ತೆರೆಗೆ ಸರಿದ ಪ್ರಧಾನಿ ನರೇಂದ್ರ ಮೋದಿ ಆಪ್ತ ಹಿರೇನ್ ಜೋಶಿ: ವರದಿ

ಹೊಸದಿಲ್ಲಿ: ಪಿಎಂಒದಲ್ಲಿ ಮೋದಿಯ ಬಲಗೈ ಎಂಬಂತಿದ್ದ ಹಿರೇನ್ ಜೋಶಿಯನ್ನು ವಜಾಗೊಳಿಸಲಾಗಿದೆ ಎಂದು ಮಾತಾಡಿಕೊಳ್ಳಲಾಗುತ್ತಿದೆ. ಪಿಎಂಒದಿಂದ ಹಿರೇನ್ ಜೋಶಿ ಇದ್ದಕ್ಕಿದ್ದಂತೆ ಹೊರಬಿದ್ದಿದ್ದಾರೆ ಎಂಬ ವದಂತಿಗಳು ದಿಲ್ಲಿ ತುಂಬ ಗೊಂದಲ ಹಬ್ಬಿಸಿವೆ. ಹಾಗೇನಿಲ್ಲ, ಅವರು ಪಿಎಂಒಗೆ ರಿಪೋರ್ಟ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಸ್ಪಷ್ಟನೆಗಳೂ ಇವೆ.
ಅವರನ್ನು ಪಿಎಂಒದಿಂದ ಹೊರಹಾಕಲಾಗಿದೆಯೇ ಅಥವಾ ರಾಜೀನಾಮೆ ಪಡೆಯಲಾಗಿದೆಯೆ? ಅದಕ್ಕೆ ಕಾರಣವೇನು ಮತ್ತು ತೆಗೆದುಹಾಕದಿದ್ದರೆ ಸಾಮಾಜಿಕ ಮಾಧ್ಯಮದಲ್ಲಿ ಹಿರೇನ್ ಜೋಶಿ ಬಗ್ಗೆ ಹಲವು ರೀತಿಯ ಕಥೆಗಳು ಏಕೆ ಇವೆ? ಪ್ರಧಾನಿ ಕಚೇರಿಯಲ್ಲಿ ಮೋದಿ ಅವರ ಅಡಿ ಕೆಲಸ ಮಾಡುವ ಹಿರೇನ್ ಜೋಶಿ, ಕಳೆದ 17 ವರ್ಷಗಳಿಂದಲೂ, ಅಂದರೆ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಅವರೊಂದಿಗೆ ಗಟ್ಟಿ ನಂಟು ಹೊಂದಿರುವವರು. ಪಿಎಂಒದಲ್ಲಿ ಅವರದು ದೊಡ್ಡ ಸ್ಥಾನಮಾನ ಎಂದು ಅವರ ಬಗ್ಗೆ ಗೊತ್ತಿರುವವರು ಹೇಳುತ್ತಿದ್ದಾರೆ.
ಅಮಿತ್ ಶಾ, ರಾಜನಾಥ್ ಸಿಂಗ್, ಗಡ್ಕರಿ ಸೇರಿದಂತೆ ಅಗ್ರ ಐವರು ಸಚಿವರನ್ನು ಬಿಟ್ಟರೆ, ಹಿರೇನ್ ಜೋಶಿ ಸ್ಥಾನಮಾನ, ಪ್ರಭಾವ, ವರ್ಚಸ್ಸು ಉಳಿದ ಸಚಿವರಿಗಿಂತ ಹೆಚ್ಚಾಗಿದೆ.ಅಂಥ ಹಿರೇನ್ ಜೋಶಿ ಪ್ರಧಾನಿ ಕಚೇರಿಯನ್ನು ತೊರೆದಿದ್ದಾರೋ ಅಥವಾ ಅವರನ್ನು ಹೊರಹೋಗಲು ಕೇಳಲಾಯಿತೊ ಅಥವಾ ರಾಜೀನಾಮೆ ನೀಡಿದ್ದಾರೋ ಸ್ಪಷ್ಟವಿಲ್ಲ. ಆದರೆ ಅಂಥ ಮಾತುಗಳು, ವದಂತಿಗಳು ಜೋರಾಗಿವೆ.
