ಅಮೆರಿಕದ ಹೊಸ ರಷ್ಯಾ ನಿರ್ಬಂಧ ಮಸೂದೆ: ಭಾರತದ ಕಚ್ಚಾ ತೈಲ ಆಮದು ನಿಲ್ಲುತ್ತಾ?
ಭಾರತದ ಮೇಲೆ ಇದರ ಪ್ರಭಾವವೇನು?

Photo Credit: timesofindia
ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತದ ಅಚ್ಚುಮೆಚ್ಚಿನ ಆರ್ಥಿಕ ಅಸ್ತ್ರವಾದ ಸುಂಕ ಮತ್ತೊಮ್ಮೆ ಮುಂಚೂಣಿಗೆ ಬಂದಿದೆ. ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸುವ ದೇಶಗಳ ಮೇಲೆ ಶೇ. 100ರವರೆಗೆ ಸುಂಕ ವಿಧಿಸಲು ಅಧ್ಯಕ್ಷರಿಗೆ ಅಧಿಕಾರ ನೀಡುವ ಹೊಸ ಮಸೂದೆಗೆ ಅಮೆರಿಕದಲ್ಲಿ ಅನುಮೋದನೆ ಸಿಕ್ಕಿದೆ.
ಇದರರ್ಥ ಭಾರತ ಮತ್ತು ಚೀನಾ ಕೂಡ ಈ ಪಟ್ಟಿಯಲ್ಲಿವೆ. ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಬುಧವಾರ 'ಲಿಂಡ್ಸೆ ಒ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಅಂಡ್ ಇರಾನ್ ಆಕ್ಟ್ ಆಫ್ 2026' ಮಸೂದೆಗೆ ಅನುಮೋದನೆ ನೀಡಿದೆ. ಈ ಮಸೂದೆ ಈಗ ಅಂತಿಮ ಅಂಕಿತಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಳಿ ಬರಲಿದೆ. ಹಾಗಾದರೆ, ರಷ್ಯಾದ ಕಚ್ಚಾ ತೈಲ ಖರೀದಿಸುತ್ತಿರುವ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ. 100ರಷ್ಟು ಸುಂಕ ವಿಧಿಸುತ್ತಾರೆಯೇ? ಮಧ್ಯಪ್ರಾಚ್ಯದ ಸಂಘರ್ಷದ ನಡುವೆ ಇದು ಭಾರತದ ಅಮೆರಿಕನ್ ರಫ್ತು ಮತ್ತು ಇಂಧನ ಭದ್ರತೆಯ ಪರಿಸ್ಥಿತಿಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಭಾರತಕ್ಕೆ ರಷ್ಯಾದ ಕಚ್ಚಾ ತೈಲ ಎಷ್ಟು ಮುಖ್ಯ ಮತ್ತು ಅಮೆರಿಕದಿಂದ ಹೊಸ ಸುಂಕಗಳ ಎದುರಾದರೆ ಭಾರತ ತೈಲ ಖರೀದಿಸುವುದನ್ನು ನಿಲ್ಲಿಸುತ್ತದೆಯೇ? ಎಂಬ ಪ್ರಶ್ನೆ ಮೂಡುವುದು ಸಹಜ.
ರಷ್ಯಾ ನಿರ್ಬಂಧ ಮಸೂದೆಯ ಹಿನ್ನೆಲೆ ಏನು?
