ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಗಳ ನಡುವೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಗಳಿಗೆ ಪ್ರಧಾನಿ ಮೋದಿ ಒತ್ತು; ಇವು ಹೇಗೆ ಕೆಲಸ ಮಾಡುತ್ತವೆ?

Photo Credit : indianexpress.com
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಶೀಘ್ರ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಗಳನ್ನು ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಭರವಸೆಯು, ನ್ಯಾಯಾಂಗ ವಿಳಂಬಕ್ಕೆ ಪರಿಹಾರವೆಂದು ಪರಿಗಣಿಸಲಾಗುವ ಈ ವ್ಯವಸ್ಥೆಯತ್ತ ಮತ್ತೆ ಗಮನ ಸೆಳೆಯುವಂತೆ ಮಾಡಿದೆ. ನಿರ್ದಿಷ್ಟ ಮತ್ತು ಆದ್ಯತೆಯ ಅಪರಾಧಗಳ ಕಾನೂನು ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸರಕಾರ ಮತ್ತು ನ್ಯಾಯಾಂಗ ವ್ಯವಸ್ಥೆ ಎರಡೂ ಕಾಲಕಾಲಕ್ಕೆ ಈ ಫಾಸ್ಟ್ ಟ್ರ್ಯಾಕ್ ಕೋರ್ಟ್ಗಳನ್ನು ನೆಚ್ಚಿಕೊಳ್ಳುತ್ತಿವೆ.
ಈ ನ್ಯಾಯಾಲಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಅವು ಯಾವ ರೀತಿಯ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತವೆ ಎಂಬುದನ್ನು ನೋಡೋಣ.
►ಫಾಸ್ಟ್ ಟ್ರ್ಯಾಕ್ ಕೋರ್ಟ್ ಎಂದರೆ ಏನು? ಅವು ಯಾವ ಪ್ರಕರಣಗಳ ವಿಚಾರಣೆ ನಡೆಸುತ್ತವೆ?
ಈ ನ್ಯಾಯಾಲಯಗಳನ್ನು ನಿಯಂತ್ರಿಸಲು ಯಾವುದೇ ಪ್ರತ್ಯೇಕವಾದ ಕೇಂದ್ರ ಶಾಸನವಿಲ್ಲ. ನಿರ್ದಿಷ್ಟ ವಲಯಗಳಿಗೆ ವಿಶೇಷ ನ್ಯಾಯಾಲಯಗಳನ್ನು ಮೀಸಲಿಡುವ ಪ್ರಸ್ತಾವನೆಯು 14ನೇ ಹಣಕಾಸು ಆಯೋಗದಿಂದ (2015-2020) ಬಂದಿತ್ತು. ಕೊಲೆ, ಅಪಹರಣ, ಸುಲಿಗೆಯಂತಹ ಭೀಕರ ಅಪರಾಧಗಳು ಹಾಗೂ ಐದು ವರ್ಷಗಳಿಗಿಂತ ಹೆಚ್ಚು ಕಾಲ ಬಾಕಿಯಿರುವ ಆಸ್ತಿ ವಿವಾದಗಳ ತ್ವರಿತ ವಿಚಾರಣೆಗಾಗಿ 1,800 ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲು ಆಯೋಗವು ಶಿಫಾರಸು ಮಾಡಿತ್ತು.
ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ವಿಕಲಚೇತನರು ಮತ್ತು ಮಾರಕ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳು ಸೇರಿದಂತೆ ದುರ್ಬಲ ವರ್ಗದವರಿಗೆ ಸಂಬಂಧಿಸಿದ ಪ್ರಕರಣಗಳಿಗೂ ಈ ನ್ಯಾಯಾಲಯಗಳನ್ನು ಬಳಸಲು ಶಿಫಾರಸು ಮಾಡಲಾಗಿತ್ತು.
2019ರಲ್ಲಿ, ಕ್ರಿಮಿನಲ್ ಕಾನೂನುಗಳ ತಿದ್ದುಪಡಿ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ, ಕೇಂದ್ರ ಸರಕಾರವು 'ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್ಗಳನ್ನು' (FTSC) ಸ್ಥಾಪಿಸಲು ಕೇಂದ್ರ ಪುರಸ್ಕೃತ ಯೋಜನೆಯನ್ನು ಪ್ರಾರಂಭಿಸಿತು. ನಿರ್ಭಯ ನಿಧಿಯಿಂದ ಭಾಗಶಃ ಅನುದಾನ ಪಡೆಯುವ ಈ ವಿಶೇಷ ನ್ಯಾಯಾಲಯಗಳನ್ನು ಅತ್ಯಾಚಾರ ಪ್ರಕರಣಗಳು ಮತ್ತು 'ಪೋಕ್ಸೋ' (POCSO) ಕಾಯ್ದೆಯಡಿಯಲ್ಲಿ ಬರುವ ಅಪರಾಧಗಳ ಕಾಲಮಿತಿಯ ವಿಚಾರಣೆಗೆ ಮಾತ್ರ ಮೀಸಲಿಡಲಾಗಿದೆ.
