ನೇಪಾಳದ ರಸುವಾಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಧ್ವಂಸ: ಕಾಣೆಯಾದವರಿಗಾಗಿ ಕುಸಿದ ಪರ್ವತದ ಹಾದಿಗಳಲ್ಲಿ ಕುಟುಂಬಗಳ ಶೋಧ

Photo Credit : ThePrint
40 ವರ್ಷದ ಭರತ್ ರಾಜ್ ಬಿಷ್ತ್ ತಮ್ಮ ಸಹೋದರ ಕೆಲಸ ಮಾಡುತ್ತಿದ್ದ ಸ್ಥಳವನ್ನು ಇದೇ ಮೊದಲ ಬಾರಿ ನೋಡಿದ್ದು, ಪ್ರವಾಹದಿಂದ ಅದು ಸಂಪೂರ್ಣವಾಗಿ ನಾಶವಾಗಿತ್ತು. ನೇಪಾಳದ ರಸುವಾ ಜಿಲ್ಲೆಯಲ್ಲಿ ಭೀಕರ ಮೇಘಸ್ಫೋಟ ಸಂಭವಿಸಿದ ಒಂಬತ್ತು ದಿನಗಳ ನಂತರ, ಅಪ್ಪರ್ ತ್ರಿಶೂಲಿ 3-ಎ ಜಲವಿದ್ಯುತ್ ಸುರಂಗದಿಂದ ಇಬ್ಬರು ವ್ಯಕ್ತಿಗಳು ಜೀವಂತವಾಗಿ ಹೊರಬಂದಿದ್ದರು. ಇದು ಕಾಣೆಯಾದವರ ಕುಟುಂಬಗಳಲ್ಲಿ ಭರವಸೆಯ ಕಿರಣ ಮೂಡಿಸಿತ್ತು.
ತಮ್ಮ ಹಿರಿಯ ಸಹೋದರ ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಬಿಷ್ತ್ ಇಂದಿಗೂ ಉತ್ತರಕ್ಕಾಗಿ ಕಾಯುತ್ತಿದ್ದಾರೆ.
ಮಳೆಯಿಂದ ಆವೃತವಾದ ಮಧ್ಯಾಹ್ನ ಬಿಷ್ತ್, ಜಲವಿದ್ಯುತ್ ಸುರಂಗವಾಗಿದ್ದ ಮಣ್ಣು ಮತ್ತು ಮರಳಿನ ರಾಶಿಯತ್ತ ಕಣ್ಣು ಹಾಯಿಸುತ್ತಾರೆ. ಅವರ ಹಿರಿಯ ಸಹೋದರ ಕೀರ್ತ್ ಸಿಂಗ್ ಬಿಷ್ತ್ ಇಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಪಶ್ಚಿಮ ನೇಪಾಳದ ದೋತಿ ಜಿಲ್ಲೆಯವರಾದ ಬಿಷ್ತ್, ರಸುವಾ ತಲುಪಲು ಒಂದು ದಿನ ಪ್ರಯಾಣ ಮಾಡಿದ್ದರು. ನೇಪಾಳ-ಟಿಬೆಟ್ ಗಡಿಯಲ್ಲಿರುವ ರಸುವಾ ಜಿಲ್ಲೆಯು ಆಗಸ್ಟ್ 26 ರಂದು ಸಂಭವಿಸಿದ ಪ್ರಕೃತಿ ವಿಕೋಪದ ಮುಖ್ಯ ಕೇಂದ್ರವಾಗಿತ್ತು. ಈ ದುರಂತದಲ್ಲಿ 1,300 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
"ಪ್ರವಾಹದ ನಂತರ, 3-ಎ ಸುರಂಗದಲ್ಲಿದ್ದ ಜನರನ್ನು ರಕ್ಷಿಸಲಾಗುತ್ತಿದೆ ಎಂದು ನಾವು ಆರಂಭದಲ್ಲಿ ಭಾವಿಸಿದ್ದೆವು" ಎಂದು ಬಿದುರ್ನಿಂದ ಹೆಲಿಕಾಪ್ಟರ್ ಮೂಲಕ ಈ ಪ್ರದೇಶವನ್ನು ತಲುಪಿದ ಬಿಷ್ತ್ ಹೇಳಿರುವುದಾಗಿ ʼದಿ ಪ್ರಿಂಟ್ʼ ವರದಿ ಉಲ್ಲೇಖಿಸಿದೆ. "ನನ್ನ ಸಹೋದರ ಬದುಕಿ ಮನೆಗೆ ಹಿಂತಿರುಗುತ್ತಾನೆ ಎಂದುಕೊಂಡಿದ್ದೆ. ಆದರೆ ಇಬ್ಬರು ಮಾತ್ರ ರಕ್ಷಿಸಲ್ಪಟ್ಟಿದ್ದಾರೆ. ಅವರಲ್ಲಿ ನನ್ನ ಸಹೋದರ ಇಲ್ಲ ಎಂಬುದು ತಿಳಿದ ನಂತರ, ನಾನೇ ಸ್ವತಃ ಇಲ್ಲಿಗೆ ಬಂದೆ" ಎಂದು ಅವರು ದುಃಖ ತೋಡಿಕೊಂಡರು.
