ಕೇವಲ 1 ರಾಜ್ಯದಲ್ಲಿ 9 ದಿನಗಳಿಗೆ 14 ಕೋಟಿ ರೂ: ಪ್ರಧಾನಿ ಮೋದಿ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಎಷ್ಟು ಖರ್ಚು ಮಾಡಲಾಗುತ್ತಿದೆ?

Photo Credit: newslaundry
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮತ್ತೊಂದು ವರ್ಷಕ್ಕೆ ಕಾಲಿಟ್ಟಿದ್ದು, ನಿರೀಕ್ಷೆಯಂತೆ ಅವರ ಸರ್ಕಾರ, ಬಿಜೆಪಿ ಆಡಳಿತವಿರುವ ರಾಜ್ಯಗಳು ಮತ್ತು ಸ್ವತಃ ಪಕ್ಷವು ಒಂದು ತಿಂಗಳ ಪೂರ್ತಿ ಉದ್ಘಾಟನೆಗಳು, ಶಂಕುಸ್ಥಾಪನೆಗಳು ಮತ್ತು ಭರ್ಜರಿ ಪ್ರಚಾರದೊಂದಿಗೆ ಸಂಭ್ರಮಾಚರಣೆಗೆ ಸಜ್ಜಾಗುತ್ತಿವೆ.
ದಿಲ್ಲಿಯಲ್ಲಿ, ರಾಜ್ಯ ಸರ್ಕಾರ ಮತ್ತು ಬಿಜೆಪಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 18ರವರೆಗೆ “ಸೇವಾ ಸಂಕಲ್ಪ ಅಭಿಯಾನ – ಜನ ಸೇವಾ ಹೀ ಪ್ರಭು ಸೇವಾ ಹೈ ( ಜನ ಸೇವೆಯೇ ಪ್ರಭುವಿನ ಸೇವೆ)” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಿವೆ. ಮೋದಿ ಅವರು ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಸುಮಾರು 25 ವರ್ಷಗಳು ಪೂರ್ಣಗೊಂಡಿರುವುದು ಈ ಬಾರಿಯ ವಿಶೇಷತೆಯಾಗಿದೆ. ಮತ್ತೊಂದೆಡೆ, ಹರ್ಯಾಣ ಸರ್ಕಾರವು ರಾಜ್ಯದ ಪ್ರತಿಯೊಬ್ಬ ಉಪ ಆಯುಕ್ತರಿಗೆ 'ಸೇವಾ ಸಂಕಲ್ಪ ಅಭಿಯಾನ'ಕ್ಕಾಗಿ ತಲಾ 10 ಲಕ್ಷ ರೂ.ಗಳನ್ನು ಹಂಚಿಕೆ ಮಾಡಿದೆ.
ಗುಜರಾತ್ ರಾಜ್ಯವು ತನ್ನದೇ ಆದ ವಿಶೇಷ ಹಾದಿಯನ್ನು ಹೊಂದಿದೆ. ಕಳೆದ ಅಕ್ಟೋಬರ್ನಲ್ಲಿ ಮೋದಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು 24 ವರ್ಷಗಳು ಪೂರ್ಣಗೊಂಡ ನೆನಪಿಗಾಗಿ ಹಮ್ಮಿಕೊಂಡಿದ್ದ ಒಂಬತ್ತು ದಿನಗಳ “ವಿಕಾಸ ಸಪ್ತಾಹ” ಕಾರ್ಯಕ್ರಮಕ್ಕಾಗಿ ರಾಜ್ಯ ಸರ್ಕಾರವು 14.05 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಅವರ ಪ್ರಶ್ನೆಗೆ ವಿಧಾನಸಭೆಯಲ್ಲಿ ನೀಡಿದ ಉತ್ತರದ ಮೂಲಕ ತಿಳಿದುಬಂದಿದೆ. ಅದಕ್ಕೂ ಹಿಂದಿನ ವರ್ಷ, ಸರ್ಕಾರವೇ ಬಿಂಬಿಸಿದಂತೆ "ಯಶಸ್ವಿ ಮತ್ತು ಸಮರ್ಥ ನಾಯಕತ್ವದ" 23 ವರ್ಷಗಳನ್ನು ಆಚರಿಸಲು, ಆರ್ಟಿಐ ಕಾಯ್ದೆಯಡಿ ಬಿಬಿಸಿಗೆ ನೀಡಿದ ಮಾಹಿತಿಯ ಪ್ರಕಾರ ಗುಜರಾತ್ ಕೇವಲ ಜಾಹೀರಾತುಗಳಿಗಾಗಿ 8.81 ಕೋಟಿ ರೂ.ಗಳನ್ನು ಖರ್ಚು ಮಾಡಿತ್ತು.
