ಸ್ಥಿರಾಸ್ತಿ-ಚರಾಸ್ತಿ, ವಾರ್ಷಿಕ ಭೌತಿಕ ಆಸ್ತಿಗಳ ವಿವರಗಳನ್ನು ಒದಗಿಸಿದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ

PC: fortuneacademics
ಬೆಂಗಳೂರು : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ 2023-24ನೇ ಸಾಲಿನ ವಾರ್ಷಿಕ ಲೆಕ್ಕಪತ್ರದ ಪ್ರಕಾರ ಸ್ಥಿರಾಸ್ತಿಗಳ ಪ್ರಾರಂಭಿಕ ಶಿಲ್ಕು 438.54 ಕೋಟಿ ರೂ.ಗಳಿವೆ. ಇದೇ ವರ್ಷದಲ್ಲಿ 19.20 ಕೋಟಿ ರೂ. ಸವಕಳಿ ಒಳಗೊಂಡಂತೆ ಅಂತಿಮವಾಗಿ 442.03 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಆದರೆ ಸ್ಥಿರಾಸ್ತಿ ಹಾಗೂ ಚರಾಸ್ತಿಗಳಿಗೆ ಸಂಬಂಧಿಸಿದಂತೆ ಹಿಂದಿನ ಸಾಲಿನಿಂದಲೂ ಆಸ್ತಿ ವಹಿ ಹಾಗೂ ವಾರ್ಷಿಕ ಭೌತಿಕ ಆಸ್ತಿಗಳ ವಿವರಗಳನ್ನು ಒದಗಿಸಿಲ್ಲ.
2023-24ನೇ ಸಾಲಿಗೆ ಸಂಬಂಧಿಸಿದಂತೆ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನಾ ಇಲಾಖೆಯು ಪೂರ್ಣಗೊಳಿಸಿರುವ ವರದಿಯು, ವಿಶ್ವವಿದ್ಯಾನಿಲಯದ ಆರ್ಥಿಕ ಅಶಿಸ್ತಿನ ವಿವಿಧ ಮುಖಗಳನ್ನು ತೆರೆದಿಟ್ಟಿದೆ. ಈ ವರದಿಯ ಪ್ರತಿಯು ‘the-file.in’ಗೆ ಲಭ್ಯವಾಗಿದೆ.
ಸ್ಥಿರಾಸ್ತಿ, ಚರಾಸ್ತಿ ಮತ್ತು ಒಟ್ಟಾರೆ ಆಸ್ತಿ ವಹಿಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ಒದಗಿಸದೇ ಇರುವುದಕ್ಕೆ ಲೆಕ್ಕ ಪರಿಶೋಧಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದು ವರದಿಯಿಂದ ಗೊತ್ತಾಗಿದೆ.
ಯಾವುದೇ ವಿವರಗಳನ್ನು ನೀಡದ ಕಾರಣ ಜಮೀನು, ಕಟ್ಟಡ, ಪೀಠೋಪಕರಣ, ವಾಹನ, ಕಂಪ್ಯೂಟರ್ ಹಾಗೂ ಇತರ ಸ್ಥಿರಾಸ್ತಿಗಳ ಮೌಲ್ಯವನ್ನು ಯಾವ ಮಾನದಂಡದ ಆಧಾರದ ಮೇಲೆ ನಿರ್ಧರಿಸಲಾಗಿದೆ ಎಂದು ಲೆಕ್ಕ ಪರಿಶೋಧಕರು ದೃಢೀಕರಿಸಿಲ್ಲ.
ಹಾಗೆಯೇ ಆಸ್ತಿಗಳ ಮೌಲ್ಯದ ಮೇಲೆ ಸವಕಳಿ ಕಳೆದು 442 ಕೋಟಿ 03 ಲಕ್ಷ ರೂ.ಸ್ಥಿರಾಸ್ತಿ ಅಂತಿಮ ಶಿಲ್ಕನ್ನು ತೋರಿಸಿರುವ ಕುರಿತು ವಿವರಣೆ, ನಿರ್ವಹಿಸಿರುವ ಆಸ್ತಿ ವಹಿಯನ್ನು ಮತ್ತು ಸ್ಥಿರಾಸ್ತಿಗಳ ಮೌಲ್ಯವನ್ನು ದೃಢೀಕರಿಸಿ ನೀಡಬೇಕು ಎಂದು 2024ರ ಅಕ್ಟೋಬರ್ 5ರಂದೇ ಕೋರಿತ್ತು. ಆದರೆ ವಿಶ್ವವಿದ್ಯಾನಿಲಯವು ಈ ಸಂಬಂಧ ಯಾವುದೇ ಮಾಹಿತಿಯನ್ನೂ ಒದಗಿಸಿಲ್ಲ. ಹೀಗಾಗಿ ಸ್ಥಿರಾಸ್ತಿಗಳ ಮೌಲ್ಯವನ್ನು ದೃಢೀಕರಿಸಲು ಸಾಧ್ಯವಾಗಿಲ್ಲ ಎಂದು ಲೆಕ್ಕಪರಿಶೋಧಕರು ವರದಿಯಲ್ಲಿ ದಾಖಲಿಸಿರುವುದು ತಿಳಿದು ಬಂದಿದೆ.
ಟಿಡಿಎಸ್ ಮತ್ತು ಟಿಸಿಎಸ್ ಬಗ್ಗೆ ದಾಖಲೆ ಒದಗಿಸಿಲ್ಲ
ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ 2023-24ನೇ ಸಾಲಿನ ಅಂತ್ಯಕ್ಕೆ 7,76,87,297 ರೂ.ಗಳನ್ನು ಬ್ಯಾಂಕ್ ಬಡ್ಡಿಗಳ ಮೇಲಿನ ಕಟಾವಣೆಯಾದ ಆದಾಯ ತೆರಿಗೆ ಎಂದು ನಮೂದಿಸಿತ್ತು. ಈ ಆದಾಯ ತೆರಿಗೆಯನ್ನು ಹಿಂಪಡೆಯಲು ಸಂಸ್ಥೆಯು ಪ್ರತೀ ವರ್ಷ ನಿಗದಿತ ಸಮಯದಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿ ಹಿಂಪಡೆಯಬೇಕು. 2010-11ರಿಂದ 2013-14ನೇ ಸಾಲುಗಳ ರಿಟರ್ನ್ ಪ್ರತಿಗಳು ವಿಶ್ವವಿದ್ಯಾನಿಲಯದಲ್ಲಿ ಲಭ್ಯವೇ ಇಲ್ಲ.
ಹೀಗಾಗಿ ಟಿಡಿಎಸ್ ಮತ್ತು ಟಿಸಿಎಸ್ ಅಡಿ ತೋರಿಸಿರುವ ಮೊತ್ತವನ್ನು ದೃಢೀಕರಿಸಲು ಲೆಕ್ಕ ಪರಿಶೋಧನೆಗೆ ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ವಿವರಿಸಿದೆ.







