ಬಂಡಿ ಸಂಜಯ್ ಅವರ ಮಗನ ವಿರುದ್ಧದ ಪೋಕ್ಸೋ ಪ್ರಕರಣ ತೆಲಂಗಾಣದ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದ್ದು ಹೇಗೆ?

Photo Credit : X
ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಭಾಗೀರಥ್ 17 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿದ್ದು, ಆತನ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣವು ತೆಲಂಗಾಣದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದ್ದು ಮಾತ್ರವಲ್ಲದೆ, ಬಿಜೆಪಿಗೆ ಭಾರೀ ಮುಜುಗರವನ್ನುಂಟು ಮಾಡಿದೆ.
*ಬಂಡಿ ಸಂಜಯ್ ಯಾರು? ಅವರ ಮಗನ ಪ್ರಕರಣ ಏಕೆ ಇಷ್ಟೊಂದು ಮುಖ್ಯವಾಗಿದೆ?
ಬಂಡಿ ಸಂಜಯ್ ಕುಮಾರ್ ಕರೀಂನಗರವನ್ನು ಪ್ರತಿನಿಧಿಸುವ ಬಿಜೆಪಿ ಸಂಸದರಾಗಿದ್ದು, ಪ್ರಸ್ತುತ ದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ಜವಾಬ್ದಾರರಾಗಿರುವ ಸಚಿವಾಲಯವಾದ ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
*ಭಾಗೀರಥ್ ವಿರುದ್ಧ ಏನು ಆರೋಪವಿದೆ?
2025 ಡಿಸೆಂಬರ್ 31ರಂದು ಮೊಯಿನಾಬಾದ್ನ ಫಾರ್ಮ್ಹೌಸ್ನಲ್ಲಿ ಬಲವಂತವಾಗಿ ಮದ್ಯ ಸೇವಿಸುವಂತೆ ಒತ್ತಾಯಿಸಿ, ಭಾಗೀರಥ್ ಕನಿಷ್ಠ ಮೂರು ಪ್ರತ್ಯೇಕ ಸಂದರ್ಭಗಳಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ. ಮೇ 8ರಂದು ಕುಟುಂಬವು ಪೆಟ್ ಬಶೀರಾಬಾದ್ ಪೊಲೀಸ್ ಠಾಣೆಗೆ ಹೋದಾಗ, ಪೊಲೀಸ್ ಅಧಿಕಾರಿಗಳು ಆರಂಭದಲ್ಲಿ ಎಫ್ಐಆರ್ ದಾಖಲಿಸಲು ನಿರಾಕರಿಸಿದರು ಎಂದು ಕುಟುಂಬ ಹೇಳಿದೆ.
ಭಾಗೀರಥ್ ಆರೋಪಗಳನ್ನು ನಿರಾಕರಿಸಿ ಪ್ರತಿ ದೂರು ದಾಖಲಿಸಿದ್ದು, "ಹುಡುಗಿಯ ಕುಟುಂಬ ನನಗೆ ಗೊತ್ತು. ಆ ಕುಟುಂಬ ಮದುವೆಯ ಪ್ರಸ್ತಾಪ ಮಾಡಿದ್ದು, ಮದುವೆಗೆ ಒತ್ತಾಯಿಸಿ ತನ್ನನ್ನು ಬ್ಲ್ಯಾಕ್ಮೇಲ್ ಮಾಡಲು ಪ್ರಾರಂಭ ಮಾಡಿತು. ಕುಟುಂಬವು ತನ್ನನ್ನು ಹನಿಟ್ರ್ಯಾಪ್ ಮಾಡಿ 5 ಕೋಟಿ ರೂಪಾಯಿ ಸುಲಿಗೆ ಮಾಡಲು ಪ್ರಯತ್ನಿಸಿದೆ" ಎಂದು ಆರೋಪಿಸಿದ್ದಾನೆ. ಎರಡೂ ಎಫ್ಐಆರ್ಗಳು ಪ್ರಸ್ತುತ ತನಿಖೆಯಲ್ಲಿವೆ. ಈ ಪ್ರಕರಣದಲ್ಲಿ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ.
*ಬಂಡಿ ಸಂಜಯ್ ಹೇಳಿದ್ದೇನು?
ಆರೋಪಗಳು "ಆಧಾರರಹಿತ" ಮತ್ತು ರಾಜಕೀಯ ಪ್ರೇರಿತ ಎಂದಿದ್ದಾರೆ ಬಂಡಿ ಸಂಜಯ್. "ನಾನು ಯಾವಾಗಲೂ ಕಾನೂನನ್ನು ಗೌರವಿಸುತ್ತೇನೆ ಮತ್ತು ನ್ಯಾಯಾಂಗದಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದೇನೆ. ರಾಜಕೀಯ ಆಧಾರದ ಮೇಲೆ ಅವರಿಗೆ ನನ್ನನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಹಾಗಾಗಿ ರಾಜಕೀಯ ವಿರೋಧಿಗಳು ಕುಟುಂಬ ಸದಸ್ಯರನ್ನು ವಿವಾದಕ್ಕೆ ಎಳೆಯುತ್ತಿದ್ದಾರೆ" ಎಂದಿದ್ದಾರೆ.
