ಅಳಿವಿನಂಚಿನಲ್ಲಿರುವ ಭಾರತದ ಗುಲಾಬಿ ಡಾಲ್ಫಿನ್ ಗಳ ಸಮೀಕ್ಷೆ

(Photo Source: Instagram/@wii_india)
ಭಾರತ, ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ನಲ್ಲಿ ಕಂಡುಬರುವ ಸಿಹಿನೀರಿನ ಡಾಲ್ಫಿನ್ ಗಳು ಮುಖ್ಯವಾಗಿ ಗಂಗಾ, ಬ್ರಹ್ಮಪುತ್ರ, ಕರ್ಣಫುಲಿ ಮತ್ತು ಮೇಘನಾ ನದಿಗಳಲ್ಲಿ ಕಂಡುಬರುತ್ತವೆ.
ನದಿ ಡಾಲ್ಫಿನ್ ಗಳಿಗೆ ಸಂಬಂಧಿಸಿದ ಅತಿದೊಡ್ಡ ಸಮೀಕ್ಷೆಯಾದ ‘ಪ್ರೊಜೆಕ್ಟ್ ಡಾಲ್ಫಿನ್’ ಉತ್ತರ ಪ್ರದೇಶದ ಬಿಜ್ನೋರಿನಲ್ಲಿ ಎರಡು ದಿನಗಳ ಹಿಂದೆ ಆರಂಭವಾಗಿದೆ. 2021–23ರಲ್ಲಿ ನಡೆದ ರಾಷ್ಟ್ರವ್ಯಾಪಿ ಸಮೀಕ್ಷೆಯಲ್ಲಿ ಭಾರತದಲ್ಲಿ ಒಟ್ಟು 6,327 ನದಿ ಡಾಲ್ಫಿನ್ ಗಳಿರುವುದನ್ನು ಪತ್ತೆ ಮಾಡಲಾಗಿತ್ತು. ಇದೀಗ ಉತ್ತರ ಪ್ರದೇಶದ ಬಿಜ್ನೋರಿನಲ್ಲಿ ಮತ್ತೊಂದು ಸಮೀಕ್ಷೆ ಆರಂಭವಾಗಿದೆ.
ಭಾರತದಲ್ಲಿ ಗಂಗಾ ನದಿ ಸಾವಿರಾರು ಡಾಲ್ಫಿನ್ ಗಳಿಗೆ ನೆಲೆಯಾಗಿದೆ. ಅಮೆಝಾನ್ ನದಿ ಡಾಲ್ಫಿನ್ ಗಳ ಸ್ಥಳೀಯ ರೂಪವೆಂದು ಗಂಗಾ ನದಿ ಡಾಲ್ಫಿನ್ ಗಳನ್ನು ಪರಿಗಣಿಸಲಾಗುತ್ತದೆ. ಭಾರತದ ರಾಷ್ಟ್ರೀಯ ಜಲಚರ ಪ್ರಾಣಿಯಾದ ಗಂಗಾ ನದಿ ಡಾಲ್ಫಿನ್ ಗಳು ಹೆಚ್ಚಾಗಿ ದೇಶದ ಉತ್ತರ ಭಾಗದಲ್ಲಿರುವ ಗಂಗಾ–ಬ್ರಹ್ಮಪುತ್ರ ನದಿ ವ್ಯಾಪ್ತಿಯಲ್ಲಿ ಕಂಡುಬರುತ್ತವೆ. ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ (ಐಯುಸಿಎನ್) ಈ ನದಿ ಡಾಲ್ಫಿನ್ ಗಳನ್ನು ‘ಅಳಿವಿನಂಚಿನಲ್ಲಿರುವ’ ಪ್ರಭೇದವೆಂದು ವರ್ಗೀಕರಿಸಿದೆ.
