ಸಾರ್ವಜನಿಕರ ಹಣ, ಸರ್ಕಾರದ ವಾದ: E20 ಇಂಧನ ಬೆಂಬಲಿಸಲು ಮೋದಿ ಸರ್ಕಾರದ ಪರ ಇರುವ ರೈತ ನಾಯಕರನ್ನು DD News ಬಳಸಿಕೊಂಡಿದ್ದು ಹೇಗೆ?
► ಅನ್ಮೋಲ್ ಪ್ರೀತಮ್ - newslaundry. com ವರದಿ

Photo Credit : indiatoday
ಎಥನಾಲ್ ಮಿಶ್ರಿತ ಪೆಟ್ರೋಲ್ (E20) ಕುರಿತು ದೇಶಾದ್ಯಂತ ದೊಡ್ಡ ಚರ್ಚೆ ನಡೆಯುತ್ತಿದ್ದು, ವಾಹನ ಸವಾರರು ಮೈಲೇಜ್ ಕೊರತೆ ಮತ್ತು ಇಂಜಿನ್ ಹಾನಿಯ ಬಗ್ಗೆ ದೂರು ನೀಡುತ್ತಿದ್ದಾರೆ. ಸರ್ಕಾರ ಮಾತ್ರ "E20 ರೈತರಿಗೆ ಅನುಕೂಲಕರ" ಎಂಬ ಒಂದೇ ವಾದಕ್ಕೆ ಬದ್ಧವಾಗಿದೆ.
ಸರ್ಕಾರಿ ಸ್ವಾಮ್ಯದ 'ಡಿಡಿ ನ್ಯೂಸ್' (DD News) ಈ ಸಂದೇಶವನ್ನು ಬಿತ್ತರಿಸುವುದರಲ್ಲಿ ಮುಂಚೂಣಿಯಲ್ಲಿದೆ. ಮೇ ತಿಂಗಳಿನಿಂದ ಪ್ರಸಾರಕ ಸಂಸ್ಥೆಯು E20 ಬೆಂಬಲಿಸಿ 50ಕ್ಕೂ ಹೆಚ್ಚು ವಿಶ್ಲೇಷಣೆಗಳು, ಚರ್ಚೆಗಳು ಮತ್ತು ವರದಿಗಳನ್ನು ಪ್ರಸಾರ ಮಾಡಿದೆ ಎಂದು ‘ನ್ಯೂಸ್ಲಾಂಡ್ರಿ’ ವರದಿ ಮಾಡಿದೆ. ಕಳೆದ ತಿಂಗಳು ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಏಳು ಜನ ರೈತ ನಾಯಕರ ವೀಡಿಯೋಗಳನ್ನು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಈ ಎಲ್ಲಾ ನಾಯಕರು "ಎಥನಾಲ್ ಮಿಶ್ರಣವು ರೈತರ ಅಭಿವೃದ್ಧಿಗೆ ಕಾರಣವಾಗುತ್ತಿದೆ" ಎಂದು ಒಂದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಏಳು ನಾಯಕರಲ್ಲಿ ಇನ್ನೊಂದು ಸಾಮ್ಯತೆ ಇತ್ತು. ಅವರೆಲ್ಲರೂ ಮೋದಿ ಸರ್ಕಾರ ಮತ್ತು ಅದರ ನೀತಿಗಳನ್ನು ಬೆಂಬಲಿಸುತ್ತ ಬಂದವರಾಗಿದ್ದರು. ಕೆಲವರು 2020–21ರ ರೈತ ಹೋರಾಟಕ್ಕೆ ಕಾರಣವಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದರು, ಇನ್ನು ಕೆಲವರು ಪ್ರತಿಭಟನೆಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದರು. E20 ವಿರುದ್ಧ ವಿರೋಧ ವ್ಯಕ್ತವಾಗುತ್ತಿದ್ದಂತೆ, ಡಿಡಿ ನ್ಯೂಸ್ ಸರ್ಕಾರಿ ಪರ ಒಲವಿರುವ ಈ ನಾಯಕರನ್ನು ಬಳಸಿ ಎಥನಾಲ್ ಪರ ಪ್ರಚಾರ ನಡೆಸಿತು. ಈ ವಿಚಾರವನ್ನು ಅದು ವೀಕ್ಷಕರಿಗೆ ಎಲ್ಲೂ ಬಹಿರಂಗಪಡಿಸಲಿಲ್ಲ.