ಒಂದೂವರೆ ವರ್ಷದ ಹಿಂದೆ ಮೊದಲ ಬಾರಿಗೆ ಮಂಡಿಸಲಾದ ಈ ಮಸೂದೆಯು, ರಷ್ಯಾದ ಕಚ್ಚಾ ತೈಲದ ಪ್ರಮುಖ ಖರೀದಿದಾರರ ಮೇಲೆ ಶೇ. 500ರವರೆಗೆ ಸುಂಕ ವಿಧಿಸಲು ಪ್ರಸ್ತಾವಿಸಿತ್ತು. ಆದರೆ ನಂತರ ಅದನ್ನು ಶೇ. 100ಕ್ಕೆ ತಗ್ಗಿಸಲಾಯಿತು. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸಭೆಯು 262 ಮತಗಳ ಪರ ಮತ್ತು 159 ಮತಗಳ ವಿರುದ್ಧದದಿಂದ ಈ ಮಸೂದೆಗೆ ಒಪ್ಪಿಗೆ ನೀಡಿದೆ. ಅಸ್ತಿತ್ವದಲ್ಲಿರುವ ನಿರ್ಬಂಧಗಳನ್ನು ತಪ್ಪಿಸಲು ಬಳಸಲಾಗುವ ರಷ್ಯಾದ ಇಂಧನ ಹಾಗೂ ರಕ್ಷಣಾ ವಲಯಗಳು ಮತ್ತು ಅದರ "ಶ್ಯಾಡೋ ನೌಕಾಪಡೆಯನ್ನು" ಗುರಿಯಾಗಿಸುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ. ಉಕ್ರೇನ್ನಲ್ಲಿ ಮಾಸ್ಕೋದ ಯುದ್ಧವನ್ನು ಬೆಂಬಲಿಸಲು ಸಹಾಯ ಮಾಡುವ ನಿಧಿಗಳ ಪ್ರವೇಶವನ್ನು ರಷ್ಯಾಕ್ಕೆ ನಿರ್ಬಂಧಿಸುವುದು ಇದರ ಮೂಲ ಗುರಿಯಾಗಿದೆ.
ರಷ್ಯಾ ನಿರ್ಬಂಧ ಮಸೂದೆ: ಭಾರತದ ಮೇಲೆ ಇದರ ಪ್ರಭಾವವೇನು?
ಈ ಹೊಸ ಮಸೂದೆಯು ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸುತ್ತಿರುವ ಭಾರತ ಮತ್ತು ಚೀನಾದಂತಹ ದೇಶಗಳ ಮೇಲೆ ಶೇ. 100ರವರೆಗೆ ಸುಂಕ ವಿಧಿಸುವ ಅಧಿಕಾರವನ್ನು ಅಮೆರಿಕದ ಅಧ್ಯಕ್ಷರಿಗೆ ನೀಡುತ್ತದೆ.
ಪ್ರಸ್ತುತ ರಷ್ಯಾದ ಇಂಧನವನ್ನು ಹೆಚ್ಚು ಆಮದು ಮಾಡಿಕೊಳ್ಳುವ ಅಗ್ರ ಐದು ದೇಶಗಳ ಪಟ್ಟಿಯಲ್ಲಿ ಚೀನಾ, ಭಾರತ, ಸ್ಲೊವಾಕಿಯಾ, ಹಂಗೇರಿ ಮತ್ತು ಅಜೆರ್ಬೈಜಾನ್ ಸೇರಿವೆ. ಇದು ಇರಾನ್ ಮೇಲಿನ ನಿರ್ಬಂಧಗಳನ್ನೂ ವಿಸ್ತರಿಸಿದೆ. 'ಗ್ರಹಾಂ ಕಾಯ್ದೆ'ಯು ಕಳೆದ ತಿಂಗಳು ಸೆನೆಟ್ನಲ್ಲಿ 86-11 ಮತಗಳ ಭರ್ಜರಿ ಬೆಂಬಲದೊಂದಿಗೆ (ಉಭಯ ಪಕ್ಷಗಳ ಒಮ್ಮತದೊಂದಿಗೆ) ಅಂಗೀಕಾರಗೊಂಡಿತ್ತು.
ಭಾರತಕ್ಕೆ ರಷ್ಯಾದಿಂದ ಎಷ್ಟು ತೈಲ ಸಿಗುತ್ತದೆ?
2022ರಲ್ಲಿ ಭಾರತದ ಕಚ್ಚಾ ತೈಲ ಆಮದಿನಲ್ಲಿ ರಷ್ಯಾದ ಪಾಲು ತೀರಾ ಕಡಿಮೆಯಿತ್ತು. ಆದರೆ ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದ ಯುರೋಪ್ ದೇಶಗಳು ಮಾಸ್ಕೋದ ತೈಲದ ಮೇಲೆ ನಿರ್ಬಂಧ ಹೇರಿದಾಗ, ರಷ್ಯಾದ ತೈಲವು ಭಾರೀ ರಿಯಾಯಿತಿ ದರದಲ್ಲಿ ಲಭ್ಯವಾಯಿತು. ಅಂದಿನಿಂದ ಭಾರತದ ಕಚ್ಚಾ ತೈಲ ಆಮದಿನಲ್ಲಿ ರಷ್ಯಾದ ಪಾಲು ನಿರಂತರವಾಗಿ ಏರಿಕೆಯಾಗಿದೆ. ಇಂದು ರಷ್ಯಾ ಭಾರತದ ಅತಿ ದೊಡ್ಡ ಕಚ್ಚಾ ತೈಲ ಪೂರೈಕೆದಾರ ರಾಷ್ಟ್ರವಾಗಿದೆ.