*ವಿರೋಧ ಪಕ್ಷಗಳು ಏನು ಹೇಳಿವೆ?
ಪ್ರಧಾನಿ ಮೋದಿಯವರ "ಬೇಟಿ ಬಚಾವೋ" ಎಂಬುದು ಕೇವಲ ಘೋಷಣೆಯೇ ಎಂದು ಬಿಆರ್ಎಸ್ ಕಾರ್ಯಾಧ್ಯಕ್ಷ ಕೆಟಿಆರ್ ಪ್ರಶ್ನಿಸಿದ್ದು, ಬಂಡಿ ಸಂಜಯ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ತೆಲಂಗಾಣ ಸರ್ಕಾರದ ನಿಧಾನಗತಿಯ ಪ್ರತಿಕ್ರಿಯೆಯನ್ನು ಪ್ರಶ್ನಿಸಿದ ಅವರು, "ಗೃಹ ಖಾತೆಯನ್ನೂ ನಿರ್ವಹಿಸುವ ಮುಖ್ಯಮಂತ್ರಿ ಅಪ್ರಾಪ್ತೆಯ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ್ದು ಏಕೆ?" ಎಂದು ಕೇಳಿದ್ದಾರೆ. ಪ್ರಕರಣ ದಾಖಲಿಸಲು ವಿಳಂಬ ಮಾಡಿದ್ದಕ್ಕಾಗಿ ಕಾಂಗ್ರೆಸ್ ಸರ್ಕಾರವೂ ಟೀಕೆಗಳನ್ನು ಎದುರಿಸುತ್ತಿದೆ.
*ಬೀದಿಗಿಳಿದ ಮಹಿಳೆಯರು
ಪ್ರಕರಣ ದಾಖಲಿಸಿದ ಪೊಲೀಸ್ ಠಾಣೆಯ ಹೊರಗೆ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಬಂಡಿ ಸಾಯಿ ಭಾಗೀರಥ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ, ಸಂತ್ರಸ್ತೆಯ ಕುಟುಂಬ ಸದಸ್ಯರೊಂದಿಗೆ ಹಲವಾರು ಮಹಿಳೆಯರು ರವಿವಾರ ಪೆಟ್ ಬಶೀರಾಬಾದ್ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.
ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬ ಮಾಡಿದ್ದು ಯಾಕೆ ಎಂದು ಪ್ರತಿಭಟನಾಕಾರರು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಅದೇ ವೇಳೆ ಬಂಡಿ ಸಂಜಯ್ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಬಿಆರ್ಎಸ್ವಿ ವಿದ್ಯಾರ್ಥಿ ಘಟಕ ಬಿಆರ್ಎಸ್ವಿ ಹೈದರಾಬಾದ್ ನಲ್ಲಿರುವ ಡಿಜಿಪಿ ಕಚೇರಿಗೆ ಮುತ್ತಿಗೆ ಹಾಕಿದೆ. ಅಲ್ಲಿ ಬಿಆರ್ಎಸ್ವಿ ರಾಜ್ಯ ಅಧ್ಯಕ್ಷ ಗೆಲ್ಲು ಶ್ರೀನಿವಾಸ್ ಸೇರಿದಂತೆ ಹಲವಾರು ನಾಯಕರನ್ನು ದಿಢೀರ್ ಪ್ರತಿಭಟನೆಯ ಸಮಯದಲ್ಲಿ ಬಂಧಿಸಲಾಗಿದೆ.
*ದೂರಿನಲ್ಲೇನಿದೆ?
ಸೌತ್ ಫಸ್ಟ್ ಎಫ್ಐಆರ್ ಅನ್ನು ಪರಿಶೀಲಿಸಿದ್ದು, ಸಂತ್ರಸ್ತೆಯ ತಾಯಿ ಆ ದೂರು ನೀಡಿದ್ದಾರೆ. ಅದರಲ್ಲಿ ಈ ರೀತಿ ಇದೆ — 2025ರಿಂದ ಆರಂಭಗೊಂಡು ನಿರಂತರವಾಗಿ ಆಕೆಯ ಮೇಲೆ ಲೈಂಗಿಕ ಶೋಷಣೆ ಮಾಡಲಾಗಿದೆ. ಭಾಗೀರಥ್ ಅಪ್ರಾಪ್ತೆಯ ಮೇಲೆ ಮಾನಸಿಕ ನಿಯಂತ್ರಣ ಸಾಧಿಸಲು ಮತ್ತು ಇತರರಿಂದ ಅವಳನ್ನು ಪ್ರತ್ಯೇಕಿಸಲು ಮದುವೆಯ ಮೋಸದ ಭರವಸೆಯನ್ನು ಬಳಸಿಕೊಂಡಿದ್ದಾನೆ.
