2035ರ ವೇಳೆಗೆ ಇಸ್ಲಾಂ ವಿಶ್ವದ ಅತಿದೊಡ್ಡ ಧರ್ಮವಾಗುವ ಸಾಧ್ಯತೆ: Pew Research ವರದಿ
2035ರ ವೇಳೆಗೆ ಕ್ರೈಸ್ತ ಧರ್ಮವನ್ನು ಹಿಂದಿಕ್ಕಿ ಇಸ್ಲಾಂ ವಿಶ್ವದ ಅತಿದೊಡ್ಡ ಧರ್ಮವಾಗಿ ಹೊರಹೊಮ್ಮಲಿದೆ ಎಂದು 'ಪ್ಯೂ ರಿಸರ್ಚ್ ಸೆಂಟರ್' (Pew Research Center) ತಿಳಿಸಿದೆ.

Photo Credit : aljazeera
ಮುಸ್ಲಿಂ ಜನಸಂಖ್ಯೆಯ ನಿರೀಕ್ಷಿತ ಬೆಳವಣಿಗೆಯನ್ನು ಅಂದಾಜಿಸಿ ಈ ಸಂಶೋಧನಾ ಸಂಸ್ಥೆಯು ಮಂಗಳವಾರ ವರದಿಯೊಂದನ್ನು ಬಿಡುಗಡೆ ಮಾಡಿದೆ. ಮುಂದಿನ ಕೆಲವು ದಶಕಗಳಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಎರಡೂ ಸಮುದಾಯಗಳ ಜನಸಂಖ್ಯೆ ಹೆಚ್ಚಾಗಲಿದೆ ಎಂದು ವರದಿ ಹೇಳಿದೆ.
ಆದರೆ, ಮುಸ್ಲಿಂ ಜನಸಂಖ್ಯೆಯು "ಇನ್ನಷ್ಟು ವೇಗವಾಗಿ ಬೆಳೆಯಲಿದೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವದ ಒಟ್ಟು ಜನಸಂಖ್ಯೆಯ ಶೇ. 99.98ರಷ್ಟನ್ನು ಒಳಗೊಂಡಿರುವ 201 ದೇಶಗಳು ಮತ್ತು ಪ್ರಾಂತ್ಯಗಳನ್ನು ಈ ಅಧ್ಯಯನಕ್ಕಾಗಿ ವಿಶ್ಲೇಷಿಸಲಾಗಿದೆ. 2020ರಿಂದ 2070ರವರೆಗಿನ ಅವಧಿಯಲ್ಲಿ ಮುಸ್ಲಿಮರು, ಕ್ರೈಸ್ತರು, ಯಹೂದಿಗಳು, ಹಿಂದೂಗಳು, ಬೌದ್ಧರು ಸೇರಿದಂತೆ ಏಳು ಧಾರ್ಮಿಕ ಗುಂಪುಗಳ ಭೌಗೋಳಿಕ ಹಂಚಿಕೆ ಮತ್ತು ಭವಿಷ್ಯದ ಬದಲಾವಣೆಗಳನ್ನು ಈ ವರದಿ ಒಳಗೊಂಡಿದೆ.
ಧಾರ್ಮಿಕ ಬದಲಾವಣೆಗಳು ಮತ್ತು ಪ್ರಪಂಚದ ಮೇಲೆ ಅವುಗಳ ಪ್ರಭಾವವನ್ನು ವಿಶ್ಲೇಷಿಸುವ 'ಪ್ಯೂ-ಟೆಂಪಲ್ಟನ್ ಗ್ಲೋಬಲ್ ರಿಲಿಜಿಯಸ್ ಫ್ಯೂಚರ್ಸ್ ಪ್ರಾಜೆಕ್ಟ್'ನ ಭಾಗವಾಗಿ ಈ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.
ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು, ನೈಸರ್ಗಿಕ ವಿಕೋಪಗಳು ಮತ್ತು ಯುದ್ಧಗಳಂತಹ ಹಲವಾರು ಘಟನೆಗಳು ಜನರ ಧಾರ್ಮಿಕ ನಂಬಿಕೆಗಳ ಮೇಲೆ ಪ್ರಭಾವ ಬೀರಬಹುದು. ಹೀಗಾಗಿ, "ಜಗತ್ತು ಬದಲಾಗಬಹುದಾದ ಎಲ್ಲಾ ರೀತಿಯನ್ನೂ ಊಹಿಸುವ ಉದ್ದೇಶವನ್ನು ಈ ವರದಿ ಹೊಂದಿಲ್ಲ" ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಜನನ ಪ್ರಮಾಣದಲ್ಲಿ ಹೆಚ್ಚಳ:
ವರದಿಯ ಪ್ರಕಾರ, ಮುಸ್ಲಿಮರು ಅತಿ ಹೆಚ್ಚು ಮಕ್ಕಳಿಗೆ ಜನ್ಮ ನೀಡುತ್ತಾರೆ. ಇಸ್ಲಾಂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧಾರ್ಮಿಕ ಗುಂಪಾಗಲು ಇದು ಪ್ರಮುಖ ಕಾರಣ ಎಂದು ಪ್ಯೂ ಸಂಸ್ಥೆ ಹೇಳಿದೆ.
ಪ್ರತಿ ಮುಸ್ಲಿಂ ಮಹಿಳೆಗೆ ಸಂತಾನೋತ್ಪತ್ತಿ ದರ 3.1 ಮಕ್ಕಳಷ್ಟಿದೆ. ಎರಡನೇ ಅತಿ ಹೆಚ್ಚು ಸಂತಾನೋತ್ಪತ್ತಿ ದರ ಹೊಂದಿರುವ ಕ್ರೈಸ್ತರಲ್ಲಿ, ಪ್ರತಿ ಮಹಿಳೆಗೆ 2.5 ಮಕ್ಕಳಷ್ಟಿವೆ.
ಸಾಮಾನ್ಯವಾಗಿ ಒಂದು ಪೀಳಿಗೆಯು ತನ್ನ ಜನಸಂಖ್ಯೆಯನ್ನು ಕಾಯ್ದುಕೊಳ್ಳಲು ಪ್ರತಿ ಮಹಿಳೆಗೆ ಸುಮಾರು 2.1 ಮಕ್ಕಳ ಸಂತಾನೋತ್ಪತ್ತಿ ದರ ಬೇಕಾಗುತ್ತದೆ.
ಪ್ಯೂ ವರದಿಯ ಪ್ರಕಾರ, ಈ ಎರಡೂ ಸಮುದಾಯಗಳು "ವಿಶ್ವದ ಒಟ್ಟಾರೆ ಜನಸಂಖ್ಯಾ ಬೆಳವಣಿಗೆಗೆ ತಕ್ಕಂತೆ ಸಾಗುವ" ನಿರೀಕ್ಷೆಯಿದೆ.
ಸ್ವಾಭಾವಿಕ ಜನಸಂಖ್ಯಾ ಬದಲಾವಣೆಯ ಮೂಲಕ ಮುಸ್ಲಿಮರ ಸಂಖ್ಯೆ 1.6 ಬಿಲಿಯನ್ ಹೆಚ್ಚಾಗುವ ಸಾಧ್ಯತೆಯಿದೆ. ಇದಕ್ಕೆ ಹೋಲಿಸಿದರೆ ಕ್ರೈಸ್ತರ ಸಂಖ್ಯೆ 792 ಮಿಲಿಯನ್ ಹೆಚ್ಚಾಗಬಹುದು.
