2026 ಮೇ ತಿಂಗಳಲ್ಲಿ ಆರ್ಬಿಐ ಚಿನ್ನದ ದಾಸ್ತಾನಲ್ಲಿ ಕಡಿಮೆಯಾಗಿದೆ ಎಂಬುದಕ್ಕೆ ಇಲ್ಲಿವೆ ಸಾಕ್ಷ್ಯ: The Wire ವರದಿ

Photo Credit : PTI
ಭಾರತೀಯ ರಿಸರ್ವ್ ಬ್ಯಾಂಕ್ (RBI) 2026 ಮೇ ತಿಂಗಳಲ್ಲಿ ತನ್ನ ಚಿನ್ನದ ದಾಸ್ತಾನನ್ನು ಕಡಿಮೆ ಮಾಡಿದೆ ಎಂದು ದತ್ತಾಂಶ ಆಧಾರಿತ ವಿಶ್ಲೇಷಣೆಗಳು ಸೂಚಿಸಿದ ಬೆನ್ನಲ್ಲೇ ಕೇಂದ್ರ ಬ್ಯಾಂಕಿನ ಸುತ್ತ ವಿವಾದವೊಂದು ಎದ್ದಿದೆ. ಆದರೆ, RBI ಅಧಿಕೃತ ಹೇಳಿಕೆಗಳಲ್ಲಿ ತಾನು ಯಾವುದೇ ಭೌತಿಕ ಚಿನ್ನವನ್ನು ಮಾರಾಟ ಮಾಡಿಲ್ಲ ಎಂದು ಹೇಳಿದೆ. ಈ ಕುರಿತ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ "ಆರ್ಬಿಐ ಚಿನ್ನವನ್ನು ಮಾರಾಟ ಮಾಡಿದೆ ಎಂಬ ವರದಿಗಳು ಮಾಧ್ಯಮಗಳ ಕೆಲವು ವಿಭಾಗಗಳಲ್ಲಿ ಹರಿದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ವರದಿಗಳು ಸಂಪೂರ್ಣವಾಗಿ ಸುಳ್ಳು ಮತ್ತು ತಪ್ಪು ಮಾಹಿತಿಯಿಂದ ಕೂಡಿವೆ ಎಂಬುದನ್ನು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸುತ್ತದೆ. ಆರ್ಬಿಐ ತನ್ನ ಮಾಸಿಕ ಬುಲೆಟಿನ್ನಲ್ಲಿ ಭೌತಿಕ ಚಿನ್ನದ ದಾಸ್ತಾನಿನ ವಿವರಗಳನ್ನು ಬಹಿರಂಗಪಡಿಸುತ್ತದೆ. ಇದರ ಇತ್ತೀಚಿನ ಆವೃತ್ತಿಯು ಆರ್ಬಿಐ ವೆಬ್ಸೈಟ್ನಲ್ಲಿ ಲಭ್ಯವಿದ್ದು, ಇಂದಿನ ದಿನಾಂಕದವರೆಗೆ ಆರ್ಬಿಐ ಬಳಿ ಇರುವ ಒಟ್ಟು ಭೌತಿಕ ಚಿನ್ನದ ದಾಸ್ತಾನು 880.52 ಟನ್ಗಳಷ್ಟೇ ಇದ್ದು, ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ" ಎಂದು ಹೇಳಿದೆ.
