ಪ್ರಧಾನಿ ಕಚೇರಿ ಇನ್ಮುಂದೆ 'ಸೇವಾ ತೀರ್ಥ'!

ನರೇಂದ್ರ ಮೋದಿ | Photo Credit : PTI
ಪ್ರಧಾನಿ ನರೇಂದ್ರ ಮೋದಿಯವರ ಹೊಸ ಕಚೇರಿ ‘ಸೇವಾ ತೀರ್ಥ’ ಸಿದ್ಧವಾಗಿದ್ದು, ಈ ವಾರ ಮಕರ ಸಂಕ್ರಾಂತಿಯಂದು ಅವರು ಅಲ್ಲಿಗೆ ಸ್ಥಳಾಂತರಗೊಳ್ಳಲಿದ್ದಾರೆ. ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಈ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಈ ಸಂಕೀರ್ಣದಲ್ಲಿ ಪ್ರಧಾನ ಮಂತ್ರಿ ಕಚೇರಿ, ಕ್ಯಾಬಿನೆಟ್ ಸೆಕ್ರೆಟರಿಯೇಟ್ ಹಾಗೂ ರಾಷ್ಟ್ರೀಯ ಭದ್ರತಾ ಮಂಡಳಿ ಸೆಕ್ರೆಟರಿಯೇಟ್ (NSCS) ಇರಲಿದ್ದು, ಪ್ರತಿಯೊಂದಕ್ಕೂ ಪ್ರತ್ಯೇಕ ಕಟ್ಟಡಗಳಿರಲಿವೆ. ನಿರ್ಮಾಣ ಹಂತದಲ್ಲಿ ಈ ಸಂಕೀರ್ಣವನ್ನು ‘ಎಕ್ಸಿಕ್ಯೂಟಿವ್ ಎನ್ಕ್ಲೇವ್’ ಎಂದು ಕರೆಯಲಾಗುತ್ತಿತ್ತು. ಆದರೆ ಸರ್ಕಾರವು ಇದಕ್ಕೆ ‘ಸೇವಾ ತೀರ್ಥ’ ಎಂದು ಹೆಸರು ನೀಡಿದ್ದು, ಇದರ ಅರ್ಥ ‘ಸೇವೆಯ ಸ್ಥಳ’.
ಈ ಕ್ಯಾಂಪಸ್ ಮೂರು ಕಟ್ಟಡಗಳನ್ನು ಹೊಂದಿದೆ. ‘ಸೇವಾ ತೀರ್ಥ–1’ರಲ್ಲಿ ಪ್ರಧಾನ ಮಂತ್ರಿ ಕಚೇರಿ ಕಾರ್ಯನಿರ್ವಹಿಸಲಿದ್ದು, ‘ಸೇವಾ ತೀರ್ಥ–2’ರಲ್ಲಿ ಕ್ಯಾಬಿನೆಟ್ ಸೆಕ್ರೆಟರಿಯೇಟ್ ಮತ್ತು ‘ಸೇವಾ ತೀರ್ಥ–3’ರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಕಚೇರಿಯೊಂದಿಗೆ ರಾಷ್ಟ್ರೀಯ ಭದ್ರತಾ ಮಂಡಳಿ ಸೆಕ್ರೆಟರಿಯೇಟ್ ಕಾರ್ಯನಿರ್ವಹಿಸಲಿದೆ. ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿಯ ಇತರೆ ಹಲವು ಕಟ್ಟಡಗಳೂ ಈಗಾಗಲೇ ಈ ಪ್ರದೇಶದಲ್ಲಿ ನಿರ್ಮಾಣಗೊಂಡಿವೆ. ಹೊಸ ಸಂಸತ್ ಭವನ ಹಾಗೂ ವೈಸ್ ಪ್ರೆಸಿಡೆಂಟ್ಸ್ ಎನ್ಕ್ಲೇವ್ ಪೂರ್ಣಗೊಂಡಿವೆ. ಕಚೇರಿಯ ಜೊತೆಗೆ ಪ್ರಧಾನ ಮಂತ್ರಿಯ ಹೊಸ ನಿವಾಸವನ್ನೂ ಕಚೇರಿ ಸಂಕೀರ್ಣದ ಸಮೀಪದಲ್ಲೇ ನಿರ್ಮಿಸಲಾಗುತ್ತಿದೆ. ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಅವರು ಪ್ರಸ್ತುತ 7, ಲೋಕ ಕಲ್ಯಾಣ್ ಮಾರ್ಗದಲ್ಲಿರುವ ನಿವಾಸದಿಂದ ಹೊಸ ನಿವಾಸಕ್ಕೆ ಸ್ಥಳಾಂತರಗೊಳ್ಳಲಿದ್ದಾರೆ.
