ಮೊಬೈಲ್ ನೋಟಿಫಿಕೇಶನ್ ವ್ಯಸನಕ್ಕೆ ಮದ್ದೇನು? ವೈದ್ಯರು ನೀಡಿದ 6 ಸಲಹೆಗಳು ಇಲ್ಲಿವೆ

Picture credit: Pexel
ಎದ್ದ ತಕ್ಷಣ ನಿಮ್ಮ ಫೋನ್ ನಲ್ಲಿ ಪಠ್ಯ ಸಂದೇಶಗಳು, ಇಮೇಲ್ ಗಳು ಅಥವಾ ಇತರ ಸಂದೇಶಗಳನ್ನು ಪರಿಶೀಲಿಸದೆ ಇದ್ದ ದಿನ ನಿಮಗೆ ನೆನಪಿದೆಯೇ? ಇಲ್ಲದಿದ್ದರೆ, ನಿಮ್ಮ ಫೋನ್ ಬಳಕೆಯ ಅಭ್ಯಾಸಗಳನ್ನು ಪುನರ್ವಿಮರ್ಶಿಸುವ ಸಮಯ ಬಂದಿದೆ.
ಅಂತ್ಯವಿಲ್ಲದ ನೋಟಿಫಿಕೇಶನ್ ಗಳ ಹರಿವಿನೊಂದಿಗೆ ನಿಮ್ಮ ಫೋನ್ ನಿರಂತರವಾಗಿ ಮೊಳಗುತ್ತಿರುತ್ತದೆ. ಅಗತ್ಯ ಕಾರಣಗಳಿಗಾಗಿ ನೀವು ಅದನ್ನು ಆನ್ ಮಾಡಿರುತ್ತೀರಿ. ಮುಖ್ಯ ಸಂದೇಶಗಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಅಥವಾ ಎಲ್ಲರಿಂದಲೂ ದೂರವಾಗಿರುವ ಭಾವನೆ ಉಂಟಾಗುವುದನ್ನು ಬಯಸುವುದಿಲ್ಲ. ಸದಾ ಸಂಪರ್ಕದಲ್ಲಿರುವ ಈ ತುಡಿತದಿಂದಾಗಿ ನಿಮಗೆ ಫೋನ್ ಸ್ವಿಚ್ ಆಫ್ ಮಾಡುವುದು ಕಷ್ಟವಾಗಬಹುದು.
ಎದ್ದ ತಕ್ಷಣ ನಿಮ್ಮ ಫೋನ್ನಲ್ಲಿ ಪಠ್ಯ ಸಂದೇಶಗಳು, ಇಮೇಲ್ ಗಳು ಅಥವಾ ಇತರ ಸಂದೇಶಗಳನ್ನು ಪರಿಶೀಲಿಸದೆ ಇದ್ದ ದಿನ ನಿಮಗೆ ನೆನಪಿದೆಯೇ? ಇಲ್ಲದಿದ್ದರೆ, ನಿಮ್ಮ ಫೋನ್ ಬಳಕೆಯ ಅಭ್ಯಾಸಗಳನ್ನು ಪುನರ್ವಿಮರ್ಶಿಸುವ ಸಮಯ ಬಂದಿದೆ.
►ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ?
ಸಾಕೇತ್ ನ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮನೋವೈದ್ಯ ಹಾಗೂ ಸಲಹೆಗಾರ ಡಾ. ಆಸ್ತಿಕ್ ಜೋಶಿ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಪ್ರತಿ ಸಂದೇಶ ಬಂದಾಗ ನಿಮ್ಮ ಫೋನ್ ಕಡೆಗೆ ಸಾಗುವ ಕೈಗಳಿಗಾಗಿ ನಿಮ್ಮ ಇಚ್ಛಾಶಕ್ತಿಯನ್ನು ನೀವು ದೂಷಿಸಬಹುದು. ಆದರೆ, ನೋಟಿಫಿಕೇಶನ್ ಗಳಿಗೆ ನಿಮ್ಮ ಪ್ರತಿಕ್ರಿಯೆಯ ಹಿಂದೆ ಆಳವಾದ ಮಾನಸಿಕ ಕಾರ್ಯವಿಧಾನವೊಂದು ಕೆಲಸ ಮಾಡುತ್ತದೆ.
