ಸಹಾಯಕ್ಕಾಗಿ ಅಂಗಲಾಚುತ್ತಿದ್ದಾಗ ಜನರು ವೀಡಿಯೋ ಮಾಡುತ್ತಿದ್ದರು, ಇದೆಂಥಾ ವ್ಯವಸ್ಥೆ?

Photo Credit : NDTV
ನೋಯ್ಡಾ: ನೀರಿನಿಂದ ತುಂಬಿದ್ದ ಹೊಂಡಕ್ಕೆ ಕಾರು ಬಿದ್ದು, ಸಾಫ್ಟ್ವೇರ್ ಇಂಜಿನಿಯರ್ ಒಬ್ಬರು ಸಾವಿಗೀಡಾದ ಘಟನೆ ನೋಯ್ಡಾದಲ್ಲಿ ನಡೆದಿದ್ದು, ರಕ್ಷಣಾ ವ್ಯವಸ್ಥೆಯ ಸಿದ್ಧತೆ ಮತ್ತು ಸಾರ್ವಜನಿಕರ ನಿರ್ಲಕ್ಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಮೃತರನ್ನು ಯುವರಾಜ್ ಮೆಹ್ತಾ (27) ಎಂದು ಗುರುತಿಸಲಾಗಿದೆ. ಅವರು ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್. ಕಳೆದ ಶುಕ್ರವಾರ (ಜನವರಿ 16) ಗುರುಗ್ರಾಮ್ ನಲ್ಲಿರುವ ಕಚೇರಿಯಿಂದ ನೋಯ್ಡಾದ ಸೆಕ್ಟರ್ 150 ರ ಟಾಟಾ ಯುರೇಕಾ ಪಾರ್ಕ್ನಲ್ಲಿರುವ ತಮ್ಮ ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮುಂಜಾನೆ ದಟ್ಟ ಮಂಜಿನ ಕಾರಣದಿಂದ ಮೆಹ್ತಾ ಅವರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ನೀರಿನಿಂದ ತುಂಬಿದ್ದ ಹೊಂಡಕ್ಕೆ ಬಿದ್ದಿದೆ. ಕಾರಿನ ಮೇಲೆ ಏರಿ ನಿಂತು ಅವರು ಸಹಾಯಕ್ಕಾಗಿ ಕೂಗಿದರೂ ಯಾರೊಬ್ಬರೂ ನೆರವಿಗೆ ಬರಲಿಲ್ಲ. ಈ ಮಧ್ಯೆ ಅವರು ತಮ್ಮ ತಂದೆಗೆ ಕರೆ ಮಾಡಿ ಸಹಾಯಕ್ಕೆ ಮನವಿ ಮಾಡಿಕೊಂಡಿದ್ದರು. ಸ್ಥಳದಲ್ಲಿದ್ದ ಜನರು ಯಾರಾದರೂ ಸಹಾಯ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಗಂಟೆಗಳ ಕಾಲ ಕಾಯುತ್ತಿದ್ದ ಮೆಹ್ತಾ, ಕೊನೆಗೆ ನೆರವು ದೊರೆಯದೆ ನೀರಿನಲ್ಲಿ ಮುಳುಗಿ ಸಾವಿಗೀಡಾದರು.
ಪೊಲೀಸರ ಪ್ರಕಾರ, ಮೆಹ್ತಾ ಗ್ರ್ಯಾಂಡ್ ವಿಟಾರ ಕಾರನ್ನು ಚಲಾಯಿಸುತ್ತಿದ್ದರು. ಸೆಕ್ಟರ್ 150ರಲ್ಲಿ ತಿರುವು ತೆಗೆದುಕೊಳ್ಳುವಾಗ ಕಾರು ಕಾಲುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು, ನೀರು ತುಂಬಿದ್ದ ಹೊಂಡಕ್ಕೆ ಬಿದ್ದಿತು. ಅಲ್ಲಿಂದ ಹೇಗೋ ಕಾರಿನ ಮೇಲೆ ಹತ್ತಿಕೊಂಡ ಮೆಹ್ತಾ ತಮ್ಮ ತಂದೆಗೆ ಕರೆ ಮಾಡಿದ್ದರು.