ಪಿಂಕ್ ರಿವರ್ ಡಾಲ್ಫಿನ್ ಅಥವಾ ‘ಬೊಟೊ’ ಎಂದು ಕರೆಯಲಾಗುವ ಸಿಹಿನೀರಿನ ಡಾಲ್ಫಿನ್ ಪ್ರಭೇದಗಳು ಮುಖ್ಯವಾಗಿ ಅಮೆಝಾನ್ ತಟದಲ್ಲಿ ಕಂಡುಬರುತ್ತವೆ. ಬೊಲಿವಿಯಾ, ಬ್ರೆಜಿಲ್, ಕೊಲಂಬಿಯಾ, ಈಕ್ವೆಡಾರ್, ಗಯಾನ, ಪೆರು ಮತ್ತು ವೆನೆಝುವೆಲಾದ ಅಮೆಝಾನ್ ಮತ್ತು ಒರಿನೋಕೋ ನದಿ ಜಲಾನಯನ ಪ್ರದೇಶಗಳ ಜಲಮೂಲಗಳಲ್ಲಿ ವಾಸಿಸುವ ಈ ಸಿಹಿನೀರಿನ ಡಾಲ್ಫಿನ್ ಪ್ರಭೇದವಾಗಿದೆ. ಭಾರತ, ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ನಲ್ಲಿ ಕಂಡುಬರುವ ಸಿಹಿನೀರಿನ ಡಾಲ್ಫಿನ್ ಗಳು ಮುಖ್ಯವಾಗಿ ಗಂಗಾ, ಬ್ರಹ್ಮಪುತ್ರ, ಕರ್ಣಫುಲಿ ಮತ್ತು ಮೇಘನಾ ನದಿಗಳಲ್ಲಿ ಕಂಡುಬರುತ್ತವೆ. ವಯಸ್ಕ ಡಾಲ್ಫಿನ್ ಗಳು ಸುಮಾರು 10 ಅಡಿ ಉದ್ದವಿರುತ್ತವೆ. ಸೀಗಡಿ ಮತ್ತು ಮೃದ್ವಂಗಿಗಳು ಈ ಡಾಲ್ಫಿನ್ ಗಳ ಪ್ರಮುಖ ಆಹಾರವಾಗಿವೆ.
►ಡಾಲ್ಫಿನ್ ಗಳು ಗುಲಾಬಿ ಬಣ್ಣದಲ್ಲೇಕೆ ಇರುತ್ತವೆ?
ಸಿಹಿನೀರಿನ ಡಾಲ್ಫಿನ್ ಗಳು ವಿವಿಧ ಕಾರಣಗಳಿಂದ ಗುಲಾಬಿ ಬಣ್ಣವನ್ನು ಪಡೆದಿರುತ್ತವೆ. ಜೈವಿಕ ಗುಣಲಕ್ಷಣಗಳಿಂದಾಗಿ ಅವುಗಳ ಬಣ್ಣ ಬದಲಾಗುತ್ತದೆ. ನೀರಿನ ಮೂಲಗಳ ಖನಿಜಾಂಶಗಳು ಚರ್ಮದ ಬಣ್ಣವನ್ನು ಬದಲಿಸುವ ಸಾಧ್ಯತೆಯಿದೆ. ಕೆಲವೊಮ್ಮೆ ಆಹಾರವೂ ಬಣ್ಣದ ಮೇಲೆ ಪರಿಣಾಮ ಬೀರುತ್ತದೆ.
