FIFA ವಿಶ್ವಕಪ್ ನಿಂದ ಹೊರಬಿದ್ದ ನಂತರ ಕಣ್ಣೀರು ಹಾಕಿದ ರೊನಾಲ್ಡೊ

ಕ್ರಿಸ್ಟಿಯಾನೊ ರೊನಾಲ್ಡೊ |Photo Credit : X \ @FabrizioRomano
ಪೋರ್ಚುಗಲ್ ತಂಡಕ್ಕೆ 3 ಪ್ರಶಸ್ತಿಗಳನ್ನು ಗೆದ್ದುಕೊಟ್ಟಿದ್ದೇನೆ ಎಂದು ಕೊನೆಯ ವಿಶ್ವಕಪ್ ಆಡುತ್ತಿರುವ ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ಸ್ಪೇನ್ ವಿರುದ್ಧ 16ನೇ ಸುತ್ತಿನ ಪಂದ್ಯದಲ್ಲಿ ಸೋತ ಫೋರ್ಚುಗಲ್ ತಂಡ ವಿಶ್ವಕಪ್ ಪಂದ್ಯಾವಳಿಯಿಂದ ಹೊರಬಿದ್ದ ನಂತರ ಕ್ರಿಸ್ಟಿಯಾನೊ ರೊನಾಲ್ಡೊ ಕಣ್ಣೀರು ಸುರಿಸಿದ್ದರು. ಇದು ತಮ್ಮ ಕೊನೆಯ ವಿಶ್ವಕಪ್ ಎಂದು ರೊನಾಲ್ಡೊ ಈಗಾಗಲೇ ದೃಢಪಡಿಸಿದ್ದರೂ ಅಂತಾರಾಷ್ಟ್ರೀಯ ವೃತ್ತಿಜೀವನದಿಂದ ನಿವೃತ್ತಿಯಾಗುವ ದುಡುಕಿನ ನಿರ್ಧಾರವನ್ನು ಅವರು ಇನ್ನೂ ಪ್ರಕಟಿಸುವುದಿಲ್ಲ ಎಂದು ಹೇಳಿದ್ದಾರೆ.
ವಿಶ್ವಕಪ್ ಎತ್ತುವ ರೊನಾಲ್ಡೊ ಕನಸು ನನಸಾಗಲೇ ಇಲ್ಲ. ಪಂದ್ಯದ ನಂತರ ಮಾತನಾಡಿದ ಅವರು, “ವಿಶ್ವಕಪ್ ಅನ್ನು ಈ ರೀತಿ ಬಿಡುತ್ತಿರುವುದಕ್ಕೆ ಬೇಸರವಾಗಿದೆ. ಅತ್ಯುತ್ತಮವಾದ ಪ್ರಯತ್ನವನ್ನು ನೀಡಿದ್ದೇನೆ. ನನ್ನ ಕೈಲಾದಷ್ಟು ಪ್ರಯತ್ನಿಸಿದ್ದೇನೆ, ಇದೀಗ ಸ್ಪಷ್ಟ ಮನಸ್ಸಾಕ್ಷಿಯೊಂದಿಗೆ ಹೊರಡುತ್ತಿದ್ದೇನೆ. ಇದು ನನ್ನ ಕೊನೆಯ ವಿಶ್ವಕಪ್. ಆದರೆ ನಾನು ದುಡುಕಿನ ನಿರ್ಧಾರ ಕೈಗೊಳ್ಳುವುದಿಲ್ಲ” ಎಂದು ಅವರು ಹೇಳಿದ್ದಾರೆ.
ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದ ಬಗ್ಗೆ ಸಂಕ್ಷಿಪ್ತವಾಗಿ ವಿಶ್ಲೇಷಿಸಿದ ಅವರು, “ಫೋರ್ಚುಗಲ್ ಮೂರು ಪ್ರಶಸ್ತಿಗಳನ್ನು ಗೆಲ್ಲಲು ಸಹಾಯ ಮಾಡಿದ್ದೇನೆ. ನಾನು ಪೋರ್ಚುಗಲ್ಗಾಗಿ ಮೂರು ಪ್ರಶಸ್ತಿ ಗೆದ್ದಿದ್ದೇನೆ. ಕ್ರಿಸ್ಟಿಯಾನೊ ರೊನಾಲ್ಡೊಗಿಂತ ಮೊದಲು ಪೋರ್ಚುಗಲ್ ಒಂದು ಪ್ರಶಸ್ತಿಯನ್ನೂ ಗೆದ್ದಿರಲಿಲ್ಲ. 2016ರಲ್ಲಿ ಯುರೋಪಿಯನ್ ಚಾಂಪಿಯನ್ಶಿಪ್ ಮತ್ತು 2019 ಮತ್ತು 2025ರಲ್ಲಿ ಯುಇಎಫ್ಎ ನೇಷನ್ಸ್ ಲೀಗ್ ಗೆದ್ದಿದ್ದೇವೆ. ಆ ಪ್ರಶಸ್ತಿಗಳೂ ನನಗೆ ವಿಶ್ವಕಪ್ನಷ್ಟೇ ಮುಖ್ಯವಾಗಿದೆ” ಎಂದು ಅವರು ಹೇಳಿದರು.
