ಎಥನಾಲ್ ನ ತೇವಾಂಶ ಹೀರುವ ಗುಣದಿಂದ E20 ಇಂಧನ ಕಲುಷಿತ: ಆತಂಕ ವ್ಯಕ್ತಪಡಿಸಿದ ಪೆಟ್ರೋಲ್ ಬಂಕ್ ಮಾಲೀಕರು

ಎಥನಾಲ್ ಮಿಶ್ರಿತ ಇಂಧನವು (E20) ತೇವಾಂಶ ಮತ್ತು ನೀರನ್ನು ಬೇಗನೆ ಹೀರಿಕೊಳ್ಳುವ ಗುಣ ಹೊಂದಿರುವುದರಿಂದ, ಮಳೆಗಾಲದಲ್ಲಿ ಹಾಗೂ ಕರಾವಳಿ ಪ್ರದೇಶಗಳಲ್ಲಿ ಪೆಟ್ರೋಲ್ ದಾಸ್ತಾನು ಕಲುಷಿತಗೊಳ್ಳುತ್ತಿದೆ ಎಂದು ಪೆಟ್ರೋಲ್ ಬಂಕ್ ಮಾಲೀಕರು ದೂರಿದ್ದಾರೆ. ಪ್ರಸ್ತುತ ಬಳಕೆಯಲ್ಲಿರುವ ಭೂಗತ ಶೇಖರಣಾ ಟ್ಯಾಂಕ್ ಗಳನ್ನು ಸಾಂಪ್ರದಾಯಿಕ ಪೆಟ್ರೋಲ್ಗಾಗಿ ವಿನ್ಯಾಸಗೊಳಿಸಲಾಗಿದೆಯೇ ಹೊರತು, ಹೆಚ್ಚಿನ ಪ್ರಮಾಣದ ಎಥನಾಲ್ ಮಿಶ್ರಿತ ಇಂಧನಕ್ಕಲ್ಲ ಎಂಬುದು ಅವರ ವಾದವಾಗಿದೆ.
ಬಂಕ್ ಗಳ ಇಂಧನ ವಿತರಕ ಯಂತ್ರಗಳಿಂದ ಗ್ರಾಹಕರು E20 ಪೆಟ್ರೋಲ್ ಬದಲಿಗೆ ಕೆಸರುಮಿಶ್ರಿತ ನೀರನ್ನು ಪಡೆಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ವೈರಲ್ ಆಗಿದ್ದವು. ಇಂತಹದ್ದೇ ಒಂದು ಘಟನೆ ಟೊಯೊಟಾ ಹೈಕ್ರಾಸ್ ಕಾರಿನ ವಿಷಯದಲ್ಲೂ ನಡೆದಿತ್ತು. ಆ ಕಾರು E20 ಇಂಧನ ತಂತ್ರಜ್ಞಾನಕ್ಕೆ ಪೂರಕವಾಗಿಯೇ ಇತ್ತಾದರೂ, ಇಂಧನ ಕಲುಷಿತಗೊಂಡಿದ್ದರಿಂದಲೇ ಸಮಸ್ಯೆ ಸೃಷ್ಟಿಯಾಗಿದೆ ಎಂದು ವಾಹನ ತಯಾರಿಕಾ ಸಂಸ್ಥೆಯು ಸ್ಪಷ್ಟಪಡಿಸಿತ್ತು.
ಈ ವಿಷಯದ ಕುರಿತು ಬಹಿರಂಗವಾಗಿ ಮಾತನಾಡದಂತೆ ತೈಲ ಮಾರುಕಟ್ಟೆ ಕಂಪೆನಿಗಳು ಕಟ್ಟುನಿಟ್ಟಿನ ಸೂಚನೆ ನೀಡಿರುವುದರಿಂದ, ಮೂವರು ಪೆಟ್ರೋಲ್ ಬಂಕ್ ಮಾಲೀಕರು ಹೆಸರು ಬಹಿರಂಗಪಡಿಸದಂತೆ ಕೋರಿ ‘The Hindu’ ಪತ್ರಿಕೆಯೊಂದಿಗೆ ತಮ್ಮ ಆತಂಕವನ್ನು ಹಂಚಿಕೊಂಡಿದ್ದಾರೆ.