“ನೋಟಿಫಿಕೇಶನ್ ಗಳನ್ನು ಜನರ ಗಮನ ಸೆಳೆಯಲೆಂದೇ ವಿನ್ಯಾಸಗೊಳಿಸಲಾಗಿದೆ. ಸಂದೇಶಗಳು, ಲೈಕ್ಗಳು, ನವೀಕರಣಗಳು ಮತ್ತು ಎಚ್ಚರಿಕೆಗಳು ಗಮನವನ್ನು ಬೇರೆಡೆಗೆ ಸೆಳೆಯುತ್ತವೆ. ಕೆಲವೊಮ್ಮೆ ಆಸಕ್ತಿದಾಯಕವಾದ ಏನಾದರೂ ಕಾಯುತ್ತಿರಬಹುದು ಮತ್ತು ಕೆಲವೊಮ್ಮೆ ಏನೂ ಇರುವುದಿಲ್ಲ. ಈ ಅನಿರೀಕ್ಷಿತತೆಯು ಫೋನ್ ಗಳನ್ನು ಪದೇಪದೇ ಪರಿಶೀಲಿಸುವ ಅಭ್ಯಾಸವನ್ನು ಬಲಪಡಿಸಬಹುದು” ಎನ್ನುತ್ತಾರೆ ತಜ್ಞ ವೈದ್ಯರು.
►ಈ ನಿರಂತರ ನೋಟಿಫಿಕೇಶನ್ ಗಳು ನಿಮ್ಮ ಗಮನ ಮತ್ತು ನಿದ್ರೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ?
ತಜ್ಞರ ಪ್ರಕಾರ, ನಿರಂತರ ನೋಟಿಫಿಕೇಶನ್ ಗಳು ಕೈಯಲ್ಲಿರುವ ಕೆಲಸದ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸುವುದನ್ನು ಕಷ್ಟವಾಗಿಸುತ್ತವೆ.
“ವಿದ್ಯಾರ್ಥಿಗಳಿಗೆ ಅಧ್ಯಯನ ಎಂದರೆ ಓದುವುದು, ಪರಿಶೀಲಿಸುವುದು, ಸಂದೇಶಗಳನ್ನು ಗಮನಿಸುವುದು, ಸ್ಕ್ರೋಲ್ ಮಾಡುವುದು ಮತ್ತು ಬಳಿಕ ಪಠ್ಯಪುಸ್ತಕದ ಕಡೆಗೆ ಗಮನ ಹರಿಸುವುದಾಗುತ್ತದೆ. ವಯಸ್ಕರು ಕೆಲಸ, ಇಮೇಲ್, ಸಾಮಾಜಿಕ ಮಾಧ್ಯಮ ಮತ್ತು ಕುಟುಂಬದ ಜವಾಬ್ದಾರಿಗಳ ನಡುವೆ ಇದೇ ರೀತಿಯ ಅಡಚಣೆಗಳನ್ನು ಎದುರಿಸಬಹುದು. ಅಂತಿಮವಾಗಿ, ಮಾಡುತ್ತಿರುವ ಕೆಲಸದ ಕಡೆಗೆ ಸಂಪೂರ್ಣ ಗಮನ ನೀಡಲು ಸಾಧ್ಯವಾಗುವುದಿಲ್ಲ. ಉತ್ಪಾದಕತೆ ಕಡಿಮೆಯಾಗುತ್ತದೆ ಮತ್ತು ಮಾನಸಿಕ ಸುಸ್ತು ಆವರಿಸುತ್ತದೆ” ಎನ್ನುತ್ತಾರೆ ವೈದ್ಯರು.
