ʼಟ್ರಂಪ್ ಗೆ ಜ್ಞಾನೇಶ್ ಕುಮಾರ್ ಸಿಕ್ಕಿದ್ದರೆ ಸೋಲುತ್ತಿರಲಿಲ್ಲವೇನೋ?ʼ : ಅಮೆರಿಕದ ಫಲಿತಾಂಶ ಮುಂದಿಟ್ಟುಕೊಂಡು ಭಾರತದ ಚುನಾವಣಾ ಆಯೋಗವನ್ನು ವ್ಯಂಗ್ಯವಾಡಿದ ಜನರು!
‘ಟ್ರಂಪ್ ಗೆ ಜ್ಞಾನೇಶ್ ಕುಮಾರ್ ಅವರಂತಹ ಖಡಕ್ ಚುನಾವಣಾ ಮ್ಯಾನೇಜರ್ ಬೇಕಿತ್ತು!’ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ ಗಳ ಸುರಿಮಳೆ

ಟ್ರಂಪ್ , ಜ್ಞಾನೇಶ್ ಕುಮಾರ್ | Photo Credit ; PTI
ಅಮೆರಿಕದ ಚುನಾವಣಾ ಕಣದಲ್ಲಿ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗುತ್ತಿದ್ದಂತೆ, ಅದರ ರಾಜಕೀಯ ಬಿಸಿ ವಾಷಿಂಗ್ಟನ್ ನಿಂದ ದಿಲ್ಲಿಗೂ ತಟ್ಟಿದೆ! ಅಮೆರಿಕದ ಚುನಾವಣಾ ಫಲಿತಾಂಶವನ್ನು ಮುಂದಿಟ್ಟುಕೊಂಡು ಜನರು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವ್ಯಂಗ್ಯವಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ ಗಳು, ವಿಡಂಬನಾತ್ಮಕ ಪೋಸ್ಟ್ ಗಳು ಮತ್ತು ಕಟು ಟೀಕೆಗಳ ಮಹಾಪೂರವೇ ಹರಿದಿದೆ.
ಜಗತ್ತಿನ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರವಾದ ಅಮೆರಿಕದಲ್ಲಿ ಮತ ಎಣಿಕೆ ನಡೆಯುತ್ತಿದ್ದರೆ, ಭಾರತದಲ್ಲಿ ಮಾತ್ರ ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತ ಚರ್ಚೆ ಹೊಸ ತಿರುವು ಪಡೆದುಕೊಂಡಿತ್ತು. ಭಾರತದಲ್ಲಿ ಚುನಾವಣೆಗಳ ಬಳಿಕ ಆಯೋಗದ ಪಕ್ಷಪಾತದ ಧೋರಣೆ, ಮತದಾರರ ಪಟ್ಟಿಯಲ್ಲಿನ ಗೊಂದಲ ಹಾಗೂ ಮತಗಳ್ಳತನದ ಆರೋಪಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಪ್ರಶ್ನೆಗಳನ್ನು ಎತ್ತುತ್ತಿವೆ. ಇದೀಗ ಅಮೆರಿಕದ ಚುನಾವಣಾ ಫಲಿತಾಂಶವನ್ನೇ ಅಸ್ತ್ರವಾಗಿಸಿಕೊಂಡ ಜನರು, ಭಾರತದ ಚುನಾವಣಾ ವ್ಯವಸ್ಥೆಯ ವಿರುದ್ಧ ತಮ್ಮ ವ್ಯಂಗ್ಯದ ಅಸ್ತ್ರ ಪ್ರಯೋಗಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗೆ ಕಾರಣವಾದ ಅಭಿಜಿತ್ ದೀಪ್ಕೆ, ಜ್ಞಾನೇಶ್ ಕುಮಾರ್ ಅವರು ಅಮೆರಿಕದ ಚುನಾವಣಾ ಆಯುಕ್ತರಾಗಿದ್ದರೆ ಟ್ರಂಪ್ ಗೆ ಇಂಥ ದುಸ್ಥಿತಿ ಖಂಡಿತ ಬರುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಟ್ರಂಪ್ ಗೆ ಇಂಥ ಸಂಕಷ್ಟದ ಸಂದರ್ಭದಲ್ಲಿ ಜ್ಞಾನೇಶ್ ಕುಮಾರ್ ಅವರಂತಹ ಒಬ್ಬ ಖಡಕ್ ಚುನಾವಣಾ ಮ್ಯಾನೇಜರ್ ಬೇಕಿತ್ತು ಎಂಬ ಕಮೆಂಟ್ ಗಳೂ ಕ್ಷಣಾರ್ಧದಲ್ಲಿ ವೈರಲ್ ಆಗಿವೆ.
