ದಕ್ಷಿಣ ಕನ್ನಡ ‘ಮಂಗಳೂರು ಜಿಲ್ಲೆ’ಯಾಗಿ ಮರುನಾಮಕರಣ: ರಾಜ್ಯ ಸರಕಾರದ ಸಿದ್ಧತೆ?

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಹೆಸರು ಬದಲಾವಣೆ ಮಾಡಲು ರಾಜ್ಯ ಕಾಂಗ್ರೆಸ್ ಸರಕಾರ ಸಿದ್ಧತೆ ನಡೆಸಿದೆ. ಈ ಸಂಬಂಧ ಪ್ರಸ್ತಾವವನ್ನು ಸಿದ್ಧಪಡಿಸಿರುವ ಕಂದಾಯ ಇಲಾಖೆಯು, ಮಂಗಳೂರು ಜಿಲ್ಲೆ ಎಂದು ಮರು ನಾಮಕರಣ ಮಾಡಲು ಕೇಂದ್ರ ಗೃಹ ಸಚಿವಾಲಯದಿಂದ ನಿರಾಕ್ಷೇಪ ಪತ್ರ ಪಡೆಯಲು ಸಚಿವ ಸಂಪುಟದ ಅನುಮೋದನೆ ಕೋರಿರುವುದು ಇದೀಗ ಬಹಿರಂಗವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಕಡತವನ್ನು ಕಂದಾಯ ಇಲಾಖೆಯು ಸೆ.18ರಂದು ನಡೆಯಲಿರುವ ಸಚಿವ ಸಂಪುಟ ಸಭೆಗೆ ಮಂಡಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲಿದ್ದು, ಅಧಿಕೃತ ಅನುಮೋದನೆ ದೊರೆಯುವ ಸಾಧ್ಯತೆ ಇದೆ. ಹಾಗೆಯೇ ಸಚಿವ ಸಂಪುಟ ಸಭೆಯ ನಂತರ ಈ ಸಂಗತಿಯನ್ನು ಸರಕಾರ ಘೋಷಿಸಲಿದೆ. ಈ ಸಂಬಂಧ ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವ ಟಿಪ್ಪಣಿಯ (RD-TNV-4/2025/2026) ರಹಸ್ಯ ಹಾಳೆಗಳು ‘the-file.in’ಗೆ ಲಭ್ಯವಾಗಿವೆ.
ಸಮರ್ಥನೆಯಲ್ಲೇನಿದೆ?: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಿಂದ ಈ ಬಗ್ಗೆ ಪ್ರಸ್ತಾವ ಪಡೆಯಬೇಕು. ಆ ನಂತರ ಭಾರತ ಸರಕಾರದ ಗೃಹ ಸಚಿವಾಲಯವು 1953ರ ಸೆ.11ರಂದು ಹೊರಡಿಸಿರುವ ಮಾರ್ಗಸೂಚಿಯನ್ವಯ ಯಾವುದೇ ಜಿಲ್ಲೆ, ಪಟ್ಟಣ, ಗ್ರಾಮ, ರೈಲ್ವೆ ನಿಲ್ದಾಣಗಳ ಹೆಸರುಗಳ ಬದಲಾವಣೆ, ಮರು ನಾಮಕರಣ ಮಾಡಲು ರಾಜ್ಯ ಸರಕಾರವು ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಸ್ತಾವ ಕಳುಹಿಸಬೇಕು. ಗೃಹ ಸಚಿವಾಲಯದ ನಿರಾಕ್ಷೇಪ ಪತ್ರ ದೊರೆತ ನಂತರ ಈ ಕುರಿತು ಕ್ರಮ ವಹಿಸಬೇಕಾಗಿದೆ ಎಂದು ಕಂದಾಯ ಇಲಾಖೆ ಸಮರ್ಥಿಸಿದೆ. ಈ ಪ್ರಸ್ತಾವಕ್ಕೆ ಕಂದಾಯ ಸಚಿವ ಡಾ ಜಿ ಪರಮೇಶ್ವರ್ ಅನುಮೋದಿಸಿದ್ದಾರೆ ಎಂದು ತಿಳಿದುಬಂದಿದೆ.
