ಭತ್ತದ ಗದ್ದೆಗಳಲ್ಲಿ ಮೀಥೇನ್ ಕಡಿತಗೊಳಿಸಿ ಹಣ ಗಳಿಸಬಹುದು!

ಸಾಂದರ್ಭಿಕ ಚಿತ್ರ | Photo Credit : freepik.com
ಕಾರ್ಬನ್ ಕ್ರೆಡಿಟ್ಗಳಿಂದ ಹಣ ಗಳಿಸುವುದು ಭಾರತೀಯ ರೈತರಿಗೆ ಹೊಸ ಆದಾಯದ ಮೂಲವಾಗಿದೆ. ನೀರಿನ ಬಳಕೆ ಕಡಿಮೆಗೊಳಿಸಿ ಹವಾಮಾನ ಗುರಿಯನ್ನೂ ತಲುಪುವುದು ಸುಲಭದ ಮಾತಲ್ಲ.
ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ಕಡಿತ ಮಾಡುವುದು ಮತ್ತು ಹವಾಮಾನ ಗುರಿಗಳನ್ನು ತಲುಪುವುದು ರೈತರಿಗೆ ಸುಲಭದ ಕೆಲಸವಲ್ಲ. ಮುಖ್ಯವಾಗಿ ಅದಕ್ಕಾಗಿ ಹೊಸ ಯಂತ್ರಗಳು ಬೇಕಾದಾಗ ಮತ್ತು ಇಳುವರಿಯೂ ಕಡಿಮೆಯಾದಾಗ ಅಂತಹ ಪ್ರಯತ್ನಗಳಿಗೆ ಇಳಿಯಲು ಹಿಂಜರಿಯುತ್ತಾರೆ. ಭಾರತದಂತಹ ದೇಶದಲ್ಲಿ ಇನ್ನೂ ಕಷ್ಟ. ಏಕೆಂದರೆ ಶೇ 86ರಷ್ಟು ರೈತರು ಸಣ್ಣ ಅಥವಾ ಮಧ್ಯಮ ಎಕರೆಗಳಷ್ಟು ಭೂಮಿ ಹೊಂದಿರುತ್ತಾರೆ. ಅಂದರೆ 2 ಹೆಕ್ಟೇರ್ಗಳು ಅಥವಾ 5 ಎಕರೆಗಳ ಒಳಗೆ ಭೂಮಿ ಹೊಂದಿರುವಾಗ ಸಮಸ್ಯೆ ದೊಡ್ಡದಾಗಿರುತ್ತದೆ.
ಅಂತಹ ಸಂದರ್ಭದಲ್ಲಿ ಕಡಿಮೆ ಪ್ರಯತ್ನದ ಅತಿ ಹೆಚ್ಚು ಪರಿಣಾಮ ಬೀರುವ ಕೃಷಿ ಚಟುವಟಿಕೆಯಿಂದ ವ್ಯತ್ಯಾಸ ತರಬಹುದು. ಅಂತಹ ಒಂದು ಅಭ್ಯಾಸದಲ್ಲಿ ನಿರ್ದಿಷ್ಟ ಭತ್ತದ ಕೃಷಿಯಲ್ಲಿ ಪರ್ಯಾಯ ತೇವಗೊಳಿಸುವಿಕೆ ಮತ್ತು ಒಣಗಿಸುವಿಕೆ (AWD) ವಿಧಾನ. ಅಂದರೆ ಇದೊಂದು ನೀರು ಉಳಿಸುವ ತಂತ್ರವಾಗಿದ್ದು, ಹೊಲವನ್ನು ಆವರ್ತನದಲ್ಲಿ ಕೆಲವು ದಿನಗಳವರೆಗೆ ಒಣಗಲು ಬಿಡಲಾಗುತ್ತದೆ ಮತ್ತು ನಂತರ ಪುನಃ ನೀರಾವರಿ ಮಾಡಲಾಗುತ್ತದೆ.