ವಾರ ವಾರದ ವಿವರಗಳು, ಬೆಲೆ ಏರಿಳಿತಗಳು ಮತ್ತು ವರದಿಯಾದ ಮೌಲ್ಯಮಾಪನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಒಟ್ಟು ಚಿನ್ನದ ಪ್ರಮಾಣದಲ್ಲಿ (ಟನ್ ಲೆಕ್ಕದಲ್ಲಿ) ಸಲ್ಪ ಮಟ್ಟಿನ ಕಡಿತವಾಗಿರುವುದು ಎದ್ದು ಕಾಣುತ್ತದೆ. ಈ ಇಳಿಕೆಯು ಕರೆನ್ಸಿ ಮೌಲ್ಯ ರಕ್ಷಣೆಯ ತಂತ್ರಗಾರಿಕೆ ಹಾಗೂ ಭಾರತದ ಬಾಹ್ಯ ಆರ್ಥಿಕ ಪರಿಸ್ಥಿತಿಯ ಮೇಲಿರುವ ತೀವ್ರ ಒತ್ತಡ ಎರಡನ್ನೂ ಎತ್ತಿ ತೋರಿಸುತ್ತದೆ ಎಂದು The Wire ವರದಿ ಹೇಳಿದೆ.
ಇದರ ಲೆಕ್ಕಾಚಾರ ಸರಳವಾಗಿದೆ. ಆರ್ಬಿಐ ತನ್ನ ಚಿನ್ನದ ದಾಸ್ತಾನನ್ನು ಭೌತಿಕ ಟನ್ಗಳಲ್ಲಿ ಮತ್ತು ಯುಎಸ್ ಡಾಲರ್ ಮೌಲ್ಯದಲ್ಲಿ ವರದಿ ಮಾಡುತ್ತದೆ. ಅಂದರೆ, ವರದಿಯಾಗುವ ಡಾಲರ್ ಮೌಲ್ಯದ ಏರಿಳಿತಗಳು ಮಾರುಕಟ್ಟೆ ಬೆಲೆಯ ಬದಲಾವಣೆ, ಲೆಕ್ಕಪತ್ರದ ನಿಯಮಗಳು ಅಥವಾ ಭೌತಿಕ ದಾಸ್ತಾನಿನಲ್ಲಿನ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತವೆ. ಎಪ್ರಿಲ್ ಅಂತ್ಯದಿಂದ ಮೇ 22, 2026 ರ ನಡುವಿನ ಅವಧಿಯಲ್ಲಿ, ಆರ್ಬಿಐ ವರದಿ ಮಾಡಿದ ಚಿನ್ನದ ಒಟ್ಟು ಮೌಲ್ಯವು ಸುಮಾರು 120.2 ಬಿಲಿಯನ್ ಡಾಲರ್ನಿಂದ 114.7 ಬಿಲಿಯನ್ ಡಾಲರ್ಗೆ ಕುಸಿದಿದೆ, ಅಂದರೆ ಶೇಕಡಾ 4.5 ರಷ್ಟು ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸರಿಸುಮಾರು ಶೇಕಡಾ 2.9 ರಷ್ಟು ಕುಸಿದಿತ್ತು. ಸ್ಥಿರವಾದ ಶುದ್ಧತೆಯ ಅಂದಾಜಿನ ಆಧಾರದ ಮೇಲೆ ಬೆಲೆಯ ಈ ಪ್ರಭಾವವನ್ನು ಹೊರತುಪಡಿಸಿ ಲೆಕ್ಕ ಹಾಕಿದಾಗ, ಉಳಿದ ವ್ಯತ್ಯಾಸವು ಭೌತಿಕ ಚಿನ್ನದ ಪ್ರಮಾಣದಲ್ಲಿ ಸುಮಾರು 14 ರಿಂದ 15 ಟನ್ಗಳಷ್ಟು ಕಡಿತವಾಗಿರುವುದನ್ನು ಸೂಚಿಸುತ್ತದೆ. ಇದರ ಪ್ರಕಾರ, ಮೇ 22 ರ ವೇಳೆಗೆ ಆರ್ಬಿಐನಲ್ಲಿ ಅಂದಾಜು ಚಿನ್ನದ ದಾಸ್ತಾನು ಸುಮಾರು 880.5 ಟನ್ನಿಂದ ಸರಿಸುಮಾರು 866 ಟನ್ಗೆ ಇಳಿಕೆಯಾಗಿದೆ. ಈ ಪ್ರಮಾಣವು 83 ರಿಂದ 88 ಟನ್ ಚಿನ್ನ ಮಾರಾಟವಾಗಿದೆ ಎಂದು ಬಿಂಬಿಸಿದ್ದ ಕೆಲವು ಮಾಧ್ಯಮ ವರದಿಗಳಿಗಿಂತ (ಬ್ಲೂಮ್ಬರ್ಗ್) ತೀರಾ ಕಡಿಮೆಯಾಗಿದೆ. ಆರ್ಬಿಐ ಐತಿಹಾಸಿಕವಾಗಿ ಕಾಯ್ದುಕೊಂಡು ಬಂದಿದ್ದ ದೀರ್ಘಕಾಲದ ಚಿನ್ನದ ದಾಸ್ತಾನಿನ ಸ್ಥಿರತೆಗೆ ಹೋಲಿಸಿದರೆ ಇದು ಗಮನಾರ್ಹವಾದ ಬದಲಾವಣೆಯಾಗಿದೆ.
