ಎರಡು ವರ್ಷಗಳ ಬಳಿಕ ಶೇ. 6ರ ಗಡಿ ದಾಟಿದ ಹಣದುಬ್ಬರ; ಮತ್ತೆ ಬಡ್ಡಿದರ ಏರಿಕೆಗೆ ಆರ್ಬಿಐ ಸಿದ್ಧತೆ?

RBI | Photo Credit : PTI
ಹಣದುಬ್ಬರದ ಅಂಕಿ-ಅಂಶವು ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ಶೇ. 6ರ ಗಡಿ ದಾಟಿದೆ ಎಂದು ವರದಿಯಾಗಿದೆ.
ಪ್ರತಿಕೂಲ ಮೂಲ ಪರಿಣಾಮ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಭಾರತದ ಗೃಹಬಳಕೆಯ ಹಣದುಬ್ಬರ ದರವು ಅಕ್ಟೋಬರ್ ತಿಂಗಳಲ್ಲಿ ಸತತ 12ನೇ ತಿಂಗಳು ಏರಿಕೆಯಾಗಿದೆ. ದಿನಬಳಕೆಯ ವಸ್ತುಗಳು ಮತ್ತು ಸೇವೆಗಳ ಬೆಲೆಗಳು ಕಾಲಾನಂತರದಲ್ಲಿ ಹೆಚ್ಚಾಗುವುದನ್ನು ಹಣದುಬ್ಬರ ಎನ್ನುತ್ತಾರೆ. ಇದರಿಂದ ಜನರ ಹಣದ ಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಹಣದುಬ್ಬರದ ಅಂಕಿ-ಅಂಶವು ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ಶೇ. 6ರ ಗಡಿ ದಾಟಿದೆ ಎಂದು ವರದಿಯಾಗಿದೆ.
ಅಂಕಿ-ಅಂಶ ಮತ್ತು ಯೋಜನೆಗಳ ಅನುಷ್ಠಾನ ಸಚಿವಾಲಯವು ಗುರುವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಗ್ರಾಹಕರ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರವು ಸೆಪ್ಟೆಂಬರ್ನಲ್ಲಿದ್ದ ಶೇ. 5.54ರಿಂದ ಕಳೆದ ತಿಂಗಳು ಶೇ. 6.09ಕ್ಕೆ ಏರಿಕೆಯಾಗಿದೆ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಸಾಮಾನ್ಯ ಜನರು ನಿತ್ಯ ಬಳಸುವ ಆಹಾರ, ಬಟ್ಟೆ, ಇಂಧನ, ಮನೆ ಬಾಡಿಗೆ, ಆರೋಗ್ಯ ಮತ್ತು ಶಿಕ್ಷಣದಂತಹ ವಸ್ತುಗಳ ಚಿಲ್ಲರೆ ಬೆಲೆಯಲ್ಲಿನ ಬದಲಾವಣೆಯನ್ನು ಅಳೆಯುವ ಮಾಪನವೇ CPI. ಇದು ಜನಸಾಮಾನ್ಯರ ಜೀವನ ವೆಚ್ಚದ ಮೇಲೆ ನೇರ ಪರಿಣಾಮ ಬೀರುತ್ತದೆ.
ಹಣದುಬ್ಬರ ದರವನ್ನು ಶೇ. 2ರಿಂದ ಶೇ. 6ರ ಮಿತಿಯೊಳಗೆ, ಅಂದರೆ ಸರಾಸರಿ ಶೇ. 4ರ ಮಟ್ಟದಲ್ಲಿ ಕಾಯ್ದುಕೊಳ್ಳುವ ಕಾನೂನುಬದ್ಧ ಜವಾಬ್ದಾರಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹೊಂದಿದೆ. ಆರ್ಥಿಕ ಏರಿಳಿತಗಳ ಕಾರಣದಿಂದಾಗಿ ಅದು ಕನಿಷ್ಠ ಶೇ. 2ಕ್ಕಿಂತ ಕೆಳಗೆ ಹೋಗಬಾರದು ಮತ್ತು ಗರಿಷ್ಠ ಶೇ. 6ಕ್ಕಿಂತ ಮೇಲೆ ಹೋಗಬಾರದು. ಆದರೆ, ಹಣದುಬ್ಬರವು ಶೇ. 4ಕ್ಕಿಂತ ಹೆಚ್ಚಾಗಿ ದಾಖಲಾಗುತ್ತಿರುವುದು ಇದು ಸತತ ಐದನೇ ತಿಂಗಳಾಗಿದೆ. ಅಲ್ಲದೆ, ಅಕ್ಟೋಬರ್ 2024ರ ನಂತರ ಇದೇ ಮೊದಲ ಬಾರಿಗೆ ಹೊಂದಿಕೊಳ್ಳುವ ಹಣದುಬ್ಬರ ಗುರಿಯ (Flexible Inflation Target) ಗರಿಷ್ಠ ಮಿತಿಯಾದ ಶೇ. 6ರ ಗಡಿಯನ್ನು ದಾಟಿದೆ.
ಕಳೆದ ತಿಂಗಳು ಆರ್ಬಿಐ ಹಣಕಾಸು ನೀತಿ ಸಮಿತಿಯು ‘ರೆಪೊ ದರ’ವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿ ಶೇ. 5.5ಕ್ಕೆ ನಿಗದಿಪಡಿಸಿತ್ತು. ಡಿಸೆಂಬರ್ 2ರಿಂದ 4ರವರೆಗೆ ನಡೆಯಲಿರುವ ಸಮಿತಿಯ ಸಭೆಯಲ್ಲಿ ಮತ್ತೆ ಬಡ್ಡಿದರಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅರ್ಥಶಾಸ್ತ್ರಜ್ಞರು ನಿರೀಕ್ಷಿಸುತ್ತಿದ್ದಾರೆ.
ಆರ್ಬಿಐನ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ CPI ಹಣದುಬ್ಬರವು ಸರಾಸರಿ ಶೇ. 6ರಷ್ಟು, ಜನವರಿ-ಮಾರ್ಚ್ 2027ರಲ್ಲಿ ಶೇ. 5.7ರಷ್ಟು ಮತ್ತು ಎಪ್ರಿಲ್-ಜೂನ್ 2027ರಲ್ಲಿ ಶೇ. 5.6ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.
ಆರ್ಥಿಕತೆಯು ಬಲವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಹಣದುಬ್ಬರ ಏರಿಕೆಯಾಗುತ್ತಿರುವುದು ಬಡ್ಡಿದರಗಳನ್ನು ಹೆಚ್ಚಿಸುವಂತೆ ಆರ್ಬಿಐ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿದೆ. ಎಪ್ರಿಲ್-ಜೂನ್ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯು ನಿರೀಕ್ಷೆಗೂ ಮೀರಿ ಶೇ. 7.8ರಷ್ಟು ದಾಖಲಾಗಿತ್ತು. ಜುಲೈ-ಸೆಪ್ಟೆಂಬರ್ ಅವಧಿಯಲ್ಲೂ ಇದೇ ರೀತಿಯ ಬೆಳವಣಿಗೆಯನ್ನು ಅರ್ಥಶಾಸ್ತ್ರಜ್ಞರು ನಿರೀಕ್ಷಿಸುತ್ತಿದ್ದು, ಈ ಅವಧಿಯ ಅಂಕಿ-ಅಂಶಗಳು ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿವೆ.






