ಪರೀಕ್ಷಾ ಸುಧಾರಣಾ ಸಮಿತಿಯ ಸದಸ್ಯ, ಐಐಟಿ-ಮದ್ರಾಸ್ ನಿರ್ದೇಶಕರನ್ನು 'ಗೋಮೂತ್ರ' ತಜ್ಞ ಎಂದ ಪ್ರಿಯಾಂಕಾ ಗಾಂಧಿ; ಯಾರು ವಿ. ಕಾಮಕೋಟಿ ?

ಪ್ರಿಯಾಂಕಾ ಗಾಂಧಿ , ವಿ. ಕಾಮಕೋಟಿ |Photo Credit ; PTI
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ರಚಿಸಿರುವ ಪರೀಕ್ಷಾ ಸುಧಾರಣೆಗಳ ಉನ್ನತ ಮಟ್ಟದ ಕಾರ್ಯಪಡೆಗೆ ಐಐಟಿ-ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರನ್ನು ನೇಮಿಸಲಾಗಿದೆ. ಆದರೆ, ಈ ಸಮಿತಿಯಲ್ಲಿ "ಗೋಮೂತ್ರ ತಜ್ಞ"ರನ್ನು ಸೇರಿಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದು, ಕಾಮಕೋಟಿ ಅವರು ಈಗ ರಾಜಕೀಯ ಸಂಘರ್ಷದ ನಡುವೆ ಸಿಲುಕಿದ್ದಾರೆ.
ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ ನಡೆಸಿದ ಒಂದು ತಿಂಗಳಿಗೂ ಹೆಚ್ಚಿನ ಪ್ರತಿಭಟನೆ ಮತ್ತು ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ನಂತರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸಲು ಪ್ರಧಾನಿ ಮೋದಿ ರವಿವಾರ ಈ ಉನ್ನತ ಮಟ್ಟದ ಕಾರ್ಯಪಡೆಯನ್ನು ಘೋಷಿಸಿದರು.
ನಂದನ್ ನಿಲೇಕಣಿ ನೇತೃತ್ವದ ಈ ಸಮಿತಿಯಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಎಸ್. ಸೋಮನಾಥ್, ಐಬಿ ಮಾಜಿ ನಿರ್ದೇಶಕ ತಪನ್ ಡೇಕಾ, ಐಐಟಿ-ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ, ಮಾಜಿ ಶಿಕ್ಷಣ ಕಾರ್ಯದರ್ಶಿ ಅನಿತಾ ಕರ್ವಾಲ್ ಮತ್ತು ಲಾಜಿಸ್ಟಿಕ್ಸ್ ತಜ್ಞ ಅಮೃತ್ ಲಾಲ್ ಮೀನಾ ಇದ್ದಾರೆ.
ವಿ. ಕಾಮಕೋಟಿ ಯಾರು?
ಐಐಟಿ-ಮದ್ರಾಸ್ನಿಂದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಹಾಗೂ ಪಿಎಚ್ಡಿ ಪದವಿ ಪಡೆದಿರುವ ಕಾಮಕೋಟಿ ವೀಳಿನಾಥನ್, 2001ರಲ್ಲಿ ಅದೇ ಸಂಸ್ಥೆಯ ಬೋಧಕ ವೃಂದಕ್ಕೆ ಸೇರ್ಪಡೆಗೊಂಡರು.
ಜನವರಿ 2022ರಲ್ಲಿ ಕಾಮಕೋಟಿ ಅವರು ಐಐಟಿ-ಮದ್ರಾಸ್ನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.
ಐಐಟಿ-ಮದ್ರಾಸ್ನಲ್ಲಿರುವ ಅವರ ಪ್ರೊಫೈಲ್ ಪ್ರಕಾರ, ಕಾಮಕೋಟಿ ಅವರು ಕಂಪ್ಯೂಟರ್ ಆರ್ಕಿಟೆಕ್ಚರ್, ಇನ್ಫರ್ಮೇಷನ್ ಸೆಕ್ಯುರಿಟಿ ಮತ್ತು ವಿಎಲ್ಎಸ್ಐ (VLSI) ಡಿಸೈನ್ ವಿಷಯಗಳಲ್ಲಿ ತಜ್ಞತೆ ಹೊಂದಿದ್ದಾರೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಆರ್ಥಿಕ ನೆರವಿನೊಂದಿಗೆ ನಡೆಯುತ್ತಿರುವ ‘ಮೈಕ್ರೊಪ್ರೊಸೆಸರ್ ಅಭಿವೃದ್ಧಿ ಕಾರ್ಯಕ್ರಮ’ ಮತ್ತು ‘ಮಾಹಿತಿ ಭದ್ರತಾ ಶಿಕ್ಷಣ ಹಾಗೂ ಜಾಗೃತಿ ಕಾರ್ಯಕ್ರಮ’ಗಳ ನೇತೃತ್ವವನ್ನೂ ಅವರು ವಹಿಸಿದ್ದಾರೆ.
