ಸುಳ್ಳು ಕತೆಗಳ ಪ್ರಸಾರ; ಢಾಕಾವನ್ನು ದಿಲ್ಲಿ ಎಂದು ಬಿಂಬಿಸುತ್ತಿರುವ ಚೀನೀ ವ್ಲಾಗರ್ ಗಳ ವಿರುದ್ಧ ಕ್ರಮಕ್ಕೆ ಭಾರತ ಆಗ್ರಹ

Photo Credit : NDTV
ಸುಮಾರು 150 ಚೀನೀ ಪ್ರಜೆಗಳು ತಿಂಗಳುಗಳಿಂದ ಢಾಕಾದ ಬಡ ನೆರೆಹೊರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ದೃಶ್ಯಗಳನ್ನು ಭಾರತದ ದೃಶ್ಯಗಳೆಂದು ಬಿಂಬಿಸುತ್ತಿದ್ದಾರೆ. ಹೊಸದಿಲ್ಲಿಯ ಜೀವನ ಪರಿಸ್ಥಿತಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವರದಿಯಾಗಿದೆ.
ಢಾಕಾದ ಬಡ ನೆರೆಹೊರೆಗಳಿಂದ ನೇರಪ್ರಸಾರ ಮಾಡುತ್ತಿರುವ ಚೀನೀ ಪ್ರಜೆಗಳು, ಅಲ್ಲಿನ ದೃಶ್ಯಗಳನ್ನು ಹೊಸದಿಲ್ಲಿಯ ದೃಶ್ಯಗಳೆಂದು ತಪ್ಪಾಗಿ ಪ್ರಸ್ತುತಪಡಿಸುತ್ತಿದ್ದಾರೆ. ಇಂತಹ ಕೆಲಸಗಳಲ್ಲಿ ಅನೇಕ ಚೀನೀ ವಿಡಿಯೊ ಬ್ಲಾಗರ್ ಗಳು ತೊಡಗಿಸಿಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭಾರತ ಒತ್ತಾಯಿಸಿದೆ.
“ಇಂತಹ ಕೆಲಸಗಳು ಸುಳ್ಳು ನಿರೂಪಣೆಯ ಪ್ರಯತ್ನಗಳಾಗಿವೆ. ಇವುಗಳನ್ನು ಹರಡುವವರ ಮತ್ತು ಅವುಗಳ ಹಿಂದೆ ಇರುವವರ ವಿಶ್ವಾಸಾರ್ಹತೆಯನ್ನಷ್ಟೇ ಹಾಳು ಮಾಡುತ್ತವೆ. ಈ ಕುರಿತ ಮಾಧ್ಯಮ ವರದಿಗಳನ್ನು ಗಮನಿಸಿದ್ದೇವೆ. ಯಾವುದೇ ದೇಶದ ಕುರಿತು ವಿರೂಪಗೊಳಿಸಿದ ಮತ್ತು ದುರುದ್ದೇಶಪೂರಿತ ಚಿತ್ರಣವನ್ನು ಪ್ರಸ್ತುತಪಡಿಸುವ ಇಂತಹ ಪ್ರಯತ್ನಗಳು ದುರದೃಷ್ಟಕರ” ಎಂದು ವಿದೇಶಾಂಗ ಸಚಿವಾಲಯ ಚೀನಾದ ನಿರೂಪಣೆಯನ್ನು ಟೀಕಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಢಾಕಾದ ಕೆಲವು ಭಾಗಗಳನ್ನು ದಿಲ್ಲಿಯಂತೆ ಬಿಂಬಿಸಲು ವಿದೇಶಿ ವ್ಯಕ್ತಿಗಳು ನಡೆಸುತ್ತಿರುವ ಪ್ರಯತ್ನಗಳು, ಅಂತಹ ಕೆಲಸದಲ್ಲಿ ಭಾಗಿಯಾದವರ ವಿಶ್ವಾಸಾರ್ಹತೆಯನ್ನೇ ಹಾಳು ಮಾಡುತ್ತವೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳನ್ನು ಭಾರತ ಒತ್ತಾಯಿಸಿದೆ” ಎಂದು ಹೇಳಿದ್ದಾರೆ.
