Telegram ಸಂಸ್ಥಾಪಕ ಪಾವೆಲ್ ಡುರೊವ್ ವಿರುದ್ಧ ಭಯೋತ್ಪಾದನೆಗೆ ನೆರವು ನೀಡಿದ ಆರೋಪ ಹೊರಿಸಿದ ರಷ್ಯಾ, ಅಂತಾರಾಷ್ಟ್ರೀಯ ವಾಂಟೆಡ್ ಪಟ್ಟಿಗೆ ಸೇರ್ಪಡೆ

ಪಾವೆಲ್ ಡುರೊವ್ | Photo Credit : AP
Telegram ಸಂಸ್ಥಾಪಕ ಮತ್ತು CEO ಪಾವೆಲ್ ಡುರೊವ್ ಅವರು ಭಯೋತ್ಪಾದಕ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದಾರೆ ಎಂದು ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (FSB) ಬುಧವಾರ ಆರೋಪ ಹೊರಿಸಿದೆ. ಅಲ್ಲದೆ, ಅವರ ವಿರುದ್ಧ ಅಂತಾರಾಷ್ಟ್ರೀಯ ವಾಂಟೆಡ್ ನೋಟಿಸ್ ಜಾರಿ ಮಾಡಿದೆ. ರಷ್ಯಾದ ಒಳಗೆ ದಾಳಿಗಳನ್ನು ಸಂಘಟಿಸಲು ಉಕ್ರೇನ್ ಗೂಢಚಾರಿ ಸಂಸ್ಥೆಗಳು ಮತ್ತು ಉಗ್ರ ಸಂಘಟನೆಗಳು ಬಳಸುತ್ತಿರುವ ವಿಷಯಗಳನ್ನು ತೆಗೆದುಹಾಕಲು Telegram ವಿಫಲವಾಗಿದೆ ಎಂದು ರಷ್ಯಾ ಆರೋಪಿಸಿದೆ.
ದೇಶದ ಡಿಜಿಟಲ್ ರಂಗದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಮಾಸ್ಕೋ ನಡೆಸುತ್ತಿರುವ ಸುದೀರ್ಘ ಪ್ರಯತ್ನಗಳಲ್ಲಿ ಈ ನಡವಳಿಕೆ ಪ್ರಮುಖ ತಿರುವು ಎನಿಸಿಕೊಂಡಿದೆ. Telegram ಹಾಗೂ ಇತರ ವಿದೇಶಿ ಸಾಮಾಜಿಕ ಜಾಲತಾಣಗಳ ಮೇಲೆ ರಷ್ಯಾ ಈಗಾಗಲೇ ಹಲವು ನಿರ್ಬಂಧಗಳನ್ನು ವಿಧಿಸುತ್ತಿರುವಾಗಲೇ ಈ ಬೆಳವಣಿಗೆ ನಡೆದಿದೆ.
"ರಷ್ಯಾ ಒಕ್ಕೂಟದೊಳಗೆ ವಿಧ್ವಂಸಕ ಕೃತ್ಯಗಳು, ಭಯೋತ್ಪಾದನೆ, ಸಮೂಹ ಹತ್ಯೆಗಳು ಮತ್ತು ಸೈಬರ್ ವಂಚನೆಗಳನ್ನು ನಡೆಸಲು ಉಕ್ರೇನಿಯನ್ ವಿಶೇಷ ಸೇವೆಗಳು ಹಾಗೂ ಭಯೋತ್ಪಾದಕ ಸಂಘಟನೆಗಳು ಬಳಸುತ್ತಿದ್ದ ಮಾಹಿತಿಗಳನ್ನು ತೆಗೆದುಹಾಕಲು Telegram ವಿಫಲವಾಗಿದೆ" ಎಂದು FSB ಆರೋಪಿಸಿರುವುದಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಾವೆಲ್ ಡುರೊವ್ ಬಂಧನಕ್ಕಾಗಿ ಅಂತಾರಾಷ್ಟ್ರೀಯ ವಾರಂಟ್ ಜಾರಿಗೊಳಿಸಿರುವುದಾಗಿ FSB ತಿಳಿಸಿದೆ.