ಬಿಷ್ತ್ ಅವರಂತೆ ನೇಪಾಳದ ಸೇನೆಯಿಂದ ಮಾಹಿತಿಗಾಗಿ ಕಾಯುತ್ತಿದ್ದ ಅನೇಕರು ಸ್ವತಃ ಪಯಣ ಬೆಳೆಸಲು ನಿರ್ಧರಿಸಿದರು. ದೂರದಲ್ಲಿದ್ದುಕೊಂಡು ವರದಿಗಳಿಗಾಗಿ ಕಾಯುವುದಕ್ಕಿಂತ, ಪ್ರತ್ಯಕ್ಷವಾಗಿ ಸತ್ಯವನ್ನು ಎದುರಿಸುವುದೇ ಅವರಿಗೆ ಸೂಕ್ತವೆನಿಸಿತ್ತು.
ಸೇನೆಯ ನೆರವಿನಿಂದ ಬಿಷ್ತ್ ಶಾಂತಿ ಬಜಾರ್ ತಲುಪಿದರು. ಶಾಂತಿ ಬಜಾರ್ ಎಂಬುದು ಎರಡು ವಾರಗಳ ಹಿಂದೆ ಪ್ರವಾಹಕ್ಕೆ ತುತ್ತಾಗಿದ್ದ ನೇಪಾಳ ವಿದ್ಯುಚ್ಛಕ್ತಿ ಪ್ರಾಧಿಕಾರದ 60 ಮೆಗಾವಾಟ್ ಸಾಮರ್ಥ್ಯದ ಸುರಂಗಕ್ಕೆ ಅತ್ಯಂತ ಸಮೀಪದಲ್ಲಿರುವ ಗ್ರಾಮವಾಗಿದೆ. ಪ್ರಸ್ತುತ ಕೆಸರುಮಯವಾಗಿ ಹರಿಯುತ್ತಿರುವ ತ್ರಿಶೂಲಿ ನದಿಯು ಗುರುತೇ ಸಿಗದಂತಾಗಿರುವ ಸುರಂಗ ಮತ್ತು ವಿದ್ಯುತ್ ಸ್ಥಾವರದ ಪಕ್ಕದಲ್ಲೇ ಹರಿಯುತ್ತಿದ್ದು, ಇಡೀ ಪ್ರದೇಶವು ಬೂದು ಬಣ್ಣದ ಕೆಸರಿನಿಂದ ತುಂಬಿದೆ.
ನುವಾಕೋಟ್ ಮತ್ತು ರಸುವಾ ಜಿಲ್ಲೆಗಳ ನಡುವೆ ಹರಡಿರುವ ಈ ದುರ್ಗಮ ಪ್ರದೇಶದಲ್ಲಿ ಸೆಪ್ಟೆಂಬರ್ 4 ರಂದು 3-ಎ ಸುರಂಗದಿಂದ ಇಬ್ಬರನ್ನು ಜೀವಂತವಾಗಿ ರಕ್ಷಿಸಿದಾಗ ಕುಟುಂಬಗಳಲ್ಲಿ ಭರವಸೆ ಮೂಡಿತ್ತು. ಆದರೆ ಅಂದಿನಿಂದ ಸೇನಾಪಡೆಗೆ ಸಿಕ್ಕಿರುವುದು ಕೇವಲ ಒಂದು ಮೃತದೇಹ ಮಾತ್ರ. ಇದರಿಂದಾಗಿ ಬಿಷ್ತ್ ಅವರಂತೆ ತಮ್ಮವರನ್ನು ಕಳೆದುಕೊಂಡಿರುವ ಉಳಿದ 40 ಕಾರ್ಮಿಕರ ಕುಟುಂಬಗಳು ತೀವ್ರ ಆತಂಕಕ್ಕೆ ಒಳಗಾಗಿವೆ.
ಇಲ್ಲಿನ 3-ಎ ಸುರಂಗದ ಬಳಿ ದುಃಖಿತ ಕುಟುಂಬಗಳು, ದಣಿದ ರಕ್ಷಣಾಪಡೆಗಳು ಹಾಗೂ ಮನೆ ಮತ್ತು ಜಮೀನುಗಳನ್ನು ಕಳೆದುಕೊಂಡ ನಿರಾಶ್ರಿತ ಗ್ರಾಮಸ್ಥರು ಒಂದೆಡೆ ಸೇರುತ್ತಿದ್ದಾರೆ. ರಸುವಾಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಕೊಚ್ಚಿಹೋಗಿರುವುದರಿಂದ ಪರಿಹಾರ ಸಾಮಗ್ರಿಗಳ ಪೂರೈಕೆ ಕೊರತೆಯಿದೆ. 'ವಿಘ್ನಹರ್ತ' ಎಂಬ ಏಕೈಕ ಸ್ವಯಂಸೇವಾ ಸಂಸ್ಥೆ ಪ್ರಸ್ತುತ ಆಹಾರ ಮತ್ತು ಆರೋಗ್ಯ ಪರಿಹಾರ ಕಾರ್ಯಾಚರಣೆಯ ನೇತೃತ್ವ ವಹಿಸಿದೆ.
