ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆ : ಹಣಕಾಸಿನ ವಹಿವಾಟುಗಳ ಹಿಂದಿನ ಹಲವು ರಹಸ್ಯಗಳು ದೋಷಾರೋಪ ಪಟ್ಟಿಯಲ್ಲಿ ಬಯಲು

ಸಾಂದರ್ಭಿಕ ಚಿತ್ರ (AI)
ಬೆಂಗಳೂರು : ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದ ಕೆಲ ಅಭ್ಯರ್ಥಿಗಳು ಮತ್ತು ಅವರ ಪೋಷಕರು ನೇರವಾಗಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸದಲ್ಲಿಯೇ ಭೇಟಿಯಾಗಿದ್ದರು. ಅವರ ಸೂಚನೆಯಂತೆ ಹೋಟೆಲ್ ಕೊಠಡಿಯಲ್ಲಿ ಮಾತುಕತೆ ನಡೆದಿತ್ತು. ಆ ನಂತರ ಶಿವಶಂಕರಪ್ಪ ಸಾಹುಕಾರ್ ಅವರ ಕಡೆಯವನು ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯೋರ್ವ, ಅಂಗೈ ಗಾತ್ರದ ಎರಡು ಚೀಟಿಗಳಲ್ಲಿ ತಲಾ 10 ಸರಿಯಾದ ಉತ್ತರಗಳ ಸಾಲುಗಳನ್ನು ನೀಡಿದ್ದ.!
ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ವಿವಿಧ ಸ್ವರೂಪದ ಅಕ್ರಮ ಮತ್ತು ಹಣಕಾಸಿನ ವಹಿವಾಟುಗಳ ಹಿಂದಿನ ಹಲವು ರಹಸ್ಯಗಳ ಸರಮಾಲೆಯನ್ನು ಬಯಲು ಮಾಡಿದೆ. ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯ ಪ್ರತಿಯು "the-file.in"ಗೆ ಲಭ್ಯವಾಗಿದೆ.
ಕೆಪಿಎಸ್ಸಿ 2026ರ ಜನವರಿ 8ರಂದು ನಡೆಸಿದ್ದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದ ಡಾ. ವಿನುತಾ ಮಲ್ಲಪ್ಪ ಹಿತ್ತಲಮನಿ ಅವರು ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ಮುಂದೆ ನೀಡಿರುವ ಹೇಳಿಕೆಯು ಕುತೂಹಲಕರ ಸಂಗತಿಗಳನ್ನು ಅನಾವರಣ ಮಾಡಿದೆ.
ಸಾಹುಕಾರ್ ನಿವಾಸದಲ್ಲಿ ನೇರ ಭೇಟಿ: ಡಾ.ವಿನುತಾ ಮಲ್ಲಪ್ಪಹಿತ್ತಲಮನಿ ಅವರು ಗೋಕಾಕ್ನ ಸರಕಾರಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಪಶುವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ವಾರ್ಷಿಕ ಆದಾಯ ಸುಮಾರು 6ರಿಂದ7 ಲಕ್ಷ ರೂ.ಗಳಾಗಿದೆ. ಅವರು ಈ ಹಿಂದೆ ಡಿಸೆಂಬರ್ 2024ರಲ್ಲಿ ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ಹಾಜರಾಗಿದ್ದರು, ಆದರೆ ಅರ್ಹತೆ ಪಡೆಯಲು ವಿಫಲರಾಗಿದ್ದರು. ಆದರೆ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಗೆ ಹಾಜರಾಗಿ ಆಯ್ಕೆಯಾಗಿದ್ದರು. ಪಶುವೈದ್ಯಾಧಿಕಾರಿಗಳ ಪರೀಕ್ಷೆಯಲ್ಲಿ 600 ಅಂಕಗಳಿಗೆ 486.75 ಅಂಕಗಳನ್ನು ಗಳಿಸಿದ್ದರು (KPSC ನೋಂದಣಿ ಸಂಖ್ಯೆ: 241418058).