ಅಧಿಕೃತ ನಿರಾಕರಣೆಗಳು ಮತ್ತು ಈ ಲೆಕ್ಕಾಚಾರಗಳ ನಡುವಿನ ವ್ಯತ್ಯಾಸವನ್ನು ಸರಿದೂಗಿಸಲು ಮೌಲ್ಯಮಾಪನದ ತಾಂತ್ರಿಕ ಕಾರ್ಯವಿಧಾನಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಆರ್ಬಿಐ ನಿಯತಕಾಲಿಕವಾಗಿ ಪ್ರಕಟಿಸುವ ವರದಿಗಳಲ್ಲಿ, ಬೇರೆ ಬೇರೆ ತಿಂಗಳುಗಳ ನಡುವೆ ಚಿನ್ನದ ಶುದ್ಧತೆಯ ಅಂದಾಜಿನಲ್ಲಿ ವಿಚಿತ್ರವಾದ ಏರಿಳಿತಗಳು ಕಂಡುಬಂದಿವೆ. ಭೌತಿಕ ದೃಷ್ಟಿಕೋನದಿಂದ ಇಂತಹ ಬದಲಾವಣೆಗಳು ಅಸಾಧ್ಯವಾಗಿರುವುದರಿಂದ, ಇವು ಕೇವಲ ಲೆಕ್ಕಪತ್ರ ನಿರ್ವಹಣೆ ಅಥವಾ ಮೌಲ್ಯಮಾಪನದ ವಿಶಿಷ್ಟ ನಿಯಮಗಳನ್ನು ಪ್ರತಿಬಿಂಬಿಸುತ್ತವೆ. ಸ್ಥಿರವಾದ "ಕ್ಯಾರೆಟ್" ಮಾನದಂಡವನ್ನು ಅನ್ವಯಿಸಿ ಈ ವ್ಯತ್ಯಾಸಗಳನ್ನು ಸರಿಪಡಿಸಿದಾಗ ಒಂದು ಸ್ಪಷ್ಟ ಚಿತ್ರಣ ಸಿಗುತ್ತದೆ.