"ಸಿಮ್ಲೆ, ರಸುವಾ ಮತ್ತು ಲಾಂಗ್ಟಂಗ್ ಪ್ರದೇಶದ ಇದೇ ಜನರು 2015 ರ ಭೂಕಂಪದ ವೇಳೆಯೂ ತೀವ್ರವಾಗಿ ಹಾನಿಗೊಳಗಾಗಿದ್ದರು. ಆ ಕಷ್ಟದಿಂದ ಅವರು ಚೇತರಿಸಿಕೊಂಡು ಮತ್ತೆ ಜೀವನ ಕಟ್ಟಿಕೊಂಡಿದ್ದರು. ಈಗ 2026 ರಲ್ಲಿ, ಅದೇ ಜನರು ಮತ್ತೆ ಈ ಪ್ರವಾಹದ ನೇರ ಸಂತ್ರಸ್ತರಾಗಿದ್ದಾರೆ" ಎಂದು ಹವಾಮಾನ ಕಾರ್ಯಕರ್ತೆ ಹಾಗೂ ವಿಘ್ನಹರ್ತ ಸಂಸ್ಥೆಯ ಸದಸ್ಯೆ ತಾಶಿ ಲಹಝೋಮ್ ಹೇಳಿದ್ದಾರೆ.
ಅವರಿಂದ ಯಾವುದೇ ಮಾಹಿತಿ ಸಿಗಲಿಲ್ಲ:
ನುವಾಕೋಟ್ ರಾಜಧಾನಿ ಬಿದುರ್ನಿಂದ ರಸುವಾ ರಾಜಧಾನಿ ಧುಂಚೆವರೆಗೆ ತ್ರಿಶೂಲಿ ನದಿಯ ಉದ್ದಕ್ಕೂ ಕಾರಿನಲ್ಲಿ ಪ್ರಯಾಣಿಸಲು ಹಿಂದೆ 40 ನಿಮಿಷ ಬೇಕಾಗುತ್ತಿತ್ತು. ಆದರೆ ಈಗ ಕಡಿದಾದ ಪರ್ವತ ಹಾದಿಗಳು ಮತ್ತು ಕುಸಿದ ರಸ್ತೆಗಳ ಮೂಲಕ ಪ್ರಯಾಣಿಸಲು ಸುಮಾರು ಆರೂವರೆ ಗಂಟೆ ಬೇಕಾಗುತ್ತಿದೆ. ಕಾಣೆಯಾದ ಸುರಂಗ ಕಾರ್ಮಿಕರ ಕುಟುಂಬದ ಸದಸ್ಯರಿಗೆ ಬಿದುರ್ನಿಂದ ಹೆಲಿಕಾಪ್ಟರ್ ಸಿಗದಿದ್ದರೆ ಈ ಹಾದಿಯೊಂದೇ ಏಕೈಕ ಮಾರ್ಗವಾಗಿದೆ.
ತ್ರಿಶೂಲಿ 3-ಎ, ತ್ರಿಶೂಲಿ 3-ಬೊ ಮತ್ತು ಅಪ್ಪರ್ ತ್ರಿಶೂಲಿ-1 ಜಲವಿದ್ಯುತ್ ಸುರಂಗಗಳು ಇದೇ ನದಿ ತೀರದಲ್ಲಿದ್ದು, ನೀರ್ಗಲ್ಲು ಕುಸಿ ತದಿಂದ ನದಿಯಲ್ಲಿ ಭೀಕರ ಪ್ರವಾಹ ಉಂಟಾದಾಗ ಈ ಸುರಂಗಗಳಲ್ಲಿ ಕೆಲಸ ಮಾಡುತ್ತಿದ್ದ 300ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಪ್ರವಾಹಕ್ಕೆ ಸುರಂಗಗಳ ಜೊತೆಗೆ ನುವಾಕೋಟ್ನಿಂದ ರಸುವಾಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯೂ ಧ್ವಂಸಗೊಂಡಿದೆ. ಹೀಗಾಗಿ ಸೈನಿಕರು, ಹಿಟಾಚಿ ಯಂತ್ರಗಳು, ಪರಿಹಾರ ಸಾಮಗ್ರಿಗಳು ಹಾಗೂ ಟೆಂಟ್ ಸೇರಿದಂತೆ ಪ್ರತಿಯೊಂದನ್ನೂ ಹೆಲಿಕಾಪ್ಟರ್ ಮೂಲಕವೇ ಏರ್ಡ್ರಾಪ್ ಮಾಡಲು ಸೇನಾಪಡೆ ನಿರ್ಧರಿಸಿದೆ.