ಹಿರಿಯ ಪತ್ರಕರ್ತ ಅಜಿತ್ ಅಂಜುಮ್ ಹೇಳುವ ಪ್ರಕಾರ, ಜೋಶಿ ಸಂಪರ್ಕದಲ್ಲಿರುವ ವಾಟ್ಸ್ಯಾಪ್ ಗ್ರೂಪ್ ನಲ್ಲಿ ಕಳೆದ 10-12 ದಿನಗಳಿಂದ ಯಾವುದೇ ಮೆಸೇಜ್ ಇರಲಿಲ್ಲ ಎಂದು ಒಂದಿಬ್ಬರು ಪತ್ರಕರ್ತರ ಮೂಲಕ ತಿಳಿದುಬಂದಿದೆ. ತಾವು ಹಿರೇನ್ ಜೋಶಿಯ ವಾಟ್ಸಾಪ್ ಗ್ರೂಪ್ ನ ಭಾಗವಲ್ಲವಾಗಿರುವುದರಿಂದ ಅವರ ಬಗ್ಗೆ ಹೆಚ್ಚು ತಿಳಿದಿಲ್ಲ ಎಂದಿದ್ದಾರೆ ಅಜಿತ್ ಅಂಜುಮ್.
ಹಿರೇನ್ ಜೋಶಿ ವ್ಯವಹರಿಸುವ ಗ್ರೂಪ್ ನಲ್ಲಿ ಇರುವ ಸಂಪಾದಕರು, ಟಿವಿ ನಿರೂಪಕರು, ವರದಿಗಾರರು, ಮೀಡಿಯಾ ಮಾಲೀಕರು ಮತ್ತು ದೊಡ್ಡ ಚಾನೆಲ್‌ಗಳ ಸಿಇಒಗಳ ವರ್ಗವೇ ಬೇರೆ ಇದೆ. ಅವರಿಗೆಲ್ಲ ಹಿರೇನ್ ಜೋಶಿ ವಾಟ್ಸಾಪ್ ಮೆಸೇಜ್ ಮೂಲಕವೇ ಯಾವ ಚಾನೆಲ್‌ನಲ್ಲಿ ಏನು ತೋರಿಸಬೇಕು ಮತ್ತು ಯಾವುದನ್ನು ತೋರಿಸಬಾರದು? ಯಾವಾಗ ತೋರಿಸಬೇಕು? ಪ್ರಧಾನ ಮಂತ್ರಿಯ ಇಮೇಜ್ ಅನ್ನು ಹೇಗೆ ಅತ್ಯಂತ ನಾಜೂಕಾಗಿ ನಿರ್ಮಿಸಬೇಕು ಎಂಬುದೆಲ್ಲವನ್ನೂ ಹೇಳುತ್ತಾರೆ ಎಂಬ ಮಾತುಗಳಿವೆ.
