಿವೆ. ಇಷ್ಟಾದರೂ, ಅಜಿತ್ ಪವಾರ್ ಬಿಜೆಪಿ ಸರಕಾರದ ಡಿಸಿಎಂ ಹುದ್ದೆಯಲ್ಲಿ ಆರಾಮವಾಗಿ ಕುಳಿತಿದ್ದಾರೆ.
ಸಿದ್ಧಾಂತವನ್ನು ನಂಬುವ ಯಾರಿಗೇ ಆದರೂ ಈ ಆಟ ಆಘಾತಕಾರಿ ಎನ್ನಿಸದೇ ಇರುವುದಿಲ್ಲ. ಹಣ ಮತ್ತು ಅಧಿಕಾರವೇ ಎಲ್ಲಕ್ಕಿಂತ ದೊಡ್ಡದು ಎಂಬಂತೆ ಪವಾರ್ ಕುಟುಂಬ ನಡೆದುಕೊಳ್ಳುತ್ತಿದೆ.
ಕಳೆದ ಎರಡೂವರೆ ವರ್ಷಗಳಿಂದ, ಇಬ್ಬರೂ ಪವಾರ್‌ಗಳ ನಡುವೆ ಪಕ್ಷ ಛಿದ್ರವಾಗಿರುವುದನ್ನು ಎನ್‌ಸಿಪಿಯ ಆತ್ಮಕ್ಕಾಗಿ ನಡೆಯುವ ಯುದ್ಧ ಎಂದು ಹೇಳಲಾಯಿತು. ಶರದ್ ಪವಾರ್ ಅವರ ಜಾತ್ಯತೀತ ಮೌಲ್ಯಗಳು ಮತ್ತು ಅಜಿತ್ ಪವಾರ್ ಅವರ ಅಧಿಕಾರದ ಹಸಿವಿನ ನಡುವಿನ ಸಂಘರ್ಷ ಎನ್ನಲಾಯಿತು. ಆದರೆ ಈಗ ಆ ನಿರೂಪಣೆ ಛಿದ್ರವಾಗಿದೆ. ಮುಖವಾಡ ಕಳಚಿಬಿದ್ದಿದೆ.
2023 ರಲ್ಲಿ ಏಕನಾಥ ಶಿಂದೆ-ಬಿಜೆಪಿ ಸರಕಾರವನ್ನು ಸೇರಲು ಪ್ರಫುಲ್ ಪಟೇಲ್, ಛಗನ್ ಭುಜಬಲ್ ಮತ್ತು ಹಸನ್ ಮುಶ್ರಿಫ್ ಅವರಂತಹ ದಿಗ್ಗಜರೊಂದಿಗೆ ಅಜಿತ್ ಪವಾರ್ ಎನ್‌ಸಿಪಿಯಿಂದ ಹೊರಬಂದರು.ಅದನ್ನು ದಂಗೆ, ದ್ರೋಹ ಎಂದೆಲ್ಲ ಬಿಂಬಿಸಲಾಯಿತು.
ವಿಭಜನೆಯ ಮೊದಲು ಎನ್‌ಸಿಪಿ ಅಧಿಕಾರದಿಂದ ಹೊರಗುಳಿದಿತ್ತು.ಅದರ ನಾಯಕರಿಗೆ ಈ.ಡಿ., ಸಿಬಿಐ ಭಯದ ಬಿಸಿ ತಟ್ಟಿತ್ತು. ಕಡೆಗೆ ವಿಭಜನೆ ನಂತರ ಅದೇ ಪ್ರಮುಖ ನಾಯಕರು ಮಂತ್ರಿಗಳಾದರು. ಈ.ಡಿ. ಫೈಲುಗಳ ಸದ್ದು ಕೂಡ ಅಡಗಿತ್ತು. ಪ್ರಕರಣವೇ ಮುಚ್ಚಿಹೋಯಿತು.
