ಜೀವ ಪಣಕ್ಕಿಟ್ಟು ರೀಲ್ಸ್, ಸೆಲ್ಫಿ ತೆಗೆಯುವವರೇ ಎಚ್ಚರ!
ಕ್ಷಿಪ್ರ ಖ್ಯಾತಿಯು ನಮ್ಮ ಜೀವನ, ನಮ್ಮ ಕುಟುಂಬ ನಮ್ಮ ಮೇಲಿಟ್ಟಿರುವ ಪ್ರೀತಿಗೆ ಸಾಟಿಯಲ್ಲ

ಸಾಂದರ್ಭಿಕ ಚಿತ್ರ | PC : fotor.com
ಯುವಜನರ ರೀಲ್ಸ್ ಶೋಕಿ ರಿಯಲ್ ಲೈಫಿಗೆ ಸಂಚಕಾರ ತರುತ್ತಿದೆ. ಯುವಕರು, ಯುವತಿಯರು ರೀಲ್ಸ್ ಹುಚ್ಚಲ್ಲಿ ಪ್ರಾಣ ಕಳಕೊಳ್ಳುವ ದಾರುಣ ಘಟನೆಗಳು ಅಲ್ಲಲ್ಲಿ ಎಂಬಂತೆ ನಡೆಯುತ್ತಿವೆ. ಇನ್ಸ್ಟಾಗ್ರಾಮ್ ರೀಲ್ ಚಿತ್ರೀಕರಿಸುವಾಗ ಪ್ರಪಾತಕ್ಕೆ ಜಾರಿ ಬಿದ್ದು ಮುಂಬೈನ ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಹಾಗೂ ಪ್ರವಾಸಿ ವ್ಲಾಗರ್ ಆನ್ವಿ ಕಾಮ್ದಾರ್ ಮೃತಪಟ್ಟಿರುವ ಘಟನೆ ತಡವಾಗಿ ವರದಿಯಾಗಿದೆ.
ಮಹಾರಾಷ್ಟ್ರದ ರಾಯ್ಗಢ ಜಿಲ್ಲೆ ಬಳಿಯ ಕುಂಭೆ ಜಲಪಾತದ ಬಳಿ ಮಂಗಳವಾರ ಈ ದುರಂತ ನಡೆದಿದೆ. ವರದಿಗಳ ಪ್ರಕಾರ, ಆನ್ವಿ ಹಾಗೂ ಅವರ ಸ್ನೇಹಿತರ ತಂಡವೊಂದು ಪ್ರವಾಸಕ್ಕೆಂದು ಪ್ರಖ್ಯಾತ ಕುಂಭೆ ಜಲಪಾತದ ಬಳಿ ತೆರಳಿತ್ತು. ಆಕೆ ವಿಡಿಯೊ ಚಿತ್ರೀಕರಿಸುವಾಗ ಆಕಸ್ಮಿಕವಾಗಿ ಜಾರಿ, 300 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದಾರೆ.
ಈ ಕುರಿತು ಆಕೆಯ ಗೆಳಯರು ಕೂಡಲೇ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ರಕ್ಷಣಾ ತಂಡಗಳಿಗೆ ಮಾಹಿತಿ ರವಾನಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡವು ಸತತ ಆರು ಗಂಟೆಗಳ ಕಾರ್ಯಾಚರಣೆ ನಡೆಸಿ, ಆಕೆಯನ್ನು ಮೇಲೆ ತಂದರು. ಆದರೆ, ಚಿಕಿತ್ಸೆಗಾಗಿ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದಾಗ, ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಆನ್ವಿ ಕಾಮ್ದಾರ್ ಪ್ರವಾಸಿ ಇನ್ಫ್ಲುಯೆನ್ಸರ್ ಆಗಿದ್ದು, ಉಳಿದುಕೊಳ್ಳಬಹುದಾದ ಸ್ಥಳಗಳು, ಪ್ರವಾಸಿ ಸ್ಥಳಗಳು ಹಾಗೂ ಐಷಾರಾಮಿ ತಂಗುದಾಣಗಳ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಆಕೆ ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾಗಿದ್ದು, ಪ್ರತಿಷ್ಠಿತ ಡೆಲಾಯ್ಟ್ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಇನ್ಸ್ಟಾಗ್ರಾಮ್ ಖಾತೆಯಲ್ಲಿ 2.5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಆನ್ವಿ ಕಾಮ್ದಾರ್, ತಮ್ಮ ಮಾನ್ಸೂನ್ ಪ್ರವಾಸಗಳಿಗೆ ಪ್ರಸಿದ್ಧರಾಗಿದ್ದರು.
ಇತ್ತೀಚೆಗೆ ರಾಜಸ್ಥಾನದ ಪಾಲಿಯಲ್ಲಿ ರೈಲ್ವೆ ಹಳಿ ಮೇಲೆಯೇ ಫೋಟೋ ಶೂಟ್ ಮಾಡುವ ವೇಳೆ ರೈಲು ಬಂದ ಕಾರಣ ಪ್ರಾಣ ಉಳಿಸಿಕೊಳ್ಳಲು ದಂಪತಿಯೊಂದು 90 ಅಡಿಯಿರುವ ಕಂದಕಕ್ಕೆ ಹಾರಿದ ವಿಡಿಯೋ ವೈರಲ್ ಆಗಿತ್ತು. ಅವರಿಗೆ ಗಂಭೀರ ಗಾಯಗಳಾಗಿದ್ದವು.
ಕಳೆದ ತಿಂಗಳು ಮಹಾರಾಷ್ಟ್ರದ ಈ ಹಿಂದಿನ ಔರಂಗಾಬಾದ್ ಈಗಿನ ಛತ್ರಪತಿ ಸಂಭಾಜಿನಗರ್ ನಲ್ಲಿ ಗುಡ್ಡ ಪ್ರದೇಶವೊಂದರಲ್ಲಿ ಕಾರಿನಲ್ಲಿ ಡ್ರೈವಿಂಗ್ ಮಾಡುತ್ತಾ ರೀಲ್ಸ್ ಮಾಡುತ್ತಿದ್ದಾಗ ತಪ್ಪಾಗಿ ರಿವರ್ಸ್ ಗೇರ್ ಹಾಕಿದ್ದರಿಂದ ಕಾರು ಕಣಿವೆಗೆ ಬಿದ್ದು 23 ವರ್ಷದ ಯುವತಿ ಮೃತಪಟ್ಟಿದ್ದರು.
ಹೀಗೆ ರೀಲ್ಸ್ ಹುಚ್ಚಲ್ಲಿ ಸಾವಿಗೀಡಾಗುತ್ತಿರುವ, ಗಾಯಗೊಳ್ಳುತ್ತಿರುವ ವರದಿಗಳು ದೇಶದ ವಿವಿಧೆಡೆಗಳಿಂದ ಬರುತ್ತಲೇ ಇವೆ. ಈಗ ಯುವಜನರು ರೀಲ್ಸ್ ಮತ್ತು ಸೆಲ್ಫಿ ತೆಗೆದುಕೊಳ್ಳುವುದು ರೂಢಿಯಾಗಿದೆ. ಆದರೆ ಈ ರೀತಿ ಮಾಡುವಾಗ ಸಾಮಾನ್ಯ ಜ್ಞಾನ ಮತ್ತು ಸುರಕ್ಷತೆ ಮರೆತು ಹೋಗೋದು ದುರಂತಗಳಿಗೆ ಕಾರಣವಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್, ಲೈಕ್, ಕಮೆಂಟ್ ಹೆಚ್ಚಿಸಲು ಜೀವ ಪಣಕ್ಕಿಟ್ಟು, ಅಪಾಯ ಮೈಮೇಲೆ ಎಳೆದುಕೊಂಡು ರೀಲ್ಸ್ ಮಾಡೋದು, ಎಲ್ಲೆಲ್ಲಿಂದ ಜಾರಿ ಬೀಳೋದು ಜಾಣತನವಲ್ಲ. ರೀಲ್ಸ್ ಗಳು ತರುವ ಕ್ಷಿಪ್ರ ಖ್ಯಾತಿ, ಸುಲಭದ ಆದಾಯ ಯಾವುದೂ ನಮ್ಮ ಜೀವನ, ನಮ್ಮ ಕುಟುಂಬ ನಮ್ಮ ಮೇಲಿಟ್ಟಿರುವ ಪ್ರೀತಿಗೆ ಸಾಟಿಯಲ್ಲ. ಸೋಷಿಯಲ್ ಮೀಡಿಯಾಗಳು, ಇನ್ನಿತರ app ಗಳು ನಮ್ಮ ಜೀವನವನ್ನು ಸುಲಭಗೊಳಿಸುವ, ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ದಾರಿಯಾಗಬೇಕೇ ವಿನಃ ಜೀವ ಕಳಕೊಳ್ಳುವ ಸಾಧನ ಆಗಬಾರದು.