2025ರ ಅಂತ್ಯದ ವೇಳೆಗೆ, ಭಾರತದ ಕಚ್ಚಾ ತೈಲ ಪೂರೈಕೆಯಲ್ಲಿ ರಷ್ಯಾದ ಪಾಲು ಶೇ. 30ಕ್ಕೂ ಅಧಿಕವಾಗಿತ್ತು. ಮಧ್ಯಪ್ರಾಚ್ಯದ ಯುದ್ಧವು ಈ ಅವಲಂಬನೆಯನ್ನು ಮತ್ತಷ್ಟು ಹೆಚ್ಚಿಸಿದೆ. ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (GTRI) ಪ್ರಕಾರ, ಭಾರತದ ಒಟ್ಟು 134.7 ಶತಕೋಟಿ ಡಾಲರ್ ಮೌಲ್ಯದ ಕಚ್ಚಾ ತೈಲ ಆಮದಿನಲ್ಲಿ, 2026ನೇ ಹಣಕಾಸು ವರ್ಷದಲ್ಲಿ ರಷ್ಯಾದ ಪಾಲು ಶೇ. 30.3ರಷ್ಟಿದ್ದು, ಇದರ ಮೌಲ್ಯ 40.8 ಶತಕೋಟಿ ಡಾಲರ್ಗಳಷ್ಟಿದೆ.
2026ರ ಜುಲೈ ತಿಂಗಳಲ್ಲಿ, ಭಾರತ ಆಮದು ಮಾಡಿಕೊಂಡ ಒಟ್ಟು ತೈಲದಲ್ಲಿ ಶೇ. 50ಕ್ಕೂ ಹೆಚ್ಚು ಭಾಗ ರಷ್ಯಾದಿಂದಲೇ ಬಂದಿದೆ. ಅಮೆರಿಕ-ಇರಾನ್ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ತೈಲ ಪೂರೈಕೆಗೆ ನಿರಂತರ ಅಡ್ಡಿಯಾಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ. ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ ತಿಳಿಸುವಂತೆ, ಇತರ ಪೂರೈಕೆದಾರರು ಬಹಳ ಹಿಂದಿದ್ದಾರೆ. ಜುಲೈ ತಿಂಗಳ ಆಮದಿನಲ್ಲಿ ಯುಎಇ ಶೇ. 10.8, ಸೌದಿ ಅರೇಬಿಯಾ ಶೇ. 9.6, ವೆನೆಝುಯೆಲಾ ಶೇ. 6.3, ಬ್ರೆಜಿಲ್ ಶೇ. 5.5, ಒಮಾನ್ ಶೇ. 5.3 ಹಾಗೂ ಅಮೆರಿಕ ಶೇ. 2.9ರಷ್ಟು ಪಾಲು ಹೊಂದಿವೆ. ಈ ಆರೂ ದೇಶಗಳು ಒಟ್ಟಾಗಿ ಪೂರೈಸಿದ ತೈಲಕ್ಕಿಂತ ಹೆಚ್ಚಿನ ಪ್ರಮಾಣದ ಕಚ್ಚಾ ತೈಲವನ್ನು ರಷ್ಯಾ ಒಂದೇ ದೇಶ ಪೂರೈಸಿದೆ.
ಶೇ. 100ರಷ್ಟು ಸುಂಕ ತಕ್ಷಣಕ್ಕೆ ಜಾರಿಗೆ ಬರುತ್ತದೆಯೇ? ವ್ಯಾಪಾರದ ಮೇಲಿನ ಪರಿಣಾಮವೇನು?