►ಒಂದು ನಿರ್ದಿಷ್ಟ ಪ್ರಕರಣಕ್ಕಾಗಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಬಹುದೇ?
ವಿಶೇಷ ಕೋರ್ಟ್ಗಳ ಸ್ಥಾಪನೆಯು ಕಾನೂನಿನ ಮುಂದೆ ಎಲ್ಲರಿಗೂ ಸಮಾನತೆಯನ್ನು ನೀಡುವ ಸಂವಿಧಾನದ 14ನೇ ವಿಧಿಗೆ ಬದ್ಧವಾಗಿರಬೇಕು. 1952ರ 'ಪಶ್ಚಿಮ ಬಂಗಾಳ ಸರ್ಕಾರ vs ಅನ್ವರ್ ಅಲಿ ಸರ್ಕಾರ್' ಪ್ರಕರಣದ ತೀರ್ಪಿನಲ್ಲಿ, ಕೇವಲ "ತ್ವರಿತ ವಿಚಾರಣೆಯ ಉದ್ದೇಶಕ್ಕಾಗಿ" ಸರಕಾರವು ತನ್ನಿಷ್ಟದಂತೆ ಪ್ರಕರಣಗಳನ್ನು ವಿಶೇಷ ಕೋರ್ಟ್ಗಳಿಗೆ ಆಯ್ಕೆ ಮಾಡಲು ಅವಕಾಶ ನೀಡಿದ್ದ ಕಾನೂನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಕೇವಲ "ವೇಗ" ಎಂಬುದೊಂದೇ ಸರಿಯಾದ ಮಾನದಂಡವಾಗಲು ಸಾಧ್ಯವಿಲ್ಲ ಎಂದು ಕೋರ್ಟ್ ಎಚ್ಚರಿಸಿತ್ತು. ಸಾಂವಿಧಾನಿಕ ಮಾನ್ಯತೆ ಪಡೆಯಲು, ಫಾಸ್ಟ್ ಟ್ರ್ಯಾಕಿಂಗ್ಗೆ ಆಯ್ಕೆ ಮಾಡುವ ಪ್ರಕರಣಗಳ ವರ್ಗೀಕರಣವು ಅಪರಾಧದ ಸ್ವರೂಪ ಅಥವಾ ಸಂತ್ರಸ್ತರ ಸ್ಥಿತಿಗತಿಯನ್ನು ಆಧರಿಸಿದ ಸ್ಪಷ್ಟ ಹಾಗೂ ವೈಜ್ಞಾನಿಕ ಆಧಾರವನ್ನು ಹೊಂದಿರಬೇಕು.
ಆದರೆ, ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ಸಾರ್ವಜನಿಕವಾಗಿ ತ್ವರಿತ ನ್ಯಾಯಕ್ಕಾಗಿ ಒತ್ತಾಯ ಕೇಳಿಬಂದಾಗ ಕೋರ್ಟ್ಗಳು ಈ ಕಟ್ಟುನಿಟ್ಟಿನ ನಿಯಮಕ್ಕೆ ಸಂಪೂರ್ಣವಾಗಿ ಬದ್ಧವಾಗಿಲ್ಲ. ಉದಾಹರಣೆಗೆ, ಕೋಟ್ಯಂತರ ರೂಪಾಯಿಗಳ 'ಸತ್ಯಂ ಕಂಪ್ಯೂಟರ್ ಸರ್ವಿಸಸ್' ಲೆಕ್ಕಪತ್ರ ಹಗರಣದ ವಿಚಾರಣೆಗಾಗಿ ಆಂಧ್ರಪ್ರದೇಶ ಹೈಕೋರ್ಟ್ 2010ರ ಫೆಬ್ರವರಿಯಲ್ಲಿ ವಿಶೇಷ ಕೋರ್ಟ್ ಅನ್ನು ಸ್ಥಾಪಿಸಿತ್ತು.