Telegram ಅನ್ನು ನೇಮಕಾತಿ ಮತ್ತು ವಿಧ್ವಂಸಕ ಕೃತ್ಯಗಳಿಗೆ ಬಳಸಲಾಗಿದೆ ಎಂದು FSB ಆರೋಪ
ರಷ್ಯಾದೊಳಗೆ ವಿಧ್ವಂಸಕ ಕೃತ್ಯಗಳು, ಭಯೋತ್ಪಾದನೆ, ಸೈಬರ್ ವಂಚನೆ ಮತ್ತು ಸಮೂಹ ಹತ್ಯೆಗಳನ್ನು ಸಂಘಟಿಸಲು ಉಕ್ರೇನ್ ಗೂಢಚಾರಿ ಸಂಸ್ಥೆಗಳು ಹಾಗೂ ಉಗ್ರ ಸಂಘಟನೆಗಳು ಸಕ್ರಿಯವಾಗಿ ಬಳಸುತ್ತಿದ್ದ ಹಲವು ಚಾನೆಲ್ಗಳು, ಚಾಟ್ ಗಳು ಮತ್ತು ಬಾಟ್ ಗಳನ್ನು ತೆಗೆದುಹಾಕಲು Telegram ಆಡಳಿತ ಮಂಡಳಿ ವಿಫಲವಾಗಿದೆ. ಇದರಿಂದಾಗಿ "ಹಲವು ಪ್ರಾಣಹಾನಿಗಳು ಸಂಭವಿಸಿವೆ" ಎಂದು ರಷ್ಯಾದ ಭದ್ರತಾ ಸಂಸ್ಥೆ ಆರೋಪಿಸಿರುವುದಾಗಿ ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಷ್ಯನ್ನರನ್ನು ಬೆದರಿಸಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಉಕ್ರೇನ್ ಭದ್ರತಾ ಸಂಸ್ಥೆಗಳಿಗೆ Telegram ಒಂದು ನೇಮಕಾತಿ ವೇದಿಕೆಯಾಗಿದೆ ಎಂದು FSB ಆರೋಪಿಸಿದೆ. ಅಲ್ಲದೆ, "ನಿಷೇಧಿತ ಮಾಹಿತಿ"ಯನ್ನು ತೆಗೆದುಹಾಕಲು ಪಾವೆಲ್ ಡುರೊವ್ ವಿಫಲರಾಗಿದ್ದಾರೆ ಎಂದು ದೂರಿದೆ ಎಂದು ಎಎಫ್ಪಿ ವರದಿ ಮಾಡಿದೆ.
ಮಾಸ್ಕೋ ತನ್ನ ರಾಜಕೀಯ ವಿರೋಧಿಗಳು ಮತ್ತು ಟೀಕಾಕಾರರ ವಿರುದ್ಧ "ಭಯೋತ್ಪಾದನೆ" ಅಥವಾ "ಉಗ್ರವಾದ"ಕ್ಕೆ ಬೆಂಬಲ ನೀಡುವ ಆರೋಪಗಳನ್ನು ಪದೇ ಪದೇ ಬಳಸುತ್ತಿದೆ ಎಂದು ವರದಿ ಉಲ್ಲೇಖಿಸಿದೆ.
►ಕ್ರೆಮ್ಲಿನ್ ಜೊತೆಗಿನ ಸುದೀರ್ಘ ವೈರತ್ವ
41 ವರ್ಷದ ಪಾವೆಲ್ ಡುರೊವ್ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಜನಿಸಿದವರಾದರೂ, ವರ್ಷಗಳಿಂದ ರಷ್ಯಾದ ಹೊರಗೆ ವಾಸಿಸುತ್ತಿದ್ದಾರೆ. ಪ್ರಸ್ತುತ ಅವರು ಫ್ರಾನ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪೌರತ್ವವನ್ನು ಹೊಂದಿದ್ದಾರೆ. 2013ರಲ್ಲಿ Telegram ಪ್ರಾರಂಭಿಸುವ ಮೊದಲು, ಅವರು "ರಷ್ಯಾದ ಫೇಸ್ಬುಕ್" ಎಂದೇ ಕರೆಯಲ್ಪಡುವ 'ವಿಕೊಂಟಾಕ್ಟೆ' (VKontakte-VK) ಸಂಸ್ಥೆಯನ್ನು ಸ್ಥಾಪಿಸಿದ್ದರು.