ಹಿರೇನ್ ಜೋಶಿ ಎಂಥ ಪ್ರಭಾವಿಯೆಂದರೆ, ಅದರ ಬಗ್ಗೆ ಅನೇಕ ಮಂತ್ರಿಗಳಲ್ಲಿಯೂ ಸ್ವಲ್ಪ ಅಸಮಾಧಾನವಿದ್ದಿರಬಹುದು ಎನ್ನಲಾಗುತ್ತದೆ. ಅವರ ಕೆಲ ವಿದೇಶ ಪ್ರವಾಸಗಳು, ಕೆಲ ವ್ಯವಹಾರ ಹಿತಾಸಕ್ತಿಗಳು ಅಥವಾ ಪಿಎಂಒದಲ್ಲಿನ ಅವರ ಪ್ರಭಾವ ಎಲ್ಲವೂ ಬಿಜೆಪಿಯೊಳಗೇ ಹಲವರಿಗೆ ಅಸಮಾಧಾನ ತಂದಿರುವ ಸಾಧ್ಯತೆ ಇದೆ. ಅವರು ತನ್ನ ಪ್ರಭಾವ ಬಳಸಿಕೊಂಡು ಹಿರೇನ್ ಜೋಶಿ ಪ್ರಧಾನಿ ಮೋದಿಯ ಇಮೇಜ್ ಅನ್ನು ಮಾಧ್ಯಮಗಳಲ್ಲಿ ಸೃಷ್ಟಿಸುತ್ತಿದ್ದ ರೀತಿ, ಅವರು ಸೂಚನೆಗಳನ್ನು ನೀಡುತ್ತಿದ್ದ ವಿಧಾನ ಇದೆಲ್ಲದರ ಬಗ್ಗೆ ಸರಕಾರದಲ್ಲಿ ಇರುವವರಿಗೇ ಇರಿಸು ಮುರುಸು ತಂದಿರಬಹುದು.
ಬುಧವಾರ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಹಿರೇನ್ ಜೋಶಿ ಬಗೆಗಿನ ಈ ಸುದ್ದಿಯ ಬಗ್ಗೆ ಹೇಳಿದಾಗ ಇದು ಇನ್ನೂ ದೊಡ್ಡದಾಗಿ ಹರಡಿತು. ಅವರು ಪತ್ರಿಕಾಗೋಷ್ಠಿ ನಡೆಸಿ ಹಿರೇನ್ ಜೋಶಿ ಮತ್ತವರ ನೆಟ್ವರ್ಕ್ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಿದರು.
ಹಿರೇನ್ ಜೋಶಿ ನಿಜವಾಗಿಯೂ ರಾಜೀನಾಮೆ ನೀಡಿದ್ದಾರೆಯೇ ಅಥವಾ ಇಲ್ಲವೇ? ಅವರನ್ನು ರಜೆ ಮೇಲೆ ಕಳಿಸಲಾಗಿದೆಯೆ? ಎಂಬ ಬಗ್ಗೆ ಗೊಂದಲಗಳಿವೆ. ಡಿಸೆಂಬರ್ 14 ಪಿಎಂಒದಲ್ಲಿ ಅವರ ಕೊನೆಯ ದಿನವಾಗಬಹುದು ಎಂದು ಕೂಡ ಹೇಳಲಾಗುತ್ತಿದೆ. ಹೀಗಿರುವಾಗ ಪವನ್ ಖೇರಾ ಹೇಳಿಕೆ ಮಹತ್ವ ಪಡೆದಿದೆ. ಸರ್ಕಾರ ಇದನ್ನು ಸ್ಪಷ್ಟವಾಗಿ ಹೇಳಬೇಕು ಎಂದು ಖೇರಾ ಆಗ್ರಹಿಸಿದ್ದಾರೆ.
ಹಿರೇನ್ ಜೋಶಿ ಸಣ್ಣ ಹೆಸರಲ್ಲ, ಪ್ರಧಾನಿ ಕಚೇರಿಯಲ್ಲಿ ಅತ್ಯಂತ ಪ್ರಭಾವೀ ಮತ್ತು ಅತ್ಯಂತ ಶಕ್ತಿಶಾಲಿ ವ್ಯಕ್ತಿ. ಈ ದೇಶದ ಪ್ರಜಾಪ್ರಭುತ್ವವನ್ನು ಕೊಲ್ಲುವಲ್ಲಿ ಅವರದೇ ಪ್ರಮುಖ ಪಾತ್ರವಿದೆ. ಪ್ರಜಾಪ್ರಭುತ್ವದ ಕತ್ತು ಹಿಸುಕುವಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ ಎಂದು ಖೇರಾ ಟೀಕಿಸಿದ್ದಾರೆ. 7 ತಿಂಗಳ ಹಿಂದಷ್ಟೇ ಕಾನೂನು ಆಯೋಗಕ್ಕೆ ಸೇರಿದ್ದ ಅವರ ಕಡೆಯವರೊಬ್ಬರನ್ನು ಇದ್ದಕ್ಕಿದ್ದಂತೆ ಅಲ್ಲಿಂದ ಹೊರಹಾಕಲಾಯಿತು.