ಇದಲ್ಲದೆ, '2ಜಿ ಸ್ಪೆಕ್ಟ್ರಮ್' ಹಂಚಿಕೆ ಹಗರಣದ ದಿನನಿತ್ಯದ ತ್ವರಿತ ವಿಚಾರಣೆಗಾಗಿ ಪ್ರತ್ಯೇಕ ವಿಶೇಷ ಕೋರ್ಟ್ ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಈ ಕೋರ್ಟ್ 2011ರ ಮಾರ್ಚ್ನಲ್ಲಿ ಕಾರ್ಯಾರಂಭ ಮಾಡಿತು ಮತ್ತು ಹೊಸದಿಲ್ಲಿಯ ಪಟಿಯಾಲ ಹೌಸ್ ಕೋರ್ಟ್ ಸಂಕೀರ್ಣದಿಂದ ಕಾರ್ಯಾಚರಿಸುತ್ತಿತ್ತು.
ಪ್ರಸ್ತುತ ದಿಲ್ಲಿಯ ರೌಸ್ ಅವೆನ್ಯೂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವ ನೀಟ್ (NEET) ಪ್ರಕರಣವನ್ನು ಸರಕಾರ ಅಥವಾ ಕೋರ್ಟ್ ಆದೇಶದ ಮೂಲಕ ವಿಶೇಷ ಕೋರ್ಟ್ಗೆ ವರ್ಗಾಯಿಸಲಾಗುತ್ತದೆಯೇ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ.
ಫಾಸ್ಟ್ ಟ್ರ್ಯಾಕ್ ಕೋರ್ಟ್ಗಳು ಎಷ್ಟು ವೇಗವಾಗಿ ಕೆಲಸ ಮಾಡುತ್ತವೆ?
ಕೋರ್ಟ್ ಮೆಟ್ಟಿಲೇರುವ ಜನರಿಗೆ ತಮ್ಮ ಪ್ರಕರಣಗಳ ವಿಚಾರಣೆ ನಿಗದಿತ ಅವಧಿಯಲ್ಲಿ ಮುಗಿಯಬೇಕು ಎಂಬ ಶಾಸನಬದ್ಧ ಹಕ್ಕಿರುವುದಿಲ್ಲ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯು (BNSS) ಸಾಮಾನ್ಯ ವಿಚಾರಣೆಗಳನ್ನು ಗರಿಷ್ಠ ಎರಡು ವರ್ಷಗಳಲ್ಲಿ ಮತ್ತು ಲೈಂಗಿಕ ಅಪರಾಧಗಳ ವಿಚಾರಣೆಗಳನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಲು ಶಿಫಾರಸು ಮಾಡುತ್ತದೆ.
ಕೇಂದ್ರ ಪುರಸ್ಕೃತ ಎಫ್ಟಿಎಸ್ಸಿ ಯೋಜನೆಯಡಿಯಲ್ಲಿ, ಪ್ರತಿಯೊಂದು ಫಾಸ್ಟ್ ಟ್ರ್ಯಾಕ್ ವಿಶೇಷ ಕೋರ್ಟ್ ಪ್ರತಿ ಮೂರು ತಿಂಗಳಿಗೆ 41ರಿಂದ 42 ಪ್ರಕರಣಗಳನ್ನು ಇತ್ಯರ್ಥಪಡಿಸುವ ನಿರೀಕ್ಷೆಯಿರುತ್ತದೆ. ಅಂದರೆ ವಾರ್ಷಿಕವಾಗಿ ಕನಿಷ್ಠ 165 ಪ್ರಕರಣಗಳನ್ನು ವಿಲೇವಾರಿ ಮಾಡುವ ಗುರಿ ನಿಗದಿಪಡಿಸಲಾಗಿದೆ.
►ಇಲ್ಲಿಯವರೆಗಿನ ಕಾರ್ಯಕ್ಷಮತೆ ಹೇಗಿದೆ?
2026ರ ಜನವರಿಯ ವೇಳೆಗೆ, 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 862 ಸಾಮಾನ್ಯ ಫಾಸ್ಟ್ ಟ್ರ್ಯಾಕ್ ಕೋರ್ಟ್ಗಳು ಕಾರ್ಯನಿರ್ವಹಿಸುತ್ತಿದ್ದವು. ಇವುಗಳೊಂದಿಗೆ, 398 ಪ್ರತ್ಯೇಕ ಪೋಕ್ಸೋ (POCSO) ಕೋರ್ಟ್ಗಳು ಸೇರಿದಂತೆ ಒಟ್ಟು 774 ಫಾಸ್ಟ್ ಟ್ರ್ಯಾಕ್ ವಿಶೇಷ ಕೋರ್ಟ್ಗಳು (FTSC) 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಕ್ರಿಯವಾಗಿದ್ದವು.