ಪ್ರಸ್ತುತ ಸಂಚಾರಕ್ಕೆ ಲಭ್ಯವಿರುವ ಏಕೈಕ ಹಾದಿಯಲ್ಲಿ ಕೇವಲ ದ್ವಿಚಕ್ರ ವಾಹನಗಳು ಮಾತ್ರ ಸಂಚರಿಸಬಹುದಾಗಿದೆ.
ಖತರ್ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿರುವ 56 ವರ್ಷದ ಸುನಾ ತಮಾಂಗ್, ಪ್ರವಾಹ ಸಂಭವಿಸಿದಾಗ ಸೌದಿ ಅರೇಬಿಯಾದಲ್ಲಿದ್ದರು. ಅವರ ಮಗ 3-ಎ ಸುರಂಗದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ತ್ರಿಶೂಲಿ 3-ಬೊ ಸುರಂಗದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆತ ತನ್ನ ಹೆಂಡತಿ ಮತ್ತು ಒಂಬತ್ತು ತಿಂಗಳ ಮಗುವಿನೊಂದಿಗೆ ಸಮೀಪದಲ್ಲೇ ವಾಸಿಸುತ್ತಿದ್ದ. ತಮಾಂಗ್ ಇಲ್ಲಿಯವರೆಗೆ ಮಗ ಕೆಲಸ ಮಾಡುವ ಸ್ಥಳಕ್ಕೆ ಹೋಗಿರಲಿಲ್ಲ ಮತ್ತು ಮೊಮ್ಮಗನನ್ನೂ ನೋಡಿರಲಿಲ್ಲ. ಪ್ರವಾಹದ ಸುದ್ದಿ ಕೇಳಿ ದಿನಗಟ್ಟಲೆ ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಲು ತೀವ್ರ ಯತ್ನ ನಡೆಸಿದ್ದರು.
"ಅವರಿಂದ ಯಾವುದೇ ಮಾಹಿತಿ ಸಿಗಲಿಲ್ಲ. ಆರಂಭದ ದಿನಗಳಲ್ಲಿ ಸುರಂಗದ ಪ್ರದೇಶಕ್ಕೆ ಪ್ರಯಾಣಿಸುವುದು ಅತ್ಯಂತ ಕಷ್ಟಕರವಾಗಿತ್ತು ಎಂದು ಸಂಬಂಧಿಕರು ಹೇಳಿದರು. ನಾನು ನೇಪಾಳಕ್ಕೆ ತಲುಪುವಷ್ಟರಲ್ಲಿ ಅವರಿಗೆ ನನ್ನ ಮಗನ ಮೃತದೇಹ ಸಿಕ್ಕಿತ್ತು" ಎಂದು ತಮಾಂಗ್ ಕಣ್ಣೀರಾಗಿದ್ದಾರೆ.
ಮಗನ ಉತ್ತರಕ್ರಿಯೆಗಳನ್ನು ಪೂರ್ಣಗೊಳಿಸಿ ತಲೆ ಬೋಳಿಸಿಕೊಂಡ ತಮಾಂಗ್, ನುವಾಕೋಟ್ನ ಮುನಿಸಿಪಾಲಿಟಿಯಾದ ಮೈಗಾಂವ್ನಿಂದ ತಮ್ಮ ಸ್ನೇಹಿತನ ಬೈಕ್ ಏರಿ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ತ್ರಿಶೂಲಿ 3-ಬೊ ಸುರಂಗಕ್ಕೆ ತೆರಳಿದರು. ಸುರಂಗವನ್ನು ತಲುಪಲು ಅವರಿಗೆ ಏಳು ಗಂಟೆ ಬೇಕಾಯಿತು, ಆದರೆ ಅಲ್ಲಿ ಅವರ ಕುಟುಂಬದ ಬಗ್ಗೆ ರಕ್ಷಣಾ ಪಡೆಗಳ ಬಳಿ ಯಾವುದೇ ಹೊಸ ಮಾಹಿತಿ ಇರಲಿಲ್ಲ.
"ನನ್ನ ಮಗ ಸತ್ತಿದ್ದಾನೆ ಎಂದು ನನಗೆ ತಿಳಿದಿದೆ, ಆದರೆ ಬಹುಶಃ ನನ್ನ ಸೊಸೆ ಮತ್ತು ಮೊಮ್ಮಗ ತಪ್ಪಿಸಿಕೊಂಡಿರಬಹುದೇ? ಅವರು ಬದುಕಿಲ್ಲದಿದ್ದರೂ, ಅವರ ಮೃತದೇಹಗಳು ಸಿಕ್ಕರೆ ಅದನ್ನು ನೋಡಲು ನಾನು ಬಯಸಿದ್ದೆ. ಅವರ ಮನೆ ಈಗ ಉಳಿದಿಲ್ಲ, ಪ್ರತಿಯೊಂದೂ ಕೊಚ್ಚಿಹೋಗಿದೆ" ಎಂದು ಸುರಂಗದಿಂದ ಹಿಂತಿರುಗಿದ ತಮಾಂಗ್ ಹೇಳಿದರು.