ದ.ಕ. ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರು ನಾಮಕರಣ ಮಾಡಲು ಕೇಂದ್ರ ಗೃಹ ಸಚಿವಾಲಯದ ನಿರಾಕ್ಷೇಪಣ ಪತ್ರ ಪಡೆಯಲು ಸಚಿವ ಸಂಪುಟವು ಅನುಮೋದಿಸಬೇಕು ಎಂದು ಕೋರಿರುವುದು ಗೊತ್ತಾಗಿದೆ.
ಸಂಪುಟ ಪರಿಗಣನೆಗೆ ಮಂಡಿಸಲಿರುವ ಇತರ ಪ್ರಸ್ತಾವಗಳು
ಎಂಆರ್‌ಪಿಎಲ್‌ಗೆ ಸಂಬಂಧಿಸಿದ 27 ಎಕರೆ ಜಮೀನಿಗೆ ಸಂಬಂಧಿಸಿದ ಪ್ರಸ್ತಾವವನ್ನು ಕಂದಾಯ ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯು ಮಂಡಿಸಿದೆ. ಹಾಗೆಯೆ ಕಂದಾಯ ಇಲಾಖೆಯು ಡಿಸಿ ಮನ್ನಾ ಜಮೀನುಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳ ಪರಿಶೀಲನೆಗೆ ಸಂಬಂಧಿಸಿದಂತೆ ಕಡತ ಮಂಡಿಸಿದೆ. ಪಿಲಿಕುಳ ನಿಸರ್ಗಧಾಮಕ್ಕೆ ಸಂಬಂಧಿಸಿದ 356 ಎಕರೆ ಜಮೀನನ್ನು ಕಂದಾಯ ಇಲಾಖೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ವರ್ಗಾವಣೆ ಮಾಡುವ ಪ್ರಸ್ತಾವವೂ ಸಹ ಸಚಿವ ಸಂಪುಟದಲ್ಲಿ ಚರ್ಚೆಗಳಾಗಲಿವೆ ಎಂದು ತಿಳಿದು ಬಂದಿದೆ.
ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಪ್ರಸ್ತಾವವೂ ಸಹ ಮಂಡನೆಯಾಗಿದೆ. ಮಂಗಳೂರು ಮಹಾನಗರ ಪಾಲಿಕೆ ಯುಜಿಡಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ 5 ವರ್ಷಗಳ ಅವಧಿಯಲ್ಲಿ 1,250 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳುವ ಪ್ರಸ್ತಾವ, ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಸಂಬಂಧಿಸಿದಂತೆ 180 ಕೋಟಿ ರೂ. ಅನುದಾನ ಮತ್ತು ಅನುಮೋದನೆ ಸಂಬಂಧ ನಗರಾಭಿವೃದ್ಧಿ ಇಲಾಖೆಯು ಕಡತ ಮಂಡಿಸಿದೆ.
ಮಂಗಳೂರು ಐ ಕಾನ್ಸೆಪ್ಟ್ ಅಡಿಯಲ್ಲಿ ಅಗತ್ಯ ಸೌಲಭ್ಯಗಳನ್ನು ಒಳಗೊಂಡ ಎತ್ತರದ ಕಟ್ಟಡ ಅಭಿವೃದ್ಧಿ ಪರಿಕಲ್ಪನೆಯ ಪ್ರಸ್ತಾವ, ಸಿಆರ್‌ಝೆಡ್ ನಿಯಮಾವಳಿಗಳಲ್ಲಿ ಅಗತ್ಯ ಬದಲಾವಣೆ/ತಿದ್ದುಪಡಿ ತರಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಪ್ರಸ್ತಾವ ಮಂಡಿಸಿದೆ. ಕರಾವಳಿ ಭಾಗಕ್ಕೆ ಪ್ರತ್ಯೇಕವಾದ ಪ್ರವಾಸೋದ್ಯಮ ನೀತಿ ರೂಪಿಸುವುದು, ಎನ್‌ಎಂಪಿಎ ಸಹಯೋಗದಲ್ಲಿ 300 ಎಕರೆ ಜಮೀನಿನಲ್ಲಿ ಪ್ರವಾಸೋದ್ಯಮ ಮತ್ತು ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿ ಕುರಿತು ಪ್ರವಾಸೋದ್ಯಮ ಮತ್ತು ಬಂದರು ಇಲಾಖೆಯು ಪ್ರಸ್ತಾವನೆಯನ್ನು ಸಚಿವ ಸಂಪುಟದ ಅನುಮೋದನೆಗೆ ಮುಂದಿರಿಸಿರುವುದು ಗೊತ್ತಾಗಿದೆ.