ಈ ಮಸೂದೆಯು ಅಮೆರಿಕದ ಅಧ್ಯಕ್ಷರಿಗೆ ಶೇ. 100ರವರೆಗೆ ಸುಂಕ ವಿಧಿಸುವ ಅಧಿಕಾರವನ್ನು ನೀಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಆದರೆ ಸುಂಕ ವಿಧಿಸಬೇಕೆ ಅಥವಾ ಬೇಡವೇ ಮತ್ತು ಎಷ್ಟು ಪ್ರಮಾಣದಲ್ಲಿ ವಿಧಿಸಬೇಕು ಎಂಬ ಅಂತಿಮ ನಿರ್ಧಾರ ಸಂಪೂರ್ಣವಾಗಿ ಡೊನಾಲ್ಡ್ ಟ್ರಂಪ್ ಅವರ ಕೈಯಲ್ಲಿದೆ.
ರಷ್ಯಾದ ಕಚ್ಚಾ ತೈಲದ ಅತಿ ದೊಡ್ಡ ಖರೀದಿದಾರನಾಗಿರುವ ಚೀನಾದೊಂದಿಗೆ ಸೂಕ್ಷ್ಮ ಸಂಬಂಧಗಳನ್ನು ಹಾಳುಮಾಡಿಕೊಳ್ಳಲು ಟ್ರಂಪ್ ಆಡಳಿತವು ಬಯಸುವುದಿಲ್ಲ ಎಂದು ತಜ್ಞರು ನಂಬುತ್ತಾರೆ. ಆದರೆ ಭಾರತದ ವಿಷಯದಲ್ಲಿ, ಕಳೆದ ವರ್ಷವೇ ಇದಕ್ಕೊಂದು ಪೂರ್ವ ನಿದರ್ಶನವಿದೆ. ರಷ್ಯಾದ ತೈಲದ ನಿರಂತರ ಖರೀದಿಯ ಕಾರಣಕ್ಕಾಗಿ ಟ್ರಂಪ್ ಭಾರತದ ರಫ್ತುಗಳ ಮೇಲೆ ಶೇ. 25ರಷ್ಟು ದಂಡನಾತ್ಮಕ ಸುಂಕವನ್ನು ವಿಧಿಸಿದ್ದರು.
ಈ ಮಸೂದೆಯ ಅಂಗೀಕಾರದಿಂದ ಭಾರತಕ್ಕೆ ಹೆಚ್ಚಿನ ಅಪಾಯವಿದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ ನ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಅಭಿಪ್ರಾಯಪಟ್ಟಿದ್ದಾರೆ.
"ಪಕ್ಷಪಾತವಲ್ಲದ ಏಕಪಕ್ಷೀಯ ಷರತ್ತುಗಳೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ (BTA) ಸಹಿ ಹಾಕುವಂತೆ ಭಾರತದ ಮೇಲೆ ಒತ್ತಡ ಹೇರುವ ಮೊಂಡ ಮತ್ತು ಅಪಾಯಕಾರಿ ಪ್ರಯತ್ನವೇ ಈ ಮಸೂದೆ. 1.4 ಬಿಲಿಯನ್ ಜನರಿಗೆ ಕೈಗೆಟುಕುವ ದರದಲ್ಲಿ ಇಂಧನ ಭದ್ರತೆ ಒದಗಿಸಲು ಭಾರತ ರಷ್ಯಾದಿಂದ ತೈಲ ಖರೀದಿಸುತ್ತದೆಯೇ ಹೊರತು ಯುದ್ಧಕ್ಕೆ ಹಣಕಾಸು ಒದಗಿಸಲು ಅಲ್ಲ. ಈ ಖರೀದಿಯು ಜಾಗತಿಕ ಪೂರೈಕೆ ಮತ್ತು ಬೆಲೆಗಳನ್ನು ಸ್ಥಿರಗೊಳಿಸಲು ಸಹಾಯ ಮಾಡಿದೆ" ಎಂದು ಅಜಯ್ ಶ್ರೀವಾಸ್ತವ ಹೇಳುತ್ತಾರೆ.
