ಎರಡೂ ಕೈ, ಕಾಲುಗಳಿಲ್ಲದಿದ್ದರೂ ವಿಶ್ವ ಆರ್ಚರಿ ಪ್ಯಾರಾ ಸೀರೀಸ್ನಲ್ಲಿ ಡಬಲ್ ಚಿನ್ನ ಗೆದ್ದು ಸಾಧನೆ ಮೆರೆದ ಪಾಯಲ್ ನಾಗ್ ಯಾರು
►ವಿಶ್ವದ ನಂ.1 ಬಿಲ್ಲುಗಾರ್ತಿ ಶೀತಲ್ ದೇವಿಯನ್ನು ಸೋಲಿಸಿ ವಿಶ್ವ ಚಾಂಪಿಯನ್ ಆದ ಪಾಯಲ್ ►ಬಾಲಂಗಿರ್ನ ಅನಾಥಾಶ್ರಮದಿಂದ ಬ್ಯಾಂಕಾಕ್; ಹತಾಶೆಯಿಂದ ಸಾಧನೆಯೆಡೆಗೆ ಪಾಯಲ್ ಪಯಣ

ಪಾಯಲ್ ನಾಗ್ | Photo Credit : X \ @Naveen_Odisha
“ತಿನ್ನಲೂ ಆಗುವುದಿಲ್ಲ, ನಡೆಯಲೂ ಸಾಧ್ಯವಿಲ್ಲ. ಇವಳಿಗೆ ವಿಷ ಕೊಡಿ” ಎಂಬ ಕ್ರೂರ ಶಬ್ದಗಳಿಂದ ನೆರೆಹೊರೆಯವರು ಮತ್ತು ಸಂಬಂಧಿಕರು ಪಾಯಲ್ ನಾಗ್ರ ಕುಟುಂಬಕ್ಕೆ ಹೇಳಿದ್ದರು. ಒಡಿಶಾದ ಬಾಲಂಗಿರ್ನಲ್ಲಿ ನೆಲೆಸಿರುವ ಪಾಯಲ್ ನಾಗ್ 2015ರಲ್ಲಿ ಮಗುವಾಗಿದ್ದಾಗ ವಿದ್ಯುದಾಘಾತದಿಂದ ತನ್ನ ಎರಡೂ ಕೈ, ಕಾಲುಗಳನ್ನು ಕಳೆದುಕೊಂಡಿದ್ದಳು. ಇದೀಗ ಶನಿವಾರ ಅದೇ ಬಾಲಕಿ ಬ್ಯಾಂಕಾಕ್ನಲ್ಲಿ ಜಾಗತಿಕ ವೇದಿಕೆಯಲ್ಲಿ ವಿಶ್ವ ಆರ್ಚರಿ ಪ್ಯಾರಾ ಸೀರೀಸ್ನಲ್ಲಿ (ಬಿಲ್ಲುಗಾರಿಕೆ) ಡಬಲ್ ಚಿನ್ನವನ್ನು ಗೆದ್ದು ಸಾಧನೆ ಮೆರೆದಿದ್ದಾಳೆ.
