ಪ್ರೀತಿ ಝಿಂಟಾ vs ಗೂಗಲ್, ಮೆಟಾ, ಎಕ್ಸ್: AI ಡೀಪ್ಫೇಕ್ಗಳ ವಿರುದ್ಧ ಮೊಕದ್ದಮೆಗೆ ಬಾಂಬೆ ಹೈಕೋರ್ಟ್ ಅನುಮತಿ; ಏನಿದು ಪ್ರಕರಣ?

ಪ್ರೀತಿ ಝಿಂಟಾ | Photo Credit : NDTV
ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ಸೆಲೆಬ್ರಿಟಿಗಳ ವ್ಯಕ್ತಿತ್ವ ಹಕ್ಕುಗಳಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬಾಲಿವುಡ್ ನಟಿ ಹಾಗೂ ನಿರ್ಮಾಪಕಿ ಪ್ರೀತಿ ಝಿಂಟಾ ಅವರಿಗೆ ಗೂಗಲ್, ಮೆಟಾ, ಎಕ್ಸ್ ಕಾರ್ಪ್ ಸೇರಿದಂತೆ ಹಲವು ಡಿಜಿಟಲ್ ಸಂಸ್ಥೆಗಳ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಲು ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ. ತಮ್ಮ ವ್ಯಕ್ತಿತ್ವ ಹಕ್ಕುಗಳು, ಹಕ್ಕುಸ್ವಾಮ್ಯ ಮತ್ತು ನೈತಿಕ ಹಕ್ಕುಗಳನ್ನು ಈ ಸಂಸ್ಥೆಗಳು ಉಲ್ಲಂಘಿಸಿವೆ ಎಂದು ಅವರು ಆರೋಪಿಸಿದ್ದಾರೆ.
ವ್ಯಕ್ತಿತ್ವ ಹಕ್ಕುಗಳು ಎಂದರೆ ಒಬ್ಬ ವ್ಯಕ್ತಿಯ ಗುರುತನ್ನು (ಹೆಸರು, ಚಿತ್ರ, ಧ್ವನಿ, ಹೋಲಿಕೆ, ವ್ಯಕ್ತಿತ್ವ) ಅವರ ಅನುಮತಿಯಿಲ್ಲದೆ ವಾಣಿಜ್ಯ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳುವುದರಿಂದ ರಕ್ಷಿಸುವ ಹಕ್ಕು. ಅದೇ ರೀತಿ, ನೈತಿಕ ಹಕ್ಕುಗಳು ಒಬ್ಬ ಸೃಷ್ಟಿಕರ್ತನಿಗೆ ತನ್ನ ಸೃಜನಶೀಲ ಕೃತಿಯೊಂದಿಗೆ ಇರುವ ವೈಯಕ್ತಿಕ ನಂಟನ್ನು ರಕ್ಷಿಸುತ್ತವೆ. ಇದು ಆ ಕೃತಿಯ ಕ್ರೆಡಿಟ್ ಅವರಿಗೆ ದೊರೆಯುವುದನ್ನು ಖಚಿತಪಡಿಸುವುದರ ಜೊತೆಗೆ, ಅದನ್ನು ತಿರುಚುವುದು ಅಥವಾ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯುತ್ತದೆ.
ಈ ಪ್ರಕರಣವು ಸಾಂಪ್ರದಾಯಿಕ ವ್ಯಕ್ತಿತ್ವ ಹಕ್ಕುಗಳ ಪ್ರಕರಣಗಳಿಗಿಂತ ಹೇಗೆ ಭಿನ್ನವಾಗಿದೆ ಎಂಬುದರ ಕುರಿತು 'the print' ಜೊತೆ ಮಾತನಾಡಿದ ವಕೀಲ ರಿಷಭ್ ಗಾಂಧಿ, “ಭಾರತದಲ್ಲಿ ಇದುವರೆಗೆ ನಡೆದ ವ್ಯಕ್ತಿತ್ವ ಹಕ್ಕುಗಳ ಪ್ರಕರಣಗಳು ಹೆಚ್ಚಾಗಿ ಸೆಲೆಬ್ರಿಟಿಗಳ ಹೆಸರು, ಚಿತ್ರ, ಧ್ವನಿ, ಹೋಲಿಕೆ, ಪ್ರಸಿದ್ಧ ಸಂಭಾಷಣೆಗಳು ಅಥವಾ ಇತರ ಗುರುತಿಸಬಹುದಾದ ವ್ಯಕ್ತಿತ್ವದ ಲಕ್ಷಣಗಳನ್ನು ಅನಧಿಕೃತವಾಗಿ ಬಳಸಿಕೊಳ್ಳುವುದಕ್ಕೆ ಸಂಬಂಧಿಸಿದ್ದಾಗಿದ್ದವು. ಯಾರಾದರೂ ಸೆಲೆಬ್ರಿಟಿಯ ಗುರುತನ್ನು ವಾಣಿಜ್ಯ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಅಥವಾ ಆ ಸೆಲೆಬ್ರಿಟಿಯೇ ತಮ್ಮ ಉತ್ಪನ್ನವನ್ನು ಪ್ರಚಾರ ಮಾಡುತ್ತಿದ್ದಾರೆ ಎಂಬ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂಬುದೇ ಸಾಮಾನ್ಯವಾಗಿ ದೂರು ಆಗಿರುತ್ತಿತ್ತು” ಎಂದು ಹೇಳಿದ್ದಾರೆ.