ಟ್ರಂಪ್ ಆಡಳಿತವು ನಿಜಕ್ಕೂ ಶೇ. 100ರವರೆಗೆ ಸುಂಕ ವಿಧಿಸಿದರೆ, ಅದು ಭಾರತೀಯ ರಫ್ತುದಾರರು ಮತ್ತು ಅಮೆರಿಕದ ಗ್ರಾಹಕರನ್ನು ಶಿಕ್ಷಿಸುವುದಲ್ಲದೆ, ವ್ಯಾಪಾರವನ್ನು ಅಸ್ತವ್ಯಸ್ತಗೊಳಿಸುತ್ತದೆ ಮತ್ತು ಪ್ರಮುಖ ಪಾಲುದಾರರ ಮೇಲೆ ಅಮೆರಿಕ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ. ಅಮೆರಿಕವು ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವ ಕಾರ್ಯತಂತ್ರದ ಪಾಲುದಾರ ದೇಶವನ್ನು ಬೆದರಿಸುವ ಬದಲು, ರಾಜತಂತ್ರ ಮತ್ತು ಸ್ಥಿರ ಇಂಧನ ಮಾರುಕಟ್ಟೆಗಳತ್ತ ಗಮನಹರಿಸಬೇಕು.
ಅಮೆರಿಕವು ಸುಂಕದ ದರಗಳು, ಯಾವ ಉತ್ಪನ್ನಗಳಿಗೆ ಅನ್ವಯಿಸುತ್ತದೆ ಮತ್ತು ಜಾರಿಗೆ ತರುವ ಸಮಯವನ್ನು ಘೋಷಿಸಿದ ನಂತರವೇ ಭಾರತೀಯ ರಫ್ತುಗಳ ಮೇಲಿನ ನಿಜವಾದ ಪರಿಣಾಮವನ್ನು ಅಂದಾಜಿಸಲು ಸಾಧ್ಯ" ಅಂತಾರೆ ಶ್ರೀವಾಸ್ತವ.
ಕಳೆದ ವರ್ಷದಿಂದ ಭಾರತವು ಹಲವಾರು ತಿಂಗಳುಗಳ ಕಾಲ ಅಮೆರಿಕದ ಶೇ. 50ರಷ್ಟು ಸುಂಕವನ್ನು ಎದುರಿಸಿತ್ತು. ನಂತರ ಈ ವರ್ಷದ ಆರಂಭದಲ್ಲಿ ಆ ದರವನ್ನು ಶೇ. 18ಕ್ಕೆ ಇಳಿಸಲಾಯಿತು. ಇದೀಗ ಪರಸ್ಪರ ಸುಂಕಗಳನ್ನು ರದ್ದುಗೊಳಿಸಿದ ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಅದು ಶೇ. 10ಕ್ಕೆ ಬಂದಿದೆ.
ಭಾರತದ ರಫ್ತು ಬೇರೆ ಬೇರೆ ಕಡೆಯಿಂದಿದ್ದು, ಹಲವಾರು ಮುಕ್ತ ವ್ಯಾಪಾರ ಒಪ್ಪಂದಗಳು ಹೊಸ ಮಾರುಕಟ್ಟೆಗಳನ್ನು ತೆರೆದಿವೆಯಾದರೂ, ಅಮೆರಿಕವು ಇಂದಿಗೂ ಪ್ರಮುಖ ವ್ಯಾಪಾರ ಪಾಲುದಾರನಾಗಿ ಉಳಿದಿದೆ. ಹೀಗಾಗಿ ರಫ್ತಿಗೆ ಯಾವುದೇ ಪೆಟ್ಟು ಬಿದ್ದರೂ ಅದು ಭಾರತದ ಮೇಲೆ ಪರಿಣಾಮ ಬೀರುತ್ತದೆ.
ಚೀನಾವು ಭಾರತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುತ್ತದೆ. ಆದರೆ ಚೀನಾದ ಪ್ರತಿದಾಳಿಯ ಭಯದಿಂದ ಅಮೆರಿಕ ಭಾರತದ ಮೇಲೆ ಹೆಚ್ಚಿನ ಒತ್ತಡ ಹೇರಲಿದೆ ಎಂದು ಅಜಯ್ ಶ್ರೀವಾಸ್ತವ ಮತ್ತೊಂದು ಸೂಕ್ಷ್ಮ ಅಂಶವನ್ನು ಎತ್ತಿ ತೋರಿಸುತ್ತಾರೆ.