ಈ ವಿಶೇಷ ಕೋರ್ಟ್ಗಳ ಪ್ರಕರಣ ವಿಲೇವಾರಿ ಪ್ರಮಾಣ ಶೇಕಡಾ 96ರಷ್ಟಿದೆ. ಅಂದರೆ ಈ ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಂಡಿದೆ ಅಥವಾ ಅವುಗಳನ್ನು ವಜಾಗೊಳಿಸಲಾಗಿದೆ. 2024ರಲ್ಲಿ ಫಾಸ್ಟ್ ಟ್ರ್ಯಾಕ್ ವಿಶೇಷ ಕೋರ್ಟ್ ಗಳಲ್ಲಿ 88,902 ಹೊಸ ಪ್ರಕರಣಗಳು ದಾಖಲಾಗಿದ್ದರೆ, 85,595 ಪ್ರಕರಣಗಳು ಇತ್ಯರ್ಥಗೊಂಡಿದ್ದವು. ಸರಾಸರಿ ಒಂದು ವಿಶೇಷ ಕೋರ್ಟ್ ತಿಂಗಳಿಗೆ ಸುಮಾರು 9.5 ಪ್ರಕರಣಗಳನ್ನು ವಿಲೇವಾರಿ ಮಾಡುತ್ತದೆ. ಇದು ಸಾಮಾನ್ಯ ವಿಚಾರಣಾ ಕೋರ್ಟ್ ತಿಂಗಳಿಗೆ ವಿಲೇವಾರಿ ಮಾಡುವ 3.3 ಪ್ರಕರಣಗಳಿಗೆ ಹೋಲಿಸಿದರೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.
ಪ್ರಕರಣಗಳ ವಿಲೇವಾರಿ ಪ್ರಮಾಣ ಹೆಚ್ಚಿದ್ದರೂ, ಬರುವ ದೂರುಗಳ ಸಂಖ್ಯೆ ಹೆಚ್ಚಿಗೆ ಇರುವುದರಿಂದ ಬಾಕಿ ಉಳಿಯುವ ಪ್ರಕರಣಗಳ ಸವಾಲು ಮುಂದುವರಿದಿದೆ. 2023ರ ಅಂತ್ಯದ ವೇಳೆಗೆ, ಈ ವಿಶೇಷ ಕೋರ್ಟ್ಗಳಲ್ಲಿ 2.4 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿಯಿದ್ದವು.
ಸರಕಾರವೂ ಸಂಸತ್ತಿನಲ್ಲಿ ಈ ಕಾರ್ಯಾಚರಣೆಯ ಅಡೆತಡೆಗಳನ್ನು ಒಪ್ಪಿಕೊಂಡಿದೆ. 2026ರ ಮಾರ್ಚ್ನಲ್ಲಿ ಲೋಕಸಭೆಗೆ ನೀಡಿದ ಉತ್ತರದಲ್ಲಿ ಕಾನೂನು ಮತ್ತು ನ್ಯಾಯ ಸಚಿವಾಲಯವು, ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾಗಲು ಹಲವು ಕಾರಣಗಳಿವೆ ಎಂದು ತಿಳಿಸಿತ್ತು. "ಭೌತಿಕ ಮೂಲಸೌಕರ್ಯಗಳ ಲಭ್ಯತೆ, ಪ್ರಕರಣದ ಜಟಿಲತೆ, ತನಿಖೆಯ ಗುಣಮಟ್ಟ, ಸಾಕ್ಷ್ಯಾಧಾರಗಳ ಸ್ವರೂಪ, ವಕೀಲರು, ತನಿಖಾ ಸಂಸ್ಥೆಗಳು, ವೈಜ್ಞಾನಿಕ/ಫೊರೆನ್ಸಿಕ್ ಬೆಂಬಲ, ಸಾಕ್ಷಿಗಳು ಮತ್ತು ದೂರುದಾರರ ಸಹಕಾರ ಹಾಗೂ ನಿಯಮಗಳ ಸರಿಯಾದ ಅಳವಡಿಕೆ" ಇದರಲ್ಲಿ ಸೇರಿವೆ ಎಂದು ಸಚಿವಾಲಯ ಸ್ಪಷ್ಟಪಡಿಸಿತ್ತು.
