Uttar Pradesh | ಆದಿತ್ಯನಾಥ್ ಸರ್ಕಾರದ 'AI ಹೂಡಿಕೆ' ಒಪ್ಪಂದದಲ್ಲಿ ವಂಚನೆ ಆರೋಪ: ರೂ. 3,350 ಕೋಟಿಯ 'ಡಿಜಿಟಲ್ ಡಾಕ್ಟರ್ಸ್ ಕ್ಲಿನಿಕ್' ಯೋಜನೆ ನಂಬಿ ಜನ ಮೋಸ ಹೋಗಿದ್ದು ಹೇಗೆ?

ಮುಖ್ಯಮಂತ್ರಿ ಆದಿತ್ಯನಾಥ್ | Photo Credit: PTI
ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಮಹತ್ವಾಕಾಂಕ್ಷೆಯ ‘ಜಾಗತಿಕ ಹೂಡಿಕೆದಾರರ ಶೃಂಗಸಭೆ’ಯು 2023 ಫೆಬ್ರವರಿಯಲ್ಲಿ ಲಕ್ನೋದಲ್ಲಿ ಯಶಸ್ವಿಯಾಗಿ ನಡೆದಿತ್ತು. ಈ ಶೃಂಗಸಭೆಯ ಅಂತ್ಯದ ವೇಳೆಗೆ, ಬರೋಬ್ಬರಿ 33.52 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪ್ರಸ್ತಾವಿತ ಹೂಡಿಕೆಗಳ ಒಟ್ಟು 19,250 ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ಈ ಪೈಕಿ ‘ಒಬ್ದು ಡಿಜಿಟಲ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್’ (Obdu Digital Health Care Private Limited) ಕಂಪನಿಯ ಒಪ್ಪಂದವೂ ಒಂದಾಗಿತ್ತು.
ಉತ್ತರ ಪ್ರದೇಶದ ಗ್ರಾಮೀಣ ಭಾಗಗಳಲ್ಲಿ ʼಡಿಜಿಟಲ್ ಡಾಕ್ಟರ್ಸ್ ಕ್ಲಿನಿಕ್ʼಗಳ ಜಾಲವನ್ನು ಸ್ಥಾಪಿಸಲು ‘ಒಬ್ದು’ ಕಂಪನಿಯು 3,350 ಕೋಟಿ ರೂಪಾಯಿಗಳ ಬೃಹತ್ ಯೋಜನೆಗೆ ಬದ್ಧತೆ ಪ್ರಕಟಿಸಿತ್ತು. ರಾಜ್ಯದ ಅತ್ಯಂತ ಹಿಂದುಳಿದ ಹಳ್ಳಿಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ವೈದ್ಯಕೀಯ ಸಮಾಲೋಚನೆ, ಕಡಿಮೆ ವೆಚ್ಚದ ಔಷಧಗಳು ಮತ್ತು 24 ಗಂಟೆಗಳ ಕಾಲ ವೈದ್ಯರ ಲಭ್ಯತೆಯನ್ನು ಕಲ್ಪಿಸಿಕೊಡುವ ಭರವಸೆಯನ್ನು ಈ ಯೋಜನೆ ನೀಡಿತ್ತು. ಫೆಬ್ರವರಿ 2024 ರ ವೇಳೆಗೆ, ಆದಿತ್ಯನಾಥ್ ಸರ್ಕಾರವು ತನ್ನ 4 ನೇ ಭೂಮಿ ಪೂಜೆ ಸಮಾರಂಭದಲ್ಲಿ ಅನುಷ್ಠಾನದ ಹಂತದಲ್ಲಿರುವ 14,701 ಕೈಗಾರಿಕಾ ಘಟಕಗಳ ಪಟ್ಟಿಯಲ್ಲಿ ಒಬ್ಡು ಕಂಪನಿಯನ್ನೂ ಸೇರಿಸಿತ್ತು. ಇದರಿಂದಾಗಿ ರಾಜ್ಯದಲ್ಲಿ 15.53 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸರ್ಕಾರ ಹೇಳಿತ್ತು ಕೇವಲ ಒಬ್ದು ಕಂಪನಿಯೊಂದರ ಒಪ್ಪಂದದಿಂದಲೇ ಸುಮಾರು 70,000 ಉದ್ಯೋಗಗಳು ಸೃಷ್ಟಿಯಾಗಬೇಕಿತ್ತು. ಆದರೆ, ಆ ಭರವಸೆಯ ಕಥೆ ಕ್ರಮೇಣ ಪೊಳ್ಳು ಎಂಬುದು ಗೊತ್ತಾಯಿತು.
ವಂಚನೆಗೊಳಗಾದ ನಾಲ್ಕು ಪ್ರಮುಖ ಹೂಡಿಕೆದಾರರು ನೀಡಿದ ದೂರಿನ ಆಧಾರದ ಮೇಲೆ ಒಬ್ದು ಕಂಪನಿಯ ವಿರುದ್ಧ ಪ್ರಸ್ತುತ ವಂಚನೆ ಪ್ರಕರಣ ದಾಖಲಾಗಿದೆ ಎಂದು
ಇದಲ್ಲದೆ, 40 ಕ್ಕೂ ಹೆಚ್ಚು ಸಂತ್ರಸ್ತರ ಪರವಾಗಿ ಮತ್ತೊಂದು ಪ್ರತ್ಯೇಕ ದೂರನ್ನು ಲಕ್ನೋದ ವಿಭೂತಿ ಖಂಡ್ ಪೊಲೀಸ್ ಠಾಣೆ, ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರಿಗೆ ಕಳುಹಿಸಲಾಗಿದೆ. ಆರಂಭವಾಗದ ಕ್ಲಿನಿಕ್ಗಳು, ಬೌನ್ಸ್ ಆದ ಚೆಕ್ಗಳು ಮತ್ತು ಸಂಪರ್ಕಕ್ಕೆ ಸಿಗದ ಫೋನ್ ಕರೆಗಳ ಮೂಲಕ ತಮಗೆ ವಂಚಿಸಲಾಗಿದೆ ಎಂದು ಹೂಡಿಕೆದಾರರು ಈ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ ಎಂದು newslaundry.com ನ ಬಸಂತ್ ಕುಮಾರ್ ಅವರ ವರದಿ ಉಲ್ಲೇಖಿಸಿದೆ.
