ರೋಡೀಸ್ಗೆ ಮರಳಿದ ರಘು ರಾಮ್; ಹೊಸ ಸೀಸನ್ನಲ್ಲಿ ಹೊಸ ಟ್ವಿಸ್ಟ್ನ ಮಾಹಿತಿ!

ರಘು ರಾಮ್ |Photo Credit : X
ರೋಡೀಸ್ ಕಾಲಕ್ಕೆ ತಕ್ಕ ಬದಲಾವಣೆ ತಂದುಕೊಂಡಿದೆ. ಹೊಸ ಪೀಳಿಗೆಯ ಸ್ಪರ್ಧಿಗಳು, ಗ್ಯಾಂಗ್ ಲೀಡರ್ಗಳು ಮತ್ತು ರಿಯಾಲಿಟಿ ಟೆಲಿವಿಷನ್ ಅನ್ನು ನೋಡುವ ಭಿನ್ನವಾದ ದೃಷ್ಟಿಕೋನಗಳಿವೆ. ಹಿಂದೆ, ಸೃಜನಶೀಲ ಭಿನ್ನಾಭಿಪ್ರಾಯದಿಂದಲೇ ರಘು ಅವರು ರೋಡೀಸ್ ತೊರೆದಿದ್ದರು. ಈಗ ಆ ಭಿನ್ನಾಭಿಪ್ರಾಯಗಳು ಮರೆಯಾಗಿವೆಯೇ ಎನ್ನುವ ಬಗ್ಗೆ ಅವರು ಸ್ಪಷ್ಟಪಡಿಸಿಲ್ಲ.
ಪ್ರಸಿದ್ಧ ಟೆಲಿವಿಶನ್ ಕಾರ್ಯಕ್ರಮವಾದ ಎಂಟಿವಿ ರೋಡೀಸ್ ಕಾರ್ಯಕ್ರಮಕ್ಕೆ ರಘು ರಾಮ್ ಮರಳಿದ್ದಾರೆ. ಈ ರಿಯಾಲಿಟಿ ಶೋನ ಅತ್ಯಂತ ಪರಿಚಿತ ಮುಖಗಳಲ್ಲಿ ಒಬ್ಬರಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದಿದ್ದ ಅವರು ತಮ್ಮ ಅವಳಿ ಸಹೋದರ ರಾಜೀವ್ ಅವರೊಂದಿಗೆ ಈ ಕಾರ್ಯಕ್ರಮದಿಂದ ಹೊರನಡೆದ 12 ವರ್ಷಗಳ ನಂತರ ‘ರೋಡೀಸ್-ರೀಬರ್ತ್’ ಎಂಬ ಹೊಸ ಸೀಸನ್ಗೆ ಮರಳಿದ್ದಾರೆ.
‘ರೋಡೀಸ್’ ಆರಂಭಿಕ ದಿನಗಳಲ್ಲಿ ಅದರ ಜೊತೆಗೆ ಗುರುತಿಸಿಕೊಂಡಿದ್ದ ರಘುರಾಮ್ ಕಾರ್ಯಕ್ರಮದ ಆಡಿಷನ್ಗಳು, ಸ್ಪರ್ಧಿಗಳನ್ನು ತೀವ್ರವಾಗಿ ಪ್ರಶ್ನಿಸುವ ರೀತಿ ಮತ್ತು ಕಠಿಣ ಮತ್ತು ನೇರವಾದ ಧೋರಣೆಗೆ ಪರ್ಯಾಯ ಹೆಸರಾಗಿದ್ದರು. ಅವರ ಸಿಟ್ಟು, ಬೆಚ್ಚಿಬೀಳಿಸುವಂತಹ ಪ್ರಶ್ನೆಗಳು ಮತ್ತು ವಿಭಿನ್ನವಾದ ತೀರ್ಪು ನೀಡುವ ಶೈಲಿಯು ಈ ಕಾರ್ಯಕ್ರಮದ ಸಾಹಸಮಯ ಪ್ರಯಾಣಗಳು ಮತ್ತು ದೈಹಿಕವಾಗಿ ಕಠಿಣವಾದ ಸವಾಲುಗಳಷ್ಟೇ ಪ್ರಮುಖವಾಗಿ ಈ ಶೋನ ಗುರುತಿನ ಭಾಗವಾಗಿದ್ದವು. ಆದರೆ ಹಲವು ವರ್ಷಗಳ ಕಾಲ ಈ ಕಾರ್ಯಕ್ರಮದೊಂದಿಗೆ ಗುರುತಿಸಿಕೊಂಡಿದ್ದ ರಘು ಮತ್ತು ರಾಜೀವ್ ಎಂಟಿವಿ ಜೊತೆಗಿನ ಸೃಜನಶೀಲ ಭಿನ್ನಾಭಿಪ್ರಾಯಗಳಿಂದಾಗಿ 2014ರಲ್ಲಿ ಕಾರ್ಯಕ್ರಮದಿಂದ ಹೊರನಡೆದರು.