ಮೇ ತಿಂಗಳಲ್ಲಿ ಕೇಂದ್ರ ಬ್ಯಾಂಕಿನ ಬ್ಯಾಲೆನ್ಸ್ ಶೀಟ್ನಿಂದ ಸ್ವಲ್ಪ ಭೌತಿಕ ಚಿನ್ನ ಹೊರಹೋಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೆ, ಸರ್ಕಾರ ಮತ್ತು ಆರ್ಬಿಐ ತಮ್ಮ ಭೌತಿಕ ಚಿನ್ನದ ದಾಸ್ತಾನು 880.5 ಟನ್ಗಳಷ್ಟೇ ಇದ್ದು, ಇದರಲ್ಲಿ ಯಾವುದೇ "ಬದಲಾವಣೆ ಆಗಿಲ್ಲ" ಎಂದು ಒತ್ತಿ ಹೇಳಿವೆ. ಅಷ್ಟೇ ಅಲ್ಲದೆ, ಮೇ 22 ರ ವೇಳೆಗೆ ಒಟ್ಟು ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ ಚಿನ್ನದ ಪಾಲು ವಾಸ್ತವವಾಗಿ ಶೇಕಡಾ 16.85 ಕ್ಕೆ ಏರಿಕೆಯಾಗಿದೆ ಎಂದು ಅವು ಪ್ರತಿಪಾದಿಸಿವೆ. ವಿದೇಶಿ ಕರೆನ್ಸಿ ಆಸ್ತಿಗಳ ಮೌಲ್ಯವು ಚಿನ್ನದ ಮೌಲ್ಯಕ್ಕಿಂತ ವೇಗವಾಗಿ ಕುಸಿದಿದ್ದರೆ, ಡಾಲರ್ ಮೌಲ್ಯದ ದೃಷ್ಟಿಯಿಂದ ಈ ವಾದವು ತಾಂತ್ರಿಕವಾಗಿ ನಿಜವಿರಬಹುದು. ಇಷ್ಟಾದರೂ, ಒಟ್ಟು ಟನ್ ಪ್ರಮಾಣದ ಆಧಾರದ ಮೇಲೆ ಮಾಡಿದ ಉಲ್ಟಾ ಲೆಕ್ಕಾಚಾರವು ಭಾರತೀಯ ರಿಸರ್ವ್ ಬ್ಯಾಂಕ್ ಮೇ ತಿಂಗಳ ಪರಿಸ್ಥಿತಿಯನ್ನು ವಿವರಿಸಲು ಎಪ್ರಿಲ್ 24 ರ (ಕೊನೆಯದಾಗಿ ವರದಿಯಾದ) ದತ್ತಾಂಶವನ್ನು ಬಳಸುತ್ತಿದೆ ಮತ್ತು ರೂಪಾಯಿ ಮೌಲ್ಯ ರಕ್ಷಣೆಯ ಭಾಗವಾಗಿ ಆರ್ಬಿಐ ಚಿನ್ನವನ್ನು ಬಳಸಿಕೊಂಡಿದೆ ಎಂಬುದನ್ನು ಸೂಚಿಸುತ್ತದೆ.
ಆರ್ಬಿಐ ಹೀಗೆ ಮಾಡಲು ಕಾರಣವೇನು?
ಇದಕ್ಕೆ ಅತ್ಯಂತ ತಾರ್ಕಿಕವಾಗಿ ಕಾಣುವ ಪ್ರಮುಖ ಕಾರಣವೆಂದರೆ, ತನ್ನಲ್ಲಿದ್ದ ವಿದೇಶಿ ಕರೆನ್ಸಿಯನ್ನು ಸಂರಕ್ಷಿಸಿಕೊಳ್ಳುವುದು. ಚಿನ್ನವನ್ನು ಹೊರತುಪಡಿಸಿ ಭಾರತದ ವಿದೇಶಿ ಕರೆನ್ಸಿ ಆಸ್ತಿಗಳು ಈ ಹಿಂದಿನ ಗರಿಷ್ಠ ಮಟ್ಟದಿಂದ ಇಳಿಕೆಯ ಹಾದಿಯಲ್ಲಿದ್ದು, ಮೇ ಅಂತ್ಯದ ವೇಳೆಗೆ ಸುಮಾರು 543 ಬಿಲಿಯನ್ ಡಾಲರ್ ಆಸುಪಾಸಿನಲ್ಲಿದ್ದವು. ಇದೇ ಅವಧಿಯಲ್ಲಿ ದೇಶದ ಆರ್ಥಿಕತೆಯ ಮೇಲಿನ ಬಾಹ್ಯ ಒತ್ತಡಗಳೂ ಹೆಚ್ಚಾಗಿದ್ದವು. ಜಾಗತಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ಹೆಚ್ಚುತ್ತಿರುವ ತೈಲ ಬೆಲೆಗಳು, ವಿಸ್ತರಿಸುತ್ತಿರುವ ವ್ಯಾಪಾರ ಕೊರತೆ ಮತ್ತು ದೇಶಿ ಮಾರುಕಟ್ಟೆಯಿಂದ ವಿದೇಶಿ ಬಂಡವಾಳ ಹೂಡಿಕೆ ನಿರಂತರವಾಗಿ ಹೊರಹೋಗುತ್ತಿರುವುದು ರೂಪಾಯಿ ಮೌಲ್ಯದ ಮೇಲೆ ನಿರಂತರವಾಗಿ ಇಳಿಕೆಯ ಒತ್ತಡವನ್ನು ಹೇರುತ್ತಿದ್ದವು. ಪರಿಣಾಮವಾಗಿ ರೂಪಾಯಿ ಮೌಲ್ಯವು ಪ್ರತಿ ಡಾಲರ್ಗೆ 100 ರೂಪಾಯಿಯ ಗಡಿಗೆ ಅತ್ಯಂತ ಅಪಾಯಕಾರಿಯಾಗಿ ಬಂದು ತಲುಪಿತ್ತು.
ಇಂತಹ ಪರಿಸ್ಥಿತಿಯಲ್ಲಿ ಚಿನ್ನವನ್ನು ಮಾರಾಟ ಮಾಡುವುದು ಅಥವಾ ಅದನ್ನು ಇತರ ರೂಪದಲ್ಲಿ ಬಳಸಿಕೊಳ್ಳುವುದು, ಆರ್ಬಿಐಗೆ ತನ್ನಲ್ಲಿದ್ದ ಹೆಚ್ಚು ಲಿಕ್ವಿಡ್ ಡಾಲರ್ ಆಸ್ತಿಗಳನ್ನು (ಯಾವುದೇ ಸಮಯದಲ್ಲಾದರೂ ಅತಿ ವೇಗವಾಗಿ ಹಣವಾಗಿ ಪರಿವರ್ತಿಸಬಹುದಾದವು) ಉಳಿಸಿಕೊಂಡೇ ರೂಪಾಯಿ ಮೌಲ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದು ವಿದೇಶಿ ಕರೆನ್ಸಿ ಬಫರ್ ಮೇಲಿನ ಮಾರುಕಟ್ಟೆಯ ವಿಶ್ವಾಸವನ್ನು ಹಾಗೇ ಕಾಯ್ದುಕೊಳ್ಳಲು ನೆರವಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಭವಿಷ್ಯದ ತುರ್ತು ಪರಿಸ್ಥಿತಿಗಳಿಗಾಗಿ ಕೇಂದ್ರ ಬ್ಯಾಂಕು ತನ್ನ ಪ್ರಮುಖ "ಹಣದ ಬಲ"ವನ್ನು ಕರಗದಂತೆ ಕಾಯ್ದಿರಿಸಲು, ಚಿನ್ನವನ್ನು ಮಾರುಕಟ್ಟೆಯ ಹಸ್ತಕ್ಷೇಪದ ಅಸ್ತ್ರವಾಗಿ ಪರಿವರ್ತಿಸಿಕೊಂಡಿರುವಂತೆ ಇದು ಕಾಣುತ್ತಿದೆ.
