Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ‘ರಿಪಬ್ಲಿಕ್ ಆಫ್ ಬಳ್ಳಾರಿ ಈಸ್ ಬ್ಯಾಕ್’

‘ರಿಪಬ್ಲಿಕ್ ಆಫ್ ಬಳ್ಳಾರಿ ಈಸ್ ಬ್ಯಾಕ್’

ಹೊನಕೆರೆ ನಂಜುಂಡೇಗೌಡಹೊನಕೆರೆ ನಂಜುಂಡೇಗೌಡ17 Jan 2026 9:56 AM IST
share
‘ರಿಪಬ್ಲಿಕ್ ಆಫ್ ಬಳ್ಳಾರಿ ಈಸ್ ಬ್ಯಾಕ್’

14 ವರ್ಷ ಅಜ್ಞಾತವಾಸದ ಬಳಿಕ ಬಳ್ಳಾರಿಯಲ್ಲಿ ಬಂದೂಕುಗಳಿಂದ ಗುಂಡುಗಳು ಮೊರೆತಿವೆ. ಕಲ್ಲುಗಳು ತೂರಾಡಿವೆ. ಮಚ್ಚು ಮತ್ತು ಕತ್ತಿ ಝಳಪಿಸಿವೆ. 2011ರ ಬಳಿಕ ಮೂಲೆ ಸೇರಿ, ತುಕ್ಕು ಹಿಡಿದಿದ್ದ ಶಸ್ತ್ರಗಳನ್ನು ಹೊರತೆಗೆದು ಹೊಸ ವರ್ಷದ ಮೊದಲ ದಿನವೇ ‘ರಕ್ತ ತರ್ಪಣ’ ಬಿಡಲಾಗಿದೆ. ಹಣ ಮತ್ತು ತೋಳ್ಬಲದಿಂದ ಮೆರೆಯುತ್ತಿದ್ದ ಜಟ್ಟಿಯನ್ನು ಇಷ್ಟು ವರ್ಷ ಕೇಳುವವರಿರಲಿಲ್ಲ. ಈಗ ಸೆಡ್ಡು ಹೊಡೆಯುವ ಮತ್ತೊಬ್ಬ ಜಟ್ಟಿ ‘ಅಖಾಡ’ಕ್ಕಿಳಿದಿದ್ದಾರೆ. ಜಟ್ಟಿಗಳ ಕಾಳಗ ಎಲ್ಲಿಗೆ ಹೋಗಿ ಮುಟ್ಟುವುದೋ?

‘ರಿಪಬ್ಲಿಕ್ ಆಫ್ ಬಳ್ಳಾರಿ ಈಸ್ ಬ್ಯಾಕ್’. 14 ವರ್ಷ ಅಜ್ಞಾತವಾಸದ ಬಳಿಕ ಬಳ್ಳಾರಿಯಲ್ಲಿ ಬಂದೂಕುಗಳಿಂದ ಗುಂಡುಗಳು ಮೊರೆತಿವೆ. ಕಲ್ಲುಗಳು ತೂರಾಡಿವೆ. ಮಚ್ಚು ಮತ್ತು ಕತ್ತಿ ಝಳಪಿಸಿವೆ. 2011ರ ಬಳಿಕ ಮೂಲೆ ಸೇರಿ, ತುಕ್ಕು ಹಿಡಿದಿದ್ದ ಶಸ್ತ್ರಗಳನ್ನು ಹೊರತೆಗೆದು ಹೊಸ ವರ್ಷದ ಮೊದಲ ದಿನವೇ ‘ರಕ್ತ ತರ್ಪಣ’ ಬಿಡಲಾಗಿದೆ. ಹಣ ಮತ್ತು ತೋಳ್ಬಲದಿಂದ ಮೆರೆಯುತ್ತಿದ್ದ ಜಟ್ಟಿಯನ್ನು ಇಷ್ಟು ವರ್ಷ ಕೇಳುವವರಿರಲಿಲ್ಲ. ಈಗ ಸೆಡ್ಡು ಹೊಡೆಯುವ ಮತ್ತೊಬ್ಬ ಜಟ್ಟಿ ‘ಅಖಾಡ’ಕ್ಕಿಳಿದಿದ್ದಾರೆ. ಜಟ್ಟಿಗಳ ಕಾಳಗ ಎಲ್ಲಿಗೆ ಹೋಗಿ ಮುಟ್ಟುವುದೋ?