ರಷ್ಯಾ ಸರ್ಕಾರದ ಒತ್ತಡಕ್ಕೆ ಮಣಿದು, 2014ರಲ್ಲಿ ಅವರು ಈ ಕಂಪೆನಿಯಲ್ಲಿದ್ದ ತಮ್ಮ ಉಳಿದ ಪಾಲನ್ನು ಮಾರಾಟ ಮಾಡಿದರು ಎಂದು ರಾಯಿಟರ್ಸ್ ವರದಿ ಮಾಡಿದೆ. ಪ್ಲಾಟ್ಫಾರ್ಮ್ ನ ಮೇಲೆ ರಷ್ಯಾ ಸರ್ಕಾರ ತನ್ನ ಪ್ರಭಾವವನ್ನು ಬಿಗಿಗೊಳಿಸಿದಂತೆ, ಅವರನ್ನು ಕಂಪೆನಿಯಿಂದ ಹೊರಹಾಕಲಾಗಿತ್ತು.
ಈ ವರ್ಷದ ಆರಂಭದಲ್ಲಿ, ರಷ್ಯಾ ಸರ್ಕಾರ ತನ್ನ ವಿರುದ್ಧ ಕ್ರಿಮಿನಲ್ ತನಿಖೆಯನ್ನು ಪ್ರಾರಂಭಿಸಿದೆ ಎಂದು ಪಾವೆಲ್ ಡುರೊವ್ ಬಹಿರಂಗಪಡಿಸಿದ್ದರು.
Telegram ಬಳಕೆಯನ್ನು ತಡೆಯಲು ಮತ್ತು "ಖಾಸಗಿತನದ ಹಕ್ಕು ಹಾಗೂ ವಾಕ್ ಸ್ವಾತಂತ್ರ್ಯವನ್ನು ಹತೋಟಿಯಲ್ಲಿಡಲು" ಮಾಸ್ಕೋ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಅವರು ಆರೋಪಿಸಿದ್ದರು.
►ರಷ್ಯಾದ ನಿರ್ಬಂಧ ತೀವ್ರ
2022ರ ಫೆಬ್ರವರಿಯಲ್ಲಿ ಉಕ್ರೇನ್ ಮೇಲಿನ ಪೂರ್ಣ ಪ್ರಮಾಣದ ಆಕ್ರಮಣದ ನಂತರ ಇಂಟರ್ನೆಟ್ ಅನ್ನು ಸರ್ಕಾರದ ಸಂಪೂರ್ಣ ನಿಯಂತ್ರಣಕ್ಕೆ ತರುವ ವ್ಯಾಪಕ ಅಭಿಯಾನದ ಭಾಗವಾಗಿ, ದೇಶದ ಅತ್ಯಂತ ಜನಪ್ರಿಯ ಮೆಸೇಜಿಂಗ್ ವೇದಿಕೆಗಳಲ್ಲಿ ಒಂದಾದ Telegram ಅನ್ನು ರಷ್ಯಾ ಸರ್ಕಾರ ನಿರ್ಬಂಧಿಸುತ್ತಿರುವ ನಡುವೆಯೇ ಈ ಆರೋಪಗಳು ಬಂದಿವೆ.