ಆದರೆ, ಪ್ರೀತಿ ಝಿಂಟಾ ಅವರ ಪ್ರಕರಣವು ಈ ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣವಾದ ತಾಂತ್ರಿಕ ವಲಯಕ್ಕೆ ಕೊಂಡೊಯ್ದಂತಿದೆ. ನ್ಯಾಯಾಲಯದ ಆದೇಶವು ಕೇವಲ ಚಿತ್ರಗಳು ಅಥವಾ ವಿಡಿಯೊಗಳನ್ನು ಮಾತ್ರವಲ್ಲದೆ, ಎಐ ಆಧಾರಿತ ಡೀಪ್ಫೇಕ್ ವಿಡಿಯೊಗಳು, ಮೀಮ್ಗಳು, ತಿರುಚಿದ ಚಿತ್ರಗಳು, ಎಐ ಆಧಾರಿತ ಚಾಟ್ಬಾಟ್ ಪಾತ್ರಗಳು ಹಾಗೂ ಇತರ ಡಿಜಿಟಲ್ ವಿಷಯಗಳನ್ನೂ ಉಲ್ಲೇಖಿಸುತ್ತದೆ.
“ಯಾರಾದರೂ ಪೋಸ್ಟರ್ ಅಥವಾ ಜಾಹೀರಾತಿನಲ್ಲಿ ಕೇವಲ ಫೋಟೋ ಬಳಸಿಕೊಳ್ಳುವುದಕ್ಕೂ, ಇದಕ್ಕೂ ಭಾರೀ ವ್ಯತ್ಯಾಸವಿದೆ. ಇದು ಸಂಪೂರ್ಣ ಭಿನ್ನವಾದ ಸಮಸ್ಯೆಯಾಗಿದೆ” ಎಂದು ಗಾಂಧಿ ಹೇಳಿದ್ದಾರೆ.
ವಾದ-ಪ್ರತಿವಾದಗಳನ್ನು ಪರಿಶೀಲಿಸಿದ ಬಳಿಕ, ನ್ಯಾಯಮೂರ್ತಿ ಅಭಯ್ ಅಹುಜಾ ಅವರು ಜೂನ್ 16ರಂದು ಝಿಂಟಾ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ, ಮೊಕದ್ದಮೆ ಹೂಡಲು ಅನುಮತಿ ನೀಡಿದರು.
ಈ ಆದೇಶವು ತಾಂತ್ರಿಕವಾಗಿ ಪ್ರಕ್ರಿಯಾತ್ಮಕ ಸ್ವರೂಪದ್ದಾಗಿದ್ದರೂ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ, ಈ ಪ್ರಕರಣದ ವಿಚಾರಣೆ ನಡೆಸಲು ಬಾಂಬೆ ಹೈಕೋರ್ಟ್ಗೆ ಅಧಿಕಾರವಿದೆಯೇ ಎಂಬುದನ್ನು ಇದು ನಿರ್ಧರಿಸುತ್ತದೆ. ಜೊತೆಗೆ, ಡಿಜಿಟಲ್ ಯುಗದಲ್ಲಿ ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ನ್ಯಾಯಾಲಯಗಳು ಅವಲಂಬಿಸಬಹುದಾದ ಮಹತ್ವದ ನಿದರ್ಶನವನ್ನೂ ಇದು ಸ್ಥಾಪಿಸಬಹುದು.