ಕಲ್ಯಾಣ- ಕರ್ನಾಟಕ ಭಾಗವಾಗಿರುವ ಬಳ್ಳಾರಿಯಲ್ಲಿ ಕಬ್ಬಿಣ ಅದಿರು, ಮ್ಯಾಂಗನೀಸ್, ಗ್ರ್ಯಾನೈಟ್, ಕಪ್ಪು ಕಲ್ಲು, ಮರಳು ಸೇರಿ ಹೇರಳ ನಿಸರ್ಗ ಸಂಪತ್ತಿದ್ದರೂ ಜಿಲ್ಲೆ ಹಿಂದುಳಿದಿದೆ. ಆರ್ಥಿಕ ಚಟುವಟಿಕೆಯಲ್ಲಿ ಗಣಿಗಾರಿಕೆ ಪ್ರಮುಖ ಪಾತ್ರ ವಹಿಸಿದರೂ ಜನ ಬಡವರಾಗಿಯೇ ಉಳಿದಿದ್ದಾರೆ. ಗಣಿಗಾರಿಕೆ ಫಲವಾಗಿ ಕಾಣಿಸಿಕೊಂಡ ರೋಗಗಳು ಬೆನ್ನಿಗಂಟಿವೆ. ಅಭಿವೃದ್ಧಿ ಮರೀಚಿಕೆಯಾಗಿದೆ. ಬೆರಳೆಣಿಕೆ ಸಂಖ್ಯೆಯ ಕುಟುಂಬಗಳು ನೈಸರ್ಗಿಕ ಸಂಪತ್ತು ಲೂಟಿ ಹೊಡೆದಿವೆ.

ಬಳ್ಳಾರಿ ಗಣಿಗಾರಿಕೆಗೆ ತಲೆಮಾರುಗಳ ಇತಿಹಾಸವಿದೆ. ಅನೇಕ ಕುಟುಂಬಗಳು ಮೂರ್ನಾಲ್ಕು ತಲೆಮಾರುಗಳಿಂದ ಗಣಿಗಾರಿಕೆ ನಡೆಸುತ್ತಿವೆ. ಸಂಡೂರಿನ ಘೋರ್ಪಡೆ ರಾಜ ಮನೆತನ, ಎಚ್. ಆರ್. ಗವಿಯಪ್ಪ, ಅಲ್ಲಂ ಕರಿಬಸಪ್ಪ, ಟಪಾಲ್ ತಿಮ್ಮಪ್ಪ, ಸತ್ಯನಾರಾಯಣ ಸಿಂಗ್ ಸೇರಿದಂತೆ ಹಲವು ಕುಟುಂಬಗಳು ಗಣಿಗಾರಿಕೆ ಉದ್ಯಮದಲ್ಲಿವೆ. ಉತ್ತರದ ಸಲಗಾಂವಕರ್, ದಾಲ್ಮಿಯಾ, ಡೆಂಪೊ, ಬಲ್ದೋಟ, ಎಸ್.ಕೆ. ಮೋದಿಯಂಥ ಕಂಪೆನಿಗಳೂ ಗಣಿಗಾರಿಕೆ ನಡೆಸುತ್ತಿವೆ. ಕೆಲವು ಕುಟುಂಬಗಳು ಗಣಿಗಾರಿಕೆಯಿಂದ ದೂರ ಸರಿದಿವೆ. ಇವು ಅದಿರು ಲೂಟಿ ಮಾಡಿಲ್ಲ ‘ಗಣಿ ಧಣಿ’ ಎಂದು ಕರೆಸಿಕೊಂಡಿಲ್ಲ.