ನಿರಂತರ ದೌರ್ಜನ್ಯದ ನೇರ ಪರಿಣಾಮವಾಗಿ, ಸಂತ್ರಸ್ತೆ 2026 ಜನವರಿ 19 ಮತ್ತು 25ರಂದು ಆತ್ಮಹತ್ಯೆಗೂ ಪ್ರಯತ್ನಿಸಿದ್ದರು. ಏಪ್ರಿಲ್ 23ರಂದು ಬಂಡಿ ಸಂಜಯ್ ಕುಮಾರ್ ಅವರೊಂದಿಗೆ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಮಯದಲ್ಲಿ ಕುಟುಂಬವು ರಾಜಿ ಮಾಡಿಕೊಳ್ಳಲು ಪರೋಕ್ಷ ಒತ್ತಡಕ್ಕೆ ಒಳಗಾಗಿದೆ ಮತ್ತು ನಿರ್ಮಲ್ ಪೊಲೀಸ್ ಠಾಣೆಯಲ್ಲಿ ದಾಖಲೆಗಳಿಗೆ ಸಹಿ ಹಾಕುವಂತೆ ಸೂಚಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಭಾಗೀರಥ್ ಈ ಹಿಂದೆ 2023ರಲ್ಲಿ ಹೈದರಾಬಾದ್ ಬಳಿಯ ಮಹೀಂದ್ರಾ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗ ಕ್ಯಾಂಪಸ್ ಹಲ್ಲೆ ವಿವಾದದಲ್ಲಿ ಭಾಗಿಯಾಗಿದ್ದರು. ಆ ಸಮಯದಲ್ಲಿ ವಾಗ್ವಾದದ ವಿಡಿಯೊಗಳು ಆನ್ಲೈನ್ನಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದವು.
ಈ ಬಾರಿ, ಬಿಆರ್ಎಸ್ನ ಕೆಟಿಆರ್, ಪೋಕ್ಸೋ ಪ್ರಕರಣವನ್ನು ವರದಿ ಮಾಡಲು ನಿರಾಕರಿಸಿದ್ದಕ್ಕಾಗಿ ಮುಖ್ಯವಾಹಿನಿಯ ತೆಲುಗು ಮಾಧ್ಯಮ ವೇದಿಕೆಗಳನ್ನು ಬಹಿರಂಗವಾಗಿ ಟೀಕಿಸಿದರು. "ಯಾರು ಹೆಚ್ಚು ಕೊಳಕು? ಕೇಂದ್ರ ಸಚಿವರು ತಮ್ಮ ಮಗನನ್ನು ರಕ್ಷಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಮೂಕನಾಗಿ ನಟಿಸುತ್ತಿದೆಯೇ ಅಥವಾ ತೆಲುಗು ಮಾಧ್ಯಮವು ಘೋರ ಅಪರಾಧವನ್ನು ವರದಿ ಮಾಡಲು ನಿರಾಕರಿಸುತ್ತಿದೆಯೇ?" ಎಂದು ಅವರು ಕೇಳಿದ್ದಾರೆ.
*ತಕ್ಷಣ ತನಿಖೆ ಪ್ರಾರಂಭಿಸುವಂತೆ ಸಿಎಂ ರೇವಂತ್ ರೆಡ್ಡಿ ಆದೇಶ
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಬಂಡಿ ಭಾಗೀರಥ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದ ತನಿಖೆಯನ್ನು ತಕ್ಷಣ ಪ್ರಾರಂಭಿಸುವಂತೆ ತೆಲಂಗಾಣ ಪೊಲೀಸ್ ಮುಖ್ಯಸ್ಥರಿಗೆ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಸೋಮವಾರ (ಮೇ 11) ನಿರ್ದೇಶನ ನೀಡಿದ್ದಾರೆ. ಮೇ 11ರಂದು ಸಿಎಂ ಕಚೇರಿಯಿಂದ ಬಂದ ಪತ್ರಿಕಾ ಪ್ರಕಟಣೆಯ ಪ್ರಕಾರ, ಮೇ 8ರಂದು ದೂರು ಬಂದಿದ್ದರೂ, ಇಲ್ಲಿಯವರೆಗೆ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೇವಂತ್ ತೆಲಂಗಾಣ ಪೊಲೀಸ್ ಮಹಾನಿರ್ದೇಶಕ ಸಿ.ವಿ. ಆನಂದ್ ಅವರನ್ನು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ಹೈದರಾಬಾದ್ ಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಇಡೀ ಪೊಲೀಸ್ ಪಡೆ ಭದ್ರತಾ ವ್ಯವಸ್ಥೆಯಲ್ಲಿ ನಿರತವಾಗಿತ್ತು ಎಂದು ಡಿಜಿಪಿ ಮುಖ್ಯಮಂತ್ರಿಗೆ ವಿವರಿಸಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮೇ 10ರಂದು ಪ್ರಧಾನಿ ನರೇಂದ್ರ ಮೋದಿ ವಿವಿಧ ಯೋಜನೆಗಳನ್ನು ಉದ್ಘಾಟಿಸಲು ಮತ್ತು ಪರೇಡ್ ಮೈದಾನದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಹೈದರಾಬಾದ್ಗೆ ಭೇಟಿ ನೀಡಿದ್ದರು. ಈ ಆರೋಪಗಳ ನಡುವೆ, ರೇವಂತ್ ರೆಡ್ಡಿ ಮತ್ತು ಬಂಡಿ ಸಂಜಯ್ ಅವರು ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ.