ಗಾಂವ್ ಕಿಸಾನ್ ಉನ್ನಯನ್ನ ಕೆ.ಪಿ. ಸಿಂಗ್ ಥೈನುವಾನ್, ಪಿಸೆಂಟ್ ವೆಲ್ಫೇರ್ ಅಸೋಸಿಯೇಷನ್ನ ಅಶೋಕ್ ಬಲ್ಯಾನ್, ಭಾರತೀಯ ಕೃಷಕ್ ಸಮಾಜದ ಕೃಷ್ಣವೀರ್ ಚೌಧರಿ, ಭಾರತೀಯ ಕಿಸಾನ್ ಯೂನಿಯನ್ ನ (ಚೌಧರಿ ಚರಣ್ ಸಿಂಗ್) ಧರ್ಮೇಂದ್ರ ಚೌಧರಿ, ಕಿಸಾನ್ ಮಹಾಪಂಚಾಯತ್ ನ ರಾಂಪಾಲ್ ಜಾಟ್, ಭಾರತೀಯ ಕಿಸಾನ್ ಸಂಘದ ಕೆ. ಸಾಯಿ ರೆಡ್ಡಿ ಮತ್ತು ಸರ್ಕಾರದ MSP (MSP) ಸಮಿತಿ ಸದಸ್ಯ ವಿನೋದ್ ಆನಂದ್ ಈ ಏಳು ನಾಯಕರಾಗಿದ್ದಾರೆ. ಈ ಎಲ್ಲ ಏಳು ವೀಡಿಯೋಗಳು ಜುಲೈ 28ರಂದು ಡಿಡಿ ನ್ಯೂಸ್ ಯೂಟ್ಯೂಬ್ ಚಾನೆಲ್ ನಲ್ಲಿ ಒಂದಾದ ಮೇಲೊಂದರಂತೆ ಪ್ರಕಟವಾಗಿದ್ದವು. ಈ ಎಲ್ಲಾ ವೀಡಿಯೋಗಳಲ್ಲಿ ಸರ್ಕಾರದ ನೀತಿಯನ್ನು ವಿರೋಧಿಸುವುದನ್ನೇ ದೇಶದ್ರೋಹ ಎಂಬಂತೆ ಬಿಂಬಿಸುವ ಏಕರೂಪದ ಸಂದೇಶವಿತ್ತು.
►‘ದೇಶದ್ರೋಹಿ’ ಆರೋಪ
ಎಥನಾಲ್ ಮಿಶ್ರಣವನ್ನು ವಿರೋಧಿಸುವವರನ್ನು ಕೃಷ್ಣವೀರ್ ಚೌಧರಿ "ದೇಶದ್ರೋಹಿಗಳು" ಎಂದು ಕರೆದಿದ್ದಾರೆ. ರೈತರು ಅನ್ನದಾತರಿಂದ ಇಂಧನ ಪೂರೈಕೆದಾರರಾಗಿ ಬದಲಾಗುತ್ತಿದ್ದಾರೆ. ಹೀಗಿದ್ದಾಗ "ಇದನ್ನು ವಿರೋಧಿಸುವುದನ್ನು ಯಾವುದೇ ರೀತಿಯಲ್ಲೂ ಸಮರ್ಥಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ. ಕೆ.ಪಿ. ಸಿಂಗ್ ಥೈನುವಾನ್ ಈ ಆತಂಕಗಳನ್ನು "ಸಂಪೂರ್ಣ ಆಧಾರರಹಿತ" ಎಂದು ತಳ್ಳಿಹಾಕಿದ್ದು, ಎಥನಾಲ್ ಯೋಜನೆಯನ್ನು ಸರ್ಕಾರದ "ವಿಕಸಿತ ಭಾರತ 2047" ಪರಿಕಲ್ಪನೆಗೆ ಲಿಂಕ್ ಮಾಡಿದ್ದಾರೆ.
