ಬುಮ್ರಾರನ್ನು ಫುಟ್ಬಾಲ್ ಆಟಗಾರನೆಂದು ಕರೆದ ಮೇಲೆ ‘ಜೆನ್ಯೂನ್ ಹ್ಯೂಮನ್ ಎರರ್’ ಎಂದು ಕ್ಷಮೆಯಾಚಿಸಿದ ರಾಮ್ ಚರಣ್

ನಟ ರಾಮ್ ಚರಣ್(X) , ಜಸ್ಪ್ರೀತ್ ಬುಮ್ರಾ ( PTI )
ನಟ ರಾಮ್ ಚರಣ್ ತಮ್ಮ ಹೊಸ ಸಿನಿಮಾ ‘ಪೆಡ್ಡಿ’ಯ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ಅವರನ್ನು ‘ಫುಟ್ಬಾಲ್ ಆಟಗಾರ’ ಎಂದು ಕರೆಯುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿದ್ದಾರೆ.
ಭೋಪಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎ ಆರ್ ರೆಹಮಾನ್, ಜಾನ್ವಿ ಕಪೂರ್ ಮತ್ತು ತಂಡದ ಉಳಿದವರೊಂದಿಗೆ ಭಾಗವಹಿಸಿದ್ದ ನಟ, ತಮ್ಮ ಹಾಸ್ಯಗಳಿಂದ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಾಡಿಸಿದ್ದಾರೆ. ಆ ಸಂದರ್ಭದಲ್ಲಿ ರಾಮ್ ಆಕಸ್ಮಿಕವಾಗಿ ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ‘ಫುಟ್ಬಾಲ್ ಆಟಗಾರ” ಎಂದು ಕರೆದರು.
ಅಷ್ಟೇ ಅಲ್ಲ, ಅವರು ಬಿಹಾರ ಮತ್ತು ಭೋಪಾಲ್ ನಡುವೆ ಗೊಂದಲ ವ್ಯಕ್ತಪಡಿಸಿದರು. ಭೋಪಾಲ್ ಪ್ರೇಕ್ಷಕರನ್ನು “ಬಿಹಾರದ ಜನರು” ಎಂದು ಸಂಬೋಧಿಸಿದರು.
ಆರಂಭದಲ್ಲಿ ‘ರ್ಯಾಪಿಡ್ ಫೈರ್’ ಆಟದಲ್ಲಿ ಭಾರತೀಯ ಕ್ರಿಕೆಟಿಗರನ್ನು ಕೆಲ ಶಬ್ದಗಳಲ್ಲಿ ವಿವರಿಸುವಂತೆ ಅವರನ್ನು ಕೇಳಲಾಯಿತು.
ಸಚಿನ್ ತೆಂಡೂಲ್ಕರ್ ಬಗ್ಗೆ ಕೇಳಿದಾಗ ನಟ ಅವರ ವೃತ್ತಿಜೀವನವನ್ನು “ದೀರ್ಘ, ಲೆಜೆಂಡರಿ ರನ್” ಎಂದು ವಿವರಿಸಿದರು. ಎಂಎಸ್ ಧೋನಿಯನ್ನು “ಶಾಂತ ಮತ್ತು ಕೂಲ್” ಎಂದು ಕರೆದರು. ರೋಹಿತ್ ಶರ್ಮಾರನ್ನು “ಎಲ್ಲರಿಗೂ ಸೇರಿದ ವ್ಯಕ್ತಿ” ಎಂದು ಕರೆದರು. ವಿರಾಟ್ ಕೊಹ್ಲಿಯನ್ನು ಒಂದೇ ಶಬ್ದದಲ್ಲಿ “ಬೆಂಕಿ” ಎಂದು ವಿವರಿಸಿದ್ದರು.