ವಿನುತಾ ಮತ್ತು ಅವರ ತಂದೆ ಬೆಂಗಳೂರಿಗೆ ಬಂದು ಯಲಹಂಕದ ಹೋಟೆಲ್ ಸಿಲ್ವರ್ ಚೈಮ್ಸ್ ನಲ್ಲಿ ತಂಗಿದ್ದರು. ಅವರ ತಂದೆ 2026ರ ಜನವರಿ 6, 7 ಮತ್ತು 8ರಂದು ಬೆಳಗ್ಗೆ, ಎಂ.ಎಸ್. ರಾಮಯ್ಯ ಆಸ್ಪತ್ರೆಯ ಸಮೀಪದ ಬಿಇಎಲ್ ರಸ್ತೆಯಲ್ಲಿರುವ ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸದಲ್ಲಿ ಅವರನ್ನು ಭೇಟಿಯಾಗಿದ್ದರು.
ಶಿವಶಂಕರಪ್ಪ ಸಾಹುಕಾರ್ ಅವರು ಡಾ ವಿನುತಾ ಮಲ್ಲಪ್ಪ ಹಿತ್ತಲಮನಿ ಅವರ ತಂದೆಯ ಬಳಿ ಕಾರಿನ ನೋಂದಣಿ ಸಂಖ್ಯೆಯನ್ನು ಕೇಳಿದ್ದರು. ರಾತ್ರಿ ಸುಮಾರು 9:30 ಗಂಟೆಗೆ ನ್ಯೂ ಬಿಇಎಲ್ ರಸ್ತೆಯ ಡೊಮಿನೋಸ್ ಪಿಜ್ಜಾ ಸಮೀಪಕ್ಕೆ ಬರುವಂತೆ ಸೂಚಿಸಿದ್ದರು. ಅದರಂತೆ ಅವರ ತಂದೆ, ಸ್ನೇಹಿತರೊಬ್ಬರಿಂದ ಕಾರನ್ನು ವ್ಯವಸ್ಥೆ ಮಾಡಿಕೊಂಡು, ಅದರ ಸಂಖ್ಯೆಯನ್ನು ಖುದ್ದಾಗಿ ಅವರಿಗೆ ತಿಳಿಸಿದ್ದರು. 2026ರ ಜನವರಿ 8ರಂದು ರಾತ್ರಿ ಸುಮಾರು 9:30 ಗಂಟೆಗೆ, 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ಆ ಸ್ಥಳಕ್ಕೆ ಬಂದು, ತಾನು ಶಿವಶಂಕರಪ್ಪ ಸಾಹುಕಾರ್ ಅವರ ಕಡೆಯವನು ಎಂದು ಪರಿಚಯಿಸಿಕೊಂಡಿದ್ದ. ಅಲ್ಲದೇ ಅವರನ್ನು ಹೋಟೆಲ್ ಸಿಲ್ವರ್ ಚೈಮ್ಸ್ಗೆ ಕರೆದೊಯ್ದಿದ್ದ ಎಂದು ವಿನುತಾ ಮಲ್ಲಪ್ಪ ಹಿತ್ತಲಮನಿ ಅವರು ಹೇಳಿಕೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಅಂಗೈ ಗಾತ್ರದ ಎರಡು ಚೀಟಿಯಲ್ಲಿದ್ದವು ಉತ್ತರಗಳ ಸಾಲು: ಆತ ‘ಹೋಟೆಲ್ ಕೊಠಡಿಯಲ್ಲಿ ಆತ ಅಂಗೈ ಗಾತ್ರದ ಎರಡು ಚೀಟಿಗಳನ್ನು ಹೊರತೆಗೆದಿದ್ದ. ಅವುಗಳಲ್ಲಿ ಒಂದು ಸಾಮಾನ್ಯ ಪತ್ರಿಕೆಗೆ ಮತ್ತು ಮತ್ತೊಂದು ನಿರ್ದಿಷ್ಟ ವಿಷಯದ ಪತ್ರಿಕೆಗೆ ಸಂಬಂಧಿಸಿದ್ದಾಗಿತ್ತು. ಪ್ರತಿಯೊಂದು ಚೀಟಿಯಲ್ಲೂ ತಲಾ 10 ಸರಿಯಾದ ಉತ್ತರ ಆಯ್ಕೆಗಳನ್ನು ಹೊಂದಿರುವ 8 ಸಾಲುಗಳಿದ್ದವು (ಪ್ರತಿ ಪತ್ರಿಕೆಗೆ 80 ಉತ್ತರಗಳು). ಆತ ಸಾಲುಗಳ ಪ್ರಕಾರ ಉತ್ತರಗಳನ್ನು ಕಂಠಪಾಠ ಮಾಡಿಸಿದ್ದನು. 09/01/2026ರ ಬೆಳಗಿನ ಜಾವ ಸುಮಾರು 2:30 ಗಂಟೆಯವರೆಗೆ ಆತ ಅವರೊಂದಿಗೇ ಇದ್ದ,’ ಎಂದು ವಿನುತಾ ಮಲ್ಲಪ್ಪ ಹಿತ್ತಲಮನಿ ಅಂದಿನ ಘಟನೆಯನ್ನು ತನಿಖಾಧಿಕಾರಿ ಮುಂದೆ ವಿವರಿಸಿರುವುದು ತಿಳಿದು ಬಂದಿದೆ.