ಸಾಂಪ್ರದಾಯಿಕ ಬಿತ್ತನೆ ವಿಧಾನ
ಸಾಂಪ್ರದಾಯಿಕ ಭತ್ತದ ಕೃಷಿಯಲ್ಲಿ ಭತ್ತದ ಬಿತ್ತನೆ ಮಾಡಲಾಗುತ್ತದೆ ಮತ್ತು ಹೊಸ ಸಸ್ಯಗಳನ್ನು ಬೆಳೆಸಲಾಗುತ್ತದೆ. ಬಿತ್ತನೆಯಾದ 25-30 ದಿನಗಳಲ್ಲಿ ಅದನ್ನು ತೆಗೆದು ಮರಳಿ ನೆಡಲಾಗುತ್ತದೆ. ಬಿತ್ತನೆಯಾದ ಜಾಗದ ಹತ್ತುಪಟ್ಟು ಜಾಗದಲ್ಲಿ ನೆಡಲಾಗುತ್ತದೆ. ಸಾಮಾನ್ಯ ಬೆಳೆಯ ಅವಧಿ ನೆಟ್ಟ ನಂತರ 90-100 ದಿನಗಳಾಗಿರುತ್ತವೆ. ಕೆಲವು ವಿಧದ ಭತ್ತದ ಬೆಳೆಯಲ್ಲಿ 120 ದಿನಗಳವರೆಗೂ ಇಡಲಾಗುತ್ತದೆ. 65 ದಿನಗಳವರೆಗೆ ನೀರಿನೊಳಗೆ ಭತ್ತದ ಬೆಳೆಯನ್ನು ಇಡಲಾಗಿರುತ್ತದೆ. ನೀರಿನ ಆಳವನ್ನು 4-5 ಸೆಂ.ಮೀ.ನಷ್ಟು ಇಟ್ಟು ನಿರಂತರವಾಗಿ ನೀರು ಹರಿಸಲಾಗುತ್ತದೆ. ಮುಖ್ಯವಾಗಿ ಕಳೆಗಳು ಬರದಂತೆ ಹೀಗೆ ನೀರಿನ ಪ್ರವಾಹ ಇಡಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಕಳೆಗಳ ಬೀಜಗಳಿಗೆ ಆಮ್ಲಜನಕ ಸಿಗದಂತೆ ಮಾಡಿ ಬೆಳವಣಿಗೆಯಾಗದಂತೆ ತಡೆಯಲಾಗುತ್ತದೆ. 65 ದಿನದ ನಂತರ ಭತ್ತದ ಬೆಳೆ ಸರಿಯಾಗಿ ಬೆಳೆದ ನಂತರ ಅಂತಹ ನೀರಿನ ಅಗತ್ಯವಿರುವುದಿಲ್ಲ. ಕಾಂಡದ ಒಳಗೆ ಹೂಗೊಂಚಲು ಮೂಡುತ್ತವೆ.
ನೀರು ತುಂಬಿದ ಭತ್ತದ ಗದ್ದೆಗಳು ಕಳೆಗಳನ್ನು ನಿಯಂತ್ರಿಸಲು ನೆರವಾದರೂ, ಪರಿಣಾಮವಾಗಿ ಆಮ್ಲಜನಕ ಮುಕ್ತ ಮಣ್ಣಿನ ಪರಿಸರವು ಸಸ್ಯದ ಸಾವಯವ ಪದಾರ್ಥಗಳನ್ನು ಕೊಳೆಸುವ ಮೆಥನೋಜೆನಿಕ್ ಸೂಕ್ಷ್ಮಜೀವಿಗಳಾದ ಆರ್ಕಿಯ ಮತ್ತು ಬ್ಯಾಕ್ಟೀರಿಯಗಳು ಬೆಳೆಯಲು ಸೂಕ್ತವಾಗಿರುತ್ತದೆ.
ಮೀಥೇನ್ ಒಂದು ಸಮರ್ಥ ಹಸಿರುಮನೆ ಅನಿಲವಾಗಿದೆ. 100 ವರ್ಷಗಳಲ್ಲಿ ಇಂಗಾಲದ ಡೈ ಆಕ್ಸೈಡ್ನ (CO2) ಜಾಗತಿಕ ತಾಪಮಾನ ಏರಿಕೆಯ ಸಾಮರ್ಥ್ಯಕ್ಕಿಂತ 28 ಪಟ್ಟು ಹೆಚ್ಚಾಗಿದೆ.
ಪರ್ಯಾಯ ಕೃಷಿ ಚಟುವಟಿಕೆ
ಪರ್ಯಾಯ ತೇವಗೊಳಿಸುವಿಕೆ ಮತ್ತು ಒಣಗಿಸುವಿಕೆ (AWD) ವಿಧಾನದಡಿ ಭತ್ತದ ಗದ್ದೆಗಳು ನಿರಂತರವಾಗಿ ನೀರು ಹರಿಸುವ ಬದಲಾಗಿ ಕಾಲಕಾಲಕ್ಕೆ ಒಣಗಿಸುವುದು ಮತ್ತು ಮರಳಿ ನೀರು ಹರಿಸುವುದು ಮಾಡಬೇಕಾಗುತ್ತದೆ. ಮೀಥೇನ್ ಉತ್ಪಾದಿಸುವ ಮೈಕ್ರೋಬ್ಗಳು ಬೆಳೆಯಲು ಸೂಕ್ತ ಸ್ಥಿತಿಯನ್ನು ನೀಡುವುದು ಉದ್ದೇಶವಾಗಿರುತ್ತದೆ.