ಹೊಸ ಕಚೇರಿ ಸಂಕೀರ್ಣವನ್ನು ಭೇಟಿ ನೀಡುವ ಗಣ್ಯರನ್ನು ಆತಿಥ್ಯ ವಹಿಸುವಂತೆ ವಿನ್ಯಾಸಗೊಳಿಸಲಾಗಿದ್ದು, ಆಧುನಿಕ ಕೊಠಡಿಗಳನ್ನು ಒಳಗೊಂಡಿದೆ. ಒಳಾಂಗಣ ವಿನ್ಯಾಸದಲ್ಲಿ ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಅಂಶಗಳೊಂದಿಗೆ ಸುಧಾರಿತ ತಂತ್ರಜ್ಞಾನವನ್ನು ಸಂಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಪುಟ ಸಭೆಗಳಿಗಾಗಿ ಹೊಸದಾಗಿ ವಿನ್ಯಾಸಗೊಳಿಸಲಾದ ಸಭಾಂಗಣವನ್ನೂ ನಿರ್ಮಿಸಲಾಗಿದೆ. ಪ್ರಧಾನ ಮಂತ್ರಿ ಕಚೇರಿ ತೆರೆದ ಮಹಡಿ ವಿನ್ಯಾಸದಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಹೆಚ್ಚು ಸಹಯೋಗದ ಕೆಲಸದ ವಾತಾವರಣವನ್ನು ಉತ್ತೇಜಿಸುವ ಗುರಿ ಹೊಂದಿದೆ.
ಹೊಸ ಅಧಿಕಾರ ಕೇಂದ್ರ
ಪ್ರಧಾನ ಮಂತ್ರಿ ಕಚೇರಿ, ಸಂಪುಟ ಸಚಿವಾಲಯ ಹಾಗೂ ರಾಷ್ಟ್ರೀಯ ಭದ್ರತಾ ಮಂಡಳಿ ಸೆಕ್ರೆಟರಿಯೇಟ್ ತಲಾ ಒಂದೊಂದು ಕಟ್ಟಡವನ್ನು ಈ ಸಂಕೀರ್ಣದಲ್ಲಿ ಹೊಂದಿವೆ. ಇದಕ್ಕೂ ಮೊದಲು ಸಂಪುಟ ಸಚಿವಾಲಯವು ರಾಷ್ಟ್ರಪತಿ ಭವನದ ಆವರಣದಿಂದ ಕಾರ್ಯನಿರ್ವಹಿಸುತ್ತಿತ್ತು. ರಾಷ್ಟ್ರೀಯ ಭದ್ರತಾ ಮಂಡಳಿ ಸೆಕ್ರೆಟರಿಯೇಟ್ ಪಾರ್ಲಿಮೆಂಟ್ ಸ್ಟ್ರೀಟ್ನಲ್ಲಿರುವ ಸರ್ದಾರ್ ಪಟೇಲ್ ಭವನದಿಂದ ಕಾರ್ಯನಿರ್ವಹಿಸುತ್ತಿತ್ತು. ಎಕ್ಸಿಕ್ಯೂಟಿವ್ ಎನ್ಕ್ಲೇವ್ ಭಾಗ–1ರ ಜೊತೆಗೆ, ಎಕ್ಸಿಕ್ಯೂಟಿವ್ ಎನ್ಕ್ಲೇವ್ ಭಾಗ–2 ಎಂದು ಕರೆಯಲ್ಪಡುವ ಪ್ರಧಾನ ಮಂತ್ರಿಯ ಹೊಸ ನಿವಾಸವೂ ಸಮೀಪದಲ್ಲೇ ನಿರ್ಮಾಣ ಹಂತದಲ್ಲಿದೆ.
