ರೆಪೋ ದರ ಇಳಿಕೆ | RBI ಕೈಗೊಂಡ ಪ್ರಮುಖ ನಿರ್ಣಯಗಳು ಮತ್ತು ಕಾರಣ-ಪರಿಣಾಮಗಳೇನು?; ಇಲ್ಲಿದೆ ಮಾಹಿತಿ...

Photo Credit : PTI
ಹಣದುಬ್ಬರ ನಿಧಾನಗತಿಗೆ ಇಳಿಸುವುದು ಮತ್ತು ಪ್ರಬಲ ಪ್ರಗತಿಯ ವಿರುದ್ಧ ದುರ್ಬಲಗೊಳ್ಳುತ್ತಿರುವ ರೂಪಾಯಿ ಮೌಲ್ಯವನ್ನು ಸಮತೋಲನಗೊಳಿಸುವ ಸಲುವಾಗಿ ಆರ್ಬಿಐ ಶುಕ್ರವಾರ ರೆಪೋ ದರದಲ್ಲಿ 25 ಮೂಲಾಂಶವನ್ನು ಕಡಿತಗೊಳಿಸಿದೆ. ಇದರಿಂದ ರೆಪೋ ದರ ಶೇ. 5.50ರಿಂದ ಶೇ 5.25ಕ್ಕೆ ಇಳಿಕೆಯಾಗಿದೆ. ಇದು ಬ್ಯಾಂಕುಗಳು ಸಾಲಗಳ ಮೇಲಿನ ಬಡ್ಡಿದರಗಳನ್ನು - ವಿಶೇಷವಾಗಿ ಗೃಹ, ವೈಯಕ್ತಿಕ ಮತ್ತು ಸಣ್ಣ ವ್ಯಾಪಾರ ಸಾಲಗಳು - ಮತ್ತು ಠೇವಣಿಗಳನ್ನು ಕಡಿಮೆ ಮಾಡಲು ದಾರಿಮಾಡಿದೆ.
ಅರ್ಥವ್ಯವಸ್ಥೆಯ ಕಾರ್ಯಕ್ಷಮತೆಯಿಂದ ಉತ್ತೇಜಿತವಾಗಿರುವ ಆರ್ಬಿಐನ ಹಣಕಾಸು ನೀತಿ ಸಮಿತಿ 2026ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು 50 ಮೂಲಾಂಶಗಳಿಂದ ಏರಿಸಿ ಶೇ 7.3 ಕ್ಕೆ ಏರಿಸಿದೆ. ಶುಕ್ರವಾರ ಮುಂಬೈನಲ್ಲಿ ಸಭೆ ಸೇರಿದ ದರ ನಿಗದಿ ಸಮಿತಿಯು ತನ್ನ ತಟಸ್ಥ ನೀತಿ ನಿಲುವನ್ನು ಉಳಿಸಿಕೊಂಡಿದೆ.
RBIಕೈಗೊಂಡ ಪ್ರಮುಖ ನಿರ್ಣಯಗಳು ಮತ್ತು ಕಾರಣ-ಪರಿಣಾಮಗಳು
►ರೆಪೊದರ ಇಳಿಸಲು ಸಮಿತಿ ನಿರ್ಣಯಿಸಿರುವುದೇಕೆ?
ಆರ್ಬಿಐ ಬೆಂಚ್ಮಾರ್ಕ್ ಮರುಖರೀದಿ ದರವನ್ನು 25 ಮೂಲಾಂಶಗಳಿಂದ ಶೇ 5.25ಕ್ಕೆ ಇಳಿಸಿದೆ. ಆರು ಮಂದಿ ಸದಸ್ಯರ ಸಮಿತಿಯು ರೂಪಾಯಿ ಮೌಲ್ಯ ಕುಸಿದು ಸಾರ್ವಕಾಲಿಕ 90.43ರಷ್ಟಕ್ಕೆ ಬಂದಿದ್ದರೂ ರೆಪೊ ದರ ಇಳಿಸಲು ನಿರ್ಧಾರ ಕೈಗೊಂಡಿರುವುದೇಕೆ? 2025ರ ಜುಲೈ- ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ 7.8ರಷ್ಟು ಬೆಳವಣಿಗೆ ಕಂಡ ನಂತರ 2026ರ ಮೊದಲನೇ ತ್ರೈಮಾಸಿಕದ ಬೆಳವಣಿಗೆಯ ಮುನ್ಸೂಚನೆಯನ್ನು ಶೇ 8ಕ್ಕೆ ತಂದಿದೆ. “ಪ್ರತಿಕೂಲ ಮತ್ತು ಸವಾಲಿನ ಬಾಹ್ಯ ವಾತಾವರಣದ ಹೊರತಾಗಿಯೂ, ಭಾರತೀಯ ಆರ್ಥಿಕತೆಯು ಗಮನಾರ್ಹ ಸಹಿಷ್ಣುತೆ ತೋರಿಸಿದೆ. ಹಣದುಬ್ಬರವು ಶೇ 4ರ ಗುರಿಗಿಂತ ಕಡಿಮೆ ಇರುವ ಮುನ್ನೋಟವು ಒದಗಿಸಿದ ಅವಕಾಶದಿಂದ ಬೆಳವಣಿಗೆಯ ಪರವಾಗಿ ನಿಲ್ಲಲು ಅನುಕೂಲವಾಗಿದೆ” ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರ ಹೇಳಿದ್ದಾರೆ.