ಗುಜರಾತ್ ಮುಖ್ಯಮಂತ್ರಿಗಳ ಕಚೇರಿಯ ವೆಬ್ಸೈಟ್ ಪ್ರಕಾರ, ಮೋದಿ ಅವರು 2001ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನೆನಪಿಗಾಗಿ ರಾಜ್ಯದಲ್ಲಿ ಪ್ರತಿವರ್ಷ ಅಕ್ಟೋಬರ್ 7ರಿಂದ 15ರವರೆಗೆ ‘ವಿಕಾಸ ಸಪ್ತಾಹ’ ಆಚರಿಸಲಾಗುತ್ತದೆ. ಕಾರ್ಯಕ್ರಮಗಳು, ಉದ್ಘಾಟನೆಗಳು, ಶಂಕುಸ್ಥಾಪನೆಗಳು ಮತ್ತು ಸರ್ಕಾರದ ಯೋಜನೆಗಳ ಪ್ರಚಾರದೊಂದಿಗೆ ರಾಜ್ಯದ ಅಭಿವೃದ್ಧಿ ಪಯಣ ಹಾಗೂ ಆಡಳಿತವನ್ನು ಬಿಂಬಿಸಲು ಇದೊಂದು ಅವಕಾಶ ಎಂದು ಸರ್ಕಾರ ಹೇಳಿದೆ.
ರಾಷ್ಟ್ರಮಟ್ಟದಲ್ಲೂ ಇದಕ್ಕೆ ಪೂರ್ವ ನಿದರ್ಶನಗಳಿವೆ. ಜನರಿಗೆ ಅರ್ಥಮಾಡಿಕೊಳ್ಳಲು ಇನ್ನೂ ಕಾಲಾವಕಾಶ ಬೇಕಿದ್ದ ತೆರಿಗೆಯೊಂದರ ಒಂದು ವರ್ಷದ ಸಾಧನೆಗಾಗಿ ‘ಜಿಎಸ್ಟಿ ದಿವಸ್’ ಆಚರಿಸಲಾಯಿತು. ‘9 ಸಾಲ್, ಸೇವಾ, ಸುಶಾಸನ್, ಗರೀಬ್ ಕಲ್ಯಾಣ್’ ಅಭಿಯಾನ ನಡೆಯಿತು. "ಮನ್ ಕೀ ಬಾತ್ ಕಾರ್ಯಕ್ರಮದ 100ನೇ ಸಂಚಿಕೆಯನ್ನು ರೇಡಿಯೋ ಕಾರ್ಯಕ್ರಮದ ಒಂದು ಮೈಲಿಗಲ್ಲಿನಂತೆ ನೋಡದೆ, ಜಾಗತಿಕ ಮಟ್ಟದಲ್ಲಿ ವೀಕ್ಷಣಾ ಪಾರ್ಟಿಗಳನ್ನು ಆಯೋಜಿಸುವ ಮೂಲಕ ಚಂದ್ರನಲ್ಲಿ ಕಾಲಿಟ್ಟದಷ್ಟೇ ದೊಡ್ಡ ಮಟ್ಟದಲ್ಲಿ ಸಂಭ್ರಮಿಸಲಾಯಿತು. ಆಯುಷ್ಮಾನ್ ಭಾರತ್, ಉಜ್ವಲ ಯೋಜನೆ ಮತ್ತು ಜನ್ ಧನ್ ಖಾತೆಗಳೆಲ್ಲವೂ ತಮ್ಮದೇ ಆದ ವಾರ್ಷಿಕ ಜಾಹೀರಾತು ಪ್ರಚಾರಗಳನ್ನು ಪಡೆಯುತ್ತವೆ. ಪ್ರಧಾನಿ ಮೋದಿ ಅವರ 4,399 ದಿನಗಳ ಅಧಿಕಾರಾವಧಿಯನ್ನು ಗುರುತಿಸಲು ಒಂದು ಅಭಿಯಾನವನ್ನೂ ನಡೆಸಲಾಗಿತ್ತು.