ಕ್ರಿಮಿನಲ್ ವಕೀಲರಾದ ಕಾರ್ತಿಕ್ ವೇಣು ಅವರು The Indian express ಜತೆ ಮಾತನಾಡಿದ್ದು, "ಅಧಿಕ ಪ್ರಕರಣಗಳ ಹೊರೆ, ನ್ಯಾಯಾಂಗ ಅಧಿಕಾರಿಗಳ ಕೊರತೆ ಮತ್ತು ವಿಚಾರಣೆ ವೇಳೆ ಎದುರಾಗುವ ಸ್ವಾಭಾವಿಕ ವಿಳಂಬಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ಗಳು ಒಂದೇ ಪರಿಹಾರವಾಗುವುದಿಲ್ಲ. ಸೂಕ್ತ ಮೂಲಸೌಕರ್ಯಗಳನ್ನು ಒದಗಿಸಿದರೆ ಮಾತ್ರ ಫಾಸ್ಟ್ ಟ್ರ್ಯಾಕ್ ಕೋರ್ಟ್ಗಳು ಸ್ವಾಗತಾರ್ಹ ಕ್ರಮವಾಗುತ್ತವೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಷಯಕ್ಕೆ ಅನುಗುಣವಾಗಿ ಫಾಸ್ಟ್ ಟ್ರ್ಯಾಕ್ ಕೋರ್ಟ್ಗಳ ದಕ್ಷತೆ ಬದಲಾಗುತ್ತದೆ ಎಂದು ಅವರು ಹೇಳಿದ್ದಾರೆ. "ಪ್ರಕರಣಗಳ ಸಂಖ್ಯೆ ಹೆಚ್ಚಿರುವುದು ಮತ್ತು ಅದಕ್ಕೆ ತಕ್ಕಂತೆ ಅಗತ್ಯ ಸಂಖ್ಯೆಯ ನ್ಯಾಯಾಧೀಶರನ್ನು ನೇಮಿಸಲು ಸಾಧ್ಯವಾಗದಿರುವುದರಿಂದ ಪೋಕ್ಸೋ ಮತ್ತು ಐಪಿಸಿ ಪ್ರಕರಣಗಳಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಟ್ಗಳು ವಿಫಲವಾಗಿವೆ. ಆದರೆ, ಭ್ರಷ್ಟಾಚಾರ ತಡೆ ಕಾಯ್ದೆಯಂತಹ ಪ್ರಕರಣಗಳಲ್ಲಿ ಪರಿಸ್ಥಿತಿ ತುಸು ಉತ್ತಮವಾಗಿದೆ" ಎಂದಿದ್ದಾರೆ.
2002ರ 'ಪಿ. ರಾಮಚಂದ್ರ ರಾವ್ vs ಕರ್ನಾಟಕ ಸರ್ಕಾರ' ಪ್ರಕರಣದ ಐತಿಹಾಸಿಕ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ನ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠವು "ಎಲ್ಲಾ ಕ್ರಿಮಿನಲ್ ವಿಚಾರಣೆಗಳನ್ನು ಮುಗಿಸಲು ಒಂದು ಅಂತಿಮ ಗಡುವನ್ನು ನಿಗದಿಪಡಿಸುವುದು ಸೂಕ್ತವೂ ಅಲ್ಲ, ಸಾಧ್ಯವೂ ಇಲ್ಲ" ಎಂದು ಹೇಳಿತ್ತು. ಕೇವಲ ಸಮಯ ಮೀರಿದೆ ಎಂಬ ಒಂದೇ ಕಾರಣಕ್ಕೆ ವಿಚಾರಣೆಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತ್ತು.
►ಹೊಸ ಫಾಸ್ಟ್ ಟ್ರ್ಯಾಕ್ ಕೋರ್ಟ್ಗಳ ಎದುರಿರುವ ಸವಾಲುಗಳು
ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಘೋಷಿಸಿರುವ ಹೊಸ ಫಾಸ್ಟ್ ಟ್ರ್ಯಾಕ್ ಕೋರ್ಟ್ ಗಳ ಮುಂದೆ ದೊಡ್ಡ ಸವಾಲಿದೆ.
