ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ರೂಪಾಯಿ ಬಳಕೆ ಹೆಚ್ಚಿಸಲು RBI ಪ್ರಯತ್ನ

PTI
ವಿದೇಶಿ ಹಣಕಾಸು ವರ್ಗಾವಣೆಗೆ ಇರುವ ಹಳೆಯ ವ್ಯವಸ್ಥೆಗಳು ದುಬಾರಿ ಮತ್ತು ವಿಳಂಬವಾಗುವುದರಿಂದ ಪರ್ಯಾಯ ಹುಡುಕಲು ಕೇಂದ್ರೀಯ ಬ್ಯಾಂಕ್ ಗಳು ಪ್ರಯತ್ನಿಸುತ್ತಿವೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಗಡಿಯಾಚೆಗಿನ ವ್ಯಾಪಾರ ಮತ್ತು ಪಾವತಿಗಳಲ್ಲಿ ರೂಪಾಯಿ ಬಳಕೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತಿದೆ. ಅಂತರರಾಷ್ಟ್ರೀಯ ವಹಿವಾಟುಗಳನ್ನು ವೇಗವಾಗಿ ಮತ್ತು ಅಗ್ಗವಾಗಿಸಲು BRICS ದೇಶಗಳೊಂದಿಗೆ ಮಾರ್ಗಗಳ ಕುರಿತು ಚರ್ಚಿಸುತ್ತಿದೆ ಎಂದು RBI ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಮತ್ತು ಗಡಿಯಾಚೆಗಿನ ಪಾವತಿಗಳಿಗೆ ಸಾಮಾನ್ಯವಾಗಿ ಅಮೆರಿಕನ್ ಡಾಲರ್ ಗಳ ಬಳಕೆ ಮಾಡಲಾಗುತ್ತದೆ. ಈ ವಹಿವಾಟಿಗೆ ಸ್ಥಳೀಯ ಕರೆನ್ಸಿಗಳ ಬಳಕೆಯು ರೂಪಾಯಿ ಸೇರಿದಂತೆ ದೇಶೀಯ ಕರೆನ್ಸಿಗಳನ್ನು ಜಾಗತೀಕರಣಗೊಳಿಸುವ ವಿಶಾಲ ಪ್ರಯತ್ನದ ಭಾಗವಾಗಲಿದೆ. ಅಂದರೆ, ಸ್ಥಳೀಯ ಕರೆನ್ಸಿಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಒಪ್ಪಿಕೊಳ್ಳುವ ದೊಡ್ಡ ಕಾರ್ಯತಂತ್ರದ ಭಾಗವಾಗಿ ಈ ಪ್ರಯತ್ನ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಸಂಜಯ್ ಅವರು FICCI–Indian Banks' Association (IBA) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
‘ನಮ್ಮ ಬಳಿ BRICS ಅಡಿಯಲ್ಲಿ ಪಾವತಿಗಳಿಗೆ ಸಂಬಂಧಿಸಿದ ಕಾರ್ಯಪಡೆ ಇದೆ. ವಿಶೇಷವಾಗಿ ಚಿಲ್ಲರೆ ವಹಿವಾಟುಗಳಿಗೆ ವೆಚ್ಚವನ್ನು ಕಡಿಮೆ ಮಾಡಲು ಮತ್ತು ವಹಿವಾಟಿನ ವೇಗವನ್ನು ಸುಧಾರಿಸಲು ಅವಕಾಶವಿರುವುದರಿಂದ ಗಡಿಯಾಚೆಗಿನ ಪಾವತಿಗಳು ಸದಸ್ಯ ರಾಷ್ಟ್ರಗಳಿಗೆ ಆಸಕ್ತಿಯ ಕ್ಷೇತ್ರವಾಗಿದೆ’ ಎಂದು ಅವರು ಹೇಳಿದರು.
ಪಾವತಿಗಳನ್ನು ಬಹುತೇಕ ತಕ್ಷಣವೇ ಹೇಗೆ ಮಾಡಬಹುದು ಎಂಬುದಕ್ಕೆ ಅವರು Unified Payments Interface (UPI) ಅನ್ನು ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ. ‘ಉದಾಹರಣೆಗೆ UPI ಅನ್ನೇ ಗಮನಿಸಿ. ತಕ್ಷಣವೇ ಪಾವತಿ ಸಾಧ್ಯವಾಗುತ್ತಿದೆ. ನಿಮ್ಮ ವಿದೇಶಿ ಹಣ ರವಾನೆಗಳನ್ನು ಪಡೆಯಲು ನೀವು ಕೆಲವು ಗಂಟೆಗಳ ಕಾಲ, ಕೆಲವು ದಿನಗಳವರೆಗೆ ಕಾಯಬೇಕಾಗುತ್ತದೆ. ಹೀಗಾಗಿ ಈ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಬಹುದಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.
ಗಡಿಯಾಚೆಗಿನ ಪಾವತಿಗಳನ್ನು ಸುಧಾರಿಸಲು ಅನೇಕ ಆಯ್ಕೆಗಳನ್ನು ಚರ್ಚಿಸಲಾಗುತ್ತದೆ. ವಿವಿಧ ದೇಶಗಳ ಪಾವತಿ ವ್ಯವಸ್ಥೆಗಳನ್ನು ಸಂಪರ್ಕಿಸುವುದು ಮತ್ತು ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿಗಳ (CBDC) ಸಂಭಾವ್ಯ ಬಳಕೆಯೂ ಇದರಲ್ಲಿ ಸೇರಿದೆ.