ಜಿಎಸ್ಟಿ ದರಗಳನ್ನು ಪರಿಷ್ಕರಿಸಿದಾಗ, ಪ್ರಧಾನಿಗೆ ಧನ್ಯವಾದ ಅರ್ಪಿಸುವ ಜಾಹೀರಾತುಗಳು ಎಲ್ಲೆಡೆ ಕಾಣಿಸಿಕೊಂಡವು. ರಾಜ್ಯಸಭೆಯ ಡೇಟಾ ಪ್ರಕಾರ, ಇದರ ಮುಂದುವರಿದ ಭಾಗವಾಗಿ ಸರ್ಕಾರವು 2025ರ ಸೆಪ್ಟೆಂಬರ್ 4ರಿಂದ ಅಕ್ಟೋಬರ್ 28ರವರೆಗೆ ‘ಜಿಎಸ್ಟಿ ಬಚತ್ ಉತ್ಸವ್’ ಹಮ್ಮಿಕೊಂಡಿದ್ದು, ಕೇವಲ ಜಾಹೀರಾತುಗಳಿಗಾಗಿಯೇ 22 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿತ್ತು. ಅಂದರೆ, ಜಿಎಸ್ಟಿ ಉಳಿತಾಯವನ್ನು ಸಂಭ್ರಮಿಸುವ ಕಾರ್ಯಕ್ರಮಕ್ಕೂ ಸಾರ್ವಜನಿಕ ಹಣವನ್ನೇ ಬಳಸಲಾಗಿದೆ.
ಇದು ಮೊದಲ ಪ್ರಚಾರ ಅಭಿಯಾನವಲ್ಲ
ಸಾರ್ವಜನಿಕ ಜೀವನದಲ್ಲಿ ಮೋದಿ ಅವರ ವರ್ಷಗಳನ್ನು ಗುರುತಿಸಲು ಗುಜರಾತ್ ಸರ್ಕಾರವು ಹಮ್ಮಿಕೊಂಡ ಮೊದಲ ಪ್ರಚಾರ ಅಭಿಯಾನ ಅಕ್ಟೋಬರ್ 2025ರ ‘ವಿಕಾಸ ಸಪ್ತಾಹ’ವಲ್ಲ . ಸಾರ್ವಜನಿಕ ಹುದ್ದೆಯಲ್ಲಿ ಅವರ 23 ವರ್ಷಗಳ ಅಧಿಕಾರಾವಧಿಯನ್ನು ಗುರುತಿಸಲು 2024ರಲ್ಲೂ ಇದೇ ರೀತಿಯ ಅಭಿಯಾನವನ್ನು ಆಯೋಜಿಸಲಾಗಿತ್ತು.