ರಾಜಕೀಯ ಎನ್ನುವುದು ಇವರಿಗೆ ಸಾರ್ವಜನಿಕ ಸೇವೆಯಲ್ಲ, ಅದೊಂದು ‘ಪವಾರ್ ಆಂಡ್ ಫ್ಯಾಮಿಲಿ ಪ್ರೈವೇಟ್ ಲಿಮಿಟೆಡ್’ ಕಂಪೆನಿ! ಇಲ್ಲಿ ಸಿದ್ಧಾಂತ, ಮೌಲ್ಯ, ಪ್ರಜಾಪ್ರಭುತ್ವ ಎಲ್ಲವೂ ಬರೀ ಬೂಟಾಟಿಕೆ. ಹಗಲಿನಲ್ಲಿ ಪಕ್ಷಗಳ ಹೆಸರಿನಲ್ಲಿ ಕಚ್ಚಾಡುವ ನಾಟಕವಾಡುವ ಇವರು, ಕತ್ತಲಾದರೆ ಒಂದೇ ಕಡೆ ಕುಳಿತು ರಾಜ್ಯದ ಸಂಪನ್ಮೂಲವನ್ನು ಹೇಗೆ ಹಂಚಿಕೊಳ್ಳುವುದೆಂದು ಲೆಕ್ಕ ಹಾಕುತ್ತಾರೆ. ಅಧಿಕಾರದ ಕುರ್ಚಿಗಾಗಿ ಮತ್ತು ಅಕ್ರಮವಾಗಿ ಗಳಿಸಿದ ಸಾವಿರಾರು ಕೋಟಿ ಹಣವನ್ನು ಉಳಿಸಿಕೊಳ್ಳುವುದಕ್ಕಾಗಿ ಇವರು ಯಾರ ಕಾಲಿಗೆ ಬೇಕಾದರೂ ಬೀಳುತ್ತಾರೆ, ಯಾರ ಬೆನ್ನಿಗೆ ಬೇಕಾದರೂ ಚೂರಿ ಹಾಕುತ್ತಾರೆ. ಇವರಿಗೆ ಬೇಕಿರುವುದು ಮಹಾರಾಷ್ಟ್ರದ ಅಭಿವೃದ್ಧಿಯಲ್ಲ, ತಮ್ಮ ಕುಟುಂಬದ ಖಜಾನೆಯ ಅಭಿವೃದ್ಧಿ ಮಾತ್ರ!
ಇನ್ನು ದ್ರೋಹಕ್ಕೆ ಒಳಗಾದವರು ಎನ್ನಲಾದ ಶರದ್ ಪವಾರ್ ಕೂಡ ಲೋಕಸಭೆ ಚುನಾವಣೆಯಲ್ಲಿ ತಮ್ಮ ನೆಲೆ ಉತ್ತಮಪಡಿಸಿಕೊಳ್ಳುವಷ್ಟು ಸ್ಥಾನ ಗಳಿಸಿದರು.
ಅವರು ಸಿಂಪಥಿ ವೋಟುಗಳನ್ನು ಗಳಿಸಿದರು.
ಒಂದು ಬಣ ಅಧಿಕಾರ ಅನುಭವಿಸುತ್ತ, ತನಿಖೆಯ ಅಪಾಯವನ್ನೂ ತಪ್ಪಿಸಿಕೊಳ್ಳುತ್ತದೆ. ಇನ್ನೊಂದು ಬಣ ತಾತ್ವಿಕ ವಿರೋಧದ ಮುಖವಾಡ ಹಾಕಿಕೊಂಡು ಜನರ ಸಿಂಪಥಿ ಗಳಿಸುತ್ತದೆ.
ಈಗ, ಕೇವಲ ೩೦ ತಿಂಗಳ ನಂತರ, ಬಿಜೆಪಿಯನ್ನು ಹೊರಗಿಡಲು ಎರಡೂ ಬಣಗಳು ಮೈತ್ರಿ ಮಾಡಿಕೊಂಡಿವೆ.
