ಇತಿಹಾಸ ಪಾಠಗಳ ಮೇಲೆ ಕೇಸರಿ ಛಾಯೆ

ಮೂಲ: ಡಾ. ಕೆ. ಬಾಲಗೋಪಾಲ್ (ನಾಗರಿಕ ಹಕ್ಕುಗಳ ಹೋರಾಟಗಾರರು, ಚಿಂತಕರು)
ಕನ್ನಡಕ್ಕೆ: ಡಾ. ಬಂಜಗೆರೆ ಜಯಪ್ರಕಾಶ
ಭಾರತದ ಇತಿಹಾಸ ಸೇರಿದಂತೆ ಶಾಲಾ ಮಕ್ಕಳಿಗೆ ಪಠ್ಯಾಂಶಗಳನ್ನೂ ಅದಕ್ಕೆ ಸಂಬಂಧಿಸಿದ ವಿಶ್ಲೇಷಣೆಯ ಬಗ್ಗೆ ಭಾರತೀಯ ಜನತಾ ಪಕ್ಷದ ಸರಕಾರವು ತುಂಬಾ ಗಂಭೀರವಾಗಿರುವುದನ್ನು ಗಮನಿಸುವುದು ಮುಖ್ಯ. ನಮ್ಮ ದೇಶದ ಇತಿಹಾಸದ ಬಗ್ಗೆ ನಮಗಿರುವ ಗ್ರಹಿಕೆ ‘ನಾವು’ ಯಾರು ಎಂಬ ಪ್ರಶ್ನೆಗೆ ಒಂದು ಉತ್ತರ ನೀಡುತ್ತದೆ. ‘ನಾವು’ ಯಾರು ಎನ್ನುವುದರ ಜೊತೆಗೆ ಅನ್ಯರು ಯಾರು ಎಂಬುದರ ಬಗ್ಗೆ ಕೂಡ ಒಂದು ಉತ್ತರವನ್ನು ಕೊಡುತ್ತದೆ.ಈ ಎರಡು ಪ್ರಶ್ನೆಗಳಿಗೂ ತಮ್ಮದೇ ಆದ ಉತ್ತರವನ್ನು ನೀಡಬೇಕೆಂದು ಬಿಜೆಪಿ ಆಡಳಿತಗಾರರು ಭಾವಿಸುತ್ತಿದ್ದಾರೆ.
ಡಾ.ಕೆ. ಬಾಲಗೋಪಾಲ್ ಅವರು ಖ್ಯಾತ ಮಾನವ ಹಕ್ಕು ಹೋರಾಟಗಾರರು. ಗಣಿತ ಶಾಸ್ತ್ರದಲ್ಲಿ ಎಂಎಸ್ಸಿ, ಪಿಎಚ್ಡಿ ಪಡೆದಿರುವ ಇವರು ತಮ್ಮ ಬದುಕಿನ ಬಹು ಭಾಗವನ್ನು ಪೊಲೀಸರು ಮತ್ತು ಸೇನಾ ಪಡೆಗಳ ಕಾನೂನು ಬಾಹಿರ ಹತ್ಯೆಗಳ ವಿರುದ್ಧ ಹೋರಾಟಕ್ಕೆ ಮೀಸಲಿರಿಸಿದ್ದರು. 2009ರಲ್ಲಿ ನಿಧನರಾದರು. ಪಠ್ಯ ಪುಸ್ತಕ ಪರಿಷ್ಕರಣೆಯ ಹಿಂದಿನ ರಾಜಕೀಯವನ್ನು ಗುರುತಿಸುವ, ಪಠ್ಯ ಬದಲಾವಣೆಯ ಬಗ್ಗೆ ಭಿನ್ನ ಒಳನೋಟಗಳನ್ನು ನೀಡುವ ಬಾಲಗೋಪಾಲ್ ಸುದೀರ್ಘ ಲೇಖನ ಇಲ್ಲಿದೆ. ಕನ್ನಡದ ಹಿರಿಯ ಚಿಂತಕ ಬಂಜಗೆರೆ ಜಯಪ್ರಕಾಶ್ ಅದನ್ನು ಕನ್ನಡಕ್ಕೆ ತಂದಿದ್ದಾರೆ.