ಭಾಗೀರಥ್ ವಿರುದ್ಧದ ಪ್ರಕರಣದ ತನಿಖೆಯನ್ನು ತಕ್ಷಣವೇ ಪ್ರಾರಂಭಿಸಲು ಮತ್ತು ಸಮಗ್ರ ತನಿಖೆ ನಡೆಸಲು ವಿಶೇಷ ತಂಡಗಳನ್ನು ರಚಿಸುವಂತೆ ಸಿಎಂ ಡಿಜಿಪಿಗೆ ನಿರ್ದೇಶನ ನೀಡಿದ್ದಾರೆ ಎಂದು ಸಿಎಂ ಕಚೇರಿ ತಿಳಿಸಿದೆ.
ಈ ಮಧ್ಯೆ , ತೆಲಂಗಾಣ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೊಥಕೋಟ ಸೀತಾ ದಯಾಕರ್ ರೆಡ್ಡಿ ಈ ವಿಷಯದ ಬಗ್ಗೆ ತನಿಖೆ ನಡೆಸಲು ವಿಶೇಷ ಪೀಠವನ್ನು ರಚಿಸಿದ್ದಾರೆ.
ಭಾಗೀರಥ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 74 (ಆಕೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು 75 (ಲೈಂಗಿಕ ಕಿರುಕುಳ) ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್ 11 ಮತ್ತು 12 (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಭಾಗೀರಥ್ ವಿರುದ್ಧದ ಎಫ್ಐಆರ್ ಅನ್ನು ಪೆಟ್ ಬಶೀರಾಬಾದ್ನಲ್ಲಿ ದಾಖಲಿಸುವ ಕೆಲವೇ ಗಂಟೆಗಳ ಮೊದಲು, ಕರೀಂನಗರ II ಪಟ್ಟಣ ಪೊಲೀಸರು ಮೇ 8ರಂದು ಸಂತ್ರಸ್ತೆಯ ಕುಟುಂಬದ ವಿರುದ್ಧ ಬ್ಲ್ಯಾಕ್ಮೇಲ್ ಮತ್ತು ಸುಲಿಗೆ ಆರೋಪದ ಮೇಲೆ ಪ್ರತಿ ಎಫ್ಐಆರ್ ದಾಖಲಿಸಿದ್ದಾರೆ.
*ಅಂತರ ಕಾಯ್ದುಕೊಂಡ ಬಿಜೆಪಿ
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಬಂಡಿ ಭಾಗೀರಥ್ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದಿಂದ ದೂರ ಉಳಿಯಲು ಬಿಜೆಪಿ ತೆಲಂಗಾಣ ಘಟಕ ಪ್ರಯತ್ನಿಸಿದ್ದು, ಈ ಪ್ರಕರಣದಲ್ಲಿ ಪಕ್ಷಕ್ಕೆ ಯಾವುದೇ ಪಾತ್ರವಿಲ್ಲ ಎಂದು ಹೇಳಿದೆ.
"ಈ ಪ್ರಕರಣಕ್ಕೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಇದು ಕಾನೂನು ವಿಷಯ. ಸಂಜಯ್ ಕುಮಾರ್ ಅವರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಅವರು ನಮ್ಮ ನಾಯಕರು ಮತ್ತು ಕೇಂದ್ರ ಸಚಿವರು. ಅವರ ಕುಟುಂಬದ ಯಾವುದೇ ಸದಸ್ಯರು ಭಾಗಿಯಾಗಿದ್ದರೆ, ಅದನ್ನು ಕಾನೂನಿನ ಪ್ರಕಾರ ತನಿಖೆ ಮಾಡಲಾಗುತ್ತದೆ" ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಎನ್. ರಾಮಚಂದರ್ ರಾವ್ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.