ಆರ್ಬಿಐ ಜಿಡಿಪಿಯನ್ನು ಹೆಚ್ಚಿಸಿ ಹಣದುಬ್ಬರ ಮುನ್ಸೂಚನೆಯನ್ನು ಏಕೆ ಕಡಿಮೆ ಮಾಡಿತು?
ಆರ್ಬಿಐ ಭಾರತದ ಜಿಡಿಪಿ ಬೆಳವಣಿಗೆಯ ದರವನ್ನು ಹಿಂದಿನ ಶೇ 6.8ರಿಂದ ಶೇ 7.3ಕ್ಕೆ ನಿಗದಿಪಡಿಸಿದೆ. “ಬಲವಾದ ಜಿಡಿಪಿ ವಿಸ್ತರಣೆಯು ಆರ್ಥಿಕತೆಯು ಈಗಾಗಲೇ ಆರೋಗ್ಯಕರ ವೇಗದಲ್ಲಿ ಚಾಲನೆಯಲ್ಲಿದೆ ಎಂದು ಸೂಚಿಸುತ್ತದೆ, ಅಗ್ಗದ ಸಾಲದ ಮೂಲಕ ಚಟುವಟಿಕೆಯನ್ನು ಉತ್ತೇಜಿಸುವ ಯಾವುದೇ ತುರ್ತುಸ್ಥಿತಿಯನ್ನು ಕಡಿಮೆ ಮಾಡುತ್ತದೆ. ವಾಸ್ತವವಾಗಿ, ಹೆಚ್ಚಿನ ಬೆಳವಣಿಗೆಯ ಹಂತದಲ್ಲಿ ದರಗಳನ್ನು ಕಡಿತಗೊಳಿಸುವುದು ಅಪಾಯಕಾರಿ, ಏಕೆಂದರೆ ಇದು ಸಾಲದ ಬೇಡಿಕೆಯನ್ನು ತುಂಬಾ ಬೇಗನೆ ಹೆಚ್ಚಿಸಬಹುದು ಮತ್ತು ಭವಿಷ್ಯದ ಹಣದುಬ್ಬರದ ಬೀಜಗಳನ್ನು ಬಿತ್ತಬಹುದು. ಇದನ್ನು ಆರ್ಬಿಐ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ” ಎನ್ನುತ್ತಾರೆ ಹಣಕಾಸು ತಜ್ಞರು.
ಖಾರಿಫ್ ಉತ್ಪಾದನೆಯಲ್ಲಿ ಏರಿಕೆ, ರಾಬಿ ಬಿತ್ತನೆ ಚೆನ್ನಾಗಿರುವುದು, ಜಲಾಶಯದ ಮಟ್ಟ ಚೆನ್ನಾಗಿರುವುದು ಮತ್ತು ಮಣ್ಣಿನ ತೇವಾಂಶ ಚೆನ್ನಾಗಿರುವುದರಿಂದ ಆಹಾರ ಪೂರೈಕೆಯಲ್ಲಿ ಸುಧಾರಣೆ ಕಂಡುಬಂದಿದೆ. "ಕೆಲವು ಲೋಹಗಳನ್ನು ಹೊರತುಪಡಿಸಿ, ಅಂತರರಾಷ್ಟ್ರೀಯ ಸರಕುಗಳ ಬೆಲೆಗಳು ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ಆಹಾರ ಬೆಲೆಗಳ ಕುಸಿತದಿಂದಾಗಿ, ಅಕ್ಟೋಬರ್ನಲ್ಲಿ ನಿರೀಕ್ಷಿಸಿದ್ದಕ್ಕಿಂತ ಹಣದುಬ್ಬರ ಕಡಿಮೆಯಾಗುವ ಸಾಧ್ಯತೆಯಿದೆ" ಎಂದು ಗವರ್ನರ್ ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್ಬಿಐ ಭಾರತದ ಹಣದುಬ್ಬರ ದರವನ್ನು ಹಣಕಾಸು ವರ್ಷ 26 ರಲ್ಲಿ ಶೇ 2ರಷ್ಟಕ್ಕೆ ನಿಗದಿಪಡಿಸಿದೆ,