ಪ್ರಕರಣದ ಹಿನ್ನೆಲೆ
ಪ್ರೀತಿ ಝಿಂಟಾ ತಮ್ಮ ಅರ್ಜಿಯಲ್ಲಿ ತಮ್ಮನ್ನು “ಪ್ರಸಿದ್ಧ, ಪ್ರಶಸ್ತಿ ವಿಜೇತ ನಟಿ, ಚಲನಚಿತ್ರ ನಿರ್ಮಾಪಕಿ, ಉದ್ಯಮಿ ಹಾಗೂ ವ್ಯಾಪಕ ಜನಪ್ರಿಯತೆ ಗಳಿಸಿರುವ ವ್ಯಕ್ತಿತ್ವ” ಎಂದು ವಿವರಿಸಿದ್ದಾರೆ.
ಎಐ ಆಧಾರಿತ ಡೀಪ್ಫೇಕ್ಗಳು ಮತ್ತು ತಿರುಚಿದ ಡಿಜಿಟಲ್ ವಿಷಯಗಳು ತಮ್ಮ ಹಕ್ಕುಸ್ವಾಮ್ಯ ಹಾಗೂ ನೈತಿಕ ಹಕ್ಕುಗಳನ್ನು ಉಲ್ಲಂಘಿಸುವುದಷ್ಟೇ ಅಲ್ಲದೆ, ಹಲವು ವರ್ಷಗಳಿಂದ ಗಳಿಸಿಕೊಂಡಿರುವ ಸತ್ಕೀರ್ತಿ ಮತ್ತು ಗೌರವಕ್ಕೂ ಧಕ್ಕೆ ತರುತ್ತಿವೆ ಎಂದು ಅವರ ಪರ ವಕೀಲರು ವಾದಿಸಿದ್ದಾರೆ.
ಇದಕ್ಕಾಗಿ ಅವರು 1957ರ ಹಕ್ಕುಸ್ವಾಮ್ಯ ಕಾಯ್ದೆಯ ಸೆಕ್ಷನ್ 62 ಅನ್ನು ಅವಲಂಬಿಸಿದ್ದಾರೆ. ಈ ಸೆಕ್ಷನ್ ಪ್ರಕಾರ, ದೂರುದಾರರು ತಾವು ವಾಸಿಸುವ ಅಥವಾ ವ್ಯವಹಾರ ನಡೆಸುವ ವ್ಯಾಪ್ತಿಯ ನ್ಯಾಯಾಲಯದಲ್ಲೇ ಮೊಕದ್ದಮೆ ಹೂಡಲು ಅವಕಾಶವಿದೆ.
ಆದರೆ, ಈ ಪ್ರಕರಣವನ್ನು ಕೇವಲ ಹಕ್ಕುಸ್ವಾಮ್ಯದ ವಿವಾದವೆಂದು ಪರಿಗಣಿಸಲು ಸಾಧ್ಯವಿಲ್ಲ. ವ್ಯಕ್ತಿತ್ವ ಹಕ್ಕುಗಳ ಉಲ್ಲಂಘನೆ, ಹಕ್ಕುಸ್ವಾಮ್ಯದ ಉಲ್ಲಂಘನೆ, ಸತ್ಕೀರ್ತಿ ಮತ್ತು ಪ್ರತಿಷ್ಠೆಗೆ ಧಕ್ಕೆ, ನೈತಿಕ ಹಕ್ಕುಗಳ ಉಲ್ಲಂಘನೆ ಹಾಗೂ ಎಐ ಆಧಾರಿತ ಡಿಜಿಟಲ್ ವಿಷಯಗಳ ದುರ್ಬಳಕೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಇದು ಒಳಗೊಂಡಿದೆ.
ಹಿಂದಿನ ಪ್ರಕರಣಗಳಲ್ಲಿ ಜಾಗತಿಕ ತಂತ್ರಜ್ಞಾನ ಕಂಪನಿಗಳನ್ನು ಕೇವಲ ಹೆಸರಿಗಷ್ಟೇ ಪ್ರತಿವಾದಿಗಳನ್ನಾಗಿ ಸೇರಿಸಲಾಗುತ್ತಿತ್ತು. ಆದರೆ, ಈ ಪ್ರಕರಣದಲ್ಲಿ ಗೂಗಲ್ ಅನ್ನು ಪ್ರಮುಖ ಪ್ರತಿವಾದಿಯನ್ನಾಗಿ ಮಾಡಲಾಗಿದೆ.