2004-05ರಿಂದ ಅದಿರಿಗೆ ಚೀನಾದಲ್ಲಿ ವಿಪರೀತ ಬೇಡಿಕೆ ಬಂತು. ಕಂಡರಿಯದ ದರ ಸಿಕ್ಕಿತು. 2000-01ರಿಂದ ಗಣಿಗಾರಿಕೆ ಆರಂಭಿಸಿದ ಹೊಸಬರಿಗೆ ತಲೆ ತಿರುಗಿತು. ‘ರೆಡ್ಡಿ ಬ್ರದರ್ಸ್’ ಅದೇ ವೇಳೆ ಗಣಿಗಾರಿಕೆಗೆ ಕಾಲಿಟ್ಟರು. ಅಕ್ರಮವಾಗಿ ಅದಿರು ದೋಚಿದರು. ಹಣ ಬಾಚಿದರು. ‘ಸಾಮ್ರಾಜ್ಯ’ ಕಟ್ಟಿದರು. ಬಳ್ಳಾರಿಯಲ್ಲಿ ಗಣಿ ಲೂಟಿಕೋರರ ಮನೆಗಳನ್ನು ನೋಡಬೇಕು. ಮನೆಗಳಲ್ಲ. ಅರಮನೆಗಳು. ಎಂ.ವೈ. ಘೋರ್ಪಡೆ ಅರಸು ಕಾಲದಲ್ಲೇ ಸಚಿವರಾಗಿದ್ದರು. ಅದೂ ಅರಣ್ಯ ಇಲಾಖೆ ಹೊಣೆ ಹೊತ್ತಿದ್ದರು. ಕಾಂಗ್ರೆಸ್‌ನ ಬೇರೆ ಬೇರೆ ಮುಖ್ಯಮಂತ್ರಿಗಳ ಸಂಪುಟದಲ್ಲಿ ಸಚಿವರಾಗಿದ್ದರು. ಅಧಿಕಾರ ದುರ್ಬಳಕೆ ಮಾಡಲಿಲ್ಲ. ಕಾಯ್ದೆ- ಕಾನೂನು ಮುರಿಯಲಿಲ್ಲ. ಗಣಿಗಾರಿಕೆಗೆ ನೋಟಿಫೈ ಆಗಿದ್ದ 2,500 ಹೆಕ್ಟೇರ್ ಭೂಮಿ ಬೇಡವೆಂದು ಸರಕಾರಕ್ಕೆ ಮರಳಿಸಿದರು. ಯಾರಿಂದಲೂ ಅವರು ‘ಗಣಿ ಧಣಿ’ ಎಂದು ಕರೆಸಿಕೊಳ್ಳಲಿಲ್ಲ!

ರೆಡ್ಡಿಗಳು ಅವರಿಗೆ ತದ್ವಿರುದ್ಧ. ಐದಾರು ವರ್ಷಗಳಲ್ಲಿ ಅದಿರು ಲೂಟಿ ಮಾಡಿ, ಸಾಮ್ರಾಜ್ಯ ಕಟ್ಟಿದರು. (ಲೋಕಾಯುಕ್ತ ವರದಿ ಗಣಿ ಹೇಗೆ ಲೂಟಿ ಹೊಡೆದಿದ್ದಾರೆ ಎಂದು ಹೇಳಿದೆ) ಸಾಮ್ರಾಜ್ಯ ರಕ್ಷಣೆಗೆ ಕಾಲಾಳು ನೇಮಿಸಿದರು. ಶಸ್ತ್ರಾಸ್ತ್ರ ಇಟ್ಟುಕೊಂಡರು. ಬೆಂಗಾವಲು ಪಡೆ ನಿಯೋಜಿಸಿದರು. ಹಿಂದೆಯೇ ಬಂತು ಹೊಡಿ- ಬಡಿ ಸಂಸ್ಕೃತಿ. ಬಹುಶಃ 2007 ಇರಬೇಕು. ಪಾಲಿಕೆ ಚುನಾವಣೆಯಲ್ಲಿ ಮದ್ದು-ಗುಂಡು ಪ್ರಯೋಗವಾಯಿತು. ಇದು ಮೂಲತಃ ಆಂಧ್ರ ಸಂಸ್ಕೃತಿ. 2010ರಲ್ಲಿ ಗಣಿ ಉದ್ಯಮಿ ಟಪಾಲ್ ಗಣೇಶ್ ಅವರ ಮೇಲೆ ಹಲ್ಲೆಯಾಯಿತು. ಅದೇ ಸಮಯದಲ್ಲಿ ಕಾರ್ಪೊರೇಟರ್ ಪದ್ಮಾವತಿ ಯಾದವ್ ಕೊಲೆ ನಡೆಯಿತು. ಯಾರು ಮಾಡಿದರೆಂಬ ಸುಳಿವಿಲ್ಲ.