ಧರ್ಮ ತೊರೆಯುವವರು:
ಕ್ರೈಸ್ತ ಧರ್ಮವನ್ನು ತೊರೆಯುವ ಅಥವಾ ಮತಾಂತರಗೊಳ್ಳುವವರ ಸಂಖ್ಯೆಗೆ ಹೋಲಿಸಿದರೆ, ಮುಸ್ಲಿಂ ಸಮುದಾಯದಲ್ಲಿ ಧರ್ಮ ತೊರೆಯುವವರ ಪ್ರಮಾಣ ತೀರಾ ಕಡಿಮೆಯಿರಲಿದೆ ಎಂದು ಅಂದಾಜಿಸಲಾಗಿದೆ.
"ಈ ಅಧ್ಯಯನದ ಅವಧಿಯಲ್ಲಿ ಇಸ್ಲಾಂ ಧರ್ಮ ಸ್ವೀಕರಿಸುವವರು ಮತ್ತು ತೊರೆಯುವವರ ನಡುವಿನ ವ್ಯತ್ಯಾಸವನ್ನು ನೋಡಿದರೆ, ಸುಮಾರು 80 ಲಕ್ಷ ಜನರ ಇಳಿಕೆಯಾಗಬಹುದು. ಆದರೆ ಕ್ರೈಸ್ತರಲ್ಲಿ ಈ ನಿವ್ವಳ ವ್ಯತ್ಯಾಸವು ಸುಮಾರು 10.5 ಕೋಟಿ ಜನರ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ," ಎಂದು ವರದಿ ತಿಳಿಸಿದೆ.
ಕ್ರೈಸ್ತ ಧರ್ಮದಿಂದ ಹೊರಬರುವವರು ನಂತರ ಯಾವುದೇ ಧರ್ಮದೊಂದಿಗೆ ಗುರುತಿಸಿಕೊಳ್ಳದಿರಬಹುದು. ಇವರಲ್ಲಿ ನಾಸ್ತಿಕರು ಮತ್ತು ದೇವರ ಅಸ್ತಿತ್ವದ ಬಗ್ಗೆ ಸಂದೇಹವಿರುವವರು ಸೇರಿದ್ದಾರೆ.
ಆದರೆ, ಕ್ರೈಸ್ತ ಧರ್ಮದಿಂದ ಮತಾಂತರಗೊಂಡವರಿಂದಾಗಿ ಇಸ್ಲಾಂ ಬೆಳೆಯುತ್ತಿದೆ ಎಂಬುದು ಸುಳ್ಳು ಎಂದು ಈ ಸಂಶೋಧನೆ ಸ್ಪಷ್ಟಪಡಿಸಿದೆ. ಕ್ರೈಸ್ತ ಧರ್ಮ ಸ್ವೀಕರಿಸುವ ಮುಸ್ಲಿಮರ ಸಂಖ್ಯೆಯು, ಇಸ್ಲಾಂ ಧರ್ಮ ಸ್ವಿಕರಿಸುವ ಕ್ರೈಸ್ತರ ಸಂಖ್ಯೆಗಿಂತ ʼಸ್ವಲ್ಪ ಮಾತ್ರ ಹೆಚ್ಚಾಗಿದೆʼ ಎಂದು ವರದಿ ಹೇಳಿದೆ.
ದೇಶವಾರು ಜನಸಂಖ್ಯಾ ಬದಲಾವಣೆಗಳು:
2020 ಮತ್ತು 2070ರ ನಡುವೆ, "ವಿಶ್ವದ ಮುಸ್ಲಿಂ ಜನಸಂಖ್ಯೆಯ ಬಹುಪಾಲು ಬೆಳವಣಿಗೆಯು ಈಗಾಗಲೇ ಮುಸ್ಲಿಮರು ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲೇ ಕಂಡುಬರಲಿದೆ" ಎಂದು ಪ್ಯೂ ಸಂಸ್ಥೆ ಹೇಳಿದೆ.