ಕಬ್ಬು, ಬತ್ತ ಮತ್ತು ಮೆಕ್ಕೆಜೋಳ ಬೆಳೆಯುವ ರೈತರಿಗೆ ಇದರಿಂದ ಹೆಚ್ಚಿನ ಲಾಭವಾಗುತ್ತಿದೆ ಎಂದು ಅಶೋಕ್ ಬಲ್ಯಾನ್ ಪ್ರತಿಪಾದಿಸಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಕೆ. ಸಾಯಿ ರೆಡ್ಡಿ, ಈ ವಿರೋಧದ ಹಿಂದೆ "ತೈಲ ಲಾಬಿ, ಕೆಲವು ಎನ್ಜಿಒಗಳು ಮತ್ತು ವಿದೇಶಿ ಶಕ್ತಿಗಳಿವೆ" ಎಂದು ಆರೋಪಿಸಿದ್ದು, "ಎಥನಾಲ್ ವಿರೋಧಿಸುವ ಯಾರೇ ಆದರೂ ಅವರು ರೈತರನ್ನು ವಿರೋಧಿಸಿದಂತೆ" ಎಂದು ಹೇಳಿದ್ದಾರೆ.
ಎಥನಾಲ್ ಯೋಜನೆಯು "ರೈತ ಕೇಂದ್ರಿತ, ಆಡಳಿತಾತ್ಮಕವಾಗಿ ಜಾರಿಗೊಳಿಸಬಹುದಾದ, ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಲಾಭದಾಯಕ" ಎಂದು ವಿನೋದ್ ಆನಂದ್ ಬಣ್ಣಿಸಿದ್ದು, ವಿಮರ್ಶಕರನ್ನು "ದೇಶದ್ರೋಹಿಗಳು" ಎಂದು ಕರೆದಿದ್ದಾರೆ.
ಧರ್ಮೇಂದ್ರ ಚೌಧರಿ ಮತ್ತು ರಾಂಪಾಲ್ ಜಾಟ್ ಸಹ ಇದೇ ರೀತಿಯ ವಾದಗಳನ್ನು ಮಂಡಿಸಿದ್ದಾರೆ.
ಈ ನಾಯಕರ ಹಿನ್ನೆಲೆಯನ್ನು ಪರಿಶೀಲಿಸಿದಾಗ ಅವರೆಲ್ಲರೂ ಬಿಜೆಪಿ ನೇತೃತ್ವದ ಸರ್ಕಾರದ ಪರ ಒಲವು ಹೊಂದಿರುವುದು ಕಂಡುಬರುತ್ತದೆ. ಕೃಷ್ಣವೀರ್ ಚೌಧರಿ ಅವರು 2014ರಲ್ಲಿ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ಬಿಜೆಪಿ ಸೇರಿದ ಸದಸ್ಯರಾಗಿದ್ದು, 2024ರಲ್ಲಿ ಬಿಜೆಪಿಯ ಘಾಜಿಯಾಬಾದ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು. ಅವರು ಮೂರು ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದರು ಮತ್ತು ಸರ್ಕಾರದ MSP ಸಮಿತಿಯಲ್ಲಿದ್ದಾರೆ.
ಬಿಜೆಪಿ ನಾಯಕ ಸಂಜೀವ್ ಬಲ್ಯಾನ್ ಅವರದ್ದೇ ಖಾಪ್ಗೆ ಸೇರಿದ ಅಶೋಕ್ ಬಲ್ಯಾನ್, 2020–21ರ ಪ್ರತಿಭಟನೆಯಲ್ಲಿ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ 12 ರೈತ ಗುಂಪುಗಳಲ್ಲಿ ಒಂದನ್ನು ಮುನ್ನಡೆಸಿದ್ದರು.