“ನನ್ನ ಮಗ ಮಧ್ಯರಾತ್ರಿ ನನಗೆ ಕರೆ ಮಾಡಿದ್ದ. ‘ಅಪ್ಪಾ, ನಾನು ಸಿಲುಕಿಕೊಂಡಿದ್ದೇನೆ, ಕಾರು ಚರಂಡಿಗೆ ಬಿದ್ದಿದೆ’ ಎಂದು ಹೇಳಿದ್ದ,” ಎಂದು ಮೆಹ್ತಾ ಅವರ ತಂದೆ ರಾಜ್ ಕುಮಾರ್ ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ, ಮೆಹ್ತಾ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಹಾಯಕ್ಕಾಗಿ ಕೂಗುತ್ತಲೇ ಇದ್ದರು. ಈ ನಡುವೆ ಕಾರು ನಿಧಾನವಾಗಿ ನೀರಿನಲ್ಲಿ ಮುಳುಗಿತು. ದಟ್ಟ ಮಂಜಿನ ಕಾರಣದಿಂದ ಪೊಲೀಸರು ಸ್ಥಳಕ್ಕೆ ತಲುಪಿದರೂ, ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ರಕ್ಷಣಾ ಪ್ರಯತ್ನಗಳು ವಿಫಲವಾದ ಬಳಿಕ, ಶನಿವಾರ ಮುಂಜಾನೆ ಮೆಹ್ತಾ ಪ್ರಾಣ ಕಳೆದುಕೊಂಡರು. ಹಗ್ಗ, ಏಣಿಗಳು ಮತ್ತು ಕ್ರೇನ್ ಗಳ ಸಹಾಯದಿಂದ ರಕ್ಷಣಾ ಕಾರ್ಯ ನಡೆಸಲಾಯಿತು. ಮಂಜಿನ ಕಾರಣದಿಂದ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪುವುದರಲ್ಲಿ ವಿಳಂಬವಾಯಿತು ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುಮಾರು 90 ನಿಮಿಷಗಳ ಕಾಲ ಕಾರು ಸಂಪೂರ್ಣವಾಗಿ ಮುಳುಗುವವರೆಗೆ ಮೆಹ್ತಾ ಅದರ ಮೇಲೆಯೇ ಇದ್ದರು.
ಶನಿವಾರ ಬೆಳಗಿನ ಜಾವ 1.45ರ ಸುಮಾರಿಗೆ ಸ್ಥಳಕ್ಕೆ ತಲುಪಿದ ಗಿಗ್ ಏಜೆಂಟ್ ಮೊನಿಂದರ್, ಎಲ್ಲರೂ ಮೂಕಪ್ರೇಕ್ಷಕರಾಗಿ ನಿಂತು ನೋಡುತ್ತಿರುವುದನ್ನು ಕಂಡು ತಾವೇ ಹೊಂಡಕ್ಕೆ ಇಳಿದು ಮೆಹ್ತಾನನ್ನು ರಕ್ಷಿಸಲು ಪ್ರಯತ್ನಿಸಿದ್ದರು.
“ನಾನು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ನೀರಿಗೆ ಇಳಿದೆ. ಯುವಕ ಮತ್ತು ಕಾರಿಗಾಗಿ ಸುಮಾರು 30 ನಿಮಿಷಗಳ ಕಾಲ ಹುಡುಕಿದೆ. ಕೇವಲ ಹತ್ತು ನಿಮಿಷಗಳ ಮುಂಚೆಯೇ ಇಂತಹ ನೆರವು ಸಿಕ್ಕಿದ್ದರೆ ಮೆಹ್ತಾರನ್ನು ಉಳಿಸಬಹುದಿತ್ತು,” ಎಂದು ಮೊನಿಂದರ್ ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಅಗ್ನಿಶಾಮಕ ದಳ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಹಲವಾರು ಗಂಟೆಗಳ ಶೋಧದ ಬಳಿಕ ಮೆಹ್ತಾರ ಮೃತದೇಹ ಪತ್ತೆಯಾಯಿತು. ರಕ್ಷಣಾ ಕಾರ್ಯಾಚರಣೆ ಬೆಳಿಗ್ಗೆ 5 ಗಂಟೆಯವರೆಗೆ ಮುಂದುವರಿದಿತ್ತು ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರದೀಪ್ ಕುಮಾರ್ ಚೌಬೆ ತಿಳಿಸಿದ್ದಾರೆ.