ಚಿಲ್ಲರೆ ಹಣದುಬ್ಬರವು ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿರುವುದರಿಂದ, ಹಿಂದಿನ ಶೇ 2.6ರಿಂದ 2ಕ್ಕೆ ಇಳಿಸಿದೆ. ಆಹಾರ ಬೆಲೆಗಳಲ್ಲಿನ ಹಣದುಬ್ಬರದಲ್ಲಿನ ಬೆಲೆ ತಗ್ಗಿಸುವಿಕೆ ಮತ್ತು ಸರಕು ಮತ್ತು ಸೇವೆಗಳ ಬೆಲೆಗಳ ಮೇಲಿನ ಜಿಎಸ್ಟಿ ದರ ಕಡಿತದ ಪ್ರಭಾವವೂ ಇದಕ್ಕೆ ಕಾರಣವಾಗಿದೆ. “ಭಾರತದ ಅರ್ಥವ್ಯವಸ್ಥೆ ಈ ವರ್ಷ ತ್ವರಿತ ಹಣದುಬ್ಬರದ ಕಡಿತವನ್ನು ಗಮನಸಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಅರ್ಧ ಭಾಗದಲ್ಲಿ ತೆರಿಗೆ ಮತ್ತು ಜಿಎಸ್ಟಿಯಲ್ಲಿ ಆದ ಬದಲಾವಣೆ. ಕಚ್ಚಾ ತೈಲ ಬೆಲೆ ಕಡಿಮೆಯಾಗಿರುವುದು ಮೊದಲಾದವು ಹಣದುಬ್ಬರ ಇಳಿಕೆಗೆ ಕಾರಣವಾಗಿದೆ” ಎಂದು ಗವರ್ನರ್ ಹೇಳಿದ್ದಾರೆ.
RBI ಕೈಗೊಂಡ ಇತರ ಪ್ರಮುಖ ನಿರ್ಧಾರಗಳು:
► ರೂ. 1 ಲಕ್ಷ ಕೋಟಿ ಒಎಂಒ ಖರೀದಿ: ಆರ್ಬಿಐ ಸದ್ಯದಲ್ಲಿಯೇ ರೂ 1 ಲಕ್ಷ ಕೋಟಿ ಒಎಂಒ (ಓಪನ್ ಮಾರ್ಕೆಟ್ ಆಪರೇಶನ್) ಖರೀದಿಗಳನ್ನು ನಡೆಸಲಿದೆ. ಒಎಂಒ ಖರೀದಿಗಳು ಮುಕ್ತ ಮಾರುಕಟ್ಟೆ ಕಾರ್ಯಾಚರಣೆಗಳ ಖರೀದಿಗಳನ್ನು ಪ್ರತಿನಿಧಿಸುತ್ತವೆ. ಮತ್ತು ಆರ್ಬಿಐನಂತಹ ಸಂಸ್ಥೆ ಬ್ಯಾಂಕಿಂಗ್ ವ್ಯವಸ್ಥೆಗೆ ಹಣವನ್ನು (ಲಿಕ್ವಿಡಿಟಿ) ತುಂಬಿಸಲು ಮುಕ್ತ ಮಾರುಕಟ್ಟೆಯಲ್ಲಿ ಸರ್ಕಾರಿ ಭದ್ರತೆಗಳನ್ನು ಖರೀದಿಸುವ ಪ್ರಮುಖ ಸಾಧನವಾಗಿದೆ.
► ಡಿಸೆಂಬರ್ನಲ್ಲಿ ಆರ್ಬಿಐ 5 ಬಿಲಿಯನ್ ಡಾಲರ್ನಷ್ಟು ಡಾಲರ್-ರೂಪಾಯಿ ವಿನಿಮಯವನ್ನು ನಡೆಸಲಿದೆ.
► ಸಮಿತಿಯು ತನ್ನ ತಟಸ್ಥ ನೀತಿ ನಿಲುವನ್ನು ಉಳಿಸಿಕೊಂಡಿದೆ. ತಟಸ್ಥ ನಿಲುವು ಎಂದರೆ ವಿಕಸನಗೊಳ್ಳುತ್ತಿರುವ ಆರ್ಥಿಕ ದತ್ತಾಂಶವನ್ನು ಅವಲಂಬಿಸಿ ದರವು ಎರಡೂ ದಿಕ್ಕಿನಲ್ಲಿ ಚಲಿಸಬಹುದು. ಜೂನ್ 2025ರ ಹಣಕಾಸು ನೀತಿಯಲ್ಲಿ ನೀತಿ ನಿಲುವನ್ನು ‘ಹೊಂದಾಣಿಕೆ’ಯಿಂದ (ಅಕಮಡೇಟಿವ್) ‘ತಟಸ್ಥ’ಕ್ಕೆ (ನ್ಯೂಟ್ರಲ್) ಬದಲಾಯಿಸಲಾಗಿತ್ತು.