1999ರ ಲೋಕಸಭೆ ಚುನಾವಣೆ ರೆಡ್ಡಿ ಬ್ರದರ್ಸ್ ಪಾಲಿಗೆ ಅದೃಷ್ಟದ ಬಾಗಿಲು ತೆರೆಯಿತು. ಸೋನಿಯಾ ಗಾಂಧಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು. ಅವರೆದುರು ಸುಷ್ಮಾ ಸ್ವರಾಜ್ ಬಿಜೆಪಿ ಅಭ್ಯರ್ಥಿ. ರೆಡ್ಡಿಗಳಿಗೆ ಸುಷ್ಮಾ ಅವರ ಸಂಪರ್ಕ ಸಿಕ್ಕಿತು. ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ ಸೋತರು. ಅದರ ಜತೆಗೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯಿತು. ಅಖಂಡ ಬಳ್ಳಾರಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿತು.

2008ರ ವಿಧಾನಸಭೆ ಚುನಾವಣೆ ಉಲ್ಟಾ ಆಯಿತು. ಅವಧಿಗೆ ಮುನ್ನ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಬಿಜೆಪಿ 110 ಸ್ಥಾನ ಪಡೆಯಿತು. ಬಳ್ಳಾರಿ ಜಿಲ್ಲೆಯ ಒಂಭತ್ತು ಕ್ಷೇತ್ರಗಳಲ್ಲಿ ಎಂಟರಲ್ಲಿ ಗೆದ್ದಿತು. ಮೊದಲ ಸಲ ಕಾಂಗ್ರೆಸ್ ಕೋಟೆ ಅಲುಗಾಡಿತು. ಬಹುಮತಕ್ಕೆ ಕಡಿಮೆ ಬಿದ್ದ ಸ್ಥಾನಗಳನ್ನು ‘ಆಪರೇಷನ್ ಕಮಲ’ ಮಾಡಿ ರೆಡ್ಡಿ ತುಂಬಿದರು. ಕರ್ನಾಟಕ ರಾಜಕಾರಣದಲ್ಲಿ ಅವರ ಪ್ರಭಾವ ಬೆಳೆಯಿತು. ಇಡೀ ದೇಶ ಅವರತ್ತ ನೋಡಿತು.

ಕಾಂಗ್ರೆಸ್ ಸಖ್ಯ ತೊರೆದು 2006ರಲ್ಲಿ ಹೊರಬಂದಿದ್ದ ಜೆಡಿಎಸ್, ಬಿಜೆಪಿ ಜತೆ ಸಮ್ಮಿಶ್ರ ಸರಕಾರ ಮಾಡಿತು. ಎಚ್.ಡಿ. ಕುಮಾರಸ್ವಾಮಿ ಸರಕಾರದಲ್ಲಿ ಶ್ರೀರಾಮುಲು ಕ್ಯಾಬಿನೆಟ್ ಸಚಿವರಾದರು. 2008ರಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಜನಾರ್ದನ ರೆಡ್ಡಿ ಸಚಿವ. ಬಳ್ಳಾರಿ ಜಿಲ್ಲೆ ಉಸ್ತುವಾರಿ ಹೊತ್ತಿದ್ದ ರೆಡ್ಡಿ ಮೆರೆದಿದ್ದು ಅಷ್ಟಿಷ್ಟಲ್ಲ. ಹೇಳಿದ್ದೇ ಮಾತು. ನಡೆದಿದ್ದೇ ಹಾದಿ. ಮಾಡಿದ್ದೇ ಕಾನೂನು. ಲೋಕಾಯುಕ್ತ ತನಿಖೆ ಅದೇ ಅವಧಿಯದ್ದು. ಆಗಲೇ ಬಳ್ಳಾರಿ ‘ರಿಪಬ್ಲಿಕ್’ ಖ್ಯಾತಿಗೆ ಭಾಜನವಾಗಿದ್ದು.

ಕರ್ನಾಟಕ-ಆಂಧ್ರ ಗಡಿಯನ್ನೇ ಒತ್ತುವರಿ ಮಾಡಲಾಯಿತು. ಅಕ್ರಮಕ್ಕೆ ಅಡ್ಡಿಯಾಗಿದ್ದ ದೇವಸ್ಥಾನ ಕೆಡವಲಾಯಿತು. ಬೇರೆಯವರ ಗಣಿಗಳಿಗೂ ಲಗ್ಗೆ ಇಡಲಾಯಿತು. ಮೀಸಲು ಅರಣ್ಯದೊಳಕ್ಕೂ ನುಸುಳಲಾಯಿತು. ಆಂಧ್ರದಲ್ಲಿ ಗಣಿ ಗುತ್ತಿಗೆ ಪಡೆದು, ಕರ್ನಾಟಕದ ಅದಿರು ಬಾಚಲಾಯಿತು. ಗಣಿ ಅಕ್ರಮದ ತನಿಖೆ ನಡೆಸುತ್ತಿರುವ ಸಿಬಿಐ, ಸಿಇಸಿ, ರಾಜ್ಯದ ಎಸ್‌ಐಟಿಗೂ ಗಣಿ ಲೂಟಿ ನಿಖರವಾದ ಲೆಕ್ಕ ಸಿಕ್ಕಿಲ್ಲ.