ಇತರ ವೈಯಕ್ತಿಕ ಹೂಡಿಕೆದಾರರ ಪರವಾಗಿ ಇನ್ನೂ ಎರಡು ದೂರುಗಳನ್ನು ಲಕ್ನೋದ ಅದೇ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ. ಆದರೆ, ಈ ಮೂರು ದೂರುಗಳಿಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಯಾವುದೇ ಹೊಸ ಎಫ್ಐಆರ್ ದಾಖಲಿಸಿಲ್ಲ. ಈ ಪ್ರಕರಣದ ಬಗ್ಗೆ newslaundry.com ಪ್ರಕಟಿಸಿರುವ ವರದಿ ಇಲ್ಲಿದೆ.
►ಸರ್ಕಾರದ ಒಡನಾಟದ ದುರುಪಯೋಗ
ಸರ್ಕಾರದೊಂದಿಗಿನ ತನ್ನ ಒಡನಾಟವನ್ನು ಬಂಡವಾಳವಾಗಿಸಿಕೊಂಡ ಕಂಪನಿಯು, ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಲು ಅದನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದೆ ಎಂದು ಹೂಡಿಕೆದಾರರು ಮತ್ತು ದೂರುದಾರರು ಆರೋಪಿಸಿದ್ದಾರೆ.
‘ಒಬ್ದು’ ಕಂಪನಿಯ ಪ್ರಚಾರದ ಕೈಪಿಡಿಯು ಜಾಗತಿಕ ಹೂಡಿಕೆದಾರರ ಶೃಂಗಸಭೆಯ ವಿವರಗಳೊಂದಿಗೆ ಆರಂಭವಾಗುತ್ತಿತ್ತು. ಅದರಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಸಂದೇಶ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಸಂದೇಶ, ಸಹಿ ಮಾಡಲಾದ ಒಪ್ಪಂದದ ಭಾವಚಿತ್ರ ಹಾಗೂ ಆ ಒಪ್ಪಂದಕ್ಕೆ ಸಂಬಂಧಿಸಿದ ಪತ್ರಿಕಾ ವರದಿಗಳ ತುಣುಕುಗಳನ್ನು ಮುದ್ರಿಸಲಾಗಿತ್ತು.
ಇನ್ಸ್ಟಾಗ್ರಾಮ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಕಂಪನಿಯು ಉತ್ತರ ಪ್ರದೇಶ ಸರ್ಕಾರದೊಂದಿಗಿನ ತನ್ನ ನಿಕಟ ಸಂಬಂಧವನ್ನು ಪದೇ ಪದೇ ಹೈಲೈಟ್ ಮಾಡುತ್ತಿತ್ತು. 2024 ಫೆಬ್ರವರಿ 19ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ‘ಡಿಜಿಟಲ್ ಡಾಕ್ಟರ್ಸ್ ಕ್ಲಿನಿಕ್’ ಯೋಜನೆಗೆ ಚಾಲನೆ ನೀಡಿದ್ದರು ಎಂದು ಕಂಪನಿಯ ವೆಬ್ಸೈಟ್ನಲ್ಲಿ ಹೇಳಿಕೊಳ್ಳಲಾಗಿತ್ತು. ಆದರೆ, ಈ ಪ್ರಕಟಣೆಯ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಖಚಿತಪಡಿಸಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ ಎಂದು ‘newslaundry.com’ ವರದಿ ಹೇಳಿದೆ.
ಅವರು ನಮಗೆ ನೀಡಿದ ಪ್ರಚಾರ ಸಾಮಗ್ರಿಗಳಲ್ಲಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಆದಿತ್ಯನಾಥ್ ಅವರ ಭಾವಚಿತ್ರಗಳಿದ್ದವು. ಇಂತಹ ಪರಿಸ್ಥಿತಿಯಲ್ಲಿ ಅವರನ್ನು ಯಾರು ತಾನೇ ನಂಬುವುದಿಲ್ಲ?" ಎಂದು ಗೊಂಡಾ ಜಿಲ್ಲೆಯಲ್ಲಿ ‘ನಾಗರಿಕ್ ಉತ್ಥಾನ್ ಸೇವಾ ಸಮಿತಿ’ ಎಂಬ ಎನ್ಜಿಒ ನಡೆಸುತ್ತಿರುವ ಅಜಯ್ ಪ್ರತಾಪ್ ಸಿಂಗ್ ಹೇಳಿದ್ದಾರೆ. ಒಬ್ಡು ಕಂಪನಿಯ ಪ್ರತಿನಿಧಿಯೊಬ್ಬರು ತಮ್ಮನ್ನು ಸಂಪರ್ಕಿಸಿ, ಗೊಂಡಾ ಜಿಲ್ಲೆಯಲ್ಲಿ ಸ್ಥಾಪಿಸಲು ಸಹಾಯ ಮಾಡುವ ಪ್ರತಿ ಕ್ಲಿನಿಕ್ಗೆ ಇಂತಿಷ್ಟು ಕಮಿಷನ್ ನೀಡುವುದಾಗಿ ಆಮಿಷ ಒಡ್ಡಿದ್ದರು ಎಂದು ಸಿಂಗ್ ಹೇಳಿರುವುದಾಗಿ newslaundry.com ವರದಿ ಉಲ್ಲೇಖಿಸಿದೆ.