ಪ್ರಜಾಪ್ರಭುತ್ವದ ನೈಜ ಸತ್ವವನ್ನು ನೆನಪಿಸುತ್ತಲೇ ಕಟುವಾದ ವಿಡಂಬನೆ ಮಾಡುವ ‘ದಿ ದೇಶ್ಭಕ್ತ್’ ಖಾತೆಯ ಆಕಾಶ್ ಬ್ಯಾನರ್ಜಿ ಕೂಡ ಈ ಟ್ರೋಲ್ ಸಮರಕ್ಕೆ ಧುಮುಕಿದ್ದಾರೆ. ಜ್ಞಾನೇಶ್ ಕುಮಾರ್ ಅವರನ್ನು ತುರ್ತಾಗಿ ಅಮೆರಿಕಕ್ಕೆ ಕಳುಹಿಸಿಕೊಡಲು ಸಾಧ್ಯವೇ ಎಂದು ಲೇವಡಿ ಮಾಡಿದ್ದಾರೆ.
ಭಾರತದಲ್ಲಿ ಮತಯಂತ್ರಗಳು ಹಾಗೂ ಚುನಾವಣಾ ಆಯೋಗದ ಸುತ್ತ ಸುತ್ತುವ ಅನುಮಾನಗಳನ್ನೇ ಅಸ್ತ್ರವಾಗಿಸಿಕೊಂಡ ಜನರು, ಟ್ರಂಪ್ ಸೋಲಿನ ಮುನ್ಸೂಚನೆ ಸಿಗುತ್ತಿದ್ದಂತೆ ಜ್ಞಾನೇಶ್ ಕುಮಾರ್ ಅವರೇ ಅಮೆರಿಕಕ್ಕೆ ವಿಮಾನವೇರಲು ಸಿದ್ಧರಾಗಿದ್ದಾರೆ ಎಂಬಂತೆ ಬಿಂಬಿಸುವ ಬ್ರೇಕಿಂಗ್ ನ್ಯೂಸ್ ಮೀಮ್ ಗಳನ್ನು ಸೃಷ್ಟಿಸಿ ವೈರಲ್ ಮಾಡಲಾಗಿದೆ.
►ಖರ್ಗೆ ಹೇಳಿಕೆಗೂ ಟ್ರಂಪ್ ಸೋಲಿಗೂ ತಳುಕು!
ಇತ್ತೀಚೆಗಷ್ಟೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ, 'ಮೋದಿ ಕಾ ಬಾಪ್ ಭೀ ಜಾಯೆಗಾ' ಎಂಬ ಕಟು ಮಾತುಗಳನ್ನು ಆಡಿದ್ದರು. ಇದೀಗ ಅಮೆರಿಕದ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ, ಜನರು ಟ್ರಂಪ್ ಸೋಲನ್ನು ಖರ್ಗೆ ಅವರ ಈ ಹೇಳಿಕೆಗೆ ತಳುಕು ಹಾಕಿದ್ದಾರೆ. ಅಮೆರಿಕದಲ್ಲಿ ಮಿತ್ರ ಟ್ರಂಪ್ ಅಧಿಕಾರ ಕಳೆದುಕೊಂಡಿರುವುದನ್ನು 'ಮೋದಿ ಕಾ ಭಾಪ್ ಚಲಾ ಗಯಾ' ಎಂದು ವ್ಯಂಗ್ಯವಾಡಿದ್ದಾರೆ.