ಕೆ. ಸಾಯಿ ರೆಡ್ಡಿ ಅವರು RSS ಅಂಗಸಂಸ್ಥೆಯಾದ ಭಾರತೀಯ ಕಿಸಾನ್ ಸಂಘದ ಮುಖ್ಯಸ್ಥರಾಗಿದ್ದಾರೆ. ಇದು ರಾಜಕೀಯೇತರ ಎಂದು ಹೇಳಿಕೊಂಡರೂ, 20 ಶೇಕಡಾ ಎಥನಾಲ್ ಮಿಶ್ರಣ ಸೇರಿದಂತೆ ಕೇಂದ್ರ ಸರ್ಕಾರದ ನೀತಿಗಳನ್ನು ನಿರಂತರವಾಗಿ ಬೆಂಬಲಿಸುತ್ತಾ ಬಂದಿದೆ.
ಕೆ.ಪಿ. ಸಿಂಗ್ ಥೈನುವಾನ್ ಬಿಜೆಪಿಯ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಯೋಗಿ ಆದಿತ್ಯನಾಥ್ ಮತ್ತು ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತಾರೆ. ಯೋಗಿ ಅವರು ಮೂರನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಬೇಕೆಂದು ಅವರು ಇಷ್ಟಪಡುವುದಾಗಿ ಹೇಳಿದ್ದಾರೆ. ವಿನೋದ್ ಆನಂದ್ ಕೇಂದ್ರ ಸರ್ಕಾರದ MSP ಮತ್ತು ಕೃಷಿ ಸುಧಾರಣೆಗಳ ಉನ್ನತ ಮಟ್ಟದ ಸಮಿತಿಯಲ್ಲಿದ್ದಾರೆ.
ಧರ್ಮೇಂದ್ರ ಚೌಧರಿ ಅವರ ಸಾಮಾಜಿಕ ಜಾಲತಾಣಗಳಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಿರಿಯ ಬಿಜೆಪಿ ನಾಯಕರೊಂದಿಗಿನ ಭೇಟಿಯ ಚಿತ್ರಗಳಿವೆ.
ರಾಂಪಾಲ್ ಜಾಟ್ ವರ್ಷಗಳಿಂದ ವಿವಿಧ ಪಕ್ಷಗಳ ನಡುವೆ ಗುರುತಿಸಿಕೊಂಡಿದ್ದಾರೆ. 2018ಕ್ಕೂ ಮೊದಲು ಬಿಜೆಪಿಯೊಂದಿಗೆ, ನಂತರ ಆಮ್ ಆದ್ಮಿ ಪಾರ್ಟಿಯೊಂದಿಗೆ ಕಾಣಿಸಿಕೊಂಡು, 2023ರಲ್ಲಿ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದರು.
ಭಾರತ–ಅಮೆರಿಕ ವ್ಯಾಪಾರ ಮಾತುಕತೆಗಳ ನಡುವೆ, ಕೃಷಿ ಮತ್ತು ಡೈರಿ ಕ್ಷೇತ್ರವನ್ನು ವಿದೇಶಿ ಮಾರುಕಟ್ಟೆಗೆ ಮುಕ್ತಗೊಳಿಸಲು ವಿದೇಶಿ ಒತ್ತಡಕ್ಕೆ ಮಣಿಯದ ಮೋದಿಯವರಿಗೆ ಧನ್ಯವಾದ ಅರ್ಪಿಸಲು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ದಿಲ್ಲಿಯ ಪೂಸಾ ಕಾಂಪ್ಲೆಕ್ಸ್ನಲ್ಲಿ 2025ರ ಆಗಸ್ಟ್ 12ರಂದು ಆಯೋಜಿಸಿದ್ದ "ಪ್ರಧಾನ ಮಂತ್ರಿ ಆಭಾರ್ ಕಾರ್ಯಕ್ರಮ"ದಲ್ಲಿ ಈ ಏಳೂ ನಾಯಕರು ಉಪಸ್ಥಿತರಿದ್ದರು. PIB ಮಾಹಿತಿಯ ಪ್ರಕಾರ, ಕಾರ್ಯಕ್ರಮದಲ್ಲಿದ್ದವರು ಮೋದಿ ಮತ್ತು ಚೌಹಾಣ್ ಅವರ ನಾಯಕತ್ವವನ್ನು "ಅಪ್ರತಿಮ" ಎಂದು ಬಣ್ಣಿಸಿದ್ದು, ಸರ್ಕಾರದ "ರೈತಸ್ನೇಹಿ ಆಲೋಚನೆಗಳಿಗೆ" ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು.