ಬಹಳಷ್ಟು ಸಂದರ್ಭಗಳಲ್ಲಿ ಚರ್ಮದ ಕೆಳಗಿರುವ ರಕ್ತನಾಳಗಳ ಹಿಗ್ಗುವಿಕೆಯಿಂದಲೂ ಅವು ಗುಲಾಬಿ ಬಣ್ಣಕ್ಕೆ ತಿರುಗುತ್ತವೆ. ಚಿಕ್ಕ ವಯಸ್ಸಿನ ಡಾಲ್ಫಿನ್ ಗಳು ಬೂದು ಮತ್ತು ಕಂದು ಬಣ್ಣದಲ್ಲಿರುತ್ತವೆ. ಪ್ರೌಢಾವಸ್ಥೆಗೆ ಬಂದಾಗ ಅವು ಬೂದು ಅಥವಾ ಗುಲಾಬಿ ಬಣ್ಣಕ್ಕೆ ತಿರುಗುತ್ತವೆ. ಕೆಲವು ಗಂಡು ಡಾಲ್ಫಿನ್ ಗಳು ಬಹಳ ಕಡು ಗುಲಾಬಿ ಬಣ್ಣ ಹೊಂದಿರುತ್ತವೆ. ನದಿ ನೀರಿನಲ್ಲಿ ಹೆಚ್ಚು ಅಡ್ಡಾಡುವ ಕಾರಣದಿಂದಲೂ ಬಣ್ಣ ಬದಲಾಗಬಹುದು.
►ಅಳಿವಿನಂಚಿನಲ್ಲಿರುವ ಪ್ರಭೇದಗಳು
ದುರುದೃಷ್ಟವಶಾತ್, ಮಾನವ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಹಿನೀರಿನ ಡಾಲ್ಫಿನ್ ಪ್ರಭೇದಗಳು ಅಳಿವಿನಂಚಿನಲ್ಲಿವೆ. ಕೈಗಾರೀಕರಣ, ತೈಲ ಸೋರಿಕೆ, ಬೇಟೆಯಾಡುವುದು ಮತ್ತು ಮೀನು ವ್ಯಾಪಾರ ಇವುಗಳು ಅವುಗಳ ಸಂಖ್ಯೆಗಳು ಕಡಿಮೆಯಾಗಲು ಕಾರಣವಾಗಿವೆ.
ಇದೀಗ ಡಾಲ್ಫಿನ್ ಗಳ ಸಮೀಕ್ಷೆ ನಡೆಯುತ್ತಿದ್ದು, ಸ್ಪಷ್ಟ ಸಂಖ್ಯೆಯನ್ನು ಕಂಡುಹಿಡಿಯಲಾಗುತ್ತಿದೆ. ಪರಿಸರ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, “ಸಮೀಕ್ಷೆಯ ಮೊದಲ ಹಂತದಲ್ಲಿ ಬಿಜ್ನೋರಿನಿಂದ ಗಂಗಾ ಸಾಗರ್ ಮತ್ತು ಸಿಂಧೂ ನದಿವರೆಗೆ ಗಂಗಾ ನದಿಯ ಮುಖ್ಯ ನದಿ ಪಾತ್ರದಲ್ಲಿ ಸಮೀಕ್ಷೆ ನಡೆಯಲಿದೆ. ಎರಡನೇ ಹಂತದಲ್ಲಿ ಬ್ರಹ್ಮಪುತ್ರ, ಗಂಗಾ ಉಪನದಿಗಳು, ಸುಂದರ್ಬನ್ಸ್ ಮತ್ತು ಒಡಿಶಾದಲ್ಲಿ ಸಮೀಕ್ಷೆ ನಡೆಯಲಿದೆ. ಹಿಂದಿನ ಸಮೀಕ್ಷೆಯಲ್ಲಿ ಗಂಗಾ, ಯಮುನಾ, ಚಂಬಲ್, ಗಂಡಕ್, ಘಘರ, ಕೋಸಿ, ಮಹಾನಂದ ಮತ್ತು ಬ್ರಹ್ಮಪುತ್ರ ನದಿ ಪಾತ್ರಗಳಲ್ಲಿ ಡಾಲ್ಫಿನ್ ಗಳನ್ನು ಗುರುತಿಸಲಾಗಿತ್ತು.”
ಈ ಡಾಲ್ಫಿನ್ ಪ್ರಭೇದಗಳು ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿವೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ನಂತರದ ಸ್ಥಾನದಲ್ಲಿವೆ.







