ವಿದ್ಯುತ್ ಕೊರತೆಯ ಆತಂಕ: ಕಲ್ಲಿದ್ದಲು ದಾಸ್ತಾನು ಇಳಿಕೆಯಿಂದಾಗಿ ಮುಕ್ತ ಮಾರುಕಟ್ಟೆಯತ್ತ ರಾಜ್ಯಗಳ ಚಿತ್ತ?

ಸಾಂದರ್ಭಿಕ ಚಿತ್ರ (AI Generated)
ಮೂಲಭೂತ ಉಷ್ಣ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಕೊರತೆ ಮತ್ತು ಕಲ್ಲಿದ್ದಲು ದಾಸ್ತಾನು ಕುಸಿಯುತ್ತಿರುವ ಆತಂಕದಿಂದ ದೇಶದಲ್ಲಿ ವಿದ್ಯುತ್ ಅಭಾವದ ಛಾಯೆ ಆವರಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಉನ್ನತ ಮಟ್ಟದ ಸಭೆಗಳು ನಡೆಯುತ್ತಿದೆ.
ಯಾವುದೇ ಬೆಲೆ ತೆತ್ತಾದರೂ ವಿದ್ಯುತ್ ಖರೀದಿಸಿ ಪೂರೈಕೆ ಖಚಿತಪಡಿಸಿಕೊಳ್ಳುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ಬೇಸಿಗೆಯ ಆರಂಭದಲ್ಲೇ ಎದುರಾಗಬಹುದಾದ ವಿದ್ಯುತ್ ಆಘಾತದ ಭೀತಿಯು ದೇಶದ ಇಡೀ ವಿದ್ಯುತ್ ವಲಯದಲ್ಲಿ ತಲ್ಲಣ ಮೂಡಿಸಿದೆ.
ಮುಂಬರುವ ತಿಂಗಳುಗಳಲ್ಲಿ, ವಿಶೇಷವಾಗಿ ಸಂಜೆಯ ವೇಳೆ ಎದುರಾಗಬಹುದಾದ ವಿದ್ಯುತ್ ಕೊರತೆಯನ್ನು ನೀಗಿಸಲು ಹಲವು ರಾಜ್ಯಗಳು ಅಲ್ಪಾವಧಿ ವಿದ್ಯುತ್ ಖರೀದಿ ಟೆಂಡರ್ಗಳ ಮೊರೆ ಹೋಗುತ್ತಿವೆ. ಇದಕ್ಕಾಗಿ ಅತ್ಯಧಿಕ ಬೆಲೆ ನೀಡಲೂ ಮುಂದಾಗಿವೆ.
ಕೇಂದ್ರ ಇಂಧನ ಸಚಿವಾಲಯದ 'ಡೀಪ್' (DEEP -Discovery of Efficient Electricity Price) ಪೋರ್ಟಲ್ನ ಅಂಕಿಅಂಶಗಳ ಪ್ರಕಾರ, ಮುಂದಿನ ವರ್ಷದ ಜನವರಿಯಿಂದ ಜೂನ್-ಜುಲೈವರೆಗಿನ ಅವಧಿಗೆ ಹೆಚ್ಚುವರಿ ವಿದ್ಯುತ್ ಖರೀದಿಸಲು ಕನಿಷ್ಠ ಐದು ರಾಜ್ಯಗಳು ಮತ್ತು ಖಾಸಗಿ ವಿದ್ಯುತ್ ವಿತರಣಾ ಕಂಪನಿಗಳು ಟೆಂಡರ್ ಕರೆದಿವೆ. ಹೆಚ್ಚುವರಿ ವಿದ್ಯುತ್ ಖರೀದಿಗೆ ಮುಂದಾಗಿರುವ ರಾಜ್ಯಗಳಲ್ಲಿ ತಮಿಳುನಾಡು, ಕೇರಳ, ರಾಜಸ್ಥಾನ ಮತ್ತು ಗುಜರಾತ್ ಸೇರಿವೆ.