ಅವರನ್ನು ಸರ್ಕಾರಿ ನಿವಾಸದಿಂದಲೂ ಖಾಲಿ ಮಾಡಿಸಲಾಗಿದೆ. ಹಾಗಾದರೆ ಏನಾಗುತ್ತಿದೆ ಎಂಬ ಬಗ್ಗೆ ತಿಳಿಯುವ ಹಕ್ಕು ದೇಶಕ್ಕಿದೆ ಎಂದಿದ್ದಾರೆ. ಜೋಶಿಯ ವ್ಯವಹಾರ ಪಾಲುದಾರರು ಯಾರ್ಯಾರು ಎಂಬುದನ್ನು ತಿಳಿಯುವ ಹಕ್ಕು ಕೂಡ ದೇಶಕ್ಕೆ ಇದೆ ಎಂದಿದ್ದಾರೆ. ಪಿಎಂಒದಲ್ಲಿ ಕುಳಿತು ಹಿರೇನ್ ಜೋಶಿ ಏನು ಕೆಲಸ ಮಾಡುತ್ತಿದ್ದರು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ದೇಶಕ್ಕಿದೆ.
ಯಾವ ಬೆಟ್ಟಿಂಗ್ ಆ್ಯಪ್ ನಲ್ಲಿ ಅವರ ಪಾಲು ಹೊಂದಿದ್ದರು? ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳು ನಡೆಯುತ್ತಿವೆ. ಮತ್ತು ಸರ್ಕಾರ ಬಹಳ ಬೇಗ ಸ್ಪಷ್ಟನೆ ಕೊಡದಿದ್ದರೆ ಅನುಮಾನಗಳು ಇನ್ನೂ ಜಾಸ್ತಿಯಾಗುತ್ತವೆ ಎಂದು ಖೇರಾ ಹೇಳಿದ್ದಾರೆ. ನೀವು ಎಷ್ಟೇ ಆ್ಯಪ್‌ಗಳನ್ನು ತಂದರೂ, ಜನರು ಅದರಿಂದ ಮಾಹಿತಿ ಪಡೆಯುತ್ತಿದ್ದಾರೆ. ಪಿಎಂಒದಿಂದಲೇ ಮಾಹಿತಿ ಪಡೆಯುತ್ತಿದ್ದಾರೆ. ಆದ್ದರಿಂದ ಆ ಮಾಹಿತಿ ಎಲ್ಲರಿಗೂ ಹೋಗುತ್ತದೆ. ಜೋಶಿ ವ್ಯವಹಾರ ಹಿತಾಸಕ್ತಿಗಳ ಬಗ್ಗೆ ಬಹಳಷ್ಟು ಕೇಳಿದ್ದೇನೆ. ವಿದೇಶಗಳಲ್ಲಿ ಅವರ ಸಂಪರ್ಕಗಳೇನು? ವಿದೇಶ ಪ್ರವಾಸ ಮಾಡಿದಾಗ, ಹಿರೇನ್ ಜೋಶಿ ರಾಷ್ಟ್ರೀಯ ಹಿತಾಸಕ್ತಿಗಳ ಬಗ್ಗೆ ರಾಜಿ ಮಾಡಿಕೊಂಡಿದ್ದಾರೆಯೇ? ಅವರು ಅಮೆರಿಕದಲ್ಲಿ ಅಥವಾ ಅವರು ಹೋದಲ್ಲೆಲ್ಲಾ ತಮ್ಮ ಸಹಚರರನ್ನು ಭೇಟಿಯಾದರು. ಇವೆಲ್ಲದರ ಬಗ್ಗೆ ಈಗ ಹೇಳಲೇಬೇಕಿದೆ ಎಂದು ಪವನ್ ಖೇರಾ ಹೇಳಿದ್ದಾರೆ.