ವಿಶ್ವ ಪ್ಯಾರಾ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಬಹಳ ಸಾಧನೆಗೈದಿರುವ ವಿಶ್ವದ ನಂಬರ್ 1 ಆಟಗಾತಿಯಾಗಿರುವ ಜಮ್ಮು ಕಾಶ್ಮೀರದ ಶೀತಲ್ ದೇವಿಯನ್ನು ಸೋಲಿಸಿದ ಪಾಯಲ್ ಚಿನ್ನ ಗೆದ್ದಿದ್ದಾರೆ. ಶೀತಲ್ ಅವರ ಜೊತೆಗೂಡಿ ತಂಡ ಚಿನ್ನವನ್ನೂ ಗೆದ್ದಿದ್ದಾರೆ. ಈ ಸಾಧನೆಯ ಜೊತೆಗೆ ಭಾರತ ಏಳು ಚಿನ್ನ, ಐದು ಬೆಳ್ಳಿ ಮತ್ತು ನಾಲ್ಕು ಕಂಚುಗಳ 16 ಪದಕಗಳನ್ನು ಗಳಿಸಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
3 ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಪಾಯಲ್ ಅವರ ಜೀವನದಲ್ಲಿ 2015ರಲ್ಲಿ ಮಹತ್ವದ ತಿರುವು ಬಂತು. ರಾಯ್ಪುರದಲ್ಲಿ ನಿರ್ಮಾಣದ ಹಂತದಲ್ಲಿರುವ ಕಟ್ಟಡದ ಐದನೇ ಮಹಡಿಯ ಟೆರೇಸ್ನಲ್ಲಿ ತನ್ನ ಕಿರಿಯ ಸಹೋದರನೊಂದಿಗೆ ಆಟವಾಡುತ್ತಿದ್ದಳು. ಅಲ್ಲಿ ಆಕೆಯ ತಂದೆ ಜೀವನೋಪಾಯಕ್ಕಾಗಿ ಒಡಿಶಾದಿಂದ ವಲಸೆ ಬಂದ ಗಾರೆ ಕೆಲಸದವರಾಗಿ ದುಡಿಯುತ್ತಿದ್ದರು. ಟೆರೇಸ್ ಮೇಲೆ ನೀರು ಇತ್ತು. ವಿದ್ಯುತ್ ತಂತಿಯೊಂದು ಮುರಿದು ಬಿದ್ದು ನೀರಿನೊಂದಿಗೆ ಸ್ಪರ್ಶಿಸಿತು. ನಿಮಿಷಗಳಲ್ಲಿ ಎಲ್ಲವೂ ಬದಲಾಯಿತು. ವಿದ್ಯುದಾಘಾತದಲ್ಲಿ ಪಾಯಲ್ ತೀವ್ರವಾಗಿ ಗಾಯಗೊಂಡಳು. ವೈದ್ಯರು ಆಕೆಯ ಅಂಗಗಳನ್ನು ಕತ್ತರಿಸಿ ಜೀವ ಉಳಿಸಿದರು.
“ಇಂದು ನಾನು ವಿದ್ಯುದಾಘಾತದ ಬಗ್ಗೆ ಮಾತನಾಡಲು ಬಯಸುವುದಿಲ್ಲ” ಎಂದು ತಮ್ಮ ಸಾಧನೆಯ ನಂತರ ಸಂತೋಷ ಮತ್ತು ನೋವಿನಿಂದ ನುಡಿದರು ಪಾಯಲ್. “ಆ ಬಗ್ಗೆ ಇಂದು ಬೇಡ. ಇನ್ನೊಂದು ದಿನ ಮಾತನಾಡುತ್ತೇನೆ” ಎಂದರು ಪಾಯಲ್. ಪಾಯಲ್ನ ಅಪಘಾತದಿಂದಾಗಿ ಆರು ಮಂದಿಯ ಕುಟುಂಬ ಬಹಳ ಹತಾಶೆಗೆ ಬಿದ್ದಿತ್ತು. ಆಕೆಯ ಆರೈಕೆ ಮಾಡಲು ಸಾಧ್ಯವಾಗದೆ ಇದ್ದಾಗ ಬಾಲಂಗಿರ್ನ 70 ಕಿಮೀ ದೂರುದ ಜಮುನಾಬಹಲ್ ಗ್ರಾಮಕ್ಕೆ ಸೇರಿದ ಹೆತ್ತವರಾದ ಬಿಜಯ್ ಕುಮಾರ್ ನಾಗ್ ಮತ್ತು ಜನತಾ ಆಕೆಯನ್ನು ಬಾಲಂಗಿರ್ನ ಪಾರ್ಬತಿ ಗಿರಿ ಬಾಲ ನಿಕೇತನಕ್ಕೆ ಸೇರಿಸಿದರು. ಅದೇ ಸಮಯದಲ್ಲಿ ಆಕೆ ಬಹಳ ಕಠಿಣ ಮಾತುಗಳನ್ನು ಕೇಳಿದ್ದರು. “ತಿನ್ನಲೂ ಆಗುವುದಿಲ್ಲ. ನಡೆಯಲೂ ಸಾಧ್ಯವಿಲ್ಲ, ಆಕೆಗೆ ವಿಷ ಹಾಕಿ” ಎಂದು ಜನರು ಹೇಳಿದ್ದರು. ಅದೇ ಸಮಯದಲ್ಲಿ ತರಬೇತುದಾರ ಕುಲ್ದೀಪ್ ಆಕೆಯ ಪ್ರತಿಭೆಯನ್ನು ಗುರುತಿಸಿದರು. 2023ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪಾಯಲ್ ಬಗ್ಗೆ ಓದಿದಾಗ ಕುಲ್ದೀಪ್ ವೇದ್ವನ್ ಆಕೆಯನ್ನು ಗುರುತಿಸಿದರು.