"ಅಮೆರಿಕದ ಈ ಹೊಸ ಕಾಯ್ದೆಯು ಭಾರತದ ವಿರುದ್ಧ ನಿರ್ಬಂಧಗಳನ್ನು ವ್ಯಾಪಾರ ಅಸ್ತ್ರವನ್ನಾಗಿ ಬದಲಾಯಿಸುತ್ತಿದೆ. ವಾಷಿಂಗ್ಟನ್ ಈಗ ಶೇ. 100ರವರೆಗೆ ಸುಂಕದ ಬೆದರಿಕೆ ಹಾಕಿ, ರಷ್ಯಾದ ತೈಲ ಖರೀದಿಯನ್ನು ಕಡಿತಗೊಳಿಸಿ, ತೀವ್ರವಾಗಿ ಅಸಮವಾಗಿರುವ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಭಾರತವು ಸಮ್ಮತಿಸಿದರೆ ಕಡಿಮೆ ದರವನ್ನು ನೀಡುವುದಾಗಿ ಪ್ರಸ್ತಾಪಿಸಬಹುದು. ತಾತ್ಕಾಲಿಕ ಸುಂಕ ವಿನಾಯಿತಿಗಾಗಿ ಭಾರತವು ತನ್ನ ಇಂಧನ ಭದ್ರತೆಯನ್ನು ಬಿಟ್ಟುಕೊಡಬಾರದು. ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದಾಗಲಿ ಅಥವಾ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವುದಾಗಲಿ ಸೆಕ್ಷನ್ 301, ವಲಯವಾರು ಕ್ರಮಗಳು ಅಥವಾ ಇತರ ವ್ಯಾಪಾರ ಕಾನೂನುಗಳ ಅಡಿಯಲ್ಲಿ ಭವಿಷ್ಯದ ಅಮೆರಿಕದ ಕ್ರಮದಿಂದ ಭಾರತವನ್ನು ರಕ್ಷಿಸಲು ಸಾಧ್ಯವಿಲ್ಲ."
"ರಷ್ಯಾದ ಕಚ್ಚಾ ತೈಲವು ವಾಣಿಜ್ಯಿಕವಾಗಿ ಸ್ಪರ್ಧಾತ್ಮಕವಾಗಿರುವವರೆಗೆ ಭಾರತವು ಅದನ್ನು ಮುಂದುವರಿಸಬೇಕು ಮತ್ತು ಯಾವುದೇ ಏಕಪಕ್ಷೀಯ ವ್ಯಾಪಾರ ರಿಯಾಯಿತಿಗಳನ್ನು ನೀಡದೆ ಅಮೆರಿಕದೊಂದಿಗೆ ಮಾತುಕತೆ ನಡೆಸಬೇಕು" ಎಂದು ಜಿಟಿಆರ್ಐಯ ಶ್ರೀವಾಸ್ತವ ಸಲಹೆ ನೀಡುತ್ತಾರೆ.
ಭಾರತ ರಷ್ಯಾದ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸುತ್ತದೆಯೇ?:
ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ಭಾರತದ ಇತರ ಪ್ರಮುಖ ತೈಲ ಪೂರೈಕೆದಾರರು ಪ್ರಸ್ತುತ ಸಂಕಷ್ಟ ಎದುರಿಸುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಹಾರ್ಮುಝ್ ಜಲಸಂಧಿಯು ನಿರಂತರವಾಗಿ ಬಂದ್ ಆಗಿದ್ದು, ಈಗ ಹೌದಿಗಳು ಸೌದಿ ಅರೇಬಿಯಾದ ಪ್ರಮುಖ ಪೈಪ್ಲೈನ್ ಮೇಲೆ ದಾಳಿ ನಡೆಸಿರುವುದರಿಂದ ಪರ್ಯಾಯ ತೈಲ ಪೂರೈಕೆಗೂ ಹೊಡೆತ ಬಿದ್ದಿದೆ.
ಭಾರತವು 40ಕ್ಕೂ ಹೆಚ್ಚು ದೇಶಗಳಿಂದ ಕಚ್ಚಾ ತೈಲವನ್ನು ಖರೀದಿಸುತ್ತದೆ. ಆದರೂ, ರಷ್ಯಾ ಮತ್ತು ಮಧ್ಯಪ್ರಾಚ್ಯ ದೇಶಗಳು ಭಾರತದ ಇಂಧನ ಭದ್ರತೆಯ ಮುಖ್ಯ ಆಧಾರಸ್ತಂಭಗಳಾಗಿ ಮುಂದುವರಿದಿವೆ.