ಈ ದೇಶದಲ್ಲಿ ನೀವು ಪ್ರಜಾಪ್ರಭುತ್ವವನ್ನು ಅಷ್ಟು ಸುಲಭವಾಗಿ ಕೊಲ್ಲಲು ಸಾಧ್ಯವಿಲ್ಲ. ನೀವು ಬಹಳಷ್ಟು ಪ್ರಯತ್ನಿಸಿದ್ದೀರಿ. ಈಗ ಪ್ರಧಾನಿ ಕಚೇರಿಯ ಮೇಲೆಯೇ ದೊಡ್ಡ ಪ್ರಶ್ನೆ ಎದ್ದಿದೆ. ಅದಕ್ಕೆ ಸೇರಿದ ಒಬ್ಬ ಪ್ರಮುಖ ವ್ಯಕ್ತಿಯ ಸಂಬಂಧಗಳು, ವ್ಯವಹಾರ ಸಂಬಂಧಗಳು ಇವಾವುದೂ ಈಗ ಖಾಸಗಿಯಲ್ಲ ಎಂದಿದ್ದಾರೆ ಪವನ್ ಖೇರಾ.
ಅವರ ಸಂಬಂಧಗಳು ಏನು? ಆ ಸಂಬಂಧಗಳು ದೇಶಕ್ಕೆ ಏನು ಹಾನಿ ಮಾಡಿವೆ? ದೇಶಕ್ಕೆ ಇದನ್ನು ಪಾರದರ್ಶಕವಾಗಿ ತಿಳಿದುಕೊಳ್ಳುವ ಹಕ್ಕಿದೆ, ಮತ್ತು ಇಡೀ ಹಿರೇನ್ ಜೋಶಿ ಪ್ರಕರಣವನ್ನು ದೇಶದ ಮುಂದೆ ಇಡುವುದು ಸರ್ಕಾರದ ಕರ್ತವ್ಯ ಎಂದು ಖೇರಾ ಆಗ್ರಹಿಸಿದ್ದಾರೆ. ಹಾಗೆ ಮಾಡದಿದ್ದರೆ ನಾವೇ ಅದನ್ನು ಮಾಡುತ್ತೇವೆ ಎಂತಲೂ ಪವನ್ ಖೇರಾ ಹೇಳಿದ್ದಾರೆ.
ಪವನ್ ಖೇರಾ ಪತ್ರಿಕಾಗೋಷ್ಠಿಯಲ್ಲಿ ಹಿರೇನ್ ಜೋಶಿ ಬಗ್ಗೆ ದೊಡ್ಡ ಕಥೆಗಳೇ ಬಯಲಾದಂತಾಗಿದೆ. ಅನೇಕ ಬಗೆಯ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಚಂಡೀಗಢ ವಿಶ್ವವಿದ್ಯಾಲಯದ ಕುಲಪತಿ ಆಗಿರುವ ಮಹಿಳೆಯೊಬ್ಬರ ವಿದೇಶ ಪ್ರವಾಸಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಪ್ರಸಾರ ಭಾರತಿ ಅಧ್ಯಕ್ಷ ನವನೀತ್ ಸೆಹಗಲ್ ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದ ವಿಷಯ ಚರ್ಚೆಯಾಗುತ್ತಿದೆ.