ಆದರೆ, ಈ ಪ್ರಸ್ತಾಪಗಳು ಇನ್ನೂ ಚರ್ಚೆಯ ಹಂತದಲ್ಲಿವೆ. ‘ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಸ್ಥಳೀಯ ಕರೆನ್ಸಿಗಳ ಬಳಕೆಯನ್ನು ಹೆಚ್ಚಿಸಲು RBI ಪ್ರಯತ್ನಿಸುತ್ತಿದೆ. ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರವನ್ನು ಸುಗಮಗೊಳಿಸಲು ಭಾರತವು ಈಗಾಗಲೇ ಅನೇಕ ದೇಶಗಳ ಜೊತೆಗೆ ಒಪ್ಪಂದಗಳನ್ನು ಹೊಂದಿದೆ. ಆದರೂ ವಹಿವಾಟುಗಳ ಪ್ರಮಾಣ ತುಲನಾತ್ಮಕವಾಗಿ ಕಡಿಮೆಯಿದೆ. ಇವುಗಳನ್ನು ವಿಸ್ತರಿಸಬೇಕಿದೆ’ ಎಂದು ಅವರು ಹೇಳಿದರು.
ಈ ವಿಸ್ತರಣೆಯ ಪ್ರಯತ್ನದ ಭಾಗವಾಗಿ ಆಮದುದಾರರು ಮತ್ತು ರಫ್ತುದಾರರಲ್ಲಿ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಸ್ಥಳೀಯ ಕರೆನ್ಸಿಗಳನ್ನು ಬಳಸುವ ಪ್ರಯೋಜನಗಳು ಮತ್ತು ಕಾರ್ಯವಿಧಾನಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು RBI ಇತರ ದೇಶಗಳ ಕೇಂದ್ರೀಯ ಬ್ಯಾಂಕ್ ಗಳ ಜೊತೆಗೆ Memorandum of Understanding (ತಿಳುವಳಿಕೆ ಒಪ್ಪಂದ)ಕ್ಕೆ ಬರುತ್ತಿದೆ. RBI ಈವರೆಗೆ UAE, ಮಾರಿಷಸ್, ಮಾಲ್ಡೀವ್ಸ್ ಮತ್ತು ಇಂಡೋನೇಷ್ಯಾ ಜೊತೆಗೆ ಅಂತಹ ವ್ಯವಸ್ಥೆಗಳಿಗೆ ಸಹಿ ಹಾಕಿದೆ. ಅವುಗಳಿಂದ ಪ್ರೋತ್ಸಾಹಕರ ಪ್ರತಿಕ್ರಿಯೆಗಳು ಬಂದಿವೆ. ‘ರೂಪಾಯಿಯನ್ನು ಜಾಗತೀಕರಣಗೊಳಿಸಲು ಮತ್ತು ಗಡಿಯಾಚೆಗಿನ ಪಾವತಿಗಳಿಗೆ ಹಾಗೂ ವ್ಯಾಪಾರಕ್ಕೆ ಸ್ಥಳೀಯ ಕರೆನ್ಸಿಗಳ ಬಳಕೆಯನ್ನು ಉತ್ತೇಜಿಸಲು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.
ಗಡಿಯಾಚೆಗಿನ ವಹಿವಾಟುಗಳನ್ನು ನಿಧಾನ ಮತ್ತು ಹೆಚ್ಚು ದುಬಾರಿಯನ್ನಾಗಿ ಮಾಡುವ ಸಾಂಪ್ರದಾಯಿಕ ಕರೆನ್ಸಿ ಬ್ಯಾಂಕಿಂಗ್ ವ್ಯವಸ್ಥೆಗಳಿಗೆ ಪರ್ಯಾಯವೊಂದನ್ನು ಜಾಗತಿಕವಾಗಿ ಕೇಂದ್ರೀಯ ಬ್ಯಾಂಕ್ ಗಳು ಅನ್ವೇಷಿಸುತ್ತಿರುವ ನಡುವೆ ಈ ಪ್ರಯತ್ನ ನಡೆದಿದೆ.
ಭಾರತದ ಮಟ್ಟಿಗೆ ವ್ಯಾಪಾರದಲ್ಲಿ ರೂಪಾಯಿಯ ವ್ಯಾಪಕ ಬಳಕೆಯು ಅಮೆರಿಕನ್ ಡಾಲರ್ನಂತಹ ಕರೆನ್ಸಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ. ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ರೂಪಾಯಿಯ ಪಾತ್ರ ಬಲವಾಗಲಿದೆ.
ಅವರು ಈ ಪ್ರಯತ್ನದಲ್ಲಿರುವ ಅಪಾಯವನ್ನೂ ಮುಂದಿಟ್ಟಿದ್ದಾರೆ. ‘ಮುಖ್ಯವಾಗಿ ಅನಿಶ್ಚಿತತೆ ಒಂದು ಅಪಾಯ’ ಎಂದೂ ಹೇಳಿದ್ದಾರೆ. ‘ಭೌಗೋಳಿಕ ರಾಜಕೀಯ ಅನಿಶ್ಚಿತತೆ, ವ್ಯಾಪಾರ ಸಂಬಂಧಿತ, ರಾಷ್ಟ್ರನಿರ್ದೇಶಿತ ಅನಿಶ್ಚಿತತೆಗಳು ಇವೆ. ಮತ್ತೊಂದು ಸೈಬರ್ ಅಪಾಯವೂ ಇದೆ’ ಎಂದು ಎರಡು ಅಪಾಯಗಳನ್ನು ಅವರು ಮುಂದಿಟ್ಟಿದ್ದಾರೆ. ಆದರೆ ಭಾರತೀಯ ಬ್ಯಾಂಕಿಂಗ್ ವಲಯ ಈ ಅಪಾಯವನ್ನು ಎದುರಿಸುವಲ್ಲಿ ಬಲಿಷ್ಠವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.






