ಕ್ರಿಸ್ ಮಸ್ ಗೆ ಪ್ರಧಾನಿಯನ್ನು ಆಹ್ವಾನಿಸುವುದು ಭಯದಿಂದ : ಸಿಪಿಎಂ ಸಂಸದ ಜಾನ್ ಬ್ರಿಟಾಸ್
ಝಾಕಿಯಾ ಜಾಫ್ರಿಯನ್ನು ಸ್ಮರಿಸಿದ ಸಂಸದ

ದೇಶಾದ್ಯಂತ ಅಲ್ಪಸಂಖ್ಯಾತರ ವಿರುದ್ದ ಭಯ ಹರಡಲಾಗುತ್ತಿದೆ. ಪ್ರತಿ ವರ್ಷವೂ ಕ್ರಿಸ್ಮಸ್ ವೇಳೆ ಪಾದ್ರಿಗಳು, ಬಿಷಪ್ ಗಳು ಪ್ರಧಾನಿಯವರನ್ನು ಆಹ್ವಾನಿಸುವುದು ಗೌರವದಿಂದಲ್ಲ, ಬದಲಾಗಿ ಭಯದಿಂದ. ಕೇರಳಕ್ಕೆ ಒಂದು ಪೈಸೆಯನ್ನೂ ನೀಡಲಾಗಿಲ್ಲ. ಈ ಬಜೆಟ್ನಲ್ಲೂ ನಿರ್ಲಕ್ಷಿಸಲಾಗಿದೆ. ರಾಜ್ಯ ವಿವಿಗಳನ್ನು ಹೈಜಾಕ್ ಮಾಡಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಹೀಗೆ, ಕೇಂದ್ರ ಸರ್ಕಾರವನ್ನು ಟೀಕಿಸಿದವರು ಸಿಪಿಎಂ ರಾಜ್ಯಸಭಾ ಸದಸ್ಯ ಜಾನ್ ಬ್ರಿಟಾಸ್.
ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ರಾಜ್ಯಸಭೆಯಲ್ಲಿ ಜಾನ್ ಬ್ರಿಟಾಸ್ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಣಕಾಸು ಸಚಿವರು ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎನ್ನುತ್ತ ಬಜೆಟ್ ಮಂಡಿಸುತ್ತಿದ್ದಾಗ ಒಬ್ಬ ದಿಟ್ಟ ಹೋರಾಟಗಾರ್ತಿ, ಎರಡು ದಶಕಗಳಿಗೂ ಹೆಚ್ಚು ಕಾಲ ನ್ಯಾಯಕ್ಕಾಗಿ ಹೋರಾಡಿದ್ದ ಅಸಹಾಯಕ ಮಹಿಳೆ ಕೊನೆಯುಸಿರೆಳೆದರು. ಆಕೆ ಈ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಹೆಸರಿನ ರಾಜಕೀಯದ ಬಲಿಪಶು ಎಂದದಿದ್ದಾರೆ ಜಾನ್ ಬ್ರಿಟಾಸ್.
ಆಕೆ ಝಕಿಯಾ ಜಾಫ್ರಿ. ಅವರು ನ್ಯಾಯ ಪಡೆಯಲು ಹೋರಾಡುತ್ತಿದ್ದರು. ಅವರ ಪತಿ ಸಂಸದರಾಗಿದ್ದರು. ಕಸಾಯಿಖಾನೆಯಲ್ಲಿ ಪ್ರಾಣಿಗೆ ತೋರಿಸಬೇಕಾದ ಕರುಣೆಯನ್ನು ಕೂಡ ಎಹ್ಸಾನ್ ಜಾಫ್ರಿಯವರಿಗೆ ತೋರಿಸಲಿಲ್ಲ ಎಂದಿದ್ದಾರೆ.
ದೇಶಾದ್ಯಂತ ಭಯ ಹರಡಲಾಗುತ್ತಿದೆ. ಅಲ್ಪಸಂಖ್ಯಾತರ ಪರಿಸ್ಥಿತಿ ಇದು ಎಂದು ಅವರು ಹೇಳಿದ್ದಾರೆ. ಸಂಭಲ್ನಲ್ಲಿ ಏನಾಯಿತು ಎನ್ನುವುದು ಗೊತ್ತಿದೆ. ಅಲ್ಲಿ ಅಗೆಯುವ ಕೆಲಸ ನಡೆಯುತ್ತಿದೆ. ಯಾವ ದರ್ಗಾಕ್ಕೆ ವಾಜಪೇಯಿಯವರು ಚಾದರ್ ಕಳಿಸುತ್ತಿದ್ದರೊ, ಮೋದಿಯವರೂ ಚಾದರ್ ಕಳಿಸುತ್ತಾರೊ ಆ ಅಜ್ಮೀರ್ ದರ್ಗಾ ವಿಷಯದಲ್ಲಿಯೂ ಇದೇ ಸ್ಥಿತಿಯಿದೆ ಎಂದಿದ್ದಾರೆ.
