ಮತ್ತೆ ಬಂದಿದೆ ಸಫಾರಿ ಋತು | ಕಾಡಿನ ಬಾಗಿಲು ತೆರೆದಿದೆ; ಸಫಾರಿಗೆ ಹೊರಡುವ ಮುನ್ನ ಎಚ್ಚರ!

ಸಾಂದರ್ಭಿಕ ಚಿತ್ರ | Photo Credit : magnific
ಭಾರತದಲ್ಲಿ ಸಫಾರಿ ಋತು ಮತ್ತೆ ಆಗಮಿಸಿದೆ. ಜನರು ಅರಣ್ಯದತ್ತ ತೆರಳಲು ಸಜ್ಜಾಗುತ್ತಿದ್ದಾರೆ. ಹಾಗಿದ್ದರೆ ಮೊದಲ ಬಾರಿಗೆ ಸಫಾರಿಗೆ ಹೋಗುವವರು ಅರಿತುಕೊಳ್ಳಬೇಕಾಗಿರುವುದೇನು?
ಮಳೆಗಾಲದ ಸಮಯದಲ್ಲಿ ದೇಶದ ಅರಣ್ಯಗಳು ಅಡಚಣೆಗಳಿಲ್ಲದೆ ನಿರಾಳವಾಗಿರುತ್ತವೆ. ಆದರೆ ಇದೀಗ ಮಳೆಗಾಲದಲ್ಲಿ ಮುಚ್ಚಲಾಗಿದ್ದ ಅಥವಾ ನಿರ್ಬಂಧಿಸಲಾಗಿದ್ದ ಅನೇಕ ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಧಾಮಗಳು ಈಗ ಪ್ರವಾಸಿಗರಿಗಾಗಿ ಮತ್ತೆ ತೆರೆದುಕೊಳ್ಳುತ್ತಿವೆ.
ರಾಜಸ್ಥಾನದ ರಣಥಂಬೋರ್ ಮತ್ತು ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶಗಳಿಂದ ತೊಡಗಿ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಮತ್ತು ಇತರ ವನ್ಯಜೀವಿ ತಾಣಗಳವರೆಗೆ ದೇಶದ ಹಲವೆಡೆ ಸಫಾರಿ ಋತುವಿನ ಮರು ಆಗಮನವಾಗಿದೆ.
ಮಳೆಗಾಲದ ನಂತರ ಜಿಮ್ ಕಾರ್ಬೆಟ್ ಅರಣ್ಯ ಮತ್ತೆ ತೆರೆದುಕೊಳ್ಳುವುದು ಎಂದರೆ ವನ್ಯಜೀವಿ ಉತ್ಸಾಹಿಗಳಲ್ಲಿ ಹೊಸ ನಿರೀಕ್ಷೆಯನ್ನು ಮೂಡಿಸುತ್ತದೆ. ಅರಣ್ಯವು ದಟ್ಟ ಹಸಿರಿನಿಂದ ಕೂಡಿರುತ್ತದೆ. ಕೋಸಿ ನದಿ ತುಂಬಿ ಹರಿಯುತ್ತಿರುತ್ತದೆ. ಪಕ್ಷಿಗಳು, ಚಿಟ್ಟೆಗಳಿಂದ ತೊಡಗಿ ಬಯಲಿಗೆ ಬರುವ ಆನೆಗಳು ಮತ್ತು ಜಿಂಕೆಗಳವರೆಗೆ ಎಲ್ಲೆಡೆ ಚಟುವಟಿಕೆಗಳು ಕಂಡುಬರುತ್ತವೆ.
ನಾಗರಹೊಳೆ ಮತ್ತು ಬಂಡೀಪುರದಂತಹ ಕರ್ನಾಟಕದ ಉದ್ಯಾನವನಗಳೂ ಪ್ರವಾಸಿಗರನ್ನು ಸ್ವಾಗತಿಸುತ್ತಿವೆ. ದುಬಾರೆಯಲ್ಲಿ ಸ್ಥಗಿತಗೊಂಡಿದ್ದ ಆನೆ ಶಿಬಿರ ಕೆಲವು ನಿರ್ಬಂಧಗಳ ಜೊತೆಗೆ ಮರು ಆರಂಭವಾಗಿದೆ. ಮತ್ತಿಗೋಡು ಆನೆ ಶಿಬಿರವೂ ಕೂಡ ನಿರ್ಬಂಧಗಳ ಜೊತೆಗೆ ಪ್ರವಾಸಿಗರನ್ನು ಸ್ವಾಗತಿಸುತ್ತಿದೆ.
ಆದರೆ ಮೊದಲ ಸಫಾರಿಗೆ ತೆರಳುವ ಮೊದಲು ಕೆಲವು ವಿಚಾರಗಳನ್ನು ತಿಳಿದುಕೊಂಡಿರಬೇಕಾಗುತ್ತದೆ. ಮೊದಲ ಬಾರಿಗೆ ಸಫಾರಿಗೆ ಹೋಗುವವರಿಗೆ ಹುಲಿ ನೋಡುವ ನಿರೀಕ್ಷೆಯು ಸಹಜವಾಗಿ ಉತ್ಸಾಹದ ಪ್ರಮುಖ ಭಾಗವಾಗಿರುತ್ತದೆ. ಹಾಗಿದ್ದರೂ ಪ್ರವಾಸಿಗರು ಅರಣ್ಯ ಮತ್ತು ಅಲ್ಲಿನ ಜೀವಿಗಳ ಬಗ್ಗೆ ವಿಶಾಲವಾದ ತಿಳಿವಳಿಕೆಯೊಂದಿಗೆ ಸಫಾರಿ ಕೈಗೊಳ್ಳಬೇಕು.