ಆದರೆ ಜಸ್ಪೀತ್ ಬುಮ್ರಾ ಬಗ್ಗೆ ಕೇಳಿದಾಗ ಎಡವಟ್ಟು ಮಾಡಿಕೊಂಡರು. ಅವರು ಉತ್ತರಿಸಿ, “ಜಸ್ಪ್ರೀತ್ ಬುಮ್ರಾ ಜಿ ನಾನು ನಿಮ್ಮ ದೊಡ್ಡ ಅಭಿಮಾನಿ. ನನಗೆ ಫುಟ್ಬಾಲ್ ಮತ್ತು ಫುಟ್ಬಾಲ್ ಎಂದರೆ ಬಹಳ ಇಷ್ಟ. ನಿಮ್ಮನ್ನು ಪ್ರೀತಿಸುತ್ತೇನೆ ಸರ್” ಎಂದು ಹೇಳಿಬಿಟ್ಟರು. ಕೆಲವೇ ಗಂಟೆಗಳಲ್ಲಿ ಈ ವೀಡಿಯೋ ವೈರಲ್ ಆದವು.
ಕೆಲವರು ವೀಡಿಯೋಗಳನ್ನು ಮೀಮ್ ಆಗಿ ಬದಲಿಸಿದರು. ರಾಮ್ ಚರಣ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೆ ಒಳಗಾದರು.
ಆದರೆ RRR ನಟ ತಕ್ಷಣವೇ ತಪ್ಪನ್ನು ತಿದ್ದುಕೊಂಡು ಕ್ಷಮೆಯಾಚಿಸಿದರು. “ಹ್ಯೂಮನ್ ಎರರ್” (ತಪ್ಪಿ ಆಡಿದ ಮಾತು) ಎಂದು ಕರೆದರು. ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದ ಅವರು, “ಉಫ್.. ಹೆಸರುಗಳನ್ನು ನಾನು ಯಾವಾಗಲೂ ಮರೆಯುತ್ತೇನೆ. ಜಸ್ಪ್ರೀತ್ ಬುಮ್ರಾ ಅವರ ಬಳಿ ಕ್ಷಮೆಯಾಚಿಸುತ್ತೇನೆ. ಇದು ಜನರು ಮತ್ತು ಉತ್ಸಾಹದ ನಡುವೆ ತಪ್ಪಿ ಆಡಿದ ಮಾತು. ನಿಮ್ಮ ಬಗ್ಗೆ ನನಗೆ ಬಹಳ ಗೌರವವಿದೆ. ನಿಮ್ಮ ಆಟದ ಬಹುದೊಡ್ಡ ಅಭಿಮಾನಿ ನಾನು.” ಎಂದು ಹೇಳಿದ್ದಾರೆ.
ಈ ನಡುವೆ ರಾಮ್ ಚರಣ್ ಅವರ ಕ್ರೀಡಾ ಆಕ್ಷನ್ ಸಿನಿಮಾ ‘ಪೆಡ್ಡಿ’ ಚಿತ್ರದ ಟ್ರೇಲರ್ ಮೇ 18ರಂದು ಮುಂಬೈನಲ್ಲಿ ಬಿಡುಗಡೆಯಾಗಿದೆ. 1980ರ ದಶಕದ ಗ್ರಾಮೀಣ ಆಂಧ್ರಪ್ರದೇಶದ ದೃಶ್ಯಗಳನ್ನು ಆಧರಿಸಿದ ಸಿನಿಮಾ ಪೆಡ್ಡಿರಾಜು ಎಂಬ ಕ್ರೀಡಾಪಟುವಿನ ಕತೆಯಿಂದ ಪ್ರೇರೇಪಿತವಾಗಿದೆ.
ಬುಚಿಬಾಬು ಸನಾ ನಿರ್ದೇಶನದ ಸಿನಿಮಾದಲ್ಲಿ ರಾಮ್ ಚರಣ್ ಮತ್ತು ದಿವ್ಯೇಂದ್ರು ನಟಿಸಿದ್ದಾರೆ. ನಾಯಕಿಯಾಗಿ ಜಾಹ್ನವಿ ಕಪೂರ್ ನಟಿಸಿದ್ದಾರೆ. ಶಿವರಾಜ್ ಕುಮಾರ್ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರದಲ್ಲಿದ್ದಾರೆ. 2026 ಜೂನ್ 4ರಂದು ಸಿನಿಮಾ ಬಿಡುಗಡೆಯಾಗಲಿದೆ.