ಪ್ರತಿ ವರ್ಷ ಕ್ರಿಶ್ಚಿಯನ್ ಪಾದ್ರಿಗಳು, ಬಿಷಪ್ಗಳು ಕ್ರಿಸ್ಮಸ್ಗಾಗಿ ಪ್ರಧಾನಿಯನ್ನು ಆಹ್ವಾನಿಸುತ್ತಾರೆ. ಆದರೆ ಇದು ಗೌರವದಿಂದ ಅಲ್ಲ, ಭಯದಿಂದ ಎಂದು ಜಾನ್ ಬ್ರಿಟಾಸ್ ಹೇಳಿದ್ದಾರೆ.
ಕಳೆದ ವರ್ಷವೇ, 2024ರಲ್ಲಿಯೇ ಕ್ರಿಶ್ಚಿಯನ್ ಸಮುದಾಯದ ವಿರುದ್ಧ ಮತ್ತೆ 834 ದಾಳಿ ಘಟನೆಗಳು ನಡೆದಿವೆ. ಒಂದು ರಾಜ್ಯದಲ್ಲಿ ಕ್ರಿಶ್ಚಿಯನ್ ಸಮುದಾಯದ ವಿರುದ್ಧ 834 ದಾಳಿಗಳು ನಡೆದಿವೆ ಎಂದಿದ್ದಾರೆ.
ಸ್ಥಳೀಯ ನ್ಯಾಯಾಲಯವೇ ಆಶ್ಚರ್ಯ ವ್ಯಕ್ತಪಡಿಸಿ, ಈ ಜನರನ್ನು ಇಷ್ಟು ತಿಂಗಳು ಜೈಲಿಗೆ ಹಾಕಿದ್ದು ಏಕೆ ಎಂದು ಕೇಳಿತು. ಇಬ್ಬರು ವ್ಯಕ್ತಿಗಳನ್ನು ಜೈಲಿಗೆ ಹಾಕಲಾಗಿತ್ತು. ಕಾರಣ, ಅವರು ತಮ್ಮ ಮನೆಯಲ್ಲಿ ಬೈಬಲ್ ಅನ್ನು ಇಟ್ಟುಕೊಂಡಿದ್ದರು. ಇದು ಆಘಾತಕಾರಿ ಎಂದಿದ್ದಾರೆ.
ಕುದುರೆಯ ಮೇಲೆ ಕುಳಿತಿದ್ದ ಅಂತರ್ಧರ್ಮೀಯ ದಂಪತಿಯನ್ನು ಎಳೆದು ಹಾಕಲಾದ ಘಟನೆ ಅಲೀಘಡದಲ್ಲಿ ನಡೆಯಿತು. ಅವರು ಕುದುರೆಯನ್ನು ಹತ್ತಬಹುದೆ ಎಂದು ಪ್ರಶ್ನಿಸಲಾಯಿತು. ಅವರು ಹೆದರಿ ಓಡಿಯೇ ಹೋದರು. ಇದು ಸಮಾಜ ಎಷ್ಟು ಭ್ರಷ್ಟಗೊಂಡಿದೆ ಎಂಬುದರ ನಿದರ್ಶನ ಎಂದಿದ್ದಾರೆ ಜಾನ್ ಬ್ರಿಟಾಸ್.
ಕೇರಳ ಈ ದೇಶದ ಭಾಗವಲ್ಲವೇ?ಕೇರಳಕ್ಕೆ ಒಂದೇ ಒಂದು ಪೈಸೆ ಕೂಡ ನೀಡಲಾಗಿಲ್ಲ. ಈ ಸಲದ ಬಜೆಟ್ ನಲ್ಲಿ ಕೂಡ ಕೇರಳವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಜಾನ್ ಬ್ರಿಟಾಸ್ ಆರೋಪಿಸಿದ್ದಾರೆ. ಈ ಸರ್ಕಾರದ ಸಚಿವರು ಎದ್ದು ನಿಂತು ನೀವು ಹಿಂದುಳಿದ ರಾಜ್ಯವಾಗುತ್ತೀರಿ ಎಂದು ಹೇಳುವ ಧೈರ್ಯ ತೋರಿಸುತ್ತಾರೆ.
ಒಬ್ಬ ಮಂತ್ರಿ ಹಾಗೆ ಮಾತನಾಡಬಹುದೆ? ಕೇರಳದ ಇನ್ನೊಬ್ಬ ಸಚಿವರು ಬುಡಕಟ್ಟು ಜನಾಂಗದವರನ್ನು ಇಲ್ಲವಾಗಿಸಲು ಹೇಳುತ್ತಾರೆ. ಒಬ್ಬ ಬ್ರಾಹ್ಮಣ ಮಂತ್ರಿಯಾಗಬೇಕು ಎನ್ನುತ್ತಾರೆ. ಇದು ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂದು ಜಾನ್ ವ್ಯಂಗ್ಯವಾಡಿದ್ದಾರೆ.