ಬಿಬಿಸಿ ಹಿಂದಿ ವರದಿಯ ಪ್ರಕಾರ, ಗುಜರಾತ್ ಸರ್ಕಾರವು 2024ರ ಅಕ್ಟೋಬರ್ 7ರಂದು ಜಾಹೀರಾತುಗಳನ್ನು ಬಿಡುಗಡೆ ಮಾಡಿತ್ತು. ಮೊದಲು ಮುಖ್ಯಮಂತ್ರಿಯಾಗಿ ಮತ್ತು ನಂತರ ಪ್ರಧಾನಿಯಾಗಿ ಸಾರ್ವಜನಿಕ ಜೀವನದಲ್ಲಿ 23 ವರ್ಷಗಳನ್ನು ಪೂರ್ಣಗೊಳಿಸಿದ ನರೇಂದ್ರ ಮೋದಿ ಅವರನ್ನು ಅಭಿನಂದಿಸಲು “23 Years of Successful and Capable Leadership” (23 ವರ್ಷಗಳ ಯಶಸ್ವಿ ಮತ್ತು ಸಮರ್ಥ ನಾಯಕತ್ವ) ಎಂಬ ಶೀರ್ಷಿಕೆಯಡಿ ಒಂದು ಜಾಹೀರಾತನ್ನು ಪ್ರಕಟಿಸಲಾಗಿತ್ತು.
ಈ ಜಾಹೀರಾತುಗಳ ವೆಚ್ಚದ ವಿವರಗಳನ್ನು ಗುಜರಾತ್ ಸರ್ಕಾರದ ಮಾಹಿತಿ ಇಲಾಖೆಯಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಬಿಬಿಸಿ ಕೋರಿತ್ತು. ಮುದ್ರಣ, ಎಲೆಕ್ಟ್ರಾನಿಕ್, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಈ ಜಾಹೀರಾತುಗಳಿಗಾಗಿ ಒಟ್ಟು 8.81 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಇಲಾಖೆ ತಿಳಿಸಿತ್ತು.
ಬಿಜೆಪಿ ಸರ್ಕಾರಗಳ ಅಡಿಯಲ್ಲಿ ರಾಜಕೀಯ ಮೈಲಿಗಲ್ಲುಗಳನ್ನು ಸರ್ಕಾರದ ಪ್ರಚಾರದ ಅವಕಾಶಗಳನ್ನಾಗಿ ಪರಿವರ್ತಿಸುವ ವಿಶಾಲವಾದ ಮಾದರಿಯ ಭಾಗವೇ ಈ ಅಭಿಯಾನವಾಗಿದೆ. ಕೆಲವೊಮ್ಮೆ ಪ್ರಧಾನಿಯವರ ಹುಟ್ಟುಹಬ್ಬ, ಕೆಲವೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವಾರ್ಷಿಕೋತ್ಸವ ಮತ್ತು ಇನ್ನು ಕೆಲವೊಮ್ಮೆ ಪ್ರಧಾನಿಯಾದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಇಂತಹ ಪ್ರಚಾರಗಳು ನಡೆಯುತ್ತವೆ.
ಇತ್ತೀಚೆಗೆ, ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿಯಾಗಿ ಹೊರಹೊಮ್ಮಿದ ನರೇಂದ್ರ ಮೋದಿ ಅವರನ್ನು ಅಭಿನಂದಿಸಲು ದೊಡ್ಡ ಮಟ್ಟದಲ್ಲಿ ಹೋರ್ಡಿಂಗ್ಗಳನ್ನು ಅಳವಡಿಸಲಾಗಿತ್ತು ಮತ್ತು ಜಾಹೀರಾತುಗಳನ್ನು ಪ್ರಕಟಿಸಲಾಗಿತ್ತು.
2025ರಲ್ಲಿ ಪ್ರಚಾರಕ್ಕಾಗಿ 108.80 ಕೋಟಿ ರೂ. ಖರ್ಚು
ಗುಜರಾತ್ ಮಾಹಿತಿ ಮತ್ತು ಪ್ರಸಾರ ಇಲಾಖೆಯು 2025 ಡಿಸೆಂಬರ್ 31ಕ್ಕೆ ಕೊನೆಗೊಂಡ ವರ್ಷದಲ್ಲಿ ಪ್ರಚಾರಕ್ಕಾಗಿ ಒಟ್ಟು 108.80 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ರಾಜ್ಯ ವಿಧಾನಸಭೆಯಲ್ಲಿ ನೀಡಿದ ಮತ್ತೊಂದು ಉತ್ತರದ ಪ್ರಕಾರ, ಮುದ್ರಣ, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಈ ಹಣವನ್ನು ವೆಚ್ಚ ಮಾಡಲಾಗಿದ್ದು, ಇದು ದಿನಕ್ಕೆ ಸರಾಸರಿ ಸುಮಾರು 29.8 ಲಕ್ಷ ರೂ.ಗಳಾಗುತ್ತದೆ.