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶ ಕೂಡ ಹೆಚ್ಚುವರಿ ವಿದ್ಯುತ್ ಖರೀದಿಸಲು ಪೈಪೋಟಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಅಲ್ಪಾವಧಿ ಟೆಂಡರ್ಗಳಲ್ಲಿ ವಿದ್ಯುತ್ ದರ ಏಕೆ ಗಗನಕ್ಕೇರುತ್ತಿದೆ, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಎಷ್ಟರಮಟ್ಟಿಗೆ ಕುಸಿದಿದೆ ಮತ್ತು ಹಿಂದಿನ ಯಾವ ನೀತಿ ಲೋಪಗಳು ವಿದ್ಯುತ್ ಜಾಲವನ್ನು ದುರ್ಬಲಗೊಳಿಸಿವೆ ಎಂಬುದರ ವಿವರ ಇಲ್ಲಿದೆ.
ಅಲ್ಪಾವಧಿ ಟೆಂಡರ್ಗಳಲ್ಲಿ ವಿದ್ಯುತ್ ದರ ಗಗನಕ್ಕೇರುತ್ತಿರುವುದೇಕೆ?
ನೋಯ್ಡಾ ಪವರ್ ಕಂಪನಿ ಲಿಮಿಟೆಡ್ ಮತ್ತು ಅದಾನಿ ಎಲೆಕ್ಟ್ರಿಸಿಟಿ ಮುಂಬೈ ಲಿಮಿಟೆಡ್ (AEML) ಸೇರಿದಂತೆ ಹಲವು ಖಾಸಗಿ ವಿತರಣಾ ಕಂಪನಿಗಳು ಸಹ ವಿದ್ಯುತ್ ಖರೀದಿಗೆ ಟೆಂಡರ್ ಕರೆದಿವೆ. ಇಂತಹ ಕೆಲವು ಟೆಂಡರ್ಗಳಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರ 19 ರಿಂದ 20 ರೂಪಾಯಿವರೆಗೆ ತಲುಪಿದೆ. ಇದು ವಿದ್ಯುತ್ ವಿನಿಮಯ ಕೇಂದ್ರಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ಬೆಲೆ ಮಿತಿಗಿಂತ ತೀರಾ ಹೆಚ್ಚಾಗಿದೆ.
ಮುಕ್ತ ಮಾರುಕಟ್ಟೆಯಲ್ಲಿ ವಿದ್ಯುತ್ ದರದ ಗರಿಷ್ಠ ಮಿತಿ ಪ್ರತಿ ಯೂನಿಟ್ಗೆ 10 ರೂಪಾಯಿ ಇದ್ದರೂ, ವಿಶೇಷ 'ಹೈ ಪ್ರೈಸ್ ಡೇ-ಅಹೆಡ್ ಮಾರ್ಕೆಟ್' (HP-DAM) ನಲ್ಲಿ ಈ ದರ 20 ರೂಪಾಯಿವರೆಗೂ ಏರಿಕೆಯಾಗಬಹುದು. ಇನ್ನೊಂದೆಡೆ, ಕಲ್ಲಿದ್ದಲು ದಾಸ್ತಾನು ಕುಸಿಯುತ್ತಿರುವ ಹಿನ್ನೆಲೆಯಲ್ಲಿ, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕಲ್ಲಿದ್ದಲು ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು 'ದಿ ಇಂಡಿಯನ್ ಎಕ್ಸ್ಪ್ರೆಸ್'ವರದಿ ಮಾಡಿದೆ.