1988 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ನವನೀತ್ ಸೆಹಗಲ್ ಸುಮಾರು 34-35 ವರ್ಷಗಳ ಕಾಲ ಉತ್ತರ ಪ್ರದೇಶದಲ್ಲಿ ಸೇವೆ ಸಲ್ಲಿಸಿದರು.ಅವರು ಮಾಯಾವತಿ, ಅಖಿಲೇಶ್ ಯಾದವ್ ಅಥವಾ ಆದಿತ್ಯನಾಥ್ ಹೀಗೆ ಎಲ್ಲಾ ಮುಖ್ಯಮಂತ್ರಿಗಳಿಗೂ ಹತ್ತಿರವಾಗಿದ್ದರು. ನಿವೃತ್ತಿಯ ನಂತರ, ಅವರು ಪ್ರಸಾರ ಭಾರತಿ ಅಧ್ಯಕ್ಷರಾದರು ಮತ್ತು ಪ್ರಧಾನಿ ಮೋದಿಯವರ ಪ್ರತಿಷ್ಠೆ ಹೆಚ್ಚಿಸಲು ಕೆಲಸ ಮಾಡಿದರು. ಆದರೆ ಅವರ ರಾಜೀನಾಮೆ ಕೂಡ ಇದ್ದಕ್ಕಿದ್ದಂತೆ ಸಂಭವಿಸಿದ ವಿದ್ಯಮಾನವಾಗಿದೆ.
ರಾಜೀನಾಮೆಗೆ ಕಾರಣ ತಿಳಿದಿಲ್ಲವಾದರೂ, ರಾಜೀನಾಮೆ ಅಂಗೀಕರಿಸಲಾಗಿದೆ. ಹಿರೇನ್ ಜೋಶಿಯಂತೂ ಒಬ್ಬ ನಿಗೂಢ ಕೈ ಎಂಬಂತಿದ್ದರು. ಪ್ರಧಾನಿಗೆ ತುಂಬಾ ಹತ್ತಿರವಾಗಿದ್ದರು. ಮಾಧ್ಯಮಗಳಲ್ಲಿ ಮೋದಿಯವರ ಇಮೇಜ್ ಅನ್ನು ರೂಪಿಸುವುದರಿಂದ ಹಿಡಿದು ಸಾಮಾಜಿಕ ಮಾಧ್ಯಮವನ್ನು ಮೇಲ್ವಿಚಾರಣೆ ಮಾಡುವವರೆಗೆ ಮತ್ತು ಚಾನೆಲ್‌ನಲ್ಲಿ ಏನು ತೋರಿಸಬೇಕು ಮತ್ತು ಏನು ತೋರಿಸಬಾರದು ಎಂದು ನಿರ್ಧರಿಸುವವರೆಗೆ ಅವರ ಪಾತ್ರ ಇತ್ತೆನ್ನಲಾಗುತ್ತದೆ.
ವಿರೋಧ ಪಕ್ಷದ ವಿರುದ್ಧದ ಅಜೆಂಡಾ ಏನಿರಬೇಕು, ಬಿಜೆಪಿ ಪರವಾಗಿ ನಿರೂಪಣೆ ಹೇಗೆ ನಿರ್ಮಿಸಬೇಕು? ಪ್ರಧಾನಿ ಯಾರಿಗೆ ಸಂದರ್ಶನ ನೀಡುತ್ತಾರೆ, ಯಾರಿಗೆ ನೀಡುವುದಿಲ್ಲ? ಇವೆಲ್ಲದರ ಹಿಂದೆ ಅವರಿರುತ್ತಿದ್ದರು.
ಎಲೆಕ್ಟ್ರಾನಿಕ್ಸ್ನಲ್ಲಿ ಎಂಜಿನಿಯರಿಂಗ್ ಮುಗಿಸಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಅವರು, 2008 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಸೇರಿದರು. 2008 ರಿಂದ ಈವರೆಗೂ, ಅವರಿಗೂ ಪ್ರಧಾನಿಗೂ ಅಂದರೆ ಸುಮಾರು 17 ವರ್ಷಗಳ ನಿಕಟ ಸಂಬಂಧವಿದೆ. ಹಿರೇನ್ ಜೋಶಿ ಹೇಳಿದರೆಂದರೆ ಅದು ಮೋದಿ ಹೇಳಿದ್ದು ಎನ್ನುವ ಮಟ್ಟದಲ್ಲಿ ಅವರ ಹೆಚ್ಚುಗಾರಿಕೆ ಇತ್ತು.