ಸಿಂಗ್ ನೀಡಿದ ದೂರಿನ ಆಧಾರದ ಮೇಲೆ, ಗೊಂಡಾದ ಖರ್ಗುಪುರ ಪೊಲೀಸ್ ಠಾಣೆಯಲ್ಲಿ ಈ ವರ್ಷದ ಎಪ್ರಿಲ್ 28 ರಂದು ಒಬ್ಡು ಡಿಜಿಟಲ್ ಹೆಲ್ತ್ ಕೇರ್ನ ನಿರ್ದೇಶಕ ಸಂಜಯ್ ಕುಮಾರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 316(2) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ಈಗಾಗಲೇ ಹಲವರನ್ನು ವಿಚಾರಣೆ ನಡೆಸಿದ್ದು, ಶೀಘ್ರದಲ್ಲೇ ಸಂಜಯ್ ಕುಮಾರ್ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗುವುದು ಎಂದು ಪ್ರಕರಣದ ತನಿಖಾಧಿಕಾರಿಯು ʼನ್ಯೂಸ್ಲಾಂಡ್ರಿʼಗೆ ತಿಳಿಸಿದ್ದಾರೆ
ಗ್ರಾಮೀಣ ಭಾಗಗಳಲ್ಲಿ ಡಿಜಿಟಲ್ ಡಾಕ್ಟರ್ಸ್ ಕ್ಲಿನಿಕ್ ತೆರೆಯಲು ಹೂಡಿಕೆದಾರರು ಭದ್ರತಾ ಠೇವಣಿಯಾಗಿ 3.8 ಲಕ್ಷ ರೂಪಾಯಿ ಹಾಗೂ ಶೇಕಡಾ 18 ರಷ್ಟು ಜಿಎಸ್ಟಿ ಸೇರಿದಂತೆ ಒಟ್ಟು 4.13 ಲಕ್ಷ ರೂಪಾಯಿ ಪಾವತಿಸಬೇಕಾಗಿತ್ತು ಮತ್ತು ಕ್ಲಿನಿಕ್ಗೆ ಸೂಕ್ತ ಜಾಗವನ್ನು ಒದಗಿಸಬೇಕಾಗಿತ್ತು. ಇದಕ್ಕೆ ಪ್ರತಿಯಾಗಿ, ರೋಗನಿರ್ಣಯದ ಉಪಕರಣಗಳನ್ನು ಅಳವಡಿಸುವುದು, ಔಷಧಿಗಳನ್ನು ಪೂರೈಸುವುದು, 24 ಗಂಟೆಯೂ ಆನ್ಲೈನ್ ಮೂಲಕ ವೈದ್ಯರು ಲಭ್ಯವಿರುವಂತೆ ನೋಡಿಕೊಳ್ಳುವುದು ಮತ್ತು ಕ್ಲಿನಿಕ್ನಿಂದ ಬರುವ ಆದಾಯದಲ್ಲಿ ಶೇಕಡಾ 25 ರಷ್ಟು ಪಾಲನ್ನು ನೀಡುವುದಾಗಿ ಒಬ್ಡು ಕಂಪನಿ ಭರವಸೆ ನೀಡಿತ್ತು. ನಗರ ಪ್ರದೇಶಗಳಲ್ಲಿ ಈ ಠೇವಣಿ ಮೊತ್ತ ಇನ್ನೂ ಹೆಚ್ಚಾಗಿತ್ತು. ಲಕ್ನೋದ ಹೂಡಿಕೆದಾರರೊಬ್ಬರಾದ ಶೈಲೇಂದ್ರ ಕುಮಾರ್ ಸಿಂಗ್ ಅವರ ಪ್ರಕಾರ, ಅವರಿಂದ ಸುಮಾರು 11 ಲಕ್ಷ ರೂಪಾಯಿ ಪಾವತಿಸುವಂತೆ ಕಂಪನಿ ಬೇಡಿಕೆ ಇಟ್ಟಿತ್ತು.
► ಹೂಡಿಕೆದಾರರು ಹೇಳುತ್ತಿರುವುದೇನು?
ಹಣ ಪಾವತಿಸಿದ ನಂತರವೂ ತಮ್ಮ ಕೇಂದ್ರಗಳು ಸಂಪೂರ್ಣವಾಗಿ ಕಾರ್ಯಾರಂಭ ಮಾಡಲೇ ಇಲ್ಲ ಎಂದು ಈಗ 40 ಕ್ಕೂ ಹೆಚ್ಚು ಜನರು ಗಂಭೀರ ಆರೋಪ ಮಾಡುತ್ತಿದ್ದಾರೆ.
ಗೊಂಡಾ ಜಿಲ್ಲೆಯಲ್ಲಿ ನಾಲ್ಕು ಜನ ಹೂಡಿಕೆದಾರರು ತಲಾ 4.13 ಲಕ್ಷ ರೂಪಾಯಿ ಪಾವತಿಸಿದ್ದರು. ಇವುಗಳ ಪೈಕಿ ಮೊದಲ ಕ್ಲಿನಿಕ್ ಅನ್ನು ಅನುರಾಗ್ ಶ್ರೀವಾಸ್ತವ ಅವರ ಜಾಗದಲ್ಲಿ 2024 ಆಗಸ್ಟ್ 9ರಂದು ತೆರೆಯಲಾಗಿತ್ತು. ಇದನ್ನು ಬಿಜೆಪಿ ಶಾಸಕ ವಿನಯ್ ಕುಮಾರ್ ದ್ವಿವೇದಿ ಮತ್ತು ಗೊಂಡಾ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಡಾ. ರಶ್ಮಿ ವರ್ಮಾ ಅವರು ಉದ್ಘಾಟಿಸಿದ್ದರು. ಆದರೆ, ಅಷ್ಟೇ ಮೊತ್ತ ಪಾವತಿಸಿದ್ದ ಇತರ ಮೂವರು ಹೂಡಿಕೆದಾರರು, ತಮ್ಮ ಕೇಂದ್ರಗಳು ಇದುವರೆಗೆ ಆರಂಭವಾಗಿಯೇ ಇಲ್ಲ ಎಂದು ದೂರಿದ್ದಾರೆ.