ಬಳಿಕ ಅವರು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರನ್ನು ಉದ್ದೇಶಿಸಿ, ನೀವು ಹೈಜಾಕ್ ಮಾಡಿಬಿಟ್ಟಿದ್ದೀರಿ ಎಂದು ಹೇಳಿ ವಾಗ್ದಾಳಿ ನಡೆಸಿದ್ದಾರೆ. ಎಲ್ಲಾ ರಾಜ್ಯ ವಿಶ್ವವಿದ್ಯಾಲಯವನ್ನು ಬೆವರು ಮತ್ತು ರಕ್ತದಿಂದ ನಿರ್ಮಿಸಬೇಕು. ಆದರೆ ಕಳೆದ 10 ವರ್ಷಗಳಲ್ಲಿ ನೀವು ಹೈಜಾಕ್ ಮಾಡಲು ಯತ್ನಿಸಿದ್ದೀರಿ ಎಂದು ಹೇಳಿದ್ದಾರೆ.
ಕುಲಪತಿಗಳ ನೇಮಕಾತಿಯಲ್ಲಿ ರಾಜ್ಯಪಾಲರಿಗೆ ಅಧಿಕಾರ ನೀಡುವ ಯುಜಿಸಿ ಹೊಸ ನಿಯಮಾವಳಿಗಳ ಬಗ್ಗೆ ಅವರು ಆಕ್ಷೇಪವೆತ್ತಿದ್ದಾರೆ. ರಾಜ್ಯಗಳ ಸರ್ಕಾರಗಳು ಸ್ಥಾಪಿಸಿದ ವಿಶ್ವವಿದ್ಯಾಲಯಗಳನ್ನು ಅವರು ತಕ್ಷಣವೇ ಹೈಜಾಕ್ ಮಾಡಲು ಬಯಸುತ್ತಾರೆ ಎಂದು ಟೀಕಿಸಿದ್ದಾರೆ. ಇವು ಕೇವಲ ಮಾರ್ಗಸೂಚಿಗಳು, ಬದಲಾವಣೆಗೆ ಸಿದ್ಧರಿದ್ದೇವೆ ಎಂದು ನೀವು ಹೇಳಿದ್ದೀರಿ. ಅದಕ್ಕೆ ಸಂತೋಷವಾಗಿದೆ ಎಂದಿದ್ದಾರೆ. ರಾಜ್ಯ ಸರ್ಕಾರವನ್ನು ವಿರೂಪಗೊಳಿಸಲು ರಾಜ್ಯಪಾಲರನ್ನು ಹಿಟ್ಮ್ಯಾನ್ನಂತೆ ಬಳಸಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ವೈಜ್ಞಾನಿಕ ಚರ್ಚೆಯಲ್ಲಿ ಐಐಟಿ ನಿರ್ದೇಶಕರೊಬ್ಬರು ತಾವು ಗೋಮೂತ್ರ ಸೇವಿಸುವುದಾಗಿ ಹೇಳುತ್ತಾರೆ. ಶಿಕ್ಷಣ ಎಲ್ಲಿಗೆ ಹೋಗುತ್ತಿದೆ? ಈ ದೇಶ ಎಲ್ಲಿಗೆ ಹೋಗುತ್ತಿದೆ ಎಂದು ಜಾನ್ ಬ್ರಿಟಾಸ್ ಪ್ರಶ್ನಿಸಿದ್ದಾರೆ.
ನ್ಯಾಯಾಂಗದಿಂದ ಚುನಾವಣಾ ಆಯೋಗದವರೆಗೆ ಸ್ವಾಯತ್ತ ಸಂಸ್ಥೆಗಳ ಸ್ಥಿತಿಯೇನಾಗಿದೆ? ಕೋರ್ಟ್ ನ್ಯಾಯಾಧೀಶರು ಸಹ ಮುಸ್ಲಿಮರ ವಿರುದ್ಧ ಮಾತನಾಡುವ ಧೈರ್ಯ ತೋರುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಈ ದೇಶವನ್ನು ಒಟ್ಟಿಗೆ ಹಿಡಿದಿಡಲು ಬಯಸುತ್ತೇವೆಯೇ? ನಾವು ಆ ಗುಣಗಳನ್ನು ಮರಳಿ ತರಬೇಕಾಗಿದೆ, ಸ್ವಾತಂತ್ರ್ಯ ಚಳವಳಿಯ ಭಾಗವಾಗಿದ್ದ ಆ ಆದರ್ಶಗಳನ್ನು ನಾವು ಪುನಃ ಕಂಡುಕೊಳ್ಳಬೇಕಾಗಿದೆ ಎಂದಿದ್ದಾರೆ.