“ಟ್ವಿಟರ್ನಲ್ಲಿ ಆಕೆಯ ಫೋಟೋ ನೋಡಿದಾಗ ಆಕೆಗೆ ಕೈಗಳು ಮತ್ತು ಕಾಲುಗಳು ಇರಲಿಲ್ಲ. ಹೀಗಾಗಿ ಅಕಾಡೆಮಿಗೆ ಆಕೆಯನ್ನು ಕರೆತರಲು ನಿರ್ಧರಿಸಿದೆ” ಎನ್ನುತ್ತಾರೆ ಕುಲ್ದೀಪ್. “ಶೀತಲ್ ದೇವಿ ಚಾಂಪಿಯನ್ ಆಗಿದ್ದಳು. ಹೀಗಾಗಿ ಪಾಯಲ್ ಕೂಡ ಆಗುತ್ತಾಳೆ ಎನ್ನುವ ನಂಬಿಕೆ ನನಗಿತ್ತು. ನಾನು ಹುಡುಕುತ್ತಿದ್ದಂತಹ ವ್ಯಕ್ತಿ ಆಕೆಯಾಗಿದ್ದಳು. ಆದರೆ ಆಕೆಯನ್ನು ಅನಾಥಾಶ್ರಮದಿಂದ ಕರೆತರುವುದು ಮತ್ತು ಕ್ರೀಡೆಯ ಬಗ್ಗೆ ವಿವರ ನೀಡುವುದು ಬಹಳ ಕಷ್ಟವಾಗಿತ್ತು. ಕೊನೆಗೆ ಜಿಲ್ಲಾಡಳಿತಕ್ಕೆ ಪತ್ರ ಬರೆದು ಅನುಮತಿ ಪಡೆದೆ” ಎನ್ನುತ್ತಾರೆ ಕುಲ್ದೀಪ್. “ಅಂಗಗಳಿಲ್ಲದೆ ನಾನು ಹೇಗೆ ಕ್ರೀಡೆ ಕಲಿಯುವುದು” ಎಂದು ಆಕೆ ಪ್ರಶ್ನಿಸಿದ್ದಳು. “ಎಲ್ಲವನ್ನೂ ಬಿಟ್ಟು ಕಠಿಣ ಶ್ರಮ ಹಾಕು” ಎಂದು ಕುಲ್ದೀಪ್ ಆಕೆಗೆ ಭರವಸೆ ನೀಡಿದ್ದರು.
“ಆಕೆಗೆ ಬಿಲ್ಲುಗಾರಿಕೆ ಕಲಿಸಲು ಸಹನೆ ಮತ್ತು ನಾವೀನ್ಯತೆಯ ಅಗತ್ಯವಿತ್ತು. ಶೀತಲ್ಗೆ ನಾವು ಅಭಿವೃದ್ಧಿಪಡಿಸಿದ ರಿಲೀಸರ್ ಸಾಕಾಗಿತ್ತು. ಆದರೆ ಪಾಯಲ್ಗೆ ಇನ್ನಷ್ಟು ಸವಾಲಿತ್ತು. ಕಾಲುಗಳಿಲ್ಲದೆ ಬಿಲ್ಲನ್ನು ಮೇಲೆತ್ತುವುದು ಹೇಗೆ? ಎನ್ನುವ ಸವಾಲಿತ್ತು” ಎನ್ನುತ್ತಾರೆ ಕುಲ್ದೀಪ್.