ವೈಲ್ಡ್ ಲೈಫ್ ಫೋಟೋಗ್ರಾಫರ್, ಪರಿಸರವಾದಿ ಮತ್ತು ಪತ್ರಕರ್ತರಾದ ಶಶಿ ಸಂಪಳ್ಳಿ ಅವರು ಹೇಳುವ ಪ್ರಕಾರ, “ಹೆಚ್ಚು ಗಾಢವಾದ ಬಣ್ಣಗಳ ಉಡುಗೆಗಳನ್ನು ತೊಡಬಾರದು. ಮಂದವಾದ ಬಣ್ಣ ಅಥವಾ ಅರಣ್ಯಗಳಿಗೆ ಹೋಲಿಕೆಯಾಗುವ ಉಡುಪು ಧರಿಸಬೇಕು.”
ಅವರು ನೀಡಿದ ಕೆಲವು ಸಲಹೆಗಳು ಈ ರೀತಿ ಇವೆ:
• ವಾಹನಗಳಲ್ಲಿ ಹೋಗುವಾಗ ಗಲಾಟೆ ಮಾಡುವುದು, ಮಾತನಾಡೋದು ಮಾಡಬಾರದು. ಮೊದಲನೆಯದಾಗಿ ಇದರಿಂದ ಪ್ರಾಣಿಗಳಿಗೆ ತೊಂದರೆಯಾಗುತ್ತದೆ.
• ಅರಣ್ಯಕ್ಕೆ ಅದರದ್ದೇ ಆದ ನಿಗೂಢತೆಯಿದೆ. ಗಲಾಟೆ ಮಾಡುತ್ತಾ ಹೋದರೆ ಆ ಮೌನವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ. ಪ್ರಾಣಿಗಳನ್ನು ಕಂಡಾಗ ಕೂಗುವುದು ಅಥವಾ ‘ನೋಡಿ ನೋಡಿ’ ಎಂದು ಹೇಳುವುದು ಮಾಡಬಾರದು. ಜೋರಾಗಿ ಮಾತನಾಡಬಾರದು.
• ಮುಖ್ಯವಾಗಿ ಫೋಟೋಗ್ರಾಫರ್ಗಳು ವನ್ಯಜೀವಿ ಛಾಯಾಚಿತ್ರಗಳನ್ನು ತೆಗೆಯುವಾಗ ಫ್ಲ್ಯಾಷ್ ಗಳನ್ನು ಬಳಸಬಾರದು.
• ನೋಡುವುದು ಅಥವಾ ಫೋಟೋ ತೆಗೆಯುವಾಗ ಪ್ರಾಣಿಗಳ ಚಟುವಟಿಕೆಗೆ ತೊಂದರೆಯಾಗದಂತೆ ಗಮನಹರಿಸಬೇಕು ಎನ್ನುವುದು ಸಾಮಾನ್ಯ ಜ್ಞಾನ.
• ಯಾವುದೇ ಕಾರಣಕ್ಕೂ ವಾಹನದಿಂದ ಇಳಿಯಬಾರದು. ಇಳಿಯಲು ಬಿಡುವುದಿಲ್ಲ. ಹಾಗಿದ್ದರೂ ಉತ್ಸಾಹದಲ್ಲಿರುವಾಗ ವಾಹನದಿಂದ ಇಳಿಯುವುದು ಇದೆ. ಪ್ರಾಣಿಗಳು ಮೌನವಾಗಿವೆ ಎನ್ನುವ ಕಾರಣಕ್ಕೆ ಇಳಿಯುವುದು ಬಹಳ ಅಪಾಯಕಾರಿ.
• ಸೆಲ್ಫಿ ತೆಗೆಯಲು ಹೋಗುವುದು ಮಾಡಬಾರದು. ಪ್ರಾಣಿಗಳ ನಡವಳಿಕೆಯನ್ನು ನಿರೀಕ್ಷಿಸಲು ಆಗುವುದಿಲ್ಲ. ಅವು ಅನಿರೀಕ್ಷಿತ ದಾಳಿ ಮಾಡಬಹುದು.
• ಮುಖ್ಯವಾಗಿ ಆನೆ ಸಫಾರಿ ಮಾಡುವಾಗ ಜಾಗರೂಕತೆ ವಹಿಸಬೇಕು. ನೋಡಲು ಬಹಳ ಸಾಧು ರೀತಿಯಲ್ಲಿ ಕಾಣಿಸುತ್ತದೆ. ಆದರೆ ಭೂಮಿ ಮೇಲಿರುವ ಬಹಳ ಹಠಾತ್ ದಾಳಿ ನಡೆಸುವ ಪ್ರಾಣಿ ಅದು. ತಜ್ಞರಿಗೆ ಮಾತ್ರ ಅದರ ಕೆಲವು ಚಿಹ್ನೆಗಳು ಗೊತ್ತಿರುತ್ತವೆ. ಸಾಮಾನ್ಯವಾಗಿ ಆನೆಗಳನ್ನು ನೋಡಿದರೆ ದಾಳಿ ನಡೆಸಲಿದೆಯೇ ಎನ್ನುವುದು ಗೊತ್ತಾಗುವುದಿಲ್ಲ. ತಜ್ಞರಿಗೆ ಮಾತ್ರ ಅದರ ಇಂಗಿತ ಅರ್ಥವಾಗುತ್ತದೆ. ಹೀಗಾಗಿ ಆನೆಗಳನ್ನು ನೋಡಲು ಹೋಗುವವರು ಇದರತ್ತ ಗಮನ ಹರಿಸಬೇಕು.