ಪಠ್ಯಪುಸ್ತಕಗಳು ಮತ್ತು ಪಠ್ಯಕ್ರಮದಲ್ಲಿ ಮಧ್ಯಪ್ರವೇಶಿಸಿ ಅವುಗಳನ್ನು ಪುನಃ ಬರೆಯುವ ಉದ್ದೇಶವನ್ನು ಭಾರತೀಯ ಜನತಾ ಪಕ್ಷದ ಸರಕಾರವು ಪ್ರಕಟಿಸಿರುವುದು ಹಲವರ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ನಮ್ಮ ದೇಶದ ಇತಿಹಾಸದ ಪಠ್ಯಕ್ರಮವನ್ನು ತನ್ನ ಭಾವನೆಗಳಿಗೆ ತಕ್ಕಂತೆ ಬದಲಾಯಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ವಿಚಾರವನ್ನು ಗೌಪ್ಯವಾಗಿಡುವ ಪ್ರಯತ್ನವನ್ನು ಪಕ್ಷವಾಗಲಿ, ಪಕ್ಷದ ಅಭಿಮಾನಿಗಳಾಗಲಿ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಆ ಪಕ್ಷದ ದೃಷ್ಟಿಕೋನದ ಪರವಾಗಿ ಪಠ್ಯಕ್ರಮ ರೂಪಿಸಿ ಯುವಕರನ್ನು ಶಕ್ತಿಹೀನರನ್ನಾಗಿಸಿದೆಯೆಂದೂ, ಈಗ ತಾವು ಅಧಿಕಾರಕ್ಕೆ ಬಂದ ಮೇಲೆ ನಿಜವಾದ ರಾಷ್ಟ್ರೀಯವಾದದ ಆಧಾರದಲ್ಲಿ ಆ ಪಠ್ಯಾಂಶಗಳನ್ನು ಮತ್ತೆ ಬರೆಯಲು ಹೊರಟಿದ್ದೇವೆ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ.
ಭಾರತದ ಇತಿಹಾಸ ಸೇರಿದಂತೆ ಶಾಲಾ ಮಕ್ಕಳಿಗೆ ಪಠ್ಯಾಂಶಗಳನ್ನೂ ಅದಕ್ಕೆ ಸಂಬಂಧಿಸಿದ ವಿಶ್ಲೇಷಣೆಯ ಬಗ್ಗೆ ಭಾರತೀಯ ಜನತಾ ಪಕ್ಷದ ಸರಕಾರವು ತುಂಬಾ ಗಂಭೀರವಾಗಿರುವುದನ್ನು ಗಮನಿಸುವುದು ಮುಖ್ಯ. ನಮ್ಮ ದೇಶದ ಇತಿಹಾಸದ ಬಗ್ಗೆ ನಮಗಿರುವ ಗ್ರಹಿಕೆ ‘ನಾವು’ ಯಾರು ಎಂಬ ಪ್ರಶ್ನೆಗೆ ಒಂದು ಉತ್ತರ ನೀಡುತ್ತದೆ. ‘ನಾವು’ ಯಾರು ಎನ್ನುವುದರ ಜೊತೆಗೆ ಅನ್ಯರು ಯಾರು ಎಂಬುದರ ಬಗ್ಗೆ ಕೂಡ ಒಂದು ಉತ್ತರವನ್ನು ಕೊಡುತ್ತದೆ.
ಈ ಎರಡು ಪ್ರಶ್ನೆಗಳಿಗೂ ತಮ್ಮದೇ ಆದ ಉತ್ತರವನ್ನು ನೀಡಬೇಕೆಂದು ಬಿಜೆಪಿ ಆಡಳಿತಗಾರರು ಭಾವಿಸುತ್ತಿದ್ದಾರೆ. ಆ ಉತ್ತರವನ್ನು ಪಠ್ಯಪುಸ್ತಕಗಳ ಮೂಲಕ ಮಕ್ಕಳ ಮೆದುಳಿಗೆ ತುಂಬಬೇಕು. ನಮ್ಮ ಶಿಕ್ಷಣ ವ್ಯವಸ್ಥೆಯು ಪಠ್ಯಾಂಶದಲ್ಲಿ ಹೇಳಿರುವುದನ್ನು ಪ್ರಮಾಣಿತ ‘ಸತ್ಯ’ ಎಂದು ಗುರುತಿಸಲು ಕಲಿಸಿದ ಕಾರಣ, ಅಂತಹ ತಲೆಗೇರಿದ ಅಭಿಪ್ರಾಯಗಳು ಬಹಳ ಬಲವಾಗಿ ಉಳಿದು ಬಿಡುತ್ತವೆ.
