ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕಟ್ಟಡ ನಿರ್ಮಾಣ ವಿಚಾರ : ಸಮಿತಿಯ ಶಿಫಾರಸನ್ನು ಬದಿಗೊತ್ತಿ400 ಕೋಟಿ ರೂ. ವರ್ಗಾವಣೆ

ಸಾಂದರ್ಭಿಕ ಚಿತ್ರ PC: istockphoto
ಬೆಂಗಳೂರು : ರಾಮನಗರದ ಅರ್ಚಕರ ಹಳ್ಳಿಯಲ್ಲಿ ಉದ್ದೇಶಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕಟ್ಟಡ, ಕ್ಯಾಂಪಸ್ ಮತ್ತು ಕಾಲೇಜು ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯು ನೀಡಿದ್ದ ಸಲಹೆ, ಶಿಫಾರಸನ್ನು ಬದಿಗೊತ್ತಿ 400 ಕೋಟಿ ರೂ.ವರ್ಗಾವಣೆ ಮಾಡಿರುವುದನ್ನು ರಾಜ್ಯ ಲೆಕ್ಕಪತ್ರ ಲೆಕ್ಕ ಪರಿಶೋಧನೆ ಇಲಾಖೆಯು ತೀವ್ರವಾಗಿ ಆಕ್ಷೇಪಿಸಿರುವುದು ಇದೀಗ ಬಹಿರಂಗವಾಗಿದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿಗೆ ಲೆಕ್ಕಪರಿಶೋಧನೆಯನ್ನು ಪೂರ್ಣಗೊಳಿಸಿರುವ ಇಲಾಖೆಯು, 400 ಕೋಟಿ ರೂ. ಫಲಪ್ರದವಲ್ಲದೇ ವರ್ಗಾವಣೆ ಮಾಡಲಾಗಿರುತ್ತದೆ ಎಂದು ಅಭಿಪ್ರಾಯಿಸಿದೆ. ಈ ಲೆಕ್ಕ ಪರಿಶೋಧನೆಯ ಸಮಗ್ರ ವರದಿಯು "the-file.in"ಗೆ ಲಭ್ಯವಾಗಿದೆ.
ಫಲಪ್ರದವಲ್ಲದ ವೆಚ್ಚ: ಅಲ್ಲದೇ ಈ ರೀತಿಯ ವೆಚ್ಚವು ಫಲಪ್ರದವಲ್ಲದ ವೆಚ್ಚವಾಗಿರುತ್ತದೆ. ಈ ರೀತಿಯ ನಡೆಯಿಂದ ಈ ಕಾಮಗಾರಿ ನಿರ್ಮಾಣ ವೆಚ್ಚವು ಹೆಚ್ಚುವರಿಯಾಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ವಿಶ್ವವಿದ್ಯಾನಿಲಯಕ್ಕೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಲೆಕ್ಕ ಪರಿಶೋಧನೆ ವರದಿಯು ಎಚ್ಚರಿಸಿದೆ.
‘ಹಾಗೆಯೇ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ. ಈ ರೀತಿಯ ತಪ್ಪು ನಿರ್ಣಯಗಳಿಂದ ದೂರ ದೃಷ್ಟಿಯಿಲ್ಲದೇ ನಿರ್ಣಯ ಕೈಗೊಳ್ಳದೇ ಇರುವುದರಿಂದ ಈ ಕಾಮಗಾರಿಯ ಪ್ರಗತಿಯು ನಿಗದಿತ ಪ್ರಕಾರ ಗುರಿ ಸಾಧಿಸುವುದಿಲ್ಲ. ಹೀಗಾಗಿ ಈ ಕಾಮಗಾರಿಯು ಯಾವುದೇ ಪ್ರಗತಿ ಕಾಣುವುದಿಲ್ಲ. ಆದ್ದರಿಂದ ಈ ಬಗ್ಗೆ ವಿಶ್ವವಿದ್ಯಾನಿಲಯವು ಈ ರೀತಿಯ ನಿಧಿ ವರ್ಗಾವಣೆ ಮಾಡುವ ಮೊದಲು ಆರ್ಥಿಕ ಶಿಸ್ತು ಪಾಲಿಸಿ, ಫಲಪ್ರದ ವೆಚ್ಚವಾಗುವ ರೀತಿಯಲ್ಲಿ ಆರ್ಥಿಕ ಠೇವಣಿ ಇಡಬೇಕಾಗುತ್ತದೆ. ಇದರಿಂದ ಒಟ್ಟಾರೆ 400 ಕೋಟಿ ರೂ. ಫಲಪ್ರದವಲ್ಲದೇ ವರ್ಗಾವಣೆ ಮಾಡಲಾಗಿರುತ್ತದೆ’ ಎಂದು ಲೆಕ್ಕ ಪರಿಶೋಧನೆಯು ಅಭಿಪ್ರಾಯಿಸಿರುವುದು ಗೊತ್ತಾಗಿದೆ.