ಹೊಸ ಪ್ರಧಾನ ಮಂತ್ರಿ ಕಚೇರಿ ಕಟ್ಟಡದಲ್ಲಿನ ಹೆಚ್ಚಿನ ಕಚೇರಿಗಳು ಸೆಂಟ್ರಲ್ ವಿಸ್ಟಾ ಯೋಜನೆಯಡಿ ಇತ್ತೀಚೆಗೆ ಪೂರ್ಣಗೊಂಡ ಸಚಿವಾಲಯಗಳ ಕಟ್ಟಡಗಳಾದ ಕರ್ತವ್ಯ ಭವನದಲ್ಲಿರುವಂತೆಯೇ ಆಧುನಿಕ ಕೆಲಸದ ಸ್ಥಳಗಳನ್ನು ಹೊಂದಿವೆ ಎಂದು ಮೂಲಗಳು ತಿಳಿಸಿವೆ. ಪ್ರಧಾನ ಮಂತ್ರಿ ಕಚೇರಿ ಹಾಗೂ ಉನ್ನತ ಮಟ್ಟದ ಭೇಟಿಗಳ ಸಮಯದಲ್ಲಿ ವಿಧ್ಯುಕ್ತ ಉದ್ದೇಶಗಳಿಗೆ ಬಳಸಲಾಗುವ ಕೊಠಡಿಗಳು ಬಳಕೆಯ ಸ್ವರೂಪಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಈ ಸಂಕೀರ್ಣವನ್ನು ಲಾರ್ಸೆನ್ ಅಂಡ್ ಟೂಬ್ರೊ ಸಂಸ್ಥೆ ಕೇಂದ್ರ ಲೋಕೋಪಯೋಗಿ ಇಲಾಖೆ (CPWD)ಗಾಗಿ ನಿರ್ಮಿಸಿದ್ದು, 2022ರಲ್ಲಿ ಒಪ್ಪಂದ ನೀಡಲಾಗಿತ್ತು.
ಹೊಸದಿಲ್ಲಿಯ ಎಕ್ಸಿಕ್ಯೂಟಿವ್ ಎನ್ಕ್ಲೇವ್ ನಿರ್ಮಾಣದ ಒಪ್ಪಂದವನ್ನು ಸಿಪಿಡಬ್ಲ್ಯೂಡಿ ಲಾರ್ಸೆನ್ ಅಂಡ್ ಟೂಬ್ರೊ ಲಿಮಿಟೆಡ್ ಗೆ ನವೆಂಬರ್ 15, 2022ರಂದು ಟೆಂಡರ್ಗೆ ಹಾಕಲಾದ ಅಂದಾಜು ವೆಚ್ಚಕ್ಕಿಂತ 10.44 ಶೇಕಡಾ ಕಡಿಮೆ ದರದಲ್ಲಿ ನೀಡಿತ್ತು. ಇದರ ಮೊತ್ತ ರೂ. 1,189 ಕೋಟಿ. ನಿರ್ಮಾಣ ಸಂಸ್ಥೆಯು 24 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಾಗುತ್ತದೆ ಎಂದು ಸಿಪಿಡಬ್ಲ್ಯೂಡಿ ನವೆಂಬರ್ 24, 2022ರಂದು ಎಕ್ಸ್ನಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ ತಿಳಿಸಿತ್ತು.
ಅಂದಿನಿಂದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹಾಗೂ ಸಿಪಿಡಬ್ಲ್ಯೂಡಿ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. ಯೋಜನೆಯ ಪೂರ್ಣಗೊಳಿಸುವಿಕೆಯ ವೆಚ್ಚ ಸೇರಿದಂತೆ ಹಲವು ಪ್ರಶ್ನೆಗಳನ್ನು MoHUAಗೆ ಕಳುಹಿಸಲಾಗಿದೆ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಕಾಲದಿಂದಲೇ ಪ್ರಧಾನ ಮಂತ್ರಿ ಕಚೇರಿ ಸೌತ್ ಬ್ಲಾಕ್ನಿಂದ ಕಾರ್ಯನಿರ್ವಹಿಸುತ್ತಿದೆ. 1920–1930ರ ದಶಕದಲ್ಲಿ ಸಾಮ್ರಾಜ್ಯಶಾಹಿ ಬ್ರಿಟಿಷ್ ಸರ್ಕಾರವು ನಾರ್ತ್ ಬ್ಲಾಕ್ ಜೊತೆಗೆ ಈ ಕಟ್ಟಡಗಳನ್ನು ಸೆಕ್ರೆಟರಿಯೇಟ್ಗಳಾಗಿ ನಿರ್ಮಿಸಿತ್ತು. ಈ ಪ್ರದೇಶದ ಪುನರಾಭಿವೃದ್ಧಿಯ ಭಾಗವಾಗಿ, ಸಿಪಿಡಬ್ಲ್ಯೂಡಿ ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್ಗಳನ್ನು ರಾಷ್ಟ್ರೀಯ ವಸ್ತುಸಂಗ್ರಹಾಲಯಗಳಾಗಿ ಪರಿವರ್ತಿಸಲು ಸಜ್ಜಾಗಿದ್ದು, ರೈಸಿನಾ ಬೆಟ್ಟದ ಮೇಲಿರುವ ಕೆಂಪು ಮರಳುಗಲ್ಲಿನ ಈ ಕಟ್ಟಡಗಳು ಮೊದಲ ಬಾರಿಗೆ ಸಾರ್ವಜನಿಕರಿಗೆ ತೆರೆಯಲಿವೆ.