ಬಿಜೆಪಿ ಈ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಪಠ್ಯಾಂಶಗಳ ಮೂಲಕ ಮಕ್ಕಳ ವ್ಯಕ್ತಿತ್ವವನ್ನು ತಿದ್ದಿರೂಪಿಸಬೇಕೆಂದು ಆಡಳಿತಗಾರರು ಯಾವಾಗಲೂ ಮಾಡುವ ಆಲೋಚನೆ. ಈ ದೇಶವನ್ನು ದೀರ್ಘಕಾಲ ಆಳಿದ ಕಾಂಗ್ರೆಸ್ ಆಡಳಿತಗಾರರು ಭಾರತದ ಇತಿಹಾಸಕ್ಕೆ, ರಾಷ್ಟ್ರೀಯ ಚಳವಳಿಗೆ ಮತ್ತು ಭವಿಷ್ಯದ ಆದರ್ಶಗಳಿಗೆ ಒಂದು ರೀತಿಯ ವ್ಯಾಖ್ಯಾನವನ್ನು ನೀಡುವ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿದರು. ಅದರ ಮೂಲಕ ಯುವಕರಿಗೆ ಬೇಕಾದ ಪಾತ್ರವನ್ನು ತಯಾರು ಮಾಡುವ ಆಶಯ ಅವರದು. ಅವರು ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದ್ದಾರೆ. ನಾಳೆ ಕಮ್ಯುನಿಸ್ಟರು ಅಥವಾ ಬೇರೆಯವರು ಅಧಿಕಾರಕ್ಕೆ ಬಂದರೆ ಅದನ್ನೇ ಮಾಡುತ್ತಾರೆ.
ಹಾಗಿದ್ದಲ್ಲಿ ಬಿಜೆಪಿ ಮಾಡಿದರೆ ತಪ್ಪೇನು?
ಇಲ್ಲಿಯವರೆಗೆ ನಮ್ಮ ಶಿಕ್ಷಣ ವ್ಯವಸ್ಥೆಯು ಯಾವುದೇ ಸಿದ್ಧಾಂತ ಅಥವಾ ಲೋಕ ದೃಷ್ಟಿಕೋನದಿಂದ ಪ್ರಭಾವಿತವಾಗದ ಸತ್ಯಗಳನ್ನು ಮಕ್ಕಳಿಗೆ ಹೇಳುತ್ತಿದೆ, ಮಕ್ಕಳ ಮೆದುಳನ್ನು ಒಂದು ದೃಷ್ಟಿಕೋನಕ್ಕೆ ರೂಪಿಸುವ ಪ್ರಯತ್ನ ಇದೇ ಮೊದಲ ಬಾರಿಗೆ ನಡೆಯುತ್ತಿದೆ ಎಂದು ಯಾರಾದರೂ ಭಾವಿಸಿದರೆ ತಪ್ಪಾಗುತ್ತದೆ. ಬಿಜೆಪಿ ವಿರುದ್ಧ ಇರುವುದು ಅದೇ ದೂರಾದರೆ ಆ ದೂರು ಸುಳ್ಳು.
ಆದರೆ ಯಾವುದೇ ಶೈಕ್ಷಣಿಕ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ಒಂದೊಂದು ರೀತಿಯ ಅಭಿಪ್ರಾಯವನ್ನು ಹುಟ್ಟುಹಾಕಲು ಮತ್ತು ಒಂದು ರೀತಿಯ ಯುವಕರನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ ಎಂದು ಗುರುತಿಸುತ್ತಿದ್ದೇವೆಂದರೆ ಎಲ್ಲಾ ಪ್ರಯತ್ನಗಳು ಒಂದೇ ಎಂದು ಅರ್ಥವಲ್ಲ. ಇಲ್ಲಿ ಕನಿಷ್ಠ ಮೂರು ವಿಷಯಗಳನ್ನು ಗಮನಿಸಬೇಕು.