"ಮಳೆಯ ನೀರು ಸೋರಿಕೆಯಾಗುವುದರಿಂದ, ತೇವಾಂಶದ ಘನೀಕರಣದಿಂದ ಅಥವಾ ಬಂಕ್ ಗಳಿಗೆ ಇಂಧನ ತರುವ ಟ್ಯಾಂಕರ್ ಗಳಿಂದಾಗಿ ಭೂಗತ ಶೇಖರಣಾ ಟ್ಯಾಂಕ್ ಗಳಲ್ಲಿ ಸಾಮಾನ್ಯವಾಗಿ ಸ್ವಲ್ಪ ಪ್ರಮಾಣದ ನೀರು ಸಂಗ್ರಹವಾಗಿರುತ್ತದೆ. ಭೂಗತ ಟ್ಯಾಂಕ್ ಗಳಲ್ಲಿನ ಒಟ್ಟು E20 ದಾಸ್ತಾನಿನಲ್ಲಿ ನೀರಿನ ಪ್ರಮಾಣವು ಶೇಕಡಾ 0.5ಕ್ಕಿಂತ ಹೆಚ್ಚಾದಾಗ, ಎಥನಾಲ್ ತನ್ನ ನೈಸರ್ಗಿಕ ಗುಣದಂತೆ ನೀರನ್ನು ತನ್ನತ್ತ ಸೆಳೆದುಕೊಳ್ಳುತ್ತದೆ. ಇದರಿಂದಾಗಿ ಇಂಧನದಲ್ಲಿ ಪ್ರತ್ಯೇಕ ಪದರಗಳು ಸೃಷ್ಟಿಯಾಗುತ್ತವೆ. ನೀರು ಮತ್ತು ಎಥನಾಲ್ ಮಿಶ್ರಣವು ಭಾರವಾಗಿರುವುದರಿಂದ ಟ್ಯಾಂಕ್ ನ ತಳಭಾಗದಲ್ಲಿ ಕುಳಿತುಕೊಳ್ಳುತ್ತದೆ ಹಾಗೂ ಪೆಟ್ರೋಲ್ ಅದರ ಮೇಲ್ಭಾಗದಲ್ಲಿ ಪ್ರತ್ಯೇಕ ಪದರವಾಗಿ ಉಳಿಯುತ್ತದೆ" ಎಂದು ಉದ್ಯಮದ ಹಿರಿಯ ತಜ್ಞರೊಬ್ಬರು ವಿವರಿಸಿದ್ದಾರೆ.
ಭೂಗತ ಟ್ಯಾಂಕ್ ನ ತಳಭಾಗದಿಂದಲೇ ವಿತರಕ ಯಂತ್ರಗಳು ಇಂಧನವನ್ನು ಮೇಲಕ್ಕೆ ಎಳೆಯುವುದರಿಂದ, ಕೆಲವು ವಾಹನಗಳಿಗೆ E20 ಪೆಟ್ರೋಲ್ ಬದಲಿಗೆ ತಳದಲ್ಲಿ ಶೇಖರಣೆಯಾಗಿರುವ ನೀರು ಮಿಶ್ರಿತ ಇಂಧನವೇ ಪೂರೈಕೆಯಾಗುತ್ತಿದೆ ಎಂದು ಬಂಕ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
"ಇದರ ಪರಿಣಾಮವಾಗಿ, ವಾಹನಗಳು ಸ್ಟಾರ್ಟ್ ಆಗದೇ ಇರಬಹುದು ಅಥವಾ ಸ್ವಲ್ಪ ದೂರ ಸಾಗಿದ ಬಳಿಕ ಕೆಟ್ಟು ನಿಲ್ಲಬಹುದು. ಇಂತಹ ತೊಂದರೆಗೆ ಒಳಗಾದ ಗ್ರಾಹಕರು ನಮ್ಮ ಬಳಿ ಬಂದು ದೂರು ನೀಡಿದಾಗಷ್ಟೇ ಇಂಧನ ಕಲುಷಿತಗೊಂಡಿರುವ ವಿಷಯ ನಮಗೆ ತಿಳಿಯುತ್ತದೆ" ಎಂದು ಬಂಕ್ ಮಾಲೀಕರೊಬ್ಬರು ಹೇಳಿರುವುದಾಗಿ ‘The Hindu’ ವರದಿ ಉಲ್ಲೇಖಿಸಿದೆ.