ಆರಂಭಿಕ 20 ದಿನಗಳ ಕಾಲ ನೀರು ಹರಿಸಲಾಗುತ್ತದೆ. ನಂತರ 45 ದಿನದಲ್ಲಿ 12 ದಿನಗಳ ಕಾಲ ಗದ್ದೆಯನ್ನು ಒಣಗಿಸಬೇಕಾಗುತ್ತದೆ. 45 ದಿನಗಳೊಳಗೆ ಆರು ದಿನಗಳ ಕಾಲ ಎರಡು ಬಾರಿ ಗದ್ದೆ ಒಣಗಿಸುವಂತೆ ಸೂಚಿಸಲಾಗುತ್ತದೆ.
ಬೆಂಗಳೂರು ಮೂಲದ ಹವಾಮಾನ ತಂತ್ರಜ್ಞಾನದ ಸ್ಟಾರ್ಟಪ್ ಮಿಟ್ಟಿ ಲ್ಯಾಬ್ಸ್ ಈ ಕುರಿತು ವಿವರವಾದ ಅಧ್ಯಯನ ಮಾಡಿದೆ. ಸಂಸ್ಥೆಯು ತೆಲಂಗಾಣದ ವಾರಂಗಲ್ ಜಿಲ್ಲೆಯ ಮೂರು ಗ್ರಾಮಗಳ 30 ರೈತರ ಹೊಲಗಳಲ್ಲಿ ಈ ಅಧ್ಯಯನ ನಡೆಸಿದೆ. ಅಲ್ಲಿ ಭತ್ತವನ್ನು ಎಡಬ್ಲ್ಯುಡಿ ವಿಧಾನದಲ್ಲಿ ಬೆಳೆಯಲಾಗಿದೆ.
ಸಾಂಪ್ರದಾಯಿಕ ವರ್ಸಸ್ AWD
ಮಿಟ್ಟಿ ಲ್ಯಾಬ್ನ ಅಧ್ಯಯನದಲ್ಲಿ ಕಂಡುಬಂದಿರುವ ಪ್ರಕಾರ AWD ಹೊಲಗಳಲ್ಲಿ ಸರಾಸರಿ ನೀರಿನ ಬಳಕೆ 3.24 ದಶಲಕ್ಷ ಲೀಟರ್ಗಳಾಗಿದ್ದರೆ, ಸಾಂಪ್ರದಾಯಿಕ ಹೊಲಗಳಲ್ಲಿ 4.96 ದಶಲಕ್ಷ ಲೀಟರ್ಗಳಷ್ಟು ನೀರನ್ನು ಬಳಸಿಕೊಳ್ಳಲಾಗಿತ್ತು. AWD ಹೊಲಗಳಲ್ಲಿ ಸರಾಸರಿ ಮೀಥೇನ್ ಹೊರಸೂಸುವಿಕೆ ಪ್ರತಿ ಎಕರೆಗೆ 1.4 ಟನ್ಗಳಷ್ಟಿದ್ದರೆ, ಸಾಂಪ್ರದಾಯಿಕ ಹೊಲಗಳಲ್ಲಿ ಎಕರೆಗೆ 2.4 ಟನ್ಗಳಷ್ಟು ಇತ್ತು.
ಮುಖ್ಯವಾಗಿ ರೈತರ ಮಟ್ಟಿಗೆ ಸರಾಸರಿ ಇಳುವರಿ ಸಮಾನವಾಗಿತ್ತು. AWD ಎಂದರೆ ಬ್ರಷ್ ಮಾಡುವಾಗ ನಳ್ಳಿ ನೀರನ್ನು ನಿಲ್ಲಿಸುವ ರೀತಿಯ ವಿಧಾನ. ಅಗತ್ಯವಿದ್ದಾಗ ನೀರು ಪ್ರಸಾರ ಮಾಡುವುದು ಮತ್ತು ಅಗತ್ಯವಿಲ್ಲದಾಗ ತಡೆಯುವುದು!