ಸುಮಾರು 150 ಚೀನೀ ಪ್ರಜೆಗಳು ತಿಂಗಳುಗಳಿಂದ ಢಾಕಾದ ಬಡ ನೆರೆಹೊರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ದೃಶ್ಯಗಳನ್ನು ಭಾರತದ ದೃಶ್ಯಗಳೆಂದು ಬಿಂಬಿಸುತ್ತಿದ್ದಾರೆ. ಹೊಸದಿಲ್ಲಿಯ ಜೀವನ ಪರಿಸ್ಥಿತಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಾಂಗ್ಲಾದೇಶದ ಮಾಧ್ಯಮಗಳು ವರದಿ ಮಾಡಿವೆ.
'ಪ್ರೋಥೋಮ್ ಆಲೋ' ನಡೆಸಿದ ತನಿಖೆಯಲ್ಲಿ, ಢಾಕಾದ ಟೆಕ್ಪರಾ ಮತ್ತು ಉತ್ತರ ಭಾಗದ ನೆರೆಹೊರೆಗಳ ಕಿರಿದಾದ ಹಾದಿಗಳನ್ನು ಚೀನೀ ಪ್ರಜೆಗಳು ಚಿತ್ರೀಕರಿಸುತ್ತಿದ್ದು, ಆ ದೃಶ್ಯಗಳನ್ನು ಚೀನಾದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರಪ್ರಸಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದು ಸಂಘಟಿತ ತಪ್ಪು ಮಾಹಿತಿ ಅಭಿಯಾನದ ಭಾಗವಾಗಿ ಕಂಡುಬರುತ್ತದೆ. ಈ ವ್ಲಾಗರ್ಗಳು ಢಾಕಾದಲ್ಲಿ ಭೌತಿಕವಾಗಿ ನೆಲೆಸಿದ್ದರೂ, ಹೊಸದಿಲ್ಲಿಯಿಂದ ಪ್ರಸಾರ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಾ ಜನರ ಮನೆಗಳಿಗೆ ಪ್ರವೇಶಿಸಿ ವೀಡಿಯೊಗಳನ್ನು ಚಿತ್ರೀಕರಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಚೀನಾದ ಸಿಚುವಾನ್ ಪ್ರಾಂತ್ಯದವರೆಂದು ಹೇಳಿಕೊಂಡಿರುವ 'ಮಿಯಾನ್ಮಿಯಾನ್' ಎಂದು ಗುರುತಿಸಲಾದ ಚೀನೀ ಮಹಿಳೆಯೊಬ್ಬರು ನವೆಂಬರ್ 1ರಂದು ಢಾಕಾದ ಉತ್ತರ ಸೆಕ್ಟರ್ 12ರ ಕಾಲುವೆಯ ಪಕ್ಕದಿಂದ ನೇರಪ್ರಸಾರ ಮಾಡಿದ್ದರು. ಅವರು ತಮ್ಮ ಆನ್ ಲೈನ್ ಪ್ರೇಕ್ಷಕರಿಗೆ ಈ ಪ್ರದೇಶವನ್ನು 'ಹೊಸದಿಲ್ಲಿಯೆಂದು' ಪರಿಚಯಿಸಿದ್ದರು. ಅಲ್ಲಿನ ವಸತಿ ಕಟ್ಟಡಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಕೊಳಕು, ಅಭಿವೃದ್ಧಿಯಾಗದ ಮತ್ತು ಅನೈರ್ಮಲ್ಯದಿಂದ ಕೂಡಿವೆ ಎಂದು ಹೇಳಿದ್ದರು ಎಂದು ವರದಿಯಾಗಿದೆ.