ಭೂಗತ ಟ್ಯಾಂಕ್ ಗಳ ಸೀಲ್ ಗಳು ಸರಿಯಾಗಿ ಇಲ್ಲದಿದ್ದರೆ, ಅಂತರ್ಜಲದ ಮಟ್ಟ ಹೆಚ್ಚಿರುವ ಕರಾವಳಿ ಪ್ರದೇಶಗಳಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಬಹುದು. ಅಲ್ಲಿನ ನೀರು ಸುಲಭವಾಗಿ ಟ್ಯಾಂಕ್ ಪ್ರವೇಶಿಸಿ, E20 ದಾಸ್ತಾನನ್ನು ಇನ್ನಷ್ಟು ಕಲುಷಿತಗೊಳಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಎಥನಾಲ್ ನೀರನ್ನು ಹೀರಿಕೊಳ್ಳುವ ಗುಣ ಹೊಂದಿರುವುದರಿಂದ, ಮೃದು ಉಕ್ಕಿನಿಂದ ಮಾಡಲಾದ ಭೂಗತ ಟ್ಯಾಂಕ್ ಗಳು ಮತ್ತು ಪೈಪ್ಲೈನ್ ಗಳು ಬೇಗನೆ ತುಕ್ಕು ಹಿಡಿಯುವ ಸಾಧ್ಯತೆ ಇರುತ್ತದೆ. ಇದು ಇಂಧನ ಮಾಲಿನ್ಯವನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಮತ್ತೊಬ್ಬ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ ತೈಲ ಮಾರುಕಟ್ಟೆ ಕಂಪೆನಿಗಳು (OMCs) E20 ಇಂಧನ ಪೂರೈಕೆಯ ಸಿದ್ಧತೆಯ ಭಾಗವಾಗಿ ಪೆಟ್ರೋಲ್ ವಿತರಕ ಯಂತ್ರಗಳಲ್ಲಿನ ಸೀಲ್ಗಳು ಮತ್ತು ವಾಷರ್ ಗಳನ್ನು ನಿಯೋಪ್ರಿನ್ ರಬ್ಬರ್ ನಿಂದ ಬದಲಾಯಿಸಿವೆ ಎಂದು ಕೆಲವು ಮಾಲೀಕರು ತಿಳಿಸಿದ್ದಾರೆ.
►E20 ಮಾಹಿತಿ ಫಲಕ ಹಾಕದಂತೆ ತೈಲ ಕಂಪೆನಿಗಳ ತಡೆ
ಪೆಟ್ರೋಲ್ ಬಂಕ್ ಗಳಲ್ಲಿ ಗ್ರಾಹಕರೊಂದಿಗೆ ಉಂಟಾಗುವ ವಿವಾದಗಳನ್ನು ತಪ್ಪಿಸಲು ವಾಹನ ಮಾಲೀಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಬಂಕ್ ಉದ್ಯಮಿಗಳು ಹೇಳಿದ್ದಾರೆ. ವಾಹನಗಳನ್ನು ತೊಳೆಯುವಾಗ ಮತ್ತು ಮಳೆಯ ಸಮಯದಲ್ಲಿ ಇಂಧನ ಟ್ಯಾಂಕ್ ಗಳ ಒಳಗೆ ನೀರು ಹೋಗದಂತೆ ಜಾಗ್ರತೆ ವಹಿಸುವಂತೆ ವಾಹನ ಸವಾರರಿಗೆ ಸಲಹೆ ನೀಡಬೇಕಾಗಿದೆ. ಆದರೆ, ತೈಲ ಮಾರುಕಟ್ಟೆ ಕಂಪೆನಿಗಳು ಇಂತಹ ಯಾವುದೇ ಮಾಹಿತಿ ಫಲಕಗಳನ್ನು ಪ್ರದರ್ಶಿಸದಂತೆ ತಡೆಯುತ್ತಿವೆ ಎಂದು ಅವರು ದೂರಿದ್ದಾರೆ.