ಅದು ಈಗ ಇದ್ದಕ್ಕಿದ್ದಂತೆ ಮುರಿದುಹೋಯಿತೆಂದರೆ ಅದರ ಹಿಂದಿರುವ ಕಾರಣವೇನು? ಅಥವಾ ಅವರಿನ್ನೂ ಪ್ರಧಾನಿ ಜೊತೆಗೇ ಇದ್ದಾರೆ ಎಂದಾದರೆ, ಅದನ್ನು ಯಾರಾದರೂ ಏಕೆ ಸ್ಪಷ್ಟಪಡಿಸುತ್ತಿಲ್ಲ?
ಪತ್ರಕರ್ತ ರಾಜದೀಪ್ ಸರ್ದೇಸಾಯಿ ಬರೆದ ಪುಸ್ತಕದಲ್ಲಿ ಜೋಶಿ ಬಗ್ಗೆ ಇರುವ ಮಾಹಿತಿ ಪ್ರಕಾರ, ಮಾಧ್ಯಮವನ್ನು ಜೋಶಿ ಸಂಪೂರ್ಣ ನಿಯಂತ್ರಿಸುತ್ತಿದ್ದರು. ಮೋದಿಯವರ ಬಗ್ಗೆ ಒಳ್ಳೆಯ ಮಾತಾಡುವವರು ಯಾರು, ಟೀಕಿಸುವವರು ಯಾರೆಂಬ ಪಟ್ಟಿಯೂ ಜೋಶಿ ಬಳಿ ಇತ್ತು. ಮೋದಿ ಯಾರಿಗೆ ಸಂದರ್ಶನ ನೀಡಬೇಕೆಂಬುದನ್ನೂ ಜೋಶಿಯೇ ಆಯ್ಕೆ ಮಾಡುತ್ತಿದ್ದರು. ಸಮಯ, ಸ್ಥಳ ಮತ್ತು ಬಹಳ ಸಲ ಪ್ರಶ್ನೆಗಳನ್ನು ಕೂಡ ಅವರೇ ನೇಪಥ್ಯದಲ್ಲಿದ್ದು ನಿರ್ಧರಿಸುತ್ತಿದ್ದರು.
ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಅವರ ಮಾಧ್ಯಮ ನಿರ್ವಹಣೆ ನೋಡಿಕೊಂಡವರು ಪತ್ರಕರ್ತರೇ ಆಗಿದ್ದರು. ಆದರೆ ಮೋದಿಯವರ ಮಾಧ್ಯಮ ವ್ಯವಸ್ಥೆಯ ಹಿಂದೆ ಇದ್ದ ಹಿರೇನ್ ಜೋಶಿ ಎಂಜಿನಿಯರಿಂಗ್ ಹಿನ್ನೆಲೆಯವರು. ಅವರು ಮೋದಿಗೆ ಬದ್ಧರಾಗಿದ್ದರು ಮತ್ತು ಮೋದಿಗೆ ಅನುಕೂಲಕರವಾಗಿ ಎಲ್ಲವನ್ನೂ ನಿಯಂತ್ರಿಸುವ ವ್ಯಕ್ತಿಯಾಗಿದ್ದರು.