ಕಾಂಗ್ರೆಸ್ ಶಾಸಕ ಡಾ. ಕಿರೀಟ್ಕುಮಾರ್ ಚಿಮನ್ಲಾಲ್ ಪಟೇಲ್ ಅವರು ಕೇಳಿದ ಪ್ರಶ್ನೆಗೆ ಈ ಅಂಕಿಅಂಶಗಳನ್ನು ಒದಗಿಸಲಾಗಿದೆ. ‘ವಿಕಾಸ ಸಪ್ತಾಹ’ಕ್ಕಾಗಿ ಖರ್ಚು ಮಾಡಲಾದ 14.05 ಕೋಟಿ ರೂ.ಗಳು ಈ ದೊಡ್ಡ ಮೊತ್ತದ ಪ್ರಚಾರದ ವೆಚ್ಚದ ಒಂದು ಭಾಗವಾಗಿದೆ. ಮುದ್ರಣ, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ನಡುವೆ 108.80 ಕೋಟಿ ರೂ.ಗಳನ್ನು ಹೇಗೆ ವಿಂಗಡಿಸಿ ಖರ್ಚು ಮಾಡಲಾಗಿದೆ ಎಂಬುದರ ವಿವರಗಳನ್ನು ವಿಧಾನಸಭೆಯ ಉತ್ತರದಲ್ಲಿ ನೀಡಲಾಗಿಲ್ಲ.
ಗುಜರಾತ್ನಲ್ಲಿ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಮುಖ್ಯಮಂತ್ರಿಗಳ ನೇರ ನಿಯಂತ್ರಣದಲ್ಲಿದೆ.
ಏಜೆನ್ಸಿಗಳು ಮತ್ತು ಪಾವತಿಗಳು
ಸರ್ಕಾರಿ ಪ್ರಚಾರಕ್ಕಾಗಿ ಎಷ್ಟು ಏಜೆನ್ಸಿಗಳನ್ನು ಆಯ್ಕೆ ಮಾಡಲಾಗಿದೆ ಮತ್ತು ಆ ವರ್ಷ ಎಷ್ಟು ಮುದ್ರಣ, ಡಿಜಿಟಲ್ ಹಾಗೂ ಸಾಮಾಜಿಕ ಮಾಧ್ಯಮ ಏಜೆನ್ಸಿಗಳಿಗೆ ಹಣ ಪಾವತಿಸಲಾಗಿದೆ ಎಂದು ಪಟೇಲ್ ಪ್ರಶ್ನಿಸಿದ್ದರು. ಈ ಎರಡೂ ಪ್ರಶ್ನೆಗಳಿಗೆ ಸರ್ಕಾರದ ಉತ್ತರ "ಶೂನ್ಯ" ಎಂದಿತ್ತು. ‘ವಿಕಾಸ ಸಪ್ತಾಹ’ದ ವಿಷಯದಲ್ಲಿ, ವೆಚ್ಚಕ್ಕೆ ಸಂಬಂಧಿಸಿದ ಬಿಲ್ಗಳ ಪಾವತಿಗಾಗಿ ಮಾಹಿತಿ ಇಲಾಖೆಯು ಬೇರೆ ಯಾವುದೇ ಇಲಾಖೆಗೆ ಪತ್ರ ಬರೆದಿಲ್ಲ ಮತ್ತು ಯಾವುದೇ ಇಲಾಖೆಯು ಸಂಪೂರ್ಣ ಅಥವಾ ಭಾಗಶಃ ಹಣವನ್ನು ಜಮಾ ಮಾಡಿಲ್ಲ ಎಂದು ಸರ್ಕಾರ ತಿಳಿಸಿದೆ.