ರಸ್ತೆ ಸಂಪೂರ್ಣ ಬಂದ್:
ತ್ರಿಶೂಲಿ 3-ಎ ಸುರಂಗದ ಅರ್ಧಭಾಗ ನುವಾಕೋಟ್ ಜಿಲ್ಲೆಯಲ್ಲಿದ್ದರೆ, ಇನ್ನರ್ಧ ರಸುವಾ ಜಿಲ್ಲೆಯಲ್ಲಿದೆ. ಹೀಗಾಗಿ ಸುರಂಗದ ತಕ್ಷಣದ ಪಕ್ಕದಲ್ಲಿರುವ ಹಳ್ಳಿಗಳ ಪ್ರವಾಹ ಸಂತ್ರಸ್ತರು ಒಂದೆಡೆ ಸೇರಲು ಈ ಮಣ್ಣಿನ ರಾಶಿಯೇ ಪ್ರಮುಖ ಕೇಂದ್ರವಾಗಿದೆ.
ಸಾಲಾಗಿ ಹಾಕಲಾಗಿರುವ ನೀಲಿ ಬಣ್ಣದ ನೇಪಾಳ ಸೇನಾಪಡೆಯ ಟೆಂಟ್ಗಳು ಮತ್ತು ಹೆಲಿಕಾಪ್ಟರ್ ಲ್ಯಾಂಡಿಂಗ್ಗಾಗಿ ಸಿದ್ಧಪಡಿಸಲಾದ ತುರ್ತು ಜಾಗದೊಂದಿಗೆ, ಈ ಕೆಸರುಮಯ ಸುರಂಗವು ಈಗ ನುವಾಕೋಟ್ನ ಶಾಂತಿ ಬಜಾರ್ ಮತ್ತು ರಸುವಾದ ಸಿಮ್ಲೆ ಗ್ರಾಮಸ್ಥರಿಗೆ ಪರಿಹಾರ ಸಾಮಗ್ರಿ ತಲುಪಿಸುವ ತಾಣವಾಗಿದೆ. ಈ ಭಾಗದಲ್ಲಿ 100 ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತವಾಗಿವೆ.
ನೇಪಾಳ ಸೇನೆಯ ಹೆಲಿಕಾಪ್ಟರ್ಗಳು ಆಹಾರ, ಔಷಧ ಮತ್ತು ಇತರ ತುರ್ತು ಸಾಮಗ್ರಿಗಳೊಂದಿಗೆ ದಿನಕ್ಕೆ ಎರಡು ಬಾರಿ ಹಾರಾಟ ನಡೆಸುತ್ತಿವೆ. ಆಗಸ್ಟ್ 26 ರ ಪ್ರವಾಹದ ನಂತರ ಅತ್ಯಂತ ದುರ್ಗಮವಾಗಿರುವ ಈ ಪ್ರದೇಶದ ಗ್ರಾಮಸ್ಥರಿಗೆ ಪರಿಹಾರ ಸಾಮಗ್ರಿಗಳನ್ನು ಪೂರೈಸಲು ರೆಡ್ ಕ್ರಾಸ್ ಸಂಸ್ಥೆಯೂ ವಿಮಾನ ಸೇವೆಯನ್ನು ಬಳಸಿಕೊಂಡಿದೆ.
ಗಡಿಭಾಗದಲ್ಲಿರುವ ತ್ರಿಶೂಲಿ ನದಿಯು ಕಡಿದಾದ ಪರ್ವತಗಳಿಂದ ಆವೃತವಾದ ಆಳವಾದ ಕಂದಕದಲ್ಲಿ ಹರಿಯುತ್ತದೆ. ಸುರಂಗಗಳಿಂದ ಹಿಡಿದು ಈಗ ಧ್ವಂಸಗೊಂಡಿರುವ ಮನೆಗಳವರೆಗೆ, ಪ್ರತಿಯೊಂದು ನಿರ್ಮಾಣವೂ ಪರ್ವತದ ಕಿರಿದಾದ ಜಾಗದಲ್ಲೇ ರೂಪುಗೊಂಡಿತ್ತು.