ಕಾಮಕೋಟಿ ಅವರ ಸಂಶೋಧನಾ ತಂಡವು ಭಾರತದ ಮೊದಲ ದೇಶೀಯ ಮೈಕ್ರೊಪ್ರೊಸೆಸರ್ 'ಶಕ್ತಿ'ಯನ್ನು ಅಭಿವೃದ್ಧಿಪಡಿಸಿದೆ. ಅವರು ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ (NSAB) ಸದಸ್ಯರೂ ಆಗಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ರಚಿಸಿದ್ದ ಕೃತಕ ಬುದ್ಧಿಮತ್ತೆ ಕಾರ್ಯಪಡೆಯ ಅಧ್ಯಕ್ಷರಾಗಿಯೂ ಕಾಮಕೋಟಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಐಐಟಿ-ಮದ್ರಾಸ್ನಲ್ಲಿ JEE ಅಧ್ಯಕ್ಷರಾಗಿ ಹಾಗೂ ಕೈಗಾರಿಕಾ ಸಮಾಲೋಚನೆ ಮತ್ತು ಅನುದಾನಿತ ಸಂಶೋಧನಾ ವಿಭಾಗದ ಸಹಾಯಕ ಡೀನ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಕಾಮಕೋಟಿ ಅವರು ಡಿಆರ್ಡಿಒ (DRDO) ಶೈಕ್ಷಣಿಕ ಶ್ರೇಷ್ಠತಾ ಪ್ರಶಸ್ತಿ ಮತ್ತು ಇಂಡಿಯನ್ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ನ ಟೆಕ್ನೋ ವಿಷನರಿ ಪ್ರಶಸ್ತಿ ಸೇರಿದಂತೆ ಹಲವು ಗೌರವ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅವರಿಗೆ ACCS ಜೀವಮಾನ ಶ್ರೇಷ್ಠತಾ ಪ್ರಶಸ್ತಿ, IBM ಫ್ಯಾಕಲ್ಟಿ ಪ್ರಶಸ್ತಿ ಮತ್ತು ವಾಸ್ವಿಕ್ ಕೈಗಾರಿಕಾ ಸಂಶೋಧನಾ ಪ್ರಶಸ್ತಿಗಳೂ ಲಭಿಸಿವೆ. ಕಂಪ್ಯೂಟರ್ ಆರ್ಕಿಟೆಕ್ಚರ್ ಸಂಶೋಧನೆ ಮತ್ತು ರಾಷ್ಟ್ರೀಯ ಭದ್ರತಾ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ, ವಿ. ಕಾಮಕೋಟಿ ಅವರಿಗೆ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಅವರು ಅಬ್ದುಲ್ ಕಲಾಂ ಟೆಕ್ನಾಲಜಿ ಇನ್ನೋವೇಷನ್ ನ್ಯಾಷನಲ್ ಫೆಲೋಶಿಪ್ ಕೂಡ ಹೊಂದಿದ್ದಾರೆ.
ಕಾಮಕೋಟಿ ಅವರನ್ನು 'ಗೋಮೂತ್ರ ತಜ್ಞ' ಎಂದ ಪ್ರಿಯಾಂಕಾ ಗಾಂಧಿ, ಬಿಜೆಪಿ ತಿರುಗೇಟು
ಮಂಗಳವಾರ ಲೋಕಸಭೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಪರೀಕ್ಷಾ ಸುಧಾರಣಾ ಕಾರ್ಯಪಡೆಗೆ ವಿ. ಕಾಮಕೋಟಿ ಅವರನ್ನು ಸೇರಿಸಿಕೊಂಡಿರುವುದನ್ನು ಪ್ರಶ್ನಿಸಿ, ಅವರನ್ನು "ಗೋಮೂತ್ರ ತಜ್ಞ" ಎಂದಿದ್ದಾರೆ.