2070ರ ವೇಳೆಗೆ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 95ರಷ್ಟು ಮುಸ್ಲಿಮರೇ ಇರಲಿದ್ದಾರೆ. ಇತ್ತ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ, ಯಾವುದೇ ಧರ್ಮಕ್ಕೆ ಸೇರದವರ ಸಂಖ್ಯೆಯನ್ನು ಮುಸ್ಲಿಮರು ಮೀರಿಸುವ ನಿರೀಕ್ಷೆಯಿದೆ.
2020ರಲ್ಲಿ 53 ದೇಶಗಳಲ್ಲಿ ಮುಸ್ಲಿಮರು ಬಹುಸಂಖ್ಯಾತ ಧಾರ್ಮಿಕ ಗುಂಪಾಗಿದ್ದರು. 2070ರ ವೇಳೆಗೆ ಈ ದೇಶಗಳಲ್ಲಿ ಹೆಚ್ಚುವರಿಯಾಗಿ 120 ಕೋಟಿ ಮುಸ್ಲಿಮರು ವಾಸಿಸಲಿದ್ದಾರೆ. ಇದು ಜಾಗತಿಕ ಮುಸ್ಲಿಂ ಜನಸಂಖ್ಯೆಯ ನಿರೀಕ್ಷಿತ ಬೆಳವಣಿಗೆಯ ಶೇ. 74ರಷ್ಟಾಗುತ್ತದೆ.
ಉದಾಹರಣೆಗೆ, ಪಾಕಿಸ್ತಾನದ ಮುಸ್ಲಿಂ ಜನಸಂಖ್ಯೆಯು 2020ರಲ್ಲಿದ್ದ 22.7 ಕೋಟಿಯಿಂದ 2070ರ ವೇಳೆಗೆ 46.1 ಕೋಟಿಗೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಇದರೊಂದಿಗೆ ಇಂಡೋನೇಷ್ಯಾವನ್ನು ಹಿಂದಿಕ್ಕಿ ಪಾಕಿಸ್ತಾನವು ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶವಾಗಲಿದೆ ಎಂದು ಪ್ಯೂ ತಿಳಿಸಿದೆ.
ಕ್ರೈಸ್ತ ಜನಸಂಖ್ಯೆಯ ಬೆಳವಣಿಗೆಯೂ ಈಗಾಗಲೇ ಕ್ರೈಸ್ತರು ಬಹುಸಂಖ್ಯಾತರಾಗಿರುವ 120 ದೇಶಗಳಲ್ಲೇ ಕೇಂದ್ರೀಕೃತವಾಗಿರಲಿದೆ.
ಒಟ್ಟಾರೆಯಾಗಿ, ಈ ದೇಶಗಳಲ್ಲಿ ಕ್ರೈಸ್ತರ ಜನಸಂಖ್ಯೆಯು 63 ಕೋಟಿಯಷ್ಟು ಹೆಚ್ಚಾಗುವ ಅಂದಾಜಿದ್ದು, ಇದು ಜಾಗತಿಕ ಕ್ರೈಸ್ತ ಜನಸಂಖ್ಯಾ ಬೆಳವಣಿಗೆಯ ಶೇ. 92ರಷ್ಟಾಗುತ್ತದೆ.
ಭಾರತ, ವಿಶ್ವದಲ್ಲಿ ಇತರ ಧರ್ಮಗಳಿಗಿಂತ ಹಿಂದೂ ಜನಸಂಖ್ಯೆ ಬೆಳವಣಿಗೆ ಇಳಿಕೆ:
ಪ್ಯೂ ರಿಸರ್ಚ್ ಸೆಂಟರ್ನ ಹೊಸ ಅಂದಾಜಿನ ಪ್ರಕಾರ, 2020 ಮತ್ತು 2070ರ ನಡುವೆ ಭಾರತದ ಹಿಂದೂ ಜನಸಂಖ್ಯೆ 17.6 ಕೋಟಿಯಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ, ಮುಸ್ಲಿಮರಲ್ಲಿ ಸಂತಾನೋತ್ಪತ್ತಿ ದರ ಹೆಚ್ಚಿರುವುದರಿಂದ ದೇಶದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಪ್ರಮಾಣ ಸ್ವಲ್ಪಮಟ್ಟಿಗೆ ಇಳಿಕೆಯಾಗುವ ಸಾಧ್ಯತೆಯಿದೆ.