ಅರ್ಜಿದಾರರು ನೇರವಾಗಿ ಗೂಗಲ್ ವಿರುದ್ಧವೇ ಪರಿಹಾರವನ್ನು ಕೋರಿದ್ದಾರೆ. ಡಿಜಿಟಲ್ ವ್ಯವಸ್ಥೆಯಲ್ಲಿ ಇಂತಹ ವೇದಿಕೆಗಳು ಕೇವಲ ಮೂಕಪ್ರೇಕ್ಷಕರಲ್ಲ; ಬದಲಿಗೆ ಸಕ್ರಿಯ ಭಾಗಿಗಳಾಗಿವೆ ಎಂಬುದನ್ನು ಈ ನಡೆ ಸೂಚಿಸುತ್ತದೆ.
ಬಾಂಬೆ ಹೈಕೋರ್ಟ್ ಏಕೆ?
ಪ್ರೀತಿ ಝಿಂಟಾ ಅವರು ಸಾಮಾನ್ಯ ಸಿವಿಲ್ ನ್ಯಾಯಾಲಯದ ಬದಲಿಗೆ ಬಾಂಬೆ ಹೈಕೋರ್ಟ್ ಅನ್ನು ಏಕೆ ಸಂಪರ್ಕಿಸಿದರು ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಇದಕ್ಕೆ ಉತ್ತರ 'ಲೆಟರ್ಸ್ ಪೇಟೆಂಟ್'ನ ಕ್ಲಾಸ್ XII ಅಡಿಯಲ್ಲಿ ಹೈಕೋರ್ಟ್ಗೆ ಇರುವ ಮೂಲ ಸಿವಿಲ್ ಅಧಿಕಾರ ವ್ಯಾಪ್ತಿಯಲ್ಲಿದೆ.
ಕ್ಲಾಸ್ XII ಪ್ರಕಾರ, ಪ್ರಕರಣಕ್ಕೆ ಕಾರಣವಾದ ಘಟನೆಯ ಯಾವುದೇ ಒಂದು ಭಾಗ ಮುಂಬೈ ಅಥವಾ ಅದರ ಪ್ರಾದೇಶಿಕ ವ್ಯಾಪ್ತಿಯಲ್ಲಿ ನಡೆದಿದ್ದರೂ, ಅಂತಹ ಮೊಕದ್ದಮೆಗಳ ವಿಚಾರಣೆ ನಡೆಸಲು ಹೈಕೋರ್ಟ್ಗೆ ಅಧಿಕಾರವಿರುತ್ತದೆ.
ಹಲವಾರು ಪ್ರತಿವಾದಿಗಳು ಮುಂಬೈನ ಹೊರಗಿದ್ದು, ಹಕ್ಕು ಉಲ್ಲಂಘನೆಯ ಚಟುವಟಿಕೆಗಳು ಆನ್ಲೈನ್ ವೇದಿಕೆಗಳ ಮೂಲಕ ಜಾಗತಿಕವಾಗಿ ನಡೆಯುತ್ತಿರುವುದರಿಂದ, ಅರ್ಜಿದಾರರು ಕ್ಲಾಸ್ XII ಅಡಿಯಲ್ಲಿ ಮೊಕದ್ದಮೆ ಹೂಡಲು ವಿಶೇಷ ಅನುಮತಿ ಪಡೆಯಬೇಕಾಗಿತ್ತು. ನ್ಯಾಯಾಲಯವು ಈ ಅನುಮತಿಯನ್ನು ಮಂಜೂರು ಮಾಡಿದೆ.
ಝಿಂಟಾ ಅವರು ಮುಂಬೈನಲ್ಲಿ ವಾಸಿಸುತ್ತಿದ್ದು, ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಅವರ ಸತ್ಕೀರ್ತಿ, ಪ್ರತಿಷ್ಠೆ ಮತ್ತು ವ್ಯಕ್ತಿತ್ವವೂ ಅಲ್ಲಿಯೇ ನೆಲೆಸಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ, ಈ ವಿಷಯದ ಪ್ರಸಾರವು ವಿವಿಧ ವೇದಿಕೆಗಳು ಹಾಗೂ ಭೌಗೋಳಿಕ ಪ್ರದೇಶಗಳಿಗೆ ವಿಸ್ತರಿಸಿದ್ದರೂ, ಪ್ರಕರಣಕ್ಕೆ ಕಾರಣವಾದ ಘಟನೆಯ ಒಂದು ಭಾಗ ಸ್ಥಳೀಯವಾಗಿರುವುದರಿಂದ ಕ್ಲಾಸ್ XII ಅಡಿಯಲ್ಲಿ ಅನುಮತಿ ನೀಡಲಾಗಿದೆ.