"ಈ ಹೊಸ ಸಮಿತಿಯಲ್ಲಿ ಒಬ್ಬರು ಮಾಜಿ ಐಬಿ ಮುಖ್ಯಸ್ಥರು, ಒಬ್ಬರು ಐಟಿ ಸಂಸ್ಥೆಯ ಮಾಲೀಕರು ಮತ್ತು ಒಬ್ಬರು ಗೋಮೂತ್ರ ತಜ್ಞರಿದ್ದಾರೆ" ಎಂದು ಪ್ರಿಯಾಂಕಾ ಹೇಳಿದರು.
ಪ್ರಿಯಾಂಕಾ ಅವರ ಈ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ನಾಯಕ ಅನುರಾಗ್ ಠಾಕೂರ್, ಭಾರತದ ಅಗ್ರಗಣ್ಯ ವಿಜ್ಞಾನಿ ಹಾಗೂ ಪ್ರಾಧ್ಯಾಪಕರೊಬ್ಬರನ್ನು ಗುರಿಯಾಗಿಸಿಕೊಂಡು ಪ್ರಿಯಾಂಕಾ ಮಾಡಿದ ಹೇಳಿಕೆ ತಮಗೆ ಬೇಸರ ತಂದಿದೆ ಎಂದು ತಿಳಿಸಿದರು.
"ಮುಗ್ಧ ಮುಖ ಮತ್ತು ಸಣ್ಣ ನಗೆಯೊಂದಿಗೆ" ಪ್ರಿಯಾಂಕಾ ಗಾಂಧಿ ಅವರು ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಮಾಡಿದ ತಪ್ಪುಗಳು ಮತ್ತು ವೈಫಲ್ಯಗಳನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಕಾಮಕೋಟಿ ಅವರು ಕೃತಕ ಬುದ್ಧಿಮತ್ತೆ ಕಾರ್ಯಪಡೆಯ ಮಾಜಿ ಅಧ್ಯಕ್ಷರೂ ಆಗಿದ್ದರು ಎಂದು ಠಾಕೂರ್ ಪ್ರತಿಕ್ರಿಯಿಸಿದ್ದಾರೆ.
ಠಾಕೂರ್ ಅವರು ಸದನದಲ್ಲಿ ಈ ಮಾತುಗಳನ್ನು ಹೇಳುತ್ತಿದ್ದಾಗ, ಕಾಮಕೋಟಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯುಳ್ಳವರು ಎಂದು ವಿಪಕ್ಷದ ಸಾಲಿನಿಂದ ಧ್ವನಿಯೊಂದು ಕೇಳಿಬಂದಿತು.
ಇದಕ್ಕೆ ತಕ್ಷಣವೇ ತಿರುಗೇಟು ನೀಡಿದ ಬಿಜೆಪಿ ನಾಯಕ, "ಅವರು ಆರ್ಎಸ್ಎಸ್ ಜತೆ ಗುರುತಿಸಿಕೊಂಡಿದ್ದರೂ ಅದರಲ್ಲಿ ಯಾವುದೇ ತಪ್ಪಿಲ್ಲ. ನೀವು ಕೂಡ ಆರ್ಎಸ್ಎಸ್ಗೆ ಸೇರಿಕೊಳ್ಳಿ, ಇದರಿಂದ ಉತ್ತಮ ಮೌಲ್ಯಗಳನ್ನು ಕಲಿಯಬಹುದು ಮತ್ತು ದೇಶದ ಬಗ್ಗೆ ಆಲೋಚಿಸುವುದನ್ನು ಪ್ರಾರಂಭಿಸಬಹುದು" ಎಂದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗಿಂತ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಉತ್ತಮವಾಗಿರಬಹುದು ಎಂದು ಭಾವಿಸಿದ್ದೆವು. ಆದರೆ ಐಐಟಿ-ಮದ್ರಾಸ್ ನಿರ್ದೇಶಕರ ಬಗ್ಗೆ ಅವರು ಇಂದು ಮಾಡಿದ ಹೇಳಿಕೆಯನ್ನು ನೋಡಿದ ನಂತರ, ಅಣ್ಣ-ತಂಗಿ ಇಬ್ಬರೂ ಒಂದೇ ರೀತಿಯಾಗಿದ್ದಾರೆ ಎನಿಸುತ್ತಿದೆ. ಇಬ್ಬರೂ ಒಂದೇ ಹಾದಿಯಲ್ಲಿದ್ದಾರೆ. ಬಹುಷಃ ಅವರ ಮಿದುಳಿನ ಸರಿಯಾದ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಏನನ್ನೋ ಸೇವಿಸುತ್ತಿರಬಹುದು. ಅದಕ್ಕೆ ಬದಲಾಗಿ ಅವರು ಗೋಮೂತ್ರವನ್ನೇ ಸೇವಿಸುವುದು ಒಳಿತು" ಎಂದು ಠಾಕೂರ್ ಹೇಳಿದರು.
ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ವಿ. ಕಾಮಕೋಟಿ ಹೇಳಿದ್ದೇನು?
ಪರೀಕ್ಷಾ ಸುಧಾರಣೆಗಳ ಕುರಿತ ಕೇಂದ್ರ ಸರ್ಕಾರದ ಕಾರ್ಯಪಡೆಯ ಸದಸ್ಯರಾಗಿ ನೇಮಕಗೊಂಡ ನಂತರ ಮಾತನಾಡಿದ ವಿ. ಕಾಮಕೋಟಿ, ಪರೀಕ್ಷೆಗಳನ್ನು ನಡೆಸುವಲ್ಲಿ ಪ್ರಶ್ನೆಪತ್ರಿಕೆ ತಯಾರಕರ ಪ್ರಾಮಾಣಿಕತೆ ಮತ್ತು ನಂಬಿಕೆಯೇ ಅತ್ಯಂತ ದೊಡ್ಡ ಸವಾಲಾಗಿದೆ ಎಂದಿದ್ದಾರೆ.
ಕಳೆದ ನಾಲ್ಕು ದಶಕಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ತಂತ್ರಜ್ಞಾನದ ಬಳಕೆಯು ಅತ್ಯಂತ ಅಗತ್ಯವಾಗಿದೆ ಎಂದು ಐಐಟಿ-ಮದ್ರಾಸ್ ನಿರ್ದೇಶಕರು ತಿಳಿಸಿದರು.
"ಯಾವುದೇ ಪರೀಕ್ಷಾ ವ್ಯವಸ್ಥೆಯಲ್ಲಿ ಎರಡು ಗುಂಪಿನ ಜನರು ನಂಬಿಕೆಗೆ ಅರ್ಹರಾಗಿರಬೇಕು. ಮೊದಲನೆಯದಾಗಿ, ಪ್ರಶ್ನೆಪತ್ರಿಕೆ ತಯಾರಕರು. ಇವರು ಅತ್ಯಂತ ಪ್ರಮುಖ ಗುಂಪು. ಎರಡನೆಯದಾಗಿ, ಪರೀಕ್ಷಾ ಕೇಂದ್ರಗಳಲ್ಲಿರುವ ಮೇಲ್ವಿಚಾರಕರು. ನನ್ನ ಪ್ರಕಾರ, ಪ್ರಶ್ನೆಪತ್ರಿಕೆ ತಯಾರಕರಲ್ಲಿ ನಂಬಿಕೆಯನ್ನು ಹೇಗೆ ಬೆಳೆಸುವುದು ಮತ್ತು ಕಾಯ್ದುಕೊಳ್ಳುವುದು ಎಂಬುದೇ ದೊಡ್ಡ ಸವಾಲು" ಎಂದು ಅವರು ಹೇಳಿದ್ದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪರೀಕ್ಷಾ ಕೇಂದ್ರಗಳ ಉಸ್ತುವಾರಿ ಮತ್ತು ಸೂಕ್ತ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಈಗಾಗಲೇ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಆದರೆ, ಪ್ರಶ್ನೆಪತ್ರಿಕೆ ತಯಾರಕರ ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆಯೇ ಮುಖ್ಯ ವಿಷಯವಾಗಿ ಉಳಿದಿದೆ.