ನಂತರ ಪಾಯಲ್ಗಾಗಿಯೇ ಉಪಕರಣವನ್ನು ಸಿದ್ಧಪಡಿಸಲಾಯಿತು. ಆಕೆಯ ಪ್ರೊಸ್ತೆಟಿಕ್ ಕಾಲುಗಳು ಎತ್ತಬಹುದಾದ ಬಿಲ್ಲನ್ನು ಸಿದ್ಧಪಡಿಸಿ ಆಕೆಗೆ ಕೊಡಲಾಯಿತು. ಆಕೆಯ ಪ್ರೊಸ್ತೆಟಿಕ್ ಕಾಲುಗಳಿಗೆ ಎರಡು ಸಾಧನಗಳನ್ನು ಸಿಕ್ಕಿಸಲಾಯಿತು. ಆಕೆಯ ಉಪಕರಣ ಸಿದ್ಧಮಾಡಲು ಮೂರು ತಿಂಗಳುಗಳು ಹಿಡಿದಿದ್ದವು. 36 ಬಾಣಗಳಲ್ಲಿ 350-355 ಅಂಕಗಳನ್ನು ಗಳಿಸಿದಾಗ ಆಕೆ ಸಿದ್ಧವಾಗಿದ್ದಾಳೆ ಎನ್ನುವುದು ತಂಡಕ್ಕೆ ಖಚಿತವಾಗಿತ್ತು. ಆದರೆ ಟ್ವಿನ್-ಡಿವೈಸ್ ಸೆಟಪ್ ಅಂತಾರಾಷ್ಟ್ರೀಯ ನಿಯಮಗಳ ಒಳಗೆ ಬರುತ್ತಿರಲಿಲ್ಲ. ಆದರೆ ಒಮ್ಮೆ ಪಾಯಲ್ಗೆ ಆತ್ಮವಿಶ್ವಾಸ ಬಂದ ಮೇಲೆ ಸಿಂಗಲ್ ಡಿವೈಸ್ ಅನ್ನು ಆಕೆಯ ಪ್ರೊಸ್ತೆಟಿಕ್ ಕಾಲುಗಳಿಗೆ ಸಿಕ್ಕಿಸಲಾಯಿತು.
2025 ಏಷ್ಯನ್ ಯೂತ್ ಪ್ಯಾರಾ ಗೇಮ್ಸ್ನಲ್ಲಿ ದುಬೈನಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕೆ ಭಾಗವಹಿಸಿದ್ದಳು. ವಿಶ್ವ ಆರ್ಚರಿ ಆಕೆಯ ಉಪಕರಣವನ್ನು ಒಪ್ಪಿಕೊಂಡಿತು. ಹೀಗಾಗಿ ಆಕೆ ವಿಶ್ವದ ಮೊದಲ ನಾಲ್ಕು ಅಂಗಗಳಿಲ್ಲದ ಸ್ಪರ್ಧಿಯಾದಳು ಪಾಯಲ್.
ಆಕೆ ಬೇಗನೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಳು. 2025ರಲ್ಲಿ ಜೈಪುರದಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಶೀತಲ್ ಅನ್ನು ಸೋಲಿಸಿ ಡಬಲ್ ಚಿನ್ನ ಗೆದ್ದಿದ್ದರು. ಒಲಿಂಪಿಕ್ ರೌಂಡ್ಸ್ನಲ್ಲೂ ಉತ್ತಮ ಶ್ರೇಯಾಂಕ ಪಡೆದಿದ್ದಳು.
ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ನಲ್ಲಿ ಬೆಳ್ಳಿ ಮತ್ತು ಪಟಿಯಾಲದ ರಾಷ್ಟ್ರೀಯ ಮಟ್ಟದ ಗೇಮ್ಸ್ನಲ್ಲಿ ಬೆಳ್ಳಿ ಪಡೆದಿದ್ದಳು. ಬ್ಯಾಂಕಾಕ್ ಆಕೆಯ ಅಂತಾರಾಷ್ಟ್ರೀಯ ಮಟ್ಟದ ಅತಿ ದೊಡ್ಡ ಸಾಧನೆಯಾಗಿದೆ.