ಈ ಬದಲಾವಣೆಯ ನಡುವೆಯೂ, 2070ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮುಕ್ಕಾಲು ಭಾಗಕ್ಕಿಂತ ಹೆಚ್ಚಿನವರು (ಶೇ. 75ಕ್ಕೂ ಹೆಚ್ಚು) ಹಿಂದೂಗಳೇ ಆಗಿರಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಇದೇ ಅವಧಿಯಲ್ಲಿ ಜಾಗತಿಕ ಹಿಂದೂ ಜನಸಂಖ್ಯೆಯೂ 19.9 ಕೋಟಿಯಷ್ಟು ಹೆಚ್ಚಾಗಿ, ಸುಮಾರು 140 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಆದರೆ, ಪ್ರಪಂಚದ ಉಳಿದ ಭಾಗದ ಜನಸಂಖ್ಯೆ ಇನ್ನಷ್ಟು ವೇಗವಾಗಿ ಬೆಳೆಯುವುದರಿಂದ, ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು 2020ರಲ್ಲಿದ್ದ ಶೇ. 15ರಿಂದ 2070ರ ವೇಳೆಗೆ ಶೇ. 14ಕ್ಕೆ ಇಳಿಯಲಿದೆ.
ಇತ್ತೀಚಿನ ದಶಕಗಳಲ್ಲಿ ಭಾರತದ ಒಟ್ಟಾರೆ ಸಂತಾನೋತ್ಪತ್ತಿ ದರ ವೇಗವಾಗಿ ಇಳಿಕೆಯಾಗಿದ್ದರೂ, ಹಿಂದೂ ಮಹಿಳೆಯರಿಗೆ ಹೋಲಿಸಿದರೆ ಮುಸ್ಲಿಂ ಮಹಿಳೆಯರು ಸರಾಸರಿ ಹೆಚ್ಚು ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ ಎಂದು ಪ್ಯೂ ಸಂಸ್ಥೆ ತಿಳಿಸಿದೆ. ಭಾರತದ ಮುಸ್ಲಿಂ ಜನಸಂಖ್ಯೆಯಲ್ಲಿ ಯುವಕರ ಸಂಖ್ಯೆ ಹೆಚ್ಚಿರುವುದು ಮತ್ತು ಈ ಸಂತಾನೋತ್ಪತ್ತಿ ದರದ ವ್ಯತ್ಯಾಸದಿಂದಾಗಿ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಹೆಚ್ಚಾಗಿ ಹಿಂದೂಗಳ ಪಾಲು ಕಡಿಮೆಯಾಗುವ ನಿರೀಕ್ಷೆಯಿದೆ.
2020ರಲ್ಲಿ ಭಾರತದಲ್ಲಿ 110 ಕೋಟಿ ಹಿಂದೂಗಳಿದ್ದು, ಇದು ವಿಶ್ವದ ಒಟ್ಟು ಹಿಂದೂ ಜನಸಂಖ್ಯೆಯ ಶೇ. 95ರಷ್ಟಿತ್ತು. ನೇಪಾಳ (2.4 ಕೋಟಿ), ಬಾಂಗ್ಲಾದೇಶ (1.3 ಕೋಟಿ), ಪಾಕಿಸ್ತಾನ (50 ಲಕ್ಷ) ಮತ್ತು ಇಂಡೋನೇಷ್ಯಾ (40 ಲಕ್ಷ) ಅತಿ ಹೆಚ್ಚು ಹಿಂದೂ ಜನಸಂಖ್ಯೆಯನ್ನು ಹೊಂದಿರುವ ಅಗ್ರ ಐದು ದೇಶಗಳ ಪಟ್ಟಿಯಲ್ಲಿದ್ದವು.