ಹಿಂದಿನ ವ್ಯಕ್ತಿತ್ವ ಹಕ್ಕುಗಳ ಪ್ರಕರಣಗಳಿಗಿಂತ ಭಿನ್ನತೆ
ರಿಷಭ್ ಗಾಂಧಿ ಅವರ ಪ್ರಕಾರ, “ಡೀಪ್ಫೇಕ್ ಮತ್ತು ಎಐಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕೇವಲ ಒಬ್ಬರ ಗುರುತನ್ನು ಅನುಮತಿಯಿಲ್ಲದೆ ಬಳಸುವುದು ಅಷ್ಟೇ ಸಮಸ್ಯೆಯಲ್ಲ; ಆ ಗುರುತನ್ನು ಮರುಸೃಷ್ಟಿಸುವುದು ಅಥವಾ ನಕಲಿ ರೂಪ ನೀಡುವುದೇ ಮುಖ್ಯ ಆತಂಕವಾಗಿದೆ. ಇದು ಹಾನಿಯ ಸ್ವರೂಪವನ್ನೇ ಬದಲಾಯಿಸುತ್ತದೆ. ಇಂತಹ ಸಂದರ್ಭಗಳಲ್ಲಿ ವೇದಿಕೆಗಳ ಪಾತ್ರವೂ ಅತ್ಯಂತ ಪ್ರಮುಖವಾಗುತ್ತದೆ.”
ಹಿಂದಿನ ಪ್ರಕರಣಗಳಲ್ಲಿ ತಪ್ಪು ಮಾಡಿದವರನ್ನು ಸುಲಭವಾಗಿ ಗುರುತಿಸಬಹುದಾಗಿತ್ತು. ಅವರು ವ್ಯಾಪಾರಿ, ಜಾಹೀರಾತುದಾರ, ವೆಬ್ಸೈಟ್ ನಿರ್ವಾಹಕ ಅಥವಾ ಕಂಟೆಂಟ್ ಸೃಷ್ಟಿಕರ್ತರಾಗಿರುತ್ತಿದ್ದರು. ಆದರೆ, ಎಐ ಮತ್ತು ಡೀಪ್ಫೇಕ್ ಪ್ರಕರಣಗಳಲ್ಲಿ ವಿಷಯವನ್ನು ರಚಿಸಬಹುದು, ಅಪ್ಲೋಡ್ ಮಾಡಬಹುದು, ಇಂಡೆಕ್ಸ್ ಮಾಡಬಹುದು, ಹಂಚಿಕೊಳ್ಳಬಹುದು, ವೈರಲ್ ಮಾಡಬಹುದು ಮತ್ತು ಅಳಿಸಿದ ಬಳಿಕವೂ ಮತ್ತೆ ಅಪ್ಲೋಡ್ ಮಾಡಬಹುದು.
ಹೀಗಾಗಿ, ನ್ಯಾಯಾಲಯವು ಕೇವಲ ಹಕ್ಕು ಉಲ್ಲಂಘನೆಯಾಗಿದೆಯೇ ಎಂಬುದನ್ನು ಮಾತ್ರವಲ್ಲ, ಡಿಜಿಟಲ್ ವಾತಾವರಣದಲ್ಲಿ ಪರಿಣಾಮಕಾರಿ ಪರಿಹಾರ ಯಾವುದು ಎಂಬುದನ್ನೂ ಪರಿಗಣಿಸಬೇಕಾಗುತ್ತದೆ.
ಡೀಪ್ಫೇಕ್ ಪ್ರಕರಣಗಳು ಒಂದೇ ಕಾನೂನು ಚೌಕಟ್ಟಿಗೆ ಸೀಮಿತವಾಗಿರುವುದಿಲ್ಲ. ಅವು ಖಾಸಗಿತನ, ಪ್ರಚಾರ ಹಕ್ಕು, ಹಕ್ಕುಸ್ವಾಮ್ಯ, ನೈತಿಕ ಹಕ್ಕುಗಳು, ನಕಲಿ ಪ್ರಚಾರ, ತಪ್ಪು ಸಮ್ಮತಿ, ಮಾನಹಾನಿ, ಸತ್ಕೀರ್ತಿ ಮತ್ತು ಮಧ್ಯವರ್ತಿಗಳ ಹೊಣೆಗಾರಿಕೆ ಸೇರಿದಂತೆ ಹಲವು ಕಾನೂನು ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.