“ಇದು ಹೊಸದಿಲ್ಲಿ. ಇಲ್ಲಿನ ಮನೆಗಳು ಅತ್ಯಂತ ಕೊಳಕಾಗಿವೆ. ಟಿನ್ ನಿಂದ ನಿರ್ಮಿಸಲಾದ ಛಾವಣಿಯ ಮನೆಗಳ ಒಳಗೆ ಫ್ಯಾನ್ ಕೂಡ ಇಲ್ಲ. ಈ ಪ್ರದೇಶ ಸಾಕಷ್ಟು ಅಭಿವೃದ್ಧಿಯಾಗಿಲ್ಲ. ಕೊಳಕು ಮತ್ತು ಅನೈರ್ಮಲ್ಯದಿಂದ ಕೂಡಿದೆ. ಇಲ್ಲಿ ಕಾನೂನು ಮತ್ತು ಸುವ್ಯವಸ್ಥೆಯೂ ಕಳಪೆಯಾಗಿದೆ” ಎಂದು ಅವರು ಹೇಳಿರುವುದಾಗಿ ಬಾಂಗ್ಲಾದೇಶದ ಪ್ರಮುಖ ದಿನಪತ್ರಿಕೆ 'ಪ್ರೋಥೋಮ್ ಆಲೋ' ಉಲ್ಲೇಖಿಸಿದೆ.
ಇನ್ನೊಂದು ಸಂದರ್ಭದಲ್ಲಿ, ಢಾಕಾದ ಟೆಕ್ಪರಾ ಪ್ರದೇಶದ ಚಹಾ ಅಂಗಡಿಯೊಂದರಿಂದ ಚೀನೀ ಪ್ರಜೆಯೊಬ್ಬರು ನೇರಪ್ರಸಾರ ಮಾಡುತ್ತಾ, ಸ್ಥಳೀಯರು ಕುಡಿಯುವ ಚಹಾವನ್ನು 'ಹಸುವಿನ ಮೂತ್ರ' ಬಳಸಿ ತಯಾರಿಸಲಾಗುತ್ತದೆ ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಕಂಡುಬಂದಿದೆ.
“ನೋಡಿ, ಅವರು ಚಹಾ ಕುಡಿಯುತ್ತಿದ್ದಾರೆ. ಇದು ಯಾವ ರೀತಿಯ ಚಹಾ ಇರಬಹುದು? ಇದು ಗೋಮೂತ್ರದ ಚಹಾ. ಅವರು ಗೋಮೂತ್ರದ ಚಹಾ ಕುಡಿಯುತ್ತಾರೆ” ಎಂದು ಹೇಳಿರುವುದಾಗಿ 'ಪ್ರೋಥೋಮ್ ಆಲೋ' ವರದಿ ಮಾಡಿದೆ.
ಚೀನೀ ವ್ಲಾಗರ್ ಗಳ ನೇರಪ್ರಸಾರಗಳಲ್ಲಿ ಸ್ಥಳೀಯ ನಿವಾಸಿಗಳ ಜೀವನಶೈಲಿಯನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ. ಕಳಪೆ ನೈರ್ಮಲ್ಯ, ಸ್ವಚ್ಛತೆಯ ಕೊರತೆ ಮತ್ತು ಕಳಪೆ ಜೀವನಮಟ್ಟದ ಬಗ್ಗೆ ಪದೇಪದೇ ಉಲ್ಲೇಖಿಸಲಾಗಿದೆ. ಈ ಚಿತ್ರಣವು ಅಂತರರಾಷ್ಟ್ರೀಯ ಪ್ರೇಕ್ಷಕರಲ್ಲಿ ಭಾರತದ ಬಗ್ಗೆ ನಕಾರಾತ್ಮಕ ಗ್ರಹಿಕೆ ಮೂಡಿಸಲು ಮೋಸಗೊಳಿಸುವ ಆನ್ ಲೈನ್ ಕಂಟೆಂಟ್ ಬಳಸಿಕೊಳ್ಳುತ್ತಿರುವ ಬಗ್ಗೆ ಕಳವಳ ಹುಟ್ಟುಹಾಕಿದೆ. ಚೀನೀ ಪ್ರಜೆಗಳು ಸಂಘಟಿತವಾಗಿ ಭಾರತ ವಿರೋಧಿ ಅಭಿಯಾನ ನಡೆಸುತ್ತಿರುವುದನ್ನು ಇದು ಸೂಚಿಸುತ್ತದೆ.






