ಮೊದಲ ಮಹಿಳಾ ಹುತಾತ್ಮ ಕ್ರಾಂತಿಕಾರಿ ಪ್ರೀತಿಲತಾ ವಡ್ಡೇದಾರ್ : ಇವರಾರೂ ಕ್ಷಮೆ ಯಾಚಿಸಲಿಲ್ಲ!

ಭಾಗ - 12
ಭಾರತದ ಮೊದಲ ಮಹಿಳಾ ಹುತಾತ್ಮ ಕ್ರಾಂತಿಕಾರಿ ಪ್ರೀತಿಲತಾ ವಡ್ಡೇದಾರ್ ಚಿತ್ತಗಾಂಗ್‌ನ ಬ್ರಾಹ್ಮಣ ಕುಟುಂಬದಲ್ಲಿ ಮೇ 5, 1911ರಲ್ಲಿ ಜನಿಸಿದರು. ಇನ್ನೊಬ್ಬ ಕ್ರಾಂತಿಕಾರಿ ಕಲ್ಪನಾ ದತ್ತ ಇವರ ಸಹಪಾಠಿ. ಶಾಲೆಯಲ್ಲಿ ಒಬ್ಬರು ಶಿಕ್ಷಕಿ ಇವರಿಗೆ ಝಾನ್ಸಿ ಲಕ್ಷ್ಮೀ ಬಾಯಿಯ ಕತೆ ಹೇಳಿದ್ದರು. ‘‘ತಮ್ಮ ಭವಿಷ್ಯದ ಹೆಜ್ಜೆ ಹಾದಿಯನ್ನು ಅದು ನಿರ್ಧರಿಸಿತು’’ ಎಂದು ಕಲ್ಪನಾ ಬರೆಯುತ್ತಾರೆ.
ಇಂಟರ್ ಮೀಡಿಯೇಟ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ ಪ್ರೀತಿಲತಾ ಕಲ್ಕತ್ತಾದ ಬೆಥೂನ್ ಕಾಲೇಜು ಸೇರಿ ತತ್ವಶಾಸ್ತ್ರದಲ್ಲಿ ಪದವಿ ಗಳಿಸಿದರು. ಅವರ ಡಿಗ್ರಿ ಸರ್ಟಿಫಿಕೇಟನ್ನು ಕಲ್ಕತ್ತಾ ತಡೆ ಹಿಡಿದಿತ್ತು. 2012ರಲ್ಲಿ ಮರಣೋತ್ತರವಾಗಿ ಕಲ್ಕತ್ತಾ ವಿಶ್ವವಿದ್ಯಾನಿಲಯ ಈ ಪದವಿ ಪತ್ರವನ್ನು ನೀಡಿತು!!
ಚಿತ್ತಗಾಂಗ್‌ಗೆ ಮರಳಿದ ಪ್ರೀತಿಲತಾ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರಿದರು. ಇದೇ ವೇಳೆ ಪ್ರೀತಿಲತಾ ಮಹಾನ್ ಕ್ರಾಂತಿಕಾರಿ ಸೂರ್ಯ ಸೆನ್ ಅವರ ಪ್ರಭಾವಕ್ಕೊಳಗಾಗಿ ಅವರ ಸಂಘಟನೆ ಸೇರಿದರು. ಕ್ರಾಂತಿಕಾರಿ ಚಟುವಟಿಕೆಗಳ ತರಬೇತಿಯ ಅಂಗವಾಗಿ ಶಸ್ತ್ರಾಸ್ತ್ರ ಬಳಕೆಯ ತರಬೇತಿಯನ್ನೂ ಪಡೆದರು.
ಸೂರ್ಯಸೆನ್ ಅವರ ತಂಡ ಚಿತ್ತಗಾಂಗ್‌ನ ದಮನಕಾರಿ ಪ್ರವೃತ್ತಿಯ ಪೊಲೀಸ್ ಮುಖ್ಯಸ್ಥನನ್ನು ಹತ್ಯೆಗೈಯಲು ನಿರ್ಧರಿಸಿ ರಾಮಕೃಷ್ಣ ಬಿಸ್ವಾಸ್ ಮತ್ತು ಕಾಲಿಪಾದ ಚಕ್ರವರ್ತಿಯವರಿಗೆ ಈ ಹೊಣೆ ನೀಡಿತು. ಈ ಇಬ್ಬರೂ ಈ ಮುಖ್ಯಸ್ಥನ ಬದಲು ಚಂದ್ರಪುರದ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದರು. ಈ ಹತ್ಯೆಗಾಗಿ ಬಿಸ್ವಾಸ್ ಗಲ್ಲಿಗೇರಿದರೆ, ಚಕ್ರವರ್ತಿ ಅಂಡಮಾನ್‌ನ ಶಿಕ್ಷೆಗೊಳಗಾದರು.