1) ಅಂತಹ ಶಿಕ್ಷಣ ವ್ಯವಸ್ಥೆಯು ರೂಢಿಸಲು ಬಯಸುವ ಮೌಲ್ಯಗಳು ಯಾವುವು? ಶಿಕ್ಷಣ ವ್ಯವಸ್ಥೆಯು ಯಾವ ವ್ಯಕ್ತಿತ್ವಗಳನ್ನು ಸೃಷ್ಟಿಸಲು ಬಯಸುತ್ತದೆ? ಇದು ಸಮಾನತೆ, ಸಹನೆ ಮತ್ತು ಸಹಕಾರವನ್ನು ಉತ್ತೇಜಿಸುತ್ತದೆಯೇ? ಅಥವಾ ಆಧಿಪತ್ಯ, ದ್ವೇಷ ಮತ್ತು ಸ್ವಾರ್ಥವನ್ನು ಹೆಚ್ಚಿಸುವಂತಹದೇ?
2) ಶೈಕ್ಷಣಿಕ ವ್ಯವಸ್ಥೆಯು ಮಗುವಿನಲ್ಲಿ ಒಂದು ರೀತಿಯ ಲೋಕ ದೃಷ್ಟಿಕೋನವನ್ನು ಬೆಳೆಸಲು ಪ್ರಯತ್ನಿಸುತ್ತಲೇ ಭಿನ್ನವಾದದ್ದನ್ನು ಪ್ರಾಮಾಣಿಕವಾಗಿ ವಿವರಿಸಿ ತರ್ಕಬದ್ಧ ತೀರ್ಪಿನ ಮೂಲಕ ಒಳ್ಳೆಯದು ಮತ್ತು ಕೆಟ್ಟದ್ದನ್ನು ನಿರ್ಧರಿಸುವ ತತ್ವವನ್ನು ಪ್ರೋತ್ಸಾಹಿಸುತ್ತಿದೆಯೇ? ಅಥವಾ ಏಕೈಕ ಸತ್ಯವಾಗಿ ತಮ್ಮ ಅಭಿಪ್ರಾಯಗಳನ್ನು ಕಲಿಸುತ್ತಾ ಉಳಿದವುಗಳನ್ನು ತುಳಿಯುವುದೋ ಅಥವಾ ವಿರೂಪಗೊಳಿಸುವುದೋ ಮಾಡುತ್ತಿದೆಯೇ?
3) ಶೈಕ್ಷಣಿಕ ವ್ಯವಸ್ಥೆಯು ತಾನು ನಂಬುವ ಮೌಲ್ಯಗಳು ಮತ್ತು ಅದು ಮಾಡುವ ವ್ಯಾಖ್ಯಾನಗಳ ಬಗ್ಗೆ ವೈಜ್ಞಾನಿಕ ಮನೋಭಾವವನ್ನು ಹೊಂದಿದೆಯೇ? ಅದು ಅವನ್ನು ವಾಸ್ತವಗಳ ಪರೀಕ್ಷೆಗೆ ಒಡ್ಡುವುದಕ್ಕೆ ಸಿದ್ಧವಿದೆಯೇ? ಇಲ್ಲದಿದ್ದರೆ, ಅದು ತನಗೆ ಅನುಕೂಲಕರವಾದ ಸಂಗತಿಗಳನ್ನು ಮಾತ್ರ ತೋರಿಸಿ ಮಿಕ್ಕವುಗಳನ್ನು ತೋರಿಸಲು ನಿರಾಕರಿಸುತ್ತದೆಯೇ?
ಬಿಜೆಪಿ ಆಡಳಿತಗಾರರು ಶಿಕ್ಷಣ ವ್ಯವಸ್ಥೆಯಲ್ಲಿ ತರಲು ಪ್ರಯತ್ನಿಸುತ್ತಿರುವ ಬದಲಾವಣೆಗಳು ಪ್ರಸಕ್ತ ಪರಿಸ್ಥಿತಿಯನ್ನು ಮೇಲಿನ ಮೂರು ಆಯಾಮಗಳಲ್ಲಿ ಇನ್ನಷ್ಟು ಹಿಂದಕ್ಕೆ ಕೊಂಡೊಯ್ಯುತ್ತವೆ.