ಡಾ.ವಿನುತಾ ಮಲ್ಲಪ್ಪ ಹಿತ್ತಲಮನಿ ಅವರ ಹೇಳಿಕೆಯಿಂದ ಅವರ OMR ಉತ್ತರಗಳು ಕೆಪಿಎಸ್ಸಿ ಆರಂಭಿಕ ಉತ್ತರಗಳಿಗೆ ಹೊಂದಿಕೆಯಾಗಿವೆ ಎಂದು ಜಾರಿ ನಿರ್ದೇಶನಾಲಯವು ದೋಷಾರೋಪ ಪಟ್ಟಿಯಲ್ಲಿ ವಿವರಿಸಿದೆ. ನಂತರ ಪರಿಷ್ಕರಿಸಲಾದ ಪ್ರಶ್ನೆಗಳಿಗೂ ಅವರ ಉತ್ತರಗಳು ಹೊಂದಿಕೆಯಾಗಿರುವುದು ಕಂಡುಬಂದಿದೆ. ಬಸವರಾಜ್ ಕನ್ನಾಳೆ ಅವರ ಮೂಲಕ ಸೋರಿಕೆಯಾದ ಪ್ರಶ್ನೆಪತ್ರಿಕೆ ಪಡೆದಿದ್ದ ಡಾ. ಕಿರಣ್ ಗೌಡ ಬಿ.ಎಸ್. ಅವರ ಒಎಂಆರ್ ಉತ್ತರ ಪತ್ರಿಕೆಗಳಲ್ಲಿಯೂ ಇದೇ ಮಾದರಿ ಕಂಡುಬಂದಿದೆ. ಇದರಿಂದ ಪರೀಕ್ಷೆಗೆ ಮುನ್ನವೇ ಕೀ ಉತ್ತರಗಳು ಕೀ ಕೆಪಿಎಸ್ಸಿ ಒಳಗಿನಿಂದಲೇ
ಸೋರಿಕೆಯಾಗಿವೆ. ಒಂದಕ್ಕಿಂತ ಹೆಚ್ಚು ಮಾರ್ಗಗಳ ಮೂಲಕ ಅಭ್ಯರ್ಥಿಗಳಿಗೆ ವಿತರಿಸಲಾಗಿದೆ ಎಂಬುದು ಸೂಚಿಸುತ್ತದೆ. ಹಣ ಪಾವತಿಯ ಬಗ್ಗೆ ತಮಗೆ ತಿಳಿದಿಲ್ಲವೆಂದು ಅವರು ನಿರಾಕರಿಸಿದ್ದರೂ, ಅವರ ತಂದೆ ವ್ಯವಸ್ಥೆ ಮಾಡಿದ್ದ ಅಕ್ರಮ ಹಣದ ಪ್ರತಿಫಲವಾಗಿ ಅವರಿಗೆ ಉತ್ತರ ಕೀಗಳನ್ನು ಒದಗಿಸಲಾಗಿದೆ ಎಂಬುದನ್ನು ಈ ಸಂಗತಿಗಳು ಸ್ಪಷ್ಟವಾಗಿ ಸೂಚಿಸುತ್ತವೆ ಎಂದು ಜಾರಿ ನಿರ್ದೇಶನಾಲಯವು ಹೇಳಿದೆ.