ಅಜಿತ್ ಪವಾರ್ ತಮ್ಮದೇ ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷ ಬಿಜೆಪಿಯನ್ನು ಸೋಲಿಸಲು ತಮ್ಮ ಪ್ರತಿಸ್ಪರ್ಧಿ ಬಣದ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೇನಾದರೂ ಸಮರ್ಥನೆ ಇದೆಯೆ ಎಂಬುದು ಈಗ ಪ್ರಶ್ನೆ.
ಈ ದ್ವಂದ್ವತೆಯ ಅತ್ಯಂತ ವಿಕಾರ ಬಗೆಯೆಂದರೆ, ಅದಾನಿ ಸಂಪರ್ಕ.
ವರ್ಷಗಳಿಂದ, ರಾಹುಲ್ ಗಾಂಧಿ ಗೌತಮ್ ಅದಾನಿ ವಿರುದ್ಧದ ವಿರೋಧವನ್ನು ತಮ್ಮ ರಾಜಕೀಯದ ಪ್ರಮುಖ ತತ್ವವಾಗಿ ಮಾಡಿಕೊಂಡು ಬಂದಿದ್ದಾರೆ. ಅವರು ಭಾರತದಲ್ಲಿನ ರಾಜಕೀಯ ಯುದ್ಧವನ್ನು ಬಡವರು ಮತ್ತು ಶ್ರೀಮಂತರ ನಡುವಿನ ಯುದ್ಧ ಎಂದೇ ಹೇಳುತ್ತ ಬಂದಿದ್ದಾರೆ. ಹಾಗೆ ರಾಹುಲ್ ಗಾಂಧಿಯವರು ಅದಾನಿ ವಿರುದ್ಧ ನಿಂತಿರುವಾಗ, ಎನ್‌ಸಿಪಿಯ ಸುಪ್ರಿಯಾ ಸುಳೆ ಗೌತಮ್ ಅದಾನಿಯನ್ನು ತನ್ನ ಸಹೋದರ ಎಂದು ಸಾರ್ವಜನಿಕವಾಗಿ ಕರೆಯುತ್ತಾರೆ. ಅವರು ೩೦ ವರ್ಷಗಳ ಹಳೆಯ ಕುಟುಂಬ ಸಂಬಂಧದ ಬಗ್ಗೆ ಮಾತನಾಡುತ್ತಾರೆ.
ಇದೇ ವೇಳೆ ಶರದ್ ಪವಾರ್ ಅವರನ್ನು ಅದಾನಿ ತಮ್ಮ ಮೆಂಟರ್ ಎಂದು ಬಹಿರಂಗವಾಗಿಯೇ ಹೇಳುತ್ತಾರೆ.
ಹಾಗಾದರೆ, ತನ್ನದೇ ಮೈತ್ರಿಪಕ್ಷವೊಂದು ತಾನು ವಿರೋಧಿಸುವ ಅದಾನಿಯ ಪಕ್ಕ ಹೋಗಿ ನಿಂತಿರುವಾಗ, ಕಾಂಗ್ರೆಸ್ ಹೇಗೆ ಜನರೆದುರು ಹೋಗಲು ಸಾಧ್ಯವಾಗುತ್ತದೆ? ಅದಾನಿ ಹಟಾವೋ ಘೋಷಣೆಗೆ ಏನು ಅರ್ಥ ಉಳಿದಂತಾಗುತ್ತದೆ? ಪವಾರ್‌ಗಳು ಕಾಂಗ್ರೆಸ್‌ನ ಅತಿದೊಡ್ಡ ಅಸ್ತ್ರವನ್ನೇ ವಿಫಲಗೊಳಿಸಿದಂತಾಯಿತಲ್ಲವೆ?