ಅಭಿಪ್ರಾಯ ಬದಿಗೊತ್ತಿ 470 ಕೋಟಿ ರೂ.ಮೊತ್ತಕ್ಕೆ ಕಾರ್ಯಾದೇಶ: ಆದರೆ ಈ ಅಭಿಪ್ರಾಯವನ್ನು ಪರಿಗಣಿಸದೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಇಂಜಿನಿಯರ್ ಅವರು ಸ್ಟಾರ್ ಇನ್ಫ್ರಾಟೆರ್, ಬೆಂಗಳೂರು ರವರಿಗೆ ಕಚೇರಿಯ ಗುತ್ತಿಗೆ ಕರಾರು ಸಂಖ್ಯೆ 343/22-23, ದಿನಾಂಕ 2023ರ ಮಾರ್ಚ್ 27ರಂದು 470,52,08,254 ರೂ.ಗಳಿಗೆ ಕಾರ್ಯಾದೇಶ ನೀಡಿದ್ದರು. ಅಲ್ಲದೇ ಈ ಇಲಾಖೆಯ ಮುಖ್ಯ ಇಂಜಿನಿಯರ್ (ಪತ್ರ ಸಂಖ್ಯೆ (ಆಕುಕ/ಇಂಘ/ಮುಂ.ಇಂ/ತಾಂಸ-3/ಸಇಂ-6/23-24/648/ 2023-24) ಜುಲೈ 25ರಂದು ಬರೆದಿದ್ದ ಪತ್ರದಲ್ಲಿ ಗುತ್ತಿಗೆದಾರರಿಂದ ಸ್ಟಾರ್ ಇನ್ಫ್ರಾಟೆರ್ ಇವರು 2023ರ ಮಾರ್ಚ್ 28ರಂದು ಕಾಮಗಾರಿ ಪ್ರಾರಂಭಿಸಲಾಗಿದೆ. ಕಾಮಗಾರಿ ಸ್ಥಳದ ಸುಮಾರು 200 ಎಕರೆ ಪ್ರದೇಶದಲ್ಲಿ ಗಿಡಗಂಟೆ ತೆಗೆಯುವುದು, ಉಬ್ಬು, ತಗ್ಗು ಪ್ರದೇಶಗಳನ್ನು ಸಮತಟ್ಟು ಮಾಡುವುದು ಮುಂತಾದ ಪ್ರಾಥಮಿಕ ಕೆಲಸಗಳನ್ನು ನಿರ್ವಹಿಸಿರುತ್ತಾರೆ ಎಂದು ತಿಳಿಸಿದ್ದರು.
ಆದರೆ ಕಾಂಪೌಂಡ್ ಗೋಡೆ, ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲು ಅಡಿಪಾಯದಲ್ಲಿ ಮಣ್ಣಿನ ಅಗೆತದ ಕೆಲಸವನ್ನು ಯಂತ್ರೋಪಕರಣಗಳ ಸಹಾಯದಿಂದ ಪ್ರಾರಂಭಿಸಲಾಗಿದೆ. ಆದರೆ ಭೂ ಮಾಲಕರು ಭೂ ಪರಿಹಾರ ನೀಡಿಲ್ಲ ಎಂದು ರಾಜ್ಯ ಉಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಿಲ್ಲವೆಂದು ತಿಳಿಸಿ ತಕರಾರು ಎತ್ತಿದ್ದರು. ನ್ಯಾಯಾಲಯದ ಆದೇಶದಂತೆ ಭೂ ಪರಿಹಾರ ನೀಡುವವರೆಗೂ ನಮ್ಮ ಜಮೀನುಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲು ಬಿಡುವುದಿಲ್ಲ ಎಂದು ಕಾಮಗಾರಿ ನಿಲ್ಲಿಸಿರುತ್ತಾರೆ ಎಂದು ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದರು.