ಉದ್ಘಾಟನೆಗೊಂಡಿದ್ದ ಶ್ರೀವಾಸ್ತವ ಅವರ ಕ್ಲಿನಿಕ್ ಕೂಡ ಹೆಚ್ಚು ದಿನ ನಡೆಯಲಿಲ್ಲ. ಕಂಪನಿ ಭರವಸೆ ನೀಡಿದ್ದ ಆದಾಯದ ಹತ್ತಿರಕ್ಕೂ ಗಳಿಕೆ ಬರುತ್ತಿರಲಿಲ್ಲ. ಕ್ಲಿನಿಕ್ನಲ್ಲಿ ಪದೇ ಪದೇ ಔಷಧಿಗಳ ಕೊರತೆ ಎದುರಾಗುತ್ತಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಸಂಬಳ ನೀಡುತ್ತಿರಲಿಲ್ಲ ಮತ್ತು ಕ್ಲಿನಿಕ್ನ ಪ್ರಚಾರಕ್ಕಾಗಿ ಕಂಪನಿ ಯಾವುದೇ ಪ್ರಯತ್ನ ಮಾಡಲಿಲ್ಲ. ತಿಂಗಳ ಆದಾಯ ಕೇವಲ 2,000 ದಿಂದ 3,000 ರೂಪಾಯಿ ದಾಟುತ್ತಿರಲಿಲ್ಲ ಎಂದು ಶ್ರೀವಾಸ್ತವ ಹೇಳಿದ್ದಾರೆ. ಇಂದರಿಂದ ಬೇಸತ್ತ ಅವರು ಕ್ಲಿನಿಕ್ ಮುಚ್ಚುವಂತೆ ಕಂಪನಿಗೆ ತಿಳಿಸಿದ್ದರು.
ಒಬ್ದು ಕಂಪನಿಯ ಪ್ರತಿನಿಧಿಗಳು ಕ್ಲಿನಿಕ್ನ ಉಪಕರಣಗಳನ್ನು ಕೊಂಡೊಯ್ಯಲು ಬಂದಾಗ, ತಮ್ಮ ಠೇವಣಿ ಹಣವನ್ನು ಮರಳಿ ನೀಡಿದ ನಂತರವೇ ಉಪಕರಣಗಳನ್ನು ಹಸ್ತಾಂತರಿಸುವುದಾಗಿ ಶ್ರೀವಾಸ್ತವ ಹೇಳಿದರು. ಆ ಸಮಯದಲ್ಲಿ ಅವರಿಗೆ 3.5 ಲಕ್ಷ ರೂಪಾಯಿಯ ಚೆಕ್ ನೀಡಲಾಗಿತ್ತು. ಆದರೆ, ಆ ಚೆಕ್ ಒಮ್ಮೆ ಖಾತೆಯಲ್ಲಿ ಹಣವಿಲ್ಲದ ಕಾರಣಕ್ಕೆ ಮತ್ತು ಎರಡನೇ ಬಾರಿ ಸಹಿ ಹೊಂದಾಣಿಕೆಯಾಗದ ಕಾರಣಕ್ಕೆ ಬೌನ್ಸ್ ಆಯಿತು ಎಂದು ಅವರು ಆರೋಪಿಸಿದ್ದಾರೆ. ಅಂತಿಮವಾಗಿ ಉಪಕರಣಗಳನ್ನು ತೆಗೆದುಕೊಂಡು ಹೋಗಲಾಯಿತು, ಆದರೆ ತಮಗೆ ಬರಬೇಕಾಗಿದ್ದ ಹಣ ಮಾತ್ರ ವಾಪಸ್ ಬಂದಿಲ್ಲ ಎಂದಿದ್ದಾರವರು.
► ನಂತರ ಬಂದ ಹೂಡಿಕೆದಾರರ ಕಥೆ
ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಮೂಲದ, ದಿಲ್ಲಿಯಲ್ಲಿ ಉದ್ಯೋಗಿಯಾಗಿರುವ ಸಭಾಜೀತ್ ಪಾಂಡೆ ಅವರಿಗೆ ಪರಿಚಯಸ್ಥರೊಬ್ಬರ ಮೂಲಕ ಈ ಯೋಜನೆಯ ಬಗ್ಗೆ ತಿಳಿಯಿತು. ಅಕ್ಟೋಬರ್ 2024 ರಲ್ಲಿ ಅವರು ಲಕ್ನೋದಲ್ಲಿರುವ ಸಂಜಯ್ ಕುಮಾರ್ ಅವರ ಕಚೇರಿಗೆ ಭೇಟಿ ನೀಡಿದಾಗ, ಅವರಿಗೆ ಯೋಜನೆಯ ಬಗ್ಗೆ ವಿವರಿಸಲಾಗಿತ್ತು.
"ಸಂಜಯ್ ಪದೇ ಪದೇ ಯೋಗಿ ಆದಿತ್ಯನಾಥ್ ಮತ್ತು ಆರೋಗ್ಯ ಇಲಾಖೆಯ ಹೆಸರನ್ನು ಪ್ರಸ್ತಾಪಿಸುತ್ತಿದ್ದ. ರಾಜಕೀಯ ನಾಯಕರೊಂದಿಗಿನ ತನ್ನ ಭಾವಚಿತ್ರಗಳನ್ನು ಹಾಗೂ ಉತ್ತರ ಪದೇಶ ಸರ್ಕಾರದೊಂದಿಗಿನ ಒಪ್ಪಂದದ ಪತ್ರಗಳನ್ನು ತೋರಿಸುತ್ತಿದ್ದ. ಇಷ್ಟೆಲ್ಲಾ ನೋಡಿದ ಮೇಲೆ ಆತನನ್ನು ನಂಬದೇ ಇರಲು ಸಾಧ್ಯವಿರಲಿಲ್ಲ" ಎಂದು ಪಾಂಡೆ ಹೇಳಿದ್ದಾರೆ.