ಕಾಂಗ್ರೆಸ್‌ನೊಂದಿಗಿನ ರಾಜಕೀಯ ಮೈತ್ರಿ, ಅದಾನಿಯೊಂದಿಗೆ ವೈಯಕ್ತಿಕ ಮತ್ತು ವ್ಯವಹಾರ ಮೈತ್ರಿ ಈ ದ್ವಂದ್ವವೇ ಎಷ್ಟು ಅವಕಾಶವಾದಿಯಾಗಿದೆಯಲ್ಲವೆ?
ಇದು ಈಗಿನಿಂದಲ್ಲ, ಭ್ರಷ್ಟಾಚಾರ ಆರೋಪ ಎದುರಿಸಿ, ನಂತರ ಬಿಜೆಪಿ ಸೇರಿ ಅದನ್ನು ತೊಳೆದುಕೊಂಡಾಗಿನಿಂದಲೂ ಕಾಣಿಸುತ್ತಲೇ ಇದೆ.
ಅಜಿತ್ ಪವಾರ್ ಅವರೊಂದಿಗೆ ಪಕ್ಷದಿಂದ ಹೊರಬಂದಿದ್ದ ಪ್ರಫುಲ್ ಪಟೇಲ್, ಛಗನ್ ಭುಜಬಲ್, ಹಸನ್ ಮುಶ್ರಿಫ್ ತಮ್ಮ ರಾಜಕೀಯವನ್ನೇ ಮುಗಿಸಬಲ್ಲ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದರು. ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿತ್ತು; ಜೈಲು ಶಿಕ್ಷೆ ಕೂಡ ಕಾದಿತ್ತು. ಆದರೆ ಅವರು ಬಿಜೆಪಿ ಮೈತ್ರಿಕೂಟಕ್ಕೆ ಸೇರಿದ ತಕ್ಷಣ ಕ್ಲೀನ್ ಆಗಿಬಿಟ್ಟರು. ಇಷ್ಟಾಗಿಯೂ ಅವರು, ಅಗತ್ಯ ಬಿದ್ದಾಗ ಘರ್ ವಾಪ್ಸಿ ಅವಕಾಶ ಇರುವ ಹಾಗೆ ಶರದ್ ಪವಾರ್ ಜೊತೆಗೂ ಉತ್ತಮ ಸಂಬಂಧದಲ್ಲೇ ಇದ್ದಾರೆ.
ಹೀಗಾಗಿ, ಅವೆರಡೂ ಬಣಗಳ ನಡುವೆ ಬಿರುಕು ಎಂದಿಗೂ ಶಾಶ್ವತವಾಗಿರಲಿಲ್ಲ ಎಂದು ಅವರೇ ಸೂಚಿಸುತ್ತಿದ್ದಾರೆ.
ಪವಾರ್‌ಗಳ ಈ ಆಟದಿಂದಾಗಿ ಬಿಜೆಪಿಗೆ ದ್ರೋಹವಾಯಿತೆ?
ಶರದ್ ಪವಾರ್ ಅವರನ್ನು ದುರ್ಬಲಗೊಳಿಸಲು ಎನ್‌ಸಿಪಿಯನ್ನು ಒಡೆದಿರುವುದಾಗಿ ಅದು ಭಾವಿಸಿತ್ತು. ಆದರೆ ಈಗ ಅಜಿತ್ ಪವಾರ್ ಬಣ ಬಜೆಪಿ ಸರಕಾರದಲ್ಲಿದ್ದುಕೊಂಡೇ ಪಶ್ಚಿಮ ಮಹಾರಾಷ್ಟ್ರದಲ್ಲಿ ಬಿಜೆಪಿಯ ನೆಲೆಯನ್ನೇ ಅಲ್ಲಾಡಿಸಲು ಈ ಮೈತ್ರಿ ಮಾಡಿಕೊಂಡಿದೆ.