ತಮ್ಮ ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಸೂರ್ಯ ಸೆನ್ ತಂಡ ಹಲವಾರು ಸರಕಾರಿ ಕಚೆೇರಿಗಳಿಗೆ ದಾಳಿ ಮಾಡಿ ಹಣ ಲೂಟಿ ಮಾಡಿತು. ಈ ಎಲ್ಲಾ ದಾಳಿಗಳಲ್ಲಿ ಪ್ರೀತಿಲತಾ ಭಾಗಿಯಾಗಿದ್ದರು.
1932ರಲ್ಲಿ ಸೂರ್ಯ ಸೆನ್ ಪಹರ್ತಲಿಯ ಯುರೋಪಿಯನ್ ಕ್ಲಬ್ ಮೇಲೆ ದಾಳಿ ನಡೆಸಲು ನಿರ್ಧರಿಸಿದರು. ಈ ಕ್ಲಬ್ ನಲ್ಲಿ ‘‘ನಾಯಿಗಳು ಮತ್ತು ಭಾರತೀಯರಿಗೆ ಪ್ರವೇಶವಿಲ್ಲ’’ ಎಂಬ ಬೋರ್ಡು ತೂಗು ಹಾಕಲಾಗಿತ್ತು!. ಈ ದಾಳಿಯ ನೇತೃತ್ವವನ್ನು ಕಲ್ಪನಾ ದತ್ ವಹಿಸಬೇಕಿತ್ತು. ಆದರೆ ಆಕೆ ಬಂಧನಕ್ಕೊಳಗಾಗಿದ್ದ ಕಾರಣ ಪ್ರೀತಿಲತಾ ಈ ದಾಳಿಯ ನೇತೃತ್ವ ವಹಿಸಿದರು. ಸೆಪ್ಟಂಬರ್ 24, 1932ರ ರಾತ್ರಿ ಕ್ರಾಂತಿಕಾರಿಗಳು ಈ ಕ್ಲಬ್ ಮೇಲೆ ದಾಳಿ ನಡೆಸಿದರು. ಪ್ರೀತಿಲತಾ ಪಂಜಾಬಿ ಪುರುಷನ ತರಹ ದಿರಿಸು ತೊಟ್ಟಿದ್ದರೆ, ಉಳಿದವರು ಧೋತಿ, ಅಂಗಿ ಧರಿಸಿದ್ದರು. ಮೂರು ಗುಂಪುಗಳಾಗಿ ಕ್ಲಬ್‌ಗೆ ನುಗ್ಗಿದ ಕ್ರಾಂತಿಕಾರಿಗಳು ಮೊದಲು ಕ್ಲಬ್‌ಗೆ ಬೆಂಕಿ ಹಚ್ಚಿ ಬಳಿಕ ಗುಂಡಿನ ಮಳೆಗರೆದರು. ಕ್ಲಬ್‌ನಲ್ಲಿ ಅಂದಾಜು 40 ಮಂದಿ ಇದ್ದು, ಇವರಲ್ಲಿದ್ದ ಕೆಲವು ಪೊಲೀಸ್ ಅಧಿಕಾರಿಗಳು ಪ್ರತಿದಾಳಿ ನಡೆಸಿದ್ದರಿಂದ ಪ್ರೀತಿಲತಾ ಗುಂಡೇಟು ತಿಂದು ಘಾಸಿಗೊಂಡರು. ಸಂಘಟನೆಯ ನಿರ್ಧಾರದಂತೆ ಇವರೆಲ್ಲಾ ಸಯನೈಡ್ ಕ್ಯಾಪ್ಸೂಲ್ ಹೊಂದಿದ್ದು, ಪ್ರೀತಿಲತಾ ಪೊಲೀಸ್ ಬಂಧನ ತಪ್ಪಿಸಿಕೊಳ್ಳಲು ಸಯನೈಡ್ ತಿಂದು ಆತ್ಮಹತ್ಯೆ ಮಾಡಿಕೊಂಡರು.