ರಕ್ಷಣಾ ತಂಡಗಳು ಸಕಾಲಿಕವಾಗಿ ಪ್ರತಿಕ್ರಿಯಿಸಲು ವಿಫಲವಾದವು ಎಂದು ಮೆಹ್ತಾರ ಸ್ನೇಹಿತರು ಆರೋಪಿಸಿದ್ದಾರೆ. ರಕ್ಷಣಾ ತಂಡಗಳು ಬೆಳಗಿನ ಜಾವ 2.30ರ ಸುಮಾರಿಗೆ ಬಂದರೂ, 3.20ರವರೆಗೆ ನೀರಿಗೆ ಇಳಿಯಲಿಲ್ಲ ಎಂದು ಸ್ನೇಹಿತ ಪಂಕಜ್ ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಕಡಿಮೆ ಗೋಚರತೆ ಮತ್ತು ಹೆಚ್ಚಿನ ವೇಗ ಅಪಘಾತಕ್ಕೆ ಸಂಭವನೀಯ ಕಾರಣಗಳಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು ಆರರಿಂದ ಏಳು ಅಡಿ ಅಗಲದ ದೊಡ್ಡ ಹೊಂಡವಿದ್ದು, ಗೋಚರತೆ ಕಡಿಮೆ ಇದ್ದುದರಿಂದ ಚಾಲಕ ನಿಯಂತ್ರಣ ಕಳೆದುಕೊಂಡಂತೆ ತೋರುತ್ತದೆ. ಕಾರು ತಡೆಗೋಡೆಗೆ ಡಿಕ್ಕಿ ಹೊಡೆದು ಬಳಿಕ ನೀರಿನ ಹೊಂಡಕ್ಕೆ ಬಿದ್ದಿದೆ. ಕಾರು ಸಂಪೂರ್ಣವಾಗಿ ಹೇಗೆ ಮುಳುಗಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸಹಾಯಕ ಪೊಲೀಸ್ ಆಯುಕ್ತ ಹೇಮಂತ್ ಉಪಾಧ್ಯಾಯ ತಿಳಿಸಿದ್ದಾರೆ.
ಮೆಹ್ತಾರ ಕಾರು ಉರುಳಿ ಬಿದ್ದ ಆಳವಾದ ಹೊಂಡದ ಮಾಲೀಕತ್ವ ಹೊಂದಿದ್ದ ಎರಡು ಕಟ್ಟಡ ಸಂಸ್ಥೆಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಡೆವಲಪರ್ ಗಳಾದ ಲೋಟಸ್ ಗ್ರೀನ್ಸ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಮತ್ತು ಎಮ್ಝಡ್ ವಿಜ್ಟೌನ್ ಪ್ಲಾನರ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ಗಳು 105 (ಶಿಕ್ಷಾರ್ಹ ನರಹತ್ಯೆ), 106 (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಮತ್ತು 125 (ಜೀವಕ್ಕೆ ಅಪಾಯ ಉಂಟುಮಾಡುವ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜನವರಿ 19ರಂದು ನಡೆದ ಶವಪರೀಕ್ಷೆ ವರದಿಯಲ್ಲಿ, ನೀರಿನಲ್ಲಿ ಮುಳುಗಿ ಉಸಿರುಗಟ್ಟಿದ ಪರಿಣಾಮ ಹೃದಯಾಘಾತ ಸಂಭವಿಸಿ ಮೆಹ್ತಾರ ಸಾವು ಸಂಭವಿಸಿದೆ ಎಂದು ತಿಳಿಸಲಾಗಿದೆ. ಮಂಗಳವಾರ ಎಮ್ಝಡ್ ವಿಜ್ಟೌನ್ ಪ್ಲಾನರ್ಸ್ ಪ್ರೈವೇಟ್ ಲಿಮಿಟೆಡ್ನ ಪ್ರವರ್ತಕ ಅಭಯ್ ಕುಮಾರ್ ಅವರನ್ನು ಸೆಕ್ಟರ್ 150 ಪ್ರದೇಶದಿಂದ ಬಂಧಿಸಲಾಗಿದೆ.