ಬಂದರು, ಕಸ್ಟಮ್ಸ್, ಪೊಲೀಸ್, ಗಣಿ-ಭೂ ವಿಜ್ಞಾನ, ಅರಣ್ಯ, ಸಾರಿಗೆ, ಸಿಆರ್‌ಝಡ್, ತೂಕ ಮತ್ತು ಅಳತೆ ಒಳಗೊಂಡಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೂ ಲೂಟಿಯಲ್ಲಿ ಶಾಮೀಲಾಗಿದ್ದಾರೆ. ಅವರಿಗೆ ಕೊಟ್ಟ ಕೋಟ್ಯಂತರ ರೂಪಾಯಿ ಲಂಚದ ಬಗ್ಗೆಯೂ ಲೋಕಾ ವರದಿಯಲ್ಲಿ ಉಲ್ಲೇಖವಿದೆ. ಕೆಲವು ಶಾಸಕರು, ಸಂಸದರಿಗೂ ‘ಕಪ್ಪ’ ಸಂದಾಯ ಆಗಿದೆ ಎಂಬ ಸಂಗತಿ ದಿಗಿಲು ಹುಟ್ಟಿಸುತ್ತದೆ. ಆದರೂ ಯಾರ ಮೇಲೂ ಕ್ರಮವಿಲ್ಲ. ಇದೆಂಥ ಪ್ರಜಾ ರಾಜ್ಯ?

ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಅಕ್ರಮ ಗಣಿಗಾರಿಕೆ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ‘‘ತಾಕತ್ತಿದ್ದರೆ ಬಳ್ಳಾರಿಗೆ ಬನ್ನಿ’’ ಎಂದು ಸುರೇಶ್ ಬಾಬು ಸವಾಲು ಹಾಕಿದರು. ಸಿದ್ದರಾಮಯ್ಯ ಬಳ್ಳಾರಿಗೆ ಪಾದಯಾತ್ರೆ ಮಾಡಿದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹೋಯಿತು. ಮುಖ್ಯಮಂತ್ರಿ ಆದ ಬಳಿಕ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆ ಕಡೆ ಗಮನ ಹರಿಸಲಿಲ್ಲ. ಮನಸ್ಸು ಮಾಡಿದ್ದರೆ ಬಳ್ಳಾರಿ ಹಣೆ ಬರಹ ಬದಲಿಸಬಹುದಿತ್ತು. ಲೋಕಾಯುಕ್ತ ವರದಿ ಮೇಲೆ ಕ್ರಮ ಕೈಗೊಳ್ಳಬಹುದಿತ್ತು. ಎಸ್‌ಐಟಿ ತನಿಖೆ ಚುರುಕುಗೊಳಿಸಿ, ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಬಹುದಿತ್ತು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬಹುದಿತ್ತು. ವಿಪರ್ಯಾಸವೆಂದರೆ, ಅಕ್ರಮ ಗಣಿಗಾರಿಕೆಗೆ ಸಹಕರಿಸಿ, ಎಂಎಂಎಲ್‌ಗೆ ಭಾರೀ ನಷ್ಟ ಮಾಡಿದ ಅಧಿಕಾರಿಗಳನ್ನು ಆರೋಪ ಮುಕ್ತಗೊಳಿಸಲಾಯಿತು.

ಕರ್ನಾಟಕ ಮತ್ತು ಆಂಧ್ರ ಗಡಿ ಭಾಗದಲ್ಲಿ ಒತ್ತುವರಿಯಾಗಿರುವ ನಮ್ಮ ಕಡೆಯ ಗಡಿಯನ್ನು ನಿಖರವಾಗಿ ಗುರುತಿಸಿ ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ನಡೆಸುತ್ತಿರುವ ಸಿಇಸಿ ಮುಂದೆ ಮಂಡಿಸುವ ಕೆಲಸ ಸಮರ್ಥವಾಗಿ ಮಾಡಲಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ವಿಷಯವನ್ನು ಲಘುವಾಗಿ ಪರಿಗಣಿಸಿದ್ದಾರೆ ಎಂಬ ಆರೋಪಗಳಿವೆ.

