ಕೊಲೆ ಅಪರಾಧಿಗೆ ರಿಲೀಫ್; ಪ್ರತಿಭಟನಾಕಾರರಿಗೆ ಬಂಧನ ವಿಸ್ತರಣೆ !
ಒಂದೇ ದಿನ ಎರಡು ನ್ಯಾಯಾಲಯದ ಆದೇಶ: ಪ್ರಜಾಪ್ರಭುತ್ವದ ಬಗ್ಗೆ ಪ್ರಶ್ನೆ ಎತ್ತಿದ ಕಾರ್ಟೂನಿಸ್ಟ್

ಹೊಸದಿಲ್ಲಿ: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯ ಅಪರಾಧ ನಿರ್ಣಯ ಮತ್ತು ಶಿಕ್ಷೆಗೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿರುವುದು ಹಾಗೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆ ನಡೆಸಿದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರ ನ್ಯಾಯಾಂಗ ಬಂಧನವನ್ನು ದಿಲ್ಲಿಯ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ವಿಸ್ತರಿಸಿರುವುದು ನ್ಯಾಯಾಂಗದ ನಿಷ್ಪಕ್ಷಪಾತತೆ ಮತ್ತು ಪ್ರಜಾಪ್ರಭುತ್ವದ ಸ್ವರೂಪದ ಕುರಿತು ಚರ್ಚೆಗೆ ಕಾರಣವಾಗಿದೆ.
ಈ ಎರಡೂ ಬೆಳವಣಿಗೆಗಳನ್ನು ಅಕ್ಕಪಕ್ಕದಲ್ಲಿಟ್ಟು ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, ‘ಒಂದೇ ದಿನ. ಎರಡು ಸುದ್ದಿಗಳು. ಎರಡು ನ್ಯಾಯಾಲಯದ ಆದೇಶಗಳು. ಒಂದೇ ಪ್ರಜಾಪ್ರಭುತ್ವವೇ?’ ಎಂಬ ಪ್ರಶ್ನೆಯೊಂದಿಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಚುನಾವಣೆಗೆ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದ ಅಪರಾಧಿ :
ವಾರಾಣಸಿಯಲ್ಲಿ ನಡೆದ ಪ್ರಮೋದ್ ಕುಮಾರ್ ನಿಗಮ್ ಹತ್ಯೆ ಪ್ರಕರಣದಲ್ಲಿ ನಂದಲಾಲ್ ರೈ ಅಲಿಯಾಸ್ ಬಬ್ಲೂ ರೈ ಎಂಬಾತನಿಗೆ 2025ರ ಎಪ್ರಿಲ್ ನಲ್ಲಿ ವಿಚಾರಣಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈತ ದಿವಂಗತ ಮುಖ್ತಾರ್ ಅನ್ಸಾರಿಯೊಂದಿಗೆ ನಂಟು ಹೊಂದಿದ್ದನೆಂದು ಕೆಲವು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.
ಈ ಪ್ರಕರಣದ ಮೇಲ್ಮನವಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮತ್ತು ವಿನಯ್ ಕುಮಾರ್ ದ್ವಿವೇದಿ ಅವರಿದ್ದ ಪೀಠವು ಅಕ್ಟೋಬರ್ ಆರಂಭದಲ್ಲಿ ಆತನ ಅಪರಾಧ ನಿರ್ಣಯ ಮತ್ತು ಶಿಕ್ಷೆಗೆ ತಡೆ ನೀಡಿ ಜಾಮೀನು ಮಂಜೂರು ಮಾಡಿದೆ ಎಂದು ವರದಿಯಾಗಿದೆ.
ಶಿಕ್ಷೆಗೆ ತಡೆ ನೀಡುವಂತೆ ಕೋರಿದ ಸಂದರ್ಭದಲ್ಲಿ, ತಾನು ಈ ಹಿಂದೆ ಸಕ್ರಿಯ ಬಿಜೆಪಿ ಕಾರ್ಯಕರ್ತನಾಗಿದ್ದೆ ಮತ್ತು 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅಥವಾ ಸಾಧ್ಯವಾದರೆ ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದ್ದೇನೆ ಎಂದು ಆತನ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಸಾಮಾನ್ಯ ವ್ಯಕ್ತಿಯ ಜೀವನೋಪಾಯದ ಹಕ್ಕು ರಾಜಕಾರಣಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿಗಿಂತ ಕಡಿಮೆಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ ಎಂದು ವರದಿಗಳು ತಿಳಿಸಿವೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳದಂತೆ ಜನಪ್ರತಿನಿಧಿಗಳ ಅಪರಾಧ ನಿರ್ಣಯಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪುಗಳನ್ನೂ ಪೀಠ ಉಲ್ಲೇಖಿಸಿದೆ.
ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆ ವಿಧಿಸಲ್ಪಟ್ಟ ವ್ಯಕ್ತಿಯು ಸಾಮಾನ್ಯವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹನಾಗುತ್ತಾನೆ. ಆದರೆ, ಮೇಲ್ಮನವಿ ನ್ಯಾಯಾಲಯವು ಅಪರಾಧ ನಿರ್ಣಯಕ್ಕೆ ತಡೆ ನೀಡಿದರೆ ಕಾನೂನಿನ ಅನ್ವಯ ಅನರ್ಹತೆಯ ಪರಿಣಾಮ ಬದಲಾಗಬಹುದು.
ಸಿಜೆಪಿ ನಾಯಕರ ಬಂಧನ ವಿಸ್ತರಣೆ :
ಇನ್ನೊಂದೆಡೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ಮತದಾರರ ಪಟ್ಟಿಯಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ವಿರೋಧಿಸಿ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆ ನಡೆಸಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ತನಿಖಾ ಪತ್ರಕರ್ತ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರ ನ್ಯಾಯಾಂಗ ಬಂಧನವನ್ನು ದಿಲ್ಲಿಯ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅ. 19ರಂದು ಮತ್ತೆ ಎರಡು ದಿನಗಳ ಕಾಲ ವಿಸ್ತರಿಸಿದ್ದಾರೆ. ಅ. 21ರವರೆಗೆ ಅವರನ್ನು ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಲಾಗಿದೆ ಎಂದು ವರದಿಯಾಗಿದೆ.
ಪ್ರತಿಭಟನೆಯ ಸಂದರ್ಭದಲ್ಲಿ ನಿರ್ಬಂಧಿತ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪ ಸೇರಿದಂತೆ ಶಾಂತಿ ಕಾಪಾಡುವ ಬಾಂಡ್ ಉಲ್ಲಂಘನೆ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿದೆ. ಪೊಲೀಸರು ಐದು ದಿನಗಳ ಬಂಧನ ವಿಸ್ತರಣೆಗೆ ಮನವಿ ಮಾಡಿದ್ದರು. ಆದರೆ, ಮ್ಯಾಜಿಸ್ಟ್ರೇಟ್ ಎರಡು ದಿನಗಳ ವಿಸ್ತರಣೆಗೆ ಆದೇಶಿಸಿದ್ದಾರೆ. ಆರೋಪಿಗಳ ಹಿಂದಿನ ವರ್ತನೆ ಮತ್ತು ಅವರು ನೀಡಿದ ಭರವಸೆಗಳ ಬಗ್ಗೆ ತೃಪ್ತಿ ಇಲ್ಲದಿರುವುದನ್ನು ಬಂಧನ ಮುಂದುವರಿಸುವ ನಿರ್ಧಾರಕ್ಕೆ ಕಾರಣವಾಗಿ ಉಲ್ಲೇಖಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಸಿಜೆಪಿ ನಾಯಕರ ಪರ ವಕೀಲರು ಜಾಮೀನು ಪ್ರಕ್ರಿಯೆಯಲ್ಲಿ ಉದ್ದೇಶಪೂರ್ವಕ ವಿಳಂಬವಾಗುತ್ತಿದೆ ಎಂದು ಆರೋಪಿಸಿದ್ದು, ಕಾನೂನು ಪ್ರಕ್ರಿಯೆಯ ಪಾಲನೆಯ ಕುರಿತು ಪ್ರಶ್ನೆ ಎತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ :
ಎರಡೂ ಪ್ರಕರಣಗಳನ್ನು ಹೋಲಿಕೆ ಮಾಡಿದ ಸತೀಶ್ ಆಚಾರ್ಯ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಹಲವರು, ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪರಿಹಾರ ದೊರೆಯುತ್ತಿದ್ದರೆ, ಪ್ರತಿಭಟನೆ ನಡೆಸಿದ ಯುವ ನಾಯಕರ ಬಂಧನ ಮುಂದುವರಿದಿರುವುದು ನ್ಯಾಯದ ಸಮಾನತೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಇದನ್ನು ಪ್ರಜಾಪ್ರಭುತ್ವದ ಅಣಕ ಮತ್ತು ನ್ಯಾಯಾಂಗದ ಆಯ್ದ ನಿಲುವು ಎಂದು ಟೀಕಿಸಿದ್ದಾರೆ.