ಇಲ್ಲಿ ಪರ್ಯಾಯ ವ್ಯಾಖ್ಯಾನಗಳು ಮತ್ತು ಕೆಲವು ಪ್ರಮುಖ ಎಚ್ಚರಿಕೆಗಳನ್ನು ಗಮನಿಸಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋಲಿಸಿದರೆ, ಈ ಲೆಕ್ಕಾಚಾರದಿಂದ ಕಂಡುಬಂದಿರುವ ಚಿನ್ನದ ಇಳಿಕೆಯ ಪ್ರಮಾಣವು ತೀರಾ ಕಡಿಮೆ ಇದೆ. ಇದು ಬ್ಲೂಮ್ಬರ್ಗ್ ಸಂಸ್ಥೆಯು ಈ ಹಿಂದೆ ವರದಿ ಮಾಡಿದ್ದ ಸುಮಾರು 12 ಬಿಲಿಯನ್ ಡಾಲರ್ ಮೌಲ್ಯದ ಚಿನ್ನದ ಮಾರಾಟದ ಅಂದಾಜಿಗಿಂತ ಅತ್ಯಂತ ಕೆಳಗಿದೆ. ಆರ್ಬಿಐನ ಸ್ಪಷ್ಟ ಹಾಗೂ ಬಲವಾದ ನಿರಾಕರಣೆಗಳು ಮತ್ತು ಸರ್ಕಾರದ ಸಾರ್ವಜನಿಕ ಹೇಳಿಕೆಗಳು, ಹಣಕಾಸು ನೀತಿಯ ನಿಯಮಗಳು ಹಾಗೂ ಮೀಸಲು ನಿಧಿಯ ನಿರ್ವಹಣೆಗೆ ಸಂಬಂಧಿಸಿದ ಸಾರ್ವಜನಿಕರ ಗ್ರಹಿಕೆಗಳ ಬಗ್ಗೆ ಅವರಿಗಿರುವ ಸೂಕ್ಷ್ಮತೆಯನ್ನು ಎತ್ತಿ ತೋರಿಸುತ್ತವೆ. ಭಾರತಕ್ಕೆ ಮೊದಲಿನಿಂದಲೂ ಚಿನ್ನ ಮಾರಾಟ ಮಾಡುವುದರ ಬಗ್ಗೆ ತೀವ್ರ ವಿರೋಧವಿದೆ. ಐತಿಹಾಸಿಕವಾಗಿಯೂ ಆರ್ಬಿಐ ಚಿನ್ನದ ದಾಸ್ತಾನಿನ ವಿಷಯದಲ್ಲಿ ಅತ್ಯಂತ ಸಂಪ್ರದಾಯಬದ್ಧ ನಿಲುವನ್ನು ಹೊಂದಿದ್ದು, ತೀರಾ ವಿಪರೀತ ಪರಿಸ್ಥಿತಿಗಳನ್ನು ಹೊರತುಪಡಿಸಿ ಚಿನ್ನದ ಪ್ರಮಾಣವನ್ನು ಮುಟ್ಟಲು ಇಷ್ಟಪಡುವುದಿಲ್ಲ. ಭಾರತದ ವಿದೇಶಿ ಪಾವತಿ ಬಿಕ್ಕಟ್ಟಿನ ಇತಿಹಾಸದಲ್ಲಿ ಚಿನ್ನವು ಪ್ರಮುಖ ಪಾತ್ರ ವಹಿಸಿದ್ದು ಕೊನೆಯ ಬಾರಿಗೆ 1991 ರಲ್ಲಿ. ಆಗಲೂ ಚಿನ್ನವನ್ನು ಮಾರಾಟ ಮಾಡುವ ಬದಲು, ಅದನ್ನು ಅಡವಿಡುವುದು ಅನಿವಾರ್ಯವಾಗಿತ್ತು.