‘ಅಕ್ರಮ ಗಣಿಗಾರಿಕೆಯಿಂದ ಆದ ನಷ್ಟವನ್ನು ಸಂಬಂಧಪಟ್ಟವರಿಂದ ತುಂಬಿಕೊಳ್ಳಬೇಕು. ಅವರ ಆಸ್ತಿ ಜಪ್ತಿ ಮಾಡಬೇಕು’ ಎಂಬ ಲೋಕಾಯುಕ್ತ ಶಿಫಾರಸನ್ನು ಕಾಂಗ್ರೆಸ್ ಸರಕಾರ ಅನುಷ್ಠಾನಕ್ಕೆ ತರಲು ತಡ ಮಾಡಿತು. ಸಿಇಸಿಯೂ ಈ ಬಗ್ಗೆ ಸರಕಾರಕ್ಕೆ ತಾಕೀತು ಮಾಡಿತು. ಇಷ್ಟಾದರೂ ಮುಖ್ಯಮಂತ್ರಿ ಕ್ರಮ ಕೈಗೊಳ್ಳಲಿಲ್ಲ. ಸುಪ್ರೀಂ ಕೋರ್ಟ್ ಸರಕಾರದ ಕಾಲೆಳೆದ ಬಳಿಕವಷ್ಟೇ ಸರಕಾರ ಎಚ್ಚೆತ್ತುಕೊಂಡಿದೆ. ವಸೂಲಾತಿ ಪ್ರಕ್ರಿಯೆ ಆರಂಭಿಸಿದೆ.

ಕನಿಷ್ಠವೆಂದರೂ ಅಕ್ರಮ ಗಣಿಗಾರಿಕೆಯಿಂದ ಒಂದು ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಲೋಕಾಯುಕ್ತ ಅಂದಾಜಿಸಿದೆ. ಕಾನೂನು- ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲರ ಅಧ್ಯಕ್ಷತೆಯಲ್ಲಿ ನೇಮಿಸಲಾಗಿದ್ದ ಸಚಿವ ಸಂಪುಟದ ಉಪ ಸಮಿತಿಯೂ 76 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದಿದೆ. ಈ ನಷ್ಟ ತುಂಬಿಕೊಳ್ಳಲು ನಿವೃತ್ತ ಐಎಎಸ್ ಅಧಿಕಾರಿ ಜಿ.ವಿ.ಕೆ.ರಾವ್ ನೇತೃತ್ವದಲ್ಲಿ ‘ರಿಕವರಿ ಟ್ರಿಬ್ಯುನಲ್’ ರಚನೆ ಮಾಡಲಾಗಿದೆ.

ಇನ್ನು ಈ ತಿಂಗಳ ಒಂದರಂದು ನಡೆದ ಘರ್ಷಣೆಗೆ ಮರಳುವುದಾದರೆ, ತಮಗೆ ‘ರಾಜಕೀಯ ಪ್ರಬುದ್ಧತೆ ಇಲ್ಲ’ವೆಂದು ಬಳ್ಳಾರಿ ನಗರ ಶಾಸಕ ನಾ.ರಾ. ಭರತ್ ರೆಡ್ಡಿ ನಿರೂಪಿಸಿದ್ದಾರೆ. ರೆಡ್ಡಿ ಬ್ರದರ್ಸ್ ಆಂಡ್ ಫ್ರೆಂಡ್ಸ್ ರಾಜಕೀಯವಾಗಿ ನೇಪಥ್ಯಕ್ಕೆ ಸರಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಗಂಗಾವತಿಯಲ್ಲಿ ಕೆಆರ್‌ಪಿಪಿಯಿಂದ ಸ್ಪರ್ಧಿಸಿದ್ದ ಜನಾರ್ದನ ರೆಡ್ಡಿ ಬಿಟ್ಟರೆ, ಅವರ ಪಕ್ಷದ ಯಾರೊಬ್ಬರೂ ಗೆದ್ದಿಲ್ಲ. ಅಷ್ಟೇ ಅಲ್ಲ, ಬಿಜೆಪಿ ನೆಲೆ ಕಳೆದುಕೊಂಡಿದೆ. ಅವಿಭಜಿತ ಬಳ್ಳಾರಿ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಅದು ಗೆದ್ದಿರುವುದು ಒಂದರಲ್ಲಿ ಮಾತ್ರ.