ನೀರು ತುಂಬಿದ್ದ ಹೊಂಡದಿಂದ ಕಾರನ್ನು ಪತ್ತೆಹಚ್ಚಲು ಮಂಗಳವಾರ NDRF ತಂಡ ಸ್ಥಳಕ್ಕೆ ಭೇಟಿ ನೀಡಿತು. ಸುಮಾರು ಆರು ಗಂಟೆಗಳ ನಂತರ ಸಂಜೆ 6.30ರ ಸುಮಾರಿಗೆ ಕಾರನ್ನು ಹೊರತೆಗೆಯಲಾಯಿತು.
ಮೆಹ್ತಾರ ಸಾವಿಗೆ ಕಾರಣವಾದ ಸಂದರ್ಭಗಳ ತನಿಖೆಗೆ ಮೂವರು ಸದಸ್ಯರ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ತಂಡ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು, ಮೆಹ್ತಾರ ತಂದೆಯನ್ನು ಭೇಟಿ ಮಾಡಿದೆ. SIT ಸದಸ್ಯರು ನೋಯ್ಡಾ ಪ್ರಾಧಿಕಾರದ ಸೆಕ್ಟರ್ 6 ಕಚೇರಿಗೆ ಭೇಟಿ ನೀಡಿ ಪೊಲೀಸ್, ಆಡಳಿತ ಮತ್ತು SDRF ಅಧಿಕಾರಿಗಳನ್ನು ಪ್ರತ್ಯೇಕವಾಗಿ ಭೇಟಿಯಾಗಿ ದಾಖಲೆ ಸಲ್ಲಿಸುವಂತೆ ಸೂಚಿಸಿದ್ದಾರೆ.
ರಕ್ಷಣೆಗೆ ಧಾವಿಸಿದ ಮೊನಿಂದರ್ ಹೇಳಿದ್ದೇನು?
“ನಾನು ಬೆಳಗಿನ ಜಾವ 1.45ರ ಸುಮಾರಿಗೆ ಸ್ಥಳಕ್ಕೆ ತಲುಪಿದಾಗ, SDRF ಸಿಬ್ಬಂದಿ ಏಣಿಯ ಮೇಲೆ ಕುಳಿತಿರುವುದನ್ನು ನೋಡಿದೆ. ನೀರು ತುಂಬಾ ತಣ್ಣಗಿದ್ದು, ಒಳಗೆ ಕಬ್ಬಿಣದ ರಾಡ್ಗಳಿರುವುದರಿಂದ ಹೊಂಡಕ್ಕೆ ಇಳಿಯಲಿಲ್ಲ ಎಂದು ಅವರು ಹೇಳುತ್ತಿದ್ದರು. ನಾನು ತಲುಪುವ ಹತ್ತು ನಿಮಿಷಗಳ ಮುಂಚೆಯೇ ಆ ವ್ಯಕ್ತಿ ನೀರಿನಲ್ಲಿ ಮುಳುಗಿದ್ದರು.
ನಾನು SDRF ಸಿಬ್ಬಂದಿಗೆ ಪಕ್ಕಕ್ಕೆ ಸರಿಯುವಂತೆ ಹೇಳಿ, ನೀರಿಗೆ ಇಳಿಯುವುದಾಗಿ ತಿಳಿಸಿದೆ. ಅವರು ಬದಿಗೆ ಸರಿದರು. ನಾನು ಬಟ್ಟೆಗಳನ್ನು ತೆಗೆದು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಗುಂಡಿಗೆ ಧುಮುಕಿದೆ. ಕನಿಷ್ಠ 30 ನಿಮಿಷಗಳ ಕಾಲ ಹುಡುಕಿದರೂ ಕಾರು ಅಥವಾ ವ್ಯಕ್ತಿ ಪತ್ತೆಯಾಗಲಿಲ್ಲ.