ಪವಾರ್‌ಗಳ ಈ ಆಟದ ನಿಜವಾದ ಬಲಿಪಶುಗಳೆಂದರೆ ಪಕ್ಷದ ಕಾರ್ಯಕರ್ತರು.
ಎರಡು ಬಣಗಳ ಕಾರ್ಯಕರ್ತರು ಇಲ್ಲಿಯವರೆಗೆ ಪರಸ್ಪರ ಗುದ್ದಾಟದಲ್ಲಿದ್ದರು, ಕಚ್ಚಾಟದಲ್ಲಿದ್ದರು. ಈಗ ಅವರೇ ಗೊಂದಲಗೊಳ್ಳುವಂತಾಗಿದೆ. ತಮ್ಮ ನಾಯಕರ ನಿರ್ಧಾರದಿಂದಾಗಿ ಅವರೀಗ ಪರಸ್ಪರ ಮುಖ ನೋಡಿಕೊಳ್ಳುತ್ತ, ಜೊತೆಯಾಗಿ ಹೋಗಬೇಕಾದ ಮುಜುಗರ ಎದುರಿಸುವ ಹಾಗಾಗಿದೆ.
ಪುಣೆಯಲ್ಲಿ ಶರದ್ ಪವಾರ್ ಅವರ ನಿಷ್ಠಾವಂತ ಬೆಂಬಲಿಗರೊಬ್ಬರು ಕಳೆದ ಎರಡು ವರ್ಷಗಳಿಂದ ಅಜಿತ್ ಪವಾರ್ ಅವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ಅವರು ಅಜಿತ್ ಪವಾರ್ ಅವರ ಅಭ್ಯರ್ಥಿಗಳ ವಿರುದ್ಧ ಹೋರಾಡಿದ್ಧಾರೆ. ಅವರನ್ನು ಬಿಜೆಪಿಯೊಂದಿಗೆ ರಾಜಿ ಮಾಡಿಕೊಂಡ ಮೋಸಗಾರರು ಎಂದು ಅವರು ಬ್ರಾಂಡ್ ಮಾಡಿದ್ಧಾರೆ.
ಈಗ ಅವರು ಆ ದೇಶದ್ರೋಹಿಯ ಜೊತೆಗೇ ಹೋಗಬೇಕಾಗಿದೆ.
ಇನ್ನು ಅಜಿತ್ ಪವಾರ್ ಬೆಂಬಲಿಗರು ತಮ್ಮ ನಾಯಕ ಬಿಜೆಪಿ ಜೊತೆ ಹೋದುದನ್ನು ಸಮರ್ಥಿಸಿಕೊಳ್ಳಲು ಎರಡು ವರ್ಷಗಳನ್ನು ಕಳೆದರು.
ಅವರು ತಮ್ಮ ವಲಯದಲ್ಲಿರುವ ಜಾತ್ಯತೀತ ಮತದಾರರನ್ನು ದೂರವಿಟ್ಟರು.
ಈಗ, ಅವರು ಅದೇ ವಿರೋಧಿ ನಾಯಕನ ಜೊತೆ ಹೋಗಬೇಕಾಗಿದೆ.
ಈ ನಾಯಕರು ಮಾತ್ರ ತಮ್ಮ ಸಂಬಂಧಗಳಿಗೆ ಯಾವ ಧಕ್ಕೆಯನ್ನೂ ತಂದುಕೊಂಡಿರುವುದಿಲ್ಲ. ಇವರ ಈ ಆಟದಲ್ಲಿ ಕಾರ್ಯಕರ್ತರು ಮೂರ್ಖರಂತಾಗಿದ್ದಾರೆ. ಪವಾರ್‌ಗಳು ಈ ರಾಜಕೀಯ ನಡೆಯ ಮೂಲಕ ಸಾವಿರಾರು ಯುವ ಮಹಾರಾಷ್ಟ್ರೀಯರ ಜೀವನ ಮತ್ತು ಭಾವನೆಗಳೊಂದಿಗೂ ಆಟವಾಡಿದ್ದಾರೆ.