ಗೃಹ ವ್ಯವಹಾರ ಹಾಗೂ ಹಣಕಾಸು ಸಚಿವಾಲಯಗಳು ಜನಪಥ್ನಲ್ಲಿರುವ ಹೊಸ ಕರ್ತವ್ಯ ಭವನ ಸಂಕೀರ್ಣಕ್ಕೆ ಸ್ಥಳಾಂತರಗೊಂಡ ಬಳಿಕ ನಾರ್ತ್ ಬ್ಲಾಕ್ನ ಪುನಃಸ್ಥಾಪನಾ ಕಾರ್ಯ ಕಳೆದ ವರ್ಷ ಆರಂಭಗೊಂಡಿದೆ. ಸೌತ್ ಬ್ಲಾಕ್ನ ಪುನಃಸ್ಥಾಪನೆಗಾಗಿ ಸಿಪಿಡಬ್ಲ್ಯೂಡಿ ಈಗಾಗಲೇ ಟೆಂಡರ್ ಕರೆದಿದ್ದು, ಕಟ್ಟಡ ಖಾಲಿಯಾದ ನಂತರ ಕಾಮಗಾರಿ ಆರಂಭವಾಗಲಿದೆ.
2019ರಲ್ಲಿ MoHUA ಘೋಷಿಸಿದ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯು 2023ರಲ್ಲಿ ಪೂರ್ಣಗೊಂಡ ಹೊಸ ಸಂಸತ್ ಭವನ, 2024ರಲ್ಲಿ ಪೂರ್ಣಗೊಂಡ ವೈಸ್ ಪ್ರೆಸಿಡೆಂಟ್ಸ್ ಎನ್ಕ್ಲೇವ್ ಹಾಗೂ 10 ಹೊಸ ಸಾಮಾನ್ಯ ಕೇಂದ್ರ ಸಚಿವಾಲಯ ಕಟ್ಟಡಗಳ ನಿರ್ಮಾಣವನ್ನು ಒಳಗೊಂಡಿದೆ. ಅವುಗಳಲ್ಲಿ ಮೊದಲ ಮೂರು ಕಟ್ಟಡಗಳನ್ನು ನಿರ್ಮಿಸಲಾಗಿದ್ದು, 2025ರಲ್ಲಿ ಅವುಗಳಿಗೆ ‘ಕರ್ತವ್ಯ ಭವನ’ ಎಂದು ಹೆಸರು ನೀಡಲಾಗಿದೆ.
ಸೌತ್ ಬ್ಲಾಕ್ ಕಟ್ಟಡ ಹೇಗಿದೆ?
ಸೌತ್ ಬ್ಲಾಕ್ ವಿದೇಶಾಂಗ ಸಚಿವಾಲಯ, ಪ್ರಧಾನ ಮಂತ್ರಿ ಕಚೇರಿ ಹಾಗೂ ರಕ್ಷಣಾ ಸಚಿವಾಲಯಗಳನ್ನು ಒಳಗೊಂಡ ಕಟ್ಟಡವಾಗಿದೆ. ವಿದೇಶಾಂಗ ಸಚಿವಾಲಯದ ಕಚೇರಿಗಳು ಜವಾಹರಲಾಲ್ ನೆಹರು ಭವನ, ಶಾಸ್ತ್ರಿ ಭವನ, ಪಟಿಯಾಲ ಹೌಸ್ ಮತ್ತು ಐಎಸ್ಐಎಲ್ ಕಟ್ಟಡದಲ್ಲಿಯೂ ಕಾರ್ಯನಿರ್ವಹಿಸುತ್ತಿವೆ. ರಸ್ತೆ ಅಕ್ಕಪಕ್ಕದಲ್ಲಿರುವ ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್ಗಳನ್ನು 1931ರಲ್ಲಿ ರೈಸಿನಾ ಬೆಟ್ಟದ ತುದಿಯಲ್ಲಿ ನಿರ್ಮಿಸಲಾಯಿತು. 20ನೇ ಶತಮಾನದ ಆರಂಭದಲ್ಲಿ ಬ್ರಿಟನ್ನ ಖ್ಯಾತ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾದ ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದ ಈ ಎರಡು ಸಚಿವಾಲಯ ಕಟ್ಟಡಗಳು ರಾಷ್ಟ್ರಪತಿ ಭವನದ ಸಮೀಪದಲ್ಲಿವೆ. ಸೌತ್ ಬ್ಲಾಕ್ ಕಮಾನು ಮೆಟ್ಟಿಲುಗಳು ಮತ್ತು ಎತ್ತರದ ಛಾವಣಿಯನ್ನು ಹೊಂದಿರುವ ಭವ್ಯ ಕಟ್ಟಡವಾಗಿದೆ.