ಈಗ ನದಿಯ ಹರಿವು ಇಡೀ ಪರ್ವತದ ಬದಿಗಳನ್ನು ಕೊಚ್ಚಿಕೊಂಡು ಹೋಗಿದ್ದು ಉತ್ತರ ಮತ್ತು ದಕ್ಷಿಣದ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಿದೆ. ಇದರಿಂದಾಗಿ ಸಿಮ್ಲೆ ಮತ್ತು ಶಾಂತಿ ಬಜಾರ್ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶಾಂತಿ ಬಜಾರ್ನಲ್ಲಿ ಪರಿಹಾರ ಶಿಬಿರ ಸ್ಥಾಪಿಸಿರುವ 'ವಿಘ್ನಹರ್ತ' ಸ್ವಯಂಸೇವಾ ಸಂಸ್ಥೆಯ ಸಂಸ್ಥಾಪಕ ಗೋಮೇಶ್ ಸಿಂಗ್ ಉಪ್ರೇತಿ ಮಾತನಾಡಿ, "ಬಿದುರ್ನಿಂದ ಬರುವ ರಸ್ತೆ ಸಂಪೂರ್ಣ ಬಂದ್ ಆಗಿದೆ. ಕೇವಲ ಪರ್ವತದ ಕಾಲುದಾರಿಗಳು ಮಾತ್ರ ಉಳಿದಿವೆ. ಧುಂಚೆಗೆ ಹೋಗುವ ರಸ್ತೆಯೂ ಕಡಿತಗೊಂಡಿದ್ದು, ಈ ಪ್ರದೇಶ ಸಂಪೂರ್ಣವಾಗಿ ಒಂಟಿಯಾಗಿದೆ. ಇತರ ಯಾವುದೇ ಎನ್ಜಿಒಗಳಿಗೆ ಇಲ್ಲಿಗೆ ಬರಲು ಸಾಧ್ಯವಾಗುವುದಿಲ್ಲ ಎಂಬುದು ತಿಳಿದೇ ನಾವು ಇಲ್ಲಿಗೆ ಬಂದೆವು" ಎಂದಿದ್ದಾರೆ.
ಪ್ರವಾಹ ಸಂಭವಿಸಿದ ನಾಲ್ಕು ದಿನಗಳ ನಂತರ ವಿಘ್ನಹರ್ತ ಸಂಸ್ಥೆಯ ಸುಮಾರು 10 ಜನರು 3-ಎ ಸುರಂಗವನ್ನು ತಲುಪಿದಾಗ, ಈ ಭಾಗದ ಜನರ ಅಗತ್ಯಗಳು ಅರ್ಥವಾಗಲು ತೊಡಗಿದವು.
ಸೇನೆ ಮತ್ತು ಸರ್ಕಾರದ ಮೂಲಗಳಿಂದ ಆಹಾರ ಹಾಗೂ ಆಶ್ರಯದ ತಕ್ಷಣದ ಅಗತ್ಯಗಳು ಪೂರೈಸಲ್ಪಡುತ್ತಿದ್ದರೂ, ರಸ್ತೆಗಳಿಲ್ಲದ ಕಾರಣ ಗ್ರಾಮಸ್ಥರಿಗೆ ಶಾಲೆಗಳು, ಆಸ್ಪತ್ರೆಗಳು ಮತ್ತು ಜಿಲ್ಲಾ ಕಚೇರಿಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ವಾರದಿಂದ ವಿಘ್ನಹರ್ತ ಸಂಸ್ಥೆಯು ಸ್ಥಳೀಯ ಜನರಿಗಾಗಿ, ಮುಖ್ಯವಾಗಿ ಪ್ರವಾಹ ಸಂತ್ರಸ್ತರಿಗಾಗಿ ತಾತ್ಕಾಲಿಕ ಆರೋಗ್ಯ ಶಿಬಿರವನ್ನು ನಡೆಸುತ್ತಿದೆ.
ಶಾಂತಿ ಬಜಾರ್ನಲ್ಲಿರುವ ವಿಘ್ನಹರ್ತ ನೆರವು ತಂಡದ ಭಾಗವಾಗಿರುವ ಲಹಝೋಮ್ ಮಾತನಾಡಿ, "ನಾವು ಎರಡು ದಿನಗಳಲ್ಲಿ 300 ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿದ್ದೇವೆ. ಪ್ರವಾಹದ ನಂತರ ಈ ಎರಡು ಹಳ್ಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆಯ ಅಗತ್ಯ ಎಷ್ಟೊಂದು ತೀವ್ರವಾಗಿತ್ತು ಎಂಬುದಕ್ಕೆ ಇದು ಸಾಕ್ಷಿ. ಅನೇಕರು ಪ್ರವಾಹದ ಸಮಯದಲ್ಲಿ ಗಾಯಗೊಂಡಿದ್ದರು. ಗರ್ಭಿಣಿಯರಂತೆ ಸಮುದಾಯದ ಇತರರಿಗೂ ವೈದ್ಯಕೀಯ ಆರೈಕೆಯ ಅಗತ್ಯವಿತ್ತು" ಎಂದಿದ್ದಾರೆ.
ಸಿಮ್ಲೆಯಲ್ಲಿದ್ದ ತುಂಬು ಗರ್ಭಿಣಿಯೊಬ್ಬರಿಗೆ ಡೈಪರ್ಗಳನ್ನು ವ್ಯವಸ್ಥೆ ಮಾಡಲು ಹರಸಾಹಸ ಪಟ್ಟ ಲಹಝೋಮ್, ಪ್ರವಾಹ ಪೀಡಿತ ಸಮುದಾಯಗಳ ಅಗತ್ಯಗಳು ಕೇವಲ ಅಲ್ಪಾವಧಿಯದ್ದಲ್ಲ ಎಂಬುದನ್ನು ಮನಗಂಡರು.