೨೦೧೪ರಲ್ಲಿ ಚುನಾವಣೆಗೆ ಸ್ವಲ್ಪ ಮೊದಲು ಬಿಜೆಪಿ ಮತ್ತು ಶಿವಸೇನೆ ವಿಭಜನೆಯಾದಾಗ, ಫಲಿತಾಂಶಗಳ ನಂತರ ತಕ್ಷಣವೇ ಏಕಪಕ್ಷೀಯವಾಗಿ ಬಿಜೆಪಿಗೆ ಬಾಹ್ಯ ಬೆಂಬಲ ನೀಡಿದ್ದು ಶರದ್ ಪವಾರ್. ಈ ನಡೆ ಶಿವಸೇನೆಯ ಚೌಕಾಸಿ ಶಕ್ತಿಯನ್ನೇ ಮುಗಿಸಿತ್ತು. ನಂತರ ೨೦೧೯ರಲ್ಲಿ ಇದ್ದಕ್ಕಿದ್ದಂತೆ ಅಜಿತ್ ಪವಾರ್ ಬಿಜೆಪಿ ಕೂಟ ಸೇರಿಕೊಂಡಿದ್ದರು.
ಇವರ ಈ ಆಟದಿಂದಾಗಿ ಇಂದಿಗೂ ಉದ್ಧವ್ ಠಾಕ್ರೆ ತಮ್ಮ ರಾಜಕೀಯ ಉಳಿವಿಗಾಗಿ ಹೋರಾಡುವಂತಾಗಿದೆ.
ತಮ್ಮ ಪಕ್ಷವನ್ನು ಅವರು ಪುನರ್‌ನಿರ್ಮಿಸಲು ಪ್ರಯತ್ನಿಸುತ್ತಿರುವಾಗ, ಎನ್‌ಸಿಪಿ ಡಬಲ್ ಗೇಮ್‌ನಲ್ಲಿ ತೊಡಗಿದೆ.
ಅಜಿತ್ ಪವಾರ್ ಅವರೊಂದಿಗೆ ಜೊತೆಯಾಗಿ ಹೋಗಲು ಏನೂ ತೊಂದರೆಯಿಲ್ಲ ಎಂದು ತೋರಿಸುವ ಮೂಲಕ, ಶರದ್ ಪವಾರ್ ಈಗ ಅಜಿತ್ ಪವಾರ್ ದಂಗೆಯನ್ನೇ ಮರೆಯುತ್ತಾರೆ. ಇದು, ಅವರು ಅಜಿತ್ ಪವಾರ್ ಅವರನ್ನು ಕ್ಷಮಿಸಿ ಮತ್ತೆ ಒಂದಾಗಲು ಸಾಧ್ಯವಾದರೆ, ಏಕನಾಥ ಶಿಂದೆಯ ಜೊತೆ ಉದ್ಧವ್ ಹೋಗಲು ಏಕೆ ಸಾಧ್ಯವಿಲ್ಲ ಎನ್ನುವಂತೆ ಮಾಡಿದೆ.
ಎನ್‌ಸಿಪಿಯ ಬೂಟಾಟಿಕೆ ದೇಶದ್ರೋಹಿಗಳ ವಿರುದ್ಧದ ಎಂವಿಎಯ ನೈತಿಕ ದಾಳಿಯನ್ನು ದುರ್ಬಲಗೊಳಿಸುತ್ತದೆ.
ಕಾಂಗ್ರೆಸ್ ಅನ್ನು ಸಹ ತಮಾಷೆಯಾಗಿ ತೆಗೆದುಕೊಳ್ಳಲಾಗುತ್ತಿದೆ.