ಚುನಾವಣಾ ವರ್ಷದಲ್ಲಿ 305.37 ಕೋಟಿ ರೂ. ಖರ್ಚು ಮಾಡಿದ್ದ ಗುಜರಾತ್ ಸರ್ಕಾರ
ಡಿಸೆಂಬರ್ 2022ರಲ್ಲಿ ವಿಧಾನಸಭಾ ಚುನಾವಣೆ ನಡೆದ 2022-23ನೇ ಸಾಲಿನಲ್ಲಿ ಗುಜರಾತ್ನ ಮಾಹಿತಿ ಮತ್ತು ಪ್ರಸಾರ ಇಲಾಖೆಯು 305.37 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಆ ಹಣಕಾಸು ವರ್ಷದಲ್ಲಿ ಇಲಾಖೆಗೆ 317.82 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು, ಅದರಲ್ಲಿ 12.45 ಕೋಟಿ ರೂ. ಉಳಿದುಕೊಂಡಿತ್ತು. ಈ ವೆಚ್ಚವು ದಿನಕ್ಕೆ ಸರಾಸರಿ ಸುಮಾರು 83.66 ಲಕ್ಷ ರೂ.ಗಳಾಗುತ್ತದೆ. ಲುನಾವಾಡಾ ಕ್ಷೇತ್ರದ ಶಾಸಕ ಗುಲಾಬ್ಸಿಂಗ್ ಸೋಮ್ಜಿಭಾಯ್ ಚೌಹಾಣ್ ಅವರು ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ರಾಜ್ಯ ಸರ್ಕಾರ ಈ ಅಂಕಿಅಂಶಗಳನ್ನು ಒದಗಿಸಿದೆ.
ಅದಕ್ಕೂ ಹಿಂದಿನ ವರ್ಷ ಇಲಾಖೆಯ ವೆಚ್ಚವು ಗಣನೀಯವಾಗಿ ಕಡಿಮೆಯಿತ್ತು. 2021-22ರಲ್ಲಿ ಸರ್ಕಾರವು ಇಲಾಖೆಗೆ 166.33 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದು, ಅದರಲ್ಲಿ 163.43 ಕೋಟಿ ರೂ. ಖರ್ಚಾಗಿತ್ತು (ದಿನಕ್ಕೆ ಸರಾಸರಿ ಸುಮಾರು 44.77 ಲಕ್ಷ ರೂ.), ಮತ್ತು 2.90 ಕೋಟಿ ರೂ. ಉಳಿದಿತ್ತು. ಆದರೆ 2022-23ರಲ್ಲಿ ವೆಚ್ಚವು 305.37 ಕೋಟಿ ರೂ.ಗೆ ಜಿಗಿದಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಸುಮಾರು ಶೇ. 87ರಷ್ಟು ಹೆಚ್ಚಳವಾಗಿದೆ.
2014-15 ಮತ್ತು 2024-25ರ ನಡುವೆ ನರೇಂದ್ರ ಮೋದಿ ಸರ್ಕಾರವು ಜಾಹೀರಾತುಗಳಿಗಾಗಿ ಒಟ್ಟು 5,987 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ನ್ಯೂಸ್ಲಾಂಡ್ರಿ ವರದಿ ಮಾಡಿತ್ತು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವು 2017-18ರಿಂದ 2024-25ರ ಅವಧಿಯಲ್ಲಿ 6,811.94 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಹಾಗೆಯೇ ಉತ್ತರಾಖಂಡದಲ್ಲಿ ಸರ್ಕಾರದ ಜಾಹೀರಾತು ವೆಚ್ಚವು ಐದು ಹಣಕಾಸು ವರ್ಷಗಳಲ್ಲಿ 1,001 ಕೋಟಿ ರೂ.ಆಗಿತ್ತು.
ಕೃಪೆ: newslaundry.com