ಇಷ್ಟಾದರೂ,ಅಲ್ಪ ಪ್ರಮಾಣದ ಮಾರಾಟವೂ ಕೂಡ ಸಾಂಕೇತಿಕವಾಗಿ ಅತ್ಯಂತ ಮಹತ್ವದ್ದಾಗಿರುತ್ತದೆ. ವಿದೇಶಿ ವಿನಿಮಯ ಮೀಸಲು ನಿಧಿಯು ಕೇವಲ ಅಂಕಿ-ಅಂಶಗಳ ಆಧಾರದ ಮೇಲೆ ಮಾತ್ರವಲ್ಲದೆ, ಮಾರುಕಟ್ಟೆಯ ಮನೋವಿಜ್ಞಾನ ಮತ್ತು ಹೊರಗಿನ ನೋಟದ ಮೇಲೂ ಅಷ್ಟೇ ಪ್ರಭಾವ ಬೀರುತ್ತದೆ. ರೂಪಾಯಿ ಮೌಲ್ಯವನ್ನು ಸ್ಥಿರಗೊಳಿಸಲು ಆರ್ಬಿಐ ಡಾಲರ್ ಅಲ್ಲದ ಇತರ ಆಸ್ತಿಗಳನ್ನು (ಚಿನ್ನ) ಬಳಸಲು ಸಿದ್ಧವಿದೆ ಎಂಬ ಸಂಕೇತ ರವಾನೆಯಾದರೆ, ಚಿನ್ನದ ದಾಸ್ತಾನನ್ನು ಶಾಶ್ವತ ಮತ್ತು ಮುಟ್ಟಲಾಗದ ಸುರಕ್ಷಿತ ನಿಧಿ ಎಂದು ಭಾವಿಸುವ ಹೂಡಿಕೆದಾರರಲ್ಲಿ ಇದು ಆತಂಕ ಮೂಡಿಸಬಹುದು. ನೀತಿ ನಿರೂಪಕರಿಗೆ, ಪ್ರಸ್ತುತ ಕರೆನ್ಸಿ ಮೌಲ್ಯವನ್ನು ಸ್ಥಿರವಾಗಿಡುವುದು ಎಷ್ಟು ಮುಖ್ಯವೋ, ಇದರಿಂದ ಭವಿಷ್ಯದಲ್ಲಿ ಮೀಸಲು ನಿಧಿಯ ಸ್ವರೂಪ ಮತ್ತು ಬ್ಯಾಂಕಿನ ವಿಶ್ವಾಸಾರ್ಹತೆಯ ಮೇಲಾಗುವ ದೀರ್ಘಕಾಲದ ಪರಿಣಾಮಗಳನ್ನು ತೂಗಿ ನೋಡುವುದು ಅಷ್ಟೇ ಕಠಿಣವಾದ ಸವಾಲಾಗಿರುತ್ತದೆ.
ಮುಂದಿನ ದಿನಗಳಲ್ಲಿ ನಮ್ಮ ಮುಂದೆ ಪ್ರಮುಖವಾಗಿ ಎರಡು ಪ್ರಶ್ನೆಗಳಿವೆ. ಮೊದಲನೆಯದಾಗಿ, ದೇಶದ ಮೇಲಿನ ಆರ್ಥಿಕ ಒತ್ತಡಗಳು ಕಡಿಮೆಯಾದಂತೆ ಆರ್ಬಿಐ ಚಿನ್ನದ ಮೇಲೆಯೇ ಅವಲಂಬಿತವಾಗಿರುತ್ತದೆಯೇ ಅಥವಾ ಮರಳಿ ಸಾಂಪ್ರದಾಯಿಕ ವಿದೇಶಿ ವಿನಿಮಯ ಮಾರುಕಟ್ಟೆಯ ಹಸ್ತಕ್ಷೇಪಕ್ಕೆ ತಿರುಗುತ್ತದೆಯೇ? ಎರಡನೆಯದಾಗಿ, ಇಂತಹ ಗೊಂದಲಗಳನ್ನು ನಿವಾರಿಸಲು ಮೌಲ್ಯಮಾಪನ ಪದ್ಧತಿಗಳಲ್ಲಿ ಪಾರದರ್ಶಕತೆಯನ್ನು ಮತ್ತಷ್ಟು ಹೆಚ್ಚಿಸಬೇಕೇ? ಎಂಬುದು. ಮಾರುಕಟ್ಟೆ ಮತ್ತು ಆರ್ಥಿಕ ವಿಶ್ಲೇಷಕರಿಗೆ ಈ ಇಡೀ ವಿದ್ಯಮಾನವು ಒಂದು ವಿಷಯವನ್ನು ಸ್ಪಷ್ಟಪಡಿಸಿದೆ. ಅದೇನೆಂದರೆ ಕೇವಲ ಮೇಲ್ನೋಟಕ್ಕೆ ಕಾಣುವ ಡಾಲರ್ ಮೌಲ್ಯವನ್ನು ನಂಬುವ ಬದಲು, ಮೀಸಲು ನಿಧಿಯ ವರದಿಗಳಲ್ಲಿನ ಒಟ್ಟು ಟನ್ ಪ್ರಮಾಣದ ಆಧಾರದ ಮೇಲೆ ಸೂಕ್ಷ್ಮ ವಿಶ್ಲೇಷಣೆ ನಡೆಸುವುದು ಎಷ್ಟು ಮುಖ್ಯ ಎಂಬುದನ್ನು ಇದು ಸಾಬೀತುಪಡಿಸಿದೆ.