ಈ ವಿಷಯವನ್ನು ವಿವರವಾಗಿ ಹೇಳುವ ಮೊದಲು, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಇದನ್ನು ತನ್ನ ಮೊದಲ ಕಾರ್ಯಕ್ರಮವಾಗಿ ಏಕೆ ತೆಗೆದುಕೊಂಡಿತು ಎಂಬುದನ್ನು ನೋಡೋಣ. ಯಾವುದೇ ರಾಜಕೀಯ ಪಕ್ಷವು ಸಮಾಜದಲ್ಲಿ-ವಿಶೇಷವಾಗಿ ಯುವಕರಲ್ಲಿ-ತನ್ನ ಆಲೋಚನೆಗಳಿಗೆ ಅನುಕೂಲಕರವಾದ ಲೋಕ ದೃಷ್ಟಿಕೋನವನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ ಎಂದು ನಾವು ಮೇಲೆ ಹೇಳಿದ್ದೇವೆ. ಆದರೆ ಎಲ್ಲಾ ರಾಜಕೀಯ ಪಕ್ಷಗಳು ಅದನ್ನೇ ಮೊದಲ ಆದ್ಯತೆಯಾಗಿ ಇಟ್ಟುಕೊಳ್ಳುವುದಿಲ್ಲ. ಕಮ್ಯುನಿಸ್ಟ್ ಪಕ್ಷಗಳು ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ಅವರು ಭೂಸುಧಾರಣೆಯಂತಹ ಕ್ರಮಗಳಿಗೆ ಮೊದಲ ಆದ್ಯತೆ ನೀಡಿದರು. ದಲಿತ ಬಹುಜನ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ಮೀಸಲಾತಿ ಜಾರಿ ಮತ್ತು ವಿವಿಧ ಸಾಮಾಜಿಕ-ರಾಜಕೀಯ ಕ್ಷೇತ್ರಗಳಲ್ಲಿ ದಲಿತ ಬಹುಜನ ಸಮುದಾಯಗಳ ಪ್ರಾತಿನಿಧ್ಯವನ್ನು ಹೆಚ್ಚಿಸುವುದು ಮೊದಲ ಆದ್ಯತೆಯಾಗಿ ತೆಗೆದುಕೊಳ್ಳಲಾಗಿದೆ. ಜಾಗತೀಕರಣ ಕ್ರಮಗಳಿಗೆ ನಮ್ಮ ಚಂದ್ರಬಾಬು ಮೊದಲ ಆದ್ಯತೆ ನೀಡುತ್ತಿದ್ದಾರೆ. ಭಾರತೀಯ ಜನತಾ ಪಕ್ಷದ ಆಡಳಿತಗಾರರು ಅಧಿಕಾರಕ್ಕೆ ಬಂದಾಗ ಶಿಕ್ಷಣ ವ್ಯವಸ್ಥೆ ಮತ್ತು ಇತಿಹಾಸ ಪಠ್ಯಪುಸ್ತಕಗಳ ಪರಿಕಲ್ಪನೆಗಳ ಬಗ್ಗೆ ಏಕೆ ವಿವಾದಗಳನ್ನು ಎತ್ತುತ್ತಿದ್ದಾರೆ?