2024ರ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯು ಮುದ್ರಣದ ನಂತರ ಅದನ್ನು ಸಾಗಿಸುವಾಗ ಸಂಭವಿಸಿತ್ತು. ಈ ಘಟನೆಯು ಕೇವಲ 40 ರಿಂದ 50 ವಿದ್ಯಾರ್ಥಿಗಳ ಮೇಲೆ ಮಾತ್ರ ಪರಿಣಾಮ ಬೀರಿದೆ ಎಂದು ತನಿಖಾ ಸಂಸ್ಥೆ ತಿಳಿಸಿತ್ತು. ಆದರೆ, 2026ರ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಭಿನ್ನವಾಗಿತ್ತು. ಈ ವರ್ಷ ಪ್ರಶ್ನೆಪತ್ರಿಕೆ ವಿತರಣೆಯ ಸಮಯದಲ್ಲಿ ಸೋರಿಕೆಯಾಗಿಲ್ಲ. ಬದಲಿಗೆ ಪ್ರಶ್ನೆಪತ್ರಿಕೆ ತಯಾರಕರಿಂದಲೇ ಸೋರಿಕೆಯಾಗಿದೆ ಎಂದಿದ್ದಾರೆ ಕಾಮಕೋಟಿ.
"ನಮಗೆ ನಂಬಿಕೆಗೆ ಅರ್ಹರಾದ ಶಿಕ್ಷಕರು ಬೇಕಾಗಿದ್ದಾರೆ. ಅವರು ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಬೇಕು, ಸಂಪೂರ್ಣ ಗೌಪ್ಯತೆಯನ್ನು ಕಾಯ್ದುಕೊಳ್ಳಬೇಕು ಮತ್ತು ವಿಷಯಗಳನ್ನು ಹೊರಹಾಕದೆ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಇದು ನಾವು ಎದುರಿಸುತ್ತಿರುವ ಅತಿ ದೊಡ್ಡ ಸವಾಲಾಗಿದೆ" ಎಂದು ಅವರು ಹೇಳಿದರು.
ಕಾಮಕೋಟಿ ಅವರನ್ನು 'ಗೋಮೂತ್ರ ತಜ್ಞ' ಎಂದು ಪ್ರಿಯಾಂಕಾ ಹೇಳಿದ್ದೇಕೆ?
ಪ್ರಿಯಾಂಕಾ ಗಾಂಧಿ ಅವರ ಈ ಹೇಳಿಕೆಯು, ಜಾನುವಾರುಗಳ ಹಬ್ಬವಾದ ಮಾಟು ಪೊಂಗಲ್ ಸಂದರ್ಭದಲ್ಲಿ ಗೋಶಾಲೆಯೊಂದರಲ್ಲಿ ಕಾಮಕೋಟಿ ಅವರು ನೀಡಿದ್ದ ಭಾಷಣಕ್ಕೆ ಸಂಬಂಧಿಸಿದುದಾಗಿದೆ. 2025ರಲ್ಲಿ ಈ ಭಾಷಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವು ವಿಜ್ಞಾನಿಗಳು, ರಾಜಕಾರಣಿಗಳು ಮತ್ತು ನೆಟ್ಟಿಗರಿಂದ ತೀವ್ರ ಟೀಕೆಗೆ ವ್ಯಕ್ತವಾಗಿತ್ತು. ಆ ಭಾಷಣದಲ್ಲಿ ಕಾಮಕೋಟಿ ಅವರು ಸನ್ಯಾಸಿಯೊಬ್ಬರ ಕಥೆಯನ್ನು ವಿವರಿಸಿದ್ದರು. ಅವರ ಪ್ರಕಾರ, ತೀವ್ರ ಜ್ವರದಿಂದ ಬಳಲುತ್ತಿದ್ದ ಆ ಸನ್ಯಾಸಿ ಗೋಮೂತ್ರ ಕುಡಿದ ನಂತರ ಗುಣಮುಖರಾಗಿದ್ದರು.