2024 ಅಕ್ಟೋಬರ್ 24ರಂದು ಪಾಂಡೆ ಅವರು 4.13 ಲಕ್ಷ ರೂಪಾಯಿಗಳನ್ನು ಒಬ್ದು ಡಿಜಿಟಲ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ಗೆ ವರ್ಗಾಯಿಸಿದರು. ಆದರೆ, ತಾವು ಗುರುತಿಸಿದ್ದ ಜಾಗದಲ್ಲಿ ಯಾವುದೇ ಕಾಮಗಾರಿ ನಡೆಯಲಿಲ್ಲ . ಅಲ್ಲಿ ಕ್ಲಿನಿಕ್ ಕೂಡ ಆರಂಭವಾಗಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಕೆಲವು ತಿಂಗಳುಗಳ ನಂತರ ಸಂಪರ್ಕವೇ ಕಡಿತಗೊಂಡಿತು. "ಲಕ್ನೋದ ಕಚೇರಿಯನ್ನು ಮುಚ್ಚಲಾಯಿತು ಮತ್ತು ಸಂಜಯ್ ಸಂಪರ್ಕಕ್ಕೆ ಸಿಗದಂತಾದರು. ಅವರು ನನ್ನ ಜಾಗದಲ್ಲಿ ಯಾವುದೇ ಕೆಲಸ ಮಾಡಲಿಲ್ಲ, ಕ್ಲಿನಿಕ್ ಕೂಡ ತೆರೆಯಲಿಲ್ಲ. ನಾನು ಈಗಾಗಲೇ ನನ್ನ ಹಳ್ಳಿಯ ಜನರಿಗೆ ಈ ಬಗ್ಗೆ ಹೇಳಿದ್ದರಿಂದ ಎಲ್ಲರ ಮುಂದೆ ತಲೆತಗ್ಗಿಸುವಂತಾಯಿತು" ಎಂದು ಪಾಂಡೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
2025 ಅಕ್ಟೋಬರ್ 25ರಂದು ವಿಭೂತಿ ಖಂಡ್ ಪೊಲೀಸ್ ಠಾಣೆಗೆ ಸಲ್ಲಿಕೆಯಾದ ಜಂಟಿ ದೂರಿನಲ್ಲಿ ಹೆಸರಿಸಲಾದ 40 ಕ್ಕೂ ಹೆಚ್ಚು ಹೂಡಿಕೆದಾರರಲ್ಲಿ ಪಾಂಡೆ ಕೂಡ ಒಬ್ಬರಾಗಿದ್ದಾರೆ.
ಲಕ್ನೋ ನಿವಾಸಿ ಶೈಲೇಂದ್ರ ಕುಮಾರ್ ಸಿಂಗ್ ಈ ಹೂಡಿಕೆದಾರರ ಗುಂಪಿನ ನೇತೃತ್ವ ವಹಿಸಿದ್ದು, ಕಂಪನಿಯು ಮೊದಲೇ ಹಣವನ್ನು ವಸೂಲಿ ಮಾಡಿದ್ದರೂ ಯಾವುದೇ ಕ್ಲಿನಿಕ್ ಅನ್ನು ಆರಂಭಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ಹೂಡಿಕೆದಾರರ ಪೈಕಿ ಸಂಭಾಲ್ ಜಿಲ್ಲೆಯ ಸಾಲಾರ್ಪುರ ಖುರ್ದ್ ನಿವಾಸಿ ಹಿಮಾನಿ ಕೂಡ ಒಬ್ಬರು. ಕ್ಲಿನಿಕ್ ಆರಂಭಿಸಲು ತಮ್ಮ ಕುಟುಂಬವು 4.13 ಲಕ್ಷ ರೂಪಾಯಿ ಪಾವತಿಸಿತ್ತು ಎಂದು ಅವರು ತಿಳಿಸಿದ್ದಾರೆ. ತಮ್ಮ ತಂದೆ ರೈತರಾಗಿದ್ದು, ಸರ್ಕಾರದೊಂದಿಗಿನ ಒಪ್ಪಂದದ ಪತ್ರಿಕಾ ವರದಿಗಳು ಮತ್ತು ರಾಜಕೀಯ ನಾಯಕರೊಂದಿಗಿನ ಭಾವಚಿತ್ರಗಳನ್ನು ನೋಡಿ ತಮ್ಮ ಕುಟುಂಬಸ್ಥರು ಕಂಪನಿಯನ್ನು ನಂಬಿದ್ದರು ಎಂದು ಅವರು ಹೇಳಿದ್ದಾರೆ.
"ನಾವು ಈಗ ವಾಸಿಸುತ್ತಿರುವ ಮನೆಯಿಂದಲೇ ಕ್ಲಿನಿಕ್ ನಡೆಸಲು ಬಯಸಿದ್ದೆವು. ಆದರೆ ಕಂಪನಿಯು ರಸ್ತೆ ಬದಿಯ ಜಾಗದಲ್ಲಿ ತನ್ನದೇ ಆದ ವಿನ್ಯಾಸಕ್ಕೆ ತಕ್ಕಂತೆ ಹೊಸ ಕಟ್ಟಡವನ್ನು ನಿರ್ಮಿಸುವಂತೆ ನಮಗೆ ಸೂಚಿಸಿತು. ಇದಕ್ಕಾಗಿ ನಮ್ಮ ಕುಟುಂಬವು ಸಂಬಂಧಿಕರಿಂದ ಬಡ್ಡಿ ರೂಪದಲ್ಲಿ ಸಾಲ ಪಡೆದು, ತಮ್ಮ ಕೃಷಿ ಭೂಮಿಯಲ್ಲಿ ಕಟ್ಟಡ ನಿರ್ಮಿಸಲು ಹೆಚ್ಚುವರಿಯಾಗಿ 11 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ. ನಾವು ಇನ್ನೂ ಆ ಸಾಲವನ್ನು ಮರುಪಾವತಿಸುತ್ತಿದ್ದೇವೆ. ಆದರೆ ನಮ್ಮ ಕಟ್ಟಡದ ಗೋಡೆಗಳಿಗೆ ಕೇವಲ ವಾಲ್ಪೇಪರ್ ಹಚ್ಚಿದ್ದನ್ನು ಬಿಟ್ಟರೆ ಕಂಪನಿ ಬೇರೆ ಯಾವುದೇ ಕೆಲಸ ಮಾಡಲಿಲ್ಲ. ಕಟ್ಟಡವು ಹಳ್ಳಿಯಲ್ಲಿ ಇರುವುದರಿಂದ ಅದನ್ನು ಬೇರೆಯವರಿಗೆ ಬಾಡಿಗೆಗೆ ಕೊಡುವುದೂ ಕಷ್ಟವಾಗಿದೆ" ಎಂದು ಹಿಮಾನಿ ಹೇಳಿದ್ದಾರೆ.