ಭಾರತೀಯ ಜನತಾ ಪಕ್ಷ ಕೇವಲ ರಾಜಕೀಯ ಉದ್ದೇಶ ಹೊಂದಿರುವ ಪಕ್ಷವಲ್ಲ. ಅದು ಹಿಂದುತ್ವ ಸಂಘ ಪರಿವಾರದ ಒಂದು ಭಾಗ. ಸಂಘಪರಿವಾರವು ತಾನು ನಂಬಿರುವ ಹಿಂದೂ ಧರ್ಮ ಮತ್ತು ಸಿದ್ಧಾಂತದ ಆಧಾರದ ಮೇಲೆ ಈ ರಾಷ್ಟ್ರವನ್ನು ಕಟ್ಟಲು ಬಯಸುತ್ತದೆ. ಈ ದೇಶದ ಪ್ರತಿಯೊಬ್ಬ ವ್ಯಕ್ತಿಯು ‘ನಾನು’ ಅನ್ನುವುದನ್ನು ಹಿಂದೂ ಪ್ರವಾಹದ ಭಾಗವೆಂದು ವ್ಯಾಖ್ಯಾನಿಸಿಕೊಳ್ಳಬೇಕು. ‘ಹಿಂದುತ್ವ’ ಎಂದು ಕರೆಯಲ್ಪಡುವ ಸಾಮಾಜಿಕ ಸಂಸ್ಕೃತಿಯು ಎಲ್ಲರ ಆಲೋಚನೆಗಳು ಮತ್ತು ವ್ಯಕ್ತಿತ್ವಗಳನ್ನು ರೂಪಿಸಬೇಕು. ಅದು ಯಾವುದಕ್ಕೋ ಸಾಧನವಲ್ಲ. ಇದೇ ಅವರ ಗುರಿಯಾಗಿದೆ. ಇದಕ್ಕಾಗಿ ಶಿಕ್ಷಣ, ಸಂಸ್ಕೃತಿ ಮತ್ತು ಪ್ರಸಾರ ಕ್ಷೇತ್ರಗಳನ್ನು ಮುಖ್ಯ ಸಾಧನವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಸಂಘಪರಿವಾರ ಎಂದರೆ ಖಾಕಿ ನಿಕ್ಕರ್ ಧರಿಸುವ ಆರೆಸ್ಸೆಸ್ ಕಾರ್ಯಕರ್ತರು ಮಾತ್ರ ಅಂದುಕೊಳ್ಳಬೇಕಾಗಿಲ್ಲ. ಬಿಜೆಪಿಗೆ ಮತ ಹಾಕುವವರು ಮಾತ್ರ ಅಂದುಕೊಳ್ಳಬೇಕಾಗಿಲ್ಲ. ಸಂಘಪರಿವಾರ ಎತ್ತಿಹಿಡಿಯಲು ಬಯಸುತ್ತಿರುವ ಲೋಕದೃಷ್ಟಿಯು ಈ ದೇಶದಲ್ಲಿ ಶತಮಾನಗಳ ಕಾಲ ಆಧಿಪತ್ಯ ಚಲಾಯಿಸಿದ ದೃಷ್ಟಿಕೋನ. ಇದನ್ನು ನಂಬಿದವರು ಬಹಳ ಮಂದಿ ಹಿಂದೂ ಯಜಮಾನಿಕೆಯ ಜಾತಿಗಳಲ್ಲಿ ಮತ್ತು ಸ್ವಲ್ಪ ಮಟ್ಟಿಗೆ ಹಿಂದುಳಿದ ಜಾತಿಗಳಲ್ಲಿ ಇದ್ದಾರೆ. ಇದು ಕೇವಲ ಅವರ ಮನಸ್ಸಿನಲ್ಲಿರುವ ನಂಬಿಕೆಯಲ್ಲ. ಇದು ಅವರ ದೈನಂದಿನ ಜೀವನಾಚರಣೆಯ ಭಾಗವಾಗಿದೆ. ಅವರ ವ್ಯಕ್ತಿತ್ವದ ಭಾಗ. ಅವರೆಲ್ಲಾ ರಾಜಕೀಯದಲ್ಲಿ ಬಿಜೆಪಿ ಮತದಾರರಾಗಿರಬೇಕಾದ ಅಗತ್ಯವಿಲ್ಲ. ಕಾಂಗ್ರೆಸ್ ಮತದಾರರಿರಬಹುದು, ತೆಲುಗು ದೇಶಂ ಮತದಾರರಿರಬಹುದು. ಕೆಲವರು ಕಮ್ಯುನಿಸ್ಟ್ ಮತದಾರರೂ ಕೂಡ ಆಗಿರಬಹುದು. ಅವರಲ್ಲಿ ಹೆಚ್ಚಿನವರು ಸಾಮಾಜಿಕವಾಗಿ ಬುದ್ಧಿಜೀವಿ ವರ್ಗಕ್ಕೆ ಸೇರಿದವರಾಗಿರುವುದರಿಂದ ಅವರು ಹಿಂದೂ ಲೋಕದೃಷ್ಟಿಕೋನವನ್ನು ಪ್ರಚಾರ ಮಾಡುವ ಸಾಧನಗಳಾಗಿ ನಿತ್ಯ ಕಾರ್ಯನಿರ್ವಹಿಸುತ್ತಲೇ ಇರುತ್ತಾರೆ. ಅವರು ಬರಹಗಾರರು, ಪತ್ರಕರ್ತರು, ಶಿಕ್ಷಕರು, ಪಠ್ಯಪುಸ್ತಕ ಬರೆಯುವವರು ಅಥವಾ ಕಲಾವಿದರು ಇತ್ಯಾದಿ ಏನೇ ಆಗಿದ್ದರೂ ಅವರು ಯಾವಾಗಲೂ ತಮ್ಮ ಜೀವನದ ಕ್ಷೇತ್ರಗಳಲ್ಲಿ ಹಿಂದೂ ಧರ್ಮದ ಪ್ರಚಾರಕ್ಕೆ ನೆರವಾಗುತ್ತಲೇ ಇರುತ್ತಾರೆ.