ಸದ್ಯದ ನಿಯಮದಂತೆ ಸುಮಾರು 59 ಮಿಲಿಯನ್ ಟನ್ ಕಲ್ಲಿದ್ದಲು ಸಂಗ್ರಹ ಇರಬೇಕು. ಆದರೆ, ಉಷ್ಣ ವಿದ್ಯುತ್ ಸ್ಥಾವರಗಳು ಪ್ರಸ್ತುತ 80 ಮಿಲಿಯನ್ ಟನ್ವರೆಗೆ (ಸುಮಾರು 30 ದಿನಗಳ ಬಳಕೆಗೆ ಆಗುವಷ್ಟು) ಕಲ್ಲಿದ್ದಲು ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ. ಈ ಸಾಮರ್ಥ್ಯವನ್ನು ದ್ವಿಗುಣಗೊಳಿಸಿ 160 ಮಿಲಿಯನ್ ಟನ್ಗೆ (60 ದಿನಗಳ ದಾಸ್ತಾನು) ಹೆಚ್ಚಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದಕ್ಕಾಗಿ ಸ್ಥಾವರಗಳಲ್ಲಿ ಹೆಚ್ಚುವರಿ ಸಂಗ್ರಹಣಾ ಸ್ಥಳಾವಕಾಶ ಬೇಕಾಗುತ್ತದೆ.
ಈ ವರ್ಷ ಅಲ್ಲಲ್ಲಿ ಸುರಿದ ಮಳೆಯು ವಿದ್ಯುತ್ ಕೊರತೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸಿದ್ದರೂ, ಮುಂದಿನ ಬೇಸಿಗೆಯ ಆರಂಭದಲ್ಲೇ ಎದುರಾಗಬಹುದಾದ ಬಿಕ್ಕಟ್ಟಿನ ಬಗ್ಗೆ ಆತಂಕ ಮನೆಮಾಡಿದೆ. 'ಗ್ರಿಡ್ ಇಂಡಿಯಾ'ದ ದೈನಂದಿನ ಅಂಕಿಅಂಶಗಳ ಪ್ರಕಾರ, ವಿದ್ಯುತ್ ಬೇಡಿಕೆ ಕಡಿಮೆ ಇರುವ ಈ ತಿಂಗಳುಗಳಲ್ಲೂ ಮತ್ತು ಸೌರ ವಿದ್ಯುತ್ ಉತ್ಪಾದನೆಯಾಗುವ ಹಗಲಿನ ವೇಳೆಯಲ್ಲೂ ವಿದ್ಯುತ್ ಜಾಲದ ಆವರ್ತನ ನಿಗದಿತ ಕನಿಷ್ಠ ಮಿತಿಯಾದ 49.9 ಹರ್ಟ್ಜ್ಗಿಂತ (HZ) ಕೆಳಗಿಳಿಯುತ್ತಿದೆ. ಇನ್ನು ಸೌರ ವಿದ್ಯುತ್ ಲಭ್ಯವಿಲ್ಲದ ಸಂಜೆಯ ವೇಳೆಯಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.
ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಭಾರೀ ಇಳಿಕೆ, ಅಭಾವದ ಭೀತಿ:
ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯ ಮೇಲಿನ ಅವಲಂಬನೆ ಹೆಚ್ಚಾಗಿರುವುದರಿಂದ ಉಷ್ಣ ವಿದ್ಯುತ್ ಸ್ಥಾವರಗಳ ಕಲ್ಲಿದ್ದಲು ದಾಸ್ತಾನಿನ ಮೇಲೆ ಒತ್ತಡ ಬಿದ್ದಿದೆ. ಕಳೆದ ವರ್ಷ ಏಪ್ರಿಲ್ನಿಂದ ಸೆಪ್ಟೆಂಬರ್ ನಡುವೆ ಕಲ್ಲಿದ್ದಲು ದಾಸ್ತಾನು ಶೇ. 23ರಷ್ಟು (55.2 ಮಿಲಿಯನ್ ಟನ್ನಿಂದ 42.6 ಮಿಲಿಯನ್ ಟನ್ಗೆ) ಇಳಿಕೆಯಾಗಿತ್ತು. ಆದರೆ, ಈ ವರ್ಷ ಅದೇ ಅವಧಿಯಲ್ಲಿ ದಾಸ್ತಾನು ಬರೋಬ್ಬರಿ ಶೇ. 66ರಷ್ಟು ಕುಸಿದಿದೆ.