ಪೋರ್ಚುಗಲ್ ತಂಡ ವಿಶ್ವಕಪ್ನಿಂದ ನಿರ್ಗಮಿಸಿದ ತಕ್ಷಣ ರಾಜೀನಾಮೆ ನೀಡಲು ನಿರ್ಧರಿಸಿದ ಪೋರ್ಚುಗಲ್ ತರಬೇತುದಾರ ರಾಬರ್ಟೊ ಮಾರ್ಟಿನೆಜ್ ಅವರನ್ನೂ ರೊನಾಲ್ಡೊ ಪ್ರಶಂಸಿಸಿದರು. “ಅವರೊಂದಿಗೆ ಕೆಲಸ ಮಾಡುವುದು ನನಗೆ ಇಷ್ಟವಾಗಿದೆ. ಒಬ್ಬ ಮಹಾನ್ ವ್ಯವಸ್ಥಾಪಕ, ಮಹಾನ್ ಮನುಷ್ಯ ಮತ್ತು ಅವರು ಪೋರ್ಚುಗಲ್ಗಾಗಿ ಮಾಡಿದ್ದನ್ನು ಪ್ರಶಂಸಿಸಲೇಬೇಕು. ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ನನ್ನ ದೃಷ್ಟಿಯಲ್ಲಿ ನಾವು ಚೆನ್ನಾಗಿ ಆಡಿದೆವು” ಎಂದು ಅಭಿಪ್ರಾಯಪಟ್ಟರು.
ಈ ನಡುವೆ ಪೋರ್ಚುಗಲ್ ರಾಷ್ಟ್ರೀಯ ತಂಡಕ್ಕೆ “ಹೊಸ ಧ್ವನಿ” ಬೇಕು ಎಂದು ಹೇಳಿದ ಮ್ಯಾನೇಜರ್ ರಾಬರ್ಟೊ ಮಾರ್ಟಿನೆಜ್ ತಮ್ಮ ರಾಜೀನಾಮೆ ದೃಢಪಡಿಸಿದರು. ಅವರು 2023ರಿಂದ ಪೋರ್ಚುಗಲ್ ನ ತರಬೇತುದಾರರಾಗಿದ್ದಾರೆ. “ಹೌದು ಇದು ರಾಷ್ಟ್ರೀಯ ತಂಡದೊಂದಿಗೆ ನನ್ನ ಕೊನೆಯ ಪಂದ್ಯ. ನನಗೆ ಹೆಮ್ಮೆಯಿದೆ. ನಾನು 45 ಪಂದ್ಯಗಳನ್ನು ಆಡಿದ್ದೇನೆ ಮತ್ತು ಪೋರ್ಚುಗಲ್ ನನಗೆ ಸ್ವಾಗತ ನೀಡಿದೆ ಮತ್ತು ದೇಶವನ್ನು ನಾನು ಪ್ರೀತಿಸುತ್ತೇನೆ. ಈ ನೆನಪು ಸದಾ ನನ್ನೊಂದಿಗೆ ಇರುತ್ತದೆ” ಎಂದು ಹೇಳಿದ್ದಾರೆ.
“ಇದು ಸಂತೋಷ, ಹೆಮ್ಮೆ ಮತ್ತು ಜವಾಬ್ದಾರಿಯಾಗಿತ್ತು. ಬಹಳ ಕಠಿಣ ಕೆಲಸ. ಇದೀಗ ತಂಡ ಹೊಸ ಧ್ವನಿಯನ್ನು ಹೊಂದುವುದು ಮುಖ್ಯವಾಗಿದೆ” ಎಂದು ಅವರು ಹೇಳಿದ್ದಾರೆ.
“ನಾವು ವಿಫಲರಾಗಿಲ್ಲ. ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾದ ಸ್ಪೇನ್ ವಿರುದ್ಧ ಪಂದ್ಯ ಸೋತಿದ್ದೇವೆ. ದೊಡ್ಡ ಪಂದ್ಯಾವಳಿಗಳಲ್ಲಿ ದೊಡ್ಡ ಪಂದ್ಯಗಳಲ್ಲಿ ಗೆಲ್ಲಲು ಪ್ರಯತ್ನಿಸದೆ ಇದ್ದಾಗ ನೀವು ವಿಫಲರಾಗುತ್ತೀರಿ. ನಾವು ಕೊನೆಯ ಕ್ಷಣದವರೆಗೂ ಗೆಲ್ಲಲು ಪ್ರಯತ್ನಿಸಿದ್ದೇವೆ” ಎಂದು ಮಾರ್ಟಿನೆಜ್ ಅಭಿಪ್ರಾಯಪಟ್ಟರು.