ಧ್ರುವೀಕರಣ, ದ್ವೇಷದ ಭಾಷಣಗಳು, ಕೋಮು ವಿಭಜನೆಯ ಅಜೆಂಡಾ ಹಾಗೂ ತನಿಖಾ ಸಂಸ್ಥೆಗಳ ಕೃಪಾಕಟಾಕ್ಷದ ಮೂಲಕ ಭಾರತದಲ್ಲಿ ಬಿಜೆಪಿ ರೂಪಿಸುವ ರಾಜಕೀಯ ತಂತ್ರಗಾರಿಕೆಗೂ, ಅಮೆರಿಕದಲ್ಲಿ ಟ್ರಂಪ್ ಅನುಸರಿಸಿದ ವಿಭಜಕ ಧೋರಣೆಗೂ ಸಾಮ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಹೀಗಾಗಿ ಅಮೆರಿಕದ ಚುನಾವಣಾ ಫಲಿತಾಂಶವನ್ನು ಅವರು ಮಹತ್ವದ ರಾಜಕೀಯ ಬೆಳವಣಿಗೆಯಾಗಿ ನೋಡುತ್ತಿದ್ದಾರೆ.
ಅಮೆರಿಕದಲ್ಲಿ ಧ್ರುವೀಕರಣದ ರಾಜಕಾರಣವನ್ನು ಮತದಾರರು ತಿರಸ್ಕರಿಸಿದ್ದಾರೆ ಎಂಬುದು ಒಂದು ವಾದವಾದರೆ, ಭಾರತದಲ್ಲಿ ಆಡಳಿತಾರೂಢ ಬಿಜೆಪಿಯ ಹಿಂದುತ್ವ ಮತ್ತು ದ್ವೇಷದ ರಾಜಕಾರಣದ ನಡುವೆಯೂ ಚುನಾವಣಾ ಸಂಸ್ಥೆಗಳು ಮೌನವಾಗಿವೆ ಎಂಬುದು ವಿರೋಧ ಪಕ್ಷಗಳ ಪ್ರಮುಖ ಆರೋಪವಾಗಿದೆ.
►‘ನಿಮ್ಮ ತಂತ್ರಜ್ಞಾನವೇ ತಪ್ಪು’ ಎಂದ ಜ್ಞಾನೇಶ್ ಕುಮಾರ್!
ಮೀಮ್ ಕ್ರಿಯೇಟರ್ ಗಳ ಕಲ್ಪನೆ ಇಲ್ಲಿಗೇ ನಿಲ್ಲಲಿಲ್ಲ. ಜ್ಞಾನೇಶ್ ಕುಮಾರ್ ಅವರು ಟ್ರಂಪ್ ಕಡೆಗೆ ನೋಡಿ, 'ನಿಮ್ಮ ತಂತ್ರಜ್ಞಾನವೇ ತಪ್ಪು' ಎಂದು ಹೇಳುತ್ತಿರುವಂತೆ ಚಿತ್ರಿಸಿರುವ ಮೀಮ್ ಗಳು ವೈರಲ್ ಆಗಿವೆ. ಮತ್ತೊಂದೆಡೆ, ಸೋಲಿನಿಂದ ಕಂಗೆಟ್ಟಿರುವ ಟ್ರಂಪ್ EVM ಮತಗಳ್ಳತನದ ವಿರುದ್ಧ ಧರಣಿ ನಡೆಸಲು ನೇರವಾಗಿ ದಿಲ್ಲಿಯ ರಾಮಲೀಲಾ ಮೈದಾನಕ್ಕೆ ಬರುತ್ತಿದ್ದಾರೆ ಎಂಬ ವಿಡಂಬನಾತ್ಮಕ ಸುದ್ದಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ.
ನರೇಂದ್ರ ಮೋದಿ ಮತ್ತು ಟ್ರಂಪ್ ನಡುವಿನ ಆಪ್ತ ಸ್ನೇಹ, 'ಅಬ್ ಕಿ ಬಾರ್ ಟ್ರಂಪ್ ಸರ್ಕಾರ್' ಎಂದು ವಿದೇಶಿ ನೆಲದಲ್ಲೇ ಭಾರತದ ಪ್ರಧಾನಿ ಬಹಿರಂಗವಾಗಿ ಪ್ರಚಾರ ಮಾಡಿದ್ದ ಹಳೆಯ ಘಟನೆಯನ್ನೂ ಜನರು ನೆನಪಿಸಿಕೊಂಡಿದ್ದಾರೆ. ಇಬ್ಬರ ರಾಜಕೀಯ ಶೈಲಿಯೂ ದ್ವೇಷ ಮತ್ತು ಬಹುಸಂಖ್ಯಾತವಾದವನ್ನು ಆಧರಿಸಿದೆ ಎಂದು ಹೋಲಿಕೆ ಮಾಡಿದ್ದಾರೆ.