ಇದೇ ಅವಧಿಯಲ್ಲಿ 2024ರಲ್ಲಿ ಶೇ. 31.8 ಮತ್ತು 2023ರಲ್ಲಿ ಶೇ. 36.8ರಷ್ಟು ಕಲ್ಲಿದ್ದಲು ದಾಸ್ತಾನು ಇಳಿಕೆಯಾಗಿತ್ತು.
ನವೆಂಬರ್ 15ರ ವೇಳೆಗೆ ದೇಶೀಯ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ ಕೇವಲ 20.79 ಮಿಲಿಯನ್ ಟನ್ ಕಲ್ಲಿದ್ದಲು ದಾಸ್ತಾನು ಉಳಿದಿದ್ದು, ಏಪ್ರಿಲ್ ಆರಂಭದಲ್ಲಿ ಇದು ಸುಮಾರು 55 ಮಿಲಿಯನ್ ಟನ್ನಷ್ಟಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಮುಂದಿನ ಬೇಸಿಗೆಗೂ ಮುನ್ನ ಕಲ್ಲಿದ್ದಲು ದಾಸ್ತಾನನ್ನು ಮರುಪೂರಣ ಮಾಡುವುದೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಕೇಂದ್ರ ಇಂಧನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲೇ ಕಲ್ಲಿದ್ದಲು ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಹೊಸದಾಗಿ ಸೂಚನೆ ನೀಡಲಾಗಿದೆ.
ಹಿಂದಿನ ನೀತಿ ನಿರ್ಧಾರಗಳು ದೇಶವನ್ನು ವಿದ್ಯುತ್ ಬಿಕ್ಕಟ್ಟಿಗೆ ದೂಡಿದ್ದು ಹೇಗೆ?:
ದೇಶವು ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ವಿಸ್ತರಿಸುತ್ತಿರುವ ನಡುವೆಯೇ, ಉದ್ದೇಶಿತ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಕೇಂದ್ರ ಇಂಧನ ಸಚಿವಾಲಯದ ಯೋಜನಾ ಸಂಸ್ಥೆಯಾದ 'ಕೇಂದ್ರೀಯ ವಿದ್ಯುತ್ ಪ್ರಾಧಿಕಾರ' (CEA) ಈಗಾಗಲೇ ಕರೆ ನೀಡಿದೆ.
ದೇಶವು ವಿದ್ಯುತ್ ಕೊರತೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಅಕ್ಟೋಬರ್ 13ರಂದು ನಡೆದ ಸಭೆಯಲ್ಲಿ ಮಾತನಾಡಿದ ಸಿಇಎ ಅಧ್ಯಕ್ಷ ಘನಶ್ಯಾಮ್ ಪ್ರಸಾದ್, 2035ರ ವೇಳೆಗೆ 105 ರಿಂದ 150 ಗಿಗಾವ್ಯಾಟ್ ಕಲ್ಲಿದ್ದಲು ಆಧಾರಿತ ವಿದ್ಯುತ್ ಸಾಮರ್ಥ್ಯವನ್ನು ಹೊಸದಾಗಿ ಸೇರಿಸುವ ಅಗತ್ಯವಿದೆ ಎಂದಿದ್ದಾರೆ. ಇದು ಸದ್ಯ ಯೋಜಿಸಲಾಗಿರುವ 97 ಗಿಗಾವ್ಯಾಟ್ಗಿಂತ ಬಹಳ ಹೆಚ್ಚಾಗಿದೆ.