2002ರಿಂದ 2025ರ ನಡುವೆ ನಡೆದ 45 ಪ್ರಮುಖ ಪರೀಕ್ಷಾ ಸೋರಿಕೆ ಪ್ರಕರಣಗಳ ಕುರಿತು 'The Indian Expressʼ ಜೂನ್ 5ರಂದು ನಡೆಸಿದ ತನಿಖಾ ವರದಿಯ ಪ್ರಕಾರ, ಕನಿಷ್ಠ ಒಂದು ಲಕ್ಷ ಅಭ್ಯರ್ಥಿಗಳಿಗೆ ಸಂಬಂಧಿಸಿದ ಈ ಪ್ರಕರಣಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಕಳಪೆ ಮಟ್ಟದ ತನಿಖೆ ಮತ್ತು ಕಠಿಣ ಜಾಮೀನು ಷರತ್ತುಗಳಿಲ್ಲದೆ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಸಾಮಾನ್ಯ ಅಪರಾಧವೆಂದು ಪರಿಗಣಿಸುತ್ತಿರುವುದು ಈ ತನಿಖೆಗೆ ಎದುರಾಗಿರುವ ಅತಿ ದೊಡ್ಡ ಅಡಚಣೆಯಾಗಿದೆ ಎಂದು ಈ ವರದಿ ತಿಳಿಸಿದೆ.
2016ರ ಕರ್ನಾಟಕ ಪಿಯುಸಿ ಕೆಮಿಸ್ಟ್ರಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ, ತನಿಖೆಯಲ್ಲಿದ್ದ ಗಂಭೀರ ಲೋಪಗಳನ್ನು ಎತ್ತಿಹಿಡಿದ ಬೆಂಗಳೂರಿನ ಸೆಷನ್ ಕೋರ್ಟ್, 'ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ' (KCOCA) ಅಡಿಯಲ್ಲಿ ಬಂಧಿತರಾಗಿದ್ದ ಹಿರಿಯ ಅಧಿಕಾರಿಗಳು ಮತ್ತು ಪ್ರಮುಖ ರೂವಾರಿ ಸೇರಿದಂತೆ 19 ಜನ ಆರೋಪಿಗಳನ್ನು 2024ರ ಮೇ ತಿಂಗಳಿನಲ್ಲಿ ಖುಲಾಸೆಗೊಳಿಸಿತ್ತು.
ಅದೇ ವರ್ಷದ ಮತ್ತೊಂದು ಪ್ರಕರಣದಲ್ಲಿ ಅಂದರೆ ಯುಪಿ ಸಾರ್ವಜನಿಕ ಸೇವಾ ಆಯೋಗದ (UPPSC) ಪರೀಕ್ಷೆಗೆ ಸಂಬಂಧಿಸಿದಂತೆ ಯುಪಿ ಪೊಲೀಸ್ನ ಸಿಬಿ-ಸಿಐಡಿ (CB-CID) 2018ರಲ್ಲಿ ಸಲ್ಲಿಸಿದ್ದ ಕ್ಲೋಸರ್ ರಿಪೋರ್ಟ್ ಅನ್ನು ವಿಶೇಷ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ತಿರಸ್ಕರಿಸಿದ್ದು, 2020ರಲ್ಲಿ ಮರುತನಿಖೆಗೆ ಆದೇಶಿಸಿದ್ದರು.
ಇಷ್ಟೇ ಅಲ್ಲದೆ, ಹಲವು ಪ್ರಕರಣಗಳನ್ನು ಅತ್ಯಂತ ಅವಸರದಿಂದ ಮುಚ್ಚಿಹಾಕಿದ ಉದಾಹರಣೆಗಳೂ ಇವೆ.
2024ರ ಯುಜಿಸಿ ನೆಟ್ ಪ್ರಕರಣದಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿದ್ದರೂ ತನಿಖಾ ವರದಿಯನ್ನು ಮುಚ್ಚಿಹಾಕಲು ಯತ್ನಿಸಿದ ಸಿಬಿಐ ನಡೆಗೆ ದಿಲ್ಲಿ ನ್ಯಾಯಾಲಯವು 2026ರ ಮೇ ತಿಂಗಳಿನಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
ತನಿಖಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳ ಪ್ರಕಾರ, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಕಾನೂನಿನ ಅಡಿಯಲ್ಲಿ ಹೆಚ್ಚಾಗಿ ಸಾಮಾನ್ಯ ಅಪರಾಧವೆಂದೇ ಪರಿಗಣಿಸಲಾಗುತ್ತದೆ. "ಹೆಚ್ಚಿನ ಪ್ರಕರಣಗಳು ಐಪಿಸಿ ಸೆಕ್ಷನ್ 420 (ವಂಚನೆ), 467 ಮತ್ತು 468 (ನಕಲಿ ದಾಖಲೆ ಸೃಷ್ಟಿ), ಮತ್ತು 120-ಬಿ (ಅಪರಾಧಿಕ ಸಂಚು) ಅಡಿಯಲ್ಲಿ ದಾಖಲಾಗಿವೆ. ಇವೆಲ್ಲವೂ ಸಾಮಾನ್ಯ ಅಪರಾಧಗಳಾಗಿದ್ದು, ಯಾವುದೇ ಕಠಿಣ ಜಾಮೀನು ಷರತ್ತುಗಳನ್ನು ಹೊಂದಿರುವುದಿಲ್ಲ. ಕೆಲವು ರಾಜ್ಯಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯನ್ನು ಜಾರಿಗೊಳಿಸಲು ಜಾರಿ ನಿರ್ದೇಶನಾಲಯವನ್ನು ರಂಗಕ್ಕಿಳಿಸಿವೆ. ಉತ್ತರ ಪ್ರದೇಶ ಸರಕಾರವು ಕೆಲವು ಸಂದರ್ಭಗಳಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ವಶಕ್ಕೆ ಪಡೆಯಲು 'ಗ್ಯಾಂಗ್ಸ್ಟರ್ ಆಕ್ಟ್' ಅನ್ವಯಿಸಿದೆ" ಎಂದು ಕೇಂದ್ರ ತನಿಖಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫಾಸ್ಟ್ ಟ್ರ್ಯಾಕ್ ಕೋರ್ಟ್ ಗಳು ಪ್ರಮುಖವಾಗಿ ವ್ಯತ್ಯಾಸ ತರಬಹುದಾದ ಒಂದು ಕ್ಷೇತ್ರವೆಂದರೆ ತನಿಖಾ ಪ್ರಕ್ರಿಯೆಯನ್ನು ವೇಗಗೊಳಿಸುವುದು. 'ದಿ ಇಂಡಿಯನ್ ಎಕ್ಸ್ಪ್ರೆಸ್' ನಡೆಸಿರುವ ತನಿಖೆಯ ಪ್ರಕಾರ, ದೋಷಾರೋಪಣೆ ಹೊರಿಸಿದ ನಂತರ ಹಲವು ಪ್ರಕರಣಗಳ ವಿಚಾರಣೆ ಅತ್ಯಂತ ನಿಧಾನಗತಿಯಲ್ಲಿ ಸಾಗಿದೆ. ಇದಕ್ಕೆ ಉದಾಹರಣೆಯಾಗಿ 2006ರ ರೈಲ್ವೇ ಗ್ರೂಪ್-ಡಿ ಪ್ರಕರಣದಲ್ಲಿ 2012ರಿಂದ 2026ರ ನಡುವೆ 142 ಬಾರಿ ವಿಚಾರಣೆ ನಡೆದಿದ್ದರೂ, ಇದು ಇಂದಿಗೂ "ಸಾಕ್ಷಿಗಳ ವಿಚಾರಣೆ" ಹಂತದಲ್ಲೇ ಇದೆ.
►ಹೊಸ ಫಾಸ್ಟ್ ಟ್ರ್ಯಾಕ್ ಕೋರ್ಟ್ ಗೆ ನ್ಯಾಯಾಧೀಶರಾಗಿ ಅನು ಗ್ರೋವರ್ ಬಲಿಗಾ ನೇಮಕ
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಬೆಳಿಗ್ಗೆ 'ಎಕ್ಸ್' ಜಾಲತಾಣದಲ್ಲಿ ಮಾಡಿದ ಪೋಸ್ಟ್ ಬೆನ್ನಲ್ಲೇ, ದೆಹಲಿ ಹೈಕೋರ್ಟ್ 'ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ'ಯಡಿ ಬರುವ ಅಪರಾಧಗಳ ವಿಚಾರಣೆಗಾಗಿ ರೌಸ್ ಅವೆನ್ಯೂ ಸಂಕೀರ್ಣದಲ್ಲಿ ಹೊಸ ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್ ಅನ್ನು ಸ್ಥಾಪಿಸಿದೆ. ಗುರುವಾರ ತಡಸಂಜೆ ಹೊರಡಿಸಿದ ಆದೇಶದಲ್ಲಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರು ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳ ವಿಚಾರಣೆಗಾಗಿ ಈ ಹೊಸ ಕೋರ್ಟ್ಗೆ ನ್ಯಾಯಾಧೀಶರಾಗಿ ಅನು ಗ್ರೋವರ್ ಬಲಿಗಾ ಅವರನ್ನು ನೇಮಿಸಿದ್ದಾರೆ.