ನೋಟಿಫಿಕೇಶನ್ ಗಳ ನಡುವೆ ದಿನದ ಕೊನೆಯಲ್ಲಿ ವಿಶ್ರಾಂತಿ ಪಡೆಯುವುದು ಕಷ್ಟವಾಗಬಹುದು. ಉತ್ತಮ ಆರೋಗ್ಯದ ಅಡಿಪಾಯವಾಗಿರುವ ನಿದ್ರೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕಳಪೆ ನಿದ್ರೆಯಿಂದಾಗಿ ಏಕಾಗ್ರತೆಯ ಕೊರತೆ, ಕಿರಿಕಿರಿ, ಆತಂಕ ಮತ್ತು ಭಾವನಾತ್ಮಕ ನಿಯಂತ್ರಣದ ಸಾಮರ್ಥ್ಯ ಕುಂಠಿತವಾಗಬಹುದು. ಹೀಗಾಗಿ, ಆಯಾಸವು ಸುಲಭವಾಗಿ ಲಭ್ಯವಿರುವ ಡಿಜಿಟಲ್ ಪ್ರಚೋದನೆಯ ಮೇಲೆ ಅವಲಂಬನೆಯನ್ನು ಹೆಚ್ಚಿಸುತ್ತದೆ.
ಹಾಗಿದ್ದರೆ, ಆರೋಗ್ಯಕರ ಫೋನ್ ಬಳಕೆಯ ಅಭ್ಯಾಸಗಳನ್ನು ಹೇಗೆ ರೂಢಿಸಿಕೊಳ್ಳಬಹುದು? ಫೋನ್ ಬಳಕೆಯ ಮೇಲೆ ಸಂಪೂರ್ಣ ನಿಷೇಧ ಹೇರುವ ಅಗತ್ಯವಿಲ್ಲ. ಡಿಜಿಟಲ್ ಯುಗದಲ್ಲಿ ಅದು ಸಾಧ್ಯವೂ ಇಲ್ಲ. ಬೇಕಾಗಿರುವುದು ಉತ್ತಮ ಮಿತಿಗಳು.
►ವೈದ್ಯರು ಸೂಚಿಸಿದ ಸಲಹೆಗಳು ಹೀಗಿವೆ
• ಅನಗತ್ಯ ನೋಟಿಫಿಕೇಶನ್ ಗಳನ್ನು ಆಫ್ ಮಾಡುವುದು.
• ಅಧ್ಯಯನ ಮತ್ತು ಕೆಲಸದ ಸಮಯದಲ್ಲಿ ಫೋನ್ ಮುಕ್ತ ಅವಧಿಯನ್ನು ನಿಗದಿಪಡಿಸುವುದು.
• ಊಟ ಮಾಡುವಾಗ ಮತ್ತು ಸಂಭಾಷಣೆಯ ಸಂದರ್ಭದಲ್ಲಿ ಫೋನ್ ದೂರವಿಡುವುದು.
• ಮಲಗುವ ಸಮಯಕ್ಕೆ 30–60 ನಿಮಿಷಗಳ ಮೊದಲು ಪರದೆ ನೋಡುವುದನ್ನು ತಪ್ಪಿಸುವುದು.
• ಸಾಧ್ಯವಾದಾಗಲೆಲ್ಲ ಫೋನ್ ಗಳನ್ನು ಮಲಗುವ ಕೋಣೆಯ ಹೊರಗೆ ಇಡುವುದು.
• ಉದ್ದೇಶಪೂರ್ವಕವಾಗಿ ಅಥವಾ ಸ್ವಯಂಚಾಲಿತವಾಗಿ ಫೋನ್ ಪರಿಶೀಲಿಸುತ್ತಿದ್ದೀರಾ ಎಂದು ಸ್ವತಃ ಕೇಳಿಕೊಳ್ಳುವುದು.
ಸೂಚನೆ: ಈ ಲೇಖನವನ್ನು ಮಾಧ್ಯಮಗಳ ಮೂಲದಿಂದ ಪಡೆದು ಮಾಹಿತಿಯ ಉದ್ದೇಶಕ್ಕಾಗಿ ನೀಡಲಾಗಿದೆ. ಇದು ವೃತ್ತಿಪರ ಆರೋಗ್ಯ ಸಲಹೆಗೆ ಪರ್ಯಾಯವಲ್ಲ. ಆರೋಗ್ಯ ಸಮಸ್ಯೆಗಳಿಗೆ ವಿಶ್ವಾಸಾರ್ಹ ತಜ್ಞ ವೈದ್ಯರ ಸಲಹೆ ಪಡೆಯಿರಿ.