ವಿದ್ಯುತ್ ಸಂಗ್ರಹಣಾ ವ್ಯವಸ್ಥೆಗಳ ಕೊರತೆಯ ನಡುವೆಯೂ ನವೀಕರಿಸಬಹುದಾದ ಇಂಧನವನ್ನು ವೇಗವಾಗಿ ವಿಸ್ತರಿಸಲು ಮುಂದಾಗಿರುವುದು ವಿದ್ಯುತ್ ಜಾಲವನ್ನು ಅಸ್ಥಿರಗೊಳಿಸುತ್ತಿದೆ. ಇದರ ಜೊತೆಗೆ, ಸುಮಾರು ಹತ್ತು ವರ್ಷಗಳ ಹಿಂದೆ ಉಷ್ಣ ವಿದ್ಯುತ್ ವಿಸ್ತರಣೆಯನ್ನು ಕಡಿತಗೊಳಿಸಲು ತೆಗೆದುಕೊಂಡ ನೀತಿ ನಿರ್ಧಾರವು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ. ಬೇಸಿಗೆಯ ಸಂಜೆಗಳಲ್ಲಿ ಸೌರ ವಿದ್ಯುತ್ ಉತ್ಪಾದನೆ ಕಡಿಮೆಯಾಗಿ ಬೇಡಿಕೆ ಹೆಚ್ಚಾದಾಗ, ವಿದ್ಯುತ್ ಜಾಲಕ್ಕೆ ಸ್ಥಿರತೆ ನೀಡಲು ಉಷ್ಣ ವಿದ್ಯುತ್ ಅತ್ಯಗತ್ಯವಾಗಿರುತ್ತದೆ.
ಕೇಂದ್ರ ಇಂಧನ ಸಚಿವಾಲಯದ ರಾಷ್ಟ್ರೀಯ ವಿದ್ಯುತ್ ಯೋಜನೆ (2017-22), ನಿರ್ಮಾಣ ಹಂತದಲ್ಲಿದ್ದ 50 ಗಿಗಾವ್ಯಾಟ್ ಯೋಜನೆಗಳನ್ನು ಹೊರತುಪಡಿಸಿ, 2022ರ ನಂತರ ಯಾವುದೇ ಹೊಸ ಉಷ್ಣ ವಿದ್ಯುತ್ ಸಾಮರ್ಥ್ಯವನ್ನು ಸೇರಿಸಬಾರದು ಎಂದು ನಿರ್ಧರಿಸಿತ್ತು. ಅದು ನವೀಕರಿಸಬಹುದಾದ ಇಂಧನವನ್ನು ಹೆಚ್ಚಿಸುವತ್ತ ಮಾತ್ರ ಗಮನಹರಿಸಿತ್ತು. ಇದಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲಿ ಕಲ್ಲಿದ್ದಲು ಬೆಲೆ ಏರಿಕೆಯಾದ ಕಾರಣ ಆಮದು ಕಲ್ಲಿದ್ದಲು ಆಧಾರಿತ ಯೋಜನೆಗಳನ್ನೂ ನಿರುತ್ಸಾಹಗೊಳಿಸಲಾಗಿತ್ತು.
2016-17ರ ಈ ಯೋಜನಾ ಲೋಪದ ನಂತರ ಕೆಲವು ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳಲಾಗಿದೆ: ಪರಮಾಣು ವಿದ್ಯುತ್ ಉತ್ಪಾದನೆಗೆ ಹೊಸ ಒತ್ತು ನೀಡುವುದು, ತಡವಾಗಿಯಾದರೂ ಬೃಹತ್ ಉಷ್ಣ ವಿದ್ಯುತ್ ಸಾಮರ್ಥ್ಯಗಳನ್ನು ಸೇರಿಸುವುದು, ಸ್ಥಗಿತಗೊಂಡ ಸ್ಥಾವರಗಳನ್ನು ಮರುಪ್ರಾರಂಭಿಸಲು ಕಲ್ಲಿದ್ದಲು ಆಮದು ಮಾಡಿಕೊಳ್ಳುವುದು ಮತ್ತು ಎಲ್ಲಾ ಹೊಸ ಸೌರ ವಿದ್ಯುತ್ ಯೋಜನೆಗಳಿಗೆ ಕಡ್ಡಾಯವಾಗಿ ವಿದ್ಯುತ್ ಸಂಗ್ರಹಣಾ ವ್ಯವಸ್ಥೆ ಇರಬೇಕೆಂಬ ಸಿಇಎಯ ಕಳೆದ ವರ್ಷದ ಆದೇಶದಂತಹ ನೀತಿ ಬದಲಾವಣೆಗಳು ಇದರಲ್ಲಿ ಸೇರಿವೆ.
ಕೃಪೆ: indianexpress.com






