ಗಣಿಗಾರಿಕೆ ಮೂಲಕ ರಾಜಧನ ಸಂಗ್ರಹ: ಪ್ರಗತಿ ಸಾಧಿಸದ ಇಲಾಖೆ

ಬೆಂಗಳೂರು : 2026-27ನೇ ಸಾಲಿನ ಅವಧಿಗೆ ಸಂಬಂಧಿಸಿದಂತೆ ಗಣಿಗಾರಿಕೆ ಮೂಲಕ ರಾಜಧನ ಸಂಗ್ರಹಿಸುವಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಎಪ್ರಿಲ್‌ನಿಂದ ಜುಲೈ 15ರವರೆಗಿನ ಪ್ರಗತಿಯು ಆಶಾದಾಯಕವಾಗಿಲ್ಲ. ರಾಜಧನ ಸಂಗ್ರಹಿಸುವಲ್ಲಿ ಇಲಾಖೆಯು ಹಿಂದೆ ಬಿದ್ದಿರುವುದು ಇದೀಗ ಬಹಿರಂಗವಾಗಿದೆ.
ಕರ್ನಾಟಕದಲ್ಲಿ ಎ, ಬಿ ಮತ್ತು ಸಿ ವರ್ಗ ಸೇರಿದಂತೆ ವಿವಿಧ ವರ್ಗಗಳ ಗಣಿಗಾರಿಕೆ ಗುತ್ತಿಗೆಗಳನ್ನು ಹಾಗೂ ಇದುವರೆಗೂ ಗಣಿಗಾರಿಕೆ ನಡೆಯದ ನೈಸರ್ಗಿಕ ಅರಣ್ಯ ಭೂಮಿಯನ್ನು ಹರಾಜಿಗಾಗಿ ಒಂದೇ ಬ್ಲಾಕ್ ಅಥವಾ ಘಟಕವಾಗಿ ಒಗ್ಗೂಡಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ರಾಜಧನ ಸಂಗ್ರಹಣೆಗೆ ಸಂಬಂಧಿಸಿದಂತೆ ಸಾಧಿಸಿರುವ ಹಿನ್ನಡೆಯು ಮುನ್ನೆಲೆಗೆ ಬಂದಿದೆ.
2026-27ನೇ ಸಾಲಿಗೆ ಒಟ್ಟು 11,000 ಕೋಟಿ ರೂ. ಗುರಿ ನಿಗದಿಪಡಿಸಿತ್ತು. ಈ ಪೈಕಿ 2026ರ ಎಪ್ರಿಲ್‌ನಿಂದ ಜುಲೈ 15ರವರೆಗೆ ಒಟ್ಟು 2,273.83 ಕೋಟಿ ರೂ. ಸಂಗ್ರಹಿಸಿದೆ. ಈ ನಾಲ್ಕು ತಿಂಗಳಲ್ಲಿ ಶೇ. 21ರಷ್ಟೇ ಪ್ರಗತಿ ಸಾಧಿಸಿದೆ. ಎಪ್ರಿಲ್‌ನಿಂದ ಜುಲೈವರೆಗೆ ಒಟ್ಟು ಗುರಿ 3,444.01 ಕೋಟಿ ರೂ.ಯಷ್ಟಿತ್ತು. ಈ ಪೈಕಿ 2,273.83 ಕೋಟಿ ರೂ. ಮಾತ್ರ ಸಂಗ್ರಹಿಸಿದೆ. ಈ ಲೆಕ್ಕದ ಆಧಾರದ ಪ್ರಕಾರ ಎಪ್ರಿಲ್‌ನಿಂದ ಜುಲೈವರೆಗೆ ನೀಡಿದ್ದ ಗುರಿಯನ್ನು ಇಲಾಖೆಯು ಮುಟ್ಟಿಲ್ಲ. ವಸೂಲಾತಿಗೆ ಇನ್ನೂ 1,170.17 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ‘the-file.in’ಗೆ ಅಂಕಿ ಅಂಶಗಳು ಲಭ್ಯವಾಗಿವೆ.
ವಿಶೇಷವೆಂದರೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ತವರು ಜಿಲ್ಲೆ ದಾವಣಗೆರೆ ಜಿಲ್ಲೆಗೆ ಪ್ರಧಾನ ಖನಿಜಗಳ ವಲಯದಲ್ಲಿ ರಾಜಧನ ಸಂಗ್ರಹಿಸಲು ಒಟ್ಟು ವಾರ್ಷಿಕ ಗುರಿ ಎಂದು 58 ಕೋಟಿ ರೂ. ನಿಗದಿಪಡಿಸಿತ್ತು. ಈ ಪೈಕಿ ಎಪ್ರಿಲ್‌ನಿಂದ ಜುಲೈವರೆಗೆ 0.39 ಕೋಟಿಯಷ್ಟು ಗುರಿ ನಿಗದಿಯಾಗಿತ್ತು. ಈ ಪೈಕಿ 2026ರ ಜುಲೈ ಅಂತ್ಯಕ್ಕೆ 0.14 ಕೋಟಿ ರೂ. ಸಂಗ್ರಹಿಸಿದೆ. ಇದು ಶೇ. 0.01ರಷ್ಟಿದೆ. ಅಲ್ಲದೇ ವಾರ್ಷಿಕ ಒಟ್ಟು ಗುರಿಗೆ ಶೇ. 4ರಷ್ಟಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಅದೇ ರೀತಿ ಉಪ ಖನಿಜಗಳಿಂದ ರಾಜಧನ ಸಂಗ್ರಹಿಸಲು ವಾರ್ಷಿಕವಾಗಿ 58.39 ಕೋಟಿ ರೂ.ನಷ್ಟು ಗುರಿ ನಿಗದಿಪಡಿಸಿತ್ತು. ಈ ಪೈಕಿ ಎಪ್ರಿಲ್‌ನಿಂದ ಜುಲೈವರೆಗೆ 20.88 ಕೋಟಿ ರೂ. ನಿಗದಿಯಾಗಿತ್ತು. ಈ ಅವಧಿಯಲ್ಲಿ ಇಲಾಖೆಯು ಸಂಗ್ರಹಿಸಿರುವುದು 4.62 ಕೋಟಿ ರೂ. ಮಾತ್ರ ಸಂಗ್ರಹಿಸಿದೆ. ಪ್ರಧಾನ ಮತ್ತು ಉಪ ಖನಿಜಗಳಿಂದ ಈ ನಾಲ್ಕು ತಿಂಗಳಲ್ಲಿ ಶೇ. 22ರಷ್ಟೇ ಪ್ರಗತಿ ಸಾಧಿಸಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.
ಎಪ್ರಿಲ್‌ನಲ್ಲಿ 662.00 ಕೋಟಿ ರೂ. ವಸೂಲು ಮಾಡಬೇಕಿತ್ತು. ಈ ಪೈಕಿ 643.74 ಕೋಟಿ ರೂ. ವಸೂಲು ಮಾಡಿದೆ. ಒಟ್ಟು ಗುರಿಯಲ್ಲಿ ಶೇ. 97ರಷ್ಟು ಪ್ರಗತಿ ಸಾಧಿಸಿದೆ. ಮೇ ತಿಂಗಳಲ್ಲಿ 637 ಕೋಟಿ ರೂ. ಗುರಿ ಪ್ರಕಾರ 520.37 ಕೋಟಿ ರೂ. ವಸೂಲು ಮಾಡಿದೆ. ಇದು ಶೇ. 82ರಷ್ಟಿದೆ. ಜೂನ್ ತಿಂಗಳಲ್ಲಿ ಗುರಿ ಪ್ರಕಾರ 1,052.00 ಕೋಟಿ ರೂ. ವಸೂಲು ಮಾಡಬೇಕಿದ್ದ ಇಲಾಖೆಯು 706.89 ಕೋಟಿ ರೂ. ವಸೂಲು ಮಾಡಿದೆ. ಇದು ಶೇ.67ರಷ್ಟಿದೆ. ಜುಲೈ ತಿಂಗಳಲ್ಲಿ 1,093.00 ಕೋಟಿ ರೂ. ವಸೂಲು ಗುರಿ ನಿಗದಿಪಡಿಸಿತ್ತು. ಆದರೆ ಇಲಾಖೆಯು 402.83 ಕೋಟಿ ರೂ. ವಸೂಲು ಮಾಡಿದೆ. ಇದು ಒಟ್ಟು ಸಂಗ್ರಹಕ್ಕೆ ಹೋಲಿಸಿದರೇ ಶೇ. 37ರಷ್ಟಿದೆ.