2070ರ ವೇಳೆಗೆ ಈ ಶ್ರೇಯಾಂಕಗಳಲ್ಲಿ ಬದಲಾವಣೆಯಾಗುವ ನಿರೀಕ್ಷೆಯಿದ್ದು, ಅಮೆರಿಕವು ವಿಶ್ವದ ಐದನೇ ಅತಿದೊಡ್ಡ ಹಿಂದೂ ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ. ಸುಮಾರು 30 ಲಕ್ಷ ಹಿಂದೂಗಳೊಂದಿಗೆ ಆಸ್ಟ್ರೇಲಿಯಾ ಕೂಡ ಅಗ್ರ 10ರ ಪಟ್ಟಿಗೆ ಸೇರಿ ಒಂಬತ್ತನೇ ಸ್ಥಾನ ಪಡೆಯುವ ಅಂದಾಜಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಈ ಪಟ್ಟಿಯಿಂದ ಹೊರಬೀಳಲಿದೆ.
2070ರ ವೇಳೆಗೆ ಪಾಕಿಸ್ತಾನದ ಹಿಂದೂ ಜನಸಂಖ್ಯೆಯು ದ್ವಿಗುಣಗೊಂಡು 1 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಜಾಗತಿಕ ಶ್ರೇಯಾಂಕದಲ್ಲಿ ಪಾಕಿಸ್ತಾನ ತನ್ನ ನಾಲ್ಕನೇ ಸ್ಥಾನವನ್ನು ಉಳಿಸಿಕೊಳ್ಳಲಿದೆ.
ಭಾರತವನ್ನು ಹೊರತುಪಡಿಸಿದರೆ, ಹಿಂದೂ ಜನಸಂಖ್ಯೆಯ ನಿರೀಕ್ಷಿತ ಬೆಳವಣಿಗೆಯು ಪ್ರಮುಖವಾಗಿ ಪಾಕಿಸ್ತಾನ ಮತ್ತು ಅಮೆರಿಕದಲ್ಲಿ ಕಂಡುಬರಲಿದೆ. ಪಾಕಿಸ್ತಾನದಲ್ಲಿ ಮರಣ ಪ್ರಮಾಣಕ್ಕಿಂತ ಜನನ ಪ್ರಮಾಣ ಹೆಚ್ಚಿರುವುದರಿಂದ ಸ್ವಾಭಾವಿಕ ಜನಸಂಖ್ಯಾ ಬೆಳವಣಿಗೆಯ ಮೂಲಕ ಈ ಹೆಚ್ಚಳವಾಗಲಿದೆ. ಆದರೆ, ಅಮೆರಿಕದಲ್ಲಿ ವಲಸೆಯು ಹಿಂದೂ ಜನಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಲಿದೆ..