ಮಾರನೇ ದಿನ ಅವರ ಮೃತದೇಹ ಪತ್ತೆಯಾಯಿತು. ಅವರ ಮೃತದೇಹದೊಂದಿಗೆ ರಾಮಕೃಷ್ಣ ಬಿಸ್ವಾಸ್ ಅವರ ಫೋಟೊ, ಕೆಲವು ಭಿತ್ತಿಪತ್ರ ಹಾಗೂ ಅವರ ದಾಳಿಯ ವಿವರಗಳ ಪತ್ರವೂ ಪತ್ತೆಯಾಯಿತು.
ಪ್ರೀತಿಲತಾ ಅವರು ಹುತಾತ್ಮರಾಗುವುದರೊಂದಿಗೆ ಕ್ರಾಂತಿಯ ಪಥದ ಹೊಸ ಮೈಲುಗಲ್ಲು ಸ್ಥಾಪನೆಯಾಯಿತು.
ಪ್ರೀತಿಲತಾ ತಂದೆ ಮುನ್ಸಿಪಾಲಿಟಿಯ ಕ್ಲರ್ಕ್ ಆಗಿದ್ದರು. ಮಿತ ಸಂಬಳದಲ್ಲಿ ಮನೆ ಖರ್ಚು ನಿಭಾಯಿಸಬೇಕು. ಖರ್ಚು ವೆಚ್ಚದ ಜವಾಬ್ದಾರಿ ಪ್ರೀತಿಯದ್ದಾಗಿತ್ತು.
ಒಮ್ಮೆ ಒಂದಷ್ಟು ಕಾಸು ಎತ್ತಿ ಸಂಘಟನೆಗೆ ನೀಡಿದಾಗ ಆ ಬಗ್ಗೆ ಸೂರ್ಯ ದಾ ಆಕ್ಷೇಪ ಎತ್ತಿದ್ದರು. ‘‘ನಾನು ಮನೆ ಸಂಭಾಳಿಸ್ತೀನಿ, ಹೇಗೋ, ಚಿಂತೆ ಬೇಡ’’ ಅಂದಿದ್ದರು ಪ್ರೀತಿ.
ಈ ಹಿರಿಮಗಳ ಜವಾಬ್ದಾರಿ ಹೊತ್ತಿದ್ದಾಗಲೂ ಪ್ರೀತಿ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಲೇ ಇದ್ದರು. ಒಂದೆರಡು ಪೊಲೀಸ್ ಎನ್‌ಕೌಂಟರ್‌ಗಳಲ್ಲಿ ಗುಂಡಿನ ಚಕಮಕಿ ನಡೆದಾಗಲೂ ಪ್ರೀತಿ ಸಿಕ್ಕಿ ಬಿದ್ದಿರಲಿಲ್ಲ. ಆದರೆ ರಾಮಕೃಷ್ಣ ಬಿಸ್ವಾಸ್ ಗಲ್ಲಿಗೇರಿದ ಘಟನೆ ಆಕೆಯನ್ನು ಅಲ್ಲಾಡಿಸಿತ್ತು. ಆಗಲೂ ಆಕೆ ಪೊಲೀಸರ ಕಣ್ಣಿಗೆ ಬೀಳದಂತೆ ಸುಳ್ಳು ಹೆಸರಲ್ಲಿ ಜೈಲಿಗೆ ಪ್ರವೇಶ ಪಡೆದು ಬಿಸ್ವಾಸ್ ಅವರ ಸಂದರ್ಶನ ನಡೆಸಿದ್ದರು. ಆ ಸಂದರ್ಶನ ಪ್ರಕಟವಾದಾಗ ಅದು ಬಂಗಾಳದಲ್ಲಿ ದೊಡ್ಡ ಅಲೆ ಸೃಷ್ಟಿಸಿತು.
ಈ ಘಟನೆಯ ಬಳಿಕ ನೇರ ಕಾರ್ಯಾಚರಣೆಯ ಆಸೆಯನ್ನು ಸೂರ್ಯ ದಾ ಅವರಲ್ಲಿ ಪ್ರೀತಿ ಪ್ರಸ್ತಾಪಿಸುತ್ತಿದ್ದಳು.