“ಹಿಂದಿನ ಪ್ರಕರಣಗಳು ಮುಖ್ಯವಾಗಿ ಸೆಲೆಬ್ರಿಟಿಗಳ ಗುರುತಿನ ದುರುಪಯೋಗಕ್ಕೆ ಸಂಬಂಧಿಸಿದ್ದವು. ಆದರೆ, ಎಐ ಡೀಪ್ಫೇಕ್ ಪ್ರಕರಣಗಳು ಕೃತಕವಾಗಿ ಸೃಷ್ಟಿಸಲಾದ ಅಥವಾ ನಕಲಿ ಉಪಸ್ಥಿತಿಗೆ ಸಂಬಂಧಿಸಿದವು. ಇದು ಕಾನೂನಿನ ಮುಂದೆ ಇರುವ ಅತ್ಯಂತ ಗಂಭೀರ ಸವಾಲಾಗಿದೆ” ಎಂದು ಗಾಂಧಿ ಹೇಳಿದ್ದಾರೆ.
ವ್ಯಾಪಕ ಪ್ರಭಾವ
ಈ ಆದೇಶವು ಭಾರತದಲ್ಲಿ ಡಿಜಿಟಲ್ ಹಕ್ಕುಗಳ ಕಾನೂನು ಹೋರಾಟದ ಭವಿಷ್ಯದ ಮೇಲೆ ಮಹತ್ತರ ಪ್ರಭಾವ ಬೀರಬಹುದಾಗಿದೆ.
ಮೊಕದ್ದಮೆಯನ್ನು ಮುಂದುವರಿಸಲು ಅನುಮತಿ ನೀಡುವ ಮೂಲಕ, ಎಐ ಡೀಪ್ಫೇಕ್ಗಳು ಮತ್ತು ಡಿಜಿಟಲ್ ವಿಷಯಗಳಿಂದ ಉಂಟಾಗುವ ಹಾನಿಯ ಗಂಭೀರತೆಯನ್ನು ನ್ಯಾಯಾಲಯವು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.
ಈ ಕುರಿತು 'the print' ಜೊತೆ ಮಾತನಾಡಿದ ಮುಂಬೈನ ಲೆಗಾಸಿಸ್ ಪಾರ್ಟ್ನರ್ಸ್ನ ವಕೀಲ ವೈಭವ್ ಕೆನಿ, “ಹೈಕೋರ್ಟ್ಗಳ ಮುಂದೆ ಬಂದಿರುವ ವ್ಯಕ್ತಿತ್ವ ಹಕ್ಕುಗಳ ಮೊಕದ್ದಮೆಗಳು ಈಗಾಗಲೇ ಭಾರತದಲ್ಲಿ ಈ ರೀತಿಯ ಪ್ರಕರಣಗಳಿಗೆ ಪ್ರಮುಖ ಉಲ್ಲೇಖಗಳಾಗಿವೆ. ಸೆಲೆಬ್ರಿಟಿ ಸ್ಥಾನಮಾನ ಹೊಂದಿರುವ ಮತ್ತು ವಿಶಿಷ್ಟ ವ್ಯಕ್ತಿತ್ವ ಹೊಂದಿರುವ ಪ್ರತಿಯೊಬ್ಬ ಕಲಾವಿದನಿಗೂ ಈಗ ಅವಲಂಬಿಸಬಹುದಾದ ಕಾನೂನು ನಿದರ್ಶನ ದೊರೆತಂತಾಗಿದೆ” ಎಂದು ಹೇಳಿದ್ದಾರೆ.
ವ್ಯಕ್ತಿಗಳ ಅನುಮತಿಯಿಲ್ಲದೆ ಅವರ ಗುರುತನ್ನು ಬಳಸಿಕೊಳ್ಳುವ ಎಐ ತಂತ್ರಜ್ಞಾನಗಳನ್ನು ನಿಯಂತ್ರಿಸಲು ಇನ್ನಷ್ಟು ಬಲವಾದ ನ್ಯಾಯಾಂಗ ಮತ್ತು ಶಾಸಕಾಂಗ ಹಸ್ತಕ್ಷೇಪಗಳಿಗೆ ಈ ಪ್ರಕರಣವು ದಾರಿ ಮಾಡಿಕೊಡಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಸೌಜನ್ಯ: theprint.in