மூளை வலிமை அதிகம் கொண்ட கும்பல் ஆட்சியில் ஐஐடி இயக்குநர் லட்சணத்தை பாருங்கள்.. கோமியம் காய்ச்சல் மருந்தாம்😅 pic.twitter.com/3StltuzStU
— Subathra Devi (@SubathraDevi_) January 18, 2025
"ಒಬ್ಬ ಸನ್ಯಾಸಿ ಇದ್ದರು... ಅವರಿಗೆ ತೀವ್ರ ಜ್ವರ ಬಂದಾಗ ಜನರು ವೈದ್ಯರನ್ನು ಕರೆಯಲು ಬಯಸಿದರು. ಆದರೆ ಆ ಸನ್ಯಾಸಿ ತಕ್ಷಣವೇ ಗೋಶಾಲೆಗೆ ಹೋಗಿ ಗೋಮೂತ್ರ ತಂದು ಕುಡಿದರು. 15 ನಿಮಿಷಗಳಲ್ಲಿ ಅವರ ಜ್ವರ ಮಾಯವಾಯಿತು" ಎಂದು ಕಾಮಕೋಟಿ ಹೇಳಿದ್ದರು.
ಬಳಿಕ ಅವರು ಗೋಮೂತ್ರ ಮತ್ತು ಸಗಣಿಯ ಔಷಧೀಯ ಗುಣಗಳ ಬಗ್ಗೆ ಮಾತನಾಡಿದರು.
ಕಾಮಕೋಟಿ ಅವರ ಪ್ರಕಾರ, ಗೋಮೂತ್ರವು ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು ಹಾಗೂ ಇದು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ಶಮನಗೊಳಿಸಲು ನೆರವಾಗಬಹುದು. ನಮಗೆ ಗೋಮಯ (ಸಗಣಿ) ಮತ್ತು ಗೋಮೂತ್ರದ ಅಗತ್ಯವಿರುವುದಕ್ಕೆ ಹಲವು ಕಾರಣಗಳಿವೆ... ಅವು ನಮಗೆ ಅತ್ಯುತ್ತಮ ಔಷಧಗಳು. ಅವುಗಳ ಔಷಧೀಯ ಮೌಲ್ಯವನ್ನು ನಾವು ಬಳಸಿಕೊಳ್ಳಬೇಕು ಎಂದು ಅವರು ಹೇಳಿದ್ದರು.
ದೇಶದ ಪ್ರಮುಖ ಇಂಜಿನಿಯರಿಂಗ್ ಸಂಸ್ಥೆಯೊಂದರ ಮುಖ್ಯಸ್ಥರು ಇಂತಹ ಹೇಳಿಕೆಗಳನ್ನು ನೀಡುವುದು ಸೂಕ್ತವೇ ಎಂದು ಹಲವರು ಪ್ರಶ್ನಿಸಿದರೆ, ಕೆಲವು ರಾಜಕಾರಣಿಗಳು ಅವರು "ಸುಳ್ಳು ವಿಜ್ಞಾನವನ್ನು (pseudoscience) ಪ್ರಚಾರ ಮಾಡುತ್ತಿದ್ದಾರೆ" ಎಂದು ಆರೋಪಿಸಿದ್ದರು. ಇದರಿಂದಾಗಿ ಆ ವಿಡಿಯೊ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಆ ಸಮಯದಲ್ಲಿ ವ್ಯಕ್ತವಾದ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದ ಕಾಮಕೋಟಿ, ತಮ್ಮ ಹೇಳಿಕೆಗಳು ಪ್ರಕಟಿತ ವೈಜ್ಞಾನಿಕ ಪ್ರಬಂಧಗಳನ್ನು ಆಧರಿಸಿವೆ ಎಂದು ಸ್ಪಷ್ಟಪಡಿಸಿದ್ದರು.
ಗೋಮೂತ್ರದ ಸೋಂಕು ನಿವಾರಕ ಗುಣಗಳ ಕುರಿತು ಹಲವು ಅಧ್ಯಯನಗಳು ನಡೆದಿವೆ ಎಂದು ಹೇಳಿದ ಅವರು, ಕರ್ನಾಲ್ನ ಐಸಿಎಆರ್-ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆಯ (ICAR-NDRI) ಸಂಶೋಧಕರು 2021ರಲ್ಲಿ ಪ್ರಕಟಿಸಿದ ಪ್ರಬಂಧ ಮತ್ತು ‘ಏಷ್ಯನ್ ಜರ್ನಲ್ ಆಫ್ ಫಾರ್ಮಾಸ್ಯುಟಿಕಲ್ ರಿಸರ್ಚ್’ ನಂತಹ ನಿಯತಕಾಲಿಕೆಗಳಲ್ಲಿ ಬಂದ ಲೇಖನಗಳನ್ನು ಉಲ್ಲೇಖಿಸಿದ್ದರು.