ಜಾತ್ಯತೀತ ಹೊದಿಕೆಯಡಿ ಉಳಿದುಕೊಂಡು, ಎನ್‌ಸಿಪಿ ತನ್ನ ಅಲ್ಪಸಂಖ್ಯಾತ ಮತಬ್ಯಾಂಕ್ ಅನ್ನು ಹಾಗೆಯೇ ಉಳಿಸಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ. ಆದರೆ ಎನ್‌ಸಿಪಿ ನಾಯಕತ್ವ ಬಿಜೆಪಿಯ ಕಾರ್ಪೊರೇಟ್ ಬೆಂಬಲಿಗರೊಂದಿಗೆ ತನ್ನ ಸ್ನೇಹಶೀಲ ಆರ್ಥಿಕ ಮತ್ತು ಸಾಮಾಜಿಕ ಸಂಬಂಧಗಳನ್ನು ಮುಂದುವರಿಸುತ್ತದೆ.
ಶರದ್ ಪವಾರ್ ಮತ್ತು ಅಜಿತ್ ಪವಾರ್ ಮಹಾರಾಷ್ಟ್ರ ರಾಜಕೀಯದಲ್ಲಿ ಒಬ್ಬರು ಜಾತ್ಯತೀತ, ಪ್ರಜಾಪ್ರಭುತ್ವ ಸಂರಕ್ಷಕನಂತೆ, ಇನ್ನೊಬ್ಬರು ಅಧಿಕಾರದಲ್ಲಿರುವವರಾಗಿ ಲಾಭ ಮಾಡಿಕೊಳ್ಳುತ್ತಿದ್ದಾರೆ.
ಅವರು ಬೇರೆ ಬೇರೆ ವೇಷದಲ್ಲಿದ್ದಾರೆ ಅಷ್ಟೆ. ಆದರೆ, ಅವರು ಬೇರೆಬೇರೆಯಲ್ಲ. ಅವರ ಗುರಿ ರಾಜ್ಯದ ಅಭಿವೃದ್ಧಿಯಲ್ಲ ಅಥವಾ ಸಿದ್ಧಾಂತಕ್ಕೆ ಬದ್ಧವಾಗಿರುವುದೂ ಅಲ್ಲ. ಬದಲಾಗಿ, ಬಾರಾಮತಿ ಪವರ್ ಸೆಂಟರ್ ಅನ್ನು ಸಂರಕ್ಷಿಸುವುದು. ಪವಾರ್‌ದ್ವಯರು ಅಧಿಕಾರದಲ್ಲಿ ಇರುವವರೆಗೆ ಅವರ ಕುಟುಂಬ ಗೆಲ್ಲುತ್ತದೆ.
ನಾವು ನೋಡುತ್ತಿರುವ ಚುನಾವಣೆಗಳು ಸುಪ್ರಿಯಾ vs ಸುನೇತ್ರಾ, ಅಜಿತ್ vs ಯುಗೇಂದ್ರ ಎನ್ನುವ ಥರದ ಯುದ್ಧಗಳಲ್ಲ. ಅಲ್ಲಿ ಸೋತವರಿಗೂ ಬೇರೆ ವ್ಯವಸ್ಥೆಯಿರುತ್ತದೆ. ಸುನೇತ್ರಾ ಪವಾರ್ ಅವರನ್ನು ಸೋತ ತಕ್ಷಣ ರಾಜ್ಯಸಭೆಗೆ ಕಳುಹಿಸಲಾಯಿತು ಎಂಬುದನ್ನು ಗಮನಿಸಬೇಕು.
ಇನ್ನು, ಗೆದ್ದವರು ಕುಟುಂಬದಲ್ಲಿ ಸ್ಥಾನ ಉಳಿಸಿಕೊಳ್ಳುವಂತೆ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಇಡೀ ರಾಜಕೀಯವನ್ನು ಅವರು ಆಟವಾಗಿ ಬಳಸಿಕೊಳ್ಳುತ್ತ, ವೇಷ ಮುಂದುವರಿಸಿದ್ದಾರೆ.