ಸದ್ಯಕ್ಕೆ ರಷ್ಯಾದ ಕಚ್ಚಾ ತೈಲವು ಭಾರತದ ತೈಲ ಪೂರೈಕೆಯಿಂದ ದೂರವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಕಳೆದ ವರ್ಷ ದಂಡನಾತ್ಮಕ ಸುಂಕಗಳನ್ನು ಎದುರಾದಾಗಲೂ ಭಾರತವು ರಷ್ಯಾದ ತೈಲ ಖರೀದಿಸುವುದನ್ನು ನಿಲ್ಲಿಸಿರಲಿಲ್ಲ.
ರಷ್ಯಾದ ಪ್ರಮುಖ ತೈಲ ಕಂಪನಿಗಳಾದ 'ಲುಕೋಯಿಲ್' ಮತ್ತು 'ರೋಸ್ನೆಫ್ಟ್' ಮೇಲೆ ಟ್ರಂಪ್ ಆಡಳಿತವು ನಿರ್ಬಂಧಗಳನ್ನು ವಿಧಿಸಿದಾಗ ಮಾತ್ರ ಭಾರತೀಯ ತೈಲ ರಿಫೈನರ್ಗಳು ಖರೀದಿಯನ್ನು ಕಡಿಮೆ ಮಾಡಿದ್ದರು.
ಇದರ ಹಿಂದಿನ ತರ್ಕ ಸರಳವಾಗಿತ್ತು. ನಿರ್ಬಂಧಗಳು ವ್ಯಾಪಾರವನ್ನು ಆರ್ಥಿಕವಾಗಿ ಅಸಾಧ್ಯವಾಗಿಸುವುದರಿಂದ ಅವು ಹೆಚ್ಚು ಪರಿಣಾಮಕಾರಿ. ಆದರೆ ಸುಂಕಗಳು ಅಮೆರಿಕಕ್ಕೆ ಅಷ್ಟು ಪರಿಣಾಮಕಾರಿ ಆರ್ಥಿಕ ಅಸ್ತ್ರವಾಗಿ ಕೆಲಸ ಮಾಡುವುದಿಲ್ಲ.
2026ರ ಮೊದಲ ಎರಡು ತಿಂಗಳುಗಳಲ್ಲಿ ಭಾರತದ ರಷ್ಯಾದ ಕಚ್ಚಾ ತೈಲ ಖರೀದಿಯಲ್ಲಿ ಗಣನೀಯ ಕುಸಿತ ಕಂಡುಬಂದಿತ್ತು. ಭಾರತದ ಮೇಲೆ ಶೇ. 18ರಷ್ಟು ಸುಂಕವನ್ನು ಕಡಿಮೆ ಮಾಡುವುದಾಗಿ ಘೋಷಿಸಿದ್ದ ಟ್ರಂಪ್, ಭಾರತವು ರಷ್ಯಾದ ತೈಲ ಖರೀದಿಸುವುದನ್ನು ನಿಲ್ಲಿಸುತ್ತದೆ ಎಂದು ಹೇಳಿಕೊಂಡಿದ್ದರು. ಆದರೆ ಮಾರ್ಚ್ನಲ್ಲಿ ಅಮೆರಿಕ-ಇರಾನ್ ಯುದ್ಧ ಆರಂಭವಾಯಿತು ಮತ್ತು ಜಾಗತಿಕ ತೈಲ ಮಾರುಕಟ್ಟೆಗಳು ಅಸ್ತವ್ಯಸ್ತಗೊಂಡವು.
ಮಧ್ಯಪ್ರಾಚ್ಯದ ಪೂರೈಕೆ ವ್ಯತ್ಯಯಗಳನ್ನು ಎದುರಿಸಲು, ಭಾರತವು ರಷ್ಯಾದ ಕಚ್ಚಾ ತೈಲ ಖರೀದಿಯನ್ನು ಆಕ್ರಮಣಕಾರಿಯಾಗಿ ಹೆಚ್ಚಿಸಿತು. ಜಾಗತಿಕ ತೈಲ ಬೆಲೆಗಳನ್ನು ಸ್ಥಿರಗೊಳಿಸಲು ಅಮೆರಿಕವು ರಷ್ಯಾದ ಕಚ್ಚಾ ತೈಲದ ಮೇಲಿನ ನಿರ್ಬಂಧಗಳನ್ನೂ ತಾತ್ಕಾಲಿಕವಾಗಿ ಸಡಿಲಗೊಳಿಸಿತ್ತು.