ನಾನು ಬೆಳಿಗ್ಗೆ 5.30ರವರೆಗೆ ಸ್ಥಳದಲ್ಲಿದ್ದೆ. ಆ ವೇಳೆಯೂ ಯುವರಾಜ್ ಅವರ ದೇಹ ಅಥವಾ ಕಾರು ಪತ್ತೆಯಾಗಿರಲಿಲ್ಲ. ನಂತರ ಮನೆಗೆ ಹಿಂತಿರುಗಿದೆ. ಅವರ ಸಾವಿಗೆ ಸರ್ಕಾರಿ ಇಲಾಖೆಗಳೇ ಕಾರಣ,” ಎಂದು ಮೊನಿಂದರ್ ಆರೋಪಿಸಿದ್ದಾರೆ.
“ಪೊಲೀಸ್ ತಂಡದಲ್ಲಿ ತಕ್ಷಣ ರಕ್ಷಣೆಗೆ ಬಳಸಬಹುದಾದ ತುರ್ತು ಉಪಕರಣಗಳೇ ಇರಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಬಳಿ ಸುರಕ್ಷತಾ ಜಾಕೆಟ್ ಮತ್ತು ಹಗ್ಗಗಳಿದ್ದರೂ, ಅವರು ನೀರಿಗೆ ಇಳಿಯಲಿಲ್ಲ. ನಾನು ಸಹಾಯಕ್ಕೆ ಮುಂದಾದಾಗ ‘ಈಜು ಬರುತ್ತಾ?’ ಎಂದು ಕೇಳಿ, ನಂತರ ಮಾತ್ರ ಅವಕಾಶ ನೀಡಿದರು. ನನ್ನನ್ನು ಹೊರತುಪಡಿಸಿ ಯಾರೂ ಹೊಂಡಕ್ಕೆ ಇಳಿಯಲಿಲ್ಲ,” ಎಂದು ಮೋನಿಂದರ್ ತಿಳಿಸಿದ್ದಾರೆ.
ಹೊಂಡದ ಪ್ರದೇಶ ಅತ್ಯಂತ ಅಪಾಯಕಾರಿ ಹಾಗೂ ಮಂಜಿನಲ್ಲಿ ಯಾರಾದರೂ ಸುಲಭವಾಗಿ ಬೀಳುವ ಸಾಧ್ಯತೆ ಇದೆ. ವಾಹನ ತಡೆಗಟ್ಟುವ ಗೋಡೆಯೂ ಇಲ್ಲ, ಹೊಂಡ ಸಂಪೂರ್ಣವಾಗಿ ತೆರೆದ ಸ್ಥಿತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಮತ್ತೊಂದೆಡೆ, ಪೊಲೀಸರು ತನಗೆ ‘ಸ್ಕ್ರಿಪ್ಟ್’ ನೀಡಿದ್ದಾರೆ ಎಂದು ಮೊನಿಂದರ್ ಆರೋಪಿಸಿದ್ದಾರೆ. “ಹಿರಿಯ ಅಧಿಕಾರಿಗಳು ಮಾತನಾಡಲು ಬಯಸುತ್ತಾರೆ ಎಂದು ಕರೆ ಮಾಡಿ, ನಂತರ ನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣೆ ಬಳಿ ಕರೆದೊಯ್ದು ಮಾಧ್ಯಮಗಳೊಂದಿಗೆ ಮಾತನಾಡಿದ್ದಕ್ಕಾಗಿ ಗದರಿಸಿದರು. ಪೊಲೀಸರು ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಹೇಳುವಂತೆ ನನ್ನಿಂದ ಹೇಳಿಕೆಗಳನ್ನು ಪಡೆದು ವೀಡಿಯೋ ದಾಖಲಿಸಿದರು. ನಾನು ಹೆದರಿದ್ದರಿಂದ ಒಪ್ಪಿಕೊಂಡೆ. ಆದರೆ ನಾನು ಪ್ರಕರಣದ ಏಕೈಕ ಪ್ರತ್ಯಕ್ಷದರ್ಶಿ. ಸತ್ಯದ ಪರ ನಿಲ್ಲಲು ನಿರ್ಧರಿಸಿದ್ದೇನೆ,” ಎಂದು ಅವರು ಹೇಳಿದ್ದಾರೆ.