ಇನ್ನೊಂದೆಡೆ, ಸಿಮ್ಲೆ ಮತ್ತು ಶಾಂತಿ ಬಜಾರ್ನ ಗ್ರಾಮಸ್ಥರು ಪರಿಹಾರ ಸಾಮಗ್ರಿಗಳನ್ನು ಪಡೆಯಲು ನಿಗದಿತ ಸ್ಥಳಕ್ಕೆ ಕಾಲ್ನಡಿಗೆಯಲ್ಲೇ ಬರಬೇಕಿರುವುದನ್ನು ಮತ್ತು ಅವರಲ್ಲಿ ಹಲವರಿಗೆ ನಡೆಯಲು ಸಾಧ್ಯವಾಗದಿರುವುದನ್ನು ಉಪ್ರೇತಿ ಗಮನಿಸಿದರು. ಶೀಘ್ರದಲ್ಲೇ ಅದಕ್ಕೆ ಕಾರಣವನ್ನು ಅರ್ಥಮಾಡಿಕೊಂಡ ಅವರು, ಹಿಟಾಚಿ ಯಂತ್ರಗಳನ್ನು ಬಳಸಿ ರಸ್ತೆ ತೆರವುಗೊಳಿಸುವಂತೆ ಸೈನ್ಯವನ್ನು ಕೋರಿದರು. ಟ್ರಕ್ ಮೂಲಕ ಪರಿಹಾರ ತಲುಪಿಸುವ ಮಾರ್ಗಗಳನ್ನು ಕಂಡುಕೊಳ್ಳಲು ಆರಂಭಿಸಿದರು.
"ಹಲವು ಗ್ರಾಮಸ್ಥರು ಪ್ರವಾಹದಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದಾರೆ ಮತ್ತು ಅವರಿಗಾಗಿ ಉತ್ತರಕ್ರಿಯೆಗಳನ್ನು ನಡೆಸುತ್ತಿದ್ದಾರೆ ಎಂಬುದು ಸೂಕ್ಷ್ಮ ವಿಷಯವಾಗಿದೆ. ಅವರು ಎಂಟು ದಿನಗಳಿಂದ ಉಪ್ಪು ಅಥವಾ ಬೇರೆ ಯಾವುದೇ ಆಹಾರ ಸೇವಿಸಿರಲಿಲ್ಲ. ಹೀಗಾಗಿ ಆಹಾರದ ಚೀಲಗಳನ್ನು ಹೊರಲು ಅವರು ತೀವ್ರವಾಗಿ ಅಶಕ್ತರಾಗಿದ್ದರು" ಎಂದು ಉಪ್ರೇತಿ ಹೇಳಿದರು.
ದೇವಿಘಾಟ್, ತ್ರಿಶೂಲಿ ಬಜಾರ್ ಅಥವಾ ಬೆತ್ರಾವತಿಯ ಇತರ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಲಿಸಿದರೆ, ಇಲ್ಲಿನ ನದಿಯ ಮೇಲ್ಭಾಗದ ಭೂಪ್ರದೇಶವು ಅಪಾಯಕಾರಿ ಮತ್ತು ಕಠಿಣವಾಗಿದೆ. ಹತ್ತಿರದ ನಗರವಾದ ಬಿದುರ್ ಇಲ್ಲಿಂದ ಕನಿಷ್ಠ ಆರು ಗಂಟೆಗಳ ಪ್ರಯಾಣದ ದೂರದಲ್ಲಿದೆ.
ಹುಡುಕಾಟದಲ್ಲಿ ಏನೂ ಸಿಗಲಿಲ್ಲ:
ರಾತ್ರಿ ಆವರಿಸುತ್ತಿದ್ದಂತೆ, 3-ಎ ಸುರಂಗದಲ್ಲಿದ್ದ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಆ ದಿನಕ್ಕೆ ಮುಕ್ತಾಯಗೊಳಿಸಲಾಯಿತು. ಮಳೆ ಸುರಿಯಲು ಪ್ರಾರಂಭಿಸುವ ಮುನ್ನವೇ ಭದ್ರತಾ ಸಿಬ್ಬಂದಿ ತಮ್ಮ ಟೆಂಟ್ಗಳತ್ತ ಹಿಂತಿರುಗಿದರು. ಇಬ್ಬರು ಜೀವಂತವಾಗಿ ಪತ್ತೆಯಾದ ನಾಲ್ಕು ದಿನಗಳ ನಂತರ, ರಕ್ಷಣಾ ಕಾರ್ಯದ ವೇಗ ತಗ್ಗಿದೆ. ಕಠಿಣ ಭೂಪ್ರದೇಶ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಪ್ರತಿದಿನವೂ ಮಣ್ಣು ತೆಗೆಯುವ ಕೆಲಸಕ್ಕೆ ಅಡೆತಡೆಗಳು ಎದುರಾಗುತ್ತಿವೆ.