ಇದಲ್ಲದೆ, ಸಂಘ ಪರಿವಾರವು ಶಿಕ್ಷಣ ಕ್ಷೇತ್ರದ ನಿರ್ಮಾಣಾತ್ಮಕ ದೃಷ್ಟಿಯಿಂದಲೂ ಕೂಡ ಗಮನಾರ್ಹವಾಗಿ ಪ್ರವೇಶ ಮಾಡಿದೆ. ಸರಸ್ವತಿ ಶಿಶು ಮಂದಿರಗಳೇ ಅಲ್ಲದೆ ಅದಕ್ಕಿಂತಲೂ ದೊಡ್ಡ ಮಕ್ಕಳ ಅನೇಕ ಶಾಲೆಗಳನ್ನು ನಡೆಸುತ್ತಿದೆ. ಕೇವಲ ಪಾಠಗಳನ್ನು ಮಾಡುವ ಮೂಲಕ ಮಕ್ಕಳ ಆಲೋಚನೆಗಳನ್ನು ಸಂಪೂರ್ಣವಾಗಿ ರೂಪಿಸಲು ಸಾಧ್ಯವೇ ಎಂದು ಕೇಳಬಹುದು. ಆದರೆ ಇವು ಈಗಾಗಲೇ ಸಮಾಜ ಮತ್ತು ಸಾಮಾಜಿಕ ಜೀವನದಲ್ಲಿ ಬಲವಾದ ವಿಚಾರಗಳಾಗಿವೆ ಎಂಬುದನ್ನು ಮರೆಯಬಾರದು. ಆ ಮಕ್ಕಳು ಈಗಾಗಲೇ ತಮ್ಮ ದೈನಂದಿನ ಜೀವನದಲ್ಲಿ ಈ ಆಲೋಚನೆಗಳಿಗೆ ಪರಿಪಾಠಗೊಂಡಿರುತ್ತಾರೆ. ಅವುಗಳನ್ನು ಮತ್ತೆ ಶಾಲೆಯಲ್ಲಿ ಕಲಿಯುವುದು ಹೊಸ ವಿಚಾರವನ್ನು ಕಲಿತುಕೊಳ್ಳುವುದಲ್ಲಲ್ಲ. ಈಗಾಗಲೇ ಅವರ ಚಿಂತನೆಯ ಭಾಗವಾಗಿರುವ ವಿಷಯಗಳಿಗೆ, ಅವರು ಶಾಲೆಯಲ್ಲಿ ಕಲಿಯುವುದು ಅದೇ ಪ್ರಾಮಾಣಿತ ಸತ್ಯ ಎನ್ನುವ ಭಾವನೆಯ ಮುಖಾಂತರ ಮತ್ತಷ್ಟು ಬಲಕೂಡಿಸಿಕೊಂಡ ಹಳೆಯ ವಿಷಯವನ್ನೇ ಮತ್ತಷ್ಟು ಹೆಚ್ಚು ಗಟ್ಟಿಯಾಗಿ ಅಧಿಕೃತವಾಗಿ ಕಲಿತುಕೊಳ್ಳುವುದು ಮಾತ್ರವೇ.