‘ಸಹಾಯಕ್ಕಾಗಿ ಬೇಡುತ್ತಿದ್ದಾಗ ಜನರು ವಿಡಿಯೊ ಮಾಡುತ್ತಿದ್ದರು’
ಮಗ ಸಹಾಯಕ್ಕಾಗಿ ಕೂಗುತ್ತಿದ್ದಾಗ ಸ್ಥಳದಲ್ಲಿದ್ದ ಹಲವರು ನೆರವಿಗೆ ಬಾರದೇ, ವಿಡಿಯೊ ಮಾಡುತ್ತಿದ್ದರು ಎಂದು ಯುವರಾಜ್ ಅವರ ತಂದೆ ರಾಜ್ ಕುಮಾರ್ ಮೆಹ್ತಾ ಆರೋಪಿಸಿದ್ದಾರೆ.
“ಪ್ರತಿ ಬಾರಿ ಫೋನ್ನಲ್ಲಿ ಮಾತನಾಡುವಾಗಲೂ ಅವನು ‘ಪಾಪಾ ಬಚಾವೋ’ ಎಂದು ಹೇಳುತ್ತಿದ್ದ. ಹತ್ತಿರದ ಜನರು ಕೇಳುವಂತೆ ‘ಸಹಾಯ ಮಾಡಿ’ ಎಂದು ಕೂಗುತ್ತಿದ್ದ. ಆದರೆ ಜನರು ಮೂಕಪ್ರೇಕ್ಷಕರಾಗಿ ನಿಂತರು. ಪೊಲೀಸರು, ಅಗ್ನಿಶಾಮಕ ದಳ ಮತ್ತು SDRF ಇದ್ದರೂ ತಕ್ಷಣದ ರಕ್ಷಣಾ ಪ್ರಯತ್ನ ನಡೆಯಲಿಲ್ಲ. ತರಬೇತಿ ಪಡೆದ ಡೈವರ್ ಗಳನ್ನು ಸಮಯಕ್ಕೆ ನಿಯೋಜಿಸಿದ್ದರೆ ನನ್ನ ಮಗ ಬದುಕಿರುತ್ತಿದ್ದ,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸೆಕ್ಟರ್ 150ರ ನಿವಾಸಿಗಳು ಹೊಂಡದ ಬಳಿ ಬ್ಯಾರಿಕೇಡ್ ಮತ್ತು ರಿಫ್ಲೆಕ್ಟರ್ ಅಳವಡಿಸುವಂತೆ ನೋಯ್ಡಾ ಪ್ರಾಧಿಕಾರವನ್ನು ಕೇಳಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ಘಟನೆ ತುರ್ತು ಸೇವೆಗಳ ಪ್ರತಿಕ್ರಿಯೆ, ಸಿದ್ಧತೆ ಮತ್ತು ಜವಾಬ್ದಾರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ತರಬೇತಿ ಪಡೆದ ರಕ್ಷಣಾ ಸಿಬ್ಬಂದಿ ದಡದಲ್ಲೇ ನಿಂತಿದ್ದರೆ, ಗಿಗ್ ಏಜೆಂಟ್ ಒಬ್ಬರು ಜೀವದ ಹಂಗು ತೊರೆದು ರಕ್ಷಣೆಗೆ ಇಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ವ್ಯವಸ್ಥೆಯಲ್ಲಿನ ಲೋಪಗಳನ್ನು ಬಹಿರಂಗಪಡಿಸುತ್ತದೆ.