ಕಳೆದ ಕೆಲವು ವರ್ಷಗಳಲ್ಲಿ, ರಷ್ಯಾ ಕಠಿಣ ಇಂಟರ್ನೆಟ್ ಕಾಯ್ದೆಗಳನ್ನು ಜಾರಿಗೆ ತಂದಿದೆ. ಸರ್ಕಾರದ ಆದೇಶಗಳನ್ನು ಪಾಲಿಸಲು ನಿರಾಕರಿಸಿದ ವೇದಿಕೆಗಳನ್ನು ತಡೆಹಿಡಿದಿದೆ ಅಥವಾ ನಿಯಂತ್ರಿಸಿದೆ, ಹಾಗೂ ಆನ್ಲೈನ್ ಮಾಹಿತಿಗಳ ಮೇಲೆ ಕಣ್ಗಾವಲು ಇಡುವ ತನ್ನ ಸಾಮರ್ಥ್ಯವನ್ನು ವಿಸ್ತರಿಸಿದೆ.
ರಷ್ಯಾದಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು 'ಎಕ್ಸ್' ಸಂಸ್ಥೆಗಳನ್ನು ನಿಷೇಧಿಸಲಾಗಿದೆ. ಯೂಟ್ಯೂಬ್ ವೇಗವನ್ನು ಕುಗ್ಗಿಸಲಾಗಿದ್ದು, ಸಿಗ್ನಲ್ ಮತ್ತು ವೈಬರ್ ಆಪ್ ಗಳನ್ನು ತಡೆಹಿಡಿಯಲಾಗಿದೆ.
VPN ಮೂಲಕ ಬಳಕೆದಾರರು ಈ ನಿರ್ಬಂಧಗಳನ್ನು ಮೀರಿ ಆಪ್ಗಳನ್ನು ಬಳಸಲು ಸಾಧ್ಯವಿದ್ದರೂ, ಹಲವು VPN ಸೇವೆಗಳನ್ನು ಸಹ ನಿಯಮಿತವಾಗಿ ತಡೆಯಲಾಗುತ್ತಿದೆ.
ಅದೇ ಸಮಯದಲ್ಲಿ, ರಷ್ಯಾ ತನ್ನ ಸರ್ಕಾರಿ ಬೆಂಬಲಿತ 'ಮ್ಯಾಕ್ಸ್' (MAX) ಮೆಸೇಜಿಂಗ್ ಆಪ್ ಅನ್ನು ಪರ್ಯಾಯವಾಗಿ ಉತ್ತೇಜಿಸುತ್ತಿದೆ.
►ಫ್ರಾನ್ಸ್ ನಲ್ಲೂ ಪಾವೆಲ್ ಡುರೊವ್ ತನಿಖೆ
Telegramನಲ್ಲಿ ವಿಷಯಗಳ ಮೇಲ್ವಿಚಾರಣೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಕಾರಣಕ್ಕೆ ಫ್ರಾನ್ಸ್ ನಲ್ಲೂ ಪಾವೆಲ್ ಡುರೊವ್ ತನಿಖೆ ಎದುರಿಸುತ್ತಿದ್ದಾರೆ.
Telegramನಲ್ಲಿ ನಡೆಯುವ ಅಪರಾಧ ಚಟುವಟಿಕೆಗಳನ್ನು ತಡೆಯಲು ವಿಫಲವಾಗಿದೆ ಮತ್ತು ತನಿಖಾ ಸಂಸ್ಥೆಗಳ ವಿನಂತಿಗಳಿಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಆರೋಪಗಳ ಕುರಿತು ಫ್ರಾನ್ಸ್ ಸರ್ಕಾರ ತನಿಖೆ ನಡೆಸುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಆದರೆ ಪಾವೆಲ್ ಡುರೊವ್ ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ.
ಮಾದಕದ್ರವ್ಯ ಕಳ್ಳಸಾಗಣೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಚಿತ್ರಗಳ ಹಂಚಿಕೆ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ Telegram ಬಳಕೆಯಾಗಿದೆ ಎಂಬ ಆರೋಪದ ಮೇಲೆ 2024ರಲ್ಲಿ ಪ್ಯಾರಿಸ್ ನಲ್ಲಿ ಪಾವೆಲ್ ಡುರೊವ್ ಅವರನ್ನು ಬಂಧಿಸಲಾಗಿತ್ತು.