ಅಕ್ರಮ ಗಣಿಗಾರಿಕೆ: ಹಾಗೆಯೇ 2024-25ನೇ ಸಾಲಿನಲ್ಲಿ 9 ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಪತ್ತೆ ಹಚ್ಚಿತ್ತು. ಇದರಿಂದ 3.31 ಲಕ್ಷ ರೂ. ದಂಡ ಸಂಗ್ರಹಿಸಿತ್ತು. ಒಟ್ಟು 8 ಮೊಕದ್ದಮೆಗಳನ್ನು ದಾಖಲಿಸಿತ್ತು. 2025-26ನೇ ಸಾಲಿನಲ್ಲಿ 3 ಪ್ರಕರಣಗಳನ್ನು ಪತ್ತೆ ಹಚ್ಚಿದ್ದ
ಇಲಾಖೆಯು 5 ಲಕ್ಷ ರೂ. ದಂಡ ಸಂಗ್ರಹಿಸಿತ್ತು. 2 ಮೊಕದ್ದಮೆಗಳನ್ನು ದಾಖಲಿಸಿತ್ತು. 2026-27ನೇ ಸಾಲಿನ ಜುಲೈವರೆಗೆ ಒಂದೇ ಒಂದು ಪ್ರಕರಣವನ್ನು ಪತ್ತೆ ಹಚ್ಚಿಲ್ಲ.
ಅನಧಿಕೃತ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ 2024-25ನೇ ಸಾಲಿನಲ್ಲಿ ಒಟ್ಟು 657 ಪ್ರಕರಣಗಳನ್ನು ಪತ್ತೆ ಹಚ್ಚಿತ್ತು. 7.15 ಕೋಟಿ ರೂ. ದಂಡ ಸಂಗ್ರಹಿಸಿತ್ತು. ಒಟ್ಟು 186 ಮೊಕದ್ದಮೆಗಳನ್ನು ದಾಖಲಿಸಿತ್ತು. 2025-26ನೇ ಸಾಲಿನಲ್ಲಿ 945 ಪ್ರಕರಣಗಳನ್ನು ಪತ್ತೆ ಹಚ್ಚಿದ್ದ ಇಲಾಖೆಯು 11.70 ಕೋಟಿ ರೂ. ದಂಡ ಸಂಗ್ರಹಿಸಿತ್ತು. 231 ಮೊಕದ್ದಮೆಗಳನ್ನು ದಾಖಲಿಸಿತ್ತು. 2026-27ನೇ ಸಾಲಿನ ಜುಲೈ ಅಂತ್ಯಕ್ಕೆ 146 ಪ್ರಕರಣಗಳನ್ನು ಪತ್ತೆ ಹಚ್ಚಿರುವ ಇಲಾಖೆಯು 5.32 ಕೋಟಿ ರೂ. ದಂಡ ಸಂಗ್ರಹಿಸಿತ್ತು. 38 ಮೊಕದ್ದಮೆಗಳನ್ನು ದಾಖಲಿಸಿತ್ತು.
ಅನಧಿಕೃತ ಮರಳು ಗಣಿಗಾರಿಕೆಗೆ ಸಂಬಂಧಿಸಿ 2024-25ನೇ ಸಾಲಿನಲ್ಲಿ 219 ಪ್ರಕರಣಗಳನ್ನು ಪತ್ತೆ ಹಚ್ಚಿದೆ. ಒಟ್ಟು 75.98 ಲಕ್ಷ ರೂ. ದಂಡ ಸಂಗ್ರಹಿಸಿದೆ. 126 ಮೊಕದ್ದಮೆಗಳನ್ನು ದಾಖಲಿಸಿತ್ತು. 2025-26ನೇ ಸಾಲಿನಲ್ಲಿ 229 ಪ್ರಕರಣಗಳನ್ನು ಪತ್ತೆ ಹಚ್ಚಿದ್ದರೇ ಈ ಪೈಕಿ 1.33 ಕೋಟಿ ರೂ. ದಂಡ ಸಂಗ್ರಹಿಸಿದೆ. 127 ಮೊಕದ್ದಮೆಗಳನ್ನು ದಾಖಲಿಸಿದೆ. 2026-27ನೇ ಸಾಲಿನ ಜುಲೈವರೆಗೆ 103 ಪ್ರಕರಣಗಳನ್ನು ಪತ್ತೆ ಹಚ್ಚಿರುವ ಇಲಾಖೆಯು 38.99 ಲಕ್ಷ ರೂ. ದಂಡ ಸಂಗ್ರಹಿಸಿದೆ. 63 ಮೊಕದ್ದಮೆಗಳನ್ನು ದಾಖಲಿಸಿದೆ.