ಉಳಿದ ದೂರುಗಳೂ ಸಹ ಇದೇ ರೀತಿಯದ್ದಾಗಿವೆ.
ಲಕ್ನೋದ ಹಿರಿಯ ನಾಗರಿಕರಾದ ಸುರೇಶ್ ಸೈನಿ ಮತ್ತು ಹಿಮಾಂಶು ಶ್ರೀವಾಸ್ತವ ಅವರು ಬಿಜ್ನೋರ್ ರಸ್ತೆಯಲ್ಲಿ 10 ಹಾಸಿಗೆಗಳ ಆಸ್ಪತ್ರೆಯನ್ನು ಸ್ಥಾಪಿಸಲು ‘ಒಬ್ದು’ ಕಂಪನಿಯಲ್ಲಿ ಒಟ್ಟು 45 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ಇದು ‘ಡಿಜಿಟಲ್ ಡಾಕ್ಟರ್ಸ್ ಕ್ಲಿನಿಕ್’ ಯೋಜನೆಯಿಂದ ಭಿನ್ನವಾದದ್ದಾಗಿದ್ದರೂ, ಕಂಪನಿಯು ಸರ್ಕಾರದೊಂದಿಗಿನ ಒಪ್ಪಂದ ಮತ್ತು ಸರ್ಕಾರಿ ಮಾನ್ಯತೆಯ ವಿಶ್ವಾಸಾರ್ಹತೆಯನ್ನು ತೋರಿಸಿಯೇ ತಮ್ಮನ್ನು ಈ ಯೋಜನೆಗೆ ಸೆಳೆದಿತ್ತು ಎಂದು ಇಬ್ಬರು ಹೂಡಿಕೆದಾರರು ಹೇಳಿದ್ದಾರೆ. ಇಬ್ಬರೂ ತಲಾ 22.5 ಲಕ್ಷ ರೂಪಾಯಿ ಪಾವತಿಸಿದ ನಂತರ 2025 ಮಾರ್ಚ್ 4ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆಸ್ಪತ್ರೆಯನ್ನು ಸೈನಿ ಅವರಿಗೆ ಸೇರಿದ ಜಾಗದಲ್ಲಿ ಸ್ಥಾಪಿಸಬೇಕಾಗಿದ್ದರಿಂದ, ಅದಕ್ಕಾಗಿ ಅವರಿಬ್ಬರೂ ಜಂಟಿಯಾಗಿ ತಿಂಗಳಿಗೆ 40,000 ರೂಪಾಯಿ ಬಾಡಿಗೆ ಪಾವತಿಸುತ್ತಿದ್ದರು. ಹೂಡಿಕೆದಾರರ ಪ್ರಕಾರ, ಕೆಲವು ಸ್ಟ್ರೆಚರ್ಗಳನ್ನು ಅಳವಡಿಸುವುದು ಮತ್ತು ವೈದ್ಯರ ಕೋಣೆಯನ್ನ ನಿರ್ಮಿಸುವುದನ್ನು ಬಿಟ್ಟರೆ ಅಲ್ಲಿ ಬೇರೆ ಯಾವುದೇ ಪ್ರಮುಖ ಕೆಲಸಗಳು ನಡೆಯಲಿಲ್ಲ. ಕಂಪನಿಯು ಮೊದಲು ಆಗಸ್ಟ್ನಲ್ಲಿ ಮತ್ತು ನಂತರ ಅಕ್ಟೋಬರ್ನಲ್ಲಿ ಆಸ್ಪತ್ರೆಯ ಉದ್ಘಾಟನೆ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಎರಡು ಬಾರಿಯೂ ಉದ್ಘಾಟನೆ ನಡೆಯಲೇ ಇಲ್ಲ.
ಅವರ ಸುಳ್ಳು ಭರವಸೆಗಳಿಂದ ನಾನು ಬೇಸತ್ತು ಹೋಗಿದ್ದೆ. ನಾವು ಬಾಡಿಗೆ ಪಾವತಿಸುತ್ತಲೇ ಇದ್ದೆವು, ಆದರೆ ಆಸ್ಪತ್ರೆ ಮಾತ್ರ ಎಂದಿಗೂ ತೆರೆಯಲಿಲ್ಲ. ಅದಾದ ನಂತರ ಅವರು ತಮ್ಮ ಕಚೇರಿಯನ್ನು ಲಕ್ನೋದಿಂದ ಬೇರೆಡೆಗೆ ಸ್ಥಳಾಂತರಿಸಿದರು. ನಮ್ಮ ಫೋನ್ ಕರೆ ಹಾಗೂ ಇಮೇಲ್ಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದರು ಎಂದು ಹಿಮಾಂಶು ಹೇಳಿದ್ದಾರೆ.
ತಾವು ಇಮೇಲ್ ಮೂಲಕ ಸಂಜಯ್ ಕುಮಾರ್ ಅವರೊಂದಿಗೆ ಸಂಪರ್ಕ ಮುಂದುವರಿಸಿದಾಗ, ಕುಮಾರ್ ಅವರು 2026 ಜನವರಿ 29ರಂದು ತಮಗೆ ಒಂದು ಚೆಕ್ ನೀಡಿ, ಅದನ್ನು ಫೆಬ್ರವರಿ 27 ರ ನಂತರವೇ ಬ್ಯಾಂಕ್ಗೆ ಜಮೆ ಮಾಡುವಂತೆ ಕೇಳಿಕೊಂಡಿದ್ದರು ಎಂದು ಹಿಮಾಂಶು ಆರೋಪಿಸಿದ್ದಾರೆ. ಆದರೆ, ಫೆಬ್ರವರಿ 18 ರಂದು ಅಂದರೆ ಚೆಕ್ ಜಮೆ ಮಾಡುವ ಮುನ್ನವೇ ಹಿಮಾಂಶು ಮತ್ತು ಅವರ ಪಾಲುದಾರ ತನ್ನ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಚೆಕ್ ಕಿತ್ತುಕೊಂಡಿದ್ದಾರೆ ಎಂದು ಸಂಜಯ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದರು ಎನ್ನಲಾಗಿದೆ. ಫೆಬ್ರವರಿ 27 ರ ನಂತರ ಹಿಮಾಂಶು ಅವರು ಚೆಕ್ ಅನ್ನು ಬ್ಯಾಂಕ್ಗೆ ಸಲ್ಲಿಸಿದಾಗ ಅದು ಬೌನ್ಸ್ ಆಗಿದೆ. ಹೂಡಿಕೆ ಮಾಡಿ ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದ್ದರೂ, ಸೈನಿ ಮತ್ತು ಹಿಮಾಂಶು ಇಂದಿಗೂ ತಮ್ಮ ಹಣಕ್ಕಾಗಿ ಕಾಯುತ್ತಿದ್ದಾರೆ.