ಈ ಮಧ್ಯೆಯೂ 2023ರ ಮಾರ್ಚ್ 28ರಂದು ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು. ಗುತ್ತಿಗೆ ಕರಾರಿನ ಅನ್ವಯ ಇದುವರೆಗೆ ಶೇ.10ರಷ್ಟು ಕಾಮಗಾರಿಯನ್ನು ಅಂದರೇ 50 ಕೋಟಿಗಳ ಅರ್ಥಿಕ ಪ್ರಗತಿ ನೀಡಬೇಕಾಗಿತ್ತು. ಆದರೆ ಕಾಮಗಾರಿಯಲ್ಲಿ ಇದುವರೆಗೂ ಯಾವುದೇ ರೀತಿಯ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿರುವುದಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಕಾಮಗಾರಿಯ್ನು ಪೂರ್ತಿಗೊಳಿಸಲು ಗುತ್ತಿಗೆದಾರರಿಗೆ ಗುತ್ತಿಗೆ ಕರಾರಿನಲ್ಲಿ ನಿಗದಿಪಡಿಸಿರುವ 36 ತಿಂಗಳುಗಳ ಅವಧಿಗಿಂತ ಹೆಚ್ಚಿನ ಕಾಲಾವಕಾಶ ನೀಡಬೇಕಾಗಿರುತ್ತದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಹಾಗೆಯೇ ಕಾಮಗಾರಿಯ ನಿರ್ಮಾಣ ವೆಚ್ಚದಲ್ಲೂ ಸಹ ಹೆಚ್ಚುವರಿಯಾಗುವ ಸಂಭವವಿರುತ್ತದೆ ಎಂದು ಹೇಳಲಾಗಿತ್ತು. ಕಾಮಗಾರಿಯ ಸ್ಥಳದ ಜಮೀನನ್ನು ಭೌತಿಕವಾಗಿ ಹಸ್ತಾಂತರ ಮಾಡಿ ನಂತರ ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಅನುವು ಮಾಡಿಕೊಡಬೇಕು ಎಂದು ಕೋರಿದ್ದರು.
‘ವಿಶ್ವವಿದ್ಯಾನಿಲಯವು ಈ ರೀತಿಯ ನಿಧಿ ವರ್ಗಾವಣೆ ಮಾಡುವ ಮೊದಲು ಆರ್ಥಿಕ ಶಿಸ್ತು ಪಾಲಿಸಬೇಕಿತ್ತು. ಫಲಪ್ರದ ವೆಚ್ಚವಾಗುವ ರೀತಿಯಲ್ಲಿ ಆರ್ಥಿಕ ಠೇವಣಿ ಇಡಬೇಕಾಗಿತ್ತು. ಆದರೆ ಒಟ್ಟಾರೆ 400 ಕೋಟಿ ರೂ.ಗಳನ್ನು ಫಲಪ್ರದವಲ್ಲದೇ ವರ್ಗಾವಣೆ ಮಾಡಲಾಗಿರುತ್ತದೆ’ ಎಂದು ಲೆಕ್ಕ ಪರಿಶೋಧನೆಯು ಅಭಿಪ್ರಾಯಿಸಿರುವುದು ವರದಿಯಿಂದ ತಿಳಿದು ಬಂದಿದೆ.
15 ಎಕರೆ 16 ಗುಂಟೆ ಜಮೀನಿನ ಬಗ್ಗೆ ಭೂ ಮಾಲಕರು ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ಅದು ಇತ್ಯರ್ಥವಾಗದೇ ಬಾಕಿ ಉಳಿದಿದೆ. ಹೀಗಾಗಿ ಉಳಿದ ಜಾಗ 15 ಎಕರೆ 16 ಗುಂಟೆ ವಿಶ್ವವಿದ್ಯಾನಿಲಯಕ್ಕೆ ಹಸ್ತಾಂತರ ಮಾಡುವವರೆಗೂ ಟೆಂಡರ್ ಆಹ್ವಾನಿಸಬಾರದು ಎಂದು ರಾಜ್ಯ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯು ಅಭಿಪ್ರಾಯ ನೀಡಿತ್ತು. ಆದರೂ ಸಹ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಇಂಜಿನಿಯರ್ ಅವರು ಟೆಂಡರ್ ಆಹ್ವಾನಿಸಿ ಕಾರ್ಯಾದೇಶ ನೀಡಿದ್ದರು. ಇದು ಸರಕಾರದ ಹಾಗೂ ವಿಶ್ವವಿದ್ಯಾನಿಲಯದ ಉದ್ದೇಶಕ್ಕೆ ವಿರುದ್ಧವಾಗಿರುತ್ತದೆ ಎಂದು ಸರಕಾರಿ ಲೆಕ್ಕ ಪರಿಶೋಧಕರು ಬಲವಾಗಿ ಆಕ್ಷೇಪಿಸಿರುವುದು ವರದಿಯಿಂದ ತಿಳಿದು ಬಂದಿದೆ.