ಇದೀಗ ಒಂದು ದಶಕಕ್ಕೂ ಹೆಚ್ಚು ಕಾಲದ ನಂತರ ರಘು ಮರಳಿದ್ದಾರೆ. ತಮ್ಮ ಮರಳುವಿಕೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, “ಅನೇಕ ಮಂದಿ ನಾನು ಮತ್ತೆ ರೋಡೀಸ್ಗೆ ಬರಬೇಕು ಎಂದು ಬಯಸಿದ್ದರು. ಸರಿ, ಏನನ್ನಾದರೂ ಬಯಸುವಾಗ ಎಚ್ಚರಿಕೆಯಿಂದ ಇರಿ. ರೋಡೀಸ್ ಭಾರತದ ಅತಿ ದೀರ್ಘಕಾಲದಿಂದ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಆಗಿದ್ದು, ವರ್ಷಗಳ ಕಾಲ ಇದು ನಿರಂತರವಾಗಿ ಬೆಳೆದಿದೆ. ಮೊದಲ ದಶಕದಲ್ಲಿ ಕಾರ್ಯಕ್ರಮ ಒಂದು ನಿರ್ದಿಷ್ಟ ಸ್ವರೂಪವನ್ನು ಅನುಸರಿಸುತ್ತಿತ್ತು. ಆದರೆ ಅದು ಬೆಳೆಯಲು ಮತ್ತು ಪ್ರಸ್ತುತವಾಗಿ ಉಳಿಯಲು ಆ ಸ್ವರೂಪದಲ್ಲಿ ಬದಲಾವಣೆ ಅಗತ್ಯವಿತ್ತು. ನಂತರ ‘ಗ್ಯಾಂಗ್ ಲೀಡರ್’ಗಳ ಪರಿಕಲ್ಪನೆ ಬಂತು. ಇದರಿಂದ ಕಾರ್ಯಕ್ರಮದ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಈಗ ‘ರೋಡೀಸ್’ ತನ್ನ ಮೂರನೇ ದಶಕಕ್ಕೆ ಕಾಲಿಡುತ್ತಿರುವಾಗ ಎಲ್ಲವನ್ನೂ ಮತ್ತೊಮ್ಮೆ ಬದಲಿಸುವ ಸಮಯ ಬಂದಿದೆ. ನನ್ನ ಮರಳುವಿಕೆಯ ಉದ್ದೇಶವೂ ಅದೇ ಆಗಿದೆ. ಇದೊಂದು ರೀತಿಯ ಪುನರ್ಜನ್ಮ ಇದ್ದಂತೆ. ಆದರೆ ಪ್ರಮಾಣಿಕವಾಗಿ ಹೇಳಬೇಕೆಂದರೆ ರೋಡೀಸ್ನಲ್ಲಿ ಇರುವವರಿಗೆ ಇದು ಕೆಟ್ಟ ಸುದ್ದಿ! ಏಕೆಂದರೆ ಈ ಪುನರ್ಜನ್ಮದ ಹಾದಿಯಲ್ಲಿ ಅವರ ಪ್ರಯಾಣ ನರಕಸದೃಶವಾಗಲಿದೆ. ಹಾಗಾಗಿ, ಸಿದ್ಧರಾಗಿರಿ!” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ರೋಡೀಸ್ ಕಾಲಕ್ಕೆ ತಕ್ಕ ಬದಲಾವಣೆ ತಂದುಕೊಂಡಿದೆ. ಹೊಸ ಪೀಳಿಗೆಯ ಸ್ಪರ್ಧಿಗಳು, ಗ್ಯಾಂಗ್ ಲೀಡರ್ಗಳು ಮತ್ತು ರಿಯಾಲಿಟಿ ಟೆಲಿವಿಷನ್ ಅನ್ನು ನೋಡುವ ಭಿನ್ನವಾದ ದೃಷ್ಟಿಕೋನಗಳಿವೆ. ಹಿಂದೆ, ಸೃಜನಶೀಲ ಭಿನ್ನಾಭಿಪ್ರಾಯದಿಂದಲೇ ರಘು ಅವರು ರೋಡೀಸ್ ತೊರೆದಿದ್ದರು. ಈಗ ಆ ಭಿನ್ನಾಭಿಪ್ರಾಯಗಳು ಮರೆಯಾಗಿವೆಯೇ ಎನ್ನುವ ಬಗ್ಗೆ ಅವರು ಸ್ಪಷ್ಟಪಡಿಸಿಲ್ಲ. ಕಾರ್ಯಕ್ರಮ ತೊರೆದಾಗ ಅವರು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ನಿರ್ಗಮನಕ್ಕೆ ಕಾರಣವಾದ ಸೃಜನಶೀಲ ಭಿನ್ನಾಭಿಪ್ರಾಯಗಳ ಬಗ್ಗೆ ಮಾತನಾಡಿದ್ದರು. “ನಾನು ಬೇಸತ್ತು ಹೋಗಿದ್ದೆ. ಕಾರ್ಯಕ್ರಮ ಉತ್ತುಂಗದಲ್ಲಿದ್ದಾಗಲೇ ಹೊರಬಂದೆ. ಎರಡು ಕಾರಣಗಳಿದ್ದವು. ಮೊದಲನೆಯದಾಗಿ ಎಂಟಿವಿ ವಾಹಿನಿಯು ಕಾರ್ಯಕ್ರಮವನ್ನು ನಿರ್ದಿಷ್ಟ ರೀತಿಯಲ್ಲಿ ರೂಪಿಸಲು ಬಯಸಿತ್ತು. ಆದರೆ ಅದಕ್ಕೆ ನನಗೆ ಒಪ್ಪಿಗೆ ಇರಲಿಲ್ಲ. 10 ಸೀಸನ್ಗಳವರೆಗೆ ನನಗೆ ಬಹುತೇಕ ಸಂಪೂರ್ಣ ಸ್ವಾತಂತ್ರ್ಯವಿತ್ತು. ಆದರೆ 9 ಮತ್ತು 10ನೇ ಸೀಸನ್ಗಳಲ್ಲಿ ನನಗೆ ವಾಹಿನಿ ಜೊತೆಗೆ ಸಂಘರ್ಷ ಉಂಟಾಯಿತು. ಏಕೆಂದರೆ ಅವರು ಜನಪ್ರಿಯತೆ ತಂದುಕೊಡುವ ಆಯಾಮ ತರಲು ಬಯಸಿದ್ದರು” ಎಂದು ಅವರು ಹೇಳಿದ್ದರು.
ಅಲ್ಲದೆ ಕಾರ್ಯಕ್ರಮವು ತಮ್ಮ ವೈಯಕ್ತಿಕ ಜೀವನದ ಮೇಲೆ, ವಿವಾಹ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಿದೆ ಮತ್ತು ಅಂತಿಮವಾಗಿ ವಿಚ್ಛೇದನೆಗೆ ಕಾರಣವಾಗಿರುವ ಬಗ್ಗೆಯೂ ಅವರು ವಿವರ ನೀಡಿದ್ದರು. ನವೆಂಬರ್ 16ರಂದು ರಘು ಅವರು ರೋಡೀಸ್ಗೆ ಮರಳುವ ಸೂಚನೆ ನೀಡಿದಾಗ ಜನರಲ್ಲಿ ಉತ್ಸುಕತೆ ಕಂಡುಬಂದಿದೆ. ಆನ್ಲೈನ್ನಲ್ಲಿ ಚರ್ಚೆಗಳಾಗುತ್ತಿವೆ. ಆದರೆ ಈ ನಿರೀಕ್ಷೆಗಳನ್ನು ಅವರು ಉಳಿಸಿಕೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ.