ಈ ಇಬ್ಬರು ಹೂಡಿಕೆದಾರರು ನವೆಂಬರ್ 2025 ರಲ್ಲೇ ಈ ಯೋಜನೆಯನ್ನು ಮುಂದುವರಿಸಲು ಇಷ್ಟವಿಲ್ಲದೆ, ತಮ್ಮ ಹಣವನ್ನು ಮರಳಿ ನೀಡುವಂತೆ ಒತ್ತಾಯಿಸಿದ್ದರು. 2025 ನವೆಂಬರ್ 6 ರಂದು ವಿಭೂತಿ ಖಂಡ್ ಪೊಲೀಸ್ ಠಾಣೆಗೆ ಲಿಖಿತ ದೂರನ್ನು ಸಲ್ಲಿಸಲಾಗಿದ್ದರೂ, ಇದುವರೆಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಮತ್ತೊಂದು ದೂರನ್ನು ಇದೇ ವರ್ಷದ ಜನವರಿ 8 ರಂದು ಲಕ್ನೋದ ವಿಭೂತಿ ಖಂಡ್ ಪೊಲೀಸ್ ಠಾಣೆಗೆ ಸಲ್ಲಿಸಲಾಗಿದೆ. ಝಾನ್ಸಿ ನಿವಾಸಿ ವಿಲಾಸ್ ಗುಪ್ತಾ ಎಂಬುವವರು ಈ ದೂರು ನೀಡಿದ್ದು, ತಾವು ಹಣ ಪಾವತಿಸಿದ್ದರೂ ಕ್ಲಿನಿಕ್ ಮಾತ್ರ ಎಂದಿಗೂ ಕಾರ್ಯಾರಂಭ ಮಾಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ಮೂರು ದೂರುಗಳ ಬಗ್ಗೆ ವಿಭೂತಿ ಖಂಡ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ರಾಜೀವ್ ದ್ವಿವೇದಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ತಮಗೆ ಈ ವಿಷಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ‘ನ್ಯೂಸ್ಲಾಂಡ್ರಿ’ಗೆ ತಿಳಿಸಿದ್ದಾರೆ.
►ಮುಖ್ಯಮಂತ್ರಿಗೆ ಪತ್ರ
40ಕ್ಕೂ ಹೆಚ್ಚು ಹೂಡಿಕೆದಾರರು ನೀಡಿದ ದೂರಿಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗದ ಹಿನ್ನೆಲೆಯಲ್ಲಿ, ಹಲವಾರು ಹೂಡಿಕೆದಾರರು ತಮಗೆ ಬರಬೇಕಾದ ಹಣವನ್ನು ಮರಳಿ ಕೊಡಿಸುವಂತೆ ಕೋರಿ ಮುಖ್ಯಮಂತ್ರಿ ಆದಿತ್ಯನಾಥ್, ಆರೋಗ್ಯ ಸಚಿವ ಬ್ರಜೇಶ್ ಪಾಠಕ್ ಮತ್ತು ಇತರ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
2026 ಜೂನ್ 8ರಂದು ಇವರಲ್ಲಿ ಕೆಲವು ಸಂತ್ರಸ್ತರು ಮುಖ್ಯಮಂತ್ರಿ ಆದಿತ್ಯನಾಥ್ ಅವರ ‘ಜನತಾ ದರ್ಬಾರ್’ಗೆ ಭೇಟಿ ನೀಡಿ ತಮ್ಮ ಅಳಲನ್ನು ತೋಡಿಕೊಂಡರು. ಸರ್ಕಾರದ ಒಪ್ಪಂದದ ಹೆಸರಿನಲ್ಲಿ ತಮಗೆ ವಂಚಿಸಲಾಗಿದೆ ಎಂದು ಆರೋಪಿಸಿದ ಅವರು, ಕೂಡಲೇ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದರು.
ಜನತಾ ದರ್ಬಾರ್ಗೆ ಭೇಟಿ ನೀಡಿದ್ದವರಲ್ಲಿ ಲಕ್ನೋದ ಮಲಿಹಾಬಾದ್ ನಿವಾಸಿ ಲಲಿತ್ ಕುಮಾರ್ ಕೂಡ ಒಬ್ಬರು. "ನಮ್ಮ ತಂಡಕ್ಕೆ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗದಿದ್ದರೂ, ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ಈ ಹಗರಣದ ಕುರಿತು ಈಗಾಗಲೇ ಹಲವು ದೂರುಗಳು ಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ" ಎಂದು ಕುಮಾರ್ ತಿಳಿಸಿದ್ದಾರೆ. ತಾವು ಎಫ್ಐಆರ್ ದಾಖಲಿಸಲು ಕಳೆದ ಎಂಟು ತಿಂಗಳಿನಿಂದ ಪ್ರಯತ್ನಿಸುತ್ತಿರುವುದಾಗಿ ಕುಮಾರ್ ಹೇಳಿದ್ದಾರೆ.