ವಿಧಾನಸಭೆ ಚುನಾವಣೆ ಬಳಿಕ ರೆಡ್ಡಿಗಳ ಮನೆ ಮೂರು ಭಾಗವಾಗಿತ್ತು. ‘ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ನಾಗೇಂದ್ರ ಗೆಲುವಿಗೆ ಜನಾರ್ದನರೆಡ್ಡಿ ಪರೋಕ್ಷವಾಗಿ ಸಹಕರಿಸಿದರು’ ಎಂದು ಶ್ರೀರಾಮುಲು ಮುನಿಸಿಕೊಂಡಿದ್ದರು. ಈ ಘಟನೆ ಎಲ್ಲರನ್ನೂ ಒಗ್ಗೂಡಿಸಿತು. ಅಕ್ರಮ ಗಣಿಗಾರಿಕೆಯಿಂದ ಜೈಲು ಸೇರಿದ್ದ ರೆಡ್ಡಿ ಅವರನ್ನು ಮುಖ್ಯವಾಹಿನಿಗೆ ತಂದಿತು. ಇದಕ್ಕಿಂತ ವಿವೇಕ ರಹಿತ ಕೆಲಸ ಮತ್ತೊಂದಿಲ್ಲ.

‘ನನ್ನ ಹತ್ಯೆಗೆ ಯತ್ನ ನಡೆಯಿತು’ ಎಂದು ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಭರತ್ ರೆಡ್ಡಿ ನಡೆ ವಿರೋಧಿಸುವ ಬಳ್ಳಾರಿಯ ಜನ, ‘‘ಜನಾರ್ದನ ರೆಡ್ಡಿ ಅವರೇನು ಸಜ್ಜನ-ಸುಸಂಸ್ಕೃತ ರಾಜಕಾರಣಿಯಲ್ಲ. ಬಳ್ಳಾರಿಗೆ ರಿಪಬ್ಲಿಕ್ ಖ್ಯಾತಿ ತಂದಿದ್ದೇ ರೆಡ್ಡಿ. ಅವರ ದಾರಿಯನ್ನೇ ಭರತ್ ರೆಡ್ಡಿ ತುಳಿದಿದ್ದಾರೆ’’ ಎಂದು ಹೇಳುತ್ತಾರೆ.

ಕಿರಿಯ ವಯಸ್ಸಿನಲ್ಲಿ ಶಾಸಕರಾದ ಭರತ್ ರೆಡ್ಡಿ ಅನಗತ್ಯವಾಗಿ ಗದ್ದಲ ಮಾಡಿಕೊಂಡಿದ್ದಾರೆ. ಮುಂದಿನ ಉಜ್ವಲ ರಾಜಕೀಯ ಭವಿಷ್ಯ ಮರೆತಿದ್ದಾರೆ. ಘಟನೆಯಲ್ಲಿ ಪೊಲೀಸ್ ವೈಫಲ್ಯವೂ ಇದೆ. ಗುಪ್ತಚರ ಇಲಾಖೆ ಮುಂಚಿತವಾಗಿ ಗಲಭೆ ಗ್ರಹಿಸಲು ಸೋತಿದೆ. ಮಧ್ಯಾಹ್ನದಿಂದಲೇ ಗಲಾಟೆ ಆರಂಭವಾದರೂ ರಾತ್ರಿವರೆಗೂ ಎಲ್ಲರೂ ಏಕೆ ಸುಮ್ಮನಿದ್ದರು ಎಂಬುದು ಉತ್ತರ ಸಿಗದ ಪ್ರಶ್ನೆ. ಒಟ್ಟಾರೆ 11 ವರ್ಷಗಳಿಂದ ಶಾಂತವಾಗಿದ್ದ ಬಳ್ಳಾರಿಯಲ್ಲಿ ಅಶಾಂತಿ ಹೊಗೆಯಾಡುತ್ತಿದೆ.

Tags

Republic of Bellary is back
share
ಹೊನಕೆರೆ ನಂಜುಂಡೇಗೌಡ
ಹೊನಕೆರೆ ನಂಜುಂಡೇಗೌಡ
Next Story
X