ಹರ್ಬರ್ಟ್ ಬೇಕರ್ ಮತ್ತು ಹೊಸದಿಲ್ಲಿಯ ಸರ್ಕಾರಿ ಕಟ್ಟಡಗಳನ್ನು ವಿನ್ಯಾಸಗೊಳಿಸಿದ ಎಡ್ವಿನ್ ಲುಟಿಯೆನ್ಸ್ ಅವರು ‘ಜಾಲಿ’ ಹಾಗೂ ‘ಚಜ್ಜಾ’ ಎಂಬ ವಿಶಿಷ್ಟ ಭಾರತೀಯ ವಾಸ್ತುಶಿಲ್ಪ ವೈಶಿಷ್ಟ್ಯಗಳನ್ನು ಅಳವಡಿಸಿಕೊಂಡಿದ್ದರು. ಸಂಕೀರ್ಣವಾಗಿ ಕೆತ್ತಿದ ಅಲಂಕಾರಿಕ ಕಲ್ಲಿನ ಪರದೆ ಆಗಿರುವ ಜಾಲಿ, ಭಾರತೀಯ ಹವಾಮಾನಕ್ಕೆ ಅನುಕೂಲಕರವಾಗಿದೆ. ಕಲ್ಲಿನ ತೆಳುವಾದ ಚಜ್ಜಾ (ಗೋಡೆಗಿಂತ ಮುಂದೆ ಚಾಚಿರುವ ಛಾವಣಿ) ಬೇಸಿಗೆಯ ಬಿಸಿಲು ಮತ್ತು ಮಳೆಯಿಂದ ಗೋಡೆಗಳು ಹಾಗೂ ಕಿಟಕಿಗಳನ್ನು ರಕ್ಷಿಸುತ್ತದೆ. ವಿನ್ಯಾಸಕರು ಅಳವಡಿಸಿಕೊಂಡ ಮತ್ತೊಂದು ವೈಶಿಷ್ಟ್ಯವೆಂದರೆ ಛತ್ರಿ ಅಥವಾ ಛತ್ರಿ ಆಕಾರದ ಗುಮ್ಮಟ. ಈ ಎಲ್ಲ ವೈಶಿಷ್ಟ್ಯಗಳು ಸೌತ್ ಬ್ಲಾಕ್ನಲ್ಲಿ ಸ್ಪಷ್ಟವಾಗಿ ಕಾಣಿಸುತ್ತವೆ.
ದಶಕಗಳಿಂದ ದೇಶದ ಉನ್ನತ ಕಚೇರಿಗಳನ್ನು ಹೊಂದಿರುವ ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್ ಕಟ್ಟಡಗಳನ್ನು ಪ್ರಸ್ತಾವಿತ ‘ಯುಗೇ ಯುಗೀನ್ ಭಾರತ್ ಸಂಗ್ರಹಾಲಯ’ ಯೋಜನೆಯಡಿ ವಸ್ತುಸಂಗ್ರಹಾಲಯಗಳಾಗಿ ಪರಿವರ್ತಿಸಲು ಯೋಜಿಸಲಾಗಿದೆ. ಈ ರೂಪಾಂತರಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಫ್ರಾನ್ಸ್ನ ವಸ್ತುಸಂಗ್ರಹಾಲಯ ಅಭಿವೃದ್ಧಿ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದರ ಮೂಲಕ ಈ ಪುರಾತನ ಕಟ್ಟಡಗಳು ಭಾರತದ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಬಿಂಬಿಸಲಿವೆ.