"ಕೆಲವು ಪೆಟ್ರೋಲ್ ಬಂಕ್ ಗಳಲ್ಲಿ ಸರ್ಕಾರದ ಆದೇಶದಂತೆ E20 ಇಂಧನವನ್ನು ವಿತರಿಸಲಾಗುತ್ತಿದೆ ಎಂಬ ಮಾಹಿತಿ ಫಲಕಗಳನ್ನು ಹಾಕಲಾಗಿತ್ತು. ಆದರೆ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ತೈಲ ಕಂಪೆನಿಗಳು ಅವುಗಳನ್ನು ತೆರವುಗೊಳಿಸುವಂತೆ ಆದೇಶಿಸಿದವು. ಗ್ರಾಹಕರಿಗೆ ಈ ಬಗ್ಗೆ ಕನಿಷ್ಠ ಮಾಹಿತಿಯೂ ಸಿಗುವುದು ಅವರಿಗೆ ಇಷ್ಟವಿಲ್ಲ," ಎಂದು ಬಂಕ್ ನಿರ್ವಾಹಕರೊಬ್ಬರು ತಿಳಿಸಿದ್ದಾರೆ.
ಭೂಗತ ಶೇಖರಣಾ ಟ್ಯಾಂಕ್ ಗಳಲ್ಲಿ ನೀರು ಸೇರಿಕೊಂಡಿದೆಯೇ ಎಂಬುದನ್ನು ದಿನಕ್ಕೆ ಮೂರು ಬಾರಿ ಹಾಗೂ ಮಳೆಗಾಲದಲ್ಲಿ ಪ್ರತಿ ಎರಡು ಗಂಟೆಗೊಮ್ಮೆ ಕಡ್ಡಾಯವಾಗಿ ತಪಾಸಣೆ ನಡೆಸುವಂತೆ ತಮಗೆ ಸೂಚಿಸಲಾಗಿದೆ ಎಂದು ಮಾಲೀಕರು ಹೇಳಿದ್ದಾರೆ. ನೀರಿರುವುದನ್ನು ಹಚ್ಚಲು ‘ವಾಟರ್-ಫೈಂಡಿಂಗ್ ಪೇಸ್ಟ್’ ಸವರಿದ ಡಿಪ್ ಸ್ಟಿಕ್ ಅನ್ನು ಬಳಸಲಾಗುತ್ತದೆ. ಈ ಪೇಸ್ಟ್ ನೀರಿನ ಸಂಪರ್ಕಕ್ಕೆ ಬಂದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇಂಧನ ಕಲುಷಿತಗೊಂಡಿರುವುದು ಪತ್ತೆಯಾದರೆ, ಮಾಲೀಕರು ತೈಲ ಕಂಪೆನಿಗೆ ಮಾಹಿತಿ ನೀಡುತ್ತಾರೆ. ನಂತರ ಕಂಪೆನಿಯ ಸಿಬ್ಬಂದಿ ಬಂದು ಹ್ಯಾಂಡ್ ಪಂಪ್ ಬಳಸಿ ಟ್ಯಾಂಕ್ ನ ತಳದಲ್ಲಿರುವ ನೀರನ್ನು ಹೊರಹಾಕುತ್ತಾರೆ.