ಹೇಳಲಾಗುತ್ತಿರುವ ಪ್ರಕಾರ, ಮೋದಿಯವರ ಮನ್ ಕಿ ಬಾತ್ ಹೇಗೆ ಜನರನ್ನು ಮುಟ್ಟಬೇಕೆಂಬುದನ್ನೂ ಅವರೇ ನಿರ್ಧರಿಸುತ್ತಿದ್ದರು. ಜೋಶಿ ಎಲ್ಲಾ ಬಿಜೆಪಿ ನಾಯಕರಿಗೆ ಮೆಸೇಜ್ ಕಳುಹಿಸುವ ಮೂಲಕ, ವಿವಿಧ ಸ್ಥಳಗಳಲ್ಲಿ ಮನ್ ಕಿ ಬಾತ್ ಪ್ರಸಾರವನ್ನು ಹೇಗೆ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡುತ್ತಿದ್ದರು. ಅದನ್ನು ಆಯೋಜಿಸಿದ ನಂತರ ಅದರ ವೀಡಿಯೊವನ್ನು ಪಿಎಂಒ ಮಾಧ್ಯಮ ತಂಡಕ್ಕೆ ಕಳಿಸಬೇಕಿತ್ತು. ಪಿಎಂಒದಲ್ಲಿ ನಡೆದ ಪ್ರಧಾನಿಯವರ ಕೆಲವು ಸಂದರ್ಶನಗಳಲ್ಲಿ, ಸಂಪೂರ್ಣ ಕ್ಯಾಮೆರಾ ವ್ಯವಸ್ಥೆ ಕೂಡ ಪ್ರಧಾನಿ ಕಚೇರಿಯದ್ದೇ ಆಗಿತ್ತು ಎಂಬ ಮಾಹಿತಿಗಳಿವೆ.
ಬೆಳಕು, ಧ್ವನಿ, ಎಡಿಟಿಂಗ್ ವ್ಯವಸ್ಥೆ ಕೂಡ ಪಿಎಂಒ ಕಚೇರಿಯದ್ದೇ ಆಗಿರುತ್ತಿತ್ತು. ಇಡೀ ಸಂದರ್ಶನ ಪ್ರಧಾನಿ ಕಚೇರಿಯಡಿಯಲ್ಲೇ ರೆಡಿಯಾಗಿ ಚಾನಲ್ ಗಳಿಗೆ ಹೋಗುತ್ತಿತ್ತು. ಅವರು ಅದನ್ನು ಪ್ರಸಾರ ಮಾಡಬೇಕು ಅಷ್ಟೇ. ಮೋದಿಯವರನ್ನು ಹೇಗೆ ತೋರಿಸಬೇಕೆಂದು ಜೋಶಿ ನಿರ್ಧರಿಸುತ್ತಿದ್ದರು.
ಹೀಗೆ ಮೋದಿ ಇಮೇಜ್ ಬೆಳಗಿಸುವಲ್ಲಿ 17 ವರ್ಷಗಳಿಂದ ಕೆಲಸ ಮಾಡಿದ್ದ ವ್ಯಕ್ತಿ ಬಗ್ಗೆ ಇಷ್ಟೊಂದು ಕಥೆಗಳು ಏಕೆ ಹರಡಿವೆ? ಅವುಗಳ ಬಗ್ಗೆ ಮೋದಿ ಸರ್ಕಾರ, ಪಿಎಂಒ ಏಕೆ ಮೌನವಾಗಿದೆ? ಅವರ ವಿರುದ್ಧ ಕಾಂಗ್ರೆಸ್ ನಾಯಕ ಪವನ್ ಖೇರ ಮಾಡಿರುವ ಆರೋಪಗಳು ಬಹಳ ಗಂಭೀರವಾಗಿವೆ. ಕನಿಷ್ಠ ಅವೆಲ್ಲವೂ ಸಂಪೂರ್ಣ ಸುಳ್ಳು, ಆಧಾರರಹಿತ ಎಂದಾದರೂ ಮೋದಿ ಸರಕಾರ ಸ್ಪಷ್ಟೀಕರಣ ನೀಡಬೇಕು. ಇಲ್ಲದಿದ್ದರೆ ದೇಶದ ಪ್ರಧಾನಿ ಕಚೇರಿಯಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಇದ್ದ ಪ್ರಭಾವೀ ಅಧಿಕಾರಿ ದೇಶದ ಹಿತಾಸಕ್ತಿಯನ್ನೆ ಪಣಕ್ಕಿಟ್ಟಿದ್ದಾರೆ ಎಂಬ ವಿಪಕ್ಷದ ಗಂಭೀರ ಆರೋಪ ಜನರನ್ನು ಗೊಂದಲಕ್ಕೆ ಬೀಳಿಸಲಿದೆ.