1969ರಲ್ಲಿ ಜನಿಸಿದ ನ್ಯಾಯಾಧೀಶೆ ಬಲಿಗಾ ಅವರು 2000ರಲ್ಲಿ ದಿಲ್ಲಿ ನ್ಯಾಯಾಂಗ ಸೇವೆಗೆ (DJS) ಸೇರ್ಪಡೆಗೊಂಡರು. ತಿಸ್ ಹಜಾರಿ ಕೋರ್ಟ್ನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಅವರು 2010ರಲ್ಲಿ ದ್ವಾರಕಾ ಕೋರ್ಟ್ ನಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ದಿಲ್ಲಿ ಉನ್ನತ ನ್ಯಾಯಾಂಗ ಸೇವೆಗೆ (DJHS) ಪದೋನ್ನತಿ ಪಡೆದರು. ಪ್ರಸ್ತುತ ಡಿಜೆಎಚ್ಎಸ್ನ ಹಿರಿಯ ಸದಸ್ಯೆಯಾಗಿರುವ ಇವರು 2029ರಲ್ಲಿ ನಿವೃತ್ತರಾಗಲಿದ್ದಾರೆ.
ತಿಸ್ ಹಜಾರಿ ಕೋರ್ಟ್ನ ಸಂಧಾನ ಕೇಂದ್ರದ ಉಸ್ತುವಾರಿ ನ್ಯಾಯಾಧೀಶೆಯಾಗಿದ್ದ ಇವರು, ಈಗ ವಿಶೇಷ ಸಿಬಿಐ ನ್ಯಾಯಾಧೀಶೆಯಾಗಿ 2026ರ ನೀಟ್ ಸೋರಿಕೆ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ. ಇವರು ಈ ಹಿಂದೆ 2022ರಲ್ಲಿ ರೌಸ್ ಅವೆನ್ಯೂ ಸಂಕೀರ್ಣದಲ್ಲಿ ನಾಲ್ಕು ತಿಂಗಳ ಕಾಲ ವಿಶೇಷ ಸಿಬಿಐ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಿದ್ದರು.
ಡಿಸೆಂಬರ್ 2025ರಲ್ಲಿ ತಿಸ್ ಹಜಾರಿಗೆ ವರ್ಗಾವಣೆಯಾಗುವ ಮೊದಲು, ಇವರು ಸಾಕೇತ್ ನ ವಾಣಿಜ್ಯ ಕೋರ್ಟ್ ನಲ್ಲಿ ಜಿಲ್ಲಾ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಿದ್ದರು. ದಿಲ್ಲಿ ಜಿಲ್ಲಾ ಕೋರ್ಟ್ಗಳ ವರದಿಯ ಪ್ರಕಾರ, ಇವರ ಪೀಠವು ಹೆಚ್ಚಿನ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸುವ ಮೂಲಕ ಸದಾ ಮುಂಚೂಣಿಯಲ್ಲಿತ್ತು. ದಿಲ್ಲಿ ಜಿಲ್ಲಾ ಕೋರ್ಟ್ಗಳ ವೆಬ್ಸೈಟ್ ನಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ, ಹೈಕೋರ್ಟ್ ನಡೆಸಿದ ಅಂಕಿಅಂಶಗಳ ಮೌಲ್ಯಮಾಪನದಲ್ಲಿ ಇವರು ತಿಂಗಳಿಗೆ 18 ಪ್ರಕರಣಗಳನ್ನು ವಿಲೇವಾರಿ ಮಾಡಿರುವುದು ಕಂಡುಬಂದಿದೆ.
ಅಧಿಕೃತ ದಾಖಲೆಗಳ ಪ್ರಕಾರ, 20 ವರ್ಷಗಳ ಹಿಂದೆ ಅಂದರೆ 2006ರ ಡಿಸೆಂಬರ್ ನಲ್ಲಿ ಇವರು ಪಟಿಯಾಲ ಹೌಸ್ ಕೋರ್ಟ್ ಸಂಕೀರ್ಣದಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು. 2013ರಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶೆಯಾಗಿದ್ದಾಗ, 'ಇಂಡಿಯನ್ ಲಾ ರಿಪೋರ್ಟ್ಸ್' (ದಿಲ್ಲಿ ಆವೃತ್ತಿ)ನ ವರದಿಗಾರರ ತಂಡದಲ್ಲಿದ್ದರು. ಪ್ರಸ್ತುತ ದಿಲ್ಲಿ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಶಾಲಿಂದರ್ ಕೌರ್, ಗಿರೀಶ್ ಕತ್ಪಾಲಿ ಹಾಗೂ ಹೈಕೋರ್ಟ್ ರಿಜಿಸ್ಟ್ರಾರ್ ಅರುಣ್ ಭಾರದ್ವಾಜ್ ಅವರೂ ಈ ವರದಿಗಾರರ ತಂಡದಲ್ಲಿದ್ದರು.