ವಿವಿಧ ಪ್ರದೇಶಗಳಲ್ಲಿ ಹಿಂದೂ ಜನಸಂಖ್ಯೆಯ ಬೆಳವಣಿಗೆ :
ವಿಶ್ವದ ಶೇ. 99ರಷ್ಟು ಹಿಂದೂಗಳಿಗೆ ನೆಲೆಯಾಗಿರುವ ಏಷ್ಯಾ-ಪೆಸಿಫಿಕ್ ಪ್ರದೇಶವು ಮುಂದಿನ ಐದು ದಶಕಗಳಲ್ಲಿ ಹಿಂದೂ ಸಮುದಾಯದ ಬಹುಪಾಲು ಬೆಳವಣಿಗೆಗೆ ಸಾಕ್ಷಿಯಾಗಲಿದೆ. 2020 ಮತ್ತು 2070ರ ನಡುವೆ ಈ ಪ್ರದೇಶದ ಹಿಂದೂ ಜನಸಂಖ್ಯೆ 19.1 ಕೋಟಿಯಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. 2020ರಲ್ಲಿ ಈ ಪ್ರದೇಶದ ಜನಸಂಖ್ಯೆಯಲ್ಲಿ ಶೇ. 26ರಷ್ಟಿದ್ದ ಹಿಂದೂಗಳ ಪಾಲು, 2070ರ ವೇಳೆಗೆ ಶೇ. 28ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಉತ್ತರ ಅಮೆರಿಕದಲ್ಲಿ ಹಿಂದೂ ಜನಸಂಖ್ಯೆಯು 2020ರಲ್ಲಿದ್ದ 40 ಲಕ್ಷದಿಂದ 2070ರ ವೇಳೆಗೆ ದ್ವಿಗುಣಗೊಂಡು 90 ಲಕ್ಷಕ್ಕೆ ತಲುಪುವ ನಿರೀಕ್ಷೆಯಿದೆ. ಈ ಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಶೇ. 1ರಿಂದ ಶೇ. 2ಕ್ಕೆ ಹೆಚ್ಚಾಗಲಿದೆ.
ಸಬ್-ಸಹಾರನ್ ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕ ಹಾಗೂ ಕೆರಿಬಿಯನ್ ಪ್ರದೇಶಗಳಲ್ಲಿ ಮಾತ್ರ ಹಿಂದೂ ಜನಸಂಖ್ಯೆಯು ಒಟ್ಟು ಸಂಖ್ಯೆಯಲ್ಲಿ ಇಳಿಕೆಯಾಗುವ ಅಂದಾಜಿದೆ. ಇತ್ತೀಚಿನ ಪ್ರವೃತ್ತಿಗಳು ಹೀಗೆಯೇ ಮುಂದುವರಿದರೆ, 2070ರ ವೇಳೆಗೆ ಈ ಪ್ರತಿಯೊಂದು ಪ್ರದೇಶದ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಶೇ. 0.1ಕ್ಕಿಂತ ಕಡಿಮೆಯಿರಲಿದೆ.
ಸಂತಾನೋತ್ಪತ್ತಿ, ವಲಸೆ ಮತ್ತು ಮತಾಂತರದ ಪ್ರಭಾವ:
ಸಂತಾನೋತ್ಪತ್ತಿ, ಮರಣ ಪ್ರಮಾಣ, ವಯೋಮಾನದ ರಚನೆ, ಅಂತಾರಾಷ್ಟ್ರೀಯ ವಲಸೆ ಮತ್ತು ಮತಾಂತರ ಇವು ಧಾರ್ಮಿಕ ಗುಂಪುಗಳ ಗಾತ್ರದಲ್ಲಿನ ಬದಲಾವಣೆಗಳನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ ಎಂದು ಪ್ಯೂ ಅಂದಾಜಿಸಿದೆ.
2020 ಮತ್ತು 2070ರ ನಡುವೆ ಸ್ವಾಭಾವಿಕ ಜನಸಂಖ್ಯಾ ಹೆಚ್ಚಳದ ಮೂಲಕ ಜಾಗತಿಕ ಹಿಂದೂ ಜನಸಂಖ್ಯೆಗೆ 20 ಕೋಟಿಗೂ ಹೆಚ್ಚು ಜನರು ಸೇರ್ಪಡೆಯಾಗಲಿದ್ದಾರೆ. ಈ ಬಹುಪಾಲು ಬೆಳವಣಿಗೆ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲೇ ನಡೆಯಲಿದೆ.