ಭಾರತೀಯ ಜನತಾ ಪಕ್ಷವು ರಾಜಕೀಯದಲ್ಲಿ ಬಲಗೊಂಡು ಅಧಿಕಾರಕ್ಕೆ ಬಂದ ಕ್ರಮದಲ್ಲಿ, ನಾಗರಿಕ ಸಮಾಜದಲ್ಲಿ ಸಂಘಪರಿವಾರ ನಡೆಸುತ್ತಿದ್ದ ಕೆಲಸವನ್ನು ರಾಜ್ಯಾಧಿಕಾರದ ಮೂಲಕ ಮುಂದುವರಿಸಲು ಅವರಿಗೆ ಅವಕಾಶ ಸಿಕ್ಕಿತು. ಕೈಗೆ ಸಿಗುವ ಅಲ್ಪಸ್ವಲ್ಪಶಕ್ತಿಯನ್ನು ಈ ಕಾರಣಕ್ಕಾಗಿ ಅವರು ಬಳಸುತ್ತಲೇ ಇದ್ದಾರೆ.
ಒಂದು ದಶಕದ ಹಿಂದೆ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದಾಗ, ಪಠ್ಯಪುಸ್ತಕಗಳು ಮತ್ತು ಪಠ್ಯಕ್ರಮಗಳಲ್ಲಿ ಪರಿಚಯಿಸಲಾದ ಬದಲಾವಣೆಗಳು ಅವರು ನಾಳೆ ರಾಷ್ಟ್ರಮಟ್ಟದಲ್ಲಿ ಮಾಡುವ ಪ್ರಯೋಗಗಳನ್ನು ಸೂಚಿಸುತ್ತವೆ. ಅವರು ಪಠ್ಯಕ್ರಮದಲ್ಲಿ ಎಲ್ಲಕ್ಕಿಂತ ಇತಿಹಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅವರು ಅದನ್ನು ಮರಳಿ ಬರೆಯುವ ಪ್ರಯತ್ನವನ್ನು ಹೆಚ್ಚು ಮಾಡುತ್ತಾರೆ.
ಹಿಂದೂ ಜೀವನ ಪದ್ಧತಿಯು ಅತ್ಯಂತ ಉನ್ನತವಾಗಿದೆ. ಮುಸ್ಲಿಮರ ಆಗಮನದ ಮೊದಲು ಇದು ಅನನ್ಯವಾದ ವೈಭವವನ್ನು ಅನುಭವಿಸಿತು. ಮುಸ್ಲಿಮರು ಬಂದು ನಮ್ಮ ದೇಶವನ್ನು ವಶಪಡಿಸಿಕೊಂಡಾಗ, ಆ ಹಿಂದೂ ವೈಭವಕ್ಕೆ ಗ್ರಹಣವಾಯಿತು. ನಂತರ ಬ್ರಿಟಿಷರು (ಕ್ರೈಸ್ತರು) ಬಂದು ಭಾರತವನ್ನು ವಶಪಡಿಸಿಕೊಂಡರು ಮಾತ್ರವಲ್ಲದೆ ಹಿಂದೂ ಜೀವನ ವಿಧಾನವನ್ನು ಅನಾಗರಿಕ ಮತ್ತು ಮೂಢನಂಬಿಕೆ ಎಂದು ಪ್ರಚಾರ ಮಾಡಿದರು. ಸ್ವಾತಂತ್ರ್ಯ ಬಂದ ನಂತರವೂ ಜಾತ್ಯತೀತತೆ ಹೆಸರಿನಲ್ಲಿ ಸಾವಿರ ವರ್ಷಗಳ ಗುಲಾಮಗಿರಿಯನ್ನು ಮುಂದುವರಿಸುತ್ತಿದ್ದೇವೆ. ಇದು ಸಂಕ್ಷಿಪ್ತವಾಗಿ, ಅವರು ಪ್ರಚಾರ ಮಾಡಲು ಬಯಸುವ ಐತಿಹಾಸಿಕ ದೃಷ್ಟಿಕೋನವಾಗಿದೆ.