►ಪ್ರತಿಕ್ರಿಯೆಗೆ ಮನವಿ
'ನ್ಯೂಸ್ಲಾಂಡ್ರಿ' ಈ ಎಲ್ಲಾ ರೈತ ನಾಯಕರನ್ನು ನೇರವಾಗಿ ಸಂಪರ್ಕಿಸಿತು. ಧರ್ಮೇಂದ್ರ ಚೌಧರಿ ಮಾತನಾಡಿ, ಎಥನಾಲ್ ಮಿಶ್ರಣದಿಂದ "ಸದ್ಯಕ್ಕೆ ಯಾವುದೇ ಪ್ರಯೋಜನವಾಗುತ್ತಿಲ್ಲ"; ಕಬ್ಬಿನ ದರ ಹೆಚ್ಚಿಸಿದರೆ ಮಾತ್ರ ಅನುಕೂಲವಾಗಲಿದೆ ಎಂದು ಹೇಳಿದರು.
ರಾಂಪಾಲ್ ಜಾಟ್, "ನಮ್ಮ ಭಾಗದ ರೈತರಿಗೆ ಎಥನಾಲ್ ಮಿಶ್ರಣದಿಂದ ಯಾವುದೇ ಪ್ರಯೋಜನ ಸಿಗುತ್ತಿಲ್ಲ. ವಾಸ್ತವವಾಗಿ, ವಾಹನಗಳು ಕೆಟ್ಟುಹೋಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಆದರೆ, E20 ಇಂಧನದಿಂದಾಗಿ ಕಚ್ಚಾ ತೈಲಕ್ಕಾಗಿ ದೇಶ ಇತರ ರಾಷ್ಟ್ರಗಳ ಮೇಲೆ ಅವಲಂಬಿತವಾಗುವುದು ಕಡಿಮೆಯಾಗುತ್ತಿರುವುದು ಸಂತಸ ತಂದಿದೆ" ಎಂದರು.
ಅಶೋಕ್ ಬಲ್ಯಾನ್ ಮತ್ತು ಕೃಷ್ಣವೀರ್ ಚೌಧರಿ ಇಬ್ಬರೂ, ಸರ್ಕಾರ ಒಳ್ಳೆಯ ಕೆಲಸ ಮಾಡಿದಾಗ ತಾವು ಬೆಂಬಲಿಸುವುದಾಗಿ ಮತ್ತು ಸುಧಾರಣೆಗಳ ವಿಷಯದಲ್ಲಿ ಸರ್ಕಾರದ ಜೊತೆ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು. ಇದನ್ನು ಸರ್ಕಾರಿ ಪರ ಎಂದು ಭಾವಿಸಿದರೆ ತಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ವಿನೋದ್ ಆನಂದ್ ಅವರು ತಾವು ವೀಡಿಯೋ ಮಾಡಿ DD ನ್ಯೂಸ್ ಗೆ ಕಳುಹಿಸಿಕೊಟ್ಟಿರುವುದಾಗಿ ಹೇಳಿದರು. ಕೆ. ಸಾಯಿ ರೆಡ್ಡಿ, ಕೆ.ಪಿ. ಸಿಂಗ್ ಥೈನುವಾನ್ ಮತ್ತು ಪ್ರಸಾರ ಭಾರತಿ ಸಂಸ್ಥೆಯು ನ್ಯೂಸ್ಲಾಂಡ್ರಿಯ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಸೌಜನ್ಯ: newslaundry.com