ಒಟ್ಟಿನಲ್ಲಿ ದತ್ತಾಂಶ ಆಧಾರಿತ ಉಲ್ಟಾ ಲೆಕ್ಕಾಚಾರವು 2026 ಮೇ ತಿಂಲ್ಲಿ ಆರ್ಬಿಐನ ಚಿನ್ನದ ದಾಸ್ತಾನಿನಲ್ಲಿ ಸೀಮಿತ ಪ್ರಮಾಣದ ಇಳಿಕೆಯಾಗಿರುವುದು ನಿಜ ಎಂಬುದನ್ನು ಸೂಚಿಸುತ್ತದೆ. ಇದು ಯಾವುದೇ ಆತಂಕದ ಮಾರಾಟವಲ್ಲ ಬದಲಿಗೆ ತನ್ನಲ್ಲಿದ್ದ ಲಿಕ್ವಿಡ್ ಡಾಲರ್ ಮೀಸಲನ್ನು ಉಳಿಸಿಕೊಂಡೇ ರೂಪಾಯಿ ಮೌಲ್ಯವನ್ನು ರಕ್ಷಿಸಲು ಕೈಕೊಂಡ ಉದ್ದೇಶಪೂರ್ವಕ ತಂತ್ರಗಾರಿಕೆಯಾಗಿದೆ. ಆದರೆ ಇದರ ಪ್ರಾಮುಖ್ಯತೆ ಕೇವಲ ಟನ್ಗಳ ಲೆಕ್ಕಾಚಾರವನ್ನು ಮೀರಿದ್ದಾಗಿದೆ. ಮಾರುಕಟ್ಟೆಯ ಹಸ್ತಕ್ಷೇಪಕ್ಕಾಗಿ ಚಿನ್ನವನ್ನು ಬಳಸಿಕೊಳ್ಳುತ್ತಿರುವುದು ದೇಶದ ಆರ್ಥಿಕತೆಯು ಒತ್ತಡದಲ್ಲಿದೆ ಎಂಬುದನ್ನು ಬಹಿರಂಗಪಡಿಸುತ್ತದೆ. ಜೊತೆಗೆ, ಮಾರುಕಟ್ಟೆಯ ವಿಶ್ವಾಸವನ್ನು ಉಳಿಸಿಕೊಳ್ಳಲು ಮೀಸಲು ನಿಧಿಯ ಕಾರ್ಯಾಚರಣೆಗಳ ಕುರಿತು ಮತ್ತಷ್ಟು ಸ್ಪಷ್ಟವಾದ ಸಂವಹನದ ಅಗತ್ಯವಿದೆ ಎಂಬುದನ್ನು ಇದು ಎತ್ತಿ ತೋರಿಸುತ್ತದೆ.