ಒಟ್ಟಾರೆ ಹಿಂದೂ ಜನಸಂಖ್ಯೆಯ ಮೇಲೆ ಮತಾಂತರವು ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಹಿಂದೂ ಧರ್ಮದಲ್ಲಿ ಬೆಳೆದ ಅಂದಾಜು ಶೇ. 99ರಷ್ಟು ಜನರು ವಯಸ್ಕರಾದ ಮೇಲೂ ಅದೇ ಧರ್ಮದಲ್ಲಿ ಮುಂದುವರಿಯುವುದು ಇದಕ್ಕೆ ಮುಖ್ಯ ಕಾರಣ ಎಂದು ಪ್ಯೂ ತಿಳಿಸಿದೆ. ಕ್ರೈಸ್ತರಲ್ಲಿ ಈ ಪ್ರಮಾಣ ಶೇ. 85ರಷ್ಟಿದ್ದರೆ, ಬೌದ್ಧರಲ್ಲಿ ಶೇ. 83ರಷ್ಟಿದೆ. ಮುಸ್ಲಿಮರಲ್ಲಿ ಹಿಂದೂಗಳಂತೆಯೇ ಶೇ. 99ರಷ್ಟು ಮಂದಿ ತಮ್ಮ ಮೂಲ ಧರ್ಮದಲ್ಲೇ ಮುಂದುವರಿಯುತ್ತಾರೆ.
ಒಟ್ಟಾರೆಯಾಗಿ, 2020 ಮತ್ತು 2070ರ ನಡುವೆ ಮತಾಂತರದಿಂದಾಗಿ ಜಾಗತಿಕ ಹಿಂದೂ ಜನಸಂಖ್ಯೆಯಲ್ಲಿ ಸುಮಾರು 10 ಲಕ್ಷದಷ್ಟು ಇಳಿಕೆಯಾಗುವ ಅಂದಾಜಿದ್ದು, ಇದರಲ್ಲಿ ಹೆಚ್ಚಿನ ಇಳಿಕೆ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲೇ ಕಂಡುಬರಲಿದೆ.
ಇದೇ ವೇಳೆ, ಉತ್ತರ ಅಮೆರಿಕ, ಮಧ್ಯಪ್ರಾಚ್ಯ-ಉತ್ತರ ಆಫ್ರಿಕಾ ಪ್ರದೇಶ ಮತ್ತು ಯುರೋಪ್ನಲ್ಲಿ ಹಿಂದೂ ಜನಸಂಖ್ಯೆಯ ಬೆಳವಣಿಗೆಗೆ ವಲಸೆಯು ಪ್ರಮುಖ ಕೊಡುಗೆ ನೀಡಲಿದೆ. 2070ರ ವೇಳೆಗೆ ವಲಸೆಯ ಮೂಲಕ ಈ ಪ್ರದೇಶಗಳಿಗೆ 80 ಲಕ್ಷಕ್ಕೂ ಹೆಚ್ಚು ಹಿಂದೂಗಳು ಸೇರ್ಪಡೆಯಾಗುವ ನಿರೀಕ್ಷೆಯಿದೆ.
ವಲಸೆಯಿಂದಾಗಿ ಅತಿ ಹೆಚ್ಚು ಹಿಂದೂ ಜನಸಂಖ್ಯೆ ಕಳೆದುಕೊಳ್ಳುವ ಪ್ರದೇಶಗಳಲ್ಲಿ ಏಷ್ಯಾ ಮತ್ತು ಪೆಸಿಫಿಕ್ ಮುಂಚೂಣಿಯಲ್ಲಿರಲಿದೆ. ಇಲ್ಲಿಂದ ಹೊರದೇಶಗಳಿಗೆ ವಲಸೆ ಹೋಗುವ ಹಿಂದೂಗಳ ಸಂಖ್ಯೆಗಿಂತ, ಈ ಪ್ರದೇಶದಲ್ಲಿ ಸ್ವಾಭಾವಿಕ ಜನಸಂಖ್ಯಾ ಬೆಳವಣಿಗೆಯ ಮೂಲಕ ಹೆಚ್ಚಾಗುವ ಹಿಂದೂಗಳ ಸಂಖ್ಯೆ ಬಹಳ ಅಧಿಕವಾಗಿರಲಿದೆ.
ಕೃಪೆ: aljazeera.com , Times of India






