ಪ್ರಧಾನಮಂತ್ರಿ ಸುರಕ್ಷಾ ವಿಮಾ, ಜೀವನ ಜ್ಯೋತಿ ವಿಮಾ ಯೋಜನೆ: ಕಲಬುರಗಿ ಸೇರಿದಂತೆ 12 ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಗತಿಯಿಲ್ಲ

ಬೆಂಗಳೂರು : ಜೀವ ವಿಮೆ ರಕ್ಷಣೆ ನೀಡುವ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಮತ್ತು ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯು ರಾಜ್ಯದ ಕಲಬುರಗಿ ಸೇರಿದಂತೆ ಒಟ್ಟು 12 ಜಿಲ್ಲೆಗಳಲ್ಲಿ ತೃಪ್ತಿಕರವಾಗಿಲ್ಲ. ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿಯು 2025ರ ಡಿಸೆಂಬರ್ 31ರ ಅಂತ್ಯಕ್ಕೆ ಲಭ್ಯವಿದ್ದ ಅಂಕಿ ಅಂಶಗಳ ಆಧರಿಸಿ ಈಚೆಗೆ ನಡೆದಿದ್ದ ಸಭೆಯಲ್ಲಿ ಮಂಡನೆಯಾದ ಅಂಕಿ ಅಂಶಗಳ ಪ್ರಕಾರ ಒಟ್ಟಾರೆ 12 ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಗತಿ ಕಾಣದ ಕಾರಣ ಈ ಎರಡೂ ಯೋಜನೆಗಳು 12 ಜಿಲ್ಲೆಗಳಲ್ಲಿ ಮುಗ್ಗುರಿಸಿ ಬಿದ್ದಿವೆ ಎಂದು ಸಭೆಯು ಅತೃಪ್ತಿ ವ್ಯಕ್ತಪಡಿಸಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯೂ ಸಹ ಈ 12 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರವನ್ನೂ ಬರೆದಿದೆ. ಇದರ ಪ್ರತಿಯು "the-file.in"ಗೆ ಲಭ್ಯವಾಗಿದೆ.
12 ಜಿಲ್ಲೆಗಳ ಪಟ್ಟಿ: ಬೆಂಗಳೂರು ನಗರ, ಬೀದರ್, ಯಾದಗಿರಿ, ಕಲಬುರಗಿ, ಕೊಪ್ಪಳ, ವಿಜಯನಗರ, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ರಾಯಚೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಈ ಎರಡೂ ಯೋಜನೆಗಳೂ ಮುಗ್ಗುರಿಸಿ ಬಿದ್ದಿವೆ. ಮತ್ತು ಈ ಯೋಜನೆಗಳ ಅನುಷ್ಠಾನವು ತೃಪ್ತಿಕರವಾಗಿಲ್ಲ ಎಂದು ಆರ್ಥಿಕ ಇಲಾಖೆಯ ಟಿಪ್ಪಣಿಯಿಂದ ತಿಳಿದು ಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯಲ್ಲಿ ಅರ್ಹ ಜನಸಂಖ್ಯೆಯ ಶೇ.87ರಷ್ಟು ಜನರು, ಗದಗ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಅಡಿಯಲ್ಲಿ ಅರ್ಹ ಜನಸಂಖ್ಯೆಯ ಶೇ. 42ರಷ್ಟು ಜನರು ಹೆಚ್ಚಿನ ವ್ಯಾಪ್ತಿ ಹೊಂದಿದ್ದಾರೆ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿದೆ.
‘ವಿಶೇಷವಾಗಿ ಅರ್ಹ ಜನಸಂಖ್ಯೆಗೆ ಹೋಲಿಸಿದರೆ ನೋಂದಣಿ ಪ್ರಕ್ರಿಯೆಯು ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ. 2026ರ ಫೆ.17ರಂದು ಸಭೆ ಕೂಡ ನಡೆದಿದೆ. ಹೀಗಾಗಿ ಈ ಜಿಲ್ಲೆಗಳ ಜಿಲ್ಲಾ ವ್ಯವಸ್ಥಾಪಕರುಗಳು ಈ ನಿಟ್ಟಿನಲ್ಲಿ ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕು,’ ಎಂದು ಆರ್ಥಿಕ ಇಲಾಖೆಯು ಸೂಚಿಸಿರುವುದು ತಿಳಿದು ಬಂದಿದೆ.
ಅಲ್ಲದೇ ಈ ಜಿಲ್ಲೆಗಳಲ್ಲಿ 2026ರ ಮಾರ್ಚ್ ಅಂತ್ಯದೊಳಗೆ ಸಾಧನೆಯು ಕನಿಷ್ಠ ಶೇ. 5ರಷ್ಟು ಅರ್ಹ ಜನಸಂಖ್ಯೆಯ ವ್ಯಾಪ್ತಿಯ ಹೆಚ್ಚಳವನ್ನು ದಾಖಲಿಸಬೇಕು. ಈ ಮೂಲಕ ರಾಜ್ಯದ ಸರಾಸರಿ ಮಟ್ಟವನ್ನು ಮೀರಬೇಕು. ಇದರಲ್ಲಿ ಯಾವುದೇ ವಿಳಂಬ ಹಾಗೂ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
2025ರ ಸೆಪ್ಟಂಬರ್ ಅಂತ್ಯಕ್ಕೆ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಲ್ಲಿ 89 ಲಕ್ಷ ಖಾತೆಗಳನ್ನು ತೆರೆಯಲಾಗಿದೆ. ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿಯಲ್ಲಿ 2.13 ಕೋಟಿ ಖಾತೆಯನ್ನು ತೆರೆಯಲಾಗಿದೆ.
ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯು ರಾಜ್ಯದ ಸರಾಸರಿ ವ್ಯಾಪ್ತಿಯ ಶೇ. 28ರಷ್ಟಿದೆ. ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿಯಲ್ಲಿ ಶೇ. 52ರಷ್ಟಿದೆ. ಆದರೆ ಕಲಬುರಗಿ ಸೇರಿದಂತೆ ರಾಜ್ಯದ 12 ಜಿಲ್ಲೆಗಳಲ್ಲಿ ಸರಾಸರಿಗಿಂತಲೂ ಕೆಳಗಿದೆ. ಇದು ಗಂಭೀರವಾದ ವಿಷಯ ಎಂದು ಆರ್ಥಿಕ ಇಲಾಖೆಯು ತನ್ನ ಟಿಪ್ಪಣಿಯಲ್ಲಿ ಎಚ್ಚರಿಸಿದೆ.