"ಹಲವು ದಿನಗಳಿಂದ ನಾವು ಬೆಳಿಗ್ಗೆಯಿಂದ ಸಂಜೆಯವರೆಗೆ ಮಣ್ಣು ತೆಗೆಯುತ್ತಿದ್ದೆವು. ಆದರೆ ರಾತ್ರಿ ಸುರಿಯುವ ಮಳೆ ಅದೇ ಜಾಗವನ್ನು ಮತ್ತೆ ಕೆಸರಿನಿಂದ ತುಂಬಿಸುತ್ತಿತ್ತು. ಇದರಿಂದ ನಾವು ಮತ್ತೆ ಮೊದಲಿನ ಸ್ಥಿತಿಗೇ ತಲುಪುತ್ತಿದ್ದೆವು" ಎಂದು ಹೆಸರು ಹೇಳಲು ಇಚ್ಛಿಸದ ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ʼದಿ ಪ್ರಿಂಟ್ʼ ವರದಿ ಉಲ್ಲೇಖಿಸಿದೆ.
ಕಬೀರ್ ಮಹಾಜನ್ ಮತ್ತು ಸಂಜಯ್ ಸಾಹ್ ಎಂಬ ಇಬ್ಬರು ಕಾರ್ಮಿಕರನ್ನು ವಿದ್ಯುತ್ ಸ್ಥಾವರದ ಒಳಗಿನ ಕೇಬಲ್ ಡಕ್ಟ್ ಸುರಂಗ ಭಾಗದಿಂದ ರಕ್ಷಿಸಲಾಗಿತ್ತು. ಆದರೆ ಅದೇ ಭಾಗದಲ್ಲಿ ಸೇನೆಗೆ ಬೇರೆ ಯಾವುದೇ ಜೀವಂತ ವ್ಯಕ್ತಿಗಳು ಸಿಗಲಿಲ್ಲ. ಈಗ ಸಿಬ್ಬಂದಿ ಸುರಂಗದ ಮತ್ತಷ್ಟು ಆಳಕ್ಕೆ ಹೋಗಲು ಯತ್ನಿಸುತ್ತಿದ್ದರೂ, ಒಳಗೆ ಯಾರಾದರೂ ಜೀವಂತವಾಗಿ ಸಿಗಬಹುದು ಎಂಬ ಭರವಸೆ ಅವರಲ್ಲಿ ಉಳಿದಿಲ್ಲ.
ಬಿಷ್ತ್ ಅವರಂತಹ ಸಂತ್ರಸ್ತರ ಕುಟುಂಬಸ್ಥರೊಂದಿಗೆ ಸೇನಾ ಸಿಬ್ಬಂದಿ ಅತ್ಯಂತ ಸಹಕಾರ ಮತ್ತು ಸಹಾನುಭೂತಿಯಿಂದ ವರ್ತಿಸುತ್ತಿದ್ದಾರೆ. ಅವರು ಹೆಲಿಕಾಪ್ಟರ್ನಿಂದ ಇಳಿದಾಗ, ರಾತ್ರಿ ಉಳಿದುಕೊಳ್ಳಲು ಸೇನೆ ಅವರಿಗೆ ಜಾಗವನ್ನು ನೀಡಿತ್ತು. ಬೆಳಿಗ್ಗೆ ಅವರ ಸಹೋದರನನ್ನು ಹುಡುಕಲು ಕೆಲವು ಸೈನಿಕರು ಅವರೊಂದಿಗೆ ಸುರಂಗದತ್ತ ಸಾಗಿದರು.
"ಬಹುಶಃ ಅವರು ಪ್ರಾಣಾಪಾಯದಿಂದ ಪಾರಾಗಿ ಓಡಿಹೋಗಿರಬಹುದೇ ಎಂದು ಭಾವಿಸಿ ನಾನು ಪಕ್ಕದ ಕಾಡುಗಳಲ್ಲೂ ಹುಡುಕಾಟ ನಡೆಸಿದೆ. ಸೇನೆಯೂ ಸಹಾಯ ಮಾಡಿತು, ಆದರೆ ನಮಗೆ ಏನೂ ಸಿಗಲಿಲ್ಲ" ಎಂದು ಬಿಷ್ತ್ ನಿರಾಶೆಯಿಂದ ಹೇಳಿದರು. "ಆದರೆ ಅವರ ಬೈಕ್ ನನಗೆ ಸಿಕ್ಕಿತು. ಕೆಲಸಕ್ಕೆ ಹೋಗುವ ಮುನ್ನ ಅವರು ಅದನ್ನು ಪಾರ್ಕ್ ಮಾಡಿರಬೇಕು. ಮನೆಗೆ ಹಿಂತಿರುಗುವಾಗ ಅವರ ನೆನಪಿಗಾಗಿ ನನ್ನೊಂದಿಗೆ ಕೊಂಡೊಯ್ಯಲು ಸಿಕ್ಕ ಏಕೈಕ ವಸ್ತುವೆಂದರೆ ಅದು ಮಾತ್ರ" ಎಂದಿದ್ದಾರೆ ಅವರು.
ಕೃಪೆ: theprint.in