ಕಲ್ಪನಾ ದತ್ತ ತಮ್ಮ ಸ್ಮತಿ ಮಾಲೆಯಲ್ಲಿ ಪ್ರೀತಿ ಬಗ್ಗೆ ಬರೆಯುತ್ತಾ, ‘‘ನನ್ನ ಆತ್ಮೀಯ ಗೆಳತಿ ಆಕೆ, ಕಾರ್ಯಾಚರಣೆ ಬಳಿಕ ಆಕೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಹಂಬಲ ಹೆಚ್ಚುತ್ತಿತ್ತು ಅನ್ನಿಸುತ್ತೆ’’ ಎಂದು ಬರೆಯುತ್ತಾರೆ. ಯುರೋಪಿಯನ್ ಕ್ಲಬ್ ದಾಳಿ ನಿರ್ಧಾರವಾದಾಗ ಪ್ರೀತಿ ಸೂರ್ಯ ದಾ ಅವರಲ್ಲಿ ಸಯನೈಡ್ ಕ್ಯಾಪ್ಸೂಲ್ ಕೇಳಿದ್ದರು. ಕೊಂಚ ವಿಚಲಿತರಾದ ಸೂರ್ಯ ದಾ ಕೊನೆಗೂ ಆಕೆಯ ಒತ್ತಾಯಕ್ಕೆ ಮಣಿದು ಸಯನೈಡ್ ಕ್ಯಾಪ್ಸೂಲ್ ನೀಡಿದ್ದರು. ಈ ದಾಳಿಯಲ್ಲಿ ಪ್ರೀತಿ ಮಾತ್ರ ಗಾಯಗೊಂಡಿದ್ದರು. ಉಳಿದ ಕ್ರಾಂತಿಕಾರಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದರು. ದಾಳಿಯಲ್ಲಿ ಏಳೆಂಟು ಯುರೋಪಿಯನ್ನರೂ ಗಾಯಗೊಂಡಿದ್ದರು. ಪ್ರೀತಿ ಮಾತ್ರ ಸಯನೈಡ್ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸರ ಕೈಗೆ ಸಿಕ್ಕಿ ಬೀಳಬಾರದು ಎಂಬ ನಿಲುವು ಆಕೆಯದ್ದಾಗಿತ್ತು.
ಆಕೆಯ ಸಾವಿನ ಬಳಿಕ ಆಕೆಯ ತಂದೆ ಮಾನಸಿಕವಾಗಿ ಕೊಂಚ ವಿಚಲಿತರಾಗಿದ್ದರಂತೆ. ಆಕೆಯ ತಾಯಿ ಮಾತ್ರ ಹೆಮ್ಮೆಯಿಂದ ಇದ್ದರಂತೆ.
ಊರಿನವರೂ ಅಷ್ಟೇ. ಅಪಾರ ಅಭಿಮಾನ ಹೊಂದಿದ್ದರು. ಆಕೆಯ ಅಪ್ಪ ಓಡಾಡುವಾಗ, ‘‘ಈತನ ಮಗಳು ದೇಶಕ್ಕೆ ಜೀವ ತೆತ್ತ ಮೊದಲ ಮಗಳು’’ ಎಂದು ಊರವರು ಹೇಳುತ್ತಿದ್ದರಂತೆ.
ಸಾಹಿತ್ಯ, ತತ್ವಶಾಸ್ತ್ರದಲ್ಲಿ ಅಪಾರ ಪ್ರೀತಿ ಬೆಳೆಸಿಕೊಂಡು ಓದಿನ ಪರಿಶ್ರಮಿಯಾಗಿದ್ದ, ಸರಳ ಶಿಕ್ಷಕಿಯಾಗಿದ್ದ ಪ್ರೀತಿಲತಾ ಈ ಸಂತೃಪ್ತ ಬದುಕು ನಿರಾಕರಿಸಿ ಕ್ರಾಂತಿಯ ಹಾದಿ ಹಿಡಿದರು. ಅವರ ಈ ಕ್ರಾಂತಿಯ ಸಾಹಸ ಬಂಗಾಳವನ್ನು ಬೆಚ್ಚಿ ಬೀಳಿಸಿತು. ಹಾಗೆಯೇ ಬಡಿದೆಬ್ಬಿಸಿತು.
ಅವರ ನೆನಪಿಗಾಗಿ ಅದೇ ಯುರೋಪಿಯನ್ ಕ್ಲಬ್ ಸನಿಹ ಅವರ ಮೂರ್ತಿಯನ್ನೂ ಸ್ಥಾಪಿಸಲಾಯಿತು.