►ಎಫ್ಐಆರ್ ಸೇರಿದಂತೆ ಎಲ್ಲಾ ಆರೋಪಗಳನ್ನು ನಿರಾಕರಿಸಿದ ‘ಒಬ್ದು’
ಈ ಕುರಿತು ‘ನ್ಯೂಸ್ಲಾಂಡ್ರಿ’, ಸಂಜಯ್ ಕುಮಾರ್ ಅವರನ್ನು ದೂರವಾಣಿ ಮತ್ತು ಇಮೇಲ್ ಮೂಲಕ ಸಂಪರ್ಕಿಸಿತ್ತು. ಅವರು ದೂರವಾಣಿ ಕರೆಗೆ ಪ್ರತಿಕ್ರಿಯಿಸದಿದ್ದರೂ, ಜೂನ್ 7 ರಂದು ಇಮೇಲ್ ಮೂಲಕ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದು ಹಲವು ಪ್ರಮುಖ ಪ್ರಶ್ನೆಗಳನ್ನು ಉತ್ತರಿಸದೆ ಬಿಟ್ಟಿದ್ದಾರೆ. ಸದ್ಯಕ್ಕೆ ಎಷ್ಟು ಡಿಜಿಟಲ್ ಡಾಕ್ಟರ್ ಕ್ಲಿನಿಕ್ಗಳು ಕಾರ್ಯನಿರ್ವಹಿಸುತ್ತಿವೆ ಅಥವಾ ಎಷ್ಟು ಮುಚ್ಚಲ್ಪಟ್ಟಿವೆ ಎಂಬ ಬಗ್ಗೆ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಇನ್ನು ಜೂನ್ 9 ರಂದು ಕಂಪನಿಯು ಕಳುಹಿಸಿದ ಮತ್ತೊಂದು ಇಮೇಲ್ ಉತ್ತರದಲ್ಲಿ, ಗೊಂಡಾದಲ್ಲಿ ದಾಖಲಾಗಿರುವ ಎಫ್ಐಆರ್ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ನಿರಾಕರಿಸಿದೆ.
ಆಸ್ಪತ್ರೆ ಯೋಜನೆಗಾಗಿ ಮಾಡಲಾದ 45 ಲಕ್ಷ ರೂಪಾಯಿ ಹೂಡಿಕೆಯ ಕುರಿತು ಜೂನ್ 7 ರಂದು ಪ್ರತಿಕ್ರಿಯಿಸಿದ ಕುಮಾರ್, "ಅವರು ನೀಡಿದ ಜಾಗದಲ್ಲಿ ಆಸ್ಪತ್ರೆಯ ಕಾಮಗಾರಿಯು ಬಹುತೇಕ ಪೂರ್ಣಗೊಂಡಿತ್ತು ಮತ್ತು ಉದ್ಘಾಟನೆಯ ದಿನಾಂಕವನ್ನು ಕಂಪನಿಯು ಅಧಿಕೃತವಾಗಿ ಘೋಷಿಸಿತ್ತು. ಆದರೆ ತದನಂತರ ಉಭಯ ಪಕ್ಷಗಳ ನಡುವೆ ಗಂಭೀರ ವಿವಾದಗಳು ಉಂಟಾದವು. ಕಂಪನಿಯ ಅಧಿಕೃತ ಪ್ರತಿನಿಧಿಯ ವಿರುದ್ಧ ಕಾನೂನುಬಾಹಿರ ಕೃತ್ಯಗಳನ್ನು ಎಸಗಲಾಗಿದೆ ಮತ್ತು ಬಲವಂತ ಹಾಗೂ ತೀವ್ರ ಒತ್ತಡದ ಮೂಲಕ ಕೆಲವು ಚೆಕ್ಗಳನ್ನು ಕಸಿದುಕೊಳ್ಳಲಾಗಿದೆ " ಎಂದು ಹೇಳಿದ್ದಾರೆ.
ಆಸ್ಪತ್ರೆ ಕಾಮಗಾರಿ ‘ಬಹುತೇಕ ಪೂರ್ಣಗೊಂಡಿದೆ’ ಎಂಬ ತಮ್ಮ ವಾದವನ್ನು ಸಮರ್ಥಿಸಲು ಅಗತ್ಯವಿರುವ ನಿರಾಕ್ಷೇಪಣಾ ಪತ್ರ ಮತ್ತು ಪರವಾನಗಿಗಳಂತಹ ದಾಖಲೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಕಂಪನಿಯು ಯಾವುದೇ ನೇರ ಉತ್ತರ ನೀಡಿಲ್ಲ.
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಪೋರ್ಟಲ್ನಲ್ಲಿ ಲಭ್ಯವಿರುವ ‘ಒಬ್ದು ಡಿಜಿಟಲ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್’ನ ದಾಖಲೆಗಳನ್ನು ಪರಿಶೀಲಿಸಿದಾಗ, ಕಂಪನಿಯು ತನ್ನ ಬ್ಯಾಲೆನ್ಸ್ ಶೀಟ್ಗಳನ್ನು ಸಲ್ಲಿಸದೇ ಇರುವುದು ಬೆಳಕಿಗೆ ಬಂದಿದೆ. ಹೀಗಾಗಿ ಕಂಪನಿಯ ಆರ್ಥಿಕ ಪರಿಸ್ಥಿತಿಯ ಅಧಿಕೃತ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ.
ಹೀಗಿದ್ದೂ, ಒಬ್ದು ಕಂಪನಿಯು ಇತರ ರಾಜ್ಯಗಳ ಸರ್ಕಾರಗಳೊಂದಿಗೂ ತನ್ನ ವ್ಯವಹಾರವನ್ನು ವಿಸ್ತರಿಸುತ್ತಿರುವುದು ಕಂಡುಬಂದಿದೆ. ಉತ್ತರ ಪ್ರದೇಶದ ಒಪ್ಪಂದದ ಬೆನ್ನಲ್ಲೇ, ಕಂಪನಿಯು ರಾಜಸ್ಥಾನ ಸರ್ಕಾರದೊಂದಿಗೂ 2,500 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರಿಂದ 50,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿಕೊಂಡಿದೆ. ಇಂತಹದ್ದೇ ಮತ್ತೊಂದು ಒಪ್ಪಂದ ಉತ್ತರಾಖಂಡ ಸರ್ಕಾರದೊಂದಿಗೂ ನಡೆದಿದೆ ಎಂದು ವರದಿಯಾಗಿದೆ.