ಆ ವಿನಾಯಿತಿಯ ಅವಧಿ ಮುಗಿದರೂ, ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ಮುಂದುವರೆಸಿದೆ. ವಾಸ್ತವವಾಗಿ, ಜುಲೈ ತಿಂಗಳಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿಯು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು.
ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತಕ್ಕೆ ಯಾವುದೇ ವೆಚ್ಚದಲ್ಲಾದರೂ ಇಂಧನ ಭದ್ರತೆಯೇ ಅತ್ಯಂತ ಪ್ರಾಮುಖ್ಯತೆಯಾಗಿದೆ.
ಜಾಗತಿಕ ಇಂಧನ ವಿಶ್ಲೇಷಣಾ ಸಂಸ್ಥೆಯಾದ 'ಕೆಪ್ಲರ್'ನ ಹಿರಿಯ ವಿಶ್ಲೇಷಕ ಸುಮಿತ್ ರಿತೋಲಿಯಾ ಈ ಹಿಂದೆ 'ಟೈಮ್ಸ್ ಆಫ್ ಇಂಡಿಯಾ' ಜತೆಗೆ ಮಾತನಾಡಿ, ಜಾಗತಿಕ ಪೂರೈಕೆ ವ್ಯತ್ಯಯಗಳ ವಿರುದ್ಧ ರಷ್ಯಾದ ಕಚ್ಚಾ ತೈಲವೇ ಭಾರತಕ್ಕೆ ಅತ್ಯುತ್ತಮ ರಕ್ಷಣಾ ಕವಚವಾಗಿದೆ ಎಂದು ಹೇಳಿದ್ದರು. "ಆಕರ್ಷಕ ಬೆಲೆಯ ಹೊರತಾಗಿ, ರಿಯಾಯಿತಿಗಳಲ್ಲಿ ಏರಿಳಿತಗಳಿದ್ದರೂ ಇದು ವಿಶ್ವಾಸಾರ್ಹ ಪೂರೈಕೆ ಭದ್ರತೆಯನ್ನು ಒದಗಿಸಿದೆ" ಎಂದಿದ್ದರು ರಿತೋಲಿಯಾ.
ಆದ್ದರಿಂದ, ಸಾಗಣೆ , ವಿಮೆ ಅಥವಾ ಪಾವತಿ ವ್ಯವಸ್ಥೆಗಳಿಗೆ ನಿರ್ಬಂಧಗಳಿಂದ ಗಂಭೀರ ಸಮಸ್ಯೆಗಳು ಎದುರಾಗದ ಹೊರತು, ಭಾರತೀಯ ತೈಲ ಕಂಪನಿಗಳು ತಕ್ಷಣಕ್ಕೆ ರಷ್ಯಾದ ಪೂರೈಕೆಯಿಂದ ಹಿಂದೆ ಸರಿಯುವ ಸಾಧ್ಯತೆಯಿಲ್ಲ ಎಂದು ಅವರು ನಂಬುತ್ತಾರೆ.
ಆದರೆ ಒಮ್ಮೆ ಮಧ್ಯಪ್ರಾಚ್ಯದಲ್ಲಿ ಪೂರೈಕೆ ಸರಪಳಿಯ ತೊಡಕುಗಳು ನಿವಾರಣೆಯಾದರೆ, ರಷ್ಯಾದ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಭಾರತಕ್ಕೆ ಸುಲಭವಾಗುತ್ತದೆ. ಅದುವರೆಗೆ ಸುಂಕವಿರಲಿ ಅಥವಾ ಇಲ್ಲದೇ ಇರಲಿ, ರಷ್ಯಾದ ತೈಲವು ಸದ್ಯಕ್ಕೆ ಭಾರತದ ತೈಲ ಮಿಶ್ರಣದಿಂದ ಮಾಯವಾಗುವ ಸಾಧ್ಯತೆಯಿಲ್ಲ ಎಂದು ತಜ್ಞರು ಹೇಳುತ್ತಾರೆ.
ಕೃಪೆ: Times of India