AWDನಿಂದ ಮಿಥೇನ್ ಹೊರಸೂಸುವಿಕೆ ಕಡಿಮೆ ಮಾಡುವುದಕ್ಕಿಂತ ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದೆ. ರೈತರಿಗೆ ಕಾರ್ಬನ್ ಕ್ರೆಡಿಟ್ಗಳನ್ನು ಗಳಿಸಲು ಅವಕಾಶ ನೀಡಲಿದೆ. 2023-24ರಲ್ಲಿ ಮಿಟಿ ಲ್ಯಾಬಗಸ್ 850 ರೈತರ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ತೆಲಂಗಾಣದ 600 ರೈತರು ಮತ್ತು ಆಂಧ್ರಪ್ರದೇಶದ 250 ರೈತರು AWD ಮಾದರಿಯಲ್ಲಿ ಭತ್ತದ ಕೃಷಿ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಅವರ ಭತ್ತದ ಗದ್ದೆಯ್ಲಲಿ 30 ಸೆಂಮೀ ಉದ್ದದ ಪರ್ಫೋರೇಟೆಡ್ ಪೈಪ್ಗಳನ್ನು (ನೀರಿನ ಆಳವನ್ನು ಮೇಲ್ವಿಚಾರಣೆ ಮಾಡಲು) ಮತ್ತು ಕ್ಲೋಸ್ಡ್ ಅಕ್ರಿಲಿಕ್ ಚೇಂಬರ್ಗಳನ್ನು (ಮೀಥೇನ್ ಹೊರಸೂಸುವಿಕೆ ವಿವರ ಸಂಗ್ರಹಿಸಲು) ಅಳವಡಿಸಲಾಗಿದೆ.
ನಂತರ 2024-25ರಲ್ಲಿ 11,300 ರೈತರು ಈ ರೀತಿಯ ಕೃಷಿಪದ್ಧತಿಯನ್ನು (ತೆಲಂಗಾಣ: 6000, ಆಂಧ್ರಪ್ರದೇಶ :4000, ಒಡಿಶಾ: 800 ಮತ್ತು ತಮಿಳುನಾಡು: 500) ಅನುಸರಿಸಲು ಆರಂಭಿಸಿದರು. ಮುಂದುವರಿದು 2025-26ರಲ್ಲಿ 69,000 ರೈತರು ಈ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. (ತೆಲಂಗಾಣ: 35,000, ಆಂಧ್ರಪ್ರದೇಶ: 25,000, ಒಡಿಶಾ ಮತ್ತು ತಮಿಳುನಾಡು: 4000 ಮತ್ತು ಕರ್ನಾಟಕ: 1000). ಎರಡೂ ಖಾರಿಫ್ ಮತ್ತು ರಾಬಿ ಬೆಳೆ ಋತುಗಳಲ್ಲಿ ಈ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.
ರೈತರಿಗೆ ಕಾರ್ಬನ್ ಕ್ರೆಡಿಟ್ ಗಳಿಕೆ
ಕಾರ್ಬನ್ ಕ್ರೆಡಿಟ್ಗಳನ್ನು ಡಾಟಾ ಸೆಂಟರ್ ಆಪರೇಟರ್ಗಳು, ವಾಯುಯಾನಗಳು ಮತ್ತು ಇತರ ವ್ಯಾಪಕವಾಗಿ ಶಕ್ತಿ ಮತ್ತು ನೀರು ಬಳಕೆಯ ಉದ್ಯಮಗಳು ಖರೀದಿಸುತ್ತಿವೆ. ಕಾರ್ಬನ್ ಕ್ರೆಡಿಟ್ಸ್ಗಳು ಇದೀಗ ಪ್ರತಿ ಟನ್ಗೆ 15-25 ಡಾಲರ್ಗಳಷ್ಟು ಲಾಭ ತಂದುಕೊಡುತ್ತಿದೆ. ಏಕ ಭತ್ತದ ಬೆಳೆಯಿಂದ ಪ್ರತಿ ಹೆಕ್ಟೇರ್ಗೆ 2.5 ಟನ್ಗಳಷ್ಟು ಕಾರ್ಬನ್ ಕ್ರೆಡಿಟ್ ಪಡೆಯಬಹುದು. ಆ ಮೂಲಕ ಕನಿಷ್ಠ 35.5 ಡಾಲರ್ನಷ್ಟು ಕಾರ್ಬನ್ ಕ್ರೆಡಿಟ್ ಗಳಿಸಬಹುದು. ಈಗಿನ ದರದಲ್ಲಿ ನೋಡಿದರೆ ಪ್ರತಿ ಹೆಕ್ಟೇರ್ಗೆ 3,367 ರೂ. ಗಳಿಸಬಹುದಾಗಿದೆ. ಪ್ರತಿ ಎಕರೆಗೆ 1,363 ರೂ. ಗಳಿಸಬಹುದು.
ಮುಂದಿನ 2 ವರ್ಷಗಳಲ್ಲಿ 3 ಲಕ್ಷ ರೈತರನ್ನು ಈ ಯೋಜನೆಯೊಳಗೆ ತರುವ ಉದ್ದೇಶವನ್ನು ಮಿಟ್ಟಿ ಲ್ಯಾಬ್ಸ್ ಹೊಂದಿದೆ.
ಕೃಪೆ: indianexpress.com