ಆದರೆ, ಈ ಪ್ರಕ್ರಿಯೆಯಿಂದ ಎದುರಾಗುತ್ತಿರುವ ಆರ್ಥಿಕ ನಷ್ಟದ ಬಗ್ಗೆ ಬಂಕ್ ಮಾಲೀಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾವು ತೈಲ ಕಂಪೆನಿಗಳಿಂದ ಸಂಪೂರ್ಣ ಹಣ ನೀಡಿ E20 ಇಂಧನವನ್ನು ಖರೀದಿಸುತ್ತಿರುವುದರಿಂದ, ಕಲುಷಿತಗೊಂಡು ವ್ಯರ್ಥವಾಗುವ ಇಂಧನದ ನಷ್ಟವನ್ನು ತಾವೇ ಭರಿಸಬೇಕಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ತಮಗೆ 600 ಲೀಟರ್ ಇಂಧನ ನಷ್ಟವಾಗಿದೆ ಎಂದು ಉದ್ಯಮಿಯೊಬ್ಬರು ತಿಳಿಸಿದ್ದು, ಇನ್ನು ಕೆಲವು ಬಂಕ್ ಗಳಲ್ಲಿ 20,000 ಲೀಟರ್ ವರೆಗೂ ದಾಸ್ತಾನು ನಷ್ಟವಾಗಿರುವ ಉದಾಹರಣೆಗಳಿವೆ ಎಂದು ಹೇಳಿದ್ದಾರೆ. ಇದರೊಂದಿಗೆ, ಕಲುಷಿತಗೊಂಡ ಇಂಧನ ಮಿಶ್ರಿತ ನೀರನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡುವಂತೆಯೂ ಅವರು ಒತ್ತಾಯಿಸಿದ್ದಾರೆ.
►ಕಲುಷಿತ ಇಂಧನದ ವಿರುದ್ಧ ಕಠಿಣ ನಿಲುವು: ಇಂಡಿಯನ್ ಆಯಿಲ್ ಸ್ಪಷ್ಟನೆ
ಇಂಧನ ಕಲುಷಿತಗೊಳ್ಳುವ ವಿಷಯದಲ್ಲಿ ತಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಈ ಬಗ್ಗೆ ಕಠಿಣ ನಿಲುವು ಹೊಂದಿರುವುದಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ತನ್ನ ಕಟ್ಟುನಿಟ್ಟಾದ ಗುಣಮಟ್ಟ ಖಾತರಿ ವ್ಯವಸ್ಥೆಯ ಭಾಗವಾಗಿ ನಿಯಮಿತ ತಪಾಸಣೆಗಳು, ಅನಿರೀಕ್ಷಿತ ದಾಳಿಗಳು ಹಾಗೂ ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ. ಕಳೆದ ವಾರವೊಂದರಲ್ಲೇ ದೇಶಾದ್ಯಂತ ತನ್ನ 10,000ಕ್ಕೂ ಹೆಚ್ಚು ಪೆಟ್ರೋಲ್ ಬಂಕ್ ಗಳಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಲಾಗಿದ್ದು, 8,500ಕ್ಕೂ ಅಧಿಕ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ. ಗುಣಮಟ್ಟದ ಮಾನದಂಡಗಳ ಪಾಲನೆಯನ್ನು ಸ್ವತಂತ್ರವಾಗಿ ದೃಢೀಕರಿಸಲು ನೂರಾರು ವಿಶೇಷ ತಪಾಸಣಾ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಸಂಸ್ಥೆ ವಿವರಿಸಿದೆ.
"ತಪಾಸಣೆಯ ಸಮಯದಲ್ಲಿ ಅಥವಾ ಗ್ರಾಹಕರ ದೂರುಗಳ ಮೂಲಕ ಇಂಧನ ಕಲಬೆರಕೆ, ಮಾಲಿನ್ಯ ಅಥವಾ ನಿಗದಿತ ಗುಣಮಟ್ಟದ ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ, ಸಂಬಂಧಪಟ್ಟ ಬಂಕ್ ಮಾಲೀಕರ ವಿರುದ್ಧ ಅನ್ವಯವಾಗುವ ಮಾರ್ಗಸೂಚಿಗಳು ಮತ್ತು ಒಪ್ಪಂದದ ನಿಯಮಗಳ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು," ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಸೌಜನ್ಯ: thehindu.com






